Karnataka Breaking Kannada News Highlights: ಲಾರಿ, ಕ್ರೇನ್ ಹಾಗೂ ಬೈಕ್ ನಡುವೆ ಸರಣಿ ಅಪಘಾತ
Breaking News Today Live Updates: ಬಿಜೆಪಿಗೆ ಬೇರೆ ಪಕ್ಷಗಳಿಂದ ಪಕ್ಷಾಂತರಗೊಂಡಿದ್ದ ಕೆಲವು ನಾಯಕರು ಬಿಜೆಪಿ ತೊರೆಯಲು ಮುಂದಾಗುತ್ತಿದ್ದಾರೆ ಎನ್ನಲಾಗಿದೆ. ಎಸ್ಟಿ ಸೋಮಶೇಖರ್ ಅವರು ಇಂದು ಬೆಂಬಲಿಗರೊಂದಿಗೆ ಸಭೆ ನಡೆಸಿದ್ದಾರೆ. ಇದೀಗ ಶಿವರಾಮ್ ಹೆಬ್ಬಾರ್ ಅವರೂ ಕಾಂಗ್ರೆಸ್ ಸೇರುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ಸ್ವತಃ ಅವರೇ ಸ್ಪಷ್ಟನೆ ನೀಡಿದ್ದಾರೆ.
ಬಿಬಿಎಂಪಿ ಗುತ್ತಿಗೆದಾರರ ಬಾಕಿ ಬಿಲ್ ಪಾವತಿ ವಿಚಾರವಾಗಿ ಇಂದು(ಆ.17) ಬೆಂಗಳೂರು ವ್ಯಾಪ್ತಿಯ ಬಿಜೆಪಿ ಶಾಸಕರ ಜೊತೆ ಬಿಎಸ್ ಯಡಿಯೂರಪ್ಪ ಸಭೆ ನಡೆಸುವ ಸಾಧ್ಯತೆಯಿದೆ. ಇನ್ನು ಉಮಾಶ್ರೀ, ಸೀತಾರಾಮ್, ಸುಧಾಮ್ ದಾಸ್ ಅವರ ಹೆಸರನ್ನು ವಿಧಾನ ಪರಿಷತ್ಗೆ ನಾಮನಿರ್ದೇಶನ ಮಾಡಲಾಗಿದ್ದು, ಸಿದ್ದರಾಮಯ್ಯ ಅವರು ಮೂವರ ಹೆಸರನ್ನು ಅಂತಿಮಗೊಳಿಸಿ ಪಟ್ಟಿಯನ್ನು ರಾಜ್ಯಪಾಲರಿಗೆ ಕಳುಹಿಸಿದ್ದಾರೆ. ಚಂದ್ರಯಾನ-3 ನೌಕೆಯಿಂದ ಇಂದು ಮತ್ತೊಂದು ಪ್ರಕ್ರಿಯೆ ನಡೆಯಲಿದ್ದು, ನೌಕೆಯಿಂದ ಲ್ಯಾಂಡರ್ ಪ್ರತ್ಯೇಕಗೊಳ್ಳಲಿದೆ. ಇನ್ನು ಬಿಬಿಎಂಪಿ ಕೇಂದ್ರ ಕಚೇರಿ ಆವರಣದ ಲ್ಯಾಬ್ನಲ್ಲಿ ಬೆಂಕಿ ಪ್ರಕರಣದ ಕುರಿತು ಇಂದಿನಿಂದ ಆಂತರಿಕ ತನಿಖೆ ಅಧಿಕೃತವಾಗಿ ಆರಂಭವಾಗಲಿದೆ. ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ ಪ್ರಮುಖ ಸುದ್ದಿಗಳ ಕ್ಷಣ ಕ್ಷಣದ ಮಾಹಿತಿಗಾಗಿ ಟಿವಿ9 ಲೈವ್ ಫಾಲೋ ಮಾಡಿ.
LIVE NEWS & UPDATES
-
Karnataka Kannada News Live: ಪುನರ್ ಪರಿಶೀಲಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮನವಿ: ಡಿಕೆ ಶಿವಕುಮಾರ್
ರಾಜ್ಯದಿಂದ ತಮಿಳುನಾಡಿಗೆ ಹೆಚ್ಚುವರಿ ನೀರು ಬಿಡುಗಡೆ ವಿಚಾರವಾಗಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ನಿರ್ಧಾರ ಪುನರ್ ಪರಿಶೀಲಿಸಲು ಪ್ರಾಧಿಕಾರಕ್ಕೆ ಮನವಿ ಮಾಡುತ್ತೇವೆ ಎಂದರು. ಪ್ರತಿನಿತ್ಯ 10,000 ಕ್ಯೂಸೆಕ್ಸ್ ನಂತೆ 15 ದಿನಗಳ ಕಾಲ ತಮಿಳುನಾಡಿಗೆ ನೀರು ಹರಿಸುವ ನಿರ್ಧಾರ ಪುನರ್ ಪರಿಶೀಲಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮನವಿ ಮಾಡಲಾಗುವುದು. ನಮ್ಮಲ್ಲಿ ಮಳೆ ಕೊರತೆಯಿಂದ ನೀರಿನ ಅಭಾವ ಹೆಚ್ಚಾಗಿದೆ. ಆದರೂ ಆರಂಭದಲ್ಲಿ ನಾವು ತಮಿಳುನಾಡಿಗೆ ನೀರು ಹರಿಸಿದ್ದೇವೆ. ಆದರೂ ಅವರನ್ನು ತೃಪ್ತಿಪಡಿಸಲು ಆಗುತ್ತಿಲ್ಲ. ನಮಗೆ ಕೃಷಿ ಉದ್ದೇಶಕ್ಕಿಂತ ಕುಡಿಯುವ ಉದ್ದೇಶಕ್ಕೆ ನೀರು ಇಟ್ಟುಕೊಳ್ಳುವುದು ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾಧಿಕಾರಕ್ಕೆ ನಿರ್ಧಾರ ಪುನರ್ ಪರಿಶೀಲಿಸುವಂತೆ ಮನವಿ ಮಾಡುತ್ತೇವೆ ಎಂದರು.
-
Karnataka Kannada News Live: ದಿ. ದೇವರಾಜು ಅರಸು ಪ್ರಶಸ್ತಿಗೆ ಕಾಗೋಡು ತಿಮ್ಮಪ್ಪ ಆಯ್ಕೆ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನೀಡಲಾಗುವ ದಿ. ದೇವರಾಜು ಅರಸು ಪ್ರಶಸ್ತಿಗೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಆಯ್ಕೆಯಾಗಿದ್ದಾರೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಆಗಸ್ಟ್ 20 ರಂದು ನಡೆಯಲಿರುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
-
Karnataka Kannada News Live: ವೀರಸಂದ್ರ ಬಳಿ ಸರಣಿ ಅಪಘಾತ, ಬೈಕ್ ಸವಾರ ಸಾವು
ಆನೇಕಲ್: ಲಾರಿ, ಕ್ರೇನ್ ಹಾಗೂ ಬೈಕ್ ನಡುವೆ ಸರಣಿ ಅಪಘಾತ ಸಂಭವಿಸಿದ ಘಟನೆ ಬೆಂಗಳೂರು- ಹೊಸೂರು ಹೆದ್ದಾರಿಯ ವೀರಸಂದ್ರ ಬಳಿ ನಡೆದಿದೆ. ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬೈಕ್ ಸವಾರ ಸತ್ಯಂ ಪಾಟೀಲ್ (26) ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Karnataka Kannada News Live: ಕೆಪಿಸಿಸಿ ಕಚೇರಿಯಲ್ಲಿ ನಾಳೆ ಸುದ್ದಿಗೋಷ್ಠಿ
ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷರಾದ ರಮೇಶ್ ಬಾಬು ಅವರು ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ವಕ್ತಾರರಾದ ಎಂ. ಲಕ್ಷ್ಮಣ್ ಅವರು ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಾಳೆ 12.30 ಗಂಟೆಗೆ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಲಿದ್ದಾರೆ.
Karnataka Kannada News Live: ಗರ್ಭಧರಿಸಿದ ಆಕಳನ್ನು ಬಲಿ ಪಡೆದ ಹುಲಿ
ಕಾರವಾರ: ಗರ್ಭಧರಿಸಿದ ಆಕಳಿನ ಮೇಲೆ ಹುಲಿಯೊಂದು ದಾಳಿ ನಡೆಸಿ ಕೊಂದು ಹಾಕಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತ್‌ನ ಕೊಂಬಾ ಹಳ್ಳಿಯಲ್ಲಿ ನಡೆದಿದೆ. ಶ್ರೀನಿವಾಸ ಭಟ್ಟ ಎಂಬವರಿಗೆ ಸೇರಿದ್ದ ಆಕಳು, ಮನೆ ಪಕ್ಕದ ಬೇಣದಲ್ಲಿ ಮೇವು ತಿನ್ನಿತ್ತಿದ್ದಾಗ ಹುಲಿ ದಾಳಿ ನಡೆಸಿ ಸೊಪ್ಪಿನ ಬೆಟ್ಟದಿಂದ ಸುಮಾರು ಅರ್ಧ ಕಿ.ಮೀ.ದೂರದ ವರಗೆ ಎಳೆದೊಯ್ದಿದೆ. ಆಕಳಿನ ಮೃತ ದೇಹ ಕಂಡು ರೈತ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂದಗದ್ದಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಜನ ಎಚ್ಚರವಾಗಿರುವಂತೆ ಸೂಚನೆ ನೀಡಿದ್ದಾರೆ.
Karnataka Kannada News Live: ಹಾರಂಗಿ ಡ್ಯಾಂ ಇಂಜಿನಿಯರ್ ರಘುಪತಿ ಬಳಿ ಕೋಟಿ ಕೋಟಿ ಆಸ್ತಿ ಪತ್ತೆ
ಮೈಸೂರು: ಹಾರಂಗಿ ಡ್ಯಾಂ ಇಂಜಿನಿಯರ್ ರಘುಪತಿ ಬಳಿ ಕೋಟಿ ಕೋಟಿ ಆಸ್ತಿ ಪತ್ತೆಯಾಗಿದೆ. ಮೈಸೂರಿನ ವಿಜಯನಗರದ 4ನೇ ಹಂತದ ಮನೆ ಮೇಲೆ ನಡೆದ ದಾಳಿ ವೇಳೆ, 800 ಗ್ರಾಂ ಚಿನ್ನಾಭರಣ, 4 ಕೆಜಿ ಬೆಳ್ಳಿ ವಸ್ತುಗಳು, 2.9 ಕೋಟಿ ಮೌಲ್ಯದ ಸ್ಥಿರಾಸ್ತಿ, 1.32 ಕೋಟಿ ಮೌಲ್ಯದ ಚರಾಸ್ತಿ ಪತ್ತೆಯಾಗಿದೆ.
Karnataka Kannada News Live: ತಹಶೀಲ್ದಾರ್ ಮನೆ ಮೇಲೆ ನಡೆದ ಲೋಕಾಯುಕ್ತ ದಾಳಿ ಅಂತ್ಯ
ದೇವನಹಳ್ಳಿ: ತಹಶೀಲ್ದಾರ್ ಮನೆ ಮೇಲೆ ನಡೆದ ಲೋಕಾಯುಕ್ತ ದಾಳಿ ಅಂತ್ಯಗೊಂಡಿದೆ. ಸತತ 11 ಗಂಟೆಗಳ ಪರಿಶೀಲನೆ ಬಳಿಕ ಅಧಿಕಾರಿಗಳು ಓಜೋನ್ ಅಪಾರ್ಟ್ಮೆಂಟ್ನ ಫ್ಲ್ಯಾಟ್ನಿಂದ ತೆರಳಿದ್ದಾರೆ. ದಾಳಿ ವೇಳೆ ಸಿಕ್ಕ ಕೆಲವು ಮಹತ್ವದ ದಾಖಲೆ ಪತ್ರಗಳನ್ನು ಕೂಡ ವಶಕ್ಕೆ ಪಡೆದು ಕೊಂಡೊಯ್ದಿದ್ದಾರೆ.
Karnataka Kannada News Live: ಸಿಎಂ, ಡಿಸಿಎಂ ಸಭೆ ಆರಂಭ
ಮಧ್ಯಾಹ್ನದ ಭೋಜನದ ಬಳಿಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸಭೆ ಆರಂಭಗೊಂಡಿದೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಮೈಸೂರು ಜಿಲ್ಲೆಯ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ. ಮೈಸೂರು ಪಾಲಿಕೆಯನ್ನೂ ಗೆಲ್ಲುವ ಬಗ್ಗೆ, ಶಾಸಕರು ಮತ್ತು ಜಿಲ್ಲಾ ಮಂತ್ರಿಗಳೊಂದಿಗೆ ಸಮನ್ವಯ ತರುವುದು ಸೇರಿದಂತೆ ಅನೇಕ ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.
Karnataka Kannada News Live: ಕಾಂಗ್ರೆಸ್ ಸೇರುವ ಕಾಲ ಇನ್ನೂ ನಿರ್ಣಯವಾಗಿಲ್ಲ: ಶಿವರಾಂ ಹೆಬ್ಬಾರ್
ಕಾಂಗ್ರೆಸ್ ಪಕ್ಷಕ್ಕೆ ಹಿಂದಿರುಗುವ ಬಗ್ಗೆ ಯಾವ ಚರ್ಚೆಯೂ ನಡೆದಿಲ್ಲ ಎಂದು ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿ ಶಾಸಕ ಶಿವರಾಂ ಹೆಬ್ಬಾರ್ ಹೇಳಿಕೆ ನೀಡಿದ್ದಾರೆ. ಕ್ಷೇತ್ರದ ಜನರನ್ನು ಬಿಟ್ಟು ನಾನು ಯಾವುದೇ ರಾಜಕಾರಣ ಮಾಡಲ್ಲ, ಒಂದು ವೇಳೆ ಸಂದರ್ಭ ಬಂದರೆ ಕ್ಷೇತ್ರದ ಜನರೊಂದಿಗೆ ಚರ್ಚಿಸುತ್ತೇನೆ. ಯಾಕೆಂದರೆ ನಮ್ಮ ಹಣೆಬರಹ ಬರೆಯುವವರು ನನ್ನ ಕ್ಷೇತ್ರದ ಜನರು. ಕಾಂಗ್ರೆಸ್ ಸೇರುವ ಕಾಲ ಇನ್ನೂ ನಿರ್ಣಯವಾಗಿಲ್ಲ ಎಂದರು.
Karnataka Kannada News Live: ಆರ್‌ಎಫ್‌ಒ ಸತೀಶ್ ಮನೆಯಲ್ಲಿ ಏನೆಲ್ಲಾ ಪತ್ತೆಯಾಗಿದೆ?
ಆರ್‌ಎಫ್‌ಒ ಸತೀಶ್ ಮನೆ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳಿಂದ ಪರಿಶೀಲನೆ ಮುಂದುವರಿಸಿದೆ. ಚನ್ನಗಿರಿ, ಶಿವಮೊಗ್ಗ ನಗರದ ನಿವಾಸದಲ್ಲಿ ಪರಿಶೀಲನೆ ನಡೆಸಲಾಗುತ್ತಿದ್ದು, ಸುಮಾರು 2-3 ಕೋಟಿ ರೂ. ಮೌಲ್ಯದ ಆಸ್ತಿ ದಾಖಲಾತಿಗಳು, ಒಂದು ಮನೆ, ನಾಲ್ಕು ಕಾರು, 2 ಬೈಕ್, ಚಿನ್ನ ಅಡವಿಟ್ಟ ದಾಖಲೆಗಳು ಪತ್ತೆಯಾಗಿದೆ. ಹಣ, ಚಿನ್ನ ಪತ್ತೆಯಾಗಿಲ್ಲ. ಸತೀಶ್ ವಿರುದ್ಧ ಇಲಾಖಾ ತನಿಖೆ ಕೇಸ್‌ಗಳು ಬಾಕಿ ಇರುವುದು ಪತ್ತೆಯಾಗಿದೆ. ಇವರು ಬಂಡೀಪುರ ಸೇರಿದಂತೆ ಹತ್ತಾರು ಕಡೆ ಸೇವೆ ಸಲ್ಲಿಸಿದ್ದರು. ಬೆಳಗ್ಗೆಯಿಂದ ಶಿವಮೊಗ್ಗದ ಡಾಲರ್ಸ್ ಕಾಲೋನಿ ನಿವಾಸದಲ್ಲಿದ್ದ ಸತೀಶ್, ಈಗ ಎದೆ ನೋವು ಎಂದು ಆಸ್ಪತ್ರೆಗೆ ತೆರಳಿದ್ದಾರೆ.
Karnataka Breaking Kannada News Live: ಸೀತಾರಾಂ, ಸುದಾಮದಾಸ್ರಿಂದ ಪಕ್ಷಕ್ಕೆ ಅಳಿಸು ಸೇವೆ: ಪ್ರಿಯಾಂಕ್ ಖರ್ಗೆ
ಉಮಾಶ್ರೀ, ಸೀತಾರಾಂ, ಸುದಾಮದಾಸ್ ನಾಮನಿರ್ದೇಶನಕ್ಕೆ ಕಾರ್ಯಕರ್ತರು ಆಕ್ಷೇಪ ಮಾಡುತ್ತಿರುವ ಬಗ್ಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಅವರು ಪಕ್ಷಕ್ಕೆ ಅಳಿಲು ಸೇವೆ ಸಲ್ಲಿಸಿದ್ದಾರೆ. ನಾನು ಸಹ ಪಕ್ಷಕ್ಕೆ ಅಳಿಲು ಸೇವೆ ಸಲ್ಲಿಸಿದ್ದೇನೆ. ಹೀಗಾಗಿ ನನಗೂ ಒಂದು ಸ್ಥಾನ ನೀಡಿದ್ದಾರೆ. ಸುದಾಮದಾಸ್, ಉಮಾಶ್ರೀ, ಸೀತಾರಾಂ ಅವರು ಸಹ ಅಳಿಲು ಸೇವೆ ಸಲ್ಲಿಸಿದ್ದಾರೆ. ಅವರ ನಾಮನಿರ್ದೇಶನಕ್ಕೆ ಹೈಕಮಾಂಡ್ ನಿರ್ಧಾರ ಮಾಡಿದೆ. ಹೈಕಮಾಂಡ್ ಆದೇಶಕ್ಕೆ ಗೌರವ ಕೊಡಬೇಕು. ಹಲವರಿಗೆ ಇದರಿಂದ ಅವಕಾಶ ಸಿಗದಿರಬಹುದು. ಆದರೆ ಪಕ್ಷದ ತೀರ್ಮಾನವೇ ಅಂತಿಮ ಎಂದರು.
Karnataka Breaking Kannada News Live: ಸಮರ್ಪಕವಾಗಿ ವಿದ್ಯುತ್ ನೀಡುವಂತೆ ಒತ್ತಾಯಿಸಿ ರೈತರ ಪ್ರತಿಭಟನೆ
ಗದಗ: ಸಮರ್ಪಕವಾಗಿ ವಿದ್ಯುತ್ ನೀಡುವಂತೆ ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸಿದ್ದಾರೆ. ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ಬಳಿ ಇರುವ ವಿದ್ಯುತ್ ಸರಬರಾಜು ಮಾಡುವ ಹೆಸ್ಕಾಂ ಗ್ರೀಡ್‌ಗೆ ಮುತ್ತಿಗೆ ಹಾಕಿದ ರೈತರು, ಆಕ್ರೋಶ ಹೊರಹಾಕಿದರು. ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ, ದೊಡ್ಡೂರು ತಾಂಡಾ, ಬಾಲೆಹೊಸೂರು, ಸುರ್ಣಗಿರಿ, ಗ್ರಾಮದ ರೈತರು, ಮಳೆ ಕೊರತೆಯಿಂದ ರೈತರು ಬೆಳೆದ ಬೆಳೆಗಳು ಒಣಗುತ್ತಿವೆ. ಬೋರವೇಲ್ ಮೂಲಕ ನೀರು ಹರಿಸಲು ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಮೊದಲು ಏಳು ಗಂಟೆ ವಿದ್ಯುತ್ ನೀಡುತ್ತಿದ್ದರು, ಈವಾಗ ಮೂರು ಗಂಟೆ ಮಾತ್ರ ನೀಡುತ್ತಿದ್ದಾರೆ. ಹೀಗಾಗಿ ಸಮರ್ಪಕವಾಗಿ ವಿದ್ಯುತ್ ನೀಡುವಂತೆ ರೈತರ ಒತ್ತಾಯಿಸಿದ್ದಾರೆ. ಸಮರ್ಪಕ ವಿದ್ಯುತ್ ನೀಡದಿದ್ದರೆ ಉಗ್ರ ಹೋರಾಟದ ಎಚ್ಚರಿಕೆಯೂ ನೀಡಿದ್ದಾರೆ.
Karnataka Breaking Kannada News Live: ಮೈಸೂರು ಮಹಾನಗರ ಪಾಲಿಕೆಗೆ ಐವರು ಸದಸ್ಯರ ನಾಮನಿರ್ದೇಶನ
ಮೈಸೂರು ಮಹಾನಗರ ಪಾಲಿಕೆಗೆ ಐವರು ಸದಸ್ಯರ ನಾಮನಿರ್ದೇಶನ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕಾಂಗ್ರೆಸ್ ಕಾರ್ಯಕರ್ತರಾದ ಶ್ರೀನಿವಾಸ್ ಮೂರ್ತಿ, ಕಲ್ಪನಾ, ಆರ್.ಹೆಚ್.ಕುಮಾರ್, ಎಂ.ಯು.ಬಾಲರಾಜ್, ಸಿ.ನಿರಾಲ್ ಅವರನ್ನು ಅಧಿಕಾರೇತರ ಸದಸ್ಯರಾಗಿ ನೇಮಕ ಮಾಡಲಾಗಿದೆ.
Karnataka Breaking Kannada News Live: ಮುಂದೆ ಕಾನೂನಿನಡಿ ಹೇಗೆ ಮುಂದುವರಿಯಬೇಕೆಂದು ನೋಡುತ್ತೇವೆ: ಮಂಜುನಾಥ್
28 ತಿಂಗಳ ಬಾಕಿ ಬಿಲ್ ಸಂಬಂಧ ರಾಜ್ಯಪಾಲರಿಗೆ ಮನವಿ ಕೊಟ್ಟಿದ್ದೆವು. ಈ ಬಗ್ಗೆ ಸಿಎಂ, ಡಿಸಿಎಂ ಜೊತೆ ಮಾತಾಡುತ್ತೇವೆ ಎಂದು ರಾಜ್ಯಪಾಲರು ಹೇಳಿದ್ದರು ಎಂದು ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಹೇಳಿದ್ದಾರೆ. ಪತ್ರದ ಬಗ್ಗೆ ಎಸಿಪಿ ಕರೆ ಮಾಡಿ ಪತ್ರದ ಬಗ್ಗೆ ವಿವರಣೆ ಪಡೆದಿದ್ದಾರೆ. ಎಷ್ಟು ತಿಂಗಳು ಬಾಕಿ ಸೇರಿದಂತೆ ಎಲ್ಲ ಮಾಹಿತಿಯನ್ನು ಪಡೆದಿದ್ದಾರೆ. 50ಕ್ಕೂ ಹೆಚ್ಚು ಗುತ್ತಿಗೆದಾರರನ್ನು ಕರೆದು ವಿವರಣೆ ಪಡೆದಿದ್ದಾರೆ. ಗುತ್ತಿಗೆದಾರರ ಬಾಕಿ ಬಿಲ್ ಪಾವತಿಗೆ ಒತ್ತಾಯಿಸಲು ಪತ್ರ ಬರೆದಿದ್ದೇವೆ. ದೂರು ಕೊಟ್ಟಿದ್ದೇವೆ, ಅದರ ಬಗ್ಗೆ ಮಾಹಿತಿ ಪಡೆದಿದ್ದಾರೆ ಅಷ್ಟೇ. ಬಿಬಿಎಂಪಿಯವರು ನೀಡಿದ ದೂರು ವಿಚಾರ ನಮಗೆ ಗೊತ್ತಿಲ್ಲ. ಮುಂದೆ ಕಾನೂನಿನಡಿ ಹೇಗೆ ಮುಂದುವರಿಯಬೇಕೆಂದು ನೋಡುತ್ತೇವೆ ಎಂದರು.
Karnataka Breaking Kannada News Live: ಚಂದ್ರಯಾನ-3 ನೌಕೆಯ ಮತ್ತೊಂದು ಮಹತ್ವದ ಯಶಸ್ವಿ ಪ್ರಕ್ರಿಯೆ; ಯಶಸ್ವಿಯಾಗಿ ಬೇರ್ಪಟ್ಟ ವಿಕ್ರಮ್ ಲ್ಯಾಂಡರ್
ದೆಹಲಿ: ಚಂದ್ರಯಾನ-3 ನೌಕೆಯ ಮತ್ತೊಂದು ಮಹತ್ವದ ಯಶಸ್ವಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅದರಂತೆ ನೌಕೆಯಿಂದ ಯಶಸ್ವಿಯಾಗಿ ವಿಕ್ರಮ್ ಲ್ಯಾಂಡರ್ ಬೇರ್ಪಟ್ಟಿದೆ. ಇನ್ನು ಈ ಲ್ಯಾಂಡರ್ ನೌಕೆಯಿಂದ ಬೇರ್ಪಟ್ಟು ಪ್ರತ್ಯೇಕವಾಗಿ ಸಂಚರಿಸುತ್ತದೆ. ಇದೀಗ ಚಂದ್ರನ ದಕ್ಷಿಣ ಧ್ರುವದತ್ತ ವಿಕ್ರಮ್ ಲ್ಯಾಂಡರ್ ತೆರಳುತ್ತಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮಾಹಿತಿ ನೀಡಿದೆ.
Karnataka Breaking Kannada News Live: ಮೈಸೂರಿನಲ್ಲಿ ಅತಿಥಿ ಉಪನ್ಯಾಸಕರಿಂದ ಪ್ರತಿಭಟನೆ
ಮೈಸೂರು: ಇಂದು(ಆ.17) ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮೈಸೂರು ವಿಶ್ವ ವಿದ್ಯಾಲಯ ಪರೀಕ್ಷಾಂಗ ಭವನದ ಬಳಿ ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಹೌದು, ಉಪನ್ಯಾಸಕರು ಪದವಿ ಪರೀಕ್ಷೆಗಳ ಮೌಲ್ಯಮಾಪನ ಕಾರ್ಯವನ್ನು ಸ್ಥಗಿತಗೊಳಿಸಿ, ಪ್ರತಿಭಟನೆಗೆ ಮುಂದಾಗಿದ್ದು, ವಿವಿಯಿಂದ ನೀಡುವ ಪರೀಕ್ಷಾ ಭತ್ಯೆ ಹಾಗೂ ಮೌಲ್ಯಮಾಪನ ಭತ್ಯೆ ನೀಡಬೇಕು ಎಂದು ಭೇಡಿಕೆ ಇಟ್ಟಿದ್ದಾರೆ.
Karnataka Breaking Kannada News Live: ಬುದ್ದಿ ಜೀವಿಗಳು ಎನ್ನುವ ಪದವೇ ಸರಿ ಸಲ್ಲ, ಅವರಿಗೆ ರಕ್ಷಣೆ ಕೊಡೋ ಅಗತ್ಯ ಇಲ್ಲ; ಪ್ರಮೋದ್ ಮುತಾಲಿಕ್
ಹುಬ್ಬಳ್ಳಿ: ಬುದ್ದಿ ಜೀವಿಗಳ ಮೇಲೆ ಜೀವ ಬೆದರಿಕೆ ವಿಚಾರ ‘ಬುದ್ದಿ ಜೀವಿಗಳು ಎನ್ನುವ ಪದವೇ ಸರಿ ಸಲ್ಲ, ಅವರಿಗೆ ರಕ್ಷಣೆ ಕೊಡೋ ಅಗತ್ಯ ಇಲ್ಲ ಎಂದು ಹುಬ್ಬಳ್ಳಿಯಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಇವರಿಗೆ ರಕ್ಷಣೆ ನೆನಪಾಗತ್ತೆ. ಇದು ಬುದ್ದಿಜೀವಿಗಳ ನಿರ್ಲಜ್ಜತನ. ಬುದ್ದಿಜೀವಿಗಳು ಹಸಿ ಸುಳ್ಳು ಹೇಳುತ್ತಿದ್ದಾರೆ ಎಂದಿದ್ದಾರೆ.
Karnataka Breaking Kannada News Live: ಶ್ರಾವಣ ಮಾಸ ಆರಂಭ; ಪ್ರತಿದಿನ ದೇವಿಗೆ ಎರಡು ಸಲ ವಿಶೇಷ ಪೂಜೆ, ಅಲಂಕಾರ
ಬೆಳಗಾವಿ: ಉತ್ತರ ಕರ್ನಾಟಕದಲ್ಲಿ ಶ್ರದ್ಧಾ, ಭಕ್ತಿಯಿಂದ ಶ್ರಾವಣ ಮಾಸದ ಆಚರಣೆ ಮಾಡಲಾಗುತ್ತಿದ್ದು, ಶ್ರಾವಣ ಮಾಸ ಆರಂಭ ಹಿನ್ನೆಲೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯಲ್ಲಮ್ಮನ ಗುಡ್ಡಕ್ಕೆ ಭಕ್ತರ ದಂಡು ಹರಿದು ಬಂದಿದೆ. ರಾತ್ರಿ 2 ಗಂಟೆಗೆ ದೇವಿಗೆ ವಿಶೇಷ ಪೂಜೆ, 4 ಗಂಟೆಯಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
Karnataka Breaking Kannada News Live: ಹ್ಯಾಕರ್ ಮೂಲಕ ಅಮೆಜಾನ್ ಕಂಪನಿಗೆ ಚೀಟಿಂಗ್ ಮಾಡ್ತಿದ್ದ ಆರೋಪಿಯ ಬಂಧನ
ಬೆಂಗಳೂರು: ಹ್ಯಾಕರ್ ಮೂಲಕ ಅಮೆಜಾನ್ ಕಂಪನಿಗೆ ಚೀಟಿಂಗ್ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಚಿರಾಗ್ ಗುಪ್ತಾ (22) ಬಂಧಿತ ಆರೋಪಿ. ಇತನಿಂದ ಸುಮಾರು 52 ಲಕ್ಷಕ್ಕೂ ಹೆಚ್ಚು ಮೌಲ್ಯದ ಐಫೋನ್ಗಳು ನಗದು ವಶಕ್ಕೆ ಪಡೆಯಲಾಗಿದೆ. ಮಲಯಾಳಂ ಸಿನಿಮಾ ಇನ್ಸಿಪಿರೇಷನ್ನಿಂದ ಅಮೆಜಾನ್ಗೆ ವಂಚನೆ ಮಾಡಿದ್ದಾನೆ. ಇನ್ನು ಇತ ಅಮೇರಿಕಾದಲ್ಲಿ ಕೂತು ಅಮೆಜಾನ್ಗೆ ವಂಚನೆ ಮಾಡುತ್ತಿದ್ದ.
Karnataka Breaking Kannada News Live: ಪ್ರಗತಿಪರರು, ಬುದ್ದಿಜೀವಿಗಳಿಗೆ ಬೆದರಿಕೆ ಕರೆ ವಿಚಾರ; ಅವರು ಬರೆದ ಪತ್ರವನ್ನ ಡಿಜಿಪಿಗೆ ಕಳುಹಿಸಿಕೊಡ್ತೀನಿ ಎಂದ ಸಚಿವ ಡಾ.ಜಿ. ಪರಮೇಶ್ವರ್
ಬೆಂಗಳೂರು: ಪ್ರಗತಿಪರರು, ಸಾಹಿತಿಗಳಿಗೆ ಅಪರಿಚಿತರಿಂದ ಜೀವ ಬೆದರಿಕೆ ಪತ್ರ ವಿಚಾರ ‘ಕೆಲ ಸಾಹಿತಿಗಳು ಸಮಯ ಕೇಳಿದ್ದಾರೆ, ಸಮಯ ನೀಡಿ ಭೇಟಿಯಾಗ್ತೇನೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಹೇಳಿದರು. ‘ಅವರು ಬರೆದ ಪತ್ರವನ್ನ ಡಿಜಿಪಿಗೆ ಕಳುಹಿಸಿಕೊಡ್ತೀನಿ. ನಾವು ಎಂಎಂ ಕಲ್ಬುರ್ಗಿ, ಗೌರಿಲಂಕೇಶ್ ಹತ್ಯೆ ಇನ್ನೂ ಮರೆತಿಲ್ಲ. ಅಂತಹ ಸಂದರ್ಭದಲ್ಲಿ ಥ್ರೆಟ್ ಬಂದಿದೆ ಅಂದ್ರೆ ಗಂಭಿರವಾಗಿ ತೆಗೆದುಕೊಳ್ಳಬೇಕಾಗುತ್ತೆ. ಈಗಾಗಲೇ ಕಮಿಷನರ್, ಡಿಜಿಪಿಗೆ ರಕ್ಷಣೆ ನೀಡುವಂತೆ ಸೂಚನೆ ಕೊಟ್ಟಿದ್ದೇನೆ ಎಂದರು.
Karnataka Breaking Kannada News Live: ಮಡಿಕೇರಿಯಲ್ಲಿ ಎಡಿಸಿ ನಂಜುಂಡೇಗೌಡ ಮನೆ ಮೇಲೆ ಲೋಕಾ ದಾಳಿ; 11.5 ಲಕ್ಷ ನಗದು ಪತ್ತೆ
ಕೊಡಗು: ಇಂದು ರಾಜ್ಯದ ಅನೇಕ ಕಡೆಗಳಲ್ಲಿ ಲೋಕಾಯುಕ್ತ ದಾಳಿ ಮಾಡಿದ್ದು, ಅದರಂತೆ ಮಡಿಕೇರಿಯಲ್ಲಿ ಎಡಿಸಿ ನಂಜುಂಡೇಗೌಡ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ಈ ವೇಳೆ ನಂಜುಂಡೇಗೌಡ ನಿವಾಸದಲ್ಲಿ 11.5 ಲಕ್ಷ ನಗದು ಪತ್ತೆಯಾಗಿದೆ. ಇದೀಗ ಲೋಕಾ ಅಧಿಕಾರಿಗಳು ಚಿನ್ನಾಭರಣ ಮೌಲ್ಯಮಾಪನ ಮಾಡುತ್ತಿದ್ದಾರೆ. ಜೊತೆಗೆ ನಂಜುಂಡೇಗೌಡ ಕಚೇರಿಯಲ್ಲೂ ತಪಾಸಣೆಗೆ ಅಧಿಕಾರಿಗಳ ಸಿದ್ಧತೆ ನಡೆಸಿದ್ದಾರೆ.
Karnataka Breaking Kannada News Live: ಬಸವಮೂರ್ತಿ ಮಾದಾರ ಚನ್ನಯ್ಯಶ್ರೀಗೆ ಮಾತೃ ವಿಯೋಗ
ಚಿತ್ರದುರ್ಗ: ಶಿವಶರಣ ಮಾದಾರ ಚನ್ನಯ್ಯ ಮಠದ ಶ್ರೀ ಮಾದಾರ ಚನ್ನಯ್ಯಶ್ರೀಗಳ ತಾಯಿ ಗಂಗಮ್ಮ(85) ಅವರು ವಯೋಸಹಜ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಹಿರೇಕಂದವಾಡಿ ಗ್ರಾಮದ ಬಳಿ ಇಂದು ಅಂತ್ಯಸಂಸ್ಕಾರ ಮಾಡಲಾಗುತ್ತದೆ.
Karnataka Breaking Kannada News Live: ಕೆಆರ್ಎಸ್ ಜಲಾಶಯದಿಂದ ಕಾವೇರಿ ನದಿಗೆ ಹೆಚ್ಚುವರಿ ನೀರು ಬಿಡುಗಡೆ ಮಾಡಿದ ರಾಜ್ಯ ಸರ್ಕಾರ
ಬೆಂಗಳೂರು: ತಮಿಳುನಾಡು ಸರ್ಕಾರದ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ ಇದೀಗ ಕೆಆರ್ಎಸ್ ಜಲಾಶಯದಿಂದ ಕಾವೇರಿ ನದಿಗೆ ಹೆಚ್ಚುವರಿ ನೀರು ಬಿಡುಗಡೆ ಮಾಡಿದೆ. ಆಗಸ್ಟ್ 13ರ ಬೆಳಗ್ಗೆ 5,243 ಕ್ಯೂಸೆಸ್ ನೀರು ಬಿಡಲಾಗುತ್ತಿತ್ತು. ಇಂದಿನಿಂದ ಕಾವೇರಿ ನದಿಗೆ 12,718 ಕ್ಯೂಸೆಕ್ ನೀರು ಬಿಡುಗಡೆ ಮಾಡಿದೆ.
Karnataka Breaking Kannada News Live: ರಾಜ್ಯಾದ್ಯಂತ 50 ಕಡೆ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ
ಬೆಂಗಳೂರು: ರಾಜ್ಯಾದ್ಯಂತ 50 ಕಡೆ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ ನಡೆಸಲಾಗಿದ್ದು, ಬೆಂಗಳೂರು ನಗರ ವ್ಯಾಪ್ತಿಯಲ್ಲೇ 23 ಕಡೆ ಲೋಕಾಯುಕ್ತ ರೇಡ್ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ, ತುಮಕೂರು, ಮೈಸೂರು, ಕೊಡಗು, ರಾಮನಗರ, ಚಿತ್ರದುರ್ಗ, ದಾವಣಗೆರೆ, ರಾಯಚೂರು, ಬೀದರ್, ಧಾರವಾಡ, ಬೆಳಗಾವಿ ಜಿಲ್ಲೆಯಲ್ಲಿ ಲೋಕಾಯುಕ್ತ ದಾಳಿ ಮಾಡಿ, ಪರಿಶೀಲನೆ ನಡೆಸುತ್ತಿದ್ದಾರೆ.
Karnataka Breaking Kannada News Live: ಗೂಡ್ಸ್ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಮತ್ತೊಬ್ಬ ವಿದ್ಯಾರ್ಥಿ ಚಿಕಿತ್ಸೆ ಫಲಿಸದೆ ಸಾವು
ರಾಮನಗರ: ಟ್ಯೂಷನ್ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಗೂಡ್ಸ್ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಮತ್ತೊಬ್ಬ ವಿದ್ಯಾರ್ಥಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ. ಸುಚೀತ್(10) ಮೃತ ವಿದ್ಯಾರ್ಥಿ. ಆಗಸ್ಟ್ 9ರಂದು ರಾಮನಗರ ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ಗೂಡ್ಸ್ ವಾಹನ ಹರಿದು ಶಾಲಿನಿ(8), ದರ್ಶನ್(5) ಸ್ಥಳದಲ್ಲೇ ಮೃತಪಟ್ಟರೆ, ಬದುಕುಳಿದಿದ್ದ ಸುಚೀತ್ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಇಂದು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಈ ಕುರಿತು ರಾಮನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Karnataka Breaking Kannada News Live: ಚಳ್ಳಕೆರೆ ಬಿಇಒ ಕಚೇರಿ ಆವರಣದ ಮರಕ್ಕೆ ನೇಣುಬಿಗಿದುಕೊಂಡು ಕೂಲಿ ಕಾರ್ಮಿಕ ಆತ್ಮಹತ್ಯೆ
ಚಿತ್ರದುರ್ಗ: ಚಳ್ಳಕೆರೆ ಬಿಇಒ ಕಚೇರಿ ಆವರಣದಲ್ಲಿ ಮರಕ್ಕೆ ನೇಣುಬಿಗಿದುಕೊಂಡು ಕೂಲಿ ಕಾರ್ಮಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರವಿಕುಮಾರ್(40) ಮೃತ ವ್ಯಕ್ತಿ. ರವಿಕುಮಾರ್ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಿಳಚೋಡು ಗ್ರಾಮದ ನಿವಾಸಿಯಾಗಿದ್ದು, ಚಳ್ಳಕೆರೆ ಪಟ್ಟಣದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ. ಈ ಕುರಿತು ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Karnataka Breaking Kannada News Live: ಚಾಮುಂಡಿ ಬೆಟ್ಟವನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಕ್ರಮ
ಮೈಸೂರು: ಚಾಮುಂಡಿಬೆಟ್ಟವನ್ನು ಕಸ ಹಾಗೂ ಪ್ಲಾಸ್ಟಿಕ್ ಮುಕ್ತ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಪ್ಲಾಸ್ಟಿಕ್ ಬಿಸಾಕಿದರೆ 500 ರೂ ದಂಡ ವಿಧಿಸಲಾಗುತ್ತದೆ. ಇನ್ನು ಚಾಮುಂಡಿಬೆಟ್ಟದ ಅಂಗಡಿಯವರಿಗೂ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಮೊದಲ ಬಾರಿಗೆ ತ್ಯಾಜ್ಯ ಬಿಸಾಡಿದರೆ 2,500 ದಂಡ, ಎರಡನೇ ಬಾರಿಗೆ 5 ಸಾವಿರ ಹಾಗೂ ಮೂರನೇ ಬಾರಿಗೆ 10 ಸಾವಿರ ಹಾಗೂ ಲೈಸನ್ಸ್ ರದ್ದು. ಇನ್ನು ಅರಣ್ಯದ ಒಳಗೆ ತೆರಳಿದರೆ 500 ದಂಡ, ನಿರ್ಬಂಧಿತ ಪ್ರದೇಶದಲ್ಲಿ ವಾಹನ ನಿಲುಗಡೆ ಮಾಡಿದರೆ 1 ಸಾವಿರ ದಂಡ ವಿಧಿಸಲು ಪ್ಲ್ಯಾನ್ ಮಾಡಲಾಗಿದ್ದು, ಸೆಪ್ಟೆಂಬರ್ 1 ರಿಂದ ಇದು ಜಾರಿಯಾಗಲಿದೆ ಎಂದು ಮೈಸೂರು ಅರಣ್ಯ ಸಂರಕ್ಷಣಾಧಿಕಾರಿಯವರು ಆದೇಶಿಸಿದ್ದಾರೆ.
Karnataka Breaking Kannada News Live: ಮೈಸೂರಿನಲ್ಲಿ ಮಾರಕಾಸ್ತ್ರ ಹೊಂದಿದ್ದ ವಿದ್ಯಾರ್ಥಿಗಳ ಬಂಧನ
ಮೈಸೂರು: ಮಾರಕಾಸ್ತ್ರ ಹೊಂದಿದ್ದ ವಿದ್ಯಾರ್ಥಿಗಳನ್ನು ಬಂಧನ ಮೈಸೂರು ಕುವೆಂಪು ನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರಿಂದ ಎರಡು ಲಾಂಗ್ ಹಾಗೂ ಕಾರು ವಶಕ್ಕೆ ಪಡೆದಿದ್ದಾರೆ. ರಾಮಕೃಷ್ಣನಗರದ ಸಮರ್ಥ (25), ಉತ್ಸವ್ (19) ಬಂಧಿತ ವಿದ್ಯಾರ್ಥಿಗಳು. ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನ ಜೊತೆ ಗಲಾಟೆಯಾಗಿದ್ದು, ಈ ಹಿನ್ನಲೆ ಸ್ನೇಹಿತರನ್ನು ಹೆದರಿಸಲು ಲಾಂಗ್ ಇಟ್ಟುಕೊಂಡಿದ್ದಾರೆ. ಈ ಕುರಿತು ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Karnataka Breaking Kannada News Live: ಪೊಲೀಸ್ ಕಾನ್ಸ್ಟೇಬಲ್ ಮನೆ ಮೇಲೆ ಲೋಕಾಯುಕ್ತ ದಾಳಿ
ಬೀದರ್: ರಾಜ್ಯದ ಹಲವು ಜಿಲ್ಲೆಗಳಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ ನಡೆಸಿದ್ದು, ಅದರಂತೆ ಬೀದರ್ ಜಿಲ್ಲೆಯ ಹುಮ್ನಾಬಾದ್ ಪಟ್ಟಣದ ಟೀಚರ್ ಕಾಲೋನಿಯ ಕಾನ್ಸ್ಟೇಬಲ್ ವಿಜಯಕುಮಾರ್ ಮನೆ ಮೇಲೂ ದಾಳಿ ಮಾಡಲಾಗಿದೆ. ಚಿಟಗುಪ್ಪ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಜಯಕುಮಾರ್, ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದಾರೆ.
Karnataka Breaking Kannada News Live: ಆದಾಯಕ್ಕೂ ಮೀರಿ ಅಕ್ರಮ ಆಸ್ತಿ ಸಂಪಾದನೆ ದೂರು; ಲೋಕಾಯುಕ್ತ ದಾಳಿ
ಬೆಂಗಳೂರು: ರಾಜ್ಯದ ಹಲವೆಡೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ ನಡೆಸಿದ್ದಾರೆ. ಚಿತ್ರದುರ್ಗದ ಹೊಳಲ್ಕೆರೆ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಕೆ.ಮಹೇಶ್, ಪತ್ನಿ BBMP ಎಇ ಹೆಚ್.ಭಾರತಿ ಮನೆ ಮೇಲೆ ಲೋಕಾಯುಕ್ತ ಎಸ್ಪಿ ವಾಸುದೇವರಾಮ್, ಡಿವೈಎಸ್ಪಿ ಮೃತ್ಯುಂಜಯ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ದಾವಣಗೆರೆಯ ಜಯನಗರದಲ್ಲಿರುವ ಮಹೇಶ್ ಮನೆ ಮೇಲೂ ದಾಳಿ ನಡೆಸಿ, ಪರಿಶೀಲಿಸುತ್ತಿದ್ದಾರೆ. ಆದಾಯಕ್ಕೂ ಮೀರಿ ಅಕ್ರಮ ಆಸ್ತಿ ಸಂಪಾದನೆ ದೂರು ಹಿನ್ನೆಲೆ ಲೋಕಾಯುಕ್ತ ದಾಳಿ ಮಾಡಲಾಗಿದೆ.
Karnataka Breaking Kannada News Live: ರಾಜ್ಯದ ಹಲವು ಜಿಲ್ಲೆಗಳಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ
ಬೆಂಗಳೂರು: ರಾಜ್ಯದ ಹಲವೆಡೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ ನಡೆಸಿದ್ದಾರೆ. ಚಿತ್ರದುರ್ಗ, ದಾವಣಗೆರೆ, ಮಡಿಕೇರಿ, ಬೀದರ್ ಜಿಲ್ಲೆಗಳಲ್ಲಿ ದಾಳಿ ನಡೆಸಿದ್ದು, ಬೆಂಗಳೂರಿನ BBMP ಕಚೇರಿ ಮೇಲೂ ದಾಳಿ ನಡೆಯುವ ಸಾಧ್ಯತೆಯಿದೆ. ಇನ್ನು ಆದಾಯಕ್ಕೂ ಮೀರಿ ಅಕ್ರಮ ಆಸ್ತಿ ಸಂಪಾದನೆ ದೂರು ಹಿನ್ನೆಲೆ ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತರ ದಾಳಿ ಮಾಡಿ ಪರಿಶೀಲನೆ ನಡೆಸಲಾಗುತ್ತಿದೆ.
Published On - Aug 17,2023 7:39 AM