ಬೆಂಗಳೂರಿನ ಫುಟ್​​ಪಾತ್​ಗಳಲ್ಲಿ ದಿನಗಟ್ಟಲೇ ವಾಹನ ಪಾರ್ಕ್ ಮಾಡಿ ಹೋಗುವ ಮುನ್ನ ಎಚ್ಚರ

| Updated By: Ganapathi Sharma

Updated on: Jun 03, 2024 | 10:47 AM

ಫುಟ್​ಪಾತ್​​​ನಲ್ಲಿ ದಿನಗಟ್ಟಲೆ ವಾಹನ ಪಾರ್ಕ್​ ಮಾಡಿ ಹೋದರೆ ಇನ್ನು ಮುಂದೆ ಭಾರಿ ಬೆಲೆ ತೆರಬೇಕಾಗಿ ಬಂದೀತು. ರಸ್ತೆ ಬದಿಯಲ್ಲಿ ದಿನಗಟ್ಟಲೆ ಪಾರ್ಕ್ ಆಗಿರುವ ವಾಹನಗಳನ್ನು ವಶಕ್ಕೆ ಪಡೆಯುವ ಕೆಲಸವನ್ನು ಬೆಂಗಳೂರು ಸಂಚಾರ ಪೊಲೀಸರು ಈಗಾಗಲೇ ಆರಂಭಿಸಿದ್ದಾರೆ. ಈ ಕುರಿತು ಮಾಹಿತಿ ಇಲ್ಲಿದೆ ನೋಡಿ.

ಬೆಂಗಳೂರಿನ ಫುಟ್​​ಪಾತ್​ಗಳಲ್ಲಿ ದಿನಗಟ್ಟಲೇ ವಾಹನ ಪಾರ್ಕ್ ಮಾಡಿ ಹೋಗುವ ಮುನ್ನ ಎಚ್ಚರ
ಬೆಂಗಳೂರಿನ ಫುಟ್​​ಪಾತ್​ಗಳಲ್ಲಿ ದಿನಗಟ್ಟಲೇ ವಾಹನ ಪಾರ್ಕ್ ಮಾಡಿ ಹೋಗುವ ಮುನ್ನ ಎಚ್ಚರ
Follow us on

ಬೆಂಗಳೂರು, ಜೂನ್ 3: ಕೆಲವರಿಗೆ ಬೆಂಗಳೂರಿನ (Bengaluru) ಫುಟ್​ಪಾತ್​ಗಳಲ್ಲಿ, ರಸ್ತೆ ಬದಿ ದಿನಗಟ್ಟಲೇ ವಾಹನ ಪಾರ್ಕ್​​ (Vehicle Parking) ಮಾಡಿ ತೆರಳುವ ಅಭ್ಯಾಸವಿರುತ್ತದೆ. ಒಂದು ವೇಳೆ ಈ ಅಭ್ಯಾಸ ಇದ್ದರೆ ತಕ್ಷಣವೇ ಗಮನಿಸಿ. ಫುಟ್​​ಪಾತ್ ಮೇಲೆ ಸುದೀರ್ಘ ಕಾಲ ನಿಲ್ಲಿಸುವ ವಾಹನಗಳನ್ನು ಇದೀಗ ಸಂಚಾರ ಪೊಲೀಸರು ಜಪ್ತಿ ಮಾಡುತ್ತಿದ್ದಾರೆ. ಜಪ್ತಿ ಮಾಡಿದ ನಂತರವೂ ಗಮನಿಸದೆ ಹೋದರೆ, ವಾಹನ ಬಿಡಿಸಿಕೊಳ್ಳದಿದ್ದರೆ ನಿಮ್ಮ ವಾಹನ ಹರಾಜಾಗಲಿದೆ.

3 ತಿಂಗಳಲ್ಲಿ 1500 ವಾಹನಗಳು ಜಪ್ತಿ

ರಸ್ತೆ ಬದಿ ವಾಹನ ನಿಲ್ಲಿಸುವುದರಿಂದ ಪಾದಚಾರಿಗಳ ಓಡಾಟಕ್ಕೆ ತೊಂದರೆಯಾಗುತ್ತದೆ. ಇದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಕಳೆದ 3 ತಿಂಗಳಲ್ಲಿ 1500 ವಾಹನಗಳನ್ನು ಜಪ್ತಿ ಮಾಡಲಾಗಿದೆ. ವಾಹನ ನೋಂದಣಿ ಆಧರಿಸಿ ವಾಹನಗಳ ಮಾಲೀಕರಿಗೆ ಮಾಹಿತಿ ನೀಡಲಾಗಿದೆ. ಈ ವೇಳೆ, 1388 ವಾಹನಗಳನ್ನು ಅವುಗಳ ಮಾಲೀಕರು ದಂಡ ಪಾವತಿಸಿ ಬಿಡಿಸಿಕೊಂಡಿದ್ದಾರೆ. ಇದರ ಜೊತೆಗೆ ವಾಹನದ ಮೇಲೆ ಇರುವ ಹಳೆ ದಂಡವನ್ನೂ ವಸೂಲಿ ಮಾಡಲಾಗುತ್ತಿದೆ.

ನಂಬರ್ ಪ್ಲೇಟ್ ಇಲ್ಲದ 64 ವಾಹನಗಳನ್ನು ಪಾರ್ಕಿಂಗ್ ಯಾರ್ಡ್​ಗೆ ಸ್ಥಳಾಂತರ ಮಾಡಲಾಗಿದೆ. ಮೈಲಸಂದ್ರದ ಪಾರ್ಕಿಂಗ್ ಯಾರ್ಡ್​ಗೆ ಸ್ಥಳಾಂತರ ಮಾಡಲಾಗಿದೆ. ವಾಹನ ಮಾಲೀಕರು ಪತ್ತೆಯಾಗದಿದ್ದರೆ ಕೋರ್ಟ್​ ಅನುಮತಿ ಪಡೆದು ಹರಾಜು ಹಾಕಲಾಗುತ್ತದೆ.

ಮತ್ತೊಂದೆಡೆ, ಸುದೀರ್ಘ ಕಾಲದಿಂದ ಪಾರ್ಕ್ ಮಾಡಿರುವ ವಾಹನಗಳು ಕಳ್ಳತನವಾಗುವ ಸಾಧ್ಯತೆಯೂ ಹೆಚ್ಚಿದೆ. ಅಮಥ ವಾಹನಗಳನ್ನು ಕಳವು ಮಾಡಿ ಅಪರಾಧ ಕೃತ್ಯಗಳಿಗೆ ಬಳಸುವ ಅತಂಕ ಎದುರಾಗಿದೆ. ಈ ಎಲ್ಲ ಕಾರಣಗಳಿಂದ ಸಂಚಾರ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ: ಬೆಂಗಳೂರು: 15 ದಿನಗಳಿಗಿಂತ ಹೆಚ್ಚು ರಸ್ತೆ ಬದಿ ವಾಹನ ಪಾರ್ಕ್ ಮಾಡಿ ಹೋಗಿದ್ದೀರಾ, ಕಾದಿದೆ ಕಠಿಣ ಕ್ರಮ

ಬೆಂಗಳೂರು ನಗರದ ಫುಟ್‌ಪಾತ್‌ಗಳು, ಸಾರ್ವಜನಿಕ ಮಾರ್ಗಗಳು ಮತ್ತು ರಸ್ತೆಗಳಲ್ಲಿ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸುವ ವಾಹನಗಳನ್ನು ಗುರುತಿಸಲು ತಂಡಗಳನ್ನು ರಚಿಸುವ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕಳೆದ ಫೆಬ್ರವರಿ ತಿಂಗಳಲ್ಲಿ ಸರ್ಕಾರಕ್ಕೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಬಹಿರಂಗಪಡಿಸಿದ್ದರು. ಯಾವುದೇ ವಾಹನವನ್ನು 15 ದಿನಗಳಿಗಿಂತ ಹೆಚ್ಚು ಕಾಲ ಫುಟ್‌ಪಾತ್‌ಗಳು ಅಥವಾ ರಸ್ತೆಗಳಲ್ಲಿ ನಿಲ್ಲಿಸಿದರೆ ಅದನ್ನು ವಾರಸುದಾರರು ತ್ಯಜಿಸಿದ ವಾಹನ ಎಂದು ಪರಿಗಣಿಸಲಾಗುತ್ತದೆ ಮತ್ತು ನೋಂದಾಯಿತ ಮಾಲೀಕರಿಗೆ ದಂಡವನ್ನು ವಿಧಿಸಲಾಗುತ್ತದೆ ಎಂದು ಅಫಿಡವಿಟ್​​ನಲ್ಲಿ ಹೇಳಲಾಗಿತ್ತು. ವಾರಸುದಾರರಿಲ್ಲದ ವಾಹನಗಳಿಗೆ ಸಂಬಂಧಿಸಿದ ಕರ್ನಾಟಕ ಹೈಕೋರ್ಟ್ ವಿಚಾರಣೆ ವೇಳೆ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಸರ್ಕಾರದ ಪರ ಮಾಹಿತಿ ನೀಡುವ ಸಂದರ್ಭ ಇದನ್ನು ಉಲ್ಲೇಖಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ