ಬೆಂಗಳೂರು: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್(Yogi Adityanath) ಅವರು ನೆಲಮಂಗಲದಲ್ಲಿ ನಡೆದ ಎಸ್ಡಿಎಂ ಕ್ಷೇಮವನ ಉದ್ಘಾಟನಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ. ಇದೇ ವೇಳೆ ಕಾರ್ಯಕ್ರಮದಲ್ಲಿ ಭಾರತದ ಪಾರಂಪರಿಕ ವೈದ್ಯಕೀಯ ಪದ್ಧತಿಯನ್ನು ಮುನ್ನೆಲೆಗೆ ತಂದಿದ್ದಕ್ಕಾಗಿ ವೀರೇಂದ್ರ ಹೆಗ್ಗಡೆಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಯುಪಿ ಸಿಎಂ ಯೋಗಿ ಆದಿತ್ಯನಾಥ್, ಕರ್ನಾಟಕ ಮತ್ತು ಉತ್ತರ ಪ್ರದೇಶದ ನಡುವೆ ಬಲಿಷ್ಠ ಸಂಬಂಧ ಇದೆ. ಧರ್ಮಾಧಿಕಾರಿಯ ರೂಪದಲ್ಲಿ ವೀರೇಂದ್ರ ಹೆಗ್ಗಡೆ ಪಾರಂಪರಿಕ ವೈದ್ಯ ಪದ್ದತಿಯನ್ನು ಪರಿಚಯಿಸಿದ್ದಾರೆ. ಬಜರಂಗಬಲಿಯ ಸಹಾಯದಿಂದ ರಾಮಸೇತುವೆ ನಿರ್ಮಾಣವಾಯಿತು. ನಾನು ಒಬ್ಬ ಯೋಗಿ, ಸ್ವಾಮಿ ನಿರ್ಮಲಾನಂದನಾಥ ಕೂಡಾ ಯೋಗಿ. ಬಸವರಾಜ ಬೊಮ್ಮಾಯಿ ರಾಜ್ಯದ ಜನರ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದಾರೆ. ವೀರೇಂದ್ರ ಹೆಗ್ಗಡೆ ಕೂಡಾ ಯೋಗಿಯ ರೂಪದಲ್ಲಿ ಧರ್ಮಸ್ಥಳದ ಮೂಲಕ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು ಐಟಿ-ಬಿಟಿ ಹಬ್ ಆಗಿದೆ. ಈಗ ಸಾಂಪ್ರದಾಯಿಕ ವೈದ್ಯ ಪದ್ಧತಿಯ ಹಬ್ ಆಗುವ ಅವಕಾಶ ಸಿಕ್ಕಿದೆ. ಭಾರತೀಯ ಯೋಗ ಪರಂಪರೆಯ ಮೂಲಕ ವಿಶ್ವದ ಜನರು ಒಂದಾಗಿದ್ದಾರೆ. ಸ್ವಸ್ಥ ಶರೀರ ಎಲ್ಲವನ್ನೂ ಸಂಪನ್ನಗೊಳಿಸುತ್ತದೆ ಎಂದರು.
ಸಿಎಂ ಬೊಮ್ಮಾಯಿ ಹೊಗಳಿದ ಯೋಗಿ
ಶಿಕ್ಷಣ ಹಾಗೂ ಆಧ್ಯಾತ್ಮಿಕ ಎರಡು ಕ್ಷೇತ್ರಗಳಲ್ಲೂ ಕರ್ನಾಟಕದಲ್ಲಿ ಕೆಲಸ ನಡೆಯುತ್ತಿದೆ. ನಮ್ಮ ಪರಂಪರೆಯ ಚಿಕಿತ್ಸಾ ಕೇಂದ್ರಗಳು ಇಲ್ಲಿ ಮುಂದುವರೆದಿದೆ. ಬೆಂಗಳೂರಿನಲ್ಲಿ ಕ್ಷೇಮವನ ಸ್ಥಾಪನೆ ಶ್ರೀ ಕ್ಷೇತ್ರ ಧರ್ಮಸ್ಥಳದ ಮಹಾ ಪ್ರಸಾದ. ಕೋವಿಡ್ ಸಂದರ್ಭದಲ್ಲಿ ಯೋಗದ ತಾಕತ್ತು ಗೊತ್ತಾಗಿದೆ. ಉತ್ತರ ಪ್ರದೇಶದಲ್ಲಿ ಆಯುಷ್ ವಿವಿ ಸ್ಥಾಪನೆ ವೇಳೆ ನಾನು ಡಾ. ನಾಗೇಂದ್ರ ಅವರ ಮಾರ್ಗದರ್ಶನ ಪಡೆದಿದ್ದೆ. ಕರ್ನಾಟಕದಲ್ಲಿ ಬೊಮ್ಮಾಯಿ ನೇತೃತ್ವದಲ್ಲಿ ಕರ್ನಾಟಕ ಸರ್ಕಾರ ವಿಕಾಸದತ್ತ ಕೆಲಸ ಮಾಡುತ್ತಿದೆ. ಬೊಮ್ಮಾಯಿ ಸಮೃದ್ಧ ಮತ್ತು ಸುರಕ್ಷಿತ ಕರ್ನಾಟಕಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕ ದೇಶದ ಬಲಿಷ್ಠ ಅರ್ಥ ವ್ಯವಸ್ಥೆಯ ರಾಜ್ಯವಾಗಲಿ. ಬೊಮ್ಮಾಯಿ ಸರ್ಕಾರಕ್ಕೆ ವಂದನೆ ಸಲ್ಲಿಸುತ್ತೇನೆ ಎಂದು ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಬಸವರಾಜ ಬೊಮ್ಮಾಯಿ ಸರ್ಕಾರವನ್ನು ಹೊಗಳಿದರು.
ಇನ್ನು ಮತ್ತೊಂದು ಕಡೆ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಮಾತನಾಡಿದ್ದು, ನಮ್ಮ ಮನಸ್ಥಿತಿಯನ್ನು ಹತೋಟಿಯಲ್ಲಿಟ್ಟುಕೊಳ್ಳಲು ಸಾಧ್ಯವಿದ್ದರೆ ನಾವು ಸ್ಥಿತಪ್ರಜ್ಞರಾಗಿರಬಹುದು. ದೇಹ ಮತ್ತು ಮನಸ್ಸಿಗೆ ಬಹಳಷ್ಟು ಸಂಬಂಧವಿದೆ. ಯೋಗಿ ಆದಿತ್ಯನಾಥ್ ಬಂದಿರುವುದು ನಮಗೆ ಹೆಮ್ಮೆ. ಅವರಿಗೆ ಮತ್ತು ಕರ್ನಾಟಕಕ್ಕೆ ಸಂಬಂಧ ಇದೆ. ನಮ್ಮ ಧರ್ಮದಲ್ಲಿ, ನನ್ನ ಸಮಾಜದಲ್ಲಿ ಗುರುಗಳಿಗೆ ಅತ್ಯುನ್ನತ ಸ್ಥಾನವಿದೆ ಎಂದರು.
ತಮ್ಮ ಸಾರ್ವಜನಿಕ ಜೀವನವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಾರೆ. ಯೋಗಿ ನುಡಿದಂತೆ ನಡೆಯುತ್ತಾರೆ. ಗುರುಗಳು ಕೂಡಾ ದಕ್ಷ ಆಡಳಿತಗಾರ ಆಗಬಹುದು ಎಂದು ತೋರಿಸಿದ್ದಾರೆ. ಕನ್ನಡ ನಾಡಿಗೆ ಯೋಗಿ ಆದಿತ್ಯನಾಥ್ ಬಂದಿದ್ದು ನಮ್ಮೆಲ್ಲರಿಗೆ ಖುಷಿಯಾಗಿದೆ. ಒಬ್ಬರು ಸ್ವಾಮೀಜಿ ದಕ್ಷ ಆಡಳಿತಗಾರ ಎಂದು ತೋರಿಸಿದ್ದಾರೆ. ಆಧ್ಯಾತ್ಮ ಮತ್ತು ಆಡಳಿತ ಎರಡೂ ಮಾಡಬಹುದು ಎಂದು ಯೋಗಿ ತೊರಿಸಿಕೊಟ್ಟಿದ್ದಾರೆ. ಅವರ ಆಡಳಿತದಲ್ಲಿ ದುಷ್ಟರಿಗೆ ರಕ್ಷಣೆ ಇಲ್ಲ ಶಿಷ್ಟರ ಪರಿಪಾಲನೆ ಆಗುತ್ತಿದೆ ಎಂದರು.
ನೆಲಮಂಗಲದಲ್ಲಿ ಎಸ್ಡಿಎಂ ಕ್ಷೇಮವನ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ವೇದಿಕೆಯಿಂದ ತೆರಳಿದರು. ಭೋಜನ ಮುಗಿಸಿ ಹೆಲಿಕಾಫ್ಟರ್ ಮೂಲಕ ಜಕ್ಕೂರು ಏರೋಡ್ರಂಗೆ ತೆರಳಲಿದ್ದಾರೆ. ಜಕ್ಕೂರಿನಿಂದ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಸಿಎಂ ಅಧಿಕೃತ ನಿವಾಸ ರೇಸ್ ವ್ಯೂ ಕಾಟೇಜ್ ಗೆ ಭೇಟಿ ನೀಡಲಿದ್ದಾರೆ.
Published On - 3:16 pm, Thu, 1 September 22