Bengaluru IT Raid: ಬೆಂಗಳೂರಿನ ಫ್ಲಾಟ್​ ಒಂದರ ಮೇಲೆ ಐಟಿ ದಾಳಿ, ಮಂಚದಡಿ ಕಂತೆ ಕಂತೆ ನೋಟುಗಳು ಪತ್ತೆ

| Updated By: Rakesh Nayak Manchi

Updated on: Oct 13, 2023 | 9:15 AM

ಬೆಂಗಳೂರಿನಲ್ಲಿ ಐಟಿ ಅಧಿಕಾರಿಗಳು ಸಂಜೆ ನಂತರ ಕಾರ್ಯಾಚರಣೆ ನಡೆಸಿ ಕಂತೆ ಕಂತೆ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ. ಏಕಕಾಲದಲ್ಲಿ ಆರ್​ಟಿ ನಗರದ ಎರಡು ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ಈ ಪೈಕಿ ಆತ್ಮಾನಂದ ಕಾಲೋನಿಯ ಒಂದು ಫ್ಲ್ಯಾಟ್ ಕೂಡ ಸೇರಿದೆ. ಇಲ್ಲಿ ಪರಿಶೀಲನೆ ವೇಳೆ ಮಂಚದ ಅಡಿಯಲ್ಲಿ ಬಚ್ಚಿಟ್ಟಿದ್ದ ಕೋಟ್ಯಂತರ ರೂಪಾಯಿ ನಗದು ಪತ್ತೆಯಾಗಿದೆ.

Bengaluru IT Raid: ಬೆಂಗಳೂರಿನ ಫ್ಲಾಟ್​ ಒಂದರ ಮೇಲೆ ಐಟಿ ದಾಳಿ, ಮಂಚದಡಿ ಕಂತೆ ಕಂತೆ ನೋಟುಗಳು ಪತ್ತೆ
ಬೆಂಗಳೂರಿನಲ್ಲಿ ಐಟಿ ದಾಳಿ ವೇಳೆ ಫ್ಲಾಟ್​ವೊಂದರ ಕೊಠಡಿಯ ಮಂಚದಡಿ ಪತ್ತೆಯಾದ ಕಂತೆ ಕಂತೆ ನೋಟುಗಳು
Follow us on

ಬೆಂಗಳೂರು, ಅ.13: ನಗರದಲ್ಲಿ ಆದಾಯ ತೆರಿಗೆ (Income Tax) ಇಲಾಖೆ ಅಧಿಕಾರಿಗಳು ಸಂಜೆ ನಂತರ ಕಾರ್ಯಾಚರಣೆ ನಡೆಸಿ ಕೋಟ್ಯಂತರ ರೂಪಾಯಿ ನಗದು ಜಪ್ತಿ ಮಾಡಿದ್ದಾರೆ. ಏಕಕಾಲದಲ್ಲಿ ಆರ್​ಟಿ ನಗರದ ಎರಡು ಸ್ಥಳಗಳ ಮೇಲೆ ಐಟಿ ದಾಳಿ (IT Raid) ನಡೆದಿದ್ದು, ಆತ್ಮಾನಂದ ಕಾಲೋನಿಯ ಫ್ಲಾಟ್ ಒಂದರ ಕೊಠಡಿಯಲ್ಲಿದ್ದ ಮಂಚದಡಿ ಬಚ್ಚಿಟ್ಟಿದ್ದ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ.

ಫ್ಲಾಟ್​ನಲ್ಲಿ ಬರೊಬ್ಬರಿ 23 ಬಾಕ್ಸ್​ಗಳಲ್ಲಿ 500 ಮುಖಬೆಲೆಯ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ. ಕಾರಿನಲ್ಲಿ ಹಣ ಸಾಗಾಟ ಮಾಡಲು ತಯಾರಾಗಿತ್ತು ಎಂದು ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಪೊಲೀಸ್ ಸಿಬ್ಬಂದಿಗಳ ಭದ್ರತೆಯಲ್ಲಿ ಐಟಿ ಅಧಿಕಾರಿಗಳು ಏಕಕಾಲದಲ್ಲಿ ಆರ್​ಟಿ ನಗರದ ಎರಡು ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ.

ಆತ್ಮಾನಂದ ಕಾಲೋನಿಯ ಒಂದು ಫ್ಲಾಟ್​ನ ಕೊಠಡಿಯೊಂದರ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಮಂಚದಡಿ ಪರಿಶೀಲನೆ ನಡೆಸಿದಾಗ ಕೋಟ್ಯಂತರ ರೂಪಾಯಿ ಪತ್ತೆಯಾಗಿದೆ. ಪತ್ತೆಯಾದ ಹಣದ ಒಟ್ಟಾರೆ ಮೊತ್ತ ಎಣಿಕೆ ಮಾಡಿದ ಐಟಿ ಅಧಿಕಾರಿಗಳು, ಬಳಿಕ ಮಾಜಿ ಕಾರ್ಪೋರೇಟರ್​ ಮನೆ ಬಾಗಿಲು ತಟ್ಟಿದ್ದಾರೆ.

ಇದನ್ನೂ ಓದಿ: IT Raids: ಬೆಂಗಳೂರಿನಲ್ಲಿ ಮತ್ತೆ 10ಕ್ಕೂ ಹೆಚ್ಚು ಕಡೆ ಐಟಿ ದಾಳಿ, ಚಿನ್ನದ ವ್ಯಾಪಾರಿಗಳಿಗೆ ಶಾಕ್

ಗಣೇಶ ಬ್ಲಾಕ್​ನಲ್ಲಿರುವ ವಾರ್ಡ್ ನಂ 95ರ ಮಾಜಿ ಕಾರ್ಪೊರೇಟರ್ ಅಶ್ವತಮ್ಮ ಹಾಗೂ ಆರ್.ಅಂಬಿಕಾಪತಿ ದಂಪತಿಗಳ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿ ವಿಚಾರಣೆ ನಡೆಸುತ್ತಿದ್ದಾರೆ.

ಸದ್ಯ, ಫ್ಲಾಟ್​ನಲ್ಲಿ ಪತ್ತೆಯಾದ ಕೋಟ್ಯಂತರ ರೂಪಾಯಿ ಯಾರಿಗೆ ಸೇರಿದ್ದು ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಅಸಲಿಗೆ ಹಣ ಪತ್ತೆಯಾದ ಫ್ಲ್ಯಾಟ್ ಯಾರದ್ದು? ಗುಟ್ಟು ಬಿಟ್ಟು ಕೊಡದ ಐಟಿ ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದಾರೆ.

ಬಳಕೆ ಮಾಡದ ರೂಮ್​ನಲ್ಲಿ ಕಂತೆ ಕಂತೆ ನೋಟುಗಳು

ಫ್ಲಾಟ್​ನ ಬೆಡ್ ರೂಮ್​ನ ರೂಮ್​ವೊಂದರ ಮಂಚದ ಅಡಿಯಲ್ಲಿ ಹಣ ಬಚ್ಚಿಟ್ಟ ಬಗ್ಗೆ ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಈ ರೂಮ್​ ಅನ್ನು ಬಳಸುತ್ತಾ ಇರಲಿಲ್ಲ, ಬೀಗ ಹಾಕಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

ಕಾಂಟ್ರಾಕ್ಟರ್ ಆಗಿರುವ ಆರ್.ಅಂಬಿಕಾಪತಿ ಕೆಂಪಣ್ಣ ಅವರ ಕಾಂಟ್ರಾಕ್ಟರ್ ಸಂಘದಲ್ಲಿ ಗುರುತಿಸಿಕೊಂಡಿದ್ದರು. ಫ್ಲಾಟ್​ನಲ್ಲಿ ಸಿಕ್ಕ ಹಣದ ಹಿಂದೆ ಐಟಿಗೆ ದೊಡ್ಡ ಅನುಮಾನ ವ್ಯಕ್ತವಾಗಿದೆ. ಹಣ ಒಂದೇ ಕಡೆ ಸಂಗ್ರಹಣೆ ಹಿಂದಿದೆಯಾ ಚುನಾವಣೆ ತಯಾರಿ? ಪಂಚರಾಜ್ಯಗಳ ಚುನಾವಣೆಗಾಗಿ ಸಂಗ್ರಹಿಸಲಾಗಿತ್ತೇ ಈ ಹಣ ಎಂಬ ಅನುಮಾನ ಕಾಡಿದೆ.

40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದ ಅಂಬಿಕಾಪತಿ

ಬಿಜೆಪಿ ಸರ್ಕಾರದ ವಿರುದ್ಧ ಆರ್​ ಅಂಬಿಕಾಪತಿ ಅವರು 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದರು. ರಾಜ್ಯದಲ್ಲಿ ನಡೆಯುವ ಕಾಮಗಾರಿಗೆ ಶೇ.40, ಬಿಬಿಎಂಪಿಯಲ್ಲಿ 50 ಪರ್ಸೆಂಟ್ ನೀಡಬೇಕು ಎಂದು ಹೇಳಿ ಕೆಲವು ರಾಜಕೀಯ ನಾಯಕರ ಮೇಲೆ ಗಂಭೀರ ಆರೋಪ ಮಾಡಿದ್ದರು. ಕೆಲವು ರಾಜಕೀಯ ವ್ಯಕ್ತಿಗಳ ವಿರುದ್ಧ ಆರೋಪ ಮಾಡಿದ್ದರು.

ತನ್ನ ವಿರುದ್ಧ ಕಮಿಷನ್ ಆರೋಪ ಮಾಡಿದ ಬಿಜೆಪಿ ಶಾಸಕ ಮುನಿರತ್ನ ಅವರು ಅಂಬಿಕಾಪತಿ ವಿರುದ್ಧ ಮಾನನಷ್ಟ ಮೊಕದ್ದಮ್ಮೆ ಹೂಡಿದ್ದರು. ಈ ಪ್ರಕರಣದಲ್ಲಿ ಅಂಬಿಕಾಪತಿ ವೈಯ್ಯಾಲಿಕಾವಲ್ ಠಾಣೆ ಪೊಲೀಸರಿಂದ ಬಂಧನಕ್ಕೊಳಗಾಗಿ ಬಳಿಕ ಜಾಮೀನು ಮೇಲೆ ಬಿಡುಗಡೆಯಾಗಿದ್ದರು.

ಅಂಬಿಕಾಪತಿಯ ಪತ್ನಿ ಅಶ್ವತಮ್ಮ ಅವರು ಕಾಂಗ್ರೆಸ್​ನ ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಅಕ್ಕ. ಇವರು 2001ರ ಕಾವಲ್ ಬೈರಸಂದ್ರ ವಾರ್ಡ್​ನ ಕಾರ್ಪೊರೇಟರ್ ಆಗಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:08 am, Fri, 13 October 23