
ಬೆಂಗಳೂರು, (ಆಗಸ್ಟ್ 26): ಅತ್ತ ಧರ್ಮಸ್ಥಳದಲ್ಲಿ ಬುರುಡೆ ಸಂಚಲನ ಮೂಡಿಸಿದ್ರೆ, ಇತ್ತ ಬೆಂಗಳೂರಿನಲ್ಲಿ ಕಸದಲ್ಲಿ ಪತ್ತೆಯಾದ ಮಾನವನ ಮೂಳೆ ಬೆಚ್ಚಿಬೀಳಿಸಿದೆ. ಹೌದು…ಎಲೆಕ್ಟ್ರಾನಿಕ್ ಸಿಟಿ ಸಮೀಪದ ಗೋವಿಂದಶೆಟ್ಟಿಪಾಳ್ಯದಲ್ಲಿ ಕಸದ ರಾಶಿಯಲ್ಲಿ ಮನುಷ್ಯನ ಮೂಳೆಗಳು ಪತ್ತೆಯಾಗಿವೆ. ಹಬ್ಬದ ಸಂದರ್ಭದಲ್ಲೇ ಗಣೇಶ ದೇವಸ್ಥಾನದ ಬಳಿ ಮನುಷ್ಯನ ಮೂಳೆಗಳು ಪತ್ತೆ ಆಗಿರುವುದು ಸ್ಥಳೀಯರು ಆತಂಕಗೊಂಡಿದ್ದಾರೆ. ಕೂಡಲೇ ವಿಷಯ ತಿಳಿಸಿದು ಸ್ಥಳಕ್ಕೆ ಪರಪ್ಪನ ಅಗ್ರಹಾರ ಪೊಲೀಸರ ಭೇಟಿ ಪರಿಶೀಲಿಸಿದ್ದು, ಬಳಿಕ ವ್ಯಕ್ತಿಯೋರ್ವ ತನ್ನ ಮೆಡಿಕಲ್ ಓದುತ್ತಿರುವ ಮಗಳಿಗಾಗಿ ಈ ಮೂಳೆಗಳನ್ನು ತಂದು ಬಳಿಕ ಬಿಸಾಡಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಭಯಗೊಂಡಿದ್ದ ಜನರು ನಿಟ್ಟುಸಿರುಬಿಟ್ಟಿದ್ದಾರೆ.
ಎಲ್ಲೆಡೆ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಬೆಂಗಳೂರಿನಲ್ಲಿ ಇಂದು (ಆಗಸ್ಟ್ 26) ಗೌರಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಈ ಹಬ್ಬದ ಸಂಭ್ರಮದ ವೇಳೆ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಗೋವಿಂದಶೆಟ್ಟಿಪಾಳ್ಯದಲ್ಲಿ ಮನುಷ್ಯ ಮೂಳೆಗಳು ಕಸದಲ್ಲಿ ಪತ್ತೆಯಾಗಿವೆ. ಮಾಟ ಮಂತ್ರ ಮಾಡಲು ಮೂಳೆಗಳನ್ನು ಬಳಸಿರುವ ಶಂಕೆ ವ್ಯಕ್ತವಾಗಿತ್ತು. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ಮಾಡಿದ್ದಾರೆ.
ಪೊಲೀಸರು ಮೂಳೆಗಳನ್ನು ಪರಿಶೀಲನೆ ಮಾಡುತ್ತಿರುವಾಗ ಮೆಡಿಕಲ್ ಓದುತ್ತಿದ್ದ ವಿದ್ಯಾರ್ಥಿನಿಯ ತಂದೆಯ ಎಡವಟ್ಟು ಬೆಳಕಿಗೆ ಬಂದಿದೆ. ಪೊಲೀಸರು ಬಂದ ಬಳಿಕ ತಪ್ಪೊಪ್ಪಿಕೊಂಡಿದ್ದು, ಮೂಳೆಗಳನ್ನು ತಾನೇ ತಂದು ಹಾಕಿರುವುದಾಗಿ ಹೇಳಿದ್ದಾನೆ. ಮೆಡಿಕಲ್ ಓದುತ್ತಿದ್ದ ಮಗಳ ವಿದ್ಯಾಭ್ಯಾಸಕ್ಕಾಗಿ ಮೂಳೆಗಳನ್ನು ಮನೆಗೆ ತಂದಿದ್ದ. ಅವಶ್ಯಕತೆ ಇಲ್ಲದೆ ಕೆಲ ದಿನಗಳಿಂದ ಮನೆಯಲ್ಲೇ ಇಟ್ಟಿದ್ದರು. ಆದ್ರೆ, ಗೌರಿ ಹಬ್ಬ ಹಿನ್ನೆಲೆ ಮನೆ ಸ್ವಚ್ಛಗೊಳಿಸುವ ಸಂಬಂಧ ಮೂಳೆಗಳನ್ನು ತಂದು ಕಸ ಹಾಕುವ ಜಾಗದಲ್ಲಿ ಬಿಸಾಡಿದ್ದಾರೆ. ಇದೀಗ ತಾನೇ ತಂದು ಬಿಸಾಡಿರುವುದಾಗಿ ವ್ಯಕ್ತಿಯೋರ್ವ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದು, ಸ್ಥಳೀಯರ ಆತಂಕ ದೂರವಾದಂತಾಗಿದೆ.