ಬೆಂಗಳೂರು ಅಬುಧಾಬಿ ಮಧ್ಯೆ ಆಗಸ್ಟ್​ 1ರಿಂದ ಇಂಡಿಗೋ ನೇರ ವಿಮಾನ ಸಂಚಾರ

|

Updated on: Jul 01, 2024 | 7:40 AM

ಯುಎಇಗೆ ಭಾರತದಿಂದ 220 ಕ್ಕೂ ಹೆಚ್ಚು ವಿಮಾನಗಳ ಸೇವೆ ಒದಗಿಸುತ್ತಿರುವ ಇಂಡಿಗೋ ಏರ್​ಲೈನ್ಸ್ ಇದೀಗ ಬೆಂಗಳೂರಿಗರಿಗೆ ಸಿಹಿ ಸುದ್ದಿ ನೀಡಿದೆ. ಸದ್ಯ ಅಬುಧಾಬಿಗೆ ಭಾರತದ ನಗರಗಳಿಂದ ವಾರದಲ್ಲಿ 74 ಇಂಡಿಗೋ ವಿಮಾನಗಳು ಸಂಚರಿಸುತ್ತಿದ್ದು, ಆಗಸ್ಟ್​ 1ರಿಂದ ಬೆಂಗಳೂರಿನಿಂದ ನೇರ ವಿಮಾನ ಸೇವೆ ದೊರೆಯಲಿದೆ. ಬೆಂಗಳೂರು ಅಬುಧಾಬಿ ಇಂಡಿಗೋ ವಿಮಾನದ ವೇಳಾಪಟ್ಟಿ ಇಲ್ಲಿದೆ.

ಬೆಂಗಳೂರು ಅಬುಧಾಬಿ ಮಧ್ಯೆ ಆಗಸ್ಟ್​ 1ರಿಂದ ಇಂಡಿಗೋ ನೇರ ವಿಮಾನ ಸಂಚಾರ
ಬೆಂಗಳೂರು ಅಬುಧಾಬಿ ಮಧ್ಯೆ ಆಗಸ್ಟ್​ 1ರಿಂದ ಇಂಡಿಗೋ ನೇರ ವಿಮಾನ
Follow us on

ಬೆಂಗಳೂರು, ಜುಲೈ 1: ಬೆಂಗಳೂರು ಹಾಗೂ ಅಬುಧಾಬಿ ಮಧ್ಯೆ ಆಗಸ್ಟ್ 1ರಿಂದ ನೇರ ವಿಮಾನ ಸೇವೆ ಆರಂಭಿಸುವುದಾಗಿ ಇಂಡಿಗೋ ಏರ್​ಲೈನ್ಸ್ ತಿಳಿಸಿದೆ. ವಾರದಲ್ಲಿ ಆರು ಬಾರಿ ಬೆಂಗಳೂರು ಅಬುಧಾಬಿ ವಿಮಾನಗಳು ಕಾರ್ಯನಿರ್ವಹಿಸಲಿವೆ. ಇದರೊಂದಿಗೆ ಭಾರತದ ವಿವಿಧ ನಗರಗಳಿಂದ ಅಬುಧಾಬಿಗೆ ತೆರಳುವ ಇಂಡಿಗೋ ವಿಮಾನಗಳ ಸಂಖ್ಯೆ 75 ಕ್ಕೆ ತಲುಪಿದೆ. ಹೊಸ ವಿಮಾನ ಸೇವೆಯು ಯುನೈಟೆಡ್ ಅರಬ್ ಎಮಿರೇಟ್ಸ್‌ ರಾಜಧಾನಿಗೆ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಇಂಡಿಗೋ ತಿಳಿಸಿದೆ.

ಅಬುಧಾಬಿಯಿಂದ ನೇರ ವಿಮಾನ ಸೇವೆ ಒದಗಿಸಲಾಗುತ್ತಿರುವ ಭಾರತೀಯ ನಗರಗಳಲ್ಲಿ ಬೆಂಗಳೂರು 10 ನೇಯದ್ದಾಗಿದೆ ಎಂದು ಇಂಡಿಗೋದ ಜಾಗತಿಕ ಮಾರಾಟದ ಮುಖ್ಯಸ್ಥ ವಿನಯ್ ಮಲ್ಹೋತ್ರಾ ತಿಳಿಸಿದ್ದಾರೆ. ಬೆಂಗಳೂರಿನ ವಿಮಾನ ಸೇರ್ಪಡೆಯೊಂದಿಗೆ, ಅಬುಧಾಬಿಗೆ ವಾರದಲ್ಲಿ 75 ಮತ್ತು ಯುಎಇಗೆ 220 ಕ್ಕೂ ಹೆಚ್ಚು ವಿಮಾನಗಳು ಸಂಚರಿಸಲಿವೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರು ಅಬುಧಾಬಿ ಇಂಡಿಗೋ ವಿಮಾನ ವೇಳಾಪಟ್ಟಿ

ಇಂಡಿಗೋ ವಿಮಾನ ಸಂಖ್ಯೆ 6E 1438 ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಂಗಳವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ರಾತ್ರಿ 9.25 ಕ್ಕೆ ಹೊರಟು ರಾತ್ರಿ 11.30 ಕ್ಕೆ ಅಬುಧಾಬಿ ತಲುಪಲಿದೆ. ಅಬುಧಾಬಿಯಿಂದ, ವಿಮಾನ ಸಂಖ್ಯೆ 6E 1439 ಬುಧವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ (ಆಗಸ್ಟ್ 2 ರಿಂದ) 12.30 ಕ್ಕೆ ಹೊರಟು ಬೆಳಗ್ಗೆ 5.45ಕ್ಕೆ ವಿಮಾನ ಬೆಂಗಳೂರು ತಲುಪಲಿದೆ.

ಇದನ್ನೂ ಓದಿ: ಕರ್ನಾಟಕದಿಂದ ಮಾನಸ ಸರೋವರ ಯಾತ್ರೆಗೆ ಸರ್ಕಾರದಿಂದ ಹಣ, ಮಾರ್ಗಸೂಚಿ ಪ್ರಕಟ

ಇದರೊಂದಿಗೆ, ಬೆಂಗಳೂರು ಹಾಗೂ ಅಬುಧಾಬಿ ನಡುವಣ ಪ್ರಯಾಣ ಮತ್ತಷ್ಟು ಸುಗಮವಾಗಲಿದೆ. ಭಾರತೀಯ ಪ್ರಯಾಣಿಕರಿಗೆ ಸೇವೆ ಸಲ್ಲಿಸುವುದು ಮಾತ್ರ ಈ ವಿಮಾನ ಸಂಚಾರ ಆರಂಭಿಸುವ ಉದ್ದೇಶವಲ್ಲ. ಬೆಂಗಳೂರಿಗೆ ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿಗರನ್ನು ಆಕರ್ಷಿಸುವ ಗುರಿಯನ್ನೂ ಹೊಂದಿದೆ. ನಗರದ ಶ್ರೀಮಂತ ಪರಂಪರೆ ಮತ್ತು ಐತಿಹಾಸಿಕ ಹೆಗ್ಗುರುತುಗಳನ್ನು ಎತ್ತಿ ತೋರಿಸಲು ಉದ್ದೇಶಿಸಲಾಗಿದೆ ಎಂದು ಇಂಡಿಗೋ ತಿಳಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ