ನೆಲಮಂಗಲ: ಪ್ರತಿಯೊಬ್ಬರ ಜೀವವೂ ಅಮೂಲ್ಯವಾಗಿರುವುದರಿಂದ, ಕ್ಷೇತ್ರದ ಜನತೆ ಕೊವಿಡ್19 ಲಸಿಕೆಯನ್ನು ಪಡೆದು, ಅಗತ್ಯ ಮುನ್ನೆಚ್ಚರಿಕಾ ನಿಯಮಗಳನ್ನು ಅನುಸರಿಸುವ ಮೂಲಕ ಸುರಕ್ಷಿತವಾಗಿ ಇರಬೇಕು ಎಂದು ಬೆಂಗಳೂರಿನ ಏಕೈಕ ಜೆಡಿಎಸ್ ಶಾಸಕ ಆಗಿರುವ ಆರ್. ಮಂಜುನಾಥ್ ತಿಳಿಸಿದರು. ದಾಸರಹಳ್ಳಿ ಕ್ಷೇತ್ರದಲ್ಲಿ ನಡೆದ ಕೊವಿಡ್19 ಸೋಂಕಿನಿಂದ ಮೃತಪಟ್ಟವರ ಕುಟುಂಬದ ಸದಸ್ಯರಿಗೆ ಪರಿಹಾರ ಧನದ ಚೆಕ್ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಆರ್.ಮಂಜುನಾಥ್ ಮಾತನಾಡಿದರು.
ಕೊವಿಡ್19 ಸೋಂಕು ಅತಿ ಕಡಿಮೆ ಅವಧಿಯಲ್ಲಿ ವೇಗವಾಗಿ ಹರಡುವ ಮೂಲಕ, ಜನತೆಗೆ ಆತಂಕ ಸೃಷ್ಟಿಸಿದ್ದು, ಕ್ಷೇತ್ರದ ಜನತೆ ಅಗತ್ಯ ಮುನ್ನೆಚ್ಚರಿಕೆಗಳನ್ನು ವಹಿಸುವ ಮೂಲಕ ಧೈರ್ಯದಿಂದ ಇರಬೇಕು ಎಂದು ಹೇಳಿದರು. ಕೊವಿಡ್ ಸೋಂಕಿನಿಂದ ಮೃತಪಟ್ಟ ಬಿಪಿಎಲ್ ಕುಟುಂಬಕ್ಕೆ ರಾಜ್ಯ ಸರ್ಕಾರವು ನೀಡುತ್ತಿರುವ 1 ಲಕ್ಷ ರೂಪಾಯಿಗಳ ಪರಿಹಾರವನ್ನು, ಎಪಿಎಲ್ ಕುಟುಂಬದವರಿಗೂ ನೀಡಲು ಸರ್ಕಾರಕ್ಕೆ ಮನವಿ ಮಾಡಿ, ಪೂರಕವಾಗಿ ಸ್ಪಂದಿಸುವುದಾಗಿ ತಿಳಿಸಿದರಲ್ಲದೆ, ಆಧಾರ್ ಸಂಖ್ಯೆ, ವಿಳಾಸ, ಮೊಬೈಲ್ ಸಂಖ್ಯೆ ತಪ್ಪಾಗಿ ನೀಡಿರುವ ಮೃತ ಕುಟುಂಬದ ವಾರಸುದಾರರು ಸರಿಯಾದ ಮಾಹಿತಿ ನೀಡಿ, ಪರಿಹಾರ ಪಡೆಯುವಂತೆ ತಿಳಿಸಿದರು.
ದೇಶದಲ್ಲಿ 120 ಕೋಟಿ ಜನತೆಗೆ ಈಗಾಗಲೇ ಲಸಿಕಾಕರಣವಾಗಿದ್ದು, ಕರ್ನಾಟಕ ರಾಜ್ಯದಲ್ಲಿ 5 ಕೋಟಿ ಜನರಿಗೆ ಲಸಿಕೆ ನೀಡುವ ಮೂಲಕ ಶೇ.94ರಷ್ಟು ಲಸಿಕಾಕರಣ ಯಶಸ್ವಿಗೊಳಿಸಲಾಗಿದೆ ಎಂದು ತಿಳಿಸಿದರು. ಕೊವಿಡ್19 ಎರಡನೇ ಅಲೆಯ ಸಂದರ್ಭದಲ್ಲಿ ಸೋಂಕಿತರಿಗೆ ಆಸ್ಪತ್ರೆ, ಐಸಿಯು, ವೆಂಟಿಲೇಟರ್, ಆಕ್ಸಿಜನ್, ರೆಮ್ಡಿಸಿವಿರ್ ಇಂಜೆಕ್ಷನ್‌ಗಳ ಕೊರತೆಯ ಸಂದರ್ಭದಲ್ಲೂ, ಪೂರೈಕೆಗಾಗಿ ಸರ್ಕಾರಕ್ಕೆ ಒತ್ತಡ ಹಾಕಿದ್ದೆ, ಅದರಂತೆ ಸರ್ಕಾರ ಕೂಡ ಮನವಿಗೆ ಸ್ಪಂದಿಸಿತ್ತು ಎಂದು ಹೇಳಿದ್ದಾರೆ.
ಕೊವಿಡ್19 ಸೋಂಕಿನಿಂದ ಮೃತರಾದ ಕುಟುಂಬದ ವಾರಸುದಾರರಿಗೆ ಮಾನವೀಯ ದೃಷ್ಟಿಯಿಂದ ಈ ಪರಿಹಾರ ನೀಡಲಾಗುತ್ತಿದೆ ಎಂದರಲ್ಲದೆ, ಕೇಂದ್ರ ಸರ್ಕಾರದ ಮಾದರಿಯಲ್ಲಿಯೇ ರಾಜ್ಯ ಸರ್ಕಾರವು ಬಿಪಿಎಲ್ ಕುಟುಂಬದವರಿಗೆ ನೀಡುತ್ತಿರುವ ಪರಿಹಾರದಂತೆಯೇ, ಮೃತ ವ್ಯಕ್ತಿಯ ಎಪಿಎಲ್ ಕುಟುಂಬದ ವಾರಸುದಾರರಿಗೂ ಪರಿಹಾರ ನೀಡಲು ಸರ್ಕಾರಕ್ಕೆ ಮನವಿ ಮಾಡಿದರು.
ದಾಸರಹಳ್ಳಿ ವಲಯ ಜಂಟಿ ಅಯುಕ್ತರು ನರಸಿಂಹಮೂರ್ತಿ ಮಾತನಾಡಿ ಯಾವುದೇ ಮುನ್ಸೂಚನೆ ಇಲ್ಲದೆ, ದಿಢೀರ್ ಎಂದು ದೇಹವನ್ನು ಪ್ರವೇಶಿಸುವ ಕೊವಿಡ್ ಸೋಂಕಿನಿಂದ ಸಾವನ್ನಪ್ಪಿದವರ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದ್ದು, ಮೃತ ವ್ಯಕ್ತಿಯ ಕುಟುಂಬದವರಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದರಲ್ಲದೆ, ಕೋವಿಡ್‌ನ ರೂಪಾಂತರಿ ತಳಿ ಒಮಿಕ್ರಾನ್ ಕುರಿತು ಮುನ್ನೆಚ್ಚರಿಕೆ ವಹಿಸಿ ಎಂದು ತಿಳಿಸಿದರು. ಕೊರೊನಾ ವಾರಿಯರ್ಸ್‌ಗಳ ಸೇವೆಯನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಕೊವಿಡ್19ರ ಸೋಂಕಿನಿಂದ ಮೃತರಾದ ದಾಸರಹಳ್ಳಿ ಕ್ಷೇತ್ರದ284ಜನ ಮೃತಪಟ್ಟವರ ಕುಟುಂಬದ ಸದಸ್ಯರಿಗೆ ಪ್ರಾಥಮಿಕವಾಗಿ ಪರಿಹಾರಧನದ ಚೆಕ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಸಕ ಆರ್. ಮಂಜುನಾಥ್, ಬಿಬಿಎಂಪಿ ಜಂಟಿ ಅಯುಕ್ತರು ನರಸಿಂಹಮೂರ್ತಿ,ಬಿಬಿಎಂಪಿ ಕೆಲ ಅಧೀಕಾರಿಗಳು, ಸೇರಿದಂತೆ ಕೋವಿಡ್-19ನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬದ ವಾರಸುದಾರರು ಉಪಸ್ಥಿತರಿದ್ದರು.
ಇದನ್ನೂ ಓದಿ: Bengaluru: ಸಮಗ್ರ ಅಭಿವೃದ್ಧಿಗೆ ರೋಡ್ ಮ್ಯಾಪ್ ಮಾಡಿ ಹಣ ಬಿಡುಗಡೆ ಮಾಡಲಾಗುವುದು: ಬಸವರಾಜ ಬೊಮ್ಮಾಯಿ
ಇದನ್ನೂ ಓದಿ: ಕೊವಿಡ್ನಿಂದ ಮೃತರಾದವರ ಕುಟುಂಬಗಳಿಗೆ ಒಂದೂವರೆ ಲಕ್ಷ ಪರಿಹಾರ: ಕಂದಾಯ ಸಚಿವ ಆರ್ ಅಶೋಕ್
Published On - 8:31 pm, Mon, 27 December 21