ಬೆಂಗಳೂರು: ವೃದ್ಧೆಗೆ ವಂಚಿಸಿ ಮೂರುವರೆ ಕೋಟಿ ರೂ. ದೋಚಿದ್ದ ಖದೀಮರ ಗ್ಯಾಂಗ್ ಅರೆಸ್ಟ್
ಎಂಬಿಎ ಪದವೀಧರೆ ಆಗಿರುವ ಅಪೂರ್ವ ಯಾದವ್, ಇನ್ಶುರೆನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜೀವನಕ್ಕೆಂದು ಕೆಲಸವಿದ್ದರೂ ಈ ಆರೋಪಿಗಳು ವೃದ್ಧೆಯೊಬ್ಬರಿಂದ ಬರೋಬ್ಬರಿ ಮೂರುವರೆ ಕೋಟಿ ಹಣ ದೋಚಿದ್ದಾರೆ. ವೃದ್ಧೆಯನ್ನ ವಂಚಿಸಿ ಬ್ಯಾಂಕ್ ಮೂಲಕವೇ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ.
ಬೆಂಗಳೂರು, ಆ.16: ಸಿಲಿಕಾನ್ ಸಿಟಿ ಮಂದಿ ಎಚ್ಚರ..ಎಚ್ಚರ. ನಿಮ್ಮ ಮನೆಯಲ್ಲಿ ವಯೋವೃದ್ಧರಿದ್ರೆ, ಅವರ ಬ್ಯಾಂಕ್ ಖಾತೆಯಲ್ಲಿ ಕೋಟಿ ಕೋಟಿ ಹಣ ಇದ್ರೆ ಈ ಸುದ್ದಿಯನ್ನು ತಪ್ಪದೇ ಓದಿ. ಸಿಲಿಕಾನ್ ಸಿಟಿಯಲ್ಲಿ ವಂಚಕರ(Cheating) ಗುಂಪೊಂದು ಪೊಲೀಸರ ಬಲೆಗೆ ಬಿದ್ದಿದೆ. ಈ ಗುಂಪು ವಯೋವೃದ್ಧರನ್ನು ಗುರಿಯಾಗಿಸಿ ವಂಚನೆ ಮಾಡ್ತಾರೆ. ಸದ್ಯ ಬನಶಂಕರಿ ಪೊಲೀಸರು(Banashankari police) ಕುಟುಂಬ ಸಮೇತ ಖದೀಮರನ್ನು ಬಂಧಿಸಿದ್ದು ತನಿಖೆ ಮುಂದುವರೆದಿದೆ. ಮಾಜಿ ಬ್ಯಾಂಕ್ ಸಿಬ್ಬಂದಿ ಅಪೂರ್ವ ಯಾದವ್, ತಾಯಿ ವಿಶಾಲ, ಸ್ನೇಹಿತೆ ಅರುಂಧತಿ, ಅರುಂಧತಿ ಪತಿ ರಾಕೇಶ್ ಬಂಧಿತ ಆರೋಪಿಗಳು.
ಎಂಬಿಎ ಪದವೀಧರೆ ಆಗಿರುವ ಅಪೂರ್ವ ಯಾದವ್, ಇನ್ಶುರೆನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜೀವನಕ್ಕೆಂದು ಕೆಲಸವಿದ್ದರೂ ಈ ಆರೋಪಿಗಳು ವೃದ್ಧೆಯೊಬ್ಬರಿಂದ ಬರೋಬ್ಬರಿ ಮೂರುವರೆ ಕೋಟಿ ಹಣ ದೋಚಿದ್ದಾರೆ. ವೃದ್ಧೆಯನ್ನ ವಂಚಿಸಿ ಬ್ಯಾಂಕ್ ಮೂಲಕವೇ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ವೃದ್ಧೆಯೊಬ್ಬರನ್ನು ಬ್ಯಾಂಕ್ಗೆ ಕರೆದುಕೊಂಡು ಬಂದ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಒಂದು ದಿನ 2.20 ಕೋಟಿ, ಮತ್ತೊಂದು ದಿನ 1.30 ಕೋಟಿ ಹಣ ವರ್ಗಾವಣೆ ಮಾಡಿಕೊಂಡು ಅಪೂರ್ವ, ಅರುಂಧತಿ ಸೇರಿ ತಲಾ 1.75 ಕೋಟಿ ಹಂಚಿಕೊಂಡು ವೃದ್ಧೆಗೆ ಪಂಗನಾಮ ಹಾಕಿದ್ದಾರೆ. ಸದ್ಯ ಶಿವಮೊಗ್ಗ ಮೂಲದ ವಂಚಕರನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ.
ಈ ಗ್ಯಾಂಗ್ ಇಷ್ಟೊಂದು ಹಣ ದೋಚಿದ್ದು ಹೇಗೆ?
ಬನಶಂಕರಿ ಎರಡನೇ ಹಂತ, ಪದ್ಮನಾಭನಗರದಲ್ಲಿ ವಾಸವಿದ್ದ ವೃದ್ಧೆ ಶಾಂತಾ(65)ರ ಪತಿ ಇತ್ತೀಚೆಗಷ್ಟೆ ತೀರಿಕೊಂಡಿದ್ರು. ಇದನ್ನೇ ಬಂಡವಾಳ ಮಾಡಿಕೊಂಡ ಅರುಂಧತಿ ಮತ್ತು ರಾಕೇಶ್ ದಂಪತಿ ವೃದ್ಧೆ ಇದ್ದ ಮನೆಯನ್ನು ಮಾರಾಟ ಮಾಡಿಸುವ ಹುನ್ನಾರ ಮಾಡಿದ್ದಾರೆ. ಮನೆಯಲ್ಲಿ ದೋಷ ಇದೆ ಮಾರಾಟ ಮಾಡಿ ಬಿಡಿ ಎಂದು ನಂಬಿಸಿದ್ದಾರೆ. ಬ್ರೋಕರ್ ಮತ್ತು ಖರೀದಿದಾರರನ್ನೂ ತಾವೆ ಕರೆಸಿ ಮಾರಾಟ ಮಾಡಿದ್ದಾರೆ. ಮನೆ ಮಾರಾಟವಾಗುತ್ತಿದ್ದಂತೆ ಮೂರುವರೆ ಕೋಟಿ ಹಣ ವೃದ್ಧೆ ಶಾಂತಾರ ಖಾತೆಗೆ ವರ್ಗಾವಣೆಗೊಂಡಿದೆ. ಅಲ್ಲಿಂದಲೇ ಈ ಖದೀಮರ ಅಸಲಿ ಆಟ ಶುರುವಾಗಿದೆ. ಅರುಂಧತಿ ಮತ್ತು ಅಪೂರ್ವ ಗ್ಯಾಂಗ್ ಸೇರಿಕೊಂಡು ನಿಮ್ಮ ಪತಿಯ ಹೆಸರು ಷೇರು ಹಣ ಪಡೆಯಲು ನಿಮ್ಮ ಎಫ್ ಡಿ ಅಕೌಂಟ್ ಕ್ಲೋಸ್ ಮಾಡಿಸಬೇಕು ಎಂದು ವೃದ್ಧೆಗೆ ನಂಬಿಸಿ ಬ್ಯಾಂಕ್ ನಲ್ಲಿದ್ದ 1.90 ಕೋಟಿಯ ಎರಡು ಎಫ್ಡಿ ಅಕೌಂಟ್ ಕ್ಲೋಸ್ ಮಾಡಿಸಿದ್ದಾರೆ. ವೃದ್ಧೆಯಿಂದ ಐದಾರು ಚೆಕ್ ಪಡೆದು ಖಾಲಿ ಫಾರಂ ಗೆ ಸಹಿ ಪಡೆದುಕೊಂಡಿದ್ದಾರೆ.
ಎಲ್ಲಾ ಹಣವನ್ನು ಅಪೂರ್ವ ತಾಯಿ ವಿಶಾಲ ಅಕೌಂಟ್ ಗೆ ವರ್ಗಾವಣೆ ಮಾಡಿದ್ದಾರೆ. ಬಳಿಕ ಈ ಹಣದಿಂದ ತಮ್ಮ ಸಣ್ಣ ಪುಟ್ಟ ಸಾಲಗಳನ್ನು ತೀರಿಸಿಕೊಂಡಿದ್ದಾರೆ. ಅಪೂರ್ವ ಮಾವ ಶಿವಮೊಗ್ಗದಲ್ಲಿ ರೆಸಾರ್ಟ್ ಹೊಂದಿದ್ದ. ಅದಕ್ಕಾಗಿ ಬ್ಯಾಂಕ್ ನಿಂದ ಸಾಲ ಪಡೆದಿದ್ದ. ಸಾಲ ತೀರಿಸಲಾಗದೆ ಮನೆ ಹರಾಜಿಗೆ ಬಂದಿತ್ತು. ವೃದ್ಧೆಗೆ ಮೋಸ ಮಾಡಿ ದೋಚಿದ ಹಣದಲ್ಲೇ ಅಪೂರ್ವ ತನ್ನ ಮಾವನಿಗೆ 45 ಲಕ್ಷ ಕೊಟ್ಟಿದ್ದಾಳೆ. ಅಪೂರ್ವ ಮಾವ ಬ್ಯಾಂಕ್ ನ ಸಾಲ ಮರು ಪಾವತಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಆರೋಪಿ ಅಪೂರ್ವ ತನ್ನ ಪ್ರಿಯತಮನಿಗೂ 2 ಲಕ್ಷ ಹಣ ವರ್ಗಾಯಿಸಿದ್ದಳು. ಇನ್ನು ವೃದ್ಧೆಗೆ ವಂಚನೆ ಮಾಡಿರುವುದು ಅರಿವಿಗೆ ಬರುತ್ತಿದ್ದಂತೆ ಬನಶಂಕರಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಒಟ್ಟು 1.75 ಕೋಟಿ ಹಣ ವಶಕ್ಕೆ ಪಡೆದಿದ್ದಾರೆ. ಹಾಗೂ ಆರೋಪಿಗಳು ಅರೆಸ್ಟ್ ಆಗುತ್ತಿದ್ದಂತೆ ಹಣ ರಿಕವರಿಗೂ ಬನಶಂಕರಿ ಪೊಲೀಸರು ಬ್ಯಾಂಕ್ ಗೆ ಪತ್ರ ಬರೆದಿದ್ದಾರೆ. ಸದ್ಯ ಬನಶಂಕರಿ ಪೊಲೀಸರಿಂದ ತನಿಖೆ ಮುಂದುವರೆದಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ