ಬೆಂಗಳೂರು, (ಜನವರಿ 23): 600 ಶಿಬಿರಾರ್ಥಿಗಳು ಹಾಗೂ ವೈವಿಧ್ಯಮಯ ಕಲಾಕ್ಷೇತ್ರಗಳ ದಿಗ್ಗಜರು ಭಾವ್ 2025: ದಿ ಎಕ್ಸ್ಪ್ರೆಷನ್ಸ್ ಸಮ್ಮಿಟ್ ನಲ್ಲಿ, ಜನವರಿ 23ರಿಂದ 26ರವರೆಗೆ ಸೇರಲಿದ್ದಾರೆ. ಈ ಸಮಾವೇಶವು ಭಾರತದ ಅತೀ ದೊಡ್ಡ ಕಲೆಯ ಹಾಗೂ ಸಾಂಸ್ಕೃತಿಕ ಪರಂಪರೆಯ ಸಂಭ್ರಮವಾಗಿದ್ದು, ಮೂರು ದಿವಸಗಳ ಈ ಸಮಾವೇಶದಲ್ಲಿ ಕಲಾವಿದರು ಹಾಗೂ ಘನ ಸಾಂಸ್ಕೃತಿಕ ಧ್ವನಿಗಳಾಗಿರುವ ಮಂಜಮ್ಮ ಜೋಗತಿ, ಸುನಂದಾ ದೇವಿ, ಬನ್ನಂಜೆ ಸುವರ್ಣರವರು ಭಾಗವಹಿಸಲಿದ್ದಾರೆ. ತಮ್ಮ ಜೀವನವನ್ನೇ ರಾಜ್ಯದ ಭವ್ಯ ಸಾಂಸ್ಕೃತಿಕ ಹಾಗೂ ಜನಪದ ಪರಂಪರೆಗೆ ಮುಡಿಪಾಗಿಟ್ಟಿರುವ ಇವರು, ಅವರ ಪಯಣಗಳ ಹಾದಿಯನ್ನು ನಮ್ಮೊಂದಿಗೆ ಹಂಚಿಕೊಳ್ಳಲಿದ್ದಾರೆ.
ಲೈಂಗಿಕ ಅಲ್ಪಸಂಖ್ಯಾತ ಕಲಾಕಾರರು ಮತ್ತು ಸಮುದಾಯಗಳು ಭಾರತದ ಕಲೆ ಮತ್ತು ಸಂಸ್ಕೃತಿಗೆ ನೀಡಿರುವ ಅನುಪಮವಾದ ಕಾಣಿಕೆಯ ಬಗ್ಗೆ ಪದ್ಮಶ್ರೀ ಮಂಜಮ್ಮ ಜೋಗತಿಯವರೊಡನೆ ಚರ್ಚೆ ಮತ್ತು ಪ್ರದರ್ಶನ, 70 ದಿಗ್ಗಜರ ಕಲಾಪ್ರದರ್ಶನ, ಉಪನ್ಯಾಸ, ಪ್ರಾಯೋಗಿಕ ಪ್ರದರ್ಶನ – ಪದ್ಮ ವಿಭೂಷಣ ಸೋನಲ್ ಮನ್ ಸಿಂಗ್, ಕುಚುಪುಡಿಯ ದಂತಕಥೆಯಾದ ಸುನಂದಾ ದೇವಿ, ಪದ್ಮಶ್ರೀ ಉಮಾ ಮಹೇಶ್ವರಿ, ಯಕ್ಷಗಾನದ ದಂತಕಥೆ ಬನ್ನಂಜೆ ಸುವರ್ಣ, ಹೀಗೆ ಭಾವ್ – ದಿ ಎಕ್ಸ್ಪ್ರೆಷನ್ ಸಮ್ಮಿಟ್ 2025 ಒಂದು ಅನುಪಮವಾದ, ಮನಸೆಳೆವ ಅನುಭವವಾಗಲಿದ್ದು, ದಿ ಆರ್ಟ್ ಆಫ್ ಲಿವಿಂಗ್ ನ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಇದು ನಡೆಯಲಿದೆ.
ಸಂಸ್ಕೃತಿಗಳ ಈ ಬೃಹತ್ ಸಂಭ್ರಮಕ್ಕೆ ಮಾರ್ಗದರ್ಶಕರಾಗಿರುವ ಜಾಗತಿಕ ಮಾನವತಾವಾದಿ ಹಾಗೂ ಆಧ್ಯಾತ್ಮಿಕ ನಾಯಕರಾಗಿರುವ ಗುರುದೇವ್ ಶ್ರೀ ಶ್ರೀ ರವಿಶಂಕರರು, “ಒಂದೇ ಒಂದು ಸಂಸ್ಕೃತಿ, ಧರ್ಮ ಅಥವಾ ನಾಗರಿಕತೆಯು ಮಾಯವಾದರೂ ಸಹ, ಜಗತ್ತು ಅದರಿಂದ ಬಡವಾಗುತ್ತದೆ. ಪ್ರತಿಯೊಂದು ಸಂಸ್ಕೃತಿಯೂ ಸಹ ಜಗತ್ತಿನ ಪರಂಪರೆಯ ಭಾಗವಾಗಿದೆ ಮತ್ತು ಅವೆಲ್ಲವನ್ನೂ ನಾವು ಉಳಿಸಿ ಸಂರಕ್ಷಿಸಲೇಬೇಕು” ಎನ್ನುತ್ತಾರೆ.
ಭಾರತೀಯ ಕಲೆಗೆ ಮತ್ತು ಕಲಾವಿದರಿಗೆ ತಮ್ಮ ಪೂರ್ಣ ಬೆಂಬಲವನ್ನು ಸೂಚಿಸುವ ಸಲುವಾಗಿ ಸನ್ಮಾನ್ಯ ಕೇಂದ್ರ ಮಂತ್ರಿಗಳಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ರವರೂ ಈ ಸಮಾವೇಶದಲ್ಲಿ ಉಪಸ್ಥಿತರಾಗಲಿದ್ದಾರೆ.
ನಾಗಾಲೋಟವಾಗಿ ಸಾಗುತ್ತಿರುವ ಈ ಜಗತ್ತಿನಲ್ಲಿ ಕಲಾವಿದರು ಸ್ವಲ್ಪ ನಿಂತು, ಚಿಂತನೆ ನಡೆಸಿ, ಅವರ ಸೃಜನಶೀಲ ಮೂಲದೊಡನೆ ಮತ್ತೆ ನವೀನ ಸಂಬಂಧವನ್ನು ಪಡೆಯುವಂತೆ ಮಾಡುವುದು ಭಾವ್ ಸಮಾವೇಶದ ಮತ್ತೊಂದು ಉದ್ದೇಶವೂ ಆಗಿದೆ. ಗುರುದೇವ್ ಶ್ರೀ ಶ್ರೀ ರವಿಶಂಕರರ ಪ್ರೇರಣೆಯಂತೆ ಭಾವ್ ಸಮಾವೇಶವು ಆಧ್ಯಾತ್ಮಿಕ ಕ್ರಿಯಾಶೀಲತೆಯನ್ನು ಪೋಷಿಸುತ್ತದೆ. ಕಲೆಯನ್ನು ಧ್ಯಾನವಾಗಿ, ದೈವದೆಡೆಗೆ ಸಾಗುವ ಪಥವಾಗಿ ಮಾಡಿಕೊಳ್ಳುವಂತೆ ಭಾವ್ ಪ್ರೇರೇಪಿಸುತ್ತದೆ. ಇದರಲ್ಲಿ ನಡೆಯುವ ಕಾರ್ಯಾಗಾರಗಳು ಆರ್ಟ್ ಆಫ್ ಲಿವಿಂಗ್ ನ ಮೌಲ್ಯಗಳಾದ ಸಾಮರಸ್ಯ, ಕರುಣೆ ಮತ್ತು ಆಂತರಿಕ ಶಾಂತಿಯನ್ನು, ಮಾನಸಿಕ ಒಳಿತನ್ನು ಪಡೆಯುವಂತೆ ಮಾಡುತ್ತವೆ.
1. ಭಾವ್ 2025 ರಲ್ಲಿ ವೈಭವಯುತವಾದ ಕರ್ನಾಟಕ
ಈ ಸಮಾವೇಶವು ರಾಜ್ಯದ ಸಾಂಸ್ಕೃತಿಕ ದಿಗ್ಗಜರ ಕೆಲಸಗಳ ಪ್ರದರ್ಶನ, ಅವರಿಂದ ಪ್ರದರ್ಶನಗಳು, ಜನಪದ ಕಲೆಯ ಅರ್ಪಣೆಯನ್ನು ಕಾಣಲಿದೆ. ಕರ್ನಾಟಕ ಜಾನಪದ ಅಕಾಡೆಮಿಯ ಪ್ರಥಮ ಲೈಂಗಿಕ ಅಲ್ಪಸಂಖ್ಯಾತ ಅಧ್ಯಕ್ಷೆಯಾದ ಮಂಜಮ್ಮ ಜೋಗತಿಯವರು ಸಭಿಕರಿಗೆ ಅನುಪಮವಾದ, ಭಗವಂತನಿಗೆ ಪೂರ್ಣ ಭಕ್ತಿಯನ್ನು ಸೂಚಿಸುವ ಜೋಗತಿಯ ಪದ್ಧತಿಯ ಬಗ್ಗೆ ತಿಳಿಸಲಿದ್ದಾರೆ. ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿರುವ ಇತರ ಕಲಾ ದಿಗ್ಗಜರೆಂದರೆ, ಕುಚುಪುಡಿಯ ದಂತಕಥೆ ಸುನಂದಾ ದೇವಿ, ಯಕ್ಷಗಾನದ ದಂತಕಥೆಯಾದ ಬನ್ನಂಜೆ ಸುವರ್ಣ, 88 ವರ್ಷಗಳ ಮೃದಂಗ ವಿದ್ವಾನರಾದ ವಿದ್ವಾನ್ ಎ.ವಿ.ಆನಂದ್, ವೀಣಾ ದಂತೆಕಥೆಯಾದ ಆರ್. ವಿಶ್ವೇಶ್ವರನ್, ನರ್ತನೆಯ ಖ್ಯಾತ ಕೊರಿಯೋಗ್ರಾಫರ್ ಆದ, ನಟರಾದ, ಕಥೆಗಳನ್ನು ಹೇಳುವ, ಜನಪದ ನೃತ್ಯದ ತಜ್ಞೆಯಾದ, ಸಂಶೋಧಕರಾದ ಸ್ನೇಹ ಕಪ್ಪನ. ಬೆಂಗಳೂರಿನ ನೃತ್ಯ ಕಂಪನಿಯಾದ ಆಯನ ನೃತ್ಯ ಕಂಪನಿಯು ಡಿವೈನ್ ಇಕ್ವೇಷನ್ಸ್- ಖ್ಯಾತ ಚಿತ್ರ ವೀಣ ವಿದ್ವಾನ್ ಎನ್. ರವಿಕಿರಣ್, 30 ಕಲಾವಿದರನ್ನು ಒಳಗೊಂಡ ಸಂಗೀತ ಕಚೇರಿಯನ್ನು ನಡೆಸಿಕೊಡಲಿದ್ದಾರೆ. ಎನ್ ಎಸ್ಡಿ, ಬೆಂಗಳೂರಿನ ವಿದ್ಯಾರ್ಥಿಗಳು ಬಸವಣ್ಣನವರ ಮೇಲೆ ವಿಶೇಷ ನಾಟಕವನ್ನು ನಡೆಸಿಕೊಡಲಿದ್ದಾರೆ. ಪದ್ಮವಿಭೂಷಣ ಸೋನಲ್ ಮನ್ ಸಿಂಗ್, ಪದ್ಮಶ್ರೀ ಉಮಾ ಮಹೇಶ್ವರಿ, ಪದ್ಮಶ್ರೀ ಓಂಪ್ರಕಾಶ್ ಶರ್ಮಾ, ಪದ್ಮಶ್ರೀ ವರ್ಮನ್ ಕೆಂದ್ರೆ, ಜಗತ್ತಿನ ಪ್ರಥಮ ತಬಲಾ ಮಹಿಳಾ ವಿದ್ವಾನ್ ಅನುರಾಧ ಟಲ್, ಕರ್ನಾಟಕದ ವಿದ್ವಾನ್ ಡೋಯಲ್ ರತ್ನಂ ರಾಜಂ, ಕಥಕ್ ನ ದಂತಕಥೆ ಮನೀಷ ಸಾಥೆ, ಕವಿ, ಲೇಖಕರು, ಬರಹಗಾರರು, ಪತ್ರಕರ್ತರಾದ ಅಲೋಕ್ ಶ್ರೀವಾಸ್ತವ್, ಜನಪದ ದಂತಕಥೆ ಡಾ ಗಣೇಶ್ ಚಂದನಶಿವೆ, ಮತ್ತಿನ್ನಿತರರು ಪಾಲ್ಗೊಳ್ಳಲಿದ್ದಾರೆ.
2. ಭಾರತದ ಮಹಾನ್ ಕಲಾವಿದರ, ಅರಳುತ್ತಿರುವ ಪ್ರತಿಭೆಗಳ ಸಂಗಮ
ಸಾಂಸ್ಕೃತಿಕ ಹಾಗೂ ಪಾರಂಪರಿಕ ಕಲಾ ಉತ್ಸವಗಳಲ್ಲಿ ಕಾಣಬರುವ ಪ್ರತಿಷ್ಠೆಯಿಂದ ಹೊರಬಂದು, ಭಾವ್ ಸಮಾವೇಶವು ದಂತಕಥೆಗಳನ್ನು, ಪ್ರಾಮಾಣಿಕ ಪ್ರತಿಭೆಗಳನ್ನು ಮತ್ತು ವಿದ್ಯಾರ್ಥಿಗಳನ್ನು ಒಂದೇ ವೇದಿಕೆಯ ಮೇಲೆ ಮೇಳೈಸಿ, ಅವರವರ ಕಲಾ ರೂಪಗಳ ವೈಭವವನ್ನು ಹಂಚಿಕೊಂಡು ಸಂಭ್ರಮಿಸುವ ವೇದಿಕೆಯಾಗಲಿದೆ.
3. ಆಧುನಿಕ ಕಲಾರೂಪಗಳಿಗೂ ಇಲ್ಲಿ ಸ್ಥಳಾವಕಾಶ
ಈ ಉತ್ಸವದಲ್ಲಿ ಆಧುನಿಕ ಕಲಾವಿದರೂ ಸಹ ಪ್ರದರ್ಶನ ನೀಡಿ, ಅವರ ಕಲಾರೂಪದ ಬಗ್ಗೆ ಚರ್ಚಿಸಲಿದ್ದಾರೆ. ಅದಿತಿ ಮಂಗಳ್ ದಾಸ್ ರವರು ಪಾರಂಪರಿಕ ಕಥಕ್ ನೃತ್ಯದೊಡನೆ ಕಥಕ್ ಆಧಾರಿತವಾದ ಆಧುನಿಕ ನೃತ್ಯದಲ್ಲೂ ಪ್ರಸಿದ್ಧಿಯನ್ನು ಪಡೆದಿದ್ದಾರೆ.
ಖ್ಯಾತ ಕಲಾವಿದರಾದ ಜಗನ್ನಾಥ್ ಮತ್ತು ಪ್ರಣತಿ ಪಾಂಡಾರವರು ಸೃಜನಶೀಲ ಪಯಣದ ಮೇಲೆ ಬೆಳಕನ್ನು ಚೆಲ್ಲಿದರೆ, ನಿಧಿ ಪಂಟಾರವರ ತರಗತಿಗಳು ಕಲಾ ಮಾರುಕಟ್ಟೆಗಳ ಬಗ್ಗೆ ಪ್ರಾಯೋಗಿಕವಾದ ಸೂಚಿಗಳನ್ನು ನೀಡಿ, ಶಿಬಿರಾರ್ಥಿಗಳು ಅವರ ಕೆಲಸವನ್ನು ಹೆಚ್ಚು ಪರಿಣಾಮಕಾರಕವಾಗಿ ಮತ್ತು ಅರ್ಥಪೂರ್ಣವಾಗಿ ಪ್ರದರ್ಶಿಸುವ ಸೂಚಿಗಳನ್ನು ನೀಡಲಿದ್ದಾರೆ.
4. ಭಾರತದ ಸಾಂಸ್ಕೃತಿಕ ವೈವಿಧ್ಯತೆಯ ಸಂಗಮವಾದ ಭಾವ್
ಇದರಲ್ಲಿ ಮನಮೋಹಕ ಬುಡಕಟ್ಟು ಜನಾಂಗದ ನೃತ್ಯ, ಮನತುಂಬುವ ತ್ಯಾಗರಾಜರ ಆರಾಧನೆಗಳನ್ನು, ಕೇರಳದ ಮುತ್ತಪ್ಪನ್ ತೈಯ್ಯಂ ಪ್ರದರ್ಶನದೊಡನೆ ಸಂಸ್ಕೃತದ ವಸ್ತು ಪ್ರದರ್ಶನವೂ ಇದೆ. ಇದು ಈ ಪ್ರಾಚೀನ ಜ್ಞಾನದ ಆಧುನಿಕ ಪ್ರಸ್ತುತತೆಯನ್ನು ತೋರಿಸಲಿದೆ.
5. 20 ಸಂಗೀತ ವಾದ್ಯಗಳ, ಜನಪದ ಹಾಗೂ ಪಾರಂಪರಿಕ ನೃತ್ಯ ರೂಪಗಳ ಮಿಶ್ರಿತವಾದ ಪ್ರದರ್ಶನ
20 ಸಂಗೀತ ವಾದ್ಯಗಳ ಪ್ರದರ್ಶನದಲ್ಲಿ ತಬಲ, ಪಖ್ವಾಜ್, ಮೃದಂಗಂ, ಸಿತಾರ್, ವೀಣೆ, ಕೊಳಲು, ಸಾಕ್ಸೋಫೋನ್ ಮತ್ತು ಜಿಯೋ ಶ್ರೆಡ್ ಸೇರಿದೆ. ನೃತ್ಯಗಳಲ್ಲಿ ಕಥಕ್, ಭರತನಾಟ್ಯ, ಕುಚುಪುಡಿ, ಒಡಿಸ್ಸಿ, ಮೋಹಿನಿ ಆಟ್ಟಂ, ಕಥಕಳಿ, ಸತ್ತ್ರೀಯ, ಮಣಿಪುರಿ. ಜನಪದ ನೃತ್ಯಗಳಾದ ಛೌ, ಲಾವಣಿ, ಗರ್ಭ, ಮತ್ತು ಮಹಾರಾಷ್ಟ್ರ ಹಾಗೂ ಕರ್ನಾಟಕದ ಇತರ 7-8 ನೃತ್ಯಗಳು ಇರಲಿವೆ.
6. ಕಲಾರೂಪಗಳ ಪುನರುಜ್ಜೀವನ
ಭಾವ್ ನಲ್ಲಿ ಮಾಛ್ ನ ಬಗ್ಗೆ ತಿಳಿದುಕೊಳ್ಳಬಹುದು. ಇದು ಮಧ್ರಪ್ರದೇಶದ ಜನಪದ ನೃತ್ಯರೂಪಕವಾಗಿದ್ದು, ಪಾರಂಪರಿಕವಾಗಿ ಇದನ್ನು ಪುರುಷರು ಮಾತ್ರ ಪ್ರರ್ದರ್ಶಿಸುತ್ತಾರೆ. ಆದರೆ ಇಲ್ಲಿ ಮಹಿಳೆಯರೂ ಇರಲಿದ್ದಾರೆ. ಮಾಛ್ ಒಂದು ಅನುಪಮವಾದ, ಆದರೆ ನಶಿಸಿ ಹೋಗುತ್ತಿರುವ ಜನಪದ ಪರಂಪರೆ.
7. ಭಾರತೀಯ ಸಾಂಸ್ಕೃತಿಕ ಪರಂಪರೆಗೆ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದವರ ಕಾಣಿಕೆ
ಈಗಾಗಲೇ ವಿವರಿಸಿದಂತೆ, ಜಾಗತಿಕ ಮಟ್ಟದಲ್ಲಿ ಜೋಗತಿ ನೃತ್ಯ ಸಂಪ್ರದಾಯವನ್ನು ಕೊಂಡೊಯ್ದ ಪದ್ಮಶ್ರೀ ಮಂಜಮ್ಮ ಜೋಗತಿಯವರೊಡನೆ ಮಾತುಕತೆ, ರಾಣಿ ಕೋ-ಹೇ- ನೂರ್ ಎಂದು ಕರೆಯಲ್ಪಡುವ ಸುಶಾಂತ್ ದಿವ್ಗಿಕರ್ ರವರು ಈ ಸಮುದಾಯದ ಪ್ರಬಲ ಧ್ವನಿಯಾಗಿದ್ದು, ಇವರೂ ಈ ಸಮಾವೇಶದಲ್ಲಿ ಉಪಸ್ಥಿತರಾಗಿರಲಿದ್ದಾರೆ. ಭಾವ್ ನಲ್ಲಿ “ಸಪ್ತಮಾತೃಕ”, ಭರತನಾಟ್ಯ ಪ್ರದರ್ಶನವನ್ನು ಕೊಲ್ಕೊತ್ತಾದ ರಾತ್ರಿ ದಾಸ್ ರವರ ನೇತೃತ್ವದಲ್ಲಿ10 ಲೈಂಗಿಕ ಅಲ್ಪಸಂಖ್ಯಾತರು ನೀಡಲಿದ್ದಾರೆ.
8. ವಯೋಮಿತಿ ಇಲ್ಲಿಲ್ಲ
ಕಾಲಾತೀತವಾದ ಪರಂಪರೆಯ ಉತ್ಸವವಾದ ಭಾವ್ ಸಮಾವೇಶದಲ್ಲಿ 93 ವರ್ಷಗಳ ವೀಣಾ ಕಲಾವಿದರು ಕಲಾಸಾರಥಿ ಪ್ರಶಸ್ತಿಯನ್ನು ಪಡೆಯುವರಲ್ಲದೆ, ಎಂಟರಿಂದ ಒಂಭತ್ತು ವರ್ಷಗಳ ಅರಳುತ್ತಿರುವ ಪ್ರತಿಭೆಗಳೂ ಸಹ ಅವರ ಅದ್ಭುತ ಪ್ರತಿಭೆಗಾಗಿ, ಮತ್ತು ಕಲಿಯುವ ಕುತೂಹಲಕ್ಕಾಗಿ ಪ್ರಶಸ್ತಿಯನ್ನು ಪಡೆಯಲಿದ್ದಾರೆ.
9. ರಂಗಮಂಚದ ಕಲಾರೂಪವೂ ಇಲ್ಲಿ ಪ್ರದರ್ಶಿತವಾಗಲಿದೆ
ಈ ವರ್ಷದ ರಂಗಮಂಚದ ಕಲಾವಿದರು ಮತ್ತು ನಟರು ಜನಪದ ಹಾಗೂ ಅದರ ಆಧುನಿಕ ರೂಪಗಳನ್ನು ವಿಶ್ವ ವೇದಿಕೆಗೆ ಕೊಂಡೊಯ್ದಂತಹವರು. ಮಾಛ್ ಅನ್ನು ಪ್ರದರ್ಶಿಸಲಿರುವ ಪದ್ಮಶ್ರೀ ಓಂಪ್ರಕಾಶ್ ಶರ್ಮಾ ರವರು ಈ ನೃತ್ಯ ರೂಪಕದ ಬಾಗಿಲುಗಳನ್ನು ಮಹಿಳೆಯರಿಗೂ ತೆರೆದಿದ್ದಾರೆ. ಈ ಕಲಾರೂಪವು ಮಧ್ಯ ಪ್ರದೇಶದ ದೈವೀ ಕಥಾನಕಗಳನ್ನು ಪ್ರದರ್ಶಿಸುತ್ತದೆ. ಪದ್ಮಶ್ರೀ ಬಲ್ವಂತ್ ಥಾಕೂರ್ ರವರು ಭಾರತೀಯ ರಂಗಮಂಚ ಕಲಾವಿದರು ಮತ್ತು ಪಂಡಿತರು. ಇವರು ಡೋಗ್ರಿ ಕಲಾರೂಪದ ಮೇಲೆ ಅಂತಾರಾಷ್ಟ್ರೀಯ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪದ್ಮಶ್ರೀ ವಾಮನ್ ಕೆಂದ್ರೆ, ಎನ್ ಎಸ್ಡಿಯ ಮಾಜಿ ನಿರ್ದೇಶಕರಾಗಿದ್ದಾರೆ.
10. ಭಾವ್ ವಸ್ತುಪ್ರದರ್ಶನ 2025: ಅತ್ಯುತ್ತಮ ಭಾರತೀಯ ಕೈಗಾರಿಕೆ ಮತ್ತು ಪ್ರದರ್ಶನ ಕಲೆಗಳ ಬಗ್ಗೆ ಹೆಚ್ಚು ಕಲಿಯಲು ಅವಕಾಶ
ಭಾವ್ ವಸ್ತುಪ್ರದರ್ಶನ 2025, ಭವ್ಯವಾದ ಭಾರತೀಯ ಕೈಗಾರಿಕೆಯನ್ನು ಉಳಿಸಿ, ಸಂರಕ್ಷಿಸಲು ಬದ್ಧರಾಗಿರುವ ಕಲಾಕಾರರಿಗೆ ಪ್ರಾಮುಖ್ಯತೆಯನ್ನು ನೀಡಲಿದೆ. ಈ ವಸ್ತುಪ್ರದರ್ಶನದಲ್ಲಿ ಕೊಳ್ಳಬಹುದಾದ ಅನೇಕ ವಸ್ತುಗಳು ಇರುವುದರ ಜೊತೆಗೆ, ಅನೇಕ ಕಲಾರೂಪಗಳ ಬಗ್ಗೆ ನೇರವಾಗಿ ಕಲಾಕಾರರಿಂದಲೇ ಕಲಿಯುವ ಅವಕಾಶ ಇರಲಿದೆ. ಮಧುಬನಿ ಕಲೆ, ಕಲಂಕಾರಿ, ಕೇರಳದ ಮ್ಯೂರಲ್ ಕಲೆ, ವರ್ಳಿ, ಗೊಂಡ್ ಕಲೆ, ಪಟ್ಟಚಿತ್ರ, ಮೈಸೂರು ಕಲೆಯೂ ಇರಲಿದೆ. ಆಕರ್ಷಕವಾದ ಕೈಗಾರಿಕಾ ವಸ್ತುಗಳು, ಕೈಮಗ್ಗದ ವಸ್ತ್ರಗಳು, ಮನೆಯನ್ನು ಸಿಂಗರಿಸಬಲ್ಲ ವಸ್ತುಗಳು, ಸೌಂದರ್ಯ ವರ್ಧಕಗಳು, ಪಾರಂಪಾರಿಕ ತಿನಿಸುಗಳೂ ಇರಲಿವೆ.
Published On - 7:14 pm, Thu, 23 January 25