ಬೆಂಗಳೂರಿನಲ್ಲೂ ಜೀತಪದ್ಧತಿ ಜೀವಂತ: ಬಾಲಕರು ಸೇರಿ 35 ಕಾರ್ಮಿಕರ ರಕ್ಷಣೆ
ಬೆಂಗಳೂರಿನ ಆನೇಕಲ್ ತಾಲೂಕಿನ ಅತ್ತಿಬೆಲೆ ಗ್ರಾಮದಲ್ಲಿ ಘೋರ ಘಟನೆಯೊಂದು ಬೆಳಕಿಗೆ ಬಂದಿದೆ. ತೆಲಂಗಾಣದಿಂದ ಜನರನ್ನು ಕರೆತಂದು ಇಲ್ಲಿ ಜೀತ ಪದ್ಧತಿಗೆ ಒಳಗಾಗಿದ್ದ 8 ಬಾಲಕರು ಸೇರಿದಂತೆ 35 ಕಾರ್ಮಿಕರನ್ನು ಇದೀಗ ಪೊಲೀಸರು ರಕ್ಷಣೆ ಮಾಡಿದ್ದಾರೆ. ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆನೇಕಲ್, ಆಗಸ್ಟ್ 26: ವಿದ್ಯಾವಂತ ನಾಗರೀಕ ಸಮಾಜದಲ್ಲಿ ಘೋರ ಪದ್ಧತಿಯೊಂದು ಇನ್ನೂ ಜೀವಂತವಾಗಿದೆ. ರಾಜಧಾನಿಯಿಂದ ಕೂಗಳತೆ ದೂರದಲ್ಲಿರುವ ಬೆಂಗಳೂರು (bangaluru) ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆ ಗ್ರಾಮದಲ್ಲಿ ಜೀತ ಪದ್ಧತಿ (slavery) ಇನ್ನೂ ಜೀವಂತವಾಗಿದೆ. ಸದ್ಯ ಅಧಿಕಾರಿಗಳು ಜಂಟಿ ಕಾರ್ಯಚರಣೆ ಮಾಡಿ 8 ಬಾಲಕರು ಸೇರಿದಂತೆ 35 ಕಾರ್ಮಿಕರ ರಕ್ಷಣೆ ಮಾಡಲಾಗಿದೆ. ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೀತ ಪದ್ದತಿ ವಿಚಾರ ತಿಳಿದು ಅಧಿಕಾರಿಗಳೇ ಶಾಕ್!
ಅತ್ತಿಬೆಲೆ ಹೋಬಳಿ ಉಪ ತಹಸೀಲ್ದಾರ್ ನವೀನ್ ಕುಮಾರ್ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಪೊಲೀಸರು ಸೇರಿದಂತೆ ಮುಕ್ತಿ ಎನ್.ಜಿ.ಓ ಸಂಸ್ಥೆಯಿಂದ ದಾಳಿ ಮಾಡಲಾಗಿದೆ. ಗುತ್ತಿಗೆದಾರರು ಹಣ ಕೊಟ್ಟು ಜೀತಕ್ಕೆ ಕಾರ್ಮಿಕರನ್ನು ಖರೀದಿ ಮಾಡಿರುವ ವಿಚಾರ ತಿಳಿದು ಅಧಿಕಾರಿಗಳೇ ಒಂದು ಕ್ಷಣ ಶಾಕ್ ಆಗಿದ್ದಾರೆ.
ಇದನ್ನೂ ಓದಿ: ಮೈಸೂರು ಜಿಲ್ಲೆಯಲ್ಲಿ ಜೀತ ಪದ್ಧತಿ ಇನ್ನೂ ಜೀವಂತ: ಜೀತಕ್ಕಿಟ್ಟುಕೊಂಡು ಕೂಡಿಹಾಕಿದ್ದ ತಾಯಿ, ಮಕ್ಕಳ ರಕ್ಷಣೆ
ತೆಲಂಗಾಣದ ವನಪರ್ತಿ ಜಿಲ್ಲೆಯಿಂದ ಹಣ ನೀಡಿ 35 ಕಾರ್ಮಿಕರನ್ನು ಗುತ್ತಿಗೆದಾರ ಖರೀದಿಸಿ ಜೀತಕ್ಕೆ ಕರೆತಂದಿದ್ದ. ಅತ್ತಿಬೆಲೆ, ಗುಂಜೂರು ಭಾಗದಲ್ಲಿ 2 ಗುಂಪುಗಳಾಗಿ ಇರಿಸಿ ಜೀತ ಮಾಡಿಸಲಾಗುತ್ತಿತ್ತು. ರಾಮನಾಗಪ್ಪಶೆಟ್ಟಿ ಇನ್ಫ್ರಾಸ್ಟ್ರಕ್ಚರ್ ಕಂಪನಿಯಲ್ಲಿ ಜೀತದಾಳಾಗಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಒಂದು ಕುಟುಂಬಕ್ಕೆ ಒಂದು ವರ್ಷಕ್ಕೆ 1,60,000 ಹಣ ನೀಡಿ ಖರೀದಿ ಮಾಡಲಾಗಿತ್ತು.
ಉಚಿತ ದುಡಿಮೆ
ಆರ್ಎನ್ಎಸ್ ಕಂಪನಿಯಿಂದ ಸಬ್ ಕಾಂಟ್ರ್ಯಾಕ್ಟ್ ಪಡೆದಿದ್ದ ಯಾಕೂಬ್, ಅವರನ್ನು ಜೀತದಾಳಾಗಿ ಬಳಸಿಕೊಂಡು ರಸ್ತೆ ಕೆಲಸ ಮಾಡಿಸುತ್ತಿದ್ದ. ಕಾರ್ಮಿಕರು ವರ್ಷ ಪೂರ್ತಿ ಇಲ್ಲಿ ಉಚಿತವಾಗಿ ದುಡಿಮೆ ಮಾಡಬೇಕು. ಒಂದು ವೇಳೆ ಕೆಲಸಗಾರರು ಅರ್ಧಕ್ಕೆ ಬಿಟ್ಟುಹೋದರೆ ಸಂಪೂರ್ಣವಾಗಿ ಒಂದು ಲಕ್ಷ ರೂ ಹಣ ಕಟ್ಟಿಕೊಡಬೇಕೆಂದು ಅಕ್ರಮವಾಗಿ ಬಾಂಡ್ ಬರೆಸಿಕೊಂಡು ವಾಸದ ಮನೆ ಪತ್ರ ಕೂಡ ಯಾಕೂಬ್ ವಶಕ್ಕೆ ಪಡೆದಿದ್ದ.
ಇದನ್ನೂ ಓದಿ: ಯಾದಗಿರಿಯಲ್ಲಿ ಅನಿಷ್ಟ ಪದ್ಧತಿ ಇನ್ನೂ ಜೀವಂತ: ಮಾತು ಕೇಳಲಿಲ್ಲವೆಂದು ದಲಿತರಿಗೆ ಬಹಿಷ್ಕಾರ ಹಾಕಿದ ಸವರ್ಣೀಯರು
ಹೆದರಿಸಿ, ಬೆದರಿಸಿ ಬಲವಂತವಾಗಿ ಯಾಕೂಬ್ ರಸ್ತೆ ಕೆಲಸ ಮಾಡಿಸುತ್ತಿದ್ದ. ಮುಕ್ತಿ ಸ್ವಯಂಸೇವಾ ಸಂಸ್ಥೆ ಮಾಹಿತಿ ಮೇರೆಗೆ ಕಾರ್ಯಚರಣೆ ನಡೆಸಿ ಜೀತಪದ್ಧತಿಯಲ್ಲಿ ಸಿಲುಕಿದ್ದ 8 ಬಾಲಕರು ಸೇರಿದಂತೆ 35 ಕಾರ್ಮಿಕರನ್ನು ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:33 pm, Tue, 26 August 25



