ಅನಿಯಮಿತ ಲೋಡ್​ ಶೆಡ್ಡಿಂಗ್​ನಿಂದ ಆಹಾರ ಬಿಕ್ಕಟ್ಟಿನ ಭೀತಿ: ಹೋಟೆಲ್​ಗಳ​ ಸಂಘದಿಂದ ಸರ್ಕಾರಕ್ಕೆ ಪತ್ರ

| Updated By: Ganapathi Sharma

Updated on: Oct 16, 2023 | 3:02 PM

Unscheduled power cuts in Bengaluru; ಅನಿಯಮಿತ ಲೋಡ್ ಶೆಡ್ಡಿಂಗ್‌ನಿಂದಾಗಿ ನಮ್ಮ ಉದ್ಯಮವು ಸಮಸ್ಯೆಗಳನ್ನು ಎದುರಿಸುತ್ತಿದೆ. ಎಲ್ಲಾ ಕೈಗಾರಿಕೆಗಳಿಗೆ ವಿದ್ಯುತ್ ಪೂರೈಸುವ ಮೂಲಕ ಸಮಸ್ಯೆಯನ್ನು ಪರಿಹರಿಸಬೇಕು. ಇದಕ್ಕಾಗಿ ಇತರ ರಾಜ್ಯಗಳಿಂದ ತಕ್ಷಣ ವಿದ್ಯುತ್ ಖರೀದಿಸಬೇಕು ಎಂದು ಹೋಟೆಲ್​ಗಳ ಸಂಘವು ರಾಜ್ಯ ಸರ್ಕಾರವನ್ನು ವಿನಂತಿಸಿದೆ.

ಅನಿಯಮಿತ ಲೋಡ್​ ಶೆಡ್ಡಿಂಗ್​ನಿಂದ ಆಹಾರ ಬಿಕ್ಕಟ್ಟಿನ ಭೀತಿ: ಹೋಟೆಲ್​ಗಳ​ ಸಂಘದಿಂದ ಸರ್ಕಾರಕ್ಕೆ ಪತ್ರ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಅಕ್ಟೋಬರ್ 16: ಕರ್ನಾಟಕದಾದ್ಯಂತ ವಿದ್ಯುತ್ ಕೊರತೆ ಎದುರಾಗಿರುವುದು ಹಾಗೂ ಲೋಡ್ ಶೆಡ್ಡಿಂಗ್‌ (Load Shedding) ಮಾಡುತ್ತಿರುವುದು ಹೋಟೆಲ್ ಉದ್ಯಮವನ್ನು (Hotel Association) ಸಂಕಷ್ಟಕ್ಕೀಡುಮಾಡಿದೆ. ಈ ವಿಚಾರವಾಗಿ ಬೆಂಗಳೂರು ಹೋಟೆಲ್‌ಗಳ ಸಂಘವು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇಂಧನ ಸಚಿವ ಕೆಜೆ ಜಾರ್ಜ್ ಅವರಿಗೆ ಪತ್ರ ಬರೆದಿದ್ದು, ನಿರಂತರ ವಿದ್ಯುತ್ ಸರಬರಾಜು ಮಾಡುವಂತೆ ಒತ್ತಾಯಿಸಿದೆ. ಈ ಮಧ್ಯೆ, ಈಗಿನ ಪರಿಸ್ಥಿತಿಗೆ ಮಳೆ ಕೊರತೆ ಹಾಗೂ ಹಿಂದಿನ ಬಿಜೆಪಿ ಸರಕಾರವೇ ಕಾರಣ ಎಂದು ರಾಜ್ಯ ಸರಕಾರ ಆರೋಪಿಸಿದೆ.

ಅನಿಯಮಿತ ಲೋಡ್ ಶೆಡ್ಡಿಂಗ್ ಬಗ್ಗೆ ಪತ್ರದಲ್ಲಿ ಸಂಘವು ಅಸಮಾಧಾನ ವ್ಯಕ್ತಪಡಿಸಿದ್ದು, ಸಮಸ್ಯೆ ಬಗೆಹರಿಸಲು ಸರ್ಕಾರ ಮಧ್ಯಪ್ರವೇಶಿಸುವಂತೆ ಕೋರಿದೆ.

ಅನಿಯಮಿತ ಲೋಡ್ ಶೆಡ್ಡಿಂಗ್‌ನಿಂದಾಗಿ ನಮ್ಮ ಉದ್ಯಮವು ಸಮಸ್ಯೆಗಳನ್ನು ಎದುರಿಸುತ್ತಿದೆ. ಕೋಲ್ಡ್ ಸ್ಟೋರೇಜ್, ರೆಫ್ರಿಜರೇಟರ್‌ಗಳು ಮತ್ತು ಗ್ರೈಂಡರ್‌ಗಳನ್ನು ನಿರ್ವಹಿಸಲು ನಾವು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ರಾಜ್ಯದಲ್ಲಿ ಆಹಾರ ಉತ್ಪಾದನೆಯು ಈಗಾಗಲೇ ಶೇಕಡಾ 50 ರಷ್ಟು ಕಡಿಮೆಯಾಗಿದೆ. ಇದರೊಂದಿಗೆ ವಿದ್ಯುತ್ ಕಡಿತವೂ ಆಗುತ್ತಿರುವುದು ರೈತರಿಗೆ ಮತ್ತಷ್ಟು ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಕೂಡ ಉಪ ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ಸಂಘ ಉಲ್ಲೇಖಿಸಿದೆ.

ಎಲ್ಲಾ ಕೈಗಾರಿಕೆಗಳಿಗೆ ವಿದ್ಯುತ್ ಪೂರೈಸುವ ಮೂಲಕ ಸಮಸ್ಯೆಯನ್ನು ಪರಿಹರಿಸಬೇಕು. ಇದಕ್ಕಾಗಿ ಇತರ ರಾಜ್ಯಗಳಿಂದ ತಕ್ಷಣ ವಿದ್ಯುತ್ ಖರೀದಿಸಬೇಕು ಎಂದು ಸಂಘವು ರಾಜ್ಯ ಸರ್ಕಾರವನ್ನು ವಿನಂತಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ವಾರ ಇಂಧನ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ರಾಜ್ಯಾದ್ಯಂತ ರೈತರಿಗೆ ಐದು ಗಂಟೆ ವಿದ್ಯುತ್ ನೀಡುವಂತೆ ಸೂಚಿಸಿದ್ದರು. ಲೋಡ್ ಶೆಡ್ಡಿಂಗ್ ಕಡಿಮೆ ಮಾಡಲು ಬೇರೆ ರಾಜ್ಯಗಳಿಂದ ವಿದ್ಯುತ್ ಖರೀದಿಸುವಂತೆ ಸಿಎಂ ಅಧಿಕಾರಿಗಳಿಗೆ ಸೂಚಿಸಿದ್ದರು.

ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಗೂಬೆಕೂರಿಸಿದ ಡಿಕೆ ಶಿವಕುಮಾರ್

ರಾಜ್ಯದಲ್ಲಿ ವಿದ್ಯುತ್ ಕೊರತೆ ಇರುವುದು ನಿಜ ಎಂದು ಡಿಸಿಎಂ ಡಿಕೆ ಶಿವಕುಮಾರ್ ಒಪ್ಪಿಕೊಂಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಹೆಚ್ಚುವರಿ ವಿದ್ಯುತ್ ಉತ್ಪಾದನೆಗೆ ಕ್ರಮಗಳನ್ನು ಕೈಗೊಳ್ಳುವಲ್ಲಿ ಹಿಂದಿನ ಬಿಜೆಪಿ ಸರ್ಕಾರ ವಿಫಲವಾಗಿದ್ದೇ ಈ ಪರಿಸ್ಥಿತಿಗೆ ಕಾರಣವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ವಿದ್ಯುತ್ ಲೋಡ್​ ಶೆಡ್ಡಿಂಗ್: ಕೊನೆಗೂ ಸತ್ಯ ಒಪ್ಪಿಕೊಂಡ ಡಿಕೆ ಶಿವಕುಮಾರ್

ಬರಗಾಲದಿಂದಾಗಿ ವಿದ್ಯುತ್ ಉತ್ಪಾದನೆ ಕಡಿಮೆಯಾಗಿದೆ. ಹಿಂದಿನ ಬಿಜೆಪಿ ಸರಕಾರ ಹೆಚ್ಚುವರಿ ವಿದ್ಯುತ್ ಉತ್ಪಾದನಾ ಯೋಜನೆಗೆ ಚಾಲನೆ ನೀಡದೆ ಸುಮ್ಮನೆ ಕುಳಿತಿತ್ತು. ಸಾಮಾನ್ಯವಾಗಿ ವಿದ್ಯುತ್ ಉತ್ಪಾದನೆಯಲ್ಲಿ ಪ್ರತಿ ವರ್ಷ ಶೇ 10-15ರಷ್ಟು ಬೆಳವಣಿಗೆ ಆಗುತ್ತಿದ್ದು, ಕಳೆದ ಕೆಲವು ವರ್ಷಗಳಲ್ಲಿ ಇದು ಆಗಿಲ್ಲ ಎಂದು ಶಿವಕುಮಾರ್ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ