ಬೆಂಗಳೂರು, ಸೆ.28: ತಮಿಳುನಾಡಿಗೆ ಕಾವೇರಿ ನೀರು (Cauvery Water Dispute) ಹರಿಸುವುದನ್ನು ವಿರೋಧಿಸಿ ಇಂದು ಕರ್ನಾಟಕ ಬಂದ್‌ಗೆ (Karnataka Bandh) ಕರೆ ನೀಡಲಾಗಿದೆ. ಹೀಗಾಗಿ ಬೆಂಗಳೂರು (Bengaluru) ನಗರ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರು ಆದೇಶ ಹೊರಡಿಸಿದ್ದಾರೆ. ವಿಧ್ಯಾರ್ಥಿಗಳ ಹಿತದೃಷ್ಟಿಯಿಂದ ರಜೆ ಘೋಷಣೆ ಮಾಡಲಾಗಿದೆ.
ತಮಿಳುನಾಡಿಗೆ ಹರಿಬಿಡುತ್ತಿರುವ ಕಾವೇರಿ ನೀರಿನ ಬಗ್ಗೆ ಕನ್ನಡಿಗರಲ್ಲಿ ಆಕ್ರೋಶದ ಜ್ವಾಲೆ ಹೊತ್ತಿ ಉರಿಯುತ್ತಿದೆ. ಇದೇ ಮಂಗಳವಾರ ನೀಡಿದ್ದ ಬೆಂಗಳೂರು ಬಂದ್‌ಗೆ ಅಭೂತಪೂರ್ವ ಬೆಂಬಲ ಸಿಕ್ಕಿರುವ ಬೆನ್ನಲ್ಲೇ ಇದೀಗ ಇಂದು (ಸೆಪ್ಟೆಂಬರ್ 29) ಅಖಂಡ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಇಂದು ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಸೇವೆಗಳು ಸಿಗುವುದು ಅನುಮಾನವಾಗಿದೆ.
ಕನ್ನಡಪರ ಸಂಘಟನೆಗಳು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಬಂದ್ ನಡೆಯಲಿದೆ. ಮುಷ್ಕರ ನಡೆಸದಂತೆ ಸರ್ಕಾರ ಮನವಿ ಮಾಡಿದ್ದರೂ ಬಂದ್ ಮಾಡುವುದಾಗಿ ಸಂಘಟನೆಗಳು ಖಚಿತಪಡಿಸಿವೆ. ವರದಿಗಳ ಪ್ರಕಾರ, ಕರ್ನಾಟಕ ಬಂದ್‌ಗೆ 100 ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.
ಇದನ್ನೂ ಓದಿ: ಕರ್ನಾಟಕ ಬಂದ್‌ಗೆ ಬಿಗಿ ಭದ್ರತೆ; ಬಲವಂತದ ಬಂದ್ ಮಾಡಿಸಿದರೆ ಕಠಿಣ ಕ್ರಮದ ಎಚ್ಚರಿಕೆ
ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಕನ್ನಡ ಪರ ಸಂಘಟನೆಗಳು ಶುಕ್ರವಾರ ಬಹು ರಾಜ್ಯ ಹೆದ್ದಾರಿಗಳನ್ನು ಬಂದ್ ಮಾಡಲು ಯೋಜಿಸಿವೆ. ಕರ್ನಾಟಕ ಬಂದ್‌ನ ಸಂದರ್ಭದಲ್ಲಿ ಶುಕ್ರವಾರದಂದು ಬೆಂಗಳೂರು-ಹೊಸೂರು ಮುಖ್ಯರಸ್ತೆ, ಬೆಂಗಳೂರು-ಹೈದರಾಬಾದ್ ಹೆದ್ದಾರಿ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ, ಬೆಂಗಳೂರು-ಮೈಸೂರು ಹೆದ್ದಾರಿ, ಬೆಂಗಳೂರು-ತುಮಕೂರು ಹೆದ್ದಾರಿ, ಬೆಂಗಳೂರು-ಕನಕಪುರ ರಸ್ತೆ ಮತ್ತು ಮಂಡ್ಯ, ರಾಮನಗರ, ಮೈಸೂರಿನ ಪ್ರಮುಖ ರಸ್ತೆಗಳ ತಡೆಗೆ ಸಂಘಟನೆಗಳು ಯೋಜನೆ ರೂಪಿಸಿವೆ ಎಂದು ಮೂಲಗಳು ತಿಳಿಸಿವೆ.
ಇತ್ತ ಪ್ರತಿಭಟನೆಗಳು ಶಾಂತಿಯುತವಾಗಿರುವಂತೆ ನೋಡಿಕೊಳ್ಳಲು ಪೊಲೀಸರು ಸನ್ನದ್ಧರಾಗಿದ್ದಾರೆ. ಯಾವುದೇ ಅಹಿತಕ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಭಾರೀ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:28 pm, Thu, 28 September 23