ಯಾದಗಿರಿಯಲ್ಲಿ ಅನಿಷ್ಟ ಪದ್ಧತಿ ಇನ್ನೂ ಜೀವಂತ: ಮಾತು ಕೇಳಲಿಲ್ಲವೆಂದು ದಲಿತರಿಗೆ ಬಹಿಷ್ಕಾರ ಹಾಕಿದ ಸವರ್ಣೀಯರು
ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಚಿನ್ನಕಾರ ಗ್ರಾಮದಲ್ಲಿ ದಲಿತರನ್ನು ಸವರ್ಣೀಯರು ಸಾಮಾಜಿಕವಾಗಿ ಬಹಿಷ್ಕರಿಸಿದ ಘಟನೆ ನಡೆದಿದೆ. ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಮೀಸಲಿಟ್ಟ ಜಾಗದಲ್ಲಿ ಗ್ರಾಮ ಪಂಚಾಯತ್ ಕಟ್ಟಡ ನಿರ್ಮಿಸಲು ವಿರೋಧ ವ್ಯಕ್ತಪಡಿಸಿದ್ದಕ್ಕೆ ಬಹಿಷ್ಕರಿಸಲಾಗಿದೆ ಎನ್ನಲಾಗುತ್ತಿದೆ. ದಲಿತರು ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

ಯಾದಗಿರಿ, ಜೂನ್ 25: ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 77 ವರ್ಷ ಕಳೆಯುತ್ತಾ ಬಂದಿದೆ. ಆದರೂ ದೇಶದಲ್ಲಿ ಇನ್ನು ಕೂಡ ಅನಿಷ್ಟ ಪದ್ಧತಿಗಳು ಜೀವಂತ ಇದೆ. ಕಾನೂನು ಇದರೂ ದಲಿತರ (Dalits) ಮೇಲೆ ಇನ್ನು ಕೂಡ ದೌರ್ಜನ್ಯಗಳು ನಡೆಯುತ್ತಿವೆ. ಇಂತಹದೇ ಒಂದು ಘಟನೆ ಜಿಲ್ಲೆಯ ಗುರುಮಠಕಲ್ ತಾಲೂಕಿನ ಚಿನ್ನಕಾರ ಗ್ರಾಮದಲ್ಲಿ ನಡೆದಿದ್ದು, ಸವರ್ಣೀಯರ (upper caste) ಮಾತು ಕೇಳಲಿಲ್ಲ ಎನ್ನುವ ಕಾರಣಕ್ಕೆ ದಲಿತರಿಗೆ ಗ್ರಾಮದಲ್ಲಿ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ.
ಜಿಲ್ಲೆಯ ಚಿನ್ನಕಾರ ಗ್ರಾಮದಲ್ಲಿ ನಾಗರಿಕ ಸಮಾಜವೇ ತಲೆ ತಗ್ಗಿಸುವ ಘಟನೆಯೊಂದು ನಡೆದು ಹೋಗಿದೆ. ಸ್ವಾತಂತ್ರ್ಯ ಭಾರತ ಸಂವಿಧಾನ ಜಾರಿಯಲ್ಲಿರುವ ಈ ದೇಶದಲ್ಲಿ ಈಗಲು ಇಂತಹ ಘಟನೆಗಳು ನಡೆಯುತ್ತಿವೆ ಅನ್ನೋದ್ದಕ್ಕೆ ಈ ಘಟನೆ ಸಾಕ್ಷಿ ಆಗಿದೆ. ಈ ಗ್ರಾಮದಲ್ಲಿ ಸವರ್ಣೀಯರ ಮಾತು ಕೇಳದ್ದಕ್ಕೆ ದಲಿತರಿಗೆ ಬಹಿಷ್ಕಾರ ಹಾಕಿರುವ ಘಟನೆ ನಡೆದಿದೆ. ಇದೆ ಕಾರಣಕ್ಕೆ ನಿನ್ನೆ ಸಂಜೆ ಚಿನ್ನಕಾರ ಗ್ರಾಮದ ದಲಿತರು ಜಿಲ್ಲಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ನಡೆದದ್ದೇನು?
ಅಷ್ಟಕ್ಕೂ ಇಲ್ಲಿ ಆಗಿದ್ದಾದರೂ ಏನು ಅಂದರೆ 2017 ರಲ್ಲು ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸರ್ಕಾರಿಂದ 6 ಗುಂಟೆ ಜಾಗವನ್ನ ಸರ್ಕಾರ ಮಂಜೂರು ಮಾಡಿತ್ತು. ಆದರೆ ಕಾರಣಾಂತರಗಳಿಂದ ಭವನ ಇದುವರೆಗೆ ನಿರ್ಮಾಣ ಆಗಿಲ್ಲ. ಆದರೆ ಕಳೆದ ಒಂದು ವರ್ಷದಿಂದ ಸವರ್ಣೀಯರು, ಭವನಕ್ಕೆ ಮಂಜೂರದ ಜಾಗದಲ್ಲಿ ಗ್ರಾಮ ಪಂಚಾಯತಿ ಕಟ್ಟಡ ನಿರ್ಮಾಣಕ್ಕೆ ಪ್ಲಾನ್ ಮಾಡಿದ್ದಾರೆ. ಇದೆ ಕಾದಣಕ್ಕೆ ಕಳೆದ ನಾಲ್ಕು ದಿನಗಳ ಹಿಂದೆ ಅಂದರೆ ಜೂನ್ 20 ರಂದು ಜೆಸಿಬಿ ಮೂಲಕ ಜಾಗವನ್ನ ಕ್ಲೀನ್ ಮಾಡಿ ಪಂಚಾಯತ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಮುಂದಾಗಿದ್ದರು.
ಇದನ್ನೂ ಓದಿ: ಕನಸ್ಸಿನಲ್ಲಿ ಕಾಡಿದ ಆಂಜನೇಯ್ಯ: ಕ್ರಿಶ್ಚಿಯನ್ ಧರ್ಮ ತೊರೆದು ಹಿಂದೂ ಧರ್ಮಕ್ಕೆ ಘರ್ ವಾಪಸಿ ಮಾಡಿದ ಕುಟುಂಬ
ಖುದ್ದು ಪಂಚಾಯತ ಅಧ್ಯಕ್ಷರಿಂದ ಹಿಡಿದು ಪಂಚಾಯತಿ ಸದಸ್ಯರು ಮುಂದೆ ನಿಂತು ಜಾಗ ಕ್ಲೀನ್ ಮಾಡುವುದಕ್ಕೆ ಮುಂದಾಗಿದ್ದರು. ಇದಕ್ಕೆ ದಲಿತರ ಸಮುದಾಯದ ಜನ ಅಡ್ಡಪಡಿಸಿದ್ದಾರೆ ಇದು ಅಂಬೇಡ್ಕರ್ ಭವನಕ್ಕೆ ಮಂಜೂರಾದ ಜಾಗ ಹೀಗಾಗಿ ಇಲ್ಲಿ ಪಂಚಾಯತಿ ಕಟ್ಟಡ ಬೇಡ ಅಂತ ವಿರೋಧ ಮಾಡಿದ್ದಾರೆ. ಇದಕ್ಕೆ ರೊಚ್ಚಿಗೆದ್ದ ಸವರ್ಣೀಯರು ದಲಿತರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಾಗಿ ದಲಿತ ಮುಖಂಡ ಹುಸೇನಪ್ಪ ಹೇಳಿದ್ದಾರೆ.
ಊರಿಗೆ ಬಂದವರಿಗೆ ಕಾದಿತ್ತು ಶಾಕ್
ತಳ್ಳಾಟ ಮಾಡಿ ಜಾತಿ ನಿಂದನೆ ಮಾಡಿದ್ದಕ್ಕೆ ದಲಿತರು ಗುರುಮಠಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ನೀಡಿ ವಾಪಸ್ ಊರಿಗೆ ಬಂದ ಬಳಿಕ ದಲಿತರಿಗೆ ಶಾಕ್ ಕಾದಿತ್ತು. ಯಾಕೆಂದರೆ ನಮ್ಮ ವಿರುದ್ಧವೇ ದೂರು ನೀಡಿದ್ದಾರೆ ಅಂತ ಸವರ್ಣೀಯರೆಲ್ಲರು ಸೇರಿ ಸಭೆ ಮಾಡಿ ಯಾವುದೇ ಕಾರಣಕ್ಕೂ ಗ್ರಾಮದಲ್ಲಿ ದಲಿತರ ಜೊತೆ ಯಾವುದೇ ವ್ಯವಹಾರ ಮಾಡಬಾರದು ಅಂತ ಪರ್ಮಾನು ಹೊರಡಿಸಿದ್ದಾರೆ. ಹೀಗಾಗಿ ದಲಿತರು ಗ್ರಾಮಕ್ಕೆ ಬಂದ ಮೇಲೆ ಸವರ್ಣಿಯರಲ್ಲಿ ಹಿರಿಯರು ಹೊರಡಿಸಿದ ಮೌಖಿಕ ಆದೇಶವನ್ನ ಪಾಲನೆ ಮಾಡಿದ್ದಾರೆ.
ದಲಿತರು ಗ್ರಾಮದ ಸವರ್ಣೀಯರ ಹೋಟೆಲ್ಗೆ ಹೋಗಿ ಚಹಾ ಕುಡಿಯಲು ಹೋದರೆ ಚಹಾ ಕೊಟ್ಟಿಲ್ಲ. ಇನ್ನು ಕ್ಷೌರದ ಅಂಗಡಿಗೆ ಹೋದರೆ ಕಟಿಂಗ್ ಮಾಡಿಲ್ಲ. ಏಕೆ ಅಂತ ದಲಿತರು ಪ್ರಶ್ನೆ ಮಾಡಿದರೆ ದಲಿತರಿಗೆ ಕಟಿಂಗ್ ಮಾಡಬೇಡಿ ಅಂತ ಹೇಳಿದ್ದಾರೆ, ಒಂದು ವೇಳೆ ಕಟಿಂಗ್ ಮಾಡಿದರೆ ಲೈಸೆನ್ಸ್ ಕ್ಯಾನ್ಸಲ್ ಮಾಡಿಸೋದಾಗಿ ಹೇಳಿದ್ದಾರೆ ಎಂದಿದ್ದಾರೆ. ಇದರ ಆಡಿಯೋಗಳು ಸದ್ಯ ವೈರಲ್ ಆಗುತ್ತಿವೆ.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಹೇಳಿದ್ದಿಷ್ಟು
ಅಷ್ಟೇ ಅಲ್ಲದೆ ಗ್ರಾಮದಲ್ಲಿ ದಲಿತರ ಕುರಿಗಳು, ದನಗಳು ಯಾರು ಕಾಯಬಾರದು ಅಂತ ಆದೇಶ ಮಾಡಿದ್ದಾರೆ. ಇದೆ ಕಾರಣಕ್ಕೆ ದಲಿತರು ಕೂಡಲೇ ಸಾಮಾಜಿಕ ಬಹಿಷ್ಕಾರ ಹಾಕಿದವರ ವಿರುದ್ಧ ಕೇಸ್ ದಾಖಲು ಮಾಡಿ ಕಾನೂನು ರೀತಿ ಕ್ರಮಕೈಗೊಳ್ಳಬೇಕು ಅಂತ ದೂರು ನೀಡಿದ್ದಾರೆ. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಚನ್ನಬಸವ ಅವರಿಗೆ ಕೇಳಿದರೆ, ನಮ್ಮ ಅಧಿಕಾರಿಗಳಿಗೆ ಗ್ರಾಮಕ್ಕೆ ಕಳುಹಿಸಿ ವರದಿ ನೀಡುವಂತೆ ಹೇಳಿದ್ದೆನೆ. ವಿಡಿಯೋಗಳು ಸಹ ಬಂದಿವೆ. ಕ್ರಮ ಕೈಗೊಳ್ಳಲು ಪೊಲೀಸರಿಗೆ ಹೇಳಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಯಾದಗಿರಿ: ಶತಮಾನದಷ್ಟು ಹಳೆಯದಾದ ಸೇತುವೆಯಲ್ಲಿ ಬಿರುಕು, ಕಣ್ಮುಚ್ಚಿ ಕುಳಿತ ಅಧಿಕಾರಿಗಳು
ಒಟ್ಟಿನಲ್ಲಿ ಚಿನ್ನಕಾರ ಗ್ರಾಮದಲ್ಲಿ ಕಳೆದ ನಾಲ್ಕು ದಿನಗಳಿಂದ ದಲಿತರು ಬಹಿಷ್ಕಾರದ ಶಿಕ್ಷೆಯನ್ನ ಅನುಭವಿಸುತ್ತಿದ್ದಾರೆ. ಹೀಗಾಗಿ ಕೂಡಲೇ ಅಧಿಕಾರಿಗಳು ಬಹಿಷ್ಕಾರ ಹಾಕಿದವರ ವಿರುದ್ಧ ಕ್ರಮಕೈಗೊಂಡು ದಲಿತರಿಗೆ ಮೊದಲಿನಂತೆ ಬದಕಲು ಅನುಕೂಲ ಮಾಡಿಕೊಡಬೇಕಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:37 am, Wed, 25 June 25