ನೆಲಮಂಗಲ, ಜೂನ್ 21: ಅಬ್ಬಬ್ಬಾ ಎಂದರೆ ವ್ಯಕ್ತಿಯೊಬ್ಬ ಎಷ್ಟು ಮದುವೆಯಾಗಬಹುದು? ಒಂದು, ಎರಡು… ಅಲ್ಲ ಮೂರು? ಅಲ್ಲವೇ ಅಲ್ಲ. ಇಲ್ಲೊಬ್ಬ ವ್ಯಕ್ತಿ ಕಾನೂನುಬಾಹಿರವಾಗಿ ನಾಲ್ಕು (Marriage) ಮದುವೆಯಾಗಿದ್ದಾನೆ. ನಾಲ್ವರು ಹೆಂಡತಿಯರಿಗೂ ಮಕ್ಕಳನ್ನೂ ಕರುಣಿಸಿದ್ದಾನೆ. ಅಷ್ಟೇ ಏಕೆ, ನಾಲ್ಕನೇ ಹೆಂಡತಿಗೆ ಕೊಡಲೆಂದು ಮೂರನೇ ಹೆಂಡತಿಯ ಚಿನ್ನ ಕದ್ದು (Gold Theft) ಇದೀಗ ಆಕೆಯಿಂದ ಪಡೆದ ಮಗನಿಂದಲೇ ಏಟು ತಿಂದಿದ್ದಾನೆ. ಈ ಘಟನೆ ನಡೆದಿರುವುದು ಬೆಂಗಳೂರು ಉತ್ತರ ತಾಲೂಕಿನ ದೊಡ್ಡಬಿದರಕಲ್ಲು ಗ್ರಾಮದಲ್ಲಿ.
ದೊಡ್ಡಬಿದರಕಲ್ಲು ಗ್ರಾಮದ ಭಕ್ತವತ್ಸಲ ಎಂಬ ವ್ಯಕ್ತಿಗೆ ನಾಲ್ಕು ಮದುವೆಯಾಗಿದೆ. ಮೊದಲ ಪತ್ನಿ ಕವಿತ, ಎರಡನೇ ಪತ್ನಿ ಸಾವಿತ್ರಿ, ಮೂರನೇ ಪತ್ನಿ ನಾಗರತ್ನಮ್ಮ. ನಾಲ್ಕನೇ ಪತ್ನಿಯ ಹೆಸರು ಪದ್ಮಾವತಿ. ಈ ಭಕ್ತವತ್ಸಲ ತನ್ನ 3ನೇ ಪತ್ನಿ ನಾಗರತ್ನಮ್ಮ ಮನೆಯಲ್ಲಿದ್ದ 50 ಗ್ರಾಂಗೂ ಹೆಚ್ಚು ಚಿನ್ನಾಭರಣ ಕದ್ದು ನಾಲ್ಕನೇ ಪತ್ನಿ ಪದ್ಮಾವತಿಗೆ ಕೊಟ್ಟಿದ್ದಾನೆ. ಈ ವಿಚಾರ ಮೂರನೇ ಪತ್ನಿಯ ಮಗ 18 ವರ್ಷದ ಜೀವನ್ಗೆ ಗೊತ್ತಾಗಿದೆ. ಇದರಿಂದ ಸಿಟ್ಟಾದ ಜೀವನ್ ಸೀದಾ ಪದ್ಮಾವತಿ ಮನೆಗೆ ತೆರಳಿದ್ದಾನೆ. ಈ ವೇಳೆ ಅಲ್ಲೇ ಮಲಗಿದ್ದ ಭಕ್ತವತ್ಸಲ ಮೇಲೆ ದಾಳಿ ನಡೆಸಿದ್ದಾನೆ.
ಇದನ್ನೂ ಓದಿ: ಅತ್ತಿಗೆ ಮೇಲಿನ ಕೋಪಕ್ಕೆ 3 ವರ್ಷದ ಮಗುವಿನ ಕತ್ತು ಸೀಳಿ ಕೊಲೆ: ಸತ್ಯ ಬಾಯ್ಬಿಟ್ಟ ಆರೋಪಿ
ನಾಲ್ಕು ಮದುವೆಯಾಗಿರುವ ಭಕ್ತವತ್ಸಲ ‘ಕೃಷ್ಣ ಭಾಗ್ಯ ಜಲ ನಿಗಮ’ದಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿದ್ದಾನೆ. ಈಗಾಗಲೇ ಮದುವೆಯಾಗಿರುವ ಯಾರೊಬ್ಬರಿಗೂ ವಿಚ್ಛೇದನ ಕೊಡದೇ ನಾಲ್ಕು ಮದುವೆಯಾಗಿದ್ದಾನೆ. ಈ ನಾಲ್ವರು ಪತ್ನಿಯರಿಂದ ಒಟ್ಟಾಗಿ ಆತನಿಗೆ 6 ಮಕ್ಕಳಿದ್ದಾರೆ.
ಸದ್ಯ ಮೂರನೇ ಪತ್ನಿ ನಾಗರತ್ನಮ್ಮ ಹಾಗೇ ನಾಲ್ಕನೇ ಪತ್ನಿ ಪದ್ಮಾವತಿ ಇಬ್ಬರೂ ಕೂಡ ಗಂಡ ಬೇಕು ಎಂದು ಪಟ್ಟುಹಿಡಿದಿದ್ದಾರೆ. ಘಟನೆ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:47 pm, Fri, 21 June 24