
ಬೆಂಗಳೂರು, ಅಕ್ಟೋಬರ್ 04: ಡಿಸೆಂಬರ್ 4ರಿಂದ 13ರ ವರೆಗೆ `ಬೆಂಗಳೂರು ಜಾತ್ರೆ’ ನಡೆಯಲಿರುವ ಬಗ್ಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಘೋಷಣೆ ಬೆನ್ನಲ್ಲೇ ರಾಜ್ಯ ಸರ್ಕಾರದ ವಿರುದ್ಧ ಎಕ್ಸ್ ಖಾತೆ ಮೂಲಕ ಜೆಡಿಎಸ್ ತೀವ್ರ ವಾಗ್ದಾಳಿ ನಡೆಸಿದೆ. ಕರ್ನಾಟಕ ಕಾಂಗ್ರೆಸ್ ಸರ್ಕಾರದ ಬರಗೆಟ್ಟ ಆಡಳಿತ, ಇಟಲಿ ದೇಶದ ರೋಮ್ ನಗರವು ಹೊತ್ತಿ ಉರಿಯುವಾಗ ದೊರೆ ನೀರೋ ಅರಮನೆಯಲ್ಲಿ ಕೂತು ಪಿಟೀಲು ಬಾರಿಸಿದಂತಿದೆ. ಟೇಕಾಫ್ ಆಗದ ಸರ್ಕಾರ, ನೂರು ದಿನದ ಕಾರ್ಯಕ್ರಮಕ್ಕೆ ಈಗಾಗಲೇ ನೂರಾರು ಕೋಟಿ ರೂ. ಖರ್ಚು ಮಾಡಿದ್ದಾಯಿತು. ಈಗ ಬೆಂಗಳೂರು ಜಾತ್ರೆ ಹೆಸರಲ್ಲಿ ಲೂಟಿ ಹೊಡೆಯಲು ಹೊರಟಿದ್ದೀರಿ ಎಂದು ಆರೋಪಿಸಿದೆ.
ಬೆಂಗಳೂರಿನ ರಸ್ತೆ ಗುಂಡಿಗಳಲ್ಲಿ ನಿತ್ಯವೂ ರೋಲರ್ ಕೋಸ್ಟರ್ ಅನುಭವವಾಗುತ್ತಿದ್ದು, ಟ್ರಾಫಿಕ್ಜಾಮ್ನಲ್ಲಿ ವಾಹನಗಳ ಹಾರ್ನ್ಗಳೇ ಸಂಗೀತದ ರಸದೌತಣ ನೀಡುತ್ತಿವೆ. ಇಷ್ಟೆಲ್ಲಾ ‘ಉಚಿತ’ವಾಗಿ ಸಿಗುತ್ತಿರುವಾಗ ಮತ್ತೆ 200 ಕೋಟಿ ಸುರಿದು ‘ಬೆಂಗಳೂರು ಜಾತ್ರೆ’ ಮಾಡಲು ಯಾರು ಕೇಳಿದ್ರು? ರಸ್ತೆ, ನೀರು, ವಿದ್ಯುತ್ ಸೇರಿ ಅಗತ್ಯ ಮೂಲಸೌಕರ್ಯ ಒದಗಿಸುವಲ್ಲಿ ವಿಫಲವಾಗಿರುವ ಡಿ.ಕೆ.ಶಿವಕುಮಾರ್ ಸರ್ಕಾರ ಈಗ ಬಿಡಿಎ, ಬೆಸ್ಕಾಂ, ಜಲಮಂಡಳಿ ಮತ್ತು ಮೆಟ್ರೋದಂತಹ ಸಂಸ್ಥೆಗಳ ಹಣ ಕಿತ್ತುಕೊಂಡು ಜಾತ್ರೆಗೆ ಸುರಿದು ಮೋಜು-ಮಸ್ತಿಗೆ ಹೊರಟಿರುವುದು ವಿಪರ್ಯಾಸ ಎಂದು ಜೆಡಿಎಸ್ ಕುಟುಕಿದೆ.
ಇದನ್ನೂ ಓದಿ: ಡಿ.4ರಿಂದ 13ರವರೆಗೆ ‘ಬೆಂಗಳೂರು ಜಾತ್ರೆ’: 10 ದಿನ ನಡೆಯುವ ಈ ಹಬ್ಬದಲ್ಲಿ ಏನೆಲ್ಲ ಇರಲಿವೆ?
ಮಳೆ, ಬೆಳೆ ಇಲ್ಲದೆ ರೈತ ಸಾಲದ ಸುಳಿಯಲ್ಲಿ ಸಿಲುಕಿ ಕಣ್ಣೀರು ಹಾಕುತ್ತಿದ್ದಾನೆ. ರೈತರ ಹೊಟ್ಟೆ ತಣ್ಣಗಿದ್ದರೆ ತಾನೇ ನಾಡಿಗೆ ಕಲೆ, ಸಾಹಿತ್ಯ, ಹಬ್ಬ, ಜಾತ್ರೆ ಎಲ್ಲವೂ? ಎಂದು ಪ್ರಶ್ನಿಸಿರುವ ಜೆಡಿಎಸ್, ಈ ಸರ್ಕಾರಕ್ಕೆ ಜನರ ಮೇಲೆ ಕಾಳಜಿ ಇದ್ದರೆ ಆಡಂಬರದ ಜಾತ್ರೆಗಳನ್ನು ಬಿಟ್ಟು, ಇದರ ಸಂಪೂರ್ಣ ಮೊತ್ತವನ್ನು ತಕ್ಷಣವೇ ಸಂಕಷ್ಟದಲ್ಲಿರುವ ರೈತರಿಗೆ ಕೊಡಬೇಕು ಎಂದು ಆಗ್ರಹಿಸಿದೆ. ರೈತರು ಬದುಕಿದರೆ ಮಾತ್ರ ರಾಜ್ಯಕ್ಕೆ ಉಳಿವು. ಹೀಗಾಗಿ ರೋಮ್ ಹೊತ್ತಿ ಉರಿಯುವಾಗ ಪಿಟೀಲು ಬಾರಿಸಿದ ಕಥೆ ನಮಗೆ ಬೇಡ ಎಂದು ತಿಳಿಸಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.