AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಬಿಂದಾಸ್ ಲೈಫ್: ಹಳೇ ವಿಡಿಯೋವೆಂದ ಜೈಲಾಧಿಕಾರಿಗಳು! ಹೊಸದೆನ್ನಲು ಇಲ್ಲಿವೆ ಸಾಕ್ಷ್ಯ

ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟೋರಿಯಸ್ ಉಗ್ರನಿಗೆ ಹಾಗೂ ವಿಕೃತ ಕಾಮಿ ಉಮೇಶ್ ರೆಡ್ಡಿಗೆ ರಾಜಾತಿಥ್ಯ ನೀಡಿದ್ದ ವಿಡಿಯೋಗಳು ವೈರಲ್ ಆಗಿ ಚರ್ಚೆಗೆ ಗ್ರಾಸವಾಗಿದ್ದವು. ಇದರ ಬೆನ್ನಲ್ಲೇ, ವೈರಲ್ ಆಗಿದ್ದು 2023ರ ವಿಡಿಯೋಗಳು ಎಂದು ಜೈಲಾಧಿಕಾರಿಗಳು ಹೇಳಿದ್ದರು. ಆದರೆ, ಜೈಲು ಅಧಿಕಾರಿಗಳು ಸುಳ್ಳು ಮಾಹಿತಿ ಕೊಟ್ಟರೇ ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ಇದಕ್ಕೆ ಕಾರಣ ಹಾಗೂ ಸಾಕ್ಷಿ್ಳು ಇಲ್ಲಿವೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಬಿಂದಾಸ್ ಲೈಫ್: ಹಳೇ ವಿಡಿಯೋವೆಂದ ಜೈಲಾಧಿಕಾರಿಗಳು! ಹೊಸದೆನ್ನಲು ಇಲ್ಲಿವೆ ಸಾಕ್ಷ್ಯ
ವೈರಲ್ ಆದ ವಿಡಿಯೋದಲ್ಲಿ ಕಾಣಿಸಿದ್ದ ದಿನಪತ್ರಿಕೆ
Ganapathi Sharma
|

Updated on:Nov 10, 2025 | 7:32 AM

Share

ಬೆಂಗಳೂರು, ನವೆಂಬರ್ 10: ಪರಪ್ಪನ ಅಗ್ರಹಾರ ಜೈಲಲ್ಲ (Parappana Agrahara Jail) ಐಷಾರಾಮಿ ರೆಸಾರ್ಟ್! ಐಸಿಸ್ ಉಗ್ರ ಜುಹಾದ್, ವಿಕೃತ ಕಾಮಿ ಉಮೇಶ್ ರೆಡ್ಡಿ, ಗೋಲ್ಡ್ ಸ್ಮಗ್ಲಿಂಗ್ ಕೇಸ್​ನಲ್ಲಿ ಜೈಲು ಸೇರಿದ ತೆಲುಗು ನಟ ತರುಣ್ ಇವರೆಲ್ಲ ಜೈಲಿನಲ್ಲಿ ಬಿಂದಾಸ್ ಆಗಿದ್ದಾರೆ. ಇವರು ಜಾಲಿ ಲೈಫ್ ಮಾಡುತ್ತಿರುವುದಕ್ಕೆ ಸಂಬಂಧಿಸಿದ ವೈರಲ್ ಆಗಿರುವ ವಿಡಿಯೋಗಳು ಸರ್ಕಾರವನ್ನೇ ನಡುಗಿಸಿದೆ. ಇದರ ಬೆನ್ನಲ್ಲೇ ಎಚ್ಚೆತ್ತ ಜೈಲಧಿಕಾರಿಗಳು, ಜೈಲಿನ ಎಲ್ಲಾ ಬ್ಯಾರಕ್‌ಗಳನ್ನು ಪರಿಶೀಲನೆ ಮಾಡಿದ್ದಾರೆ. ನೂರಕ್ಕೂ ಹೆಚ್ಚು ಜೈಲಿನ ಸಿಬ್ಬಂದಿ ತಲಾಶ್ ನಡೆಸಿದ್ದಾರೆ. ಆದರೆ, ಯಾವುದೇ ರೀತಿಯ ವಸ್ತುಗಳು ಪತ್ತೆಯಾಗಿಲ್ಲ.

ಜೈಲು ಸಿಬ್ಬಂದಿಯಿಂದಲೇ ದಾಳಿ ಮಾಹಿತಿ ಲೀಕ್?

ಕೆಲ ಸಿಬ್ಬಂದಿಯೇ ಜೈಲಧಿಕಾರಿಗಳ ದಾಳಿ ಬಗ್ಗೆ ಕೈದಿಗಳಿಗೆ ಮಾಹಿತಿ ಲೀಕ್ ಮಾಡಿದ್ದು, ಅವರೆಲ್ಲ ಎಚ್ಚೆತ್ತುಕೊಂಡಿದ್ದರು. ಹೀಗಾಗಿ ಹುಡುಕಾಟ ನಡೆಸಿದರೂ, ಏನು ಸಿಕ್ಕಿಲ್ಲ ಎನ್ನಲಾಗಿದೆ. ಅಷ್ಟೇ ಅಲ್ಲ, ವಿಡಿಯೋ ವೈರಲ್ ಆದ ಬಗ್ಗೆಯೂ ತನಿಖೆ ನಡೆಸಲಾಗಿದ್ದು, ಅವುಗಳೆಲ್ಲ 2023ರ ವಿಡಿಯೋ ಎಂದು ಡಿಐಜಿ ಆನಂದ್, ಎಡಿಜಿಪಿ ದಯಾನಂದ್​ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಆದರೆ, ವೈರಲ್ ಆದ ವಿಡಿಯೋಗಳ ಅಸಲಿಯತ್ತು ಬೇರೆಯೇ ಇದೆ.

2025 ರ ನವೆಂಬರ್ 6 ರ ವಿಡಿಯೋ!

ವಿಡಿಯೋದಲ್ಲಿ ಕಾಣಿಸಿರುವ ಪತ್ರಿಕೆಯ ಚಿತ್ರವು ವಿಡಿಯೋ ಯಾವ ವರ್ಷದ್ದು ಎಂಬುದಕ್ಕೆ ಸಾಕ್ಷಿಯಾಗಿದೆ. 2025 ರ ನವೆಂಬರ್ 6 ರ ನ್ಯೂಸ್ ಪೇಪರ್‌ ಶನಿವಾರ ವೈರಲ್ ಆದ ವಿಡಿಯೋದಲ್ಲಿ ಕಾಣಿಸಿದೆ. ಜೈಲಧಿಕಾರಿಗಳು ಇದನ್ನೂ ಗಮನಿಸದೇ 2023ರ ವಿಡಿಯೋ ಎಂದು ವರದಿ ನೀಡಿದ್ದಾರೆ!

ತರುಣ್ ಇದ್ದ ವಿಡಿಯೋದಲ್ಲಿ ನವೆಂಬರ್ ಕ್ಯಾಲೆಂಡರ್!

Parappana Agrahara Jail Calender

ರನ್ಯಾರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಬಂಧನದಲ್ಲಿರುವ ತರುಣ್ ಇರುವ ವಿಡಿಯೋದಲ್ಲಿ ಇದೇ ನವೆಂಬರ್ ತಿಂಗಳ ಕ್ಯಾಲೆಂಡರ್ ಕಾಣಿಸಿದೆ. ಹೀಗಾಗಿ ಈ ವಿಡಿಯೋ 2023ರದ್ದು ಎಂದು ಹೇಳಲು ಸಾಧ್ಯವೇ ಇಲ್ಲ. ಇಷ್ಟೇ ಅಲ್ಲ, ತೆಲುಗು ನಟ ತರುಣ್ ಬಂಧನ ಆಗಿದ್ದೇ ಕಳೆದ ಮಾರ್ಚ್‌ ತಿಂಗಳಲ್ಲಿ. ತರುಣ್ ಕೈಯಲ್ಲಿ ಮೊಬೈಲ್ ಹಿಡಿದುಕೊಂಡಿದ್ದಾನೆ. ಟಿವಿ ನೋಡ್ತಿದ್ದಾನೆ. ಹೀಗಾಗಿ ಈ ವಿಡಿಯೋಗಳು ಈ ವರ್ಷದ್ದೇ. ಹೀಗಾಗಿ ಜೈಲಿನ ಕೆಲ ಸಿಬ್ಬಂದಿಯಿಂದಲೇ ಪಿತೂರಿ ನಡೆದಿರುವ ಶಂಕೆ ವ್ಯಕ್ತವಾಗಿದೆ. ಈ ಮೂಲಕ ಪ್ರಕರಣವನ್ನು ಮುಚ್ಚಿಹಾಕುವ ಯತ್ನ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಪರಮೇಶ್ವರ್, ವಿಡಿಯೋ ಹಳೇದೇ ಆಗಲಿ, ಹೊಸದೇ ಆಗಲಿ ಇಂಥ ಘಟನೆಗಳು ತಪ್ಪು ಎಂದಿದ್ದಾರೆ. ಅತ್ತ ಸಿಎಂ ಸಿದ್ದರಾಮಯ್ಯ, ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

ನಿಷೇಧವಿದ್ರೂ ಮೊಬೈಲ್ ಬಳಕೆ, NCR ದಾಖಲು

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ಮೊಬೈಲ್ ಬಳಕೆ ನಿಷೇಧವಿದ್ದರೂ, ಮೊಬೈಲ್ ಬಳಸಿದ್ದಾರೆ, ವಿಡಿಯೋ ಮಾಡಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಜೈಲು ಅಧಿಕಾರಿಗಳೇ ದೂರು ನೀಡಿದ್ದಾರೆ. ಇದರ ಬೆನ್ನಲ್ಲೇ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಎನ್​ಸಿಆರ್ ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ.

ಪರಪ್ಪನ ಅಗ್ರಹಾರ ಜೈಲಿನ ಮುಂದೆ ಇಂದು ಬಿಜೆಪಿ ಪ್ರತಿಭಟನೆ

ಜೈಲಿನಲ್ಲಿ ಕೈದಿಗಳು ಮೊಬೈಲ್ ಬಳಕೆ ಮಾಡಿರೋದನ್ನ ಬಿಜೆಪಿ ಖಂಡಿಸಿದೆ. ಹೀಗಾಗಿ, ಇಂದು ಪರಪ್ಪನ ಅಗ್ರಹಾರ ಜೈಲಿನ ಮುಂದೆ ಬಿಜೆಪಿ ಪ್ರತಿಭಟನೆ ನಡೆಸಲಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ.

ವರದಿ: ವಿಕಾಸ್ ಮತ್ತು ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:28 am, Mon, 10 November 25