ಬೆಂಗಳೂರು, ಅ.01: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ರಾಜ್ಯದೆಲ್ಲೆಡೆ ಕಾವೇರಿ ಕಿಚ್ಚು ಭುಗಿಲೆದ್ದಿದೆ (Cauvery Water Dispute). ಮಂಡ್ಯ, ರಾಮನಗರದಲ್ಲಿ ಉಗ್ರ ಪ್ರತಿಭಟನೆಗಳು ಮುಂದುವರೆದಿವೆ. ಇದರ ನಡುವೆ ಕಾವೇರಿ ನದಿ ನೀರಿನ ವಿಚಾರವಾಗಿ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ ಎಂದು ರಕ್ತದ ಮೂಲಕ ಪತ್ರ ಬರೆದು ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ (Karave State President Narayana Gowda) ಅವರು ಅಭಿಯಾನ ಆರಂಭಿಸಿದ್ದಾರೆ. ಕಾವೇರಿ ನಮ್ಮದು. ಕಾವೇರಿ ವಿಚಾರವಾಗಿ ರಾಜ್ಯಕ್ಕೆ ನ್ಯಾಯ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ಅವರು ರಕ್ತದಲ್ಲಿ ಪತ್ರ ಬರೆದು ಮನವಿ ಮಾಡಿದ್ದಾರೆ.
ಕರವೇ ನಾರಾಯಣ ಗೌಡ ಅವರು ರಕ್ತದ ಮೂಲಕ ಸುಮಾರು 75 ಪದ ಬರೆದು ಮೋದಿ ಅವರಿಗೆ ಕಾವೇರಿ ನೀರಿಗಾಗಿ ಮನವಿ ಮಾಡಿದ್ದಾರೆ. ಕರವೇ ಕಾರ್ಯಕರ್ತರಿಂದಲೂ ರಕ್ತದ ಮೂಲಕ 5 ಪದ ಬರೆದು ಪತ್ರ ಫೋಸ್ಟ್ ಮಾಡಲಾಗಿದೆ. ಪ್ರಧಾನಿಗಳೇ ಕಾವೇರಿ ವಿಚಾರದಲ್ಲಿ ಮಧ್ಯ ಪ್ರವೇಶಿಸಿ ಅಂತ ಗಾಂಧೀನಗರದ ಕರವೇ ಕೇಂದ್ರ ಕಚೇರಿಯಲ್ಲಿ ರಕ್ತದಲ್ಲಿ ಪತ್ರ ಬರೆದು ಚಳುವಳಿ ಆರಂಭಿಸಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ರಕ್ತದಲ್ಲಿ ಪತ್ರ ಬರೆದು ಅಭಿಯಾನ ಮಾಡಲಾಗುತ್ತದೆ. ಒಂದು ಲಕ್ಷಕ್ಕೂ ಅಧಿಕ ರಕ್ತದ ಪತ್ರವನ್ನು ಬರೆದು ಕೂಡಲೇ ಪ್ರಧಾನಿ ಕಚೇರಿ ವಿಳಾಸಕ್ಕೆ ಪೋಸ್ಟ್ ಮಾಡಲು ಕರವೇ ಮುಂದಾಗಿದೆ.
ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು: ವಿವಿಧ ಕನ್ನಡಪರ ಸಂಘಟನೆ ಕಾರ್ಯಕರ್ತರಿಂದ ಮಳವಳ್ಳಿಯಲ್ಲಿ ರಕ್ತ ಚಳುವಳಿ
ಇನ್ನು ಮತ್ತೊಂದೆಡೆ ಸರ್ವ ಸಂಘಟನೆಗಳ ಒಕ್ಕೂಟದ ಹೋರಾಟಗಾರರು ರಕ್ತದಲ್ಲಿ ರಾಷ್ಟ್ರಪತಿ, ಪ್ರಧಾನ ಮಂತ್ರಿಗಳಿಗೆ ಪತ್ರ ಬರೆಯಲು ಮುಂದಾಗಿದ್ದಾರೆ. ಕಾವೇರಿಗಾಗಿ ರಕ್ತ ಕೊಡಲು ಸಿದ್ಧ ಅನ್ನೋದು ಘೋಷಣೆಗೆ ಸೀಮಿತವಾಗಿಲ್ಲ. ಈ ಘೋಷಣೆಯನ್ನು ಕಾರ್ಯಗತ ಮಾಡಲು ಕನ್ನಡ ಪರ ಸಂಘಟನೆಗಳು ಮುಂದಾಗಿವೆ. ಕನ್ನಡಿಗರ ಸ್ವಾಭಿಮಾನದ ಸಂಕೇತ ಆಗಿರುವ ಕಾವೇರಿಯನ್ನು ತಮಿಳುನಾಡಿಗೆ ಬಿಡಲ್ಲ ಎಂದು ಕಾವೇರಿ ನೀರಿಗಾಗಿ ಈಗ ಸಿಲಿಕಾನ್ ಸಿಟಿಯಲ್ಲಿ ರಕ್ತ ಕೊಡಲು ಕನ್ನಡ ಪರ ಒಕ್ಕೂಟಗಳು ಸಿದ್ಧವಾಗಿವೆ. ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಯುತ್ತಿದ್ದು ರಾಷ್ಟ್ರಪತಿ, ಪ್ರಧಾನಿ, ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ, ರಾಜ್ಯಪಾಲರಿಗೆ, ಮುಖ್ಯಮಂತ್ರಿಗಳಿಗೆ, ಡಿಸಿಎಂಗೆ ರಕ್ತರ ಮೂಲಕ ಪತ್ರ ಬರೆಯಲು ಸರ್ವ ಸಂಘಟನೆಗಳ ಒಕ್ಕೂಟ ಮುಂದಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ