ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ (Karnataka Assembly Election 2023) ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳಿಗೆ ಫಂಡ್ ಒದಗಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿ ಕೇಳಿಬಂದ ದೂರುಗಳ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು (IT Raid) ಬೆಂಗಳೂರು ಹಾಗೂ ಮೈಸೂರಿನ ಹಲವೆಡೆ ದಾಳಿ ನಡೆಸಿದ್ದಾರೆ. ಉಭಯ ನಗರಗಳಲ್ಲಿ ಶುಕ್ರವಾರ ಬೆಳಗ್ಗೆ ಫೈನಾನ್ಶಿಯರ್ಗಳ ಮನೆ ಮೇಲೆ ಏಕಕಾಲದಲ್ಲಿ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಸುಮಾರು 20 ಕೋಟಿ ರೂ. ನಗದು ವಶಕ್ಕೆ ಪಡೆಯಲಾಗಿದೆ. ಸುಮಾರು 5 ಕೋಟಿ ರೂ. ಬೆಲೆಬಾಳುವ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ಶಾಂತಿನಗರ, ಕಾಕ್ಸ್ಟೌನ್, ಶಿವಾಜಿನಗರ, ಆರ್ಎಂವಿ ಬಡಾವಣೆ, ಸದಾಶಿವ ನಗರ, ಕುಮಾರಪಾರ್ಕ್ ವೆಸ್ಟ್ ಸೇರಿ ಹಲವು ಕಡೆ ದಾಳಿ ನಡೆಸಲಾಗಿತ್ತು.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳಿದ್ದು, ಅಕ್ರಮಗಳನ್ನು ತಡೆಯುವುದಕ್ಕಾಗಿ ಚುನಾವಣಾ ಆಯೋಗ ಹದ್ದಿನಕಣ್ಣಿಟ್ಟಿದೆ. ಈ ಮಧ್ಯೆ, ಆದಾಯ ತೆರಿಗೆ ಇಲಾಖೆಯೂ ಹಣಕಾಸು ವಹಿವಾಟುಗಳ ಮೇಲೆ ಸೂಕ್ಷ್ಮ ನಿಗಾ ಇರಿಸಿದೆ.
ಕೆಲವೇ ದಿನಗಳ ಹಿಂದೆ ಮೈಸೂರಿನಲ್ಲಿ ದಾಳಿ ಮಾಡಿದ್ದ ಐಟಿ ಅಧಿಕಾರಿಗಳಿಗೆ ಮನೆಯಂಗಳದಲ್ಲಿದ್ದ ಗಿಡದಲ್ಲಿ ಮಾವಿನ ಹಣ್ಣಿನ ಬಾಕ್ಸ್ ನಲ್ಲಿ ಬಚ್ಚಿಟ್ಟಿದ್ದ ಕಂತೆ ಕಂತೆ ಹಣ ಪತ್ತೆಯಾಗಿತ್ತು. ಸುಬ್ರಹ್ಮಣ್ಯ ರೈ ಎಂಬುವವರ ಮನೆ ಮೇಲೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳಿಗೆ ಈ ನಗದು ಪತ್ತೆಯಾಗಿತ್ತು. ಸುಬ್ರಹ್ಮಣ್ಯ ರೈ ಅವರು ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಸಹೋದರ ಎಂದು ತಿಳಿದುಬಂದಿತ್ತು. ಹಣವನ್ನು ಮನೆಯಲ್ಲಿಟ್ಟರೆ ಚುನಾವಣಾ ಅಧಿಕಾರಿಗಳು ದಾಳಿ ಮಾಡಿದಾಗ ಸಿಗಬಹುದೆಂದು ಮನೆಯಂಗಳದ ಗಿಡದಲ್ಲಿ ಇಡಲಾಗಿತ್ತು.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ