
ಬೆಂಗಳೂರು, ಜುಲೈ 30: ಸಲಿಂಗ ಕಾಮದ ಪರಿಣಾಮವಾಗಿ ಬೆಂಗಳೂರಿನಲ್ಲಿ ಹೆಚ್‌ಐವಿ ಸೋಂಕಿತ ಪುರುಷರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಡೇಟಿಂಗ್ ಆ್ಯಪ್ಗಳ ಹೆಚ್ಚಳವೂ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಆತಂಕಕಾರಿ ವಿಚಾರವೆಂದರೆ ಕಾಲೇಜು ಮತ್ತು ವಿಶ್ವ ವಿದ್ಯಾಲಯಗಳ ಹಾಸ್ಟೆಲ್ ವಿದ್ಯಾರ್ಥಿಗಳು ಮತ್ತು ಪಿಜಿಗಳಲ್ಲಿ ನೆಲೆಸಿರುವವರೇ ಹೆಚ್ಚಿನ ಪೈಕಿ ಸೋಂಕಿಗೆ ತುತ್ತಾಗಿದ್ದಾರೆ. ಹೀಗಾಗಿ ಶಾಲಾ ಕಾಲೇಜುಗಳಲ್ಲಿ ಈ ಬಗ್ಗೆ ಅರಿವು ಮೂಡಿಸಲು ಆರೋಗ್ಯ ಇಲಾಖೆ ಮುಂದಾಗಿದೆ.
ಕಳೆದ 5 ತಿಂಗಳ ಅವಧಿಯಲ್ಲಿ 4,795 HIV ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಈ ಪೈಕಿ ಸೋಂಕಿಗೆ ತುತ್ತಾದವರು ಬಹುತೇಕ ಸಲಿಂಗಿಗಳು. ದೇಶದಲ್ಲಿ ಅತಿ ಹೆಚ್ಚು ಏಡ್ಸ್ ಕೇಸ್ ದಾಖಲಾಗುವ ರಾಜ್ಯವಾಗಿ ಕರ್ನಾಟಕ ಮಾರ್ಪಟ್ಟಿದ್ದು, ಅದರಲ್ಲೂ ಬೆಂಗಳೂರಿನಲ್ಲಿಯೇ ಅಧಿಕ ಪ್ರಕರಣಗಳು ದಾಖಲಾಗುತ್ತಿರೋದು ಆರೋಗ್ಯ ಇಲಾಖೆಯ ಟೆನ್ಷನ್ಗೆ ಕಾರಣವಾಗಿದೆ. ಗಮನಿಸಲೇ ಬೇಕಾದ ವಿಷಯ ಎಂದರೆ ಅವಿವಾಹಿತರಲ್ಲಿಯೇ HIV ಸೋಂಕು ಹೆಚ್ಚಿದ್ದು, ಇದರ ಪ್ರಮಾಣ ಶೇ. 20-25ರಷ್ಟಿದೆ ಎನ್ನಲಾಗಿದೆ.
ಇದನ್ನೂ ಓದಿ: ಮಕ್ಕಳನ್ನೂ ಕಾಡುತ್ತಿದೆ ಹೃದಯಾಘಾತದ ಸಮಸ್ಯೆ! ಆತಂಕ ಬೇಡ, ಜಾಗೃತಿ ಇರಲಿ ಎಂದ ಬೆಂಗಳೂರಿನ ವೈದ್ಯರು
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿಯ ಯೋಜನಾ ನಿರ್ದೇಶಕಿ ಪದ್ಮಾ ಬಸವಂತಪ್ಪ, ಸೋಂಕಿತರಿಂದ ಇತರರಿಗೂ ಅಪಾಯ ಇರುವ ಕಾರಣ ಕಾಲೇಜು, ಐಟಿ ಕಂಪನಿಗಳು, ಕಾರ್ಮಿಕರು, ಚಾಲಕರು, ಟ್ರಕ್ ಚಾಲಕರಿಗೆ ಜಾಗೃತಿ ಮೂಡಿಸಬೇಕು. ಸಲಿಂಗ ಕಾಮ, ಲೈಂಗಿಕ ಕಾರ್ಯಕರ್ತರು ಹೈ ರಿಸ್ಕ್ ಕ್ಯಾಟಗರಿಗೆ ಬರ್ತಾರೆ. ಹೀಗಾಗಿ ಇವರಿಗೆ ಅರಿವು ಮೂಡಿಸಲು ಹಲವು ಕಾರ್ಯಕ್ರಮಗಳನ್ನು ಮಾಡಲಾಗ್ತಿದೆ. ಇತ್ತೀಚಿನ ದಿನಗಳಲ್ಲಿ ಡೇಟಿಂಗ್ ಆಪ್ಗಳ ಮೂಲಕ ಲೈಂಗಿಕ ಚಟುವಟಿಕೆಗಳು ಹೆಚ್ಚಾಗ್ತಿವೆ ಎಂದು ತಿಳಿಸಿದ್ದಾರೆ. ಆರೋಗ್ಯ ಇಲಾಖೆಯ ನಿಯಮದ ಪ್ರಕಾರ ಹೆಚ್‌ಐವಿ ಪರೀಕ್ಷೆ ಕಡ್ಡಾಯ ಮಾಡಲು ಸಾಧ್ಯವಿಲ್ಲ, ಗಮನಕ್ಕೆ ತರದೇ ಟೆಸ್ಟ್ ಮಾಡಲು ಆಗಲ್ಲ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.