ರಾಹುಲ್ ಎಂಟರ್​ಪ್ರೈಸಸ್, ಉಮೇಶ್ ಮನೆ ಮೇಲಿನ ಐಟಿ ದಾಳಿ ಅಂತ್ಯ; ಹಲವು ಕಡತಗಳನ್ನು ವಶಪಡಿಸಿಕೊಂಡ ಅಧಿಕಾರಿಗಳು

| Updated By: shivaprasad.hs

Updated on: Oct 08, 2021 | 9:32 AM

IT Raids in Bengaluru: ಆದಾಯ ತೆರಿಗೆ ಅಧಿಕಾರಿಗಳು ನಿನ್ನೆ (ಅಕ್ಟೋಬರ್ 7) ಬೆಂಗಳೂರಿನಲ್ಲಿ ಹಲವೆಡೆ ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲಿಸಿದ್ದರು. ಇಂದು ಮುಂಜಾನೆ ಪರಿಶೀಲನೆ ಮುಗಿದಿದ್ದು, ಹಲವು ಕಡತಗಳನ್ನು ವಶಪಡಿಸಿಕೊಂಡು ಅಧಿಕಾರಿಗಳು ಮರಳಿದ್ದಾರೆ.

ರಾಹುಲ್ ಎಂಟರ್​ಪ್ರೈಸಸ್, ಉಮೇಶ್ ಮನೆ ಮೇಲಿನ ಐಟಿ ದಾಳಿ ಅಂತ್ಯ; ಹಲವು ಕಡತಗಳನ್ನು ವಶಪಡಿಸಿಕೊಂಡ ಅಧಿಕಾರಿಗಳು
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಆಪ್ತ ಉಮೇಶ್ ಮನೆ ಮೇಲೆ ನಿನ್ನೆ (ಅಕ್ಟೋಬರ್ 7) ಐಟಿ ದಾಳಿ ನಡೆಸಲಾಗಿತ್ತು. ಬೆಂಗಳೂರಿನ ರಾಜಾಜಿ ನಗರದಲ್ಲಿರುವ ಭಾಷ್ಯಂ ಸರ್ಕಲ್‌ನಲ್ಲಿರುವ ಅವರ ಮನೆಯಲ್ಲಿ ತಡರಾತ್ರಿಯವರೆಗೂ ಪರಿಶೀಲನೆ ನಡೆದಿತ್ತು. ನೀರಾವರಿ ಕುರಿತ ಟೆಂಡರ್, ಇತರ ಕಡತಗಳನ್ನು ವಶಕ್ಕೆ ಪಡೆಯಲಾಗಿದ್ದು, ದಾಖಲೆಗಳ ಜೊತೆಗೆ ಐಟಿ ಮೂವರು ಐಟಿ ಅಧಿಕಾರಿಗಳು ಮರಳಿದ್ದಾರೆ.

ಉಮೇಶ್ ಮನೆ ಮತ್ತು ಕಚೇರಿ ಸೇರಿ 4 ಕಡೆಗಳಲ್ಲಿ ಐಟಿ ದಾಳಿ ನಡೆದಿತ್ತು. ಉಮೇಶ್ ಅವರು ಮಾಜಿ ಸಿಎಂ ಯಡಿಯೂರಪ್ಪ, ಸಂಸದ ರಾಘವೇಂದ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಮೂವರಿಗೂ ಪಿಎ ರೀತಿ ಕೆಲಸ ಮಾಡುತ್ತಿದ್ದರು. ರಾಘವೇಂದ್ರ ಬೆಂಗಳೂರಿಗೆ ಬಂದಾಗ ಅವರ ಕೆಲಸಗಳ ನಿರ್ವಹಣೆ ಮಾಡುತ್ತಿದ್ದರು. ಯಡಿಯೂರಪ್ಪ ವಿಪಕ್ಷ ನಾಯಕರಾಗಿದ್ದಾಗ ಮತ್ತು ಮುಖ್ಯಮಂತ್ರಿ ಆಗಿದ್ದಾಗ ಅವರಿಗೆ ಉಮೇಶ್ ಪಿಎ ಆಗಿದ್ದರು. ಉಮೇಶ್ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಕಾರಣ, ಇದರಿಂದ ಅದೃಷ್ಟ ಖುಲಾಯಿಸುತ್ತದೆ ಎಂಬ ನಂಬಿಕೆ ಅವರಲ್ಲಿತ್ತು. ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಮತ್ತು ಸೋದರ ಪ್ರಭಾಕರ್ ಶೆಟ್ಟಿ ವಾಸವಿದ್ದ ಮನೆಯಲ್ಲಿ ಅವರು ವಾಸವಿದ್ದರು.

 ರಾಹುಲ್ ಎಂಟರ್​​ಪ್ರೈಸಸ್ ಮೇಲಿನ ದಾಳಿ ಅಂತ್ಯ:
ರಾಹುಲ್‌ ಎಂಟರ್‌ಪ್ರೈಸಸ್ ಮೇಲಿನ ಐಟಿ ದಾಳಿ ಅಂತ್ಯವಾಗಿದ್ದು, ರಾತ್ರಿ 11 ಗಂಟೆ ವೇಳೆಗೆ ತಂಡ ಮರಳಿದೆ. ದಾಳಿಯ ವೇಳೆ, ನೀರಾವರಿ ಇಲಾಖೆಗೆ ಸಂಬಂಧಿಸಿದ ದಾಖಲೆಗಳು, ಹಾರ್ಡ್ ಡಿಸ್ಕ್, ಬ್ಯಾಂಕ್ ದಾಖಲೆಗಳನ್ನು  ವಶಕ್ಕೆ ಪಡೆಯಲಾಗಿದೆ. ಒಟ್ಟು 10 ಅಧಿಕಾರಿಗಳ ತಂಡದಿಂದ ಪರಿಶೀಲನೆ ನಡೆಸಲಾಗಿತ್ತು.

ಕೊಡಿಗೇಹಳ್ಳಿ ಸಹಕಾರ ನಗರದಲ್ಲಿರುವ ರಾಹುಲ್ ಎಂಟರ್‌ ಪ್ರೈಸಸ್ ಮೇಲೆ ನಿನ್ನೆ (ಅಕ್ಟೋಬರ್ 7) ಐಟಿ ದಾಳಿ ನಡೆದಿತ್ತು. ರಾಹುಲ್ ಎಂಟರ್‌ಪ್ರೈಸಸ್ ಸಿಮೆಂಟ್, ಸ್ಟೀಲ್ ಡೀಲರ್ ಕಚೇರಿಯಲ್ಲಿ ಐಟಿ ಅಧಿಕಾರಿಗಳು ಪರಿಶೀಲನೆ ಪ್ರಾರಂಭಿಸಿದ್ದರು. ಮೂರು ಇನ್ನೋವಾ ಕ್ರಿಸ್ಟಾ ಕಾರಿನಲ್ಲಿ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದರು. ಇದೀಗ ದಾಳಿ ಅಂತ್ಯವಾಗಿದ್ದು, ಅಧಿಕಾರಿಗಳು ಮರಳಿದ್ದಾರೆ.

ಡಿ.ವೈ.ಉಪ್ಪಾರ್ ಕಚೇರಿ ಮೇಲಿನ ದಾಳಿ ಅಂತ್ಯ:
ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿ.ಆರ್.ಉಪ್ಪಾರ್ ಕಚೇರಿ ಮೇಲಿನ ದಾಳಿ ಕೂಡ  ಅಂತ್ಯವಾಗಿದೆ. ಜೊತೆಗೆ ಐಟಿ ಅಧಿಕಾರಿಗಳು ಬಾಗಲಕೋಟೆ ನಗರಕ್ಕೆ ತೆರಳಿ ಅಲ್ಲಿ ಡಿ.ಆರ್.ಉಪ್ಪಾರ್ ಮನೆ ಮೇಲೆ ದಾಳಿ ನಡೆಸಿದ್ದರು. ಕೆಟಗರಿ ಒನ್ ಕಂಟ್ರಾಕ್ಟರ್ ಆಗಿರುವ ಉಪ್ಪಾರ್, ವಿಜಯಪುರ ಮೂಲದ ಗುತ್ತಿಗೆದಾರರಾಗಿದ್ದಾರೆ. ಇದೀಗ ಅವರ ಮನೆಯಲ್ಲೂ ಪರಿಶೀಲನೆ ಮುಗಿದಿದ್ದು, ಅಧಿಕಾರಿಗಳ ತಂಡ ಮರಳಿದೆ.

ಕೊಪ್ಪಳ ಜಿಲ್ಲೆಯಲ್ಲಿ ಗುತ್ತಿಗೆದಾರ ಶ್ರೀನಿವಾಸ ಮನೆ ಮೇಲೆ IT ದಾಳಿ:
ಕೊಪ್ಪಳ ಜಿಲ್ಲೆಯಲ್ಲಿ ಗುತ್ತಿಗೆದಾರ ಶ್ರೀನಿವಾಸ ಮನೆ ಮೇಲೆ ಐಟಿ ದಾಳಿ ಮುಂದುವರೆದಿದೆ. ಬೆಂಗಳೂರಿನಲ್ಲಿ ವಾಸವಿರುವ ಗುತ್ತಿಗೆದಾರ ಎಂ.ಶ್ರೀನಿವಾಸ ಅವರಿಗೆ ಗಂಗಾವತಿ ತಾಲೂಕಿನ ಕೋಟಯ್ಯ ಕ್ಯಾಂಪ್​​ನಲ್ಲಿರುವ ಮನೆ ಇದೆ. ಅಲ್ಲಿ ಹುಬ್ಬಳ್ಳಿಯಿಂದ ಬಂದಿದ್ದ 6 ಜನ ಐಟಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ದಾಳಿ ವೇಳೆ ಹಲವು ದಾಖಲೆ ಪತ್ರವನ್ನು ವಶಕ್ಕೆ ಪಡೆಯಲಾಗಿದೆ.

ನಿನ್ನೆ ಬೆಂಗಳೂರು ನಗರ ಹಾಗೂ ವಿವಿದೆಡೆ 50ಕ್ಕೂ ಹೆಚ್ಚು ಕಡೆ ಐಟಿ ದಾಳಿ ನಡೆದಿತ್ತು. ಕರ್ನಾಟಕ, ಗೋವಾ ಘಟಕದ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಉದ್ಯಮಿಗಳು ಮತ್ತು ಗುತ್ತಿಗೆದಾರರ ಮನೆಗಳು ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲಿಸಲು ಆರಂಭಿಸಿದ್ದರು. 300ಕ್ಕೂ ಹೆಚ್ಚು ಆದಾಯ ತೆರಿಗೆ ಅಧಿಕಾರಿಗಳು 120 ವಾಹನಗಳಲ್ಲಿ ಆಗಮಿಸಿದ್ದರು.

ಇದನ್ನೂ ಓದಿ:

ಯಡಿಯೂರಪ್ಪ ಆಪ್ತ ಉಮೇಶ್ ಕೆಲವೇ ವರ್ಷಗಳಲ್ಲಿ ಕೋಟ್ಯಾಂತರ ರೂಪಾಯಿ ಆಸ್ತಿಯ ಒಡೆಯನಾಗಿದ್ದು ಸೋಜಿಗ ಹುಟ್ಟಿಸುತ್ತದೆ!

ನೀರಾವರಿ ಗುತ್ತಿಗೆದಾರರ ಮನೆಗಳ ಮೇಲೆ ಐಟಿ ದಾಳಿ: ಮುಸುಕಿನ ಗುದ್ದಾಟದಿಂದ ಹೊರಬಂತೆ ಹುಳುಕು

ಯಾರೇ ತಪ್ಪು ಮಾಡಿದ್ರೂ ಐಟಿ ಅಧಿಕಾರಿಗಳು ಬಿಡುವುದಿಲ್ಲ; ರಾಜಕೀಯ ಪ್ರೇರಿತ ದಾಳಿ ಅಲ್ಲ ಎಂದ ಬಿಎಸ್ ಯಡಿಯೂರಪ್ಪ

Published On - 8:00 am, Fri, 8 October 21