Karnataka Assembly Elections 2023 Live News Updates: ಚುನಾವಣೆ ಹತ್ತಿರವಾಗ್ತಿದ್ದಂತೆಯೇ ಮೈ ಕೊಡವಿ ನಿಂತಿರೋ ರಾಜ್ಯ ರಾಜಕೀಯ ಪಕ್ಷಗಳು ಭಾರೀ ಕಸರತ್ತು ಮಾಡುತ್ತಿವೆ. ಪ್ರಜಾರಾಜ್ಯ ಬಸ್ ಯಾತ್ರೆ ಮೂಲಕ ಆಡಳಿತಾರೂಢ ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಗುಡುಗುತ್ತಲೇ ಇದ್ದಾರೆ. ಸಿದ್ದರಾಮಯ್ಯ ಸಚಿವ ಆರ್ ಸುಧಾಕರ್ರನ್ನ ಟಾರ್ಗೆಟ್ ಮಾಡಿದ್ರೆ, ಕನಕಪುರದ ಬಂಡೆ ಗೋಕಾಕ್ ಸಾಹುಕಾರ ರಮೇಶ್ ಜಾರಕಿಹೊಳಿಯನ್ನೇ ಟಾರ್ಗೆಟ್ ಮಾಡಿಕೊಂಡು ವಾಗ್ದಾಳಿ ನಡೆಸ್ತಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಕೇಂದ್ರ ಸಚಿವ ಅಮಿತ್ ಶಾ ಪ್ರವಾಸ ಕೈಗೊಳ್ಳುತ್ತಿದ್ದು ಇಂದು ರಾತ್ರಿ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. ಅಲ್ಲದೆ ಜನವರಿ 28 ರಂದು ಬೆಳಗಾವಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸರಣಿ ಸಭೆಗಳನ್ನು ನಡೆಸಲಿದ್ದಾರೆ. ಚುನಾವಣೆ ಸಿದ್ಧತೆಗಳ ಬಗ್ಗೆ ಚರ್ಚಿಸಲಿದ್ದಾರೆ. ಇನ್ನು ಮತ್ತೊಂದೆಡೆ ಇಂದು ತವರು ಜಿಲ್ಲೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಎರಡನೇ ದಿನದ ಪ್ರವಾಸ ಮುಂದುವರೆಸಿದ್ದಾರೆ. ಮೈಸೂರು ಮತ್ತು ವರುಣಾ ಕ್ಷೇತ್ರದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಇನ್ನು ಜೆಡಿಎಸ್ ಭದ್ರಕೋಟೆ ಮಂಡ್ಯದಲ್ಲಿಂದು ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ನಡೆಯುತ್ತಿದ್ದು ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ಕಾಂಗ್ರೆಸ್ ಸಮಾವೇಶ ನಡೆಯಲಿದೆ. ಬನ್ನಿ ರಾಜಕೀಯದ ಕ್ಷಣ ಕ್ಷಣದ ಮಾಹಿತಿ ಅಪ್ಡೇಟ್ಸ್ ಇಲ್ಲಿ ತಿಳಿಯಿರಿ.
ರಾಯಚೂರು: ನನ್ನ ಬೈಯುವುದರಿಂದ ಕಾಂಗ್ರೆಸ್ಗೆ ಸೀಟ್ ಕಡಿಮೆಯಾಗುತ್ತವೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದರು. ನನ್ನ ಬಗ್ಗೆ ಮಾತನಾಡುವುದನ್ನ ಸಿದ್ದರಾಮಯ್ಯ ಬಿಡಬೇಕು. ನಿಮ್ಮ ಅಧಿಕಾರ ಬಂದಾಗ ಲಾಟರಿ, ಮಟಕಾ ದಂಧೆ ಫ್ರೀಯಾಗಿ ನಡೆಸಲು ಬಿಟ್ಟಿಲ್ವಾ ಸಿದ್ದರಾಮಯ್ಯನವರೆ ಎಂದರು. ವಿಶ್ವನಾಥ್ ನನ್ನ ಮೈಯಲ್ಲಿ ಕಾಂಗ್ರೆಸ್ ರಕ್ತ ಹರಿತಿದೆ ಅಂದ್ರು, ನಮ್ಮವರು ಕರೆದುಕೊಂಡು ಬಂದಿದ್ದರು ಅವರು ಹೋದ್ರು ಎಂದು ಹೇಳಿದರು.
ಮಂಗಳೂರು: ಈ ಹಿಂದೆ ಕೋಮು ಗಲಭೆಗಳಿಂದ ಬಂಟ್ವಾಳ ಕ್ಷೇತ್ರ ನಲುಗಿತ್ತು. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಬಂಟ್ವಾಳದ ಚಿತ್ರಣ ಬದಲಾಗಿದೆ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಹೇಳಿದರು. ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಸಂಪೂರ್ಣ ಸಾಮರಸ್ಯ ನೆಲೆಸಿದೆ. ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದೆ ಎಂದು ಹೇಳಿದರು.
ಕೋಲಾರ: ಕೋಲಾರದಲ್ಲಿ ಚುನಾವಣೆ ಸ್ಪರ್ಧೆ ಇರೋದು ಜೆಡಿಎಸ್, ಬಿಜೆಪಿಗೆ ಮಾತ್ರ. ಕಾಂಗ್ರೆಸ್ ಸ್ಪರ್ಧೆನೇ ಇಲ್ಲ. ಜೆಡಿಎಸ್ ಅಭ್ಯರ್ಥಿ ಘೋಷಣೆ ಮಾಡಿಯಾಗಿದೆ. ಈಗ ನಾರಾಯಣಸ್ವಾಮಿ ಸುಮ್ಮನೆ ಕುಳಿತುಕೊಳ್ಳೋದಕ್ಕೆ ಹೋಗುತ್ತಾರಾ? ನಮ್ಮ ಜೊತೆಯಲ್ಲೇ ಇದ್ದಾರೆ ಅವರು ಪಕ್ಷ ಬಿಟ್ಟು ಹೋಗಲ್ಲ. ಎಲ್ಲಿ ಆಕಾಂಕ್ಷಿಗಳು ಹೆಚ್ಚಿರುವ ಎಲ್ಲಾ ಕಡೆನೂ ಆಣೆ ಪ್ರಮಾಣ ಮಾಡಿಸುತ್ತೇವೆ ಎಂದು ಸಚಿವ ಮುನಿರತ್ನ ಹೇಳಿದರು.
ಮೈಸೂರು: ಕೋಲಾರದಲ್ಲಿ ಆಣೆ ಪ್ರಮಾಣ ಪಾಲಿಟಿಕ್ಸ್ ವಿಚಾರವಾಗಿ ಜಿಲ್ಲೆಯಲ್ಲಿ ಸಚಿವ ಮುನಿರತ್ನ ಪ್ರತಿಕ್ರಿಯೆ ನೀಡಿದ್ದು, ಬೇರೆ ಪಕ್ಷದವರನ್ನ ಕರೆದುಕೊಂಡು ಬಂದು ಆಣೆ ಪ್ರಮಾಣ ಮಾಡಿಲ್ಲ. ನಮ್ಮ ಕಾರ್ಯಕರ್ತರು ಒಗ್ಗಟ್ಟಿನಿಂದ ಹೋಗಬೇಕೆಂಬ ಕಾರಣದಿಂದ ಮಾಡಿದ್ದೇವೆ. ಜೊತೆಗೆ ನಮ್ಮಲ್ಲಿ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಆಕಾಂಕ್ಷಿಗಳನ್ನ ಒಟ್ಟಿಗೆ ಸೇರಿಸಿ ಪಕ್ಷ ಯಾರನ್ನೇ ಅಭ್ಯರ್ಥಿ ಮಾಡಿದರು ಅವರ ಪರವಾಗಿ ಕೆಲಸ ಮಾಡುತ್ತೇವೆ ಅಂತ ಒಬ್ಬರಿಗೊಬ್ಬರು ನಂಬಿಕೆ ಇರುವಂತಹ ಕೆಲಸ ಮಾಡಿದ್ದೇವೆ ಎಂದು ಹೇಳಿದರು.
ಗದಗ: ಜಿಲ್ಲೆಯಲ್ಲಿ ವಿಜಯ ಸಂಕಲ್ಪ ಅಭಿಯಾನಕ್ಕೆ ಅರುಣ್ ಸಿಂಗ್ ಚಾಲನೆ ನೀಡಿದರು. ಮನೆ ಮನೆಗೆ ತೆರಳಿ ಕರಪತ್ರ ಹಂಚಿದ ರಾಜ್ಯ ಬಿಜೆಪಿ ಉಸ್ತುವಾರಿ ಸಿಂಗ್. ಸಚಿವ ಸಿ.ಸಿ.ಪಾಟೀಲ್ ಸೇರಿ ಹಲವು ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ರಾಯಚೂರು: ಹೊಳೆನರಸೀಪುರದಲ್ಲಿ ಸ್ಪರ್ಧಿಸುವಂತೆ ಭವಾನಿಗೆ ಆಹ್ವಾನ ವಿಚಾರವಾಗಿ ಬಿಜೆಪಿ ನಾಯಕ ಸಿ.ಟಿ.ರವಿಗೆ ಮಾಜಿ ಸಿಎಂ ಹೆಚ್‌ಡಿಕೆ ತಿರುಗೇಟು ನೀಡಿದರು. ಬಿಜೆಪಿಯವರಿಗೆ ಮನೆ ಒಡೆದು ಅಭ್ಯಾಸವೆಂದು ಹೆಚ್‌ಡಿಕೆ ಗರಂ ಆದರು. ದೇಶ ಒಡೆದವರು ಈಗ ಮನೆ ಒಡೆಯಲು ಬಂದಿದ್ದಾರೆ. ಆದ್ರೆ ಹೆಚ್.ಡಿ.ದೇವೇಗೌಡರ ಮನೆ ಒಡೆಯಲಾಗಲ್ಲವೆಂದು ಹೇಳಿದರು.
ರಾಯಚೂರು: ಹಾಸನ ಕ್ಷೇತ್ರದ ಬಗ್ಗೆ ನೀವು ಗೊಂದಲ ಮಾಡಿಕೊಳ್ಳತ್ತಿದ್ದೀರಿ. ನಾನು ಹೀಗಾಗಲೇ ಈ ವಿಚಾರದ ಬಗ್ಗೆ ಹೇಳಿದ್ದೀನಿ. ನಮ್ಮ ಕುಟುಂಬ ಆ ಕ್ಷೇತ್ರದಲ್ಲಿ ಸಮರ್ಥ ಅಭ್ಯರ್ಥಿ ಇಲ್ಲದಿದ್ದಾಗ ಅಲ್ಲಿನ ಕಾರ್ಯಕರ್ತರ ರಕ್ಷಣೆ ಗೆ ನಮ್ಮ ಮನೆಯಿಂದ ತಲೆ ಕೊಡ್ತವಿ. ಸಮರ್ಥ ಕಾರ್ಯಕರ್ತರ ಇದ್ದಾಗ ಆ ಅವಶ್ಯಕತೆ ಇರಲ್ಲ. ಆ ಅವಶ್ಯಕತೆ ಬಂದಾಗ ನಾನು ನಿಮಗೆ ಹೇಳ್ತೀನಿ ಎಂದು ಹೇಳಿದರು.
ಗದಗ: ಕಾಂಗ್ರೆಸ್ ಸರಕಾರ ಇದ್ದ ರಾಜ್ಯಗಳು ಅಂಧಕ್ಕಾರದಲ್ಲಿ ಮುಳುಗಿವೆ. ಮೊದಲು ರಾಜ್ಯಗಳಲ್ಲಿ ವಿದ್ಯುತ್ ಎಷ್ಟು ಗಂಟೆ ಕೊಡ್ತಾರೆ ಅಂತಾ ನೋಡಿ ಎಂದು ಕಾಂಗ್ರೆಸ್ 200 ಯುನಿಟ್ ಉಚಿತ ವಿದ್ಯುತ್ ಘೋಷಣೆಗೆ ಅರುಣ್ ಸಿಂಗ್ ಟಾಂಗ್ ಕೊಟ್ಟರು. ಕರ್ನಾಟಕದಲ್ಲಿ 3 ಫೇಸ್ ದಿನದಲ್ಲಿ 7 ಗಂಟೆ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ. ಕಾಂಗ್ರೆಸ್ ಸರಕಾರ ಇರೋ ರಾಜಸ್ಥಾನದಲ್ಲಿ ರಾತ್ರಿ ಮಾತ್ರ ವಿದ್ಯುತ್ ಇರುತ್ತೆ. ದಿನದಲ್ಲಿ ಒಂದು ಗಂಟೆನೂ ಬರೋದಿಲ್ಲ. ಪರೀಕ್ಷೆ ಬರೆಯೋ ವಿದ್ಯಾರ್ಥಿಗಳು ಓದೋಕೆ ಸಂಜೆಯೂ ವಿದ್ಯುತ್ ಬರೋದಿಲ್ಲ.
ಗದಗ: ಸಿದ್ದರಾಮಯ್ಯ ಸಿಎಂ ಆಗಿದ್ದಾಗ ವಿವಿಧ ನೇಮಕಾತಿಯಲ್ಲಿ ಭ್ರಷ್ಟಾಚಾರ. ಶಿಕ್ಷಕರ, ಪೊಲೀಸ್ ಹುದ್ದೆಗಳ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಗದಗದಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ತೀವ್ರ ವಾಗ್ದಾಳಿ ಮಾಡಿದರು.
ವಿಜಯಪುರ: ದೇಶದಲ್ಲಿ ಪ್ರಜೆಗಳಿಂದ ದಿಕ್ಕರಿಸಲ್ಪಟ್ಟ ಪಕ್ಷ ಅಂದರೆ ಅದು ಕಾಂಗ್ರೆಸ್ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಿ.ವೈ.ವಿಜಯೇಂದ್ರ ತೀವ್ರ ವಾಗ್ದಾಳಿ ಮಾಡಿದರು. ಇಡೀ ದೇಶದಲ್ಲಿ ಜನರು ಕಾಂಗ್ರೆಸ್ ಪಕ್ಷವನ್ನು ದೂರ ಮಾಡಿದ್ದಾರೆ. ಹೇಗಾದರೂ ಮಾಡಿ ಅಧಿಕಾರಕ್ಕೆ ಬರಲು ಹಗಲುಗನಸು ಕಾಣುತ್ತಿದೆ. ಭ್ರಷ್ಟಾಚಾರದ ಕುರಿತು ಕಾಂಗ್ರೆಸ್ ಮಾಡುತ್ತಿರುವ ಆರೋಪ ಹಾಸ್ಯಾಸ್ಪ. ‘ಕೈ’ ನಾಯಕರ ಹೇಳಿಕೆ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಾಗಿದೆ ಎಂದು ಹೇಳಿದರು.
ರಾಯಚೂರು: 78 ಶಾಸಕರನ್ನು ಇಟ್ಟುಕೊಂಡು ಸರ್ಕಾರಿ ನಿವಾಸ ಬಿಟ್ಟುಕೊಡಲಿಲ್ಲ ಎಂದು ಸಿದ್ದರಾಮಯ್ಯ ಹೆಸರು ಹೇಳದೆ ಮಾಜಿ ಸಿಎಂ ಹೆಚ್‌ಡಿಕೆ ವಾಗ್ದಾಳಿ ಮಾಡಿದರು. ನಾನೇನು ರಸ್ತೆಯಲ್ಲಿ ನಿಂತು ಅಧಿಕಾರ ನಡೆಸಲ್ಲಾ. ಅಮಿತ್ ಶಾ, ರಣದೀಪ್ ಸುರ್ಜೇವಾಲ ಎಲ್ಲಿ ಇರುತ್ತಾರೆ? ನಾನೇನು ಆಟ ಆಡಲು ಹೋಗಿದ್ದನಾ ಎಂದು ಹೆಚ್‌ಡಿಕೆ ಆಕ್ರೋಶ ವ್ಯಕ್ತಪಡಿಸಿದರು.
ರಾಯಚೂರು: ‘ಕೊಟ್ಟ ಕುದುರೆ ಏರದವನು ವೀರನೂ ಅಲ್ಲ ಶೂರನೂ ಅಲ್ಲ’ ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದರು. ಕುದುರೆ ಕೊಟ್ಟು ಕಾಲು ಕಟ್ ಮಾಡಿದ್ರೆ ಎಲ್ಲಿ ಓಡಿಸಲು ಆಗುತ್ತೆ? ಕಾಂಗ್ರೆಸ್ನವರೇ ನಮ್ಮ ಮನೆ ಬಾಗಿಲಿಗೆ ಬಂದಿದ್ದು. ಎಲ್ಲಾ ಗೊತ್ತಿದ್ದೋರು ನಮ್ಮ ಮನೆ ಬಾಗಿಲಗೆ ಯಾಕೆ ಬಂದರು? ಈಗ ಕಾಂಗ್ರೆಸ್ನವರದ್ದು ಉಚಿತ ಖಚಿತ ಅನ್ನೋ ಸ್ಕೀಂ ಬೇರೆ. ಒಂದು ಚಡ್ಡಿ ತೆಗೆದುಕೊಂಡರೆ 2 ಫ್ರೀ ಅನ್ನೋ ಲೆಕ್ಕದ ರೀತಿ ಇವರದ್ದು ಎಂದು ಕಿಡಿಕಾರಿದರು.
ಹುಬ್ಬಳ್ಳಿ: ರಾಜ್ಯದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಫೇಲ್ ಆಗಿದೆ ಎಂದು ನಗರದಲ್ಲಿ ಟಿವಿ9ಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು. ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶಕ್ಕೆ ಜನ ಬರದೆ ಕುರ್ಚಿಗಳು ಖಾಲಿ ಇವೆ. ಪ್ರಜಾಧ್ವನಿ ಯಾತ್ರೆಯಲ್ಲೂ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಜಗಳ ಜನರಿಗೆ ಕಾಣ್ತಿದೆ. ರಾಮನಗರದಲ್ಲಿ ಸಿದ್ದರಾಮಯ್ಯ ಬಗ್ಗೆ ಹಾಡನ್ನು ಡಿ.ಕೆ.ಸುರೇಶ್ ತಡೆದ್ರು. ಇಬ್ಬರ ನಡುವೆ ಜಗಳ ಇರೋದು ಇದರಿಂದ ಗೊತ್ತಾಗುತ್ತೆ ಎಂದು ಹೇಳಿದರು.
ಹುಬ್ಬಳ್ಳಿ: ಶಿಸ್ತು ಸಮಿತಿಯಿಂದ ಶಾಸಕ ಯತ್ನಾಳ್ಗೆ ನೋಟಿಸ್ ನೀಡಲಾಗಿದೆ. ನೋಟಿಸ್ ನೀಡಿದ ಬಳಿಕ ಈಗ ಮಾತನಾಡುವುದನ್ನು ಬಿಟ್ಟಿದ್ದಾರೆ. ಯಾವುದೇ ಕಾರಣಕ್ಕೂ ಪಕ್ಷದಲ್ಲಿ ಬಿಜೆಪಿ ಅಶಿಸ್ತನ್ನು ಒಪ್ಪಿಕೊಳ್ಳಲ್ಲ. ಆರ್ಥಿಕತೆಯಲ್ಲಿ ಭಾರತ ಮುಂಚೂಣಿ ಸ್ಥಾನದಲ್ಲಿ ಮುನ್ನಡೆಯುತ್ತಿದೆ. ಭಾರತ ಸರ್ಕಾರದ ನೀತಿಗಳಿಗೆ ಅನೇಕ ರಾಷ್ಟ್ರಗಳಿಂದ ಮೆಚ್ಚುಗೆ ದೇಶದಲ್ಲಿ ಮೂರು ಕೋಟಿಗೂ ಹೆಚ್ಚು ಜನರು ಲಕ್ಷಾಧೀಶರಿದ್ದಾರೆ. ದೇಶದ ಜನರ ಆರ್ಥಿಕತೆ ಸುಧಾರಿಸುತ್ತಿದೆ ಎಂದು ಅರುಣ್ ಸಿಂಗ್ ಹೇಳಿದರು.
ಮಂಡ್ಯ: ಬಿಜೆಪಿಯ ದುರಾಡಳಿತ ಹೋಗಲಾಡಿಸಲು ಬಸ್ ಯಾತ್ರೆ ಮಾಡ್ತಿದ್ದೇವೆ ಎಂದು ಕಾಂಗ್ರೆಸ್ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ಮಂಡ್ಯ ಜಿಲ್ಲೆಗೂ ನನಗೂ 40 ವರ್ಷದ ಸಂಬಂಧವಿದೆ. ಮಂಡ್ಯ, ಕನಕಪುರ, ರಾಮನಗರ ನನಗೆ ಬೇರೆ ಅಲ್ಲ. ಎಸ್.ಎಂ.ಕೃಷ್ಣ ಕಾಲದಿಂದಲೂ ಈ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.
ಚಿಕ್ಕಬಳ್ಳಾಪುರ: ಕಾಂಗ್ರೆಸ್ ಪಕ್ಷದಲ್ಲಿ ಈಗ 2 ಬಣದ ಬದಲು ಮೂರು ಬಣ ಆಗಿದೆ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಬಣ ಇದೆ. ಕಾಂಗ್ರೆಸ್ ಪಕ್ಷದಲ್ಲಿ ದಲಿತ ಸಿಎಂ ಕಿಚ್ಚು ಹೆಚ್ಚಿದೆ. ಹಿಂದೆ ಜಿ.ಪರಮೇಶ್ವರ್ ಸಿಎಂ ಆಗ್ತಾರೆ ಅಂತ ಅವರನ್ನು ಸೋಲಿಸಿದ್ರು. ಮೊದಲು ದಲಿತ ಸಿಎಂ ಗೊಂದಲವನ್ನು ಸರಿಮಾಡಿಕೊಳ್ಳಲಿ ಎಂದು ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಚಿಕ್ಕಬಳ್ಳಾಪುರ: ಸುಧಾಕರ್ ಮಂತ್ರಿಯಾಗಲು ನಾಲಾಯಕ್ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಡಾ.ಕೆ.ಸುಧಾಕರ್ ತಿರುಗೇಟು ನೀಡಿದ್ದು, ಜೆಡಿಎಸ್ನಲ್ಲಿದ್ದಾಗ ಸಿದ್ದರಾಮಯ್ಯರನ್ನು ಯಾಕೆ ಸಿಎಂ ಮಾಡಲಿಲ್ಲ? ಬಾಯಿ ಚಪಲಕ್ಕೆ ಮಾತಾಡುವುದರಿಂದ ಏನೂ ಪ್ರಯೋಜನ ಇಲ್ಲ. ನಾನು ಲಾಯಕ್ಕಾ ಇಲ್ಲ ನಾಲಾಯಕ್ಕಾ ಅಂತ ಜನ ತೀರ್ಮಾನಿಸ್ತಾರೆ ಎಂದು ಹೇಳಿದರು.
ಮಾಜಿ ಶಾಸಕ ಸುರೇಶ್ ಬಾಬು ಸಚಿವ ಮಾಧುಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚಿಕ್ಕನಾಯಕನಹಳ್ಳಿ ಕ್ಷೇತ್ರಕ್ಕೆ ಅಗೌರವ ತಂದಿದ್ದಿರಾ. ಹುಳಿಯಾರು ಕನಕ ವೃತ್ತ ಸೇರಿದಂತೆ ಹಲವು ತಪ್ಪು ಮಾಡಿ ಕ್ಷಮೆ ಕೇಳಿದ್ದಿರಾ. ಸ್ಥಳೀಯ ಸಂಸ್ಥೆ ಚುನಾವಣೆ ಮಾಡಲು ನಿಮಗೆ ಯೋಗ್ಯತೆ ಇಲ್ಲ. ಕಾನೂನು ಸಚಿವರಾಗಿ ಕೆಲಸ ಮಾಡಿಲ್ಲ. ಎಲ್ಲದರಲ್ಲೂ ವಿಫಲರಾಗಿದ್ದೀರಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಹಾಸನ ಜೆಡಿಎಸ್ ಟಿಕೆಟ್ ಬಗ್ಗೆ ಹೆಚ್‌ಡಿಕೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಹಾಸನದಲ್ಲಿ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಭವಾನಿ ಮಾತನಾಡಿದ್ದಾರೆ. ನಾನು ಯಾರ ಹೇಳಿಕೆಗೂ ಪ್ರತಿಕ್ರಿಯೆ ನೀಡಲು ಹೋಗಲ್ಲ. ದೇವರ ಆಶೀರ್ವಾದ ಇದ್ದರೆ ಮುಂದೆ ನೋಡೋಣ. ಇವತ್ತು ಯಾವುದೇ ರಾಜಕೀಯ ವಿಚಾರ ಮಾತನಾಡಲ್ಲ ಎಂದರು. ಹಾಸನ ಹೊರವಲಯದ ಬುಸ್ತೇನಹಳ್ಳಿ ಗ್ರಾಮದಲ್ಲಿ ಶ್ರೀ ಮಾಸ್ತಿಯಮ್ಮದೇವಿ ದೇವಸ್ಥಾನ ಉದ್ಘಾಟನೆಗೆ ಭವಾನಿ ರೇವಣ್ಣ ಆಗಮಿಸಿದ್ದಾರೆ.
ಒಬ್ಬ ಸಿದ್ದರಾಮಯ್ಯ, ನಾಮ ಹಲವು ಪೋಸ್ಟರ್ ವಿಚಾರಕ್ಕೆ ಸಂಬಂಧಿಸಿ ಚಿಕ್ಕಮಗಳೂರಿನಲ್ಲಿ ಶಾಸಕ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದಾರೆ. ಉದರನಿಮಿತ್ತಂ, ಬಹುಕೃತವೇಷಂ, ಓಟು ನಿಮಿತ್ತಂ, ಬಹುಕೃತನಿಮಿತ್ತಂ. ಓಟಿಕೋಸ್ಕರ ಹಲವು ವೇಷ ಹಾಕುತ್ತಿದ್ದಾರೆ ಅವರೇ ಒಪ್ಪಿಕೊಂಡಿದ್ದಾರೆ. ಗಳಿಗೆಗೊಂದು ಬದಲಾಗಬಾರದು, ನಿಯತ್ತು ಮತ್ತು ನೀತಿ ಒಂದೇ ಇರಬೇಕು. ನಿಯತ್ತು ಬದಲಾಗೋದು ನೀತಿ ಬದಲಾಗೋದು ಒಳ್ಳೆಯ ನೇತೃತ್ವದ ಲಕ್ಷಣ ಅಲ್ಲ. ಜಾತಿ ಸಭೆಯಲ್ಲಿ ಜಾತಿವಾದಿ ತರ, ಹೊರಗಡೆ ಜಾತ್ಯಾತೀತರ ಮಾತಾನಾಡೋದು. ಹಿಂದುತ್ವದ ವಿರುದ್ಧ ಮಾತಾನಾಡೋದು, ಹೊರಗಡೆ ಬಂದು ಹಿಂದೂ ಅನ್ನೋದು. ಅದು ನೀತಿ, ನಿಯತ್ತು ಇಲ್ಲದಿರೋದನ್ನ ತೋರಿಸುತ್ತೆ ಎಂದರು.
ಸಿದ್ದರಾಮಯ್ಯ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಲಿ ಎಂದು ದೈವವಾಣಿ ವಿಚಾರಕ್ಕೆ ಸಂಬಂಧಿಸಿ ಕೊಪ್ಪಳದಲ್ಲಿ ಕಾಂಗ್ರೆಸ್ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿರುವ ಚಿಕ್ಕತಾಯಮ್ಮ ನಮ್ಮ ಮೂಲ ಮನೆ ದೇವರಲ್ಲ. ಕಾಕತಾಳಿಯವಾಗಿ ಆ ದೇವಸ್ಥಾನದ ಅರ್ಚಕರಿಗೆ ದೇವರು ಬಂದಿತ್ತು. ವಿರೋಧ ಪಕ್ಷಗಳಿಗೆ ಮೊದಲಿನಿಂದಲೇ ಸಿದ್ದರಾಮಯ್ಯನವರೇ ಟಾರ್ಗೆಟ್. ರಾಜ್ಯದ ಕೆಲವು ಮಾಸ್ ಲೀಡರ್ಗಳಲ್ಲಿ ನಮ್ಮ ತಂದೆ ಕೂಡ ಒಬ್ಬರು. ಟಾರ್ಗೆಟ್ ಮಾಡಿ ಕೋಲಾರ ಕ್ಷೇತ್ರದಲ್ಲಿ ಕರಪತ್ರಗಳನ್ನು ಹಂಚಿದ್ದಾರೆ. ನಮ್ಮ ಕಡೆಯಿಂದ ವರುಣಾ ಕ್ಷೇತ್ರಕ್ಕೆ ಆಹ್ವಾನವಿದೆ. ಇದು ತಂದೆ ಕೊನೆ ಚುನಾವಣೆ, ಹಾಗಾಗಿ ವರುಣಾದಿಂದ ಸ್ಪರ್ಧಿಸಲಿ. ಮೈಸೂರು ಜಿಲ್ಲೆಯಿಂದಲೇ ಸಿದ್ದರಾಮಯ್ಯ ಸ್ಪರ್ಧಿಸಬೇಕೆಂಬುದು ಆಸೆ ಎಂದರು.
‘ಕೊಟ್ಟ ಭರವಸೆ ಈಡೇರಿಸದಿದ್ರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ’ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹೇಳಿಕೆಗೆ ಸಿಎಂ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ನಾಯಕರ ಮನಸ್ಸಿನಲ್ಲಿ ಇರುವ ಮಾತು ಹೊರಗೆ ಬಂದಿದೆ. ನಾವೇನು ಸನ್ಯಾಸತ್ವದ ಮಾತು ಆಡಿರಲಿಲ್ಲ. ಶಾದಿಭಾಗ್ಯ ಮಾಡಿದ್ದರಿಂದಲೇ ಸಿದ್ದರಾಮಯ್ಯಗೆ ದೌರ್ಭಾಗ್ಯ ಬಂತು. ಈಗಲೂ ಮುಂದುವರಿಸಿದರೆ ಅವರ ಪಕ್ಷಕ್ಕೂ ದೌರ್ಭಾಗ್ಯ ಬರಲಿದೆ. ಈ ಬಾರಿ ಜನಪರ ಬಜೆಟ್ ಮಂಡಿಸಲಿದ್ದೇನೆ. ಮೈಸೂರು ಸೇರಿ ಎಲ್ಲರೂ ಉತ್ತಮ ಬಜೆಟ್ ನಿರೀಕ್ಷೆ ಮಾಡಬಹುದು ಎಂದು ಮೈಸೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ರು.
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಜನಾರ್ದನ ರೆಡ್ಡಿ ಅಲ್ಪಸಂಖ್ಯಾತರ ಮತಬುಟ್ಟಿಗೆ ಕೈಹಾಕಿದ್ದಾರೆ. ಪಂಚರತ್ನ ಯಾತ್ರೆ ರಾಯಚೂರು ನಗರ ತಲುಪೋದಕ್ಕೂ ಮೊದಲೇ ಜನಾರ್ದನ ರೆಡ್ಡಿ ಹೈ ಅಲರ್ಟ್ ಆಗಿದ್ದಾರೆ. ಅತೀ ಹೆಚ್ಚು ಮುಸ್ಲಿಂ ಮತಗಳನ್ನ ಹೊಂದಿರುವ ರಾಯಚೂರು ನಗರ ಕ್ಷೇತ್ರಕ್ಕೆ ಹೆಚ್ಡಿ ಕುಮಾರಸ್ವಾಮಿಗೂ ಮುನ್ನ ಖುದ್ದು ಭೇಟಿ ನೀಡಿದ್ದಾರೆ. ರಾಯಚೂರು ನಗರದ ದರ್ಗಾಗೆ ಭೇಟಿ ನೀಡಿ ಕೆಲ ಮುಸ್ಲಿಂ ಮುಖಂಡರ ಜೊತೆ ಮಾತುಕತೆ ನಡೆಸಿದ್ದಾರೆ.
ಭವಾನಿ ರೇವಣ್ಣನಿಗೆ ಬಿಜೆಪಿಗೆ ಬರುವಂತೆ ಸಿ.ಟಿ. ರವಿ ಆಫರ್ ನೀಡಿದ್ದಾರೆ. ನಾನು ಸಹೋದರಿ ಭವಾನಿಯವರ ಹೇಳಿಕೆಯನ್ನು ಗಮನಿಸಿದ್ದೇನೆ. ಕುಮಾರಸ್ವಾಮಿ ಅವರ ಹೇಳಿಕೆಯನ್ನು ಗಮನಿಸಿದ್ದೇನೆ. ನಾನು ಮನೆಯಲ್ಲಿ ಗಲಾಟೆಯನ್ನು ಹಚ್ಚಿಸುವ ಕೆಲಸವನ್ನ ಬಯಸುವುದಿಲ್ಲ. ನನ್ನ ಮನಸ್ಸಿನಲ್ಲಿ ಭವಾನಿ ಅಕ್ಕ ನಮ್ಮ ಪಾರ್ಟಿಯಿಂದ ಅಭ್ಯರ್ಥಿಯಾಗ್ಬೇಕು ಅನ್ನುವುದಿತ್ತು. ಭವಾನಿ ಹೊಳೆನರಸೀಪುರದಿಂದ ನಮ್ಮ ಪಾರ್ಟಿಯಿಂದ ಅಭ್ಯರ್ಥಿಯಾಗಲಿ. ಭವಾನಿಗಿಂತ ಉತ್ತಮ ಕ್ಯಾಂಡೇಟ್ ಹೊಳೆನರಸೀಪುರಕ್ಕೆ ಬೇರೊಬ್ಬರಿಲ್ಲ. ಹಾಸನ ಜಿಲ್ಲೆಯ ರಾಜಕಾರಣವನ್ನ ಹತ್ತಿರದಿಂದ ಗಮನಿಸಿದ್ದೇನೆ. ರೇವಣ್ಣ ಮತ್ತು ಭವಾನಿಯ ನಡುವೆ ಜಗಳ ಹಚ್ಚುವ ಕೆಲಸ ಮಾಡಲು ನನಗೆ ಇಷ್ಟವಿಲ್ಲ ಎಂದು ಚಿಕ್ಕಮಗಳೂರಿನಲ್ಲಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ. ರವಿ ಹೇಳಿಕೆ ನೀಡಿದ್ದಾರೆ.
ಕೇಂದ್ರ ಚುನಾವಣಾ ಸಮಿತಿ ಸಭೆ ಹಿನ್ನಲೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ದೆಹಲಿಗೆ ಆಗಮಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ತ್ರಿಪುರ, ಮೇಘಾಲಯ, ನಾಗಲ್ಯಾಂಡ್ ವಿಧಾನಸಭೆ ಚುನಾವಣೆಗೆ ಟಿಕೆಟ್ ಅಂತಿಮ ಮಾಡಲಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯಗೆ ಬಿಜೆಪಿ ಮುಖಂಡ ಚಂದ್ರಾಯ ನಾಗರಾಳ್ ಬಂಪರ್ ಆಫರ್ ನೀಡಿದ್ದಾರೆ. ಯಾದಗಿರಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ರೆ ಒಂದು ಕೋಟಿ ಕೊಡುವುದಾಗಿ ಹೇಳಿದ್ದಾರೆ. ಸಿದ್ದರಾಮಯ್ಯ ಬಂದ್ರೆ ಜಮೀನು ಮಾರಾಟ ಮಾಡಿ ಒಂದು ಕೋಟಿ ಕೊಡ್ತೀನಿ. ಕಾಲು ಹಿಡಿದು ಸಿದ್ದರಾಮಯ್ಯಗೆ ಮನವಿ ಮಾಡುತ್ತೆನೆ ಯಾದಗಿರಿಗೆ ಬನ್ನಿ. ಬಾದಾಮಿಯಿಂದ ಕೋಲಾರಕ್ಕೆ ಹೋಗ್ತಾಯಿದ್ದಿರಾ ಅಲ್ಲಿಯೂ ಕೂಡ ಕೆಲವರು ನೀಮ್ಗೆ ವಿರೋಧ ಮಾಡ್ತಾಯಿದ್ದಾರೆ. ಸುಮ್ನೆ ಯಾದಗಿರಿಗೆ ಬನ್ನಿ ಕಣ್ಣು ಮುಚ್ಚಿ ಗೆಲ್ಲಿಸುತ್ತೆವೆ. ನಾನೇನು ದೊಡ್ಡ ಉದ್ಯಮಿ ಅಲ್ಲ ಸಿದ್ದರಾಮಯ್ಯ ಅಭಿಮಾನಿ ಎಂದು ಬಿಜೆಪಿ ಮುಖಂಡ ಚಂದ್ರಾಮ ನಾಗರಾಳ್ ಬಿಗ್ ಆಫರ್ ನೀಡಿದ್ದಾರೆ.
ತಂದೆಗಾಗಿ ಕ್ಷೇತ್ರ ತ್ಯಾಗಕ್ಕೆ ಸಿದ್ದ ಎಂದು ಗದಗದಲ್ಲಿ ಶಾಸಕ ಡಾ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ನಮ್ಮ ತಂದೆ ಸಿದ್ದರಾಮಯ್ಯ ಅವ್ರಿಗೆ ಕೋಲಾರದಲ್ಲಿ ಸ್ಪರ್ಧೆ ಮಾಡುವ ಇಚ್ಛೆ ಇದೆ. ಹೈಕಮಾಂಡ್ ಅನುಮತಿ ನೀಡಬೇಕು ಎಂದು ಅಪ್ಪಾ ಹೇಳಿದ್ದಾರೆ. ನಾನು ಕೂಡಾ ವರುಣಾ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಹೇಳ್ತಾಯಿದ್ದೇನೆ. ನಾನು ಬಿಟ್ಟು ಕೊಡುವ ಪ್ರಶ್ನೇ ಇಲ್ಲಾ, ನಾನೇ ಅವರನ್ನು ಕರೆಯುತ್ತಿದ್ದೇನೆ. ಅವ್ರ ಕೊನೆಯ ಚುನಾವಣೆ ಆಗಿರೋದರಿಂದ ವರುಣಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕು ಅನ್ನೋ ನನ್ನ ಹಾಗೂ ಕ್ಷೇತ್ರದ ಜನ್ರ ಆಸೆ. ಅವರ ಕೊನೆ ಚುನಾವಣೆ ಆಗಿರೋದರಿಂದ ಅವ್ರು ವರುಣಾದಿಂದ ಸ್ಪರ್ಧೆ ಮಾಡಲಿ ಎನ್ನುವ ಇಚ್ಛೆ ಕಾರ್ಯಕರ್ತರಲ್ಲಿದೆ ಎಂದರು.
ಕ್ವೀನ್ ರೋಡ್ನಲ್ಲಿರುವ ನೂತನ ಕಾಂಗ್ರೆಸ್ ಕಚೇರಿ ಕಟ್ಟಡದ ಸಭಾಂಗಣದಲ್ಲಿ ಇಂದು ಮಹತ್ವದ ಸಭೆ ನಡೆಯಲಿದೆ. ಸಭೆಗೆ ಕೆಪಿಸಿಸಿ ಪದಾಧಿಕಾರಿಗಳ, ಡಿಸಿಸಿ ಅಧ್ಯಕ್ಷರುಗಳನ್ನು ಡಿಕೆ ಶಿವಕುಮಾರ್ ಆಹ್ವಾನಿಸಿದ್ದಾರೆ. ಇಂದು ಮಧ್ಯಾಹ್ನ ಮೂರು ಗಂಟೆಗೆ ಸಭೆ ನಡೆಯಲಿದೆ. ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ, ವಿಪಕ್ಷ ನಾಯಕ ಸಿದ್ದರಾಮಯ್ಯ, ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪಸ್ರಾದ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗರೆಡ್ಡಿ, ಆರ್ ಧೃವನಾರಯಣ್, ಸಲೀಂ ಅಹ್ಮದ್, ಈಶ್ವರ ಖಂಡ್ರೆ, ಸತೀಶ್ ಜಾರಕಿಹೊಳಿ, ಎಐಸಿಸಿ ಉಸ್ತುವಾರಿ ಕಾರ್ಯದರ್ಶಿಗಳು, ಹಾಲಿ ಶಾಸಕರು, ಪರಿಷತ್ ಸದಸ್ಯರು, ಕಳೆದ ಎಲೆಕ್ಷನ್ ನಲ್ಲಿ ಪರಾಭವಗೊಂಡ ಅಭ್ಯರ್ಥಿ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಕೋಲಾರದಲ್ಲಿ ಉಸ್ತುವಾರಿ ಸಚಿವ ಮುನಿರತ್ನ ಆಣೆ ಪ್ರಮಾಣ ಪಾಲಿಟಿಕ್ಸ್ ಶುರು ಮಾಡಿದ್ದಾರೆ. ಟಿಕೆಟ್ ಕೈ ತಪ್ಪಿದ್ರು BJP ಪಕ್ಷ ಬಿಟ್ಟೋಗಲ್ಲ ಎಂದು ಸಚಿವ ಮುನಿರತ್ನ ಆಣೆ ಪ್ರಮಾಣ ಮಾಡಿಸಿದ್ದಾರೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳ ಪೈಪೋಟಿ ಹೆಚ್ಚಾಗಿದೆ. ಬಂಗಾರಪೇಟೆ ತಾಲೂಕು BJP ಟಿಕೆಟ್ ಗಾಗಿ ಮಾಜಿ ಶಾಸಕರಾದ ಎಂ ನಾರಾಯಣಸ್ವಾಮಿ, ವೆಂಕಟಮುನಿಯಪ್ಪ, ಹಾಗೂ ಬಿ.ವಿ ಮಹೇಶ್, ವಿ ಶೇಷು, ಅಮರೇಶ್ ಸೇರಿದಂತೆ 6 ಮಂದಿ ಲಾಭಿ ನಡೆಸುತ್ತಿದ್ದಾರೆ. ಎಂ.ನಾರಾಯಣಸ್ವಾಮಿಗೆ ಟಿಕೆಟ್ ಕೈ ತಪ್ಪಿದ್ರೆ ಜೆಡಿಎಸ್ ಗೆ ಬೆಂಬಲ ನೀಡುವ ಭೀತಿ ಇದೆ. ಹೀಗಾಗಿ ಕೋಲಾರ ಹೊರವಲಯದ ಖಾಸಗಿ ರೆಸಾರ್ಟ್ ನಲ್ಲಿ ಮುನಿರತ್ನ ಟಿಕೆಟ್ ಕೈ ತಪ್ಪಿದರೂ ಬಿಜೆಪಿ ಪಕ್ಷ ಬಿಡಬಾರದು ಬೆಂಬಲಿಸಬೇಕು ಎಂದು ಆಣೆ ಮಾಡಿಸಿಕೊಂಡಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಮಂಡ್ಯದಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಕಾರ್ಯಕ್ರಮ ಹಿನ್ನಲೆ ಕಾರ್ಯಕ್ರಮಕ್ಕೆ ಆಗಮಿಸುವ ಕಾರ್ಯಕರ್ತರಿಗೆ ಉಚಿತ ಕಬ್ಬಿನ ಹಾಲಿನ ವಿತರಣೆ ಮಾಡಲಾಗುತ್ತಿದೆ. ಮಂಡ್ಯದ ವಿವಿ ಮೈದಾನದಲ್ಲಿ ನಡೆಯುತ್ತಿರುವ ಪ್ರಜಾಧ್ವನಿ ಕಾರ್ಯಕ್ರಮ ಬಂದ ಕೈ ಕಾರ್ಯಕರ್ತರು ಕಬ್ಬಿನ ಹಾಲನ್ನ ಸವಿದು ಸಂತಸಪಟ್ರು.
ಪ್ರಜಾಧ್ವನಿ ಯಾತ್ರೆಯಲ್ಲಿ ಪ್ರಮೋದ್ ಮಧುರಾಜ್ ಅವರನ್ನು ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಟೀಕಿಸಿದ್ದರು. ಹೀಗಾಗಿ ಉಡುಪಿಯಲ್ಲಿ ಪ್ರಮೋದ್ ಮಧ್ವರಾಜ್ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಈವರೆಗೆ ಏಳು ಬಾರಿ ಪಕ್ಷವನ್ನು ಬದಲಿಸಿದ್ದಾರೆ. ನಾನು ಹುಟ್ಟಿನಿಂದ ಕಾಂಗ್ರೆಸ್ ಈಗ ಬಿಜೆಪಿ ಸೇರಿದ್ದೇನೆ.
ಸಿದ್ದರಾಮಯ್ಯ 1978 ರಲ್ಲಿ ರೈತಸಂಘದಲ್ಲಿದ್ದರು. 1983 ರಲ್ಲಿ ಭಾರತೀಯ ಲೋಕದಳ, ಸಮಾಜಪಕ್ಷ ಜನತಾದಳ, ಜಾತ್ಯಾತೀತ ಜನತಾದಳ, ಅಹಿಂದ ಸೇರಿಕೊಂಡರು. ಸಿದ್ದರಾಮಯ್ಯ ಅಶಿಸ್ತಿನ ವಾತಾವರಣ ಸೃಷ್ಟಿ ಮಾಡಿ ವಜಾವಾಗಿದ್ದರು ಎಂದು ವಾಗ್ದಾಳಿ ನಡೆಸಿದ್ದಾರೆ.
ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ಫೈಟ್ ನಡುವೆ ಟೆಂಪಲ್ ರನ್ ಆರಂಭವಾಗಿದೆ. ಶಾಸಕ ಹೆಚ್.ಡಿ.ರೇವಣ್ಣ, ಭವಾನಿ ದಂಪತಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿನ ಶಾರದಾಂಬೆ ದೇವಸ್ಥಾನಕ್ಕೆ ಭೇಟಿ ದರ್ಶನ ಮಾಡಿದ್ದಾರೆ. ಹಾಗೂ ಶೃಂಗೇರಿ ಪಟ್ಟಣದಲ್ಲಿ ಬೈಕ್ ಜಾಥಾದಲ್ಲಿ ರೇವಣ್ಣ ಭಾಗಿಯಾಗಿದ್ದಾರೆ.
ಮೈಸೂರಿನ ಮಾನಸಗಂಗೋತ್ರಿಯ ಲಲಿತಕಲಾ ಕಾಲೇಜಿನ ಸಭಾಂಗಣದಲ್ಲಿ ನಡೆಯುತ್ತಿರುವ ರಾಜ್ಯ ಜಾನಪದ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಜ್ಯೋತಿ ಬೆಳಗಿಸಿ ಚಾಲನೆ ನೀಡಿದ್ದಾರೆ. ಕನ್ನಡ ಜಾನಪದ ಪರಿಷತ್ ರಾಜ್ಯ ಘಟಕ, ಬೆಂಗಳೂರು ಘಟಕ ಹಾಗೂ ಮೈಸೂರು ಜಿಲ್ಲಾ ಘಟಕದಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಇದೇ ವೇಳೆ ಹಲವು ಹಿರಿಯ ಜಾನಪದ ಕಲಾವಿದರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಸಿದ್ದರಾಮಯ್ಯ ಅಭಿನಂದಿಸಿದ್ರು. ಮಾಜಿ ಸಚಿವ ಡಾ ಹೆಚ್ ಸಿ ಮಹದೇವಪ್ಪ, ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ ಶಿವಣ್ಣ, ಶಾಸಕ ಅನಿಲ್ ಚಿಕ್ಕಮಾದು ಸೇರಿದಂತೆ ಹಲವು ಪ್ರಮುಖರು ಭಾಗಿಯಾಗಿದ್ದಾರೆ.
ಬೆಳಗಾವಿಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ ಸುದ್ದಿಗೋಷ್ಠಿ ನಡೆಸಿದ್ದಾರೆ. ವಿಜಯಸಂಕಲ್ಪ ಅಭಿಯಾನದಲ್ಲಿ ಒಂದು ಕೋಟಿ ಸದಸ್ಯತ್ವ ಹೊಂದುವ ಗುರಿ ಇದೆ. ಈ ವರೆಗೂ ಅರವತ್ತು ಲಕ್ಷ ನೊಂದಣಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಐದು ಲಕ್ಷ ವಾಲ್ ಪೇಂಟ್ ಮಾಡುತ್ತಿದ್ದೇವೆ. ಜನಸಂಕಲ್ಪ ಸಮಾವೇಶ ನಾಳೆ ಮಧ್ಯಾಹ್ನ ಎಂಕೆ ಹುಬ್ಬಳ್ಳಿಯಲ್ಲಿ ನಡೆಯಲಿದೆ. ಅಮಿತ್ ಶಾ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಲಿದ್ದಾರೆ. ಕಿತ್ತೂರು, ಖಾನಾಪುರ, ಬೈಲಹೊಂಗಲ ಕ್ಷೇತ್ರದ ಲಕ್ಷಾಂತರ ಜನ ಇದರಲ್ಲಿ ಭಾಗಿಯಾಗುತ್ತಾರೆ. ಬೆಳಗಾವಿ ಜಿಲ್ಲೆಗೆ ಬೂಸ್ಟರ್ ಡೋಸ್ ಕೊಡುವ ನಿಟ್ಟಿನಲ್ಲಿ ಸಂಜೆ ಸಭೆ ನಡೆಯಲುದೆ ಎಂದು ತಿಳಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಬಿಜೆಪಿ ಎಂಎಲ್ಸಿ ಹೆಚ್.ವಿಶ್ವನಾಥ್ ಭೇಟಿ ಮಾಡಿದ್ದಾರೆ. ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡ ಉಪಸ್ಥಿತರಿದ್ದರು. ಎಂಎಲ್ಸಿ ವಿಶ್ವನಾಥ್ ಕಾಂಗ್ರೆಸ್ ಸೇರಲು ಚಿಂತನೆ ನಡೆಸಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ರಾಜ್ಯಮಟ್ಟಣದ ವಿಜ್ಞಾನ ಮೇಳಕ್ಕೆ ಸಿಎಂ ಬೊಮ್ಮಾಯಿ ಚಾಲನೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಸಚಿವರಾದ ಅಶೋಕ್, ಗೋವಿಂದ ಕಾರಜೋಳ, ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದಾರೆ. ವಿಜ್ಞಾನ ಮೇಳದಲ್ಲಿ ವಸತಿ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ.
ಮೈಸೂರಿನ ಹಿನಕಲ್ನಲ್ಲಿ ನಿರ್ಮಾಣವಾಗಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಸಿದ್ದರಾಮಯ್ಯ ಅನಾವರಣಗೊಳಿಸಿದ್ದಾರೆ. ಸಿದ್ದರಾಮಯ್ಯಗೆ ಕಂಬಳಿ ಹೊದಿಸಿ ಗ್ರಾಮಸ್ಥರು ಸನ್ಮಾನಿಸಿದ್ದಾರೆ.
ಮಾಜಿ ಸಿಎಂ ಎಸ್.ಎಂ.ಕೃಷ್ಣಗೆ ಪದ್ಮವಿಭೂಷಣ ಗೌರವ ಹಿನ್ನೆಲೆ ಸದಾಶಿವನಗರದಲ್ಲಿರುವ ಎಸ್.ಎಂ.ಕೃಷ್ಣ ನಿವಾಸಕ್ಕೆ ಸಿಎಂ ಬೊಮ್ಮಾಯಿ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ. ಸಿಎಂ ಬೊಮ್ಮಾಯಿಗೆ ಸಚಿವರಾದ ಅಶೋಕ್, ಡಾ.ಸುಧಾಕರ್ ಸಾಥ್ ನೀಡಿದ್ದಾರೆ.
ಸಿದ್ದರಾಮುಲ್ಲಾಖಾನ್ ಎಂದು ಶಾಸಕ ಸಿ.ಟಿ.ರವಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಯಾದಗಿರಿ ನಗರದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ಕೌಂಟರ್ ಕೊಟ್ಟಿದ್ದಾರೆ. ಯಾದಗಿರಿಯ ಹಲವೆಡೆ ಕಲ್ಯಾಣ ಕರ್ನಾಟಕ ಸಿದ್ದು ಅಭಿಮಾನಿಗಳ ಬ್ರಿಗೇಡ್ನಿಂದ ಸಿದ್ದರಾಮಯ್ಯ ಹೆಸರಿನ ಕರಪತ್ರ ಹಂಚಿಕೆ ಮಾಡಲಾಗುತ್ತಿದೆ. ಅಲ್ಪಸಂಖ್ಯಾತರ ರಾಮಯ್ಯ, ಅನ್ನರಾಮಯ್ಯ, ಯುವಕರ ರಾಮಯ್ಯ, ಸಿಂಗಲ್ ಸಿಂಹ ರಾಮಯ್ಯ ಹೆಸರು ಇರುವ ಕರಪತ್ರಗಳ ಹಂಚಿಕೆಯಾಗುತ್ತಿದೆ.
ಸಂಸದೆ ಸುಮಲತಾ ಈಗ ಕಾದು ನೋಡುವ ತಂತ್ರ ಅನುಸರಿಸುತ್ತಾ ಇದ್ದಾರೆ. ಈಗಾಗಲೇ ಬಿಜೆಪಿ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಮಂಡ್ಯದಲ್ಲೇ ದೊಡ್ಡ ಕಾರ್ಯಕ್ರಮ ಮೂಲಕ ಬಿಜೆಪಿ ಸೇರ್ಪಡೆಗೆ ಮುಂದಾಗಿದ್ರು. ಆದರೆ ಈಗ ಟಿಕೆಟ್ ಸೇರಿದಂತೆ ಇನ್ನಿತರ ವಿಚಾರದ ಬಗ್ಗೆ ಕೇಸರಿ ಪಾಳಯ ಚರ್ಚೆ ನಡೆಸಿ ತೀರ್ಮಾನ ಮಾಡುವುದಾಗಿ ತಿಳಿಸಿದೆ. ಇನ್ನೊಂದೆಡೆ ಸ್ವತಂತ್ರವಾಗಿಯೇ ಉಳಿದರೆ ರಾಜಕೀಯ ಲಾಭ ನಷ್ಟದ ಲೆಕ್ಕಾಚರದಲ್ಲಿದ್ದಾರೆ. ಕಾಂಗ್ರೆಸ್ ಗೆ ಸೇರ್ಪಡೆ ಬಗ್ಗೆ ಸುಮಲತಾ ಅವರಿಗೆ ಅಷ್ಟು ಒಲವಿಲ್ಲ. ಈಗಾಗಲೇ ಹತ್ತು ಹಲವು ನಾಯಕರಿದ್ದು ಪರಿಸ್ಥಿತಿ ಅನುಕೂಲಕರವಾಗಿಲ್ಲ ಎಂಬುದು ಅವರ ಲೆಕ್ಕಾಚಾರವಾಗಿದೆ.
ಜನವರಿ 28 ರಂದು ಬೆಳಗಾವಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸರಣಿ ಸಭೆಗಳನ್ನು ನಡೆಸಲಿದ್ದಾರೆ. ಶನಿವಾರ ಸಂಜೆ 6.30 ರಿಂದ ರಾತ್ರಿ 10 ಗಂಟೆಯವರೆಗೆ ಬೆಳಗಾವಿಯ ಖಾಸಗಿ ಹೋಟೆಲ್ ನಲ್ಲಿ ಮೂರು ಸಭೆಗಳನ್ನು ನಡೆಸಲಿದ್ದಾರೆ.
ಜೆಡಿಎಸ್ ಭದ್ರಕೋಟೆ ಮಂಡ್ಯದಲ್ಲಿಂದು ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ನಡೆಯಲಿದೆ. ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ಸಭೆ ನಡೆಯಲಿದ್ದು ಸಮಾವೇಶದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಚೆಲುವರಾಯಸ್ವಾಮಿ, ನರೇಂದ್ರಸ್ವಾಮಿ ಸೇರಿ ಹಲವು ನಾಯಕರು ಭಾಗಿಯಾಗಲಿದ್ದಾರೆ.
ಇಂದು ತವರು ಜಿಲ್ಲೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಎರಡನೇ ದಿನದ ಪ್ರವಾಸ ಮುಂದುವರೆಸಿದ್ದಾರೆ. ಮೈಸೂರು ಮತ್ತು ವರುಣಾ ಕ್ಷೇತ್ರದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.
ಮಾಜಿ ಸಿಎಂ ಎಸ್.ಎಂ.ಕೃಷ್ಣಗೆ ಪದ್ಮವಿಭೂಷಣ ಘೋಷಣೆ ಹಿನ್ನೆಲೆ ಇಂದು ಬೆಂಗಳೂರಿನ ಸದಾಶಿವನಗರದ ನಿವಾಸಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಲಿದ್ದಾರೆ. ಎಸ್.ಎಂ.ಕೃಷ್ಣಗೆ ಅಭಿನಂದನೆ ಸಲ್ಲಿಸಲಿದ್ದಾರೆ. ಸಿಎಂಗೆ ಸಚಿವ ಆರ್.ಅಶೋಕ್ ಸಾಥ್ ನೀಡಲಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಕೇಂದ್ರ ಸಚಿವ ಅಮಿತ್ ಶಾ ಪ್ರವಾಸ ಹಿನ್ನೆಲೆ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಇಂದು ರಾತ್ರಿ ಹುಬ್ಬಳ್ಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಲಿದ್ದಾರೆ. ಇಂದು ರಾತ್ರಿ ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಬೆಳಗ್ಗೆ ಕುಂದಗೋಳದಲ್ಲಿ ಬಿಜೆಪಿ ಸಂಕಲ್ಪ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ನಾಳೆ ಮಧ್ಯಾಹ್ನ ಹುಬ್ಬಳ್ಳಿಯ ಕೆಎಲ್ಇ ಸಂಸ್ಥೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಂತರ ಧಾರವಾಡದಲ್ಲಿ ಎನ್‌ಎಫ್‌ಎಸ್ ಸೆಂಟರ್ ಲೋಕಾರ್ಪಣೆ ಮಾಡಲಿದ್ದಾರೆ.
ದೆಹಲಿ ತಾಲ್ ಕಟೋರಾ ಸ್ಟೇಡಿಯಂನಲ್ಲಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಜೊತೆ ಪ್ರಧಾನಿ ಮೋದಿ ಸಂವಾದ ನಡೆಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಸಂವಾದ ಶುರುವಾಗಲಿದ್ದು ಇದು ಡಿಡಿ ನ್ಯೂಸ್, ದೂರದರ್ಶನದಲ್ಲಿ ನೇರಪ್ರಸಾರವಾಗಲಿದೆ.
Pariksha Pe Charcha 2023: ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳು ಒತ್ತಡ ಮುಕ್ತವಾಗಿರಲು ಪ್ರಧಾನಿ ಮೋದಿಯಿಂದ ಭರವಸೆಯ ಮಂತ್ರ, ಎಲ್ಲಿ ಲೈವ್ ವೀಕ್ಷಿಸಬಹುದು#ParikshaPeCharcha #NarendraModi #exam #studentshttps://t.co/1QKxtSvueB
— TV9 Kannada (@tv9kannada) January 27, 2023
Published On - 10:03 am, Fri, 27 January 23