ಬೆಂಗಳೂರು, ಡಿಸೆಂಬರ್ 20: ಐಟಿ ವೃತ್ತಿಪರರು (IT Employees) ಸಂಚಾರಿ ನಿಯಮಗಳನ್ನು ಉಲ್ಲಂಘಿಸುವುದನ್ನು (Traffic Rules Violation) ನಿಯಂತ್ರಿಸಲು ಬೆಂಗಳೂರು ಸಂಚಾರ ಪೊಲೀಸರು (Bengaluru Traffic Police) ವಿನೂತನ ಅಭಿಯಾನವೊಂದನ್ನು ಹಮ್ಮಿಕೊಂಡಿದ್ದಾರೆ. ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದವರ ಕಂಪನಿಗೆ ಮಾಹಿತಿ ರವಾನಿಸಿ ಅವರ ಬಾಸ್ಗಳಿಂದಲೇ ಬುದ್ಧಿ ಹೇಳಿಸುವ ಕೈಂಕರ್ಯಕ್ಕೆ ಪೊಲೀಸರು ಮುಂದಾಗಿದ್ದು, ಇದೀಗ ಹೊರ ವರ್ತುಲ ರಸ್ತೆಯಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ.
ಪ್ರದೇಶದ ಬಹು ನಾಗರಿಕರ ಸಂಘಟನೆಗಳ ಸದಸ್ಯರು ಈ ಅಭಿಯಾನವನ್ನು ನಡೆಸುವಂತೆ ಸಲಹೆ ನೀಡಿದ್ದರು ಎಂದು ಪೊಲೀಸ್ ಉಪ ಕಮಿಷನರ್ (ಪೂರ್ವ) ಕುಲದೀಪ್ ಕುಮಾರ್ ಆರ್ ಜೈನ್ ತಿಳಿಸಿದ್ದಾರೆ. ಪ್ರಸ್ತುತ, ಈ ಅಭಿಯಾನವು ಒನ್ ವೇ ರೂಲ್ಸ್ ಬ್ರೇಕ್ ಮಾಡುವವರನ್ನು ಮಾತ್ರ ಕೇಂದ್ರೀಕರಿಸಿ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸುತ್ತಲಿನ ಪರಿಸರದಲ್ಲಿ ಒಂದು ವಿಚಾರದ ಬಗ್ಗೆ ಸದಾ ಜಾಗೃತಿಯ ಚರ್ಚೆಯಾಗುತ್ತಿದ್ದರೆ ಯಾವನೇ ವ್ಯಕ್ತಿಯಾದರೂ ನಿಯಮಗಳನ್ನು ಅನುಸರಿಸಲು ಒಲವು ತೋರುತ್ತಾನೆ. ಅದಕ್ಕಾಗಿಯೇ ನಾವು ಕೆಲಸದ ಸ್ಥಳಗಳನ್ನು ಸಂಚಾರಿ ನಿಯಮಗಳ ಪಾಲನೆ ಜಾಗೃತಿಗೆ ಬಳಸಿಕೊಳ್ಳಲು ಮುಂದಾಗಿದ್ದೇವೆ ಎಂದು ಅವರು ವಿವರಿಸಿರುವುದಾಗಿ ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಸಂಚಾರ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದರೆ ತಕ್ಷಣ ದಂಡ ವಿಧಿಸಲಾಗುತ್ತದೆ. ವ್ಯಕ್ತಿಯ ಸಾಮಾನ್ಯ ವಿವರಗಳು ಮತ್ತು ಅವರು ಯಾವ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ ಎಂಬ ಮಾಹಿತಿಯನ್ನು ಕಂಪನಿ ಐಡಿ ಕಾರ್ಡ್ಗಳಿಂದ ಕಲೆಹಾಕಲಾಗುವುದು. ಹೆಚ್ಚಿನವರು ಗುರುತಿನ ಚೀಟಿಗಳನ್ನು ಧರಿಸಿರುತ್ತಾರೆ. ಪ್ರತಿ ದಿನದ ಕೊನೆಯಲ್ಲಿ, ನಾವು ಈ ಮಾಹಿತಿಯನ್ನು ಕಂಪನಿಗಳಿಗೆ ಇಮೇಲ್ ಮಾಡುತ್ತೇವೆ ಎಂದು ಜೈನ್ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಪೊಲೀಸರ ಜತೆ ಕೈಜೋಡಿಸಲಿದ್ದಾರೆ ಕಾಲೇಜು ವಿದ್ಯಾರ್ಥಿಗಳು!
ಕಳೆದ ವಾರ, ವೈಟ್‌ಫೀಲ್ಡ್ ಮತ್ತು ಮಹದೇವಪುರದಲ್ಲಿ ಸುಮಾರು 200 ಮಂದಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿರುವವರನ್ನು ಹಿಡಿದು, ದಂಡ ವಿಧಿಸಲಾಗಿದೆ. ಜತೆಗೆ ಅವರ ಕಂಪನಿಗಳಿಗೆ ಮಾಹಿತಿ ನೀಡಲಾಗಿದೆ. ಈ ತಪಾಸಣೆಗಳು ಪೀಕ್ ಅವರ್‌ಗಳಲ್ಲಿ ನಡೆಯುತ್ತವೆ. ಸಾಮಾನ್ಯವಾಗಿ ಬೆಳಿಗ್ಗೆ 8 ರಿಂದ 10 ರವರೆಗೆ ಮತ್ತು ಸಂಜೆ 6 ರಿಂದ 8 ರವರೆಗೆ ನಡೆಯುತ್ತವೆ ಎಂದು ಅವರು ಹೇಳಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ