ಹಸುಗೂಸು ಮಾರಾಟ ದಂಧೆ; ಮಹಿಳಾ ಏಜೆಂಟ್, ನಕಲಿ ವೈದ್ಯ ಸೇರಿ ಮತ್ತಿಬ್ಬರ ಬಂಧನ

| Updated By: ಆಯೇಷಾ ಬಾನು

Updated on: Nov 29, 2023 | 10:53 AM

Infant Trafficking Racket: ಆರ್​.ಆರ್.ನಗರದಲ್ಲಿ 20 ದಿನಗಳ ನವಜಾತ ಶಿಶು ಮಾರಾಟ ಮಾಡುತ್ತಿದ್ದ ಪ್ರಕರಣ ಸಂಬಂಧ ಮತ್ತೆ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದ ಏಜೆಂಟ್ ಆಗಿದ್ದ ಮಹಿಳಾ ಆರೋಪಿ ರಮ್ಯಾ ಹಾಗೂ ಹಸುಗೂಸು ಮಾರಾಟಕ್ಕೆ ಡಾಕ್ಯುಮೆಂಟ್​ ಮಾಡಿಕೊಡ್ತಿದ್ದ ನಕಲಿ ವೈದ್ಯನನ್ನು ಅರೆಸ್ಟ್ ಮಾಡಲಾಗಿದೆ.

ಹಸುಗೂಸು ಮಾರಾಟ ದಂಧೆ; ಮಹಿಳಾ ಏಜೆಂಟ್, ನಕಲಿ ವೈದ್ಯ ಸೇರಿ ಮತ್ತಿಬ್ಬರ ಬಂಧನ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು, ನ.29: ತಮಿಳುನಾಡಿನಿಂದ ಬೆಂಗಳೂರಿಗೆ ಬಂದು ಆರ್​.ಆರ್.ನಗರದಲ್ಲಿ 20 ದಿನಗಳ ನವಜಾತ ಶಿಶು ಮಾರಾಟ ಮಾಡುತ್ತಿದ್ದ ಪ್ರಕರಣ ಸಂಬಂಧ (Infant Trafficking Racket) ಮತ್ತೆ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು (CCB Police) ಬಂಧಿಸಿದ್ದಾರೆ. ಈ ಪ್ರಕರಣದ ಏಜೆಂಟ್ ಆಗಿದ್ದ ಮಹಿಳಾ ಆರೋಪಿ ರಮ್ಯಾಳನ್ನು ಹೆಬ್ಬಾಳದಲ್ಲಿ ಬಂಧಿಸಲಾಗಿದೆ. ಹಾಗೂ ರಾಜಾಜಿನಗರದಲ್ಲಿ ನಕಲಿ ವೈದ್ಯ ಕೆವಿನ್​ನನ್ನು (Fake Doctor) ಅರೆಸ್ಟ್ ಮಾಡಲಾಗಿದೆ. ಸದ್ಯ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದ್ದು ಅನೇಕ ವಿಚಾರಗಳು ಬಯಲಾಗುತ್ತಿವೆ.

ಹಸುಗೂಸು ಮಾರಾಟ ಗ್ಯಾಂಗ್​ಗೆ ಮಗುವನ್ನು ಮಾರಿದ್ದ ರಮ್ಯಾಳನ್ನು ಹೆಬ್ಬಾಳದಲ್ಲಿ ಬಂಧಿಸಲಾಗಿದೆ. ರಮ್ಯಾಳ ಸಂಬಂಧಿ ಮದುವೆಗೂ ಮೊದಲೇ ಗರ್ಭಿಣಿಯಾಗಿದ್ದಳು. ಅಬಾರ್ಷನ್​​ಗೆ ಓಡಾಡುತ್ತಿದ್ದ ಯುವತಿಯನ್ನು ರಮ್ಯಾ ಆರೈಕೆ ಮಾಡಿದ್ದಳು. ಆಕೆಯನ್ನು 9 ತಿಂಗಳು ಜೋಪಾನ ಮಾಡಿ ಮಗುವನ್ನು ಪಡೆದುಕೊಂಡಿದ್ದಳು. ಬಳಿಕ ಇದೇ ಗ್ಯಾಂಗ್​​​ ಜೊತೆ ಸೇರಿ ಮಗುವನ್ನು ಮಾರಾಟ ಮಾಡಿದ್ದಳು. ಮಗು ಹೆತ್ತುಕೊಟ್ಟಿದ್ದಕ್ಕೆ ಸಂಬಂಧಿ ಯುವತಿಗೆ ರಮ್ಯಾ ಹಣ ನೀಡಿದ್ದಳು. ನಂತರ ಹೊಸ ವರನನ್ನು ನೋಡಿ ಯುವತಿಗೆ ಮದುವೆ ಕೂಡ ಮಾಡಿಸಿದ್ದಳು. ಸದ್ಯ ಮಗು ಮಾರಾಟ ಕೇಸ್​ನಲ್ಲಿ ಇತರೆ ಆರೋಪಿಗಳು ರಮ್ಯಾಳ ಹೆಸರು ಬಾಯ್ಬಿಟ್ಟಿದ್ದರು. ಹೆಬ್ಬಾಳದಲ್ಲಿ ರಮ್ಯಾಳನ್ನ ಅರೆಸ್ಟ್ ಮಾಡಲಾಗಿದೆ. ಇದೀಗ ಈ ಪ್ರಕರಣದಲ್ಲಿ ಒಟ್ಟಾರೆಯಾಗಿ 11 ಆರೋಪಿಗಳನ್ನು ಬಂಧಿಸಲಾಗಿದೆ. ಮೊದಲು ಅರೆಸ್ಟ್ ಆದ ನಾಲ್ವರು ಆರೋಪಿಗಳನ್ನ ಜೈಲಿಂದ ಕಸ್ಟಡಿಗೆ ಪಡೆದುಕೊಳ್ಳಲು ಸಿಸಿಬಿ ತಯಾರಿ ನಡೆಸಿದೆ.

ಇದನ್ನೂ ಓದಿ: ಹಸುಗೂಸು ಮಾರಾಟ ದಂಧೆ: ಡಾಕ್ಟರ್​ಗಳೇ ದಂಧೆಕೋರರ ಇನ್ಫಾರ್ಮರ್ಸ್​, ಈ ಗ್ಯಾಂಗ್ ಕೆಲಸ ಮಾಡ್ತಿದ್ದದ್ದು ಹೇಗೆ ಗೊತ್ತಾ?

ಎಂಬಿಬಿಎಸ್ ಉತ್ತೀರ್ಣ ಆಗದಿದ್ರೂ ಕ್ಲಿನಿಕ್ ನಡೆಸುತ್ತಿದ್ದ ಕೆವಿನ್​

ಇನ್ನು ಬೆಂಗಳೂರಿನಲ್ಲಿ ಹಸುಗೂಸುಗಳ ಮಾರಾಟ ಜಾಲ ಪತ್ತೆ ಪ್ರಕರಣ ಸಂಬಂಧ ಓರ್ವ ನಕಲಿ ವೈದ್ಯನ​ನ್ನು ಸಿಸಿಬಿ ಪೊಲೀಸರು ರಾಜಾಜಿನಗರದಲ್ಲಿ ಬಂಧಿಸಿದ್ದಾರೆ. ಎಂಬಿಬಿಎಸ್ ಉತ್ತೀರ್ಣ ಆಗದಿದ್ರೂ ನಕಲಿ ವೈದ್ಯ ಕೆವಿನ್ ಕ್ಲಿನಿಕ್ ನಡೆಸುತ್ತಿದ್ದ. ಡಾಕ್ಟರ್ ಕೆವಿನ್ ಅಂತಾ ಬೋರ್ಡ್ ಹಾಕಿಕೊಂಡಿದ್ದ. ಅಲ್ಲದೆ ರೋಗಿಗಳಿಗೆ ಟ್ರೀಟ್​ಮೆಂಟ್ ಸಹ ನೀಡುತ್ತಿದ್ದ. ಆರೋಪಿ ಕೆವಿನ್ ಹಸುಗೂಸು ಮಾರಾಟಕ್ಕೆ ಡಾಕ್ಯುಮೆಂಟ್​ ಮಾಡಿಕೊಡ್ತಿದ್ದ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಜನ್ಮದಾಖಲೆ ಸೇರಿ ಅಗತ್ಯ ದಾಖಲೆ ಸಿದ್ಧಪಡಿಸಿ ಕೊಡ್ತಿದ್ದ. ಆರೋಪಿ ಕೆವಿನ್ ಹಸುಗೂಸು ಮಾರಾಟ ಮಾಡಿದ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ನಕಲಿ ವೈದ್ಯ ಕೆವಿನ್​ನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ