Karnataka Breaking Kannada News Highlights Updates: ಸಿಎಂ ಆಗಿ ಸಿದ್ದರಾಮಯ್ಯ(Siddaramaiah), ಡಿಸಿಎಂ ಆಗಿ ಡಿಕೆ ಶಿವಕುಮಾರ್(DK Shivakumar) ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಐದು ವರ್ಷ ಪೂರ್ತಿ ಸಿದ್ದರಾಮಯ್ಯರೇ ಸಿಎಂ ಆಗಿರ್ತಾರಾ, ಅಥವಾ ಬದಲಾಗ್ತಾರಾ. ಡಿಸಿಎಂ ಆಗಿರೋ ಡಿಕೆಶಿ ಮುಂದೆ ಸಿಎಂ ಆಗ್ತಾರಾ. ಈ ರೀತಿ ಅನೇಕ ಚರ್ಚೆಗಳು ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಲೇ ಇದ್ವು. ಆದ್ರೆ, ಸಚಿವ ಎಂ.ಬಿ.ಪಾಟೀಲ್(MB Patil) ಸಿಡಿಸಿರುವ ಬಾಂಬ್, ಪ್ರಚಂಡ ಬಹುಮತ ಪಡೆದು ಅಧಿಕಾರಕ್ಕೆ ಏರಿರೋ ಕಾಂಗ್ರೆಸ್ ಮನೆಯಲ್ಲಿ ಕಂಪನ ಎಬ್ಬಿಸಿದೆ. ಇನ್ನು ಮತ್ತೊಂದೆಡೆ ರಾಜ್ಯದಲ್ಲಿ ವರುಣ ಅಬ್ಬರಿಸಿದ್ದು ಸಾಲು ಸಾಲು ಅನಾಹುತಗಳು ಸಂಭವಿಸುತ್ತಿವೆ(Karnataka Rain). ಕಳೆದ ಮೂರ್ನಾಲ್ಕು ದಿನದಿಂದ ರಾಜ್ಯದಲ್ಲಿ ಸುರಿಯುತ್ತಿರುವ ಮಳೆಗೆ ಮರ-ವಿದ್ಯುತ್ ಕಂಬಗಳು ಧರೆಗುರುಳುತ್ತಿವೆ. ಮಳೆ ನೀರು ಮನೆಗಳಿಗೆ ನುಗ್ಗಿ ಅಪಾರ ಪ್ರಮಾಣದ ಹಾನಿಯಾಗುತ್ತಿದೆ. ಹೊಲ-ಗದ್ದೆ ಕೆರೆಯಂತಾಗಿದೆ. ರಸ್ತೆಗಳಲ್ಲಿ ನೀರು ನಿಂತು ಅವಘಡಗಳು ಸಂಭವಿಸುತ್ತಿವೆ(Bengaluru Rain). ಮಳೆ ಹಾಗೂ ರಾಜಕೀಯದ ಕ್ಷಣ ಕ್ಷಣದ ಮಾಹಿತಿಗಾಗಿ ಟಿವಿ9 ಡಿಜಿಟಲ್ ಫಾಲೋ ಮಾಡಿ.
ಬೆಂಗಳೂರು: ಮುಂದಿನ 3 ಗಂಟೆಗಳಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಹಾವೇರಿ, ಮಂಡ್ಯ, ತುಮಕೂರು ಸೇರಿದಂತೆ ಒಂದೆರಡು ಕಡೆಗಳಲ್ಲಿ ಮಿಂಚು ಸಹಿತ ಗುಡುಗಿನಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ. ಬಾಗಲಕೋಟೆ, ಬೆಂಗಳೂರು, ಬಿಜಾಪುರ, ಚಿಕ್ಕಬಳ್ಳಾಪುರ, ಧಾರವಾಡ, ಗದಗ, ಕೊಪ್ಪಳ, ಮಂಡ್ಯ, ಉತ್ತರ ಕನ್ನಡ ಜಿಲ್ಲೆಗಳ ಒಂದೆರಡು ಕಡೆಯಲ್ಲಿ ಮುಂದಿನ 3 ಗಂಟೆಗಳಲ್ಲಿ ಗುಡುಗು ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ದೆಹಲಿ: ನಗರದ ರಾಜಾಜಿ ಮಾರ್ಗ್ 10ರಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಸಚಿವಾಕಾಂಕ್ಷಿಗಳ ದಂಡು ಆಗಮಿಸುತ್ತಿದೆ. ಸಚಿವ ಸತೀಶ್ ಜಾರಕಿಹೊಳಿ, ಶಾಸಕರಾದ S.S.ಮಲ್ಲಿಕಾರ್ಜುನ್, ಕಾಶಪ್ಪನವರ್, ಅಜಯ್ ಸಿಂಗ್, ವಿನಯ್ ಕುಲಕರ್ಣಿ ಭೇಟಿ ಮಾಡಿ, ಖರ್ಗೆ ಜೊತೆ ಚರ್ಚೆ ಮಾಡಿದ್ದಾರೆ.
ಬೆಂಗಳೂರು ನಗರದ ಹಲವೆಡೆ ಇಂದೂ ಧಾರಾಕಾರ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ರಾಜಾಜಿನಗರ, ಮಡಿವಾಳ, ಎಲೆಕ್ಟ್ರಾನಿಕ್ ಸಿಟಿ, ಶಾಂತಿನಗರ, ಜಯನಗರ, ವಿಜಯನಗರ, ಮೆಜೆಸ್ಟಿಕ್, ಕೆ.ಆರ್.ಮಾರ್ಕೆಟ್, ಕಾಮಾಕ್ಷಿಪಾಳ್ಯ, ಬನಶಂಕರಿ, ಬಸವನಗುಡಿ, ಚಾಮರಾಜಪೇಟೆ ಸೇರಿ ಹಲವೆಡೆ ಮಳೆಯಾಗಿದೆ. ಮಳೆಗೆ ತಗ್ಗುಪ್ರದೇಶದ ರಸ್ತೆಗಳು ಕರೆಯಂತಾಗಿದ್ದು, ವಾಹನ ಸವಾರರು ಪರದಾಡಿದ್ದಾರೆ.
ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ಕಸರತ್ತು ನಡೆಯುತ್ತಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯನ್ನು ಡಿಕೆ ಬ್ರದರ್ಸ್ ಭೇಟಿಯಾಗಿದ್ದಾರೆ. ಏರ್ ಪೋರ್ಟ್ನಿಂದ ನೇರವಾಗಿ ಖರ್ಗೆ ನಿವಾಸಕ್ಕೆ ತೆರಳಿದ್ದು, ಸಂಪುಟ ವಿಸ್ತರಣೆ ಸಂಬಂಧ ಜೊತೆ ಚರ್ಚೆ ಮಾಡಿದ್ದಾರೆ.
ಬೆಂಗಳೂರು: ಪೊಲೀಸ್ ಇಲಾಖೆ ಕೇಸರೀಕರಣ ಮಾಡಲು ಹೊರಟಿದ್ದು ಬಿಜೆಪಿ. ಹೀಗಾಗಿ ನಿನ್ನೆ ನಡೆದ ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ತಾಕೀತು ಮಾಡಿದ್ದಾರೆ ಎಂದು ನೂತನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ನಿಮ್ಮ ವೈಯಕ್ತಿಕ ನಿರ್ಧಾರವನ್ನು ಮತದಾನದ ಮೂಲಕ ತೋರಿಸಿ. ಸಂವಿಧಾನದ ಅಡಿ ಕೆಲಸಮಾಡಿ ಎಂದು ಪೊಲೀಸರಿಗೆ ಸೂಚಿಸಿದ್ದಾರೆ. ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಡಿಸಿಎಂ ಡಿಕೆ ಸೂಚನೆ ನೀಡಿದ್ದಾರೆ ಎಂದರು.
ಚಿತ್ರದುರ್ಗ: ನಗರದಲ್ಲಿ ಗಾಳಿ ಸಹಿತ ಧಾರಾಕಾರ ಮಳೆ ಹಿನ್ನೆಲೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಅದೃಷ್ಟವಶಾತ್ ತಪ್ಪಿದ ದುರಂತ, ವಾಹನ ಸವಾರರು ಬಚಾವ್ ಆಗಿದ್ದಾರೆ. ಒನಕೆ ಓಬವ್ವ ಕ್ರೀಡಾಂಗಣದ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ. ಚಿತ್ರದುರ್ಗದ ವಿವಿಧ ಬಡಾವಣೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದೆ.
ನವದೆಹಲಿಗೆ ಬಂದಿಳಿದ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿ ಏರ್ಪೋರ್ಟ್ನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ರಾಜ್ಯದ ಹಿತದೃಷ್ಟಿಯಿಂದ ವಿವಿಧ ವಿಷಯಗಳ ಕುರಿತು ಚರ್ಚಿಸಬೇಕಿದೆ. ದೆಹಲಿಯಲ್ಲಿ ಪಕ್ಷದ ಮುಖಂಡರನ್ನು ಭೇಟಿ ಮಾಡುತ್ತೇವೆ. ಸಚಿವ ಸಂಪುಟವನ್ನು ಬೇಗ ಪೂರ್ಣಗೊಳಿಸಬೇಕು. ಜನತೆಗೆ ನೀಡಿರುವ ಭರವಸೆಗಳನ್ನು ಈಡೇರಿಸಬೇಕು. ಕಾಂಗ್ರೆಸ್‌ನಲ್ಲಿ ಯಾವುದೇ ಆಂತರಿಕ ಸಮಸ್ಯೆಗಳಿಲ್ಲ ಎಂದು ಹೇಳಿದರು.
ಕೆಐಎಬಿಯಲ್ಲಿ ನೂತನ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಸಚಿವ ಸಂಪುಟ ವಿಸ್ತರಣೆ ವಿಳಂಬವಾಗಿದೆ, ಆದಷ್ಟು ಬೇಗ ಆಗಬೇಕಿದೆ. ಸರ್ಕಾರ ಹೇಗೆ ಆಡಳಿತ ನೀಡುತ್ತದೆ ಅಂತಾ ಹೇಳಲು 6 ತಿಂಗಳು ಬೇಕು ಎಂದು ಹೇಳಿದರು. 6 ತಿಂಗಳಿಂದ 1 ವರ್ಷ ಸಮಯಬೇಕೆಂದು ಯತ್ನಾಳ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿಯವರು ಏನೋ ಹೇಳ್ತಾರೆಂದು ನಾವು ಹೇಳಲು ಆಗೋದಿಲ್ಲ. ಯತ್ನಾಳ್ ಗಿರಾಕಿಗೆ ಯಾರು ಉತ್ತರ ಕೊಡೋರು. ಅವನು ಹೇಳಿದಕ್ಕೆಲ್ಲ ಉತ್ತರ ಕೊಡಲು ಆಗಲ್ಲ. ನರೇಂದ್ರ ಮೋದಿಯವರ 15 ಲಕ್ಷದ ವಿಚಾರ ಮೊದಲು ಹೇಳಲಿ ಎಂದು ಕಿಡಿಕಾರಿದರು.
ಬೆಂಗಳೂರು: ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಆತ್ಮಾವಲೋಕನ ಮಾಡಲು ಶಾಸಕರ ಸಭೆ ಕರೆದಿದ್ದಾರೆ ಎಂದು ಬೆಂಗಳೂರಿನಲ್ಲಿ ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡ ಹೇಳಿದರು. ಸಿ.ಎಂ.ಇಬ್ರಾಹಿಂ ಹಿರಿಯರಿದ್ದಾರೆ, ಸಾಕಷ್ಟು ಅನುಭವ ಹೊಂದಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದು ಬೇಡ. ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಜತೆ ಮಾತನಾಡುತ್ತೇವೆ ಎಂದು ಹೇಳಿದರು.
ಬೆಂಗಳೂರು: ಯು.ಟಿ.ಖಾದರ್‌ನ ಡಿಸಿಎಂ ಮಾಡಬಹುದಿತ್ತಲ್ಲ. ಈಗ ಅವರು ಎದ್ದೇಳಂಗು ಇಲ್ಲ, ಮಾತಾಡಂಗು ಇಲ್ಲ ಎಂದು ಯುಟಿ ಖಾದರ್ ಸ್ಪೀಕರ್ ಮಾಡಿದ ಕಾಂಗ್ರೆಸ್ ನಡೆಯನ್ನು ಸಿ.ಎಂ.ಇಬ್ರಾಹಿಂ ಟೀಕೆ ಮಾಡಿದ್ದಾರೆ.
ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ಗೆ ಸೋಲು ಹಿನ್ನೆಲೆ ಸೋಲಿನ ನೈತಿಕ ಹೊಣೆಹೊತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿ.ಎಂ.ಇಬ್ರಾಹಿಂ ರಾಜೀನಾಮೆ ನೀಡಿದ್ದಾರೆ.
ತುಮಕೂರು: ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಸ್ಪಷ್ಟ ಬಹುಮತ ಹಿನ್ನೆಲೆ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಉತ್ಸಾಹ ಮತ್ತಷ್ಟು ಹೆಚ್ಚಾಗಿದೆ. ಮುಂದಿನ ಚುನಾವಣೆಗೆ ಸಿದ್ಧತೆ ಆರಂಭಿಸಿದ ಕುಣಿಗಲ್ ಶಾಸಕ ರಂಗನಾಥ್ ಪ್ರತಿಜ್ಞಾವಿಧಿ ಸ್ವೀಕರಿಸಿದ ಮರುದಿನವೇ ಡಾ.ರಂಗನಾಥ್ ಗ್ರಾಮವಾಸ್ತವ್ಯ ಮಾಡಿದ್ದಾರೆ.
ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ವಿಳಂಬವಾಗಿದೆ, ಆದಷ್ಟು ಬೇಗ ಆಗಬೇಕಿದೆ ಎಂದು ಕೆಐಎಬಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಸರ್ಕಾರ ಹೇಗೆ ಆಡಳಿತ ನೀಡ್ತಿದೆ ಅಂತಾ ಹೇಳಲು 6 ತಿಂಗಳು ಬೇಕು. 6 ತಿಂಗಳಿಂದ 1 ವರ್ಷ ಸಮಯಬೇಕೆಂದು ಯತ್ನಾಳ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿಯವರು ಏನೋ ಹೇಳ್ತಾರೆಂದು ನಾವು ಹೇಳಲು ಆಗೋದಿಲ್ಲ. ಯತ್ನಾಳ್ ಗಿರಾಕಿಗೆ ಯಾರು ಉತ್ತರ ಕೊಡೋರು ಎಂದ ಸತೀಶ್.
ಬೆಂಗಳೂರು: ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ನಾನು ಅಪೇಕ್ಷೆಪಟ್ಟಿಲ್ಲ ಎಂದು ಕೆಐಎಬಿಯಲ್ಲಿ ಬಿಜೆಪಿಯ ಹಿರಿಯ ಶಾಸಕ ಯತ್ನಾಳ್ ಹೇಳಿದರು. ಕಾಂಗ್ರೆಸ್ನವರಿಗೆ ತಕ್ಕ ಉತ್ತರ ಕೊಡಬಲ್ಲವನು ನಾನೊಬ್ಬನೆ. ನಾನು ವಿರೋಧ ಪಕ್ಷದ ನಾಯಕನಾದರೆ ಮಜಾ ಇರುತ್ತೆ. ಇವರ ಭ್ರಷ್ಟಾಚಾರ, ಗೂಂಡಾಗಿರಿ 6 ತಿಂಗಳು ಇರುವುದಿಲ್ಲ ಎಂದಿದ್ದಾರೆ.
ವಿಧಾನಸಭೆ: ಸ್ಪೀಕರ್ ಹುದ್ದೆಯ ಬಗ್ಗೆ ಮೌಢ್ಯ ಬಿತ್ತುವುದನ್ನು ನಿಲ್ಲಿಸಬೇಕು ಎಂದು ವಿಧಾನಸಭೆಯಲ್ಲಿ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು. ಸ್ಪೀಕರ್ ಆಗುವವರು ಸೋಲ್ತಾರೆ ಅನ್ನೋ ಮೌಢ್ಯ ಬಿತ್ತಲಾಗ್ತಿದೆ. ಅನೇಕರು ಸ್ಪೀಕರ್ ಆದ ಬಳಿಕವೂ ಚುನಾವಣೆಯಲ್ಲಿ ಗೆದ್ದಿದ್ದಾರೆ. ಹಿಂದೆ ಸ್ಪೀಕರ್ ವಿರುದ್ಧ ಯಾವುದೇ ಪಕ್ಷ ಅಭ್ಯರ್ಥಿ ಹಾಕ್ತಿರಲಿಲ್ಲ. ಆ ಮೂಲಕ ಅವರನ್ನು ಮತ್ತೆ ವಿಧಾನಸಭೆಗೆ ಕರೆತರಲಾಗುತ್ತಿತ್ತು. ಯು.ಟಿ.ಖಾದರ್ ವಿರುದ್ಧವೂ ಮುಂದೆ ಅಭ್ಯರ್ಥಿ ಹಾಕಬಾರದು. ನನ್ನ ವಿರುದ್ಧ ಅಭ್ಯರ್ಥಿ ಹಾಕದಿದ್ರೆ ಬೋರ್ ಆಗುತ್ತೆ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
ಬೆಂಗಳೂರು: ಇದು ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಸಮ್ಮಿಶ್ರ ಸರ್ಕಾರ ಎಂದು ವಿಧಾನಸೌಧದಲ್ಲಿ ಮಾಜಿ ಸಚಿವ ಆರ್.ಅಶೋಕ್ ಹೇಳಿದರು. ನಾನು ಕೂಡ ಉಪ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಸಿಎಂ ಮಾತನಾಡಿದ ಮೇಲೆ ನಾನೆ ಮಾತನಾಡಬೇಕು ಎಂಬುದು ಡಿಕೆ ಶಿವಕುಮಾರ್ಗೆ ಚಾಳಿ ಆಗಿದೆ. ಸಂವಿಧಾನಿಕವಾಗಿ ಉಪ ಮುಖ್ಯಮಂತ್ರಿ ಹುದ್ದೆ ಇಲ್ಲ ಎಂದು ಹೇಳಿದರು.
ಬೆಂಗಳೂರು: ಬಿಜೆಪಿ ಸರ್ಕಾರದ ಎಲ್ಲಾ ವಿಧೇಯಕಗಳ ಪರಿಷ್ಕರಣೆ ವಿಚಾರವಾಗಿ ಟಿವಿ9ಗೆ ಪರಿಷತ್ ಬಿಜೆಪಿ ಸದಸ್ಯ ರವಿಕುಮಾರ್ ಪ್ರತಿಕ್ರಿಯೆ ನೀಡಿದ್ದು, ಸರ್ಕಾರ ನಿರ್ಧಾರ ಖಂಡಿಸಿ ನಾವು ಹೋರಾಟ ಮಾಡುತ್ತೇವೆ. ರಾಜ್ಯದಲ್ಲಿ ಎಲ್ಲರನ್ನೂ ಮತಾಂತರ ಮಾಡಲು ಅವಕಾಶ ಕೊಡ್ತೀರಾ. ನಮ್ಮ ಸಂಸ್ಕೃತಿಯನ್ನು ನಾವು ಉಳಿಸಿಕೊಳ್ಳಬೇಕು ಎಂದು ಹೇಳಿದರು.
ಬಾಗಲಕೋಟೆ ಜಿಲ್ಲೆ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ದೆಹಲಿಗೆ ಹೊರಟಿದ್ದಾರೆ. ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಲು ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ. ನಾನು ಸಹ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ನಾನು ಲಿಂಗಾಯತ ಸಮಾಜಕ್ಕೆ ಸೇರಿದವನು. ನಮ್ಮ ತಂದೆಯ ಬಳಿಕ ಹುನಗುಂದ ಕ್ಷೇತ್ರಕ್ಕೆ ಸಚಿವ ಸ್ಥಾನ ಸಿಕ್ಕಿಲ್ಲ. ಸಚಿವಸ್ಥಾನ ಸಿಗುತ್ತೆ ಎಂಬ ನಿರೀಕ್ಷೆಯಲ್ಲಿದ್ದೇನೆ ಎಂದು ಕಾಶಪ್ಪನವರ್ ಪ್ರತಿಕ್ರಿಯೆ ನೀಡಿದರು.
ಪೊಲೀಸರು ಕೇಸರಿ ಶಾಲು ಹಾಕಿದ್ದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಎಚ್ಚರಿಕೆ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ನೂತನ ಸಚಿವ ಪ್ರಿಯಾಂಕ್ ಖರ್ಗೆ ಸಮರ್ಥನೆ ಮಾಡಿಕೊಂಡಿದ್ದಾರೆ. ಈ ಹಿಂದೆ ಇದ್ದ ಗೃಹ ಸಚಿವರ ಮನೆಗೆ ಮುತ್ತಿಗೆ ಹಾಕಿದ್ದರು. ನಳಿನ್ ಕುಮಾರ್ ಕಟೀಲು ವಾಹನವನ್ನು ಹೋಗಲು ಬಿಟ್ಟಿರಲಿಲ್ಲ. ಇಡೀ ಪೊಲೀಸ್ ಇಲಾಖೆಯನ್ನೇ ಕೇಸರೀಕರಣ ಮಾಡಲಾಗಿತ್ತು. ಯಾವ ಮಟ್ಟಕ್ಕೆ ಇದೆ ಅಂದ್ರೆ ಪೊಲೀಸರೇ ಕೇಸರಿ ಶಾಲು ಹಾಕಿದ್ರು. ಸರ್ಕಾರಿ ಕೆಲಸ ಮಾಡ್ತಿದ್ರಾ ಅಥವಾ RSSನಲ್ಲಿ ಕೆಲಸ ಮಾಡ್ತಿದ್ರಾ? ಹೀಗಾಗಿ ನಿನ್ನೆ ಸರ್ಕಾರಿ ಅಧಿಕಾರಿಗಳಿಗೆ ಡಿಸಿಎಂ ಡಿಕೆ ಸೂಚಿಸಿದ್ದಾರೆ ಎಂದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಅವಾಂತರ ಮುಂದುವರಿದಿದೆ. ಶಿರಸಿ ತಾಲೂಕಿನ ಬಿಸಲಕೊಪ್ಪದಲ್ಲಿ ಮರಗಳು ಉರುಳಿ 12ಕ್ಕೂ ಹೆಚ್ಚು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ರಸ್ತೆ ಮೇಲೆ ಮರ ಉರುಳಿಬಿದ್ದ ಹಿನ್ನೆಲೆಯಲ್ಲಿ ಸಂಪರ್ಕ ಕಡಿತಗೊಂಡಿದೆ. ಅರಣ್ಯ ಸಿಬ್ಬಂದಿ ಧರೆಗುರುಳಿದ ಮರಗಳನ್ನು ತೆರವುಗೊಳಿಸುತ್ತಿದ್ದಾರೆ. ಕಂಬಗಳು ಮುರಿದುಬಿದ್ದಿದರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಕಂಡುಬಂದಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಇಂದಿರಾ ಕ್ಯಾಂಟೀನ್ ಪುನಾರಂಭಕ್ಕೆ ರಾಜ್ಯ ಸರ್ಕಾರ ಸೂಚಿಸಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಜಯರಾಂ ರಾಯ್‌ಪುರ ತಿಳಿಸಿದ್ದಾರೆ. ಇರುವ ಕ್ಯಾಂಟೀನ್‌ಗಳ ಪೈಕಿ 10 ಮೊಬೈಲ್ ಕ್ಯಾಂಟೀನ್ ಕ್ಲೋಸ್ ಆಗಿದೆ. 243 ಸ್ಥಳಗಳಲ್ಲಿ ಕ್ಯಾಂಟೀನ್ ಆರಂಭಿಸ್ತೇವೆ. ಈಗಾಗಲೇ ಇಂದಿರಾ ಕ್ಯಾಂಟೀನ್ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಕ್ಯಾಂಟೀನ್ ಅಡುಗೆ ಕೋಣೆ ವಸ್ತುಗಳನ್ನು ರೀಪ್ಲೇಸ್ ಮಾಡಬೇಕಿದೆ ಎಂದು ಮಾಹಿತಿ ನೀಡಿದರು.
ಸಚಿವ ಸಂಪುಟ ರಚನೆಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಇಂದು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಈ ಹಿನ್ನೆಲೆ ಸಚಿವ ಸ್ಥಾನದ ಆಕಾಂಕ್ಷಿಗಳು ದೆಹಲಿಯತ್ತ ಪ್ರಯಾಣ ಬೆಳೆಸಲಿದ್ದಾರೆ. ಸಚಿವ ಸ್ಥಾನದ ಲಾಭಿಗಾಗಿ ದೆಹಲಿಯತ್ತ ಹೊರಡುತ್ತಿದ್ದಾರೆ. 1 ಗಂಟೆಯ ವಿಮಾನದಲ್ಲಿ ದಿನೇಶ್ ಗುಂಡೂರಾವ್ ಪ್ರಯಾಣ ಬೆಳೆಸಲಿದ್ದಾರೆ.
ಬಿಜೆಪಿ ಅವಧಿಯಲ್ಲಿನ ಅಕ್ರಮದ ಬಗ್ಗೆ ಕಾಂಗ್ರೆಸ್ ಸರ್ಕಾರ ತನಿಖೆಗೆ ಮುಂದಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಗಂಗಾಕಲ್ಯಾಣ ಯೋಜನೆ ಅಕ್ರಮ ಸಂಬಂಧ ಮೊದಲ FIR ದಾಖಲಾಗಿದೆ. ಯೋಜನೆಯಲ್ಲಿ ಕೋಟ್ಯಂತರ ರೂ. ವಂಚನೆಯಾಗಿದೆ ಎಂದು ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಲಾಗಿದೆ.
ನೂತನ ಸ್ಪೀಕರ್ ಖಾದರ್ಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅಭಿನಂದನೆ ಸಲ್ಲಿಸಿದ್ದಾರೆ. ಕರ್ನಾಟಕದ ವಿಧಾನಮಂಡಲಕ್ಕೆ ತನ್ನದೇ ಆದ ಇತಿಹಾಸವಿದೆ. ಇಡೀ ದೇಶಕ್ಕೆ ಮಾರ್ಗದರ್ಶನ ನೀಡಿದ ವಿಧಾನಮಂಡಲವಿದು. ಯು.ಟಿ.ಖಾದರ್ ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿದ್ದಾರೆ. ಯು.ಟಿ.ಖಾದರ್ ವಿಪಕ್ಷ ಉಪನಾಯಕರಾಗಿಯೂ ಉತ್ತಮ ಕೆಲಸ ಮಾಡಿದ್ದಾರೆ. ಈ ಹಿಂದೆ ಸ್ಪೀಕರ್ಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ನ್ಯಾಯಾಂಗಕ್ಕಿಂತ ಎತ್ತರವಾದದ್ದು ಸ್ಪೀಕರ್ ಸ್ಥಾನ. ನಿಷ್ಪಕ್ಷಪಾತವಾಗಿ ತಾವು ಸದನವನ್ನು ನಡೆಸಬೇಕು. ವಿಪಕ್ಷ ಸದಸ್ಯರ ಹೇಳಿಕೆಗೆ ಸ್ಪೀಕರ್ ಹೆಚ್ಚು ಅವಕಾಶ ಕೊಡಬೇಕು. ಚರ್ಚೆ ವೇಳೆ ಕೊನೆಯ ಸಾಲಿನವರಿಗೆ ಹೆಚ್ಚು ಅವಕಾಶ ಕೊಡಬೇಕು. ಸ್ಪೀಕರ್ ಹೊಸ ವಿಚಾರಕ್ಕೆ ಅವಕಾಶ ಮಾಡಿಕೊಡುವ ವಿಶ್ವಾಸವಿದೆ. ಎಲ್ಲರನ್ನೂ ಸಮಾನವಾಗಿ ತೆಗೆದುಕೊಂಡು ಹೋಗುವ ಶಕ್ತಿ ನಿಮ್ಮಲ್ಲಿದೆ ಎಂದರು.
ನೂತನ ಸ್ಪೀಕರ್ ಆಗಿ ಆಯ್ಕೆಯಾದ ಯು.ಟಿ.ಖಾದರ್ಗೆ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದ್ದಾರೆ. ಸ್ಪೀಕರ್ ಯು.ಟಿ.ಖಾದರ್ಗೆ ಅತಿ ಹೆಚ್ಚು ಪ್ರಶ್ನೆ ಕೇಳಿದ್ದಕ್ಕೆ ಸದನವೀರ ಪ್ರಶಸ್ತಿಯೂ ಸಿಕ್ಕಿತ್ತು. ವಿಪಕ್ಷ ಉಪನಾಯಕರಾಗಿಯೂ ಯು.ಟಿ.ಖಾದರ್ ಉತ್ತಮ ಕೆಲಸ ಮಾಡಿದ್ದಾರೆ. ವಿಧಾನಸಭೆ ಪ್ರಜಾಪ್ರಭುತ್ವದ ದೇಗುಲ. ಸದನದಲ್ಲಿ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕು. ನಾಡಿನ ಅಭಿವೃದ್ಧಿ, 7 ಕೋಟಿ ಕನ್ನಡಿಗರ ಹಿತರಕ್ಷಣೆ ಆಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಪೀಕರ್ ಸ್ಥಾನ ಅತ್ಯುನ್ನತವಾದುದು. ರಾಜ್ಯದ ಜಿಡಿಪಿ ಬೆಳವಣಿಗೆ ಕೂಡ ಆಗಬೇಕು ಎಂದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದ ಹೊರ ಬಾಗಿಲಿನಲ್ಲಿ ಸಂಸದ ಡಿಕೆ ಸುರೇಶ್ ಹಾಗೂ ಎಂಬಿ ಪಾಟೀಲ್ ಮುಖಾಮುಖಿಯಾಗಿದ್ದು, ಈ ವೇಳೆ ಡಿಕೆ ಸುರೇಶ್ ಅವರು ಎಂಬಿ ಪಾಟೀಲ್ಗೆ ಗುರಾಯಿಸಿಕೊಂಡು ಸ್ವಲ್ಪ ಬಿಗಿಯಾಗಿರಲಿ ಎಂದು ಬಹಿರಂಗವಾಗಿಯೇ ಎಲ್ಲರ ಮುಂದೆ ವಾರ್ನ್ ಮಾಡಿದ್ದಾರೆ.
ವಿಧಾನಸಭೆಯಲ್ಲಿ ಎದುರಗಿ ಬಂದ ಎಂಬಿ ಪಾಟೀಲ್ಗೆ ಮತ್ತೆ ವಾರ್ನ್ ಮಾಡಿದ ಸುರೇಶ್: ಹೌಹಾರಿದ ಶಾಸಕರು, ಗನ್ಮ್ಯಾನ್, ಪಿಎಗಳು@INCKarnataka @siddaramaiah @DKShivakumar @MBPatil #KarnatakaCM https://t.co/wSGONpbwL0
— TV9 Kannada (@tv9kannada) May 24, 2023
ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳ ಜಾರಿ ವಿಳಂಬ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ H.D.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಎಲ್ಲರಿಗೂ ಫ್ರೀ ಫ್ರೀ ಅಂತಾ ಹೇಳ್ತಿದ್ರು. ಈಗ ಗೈಡ್‌ಲೈನ್ಸ್ ಮಾಡ್ತೀವಿ ಅಂತಾ ಹೇಳುತ್ತಿದ್ದಾರೆ. ಮೊದಲ ಸಂಪುಟದಲ್ಲೇ ಯೋಜನೆ ಜಾರಿ ಅಂತಾ ಹೇಳಿದರು. ಎದ್ದೇಳು ಕರ್ನಾಟಕ ಅಂತಾ ಹೇಳ್ತಿದ್ರಲ್ಲ, ಈಗ ಎದ್ದೇಳಿಸಿ. ಯಾವಾಗ ಕಾರ್ಯರೂಪಕ್ಕೆ ಬರುತ್ತೋ ಕಾದು ನೋಡೋಣ. ಕರೆಂಟ್ ಬಿಲ್ ಕಟ್ಟಬೇಡಿ ಅಂತಾ ನಾವು ಕರೆ ಕೊಡುತ್ತೇವೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ಮಂಗಳೂರು ಶಾಸಕ ಯು.ಟಿ. ಖಾದರ್ ಹೆಸರು ಪ್ರಸ್ತಾವನೆ ಮಾಡಿದ್ದಾರೆ. ಸಿಎಂ ಪ್ರಸ್ತಾವವನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಅನುಮೋದಿಸಿದ್ದಾರೆ. ವಿಧಾನಸಭೆ ಸ್ಪೀಕರ್ ಆಗಿ ಯು.ಟಿ. ಖಾದರ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಉದ್ದೇಶಪೂರ್ವಕವಾಗಿ ನನ್ನ ವಿರುದ್ದ ದಾಳಿ ಮಾಡಿಸಿದ್ದಾರೆ ಎಂದು ವಿಧಾನಸೌಧದಲ್ಲಿ ಡಿ.ಕೆ.ಶಿವಕುಮಾರ್ ಮುಂದೆ ಶಾಸಕಿ.ರೂಪ ಆಳಲು ತೋಡಿಕೊಂಡಿದ್ದಾರೆ. ಚುನಾವಣೆ ಪ್ರಚಾರದ ವೇಳೆ ಕಿರುಕುಳ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಸಚಿವ ಎಂ.ಬಿ.ಪಾಟೀಲ್ಗೆ ಸಂಸದ ಡಿ.ಕೆ.ಸುರೇಶ್ ವಾರ್ನಿಂಗ್ ಕೊಟ್ಟಿದ್ದಾರೆ. ವಿಧಾನಸೌಧ ಸಮ್ಮೇಳನ ಸಭಾಂಗಣದ ಹೊರ ಬಾಗಿಲಿನಲ್ಲಿ ಸಚಿವ ಎಂ.ಬಿ.ಪಾಟೀಲ್, ಸಂಸದ ಡಿ.ಕೆ.ಸುರೇಶ್ ಮುಖಾಮುಖಿಯಾಗಿದ್ದು ಎಂ.ಬಿ.ಪಾಟೀಲ್ ಗುರಾಯಿಸಿಕೊಂಡು ಸ್ವಲ್ಪ ಬಿಗಿಯಾಗಿರಲಿ ಎಂದು ವಾರ್ನ್ ಮಾಡಿದ್ದಾರೆ. ಸಂಸದ ಡಿ.ಕೆ.ಸುರೇಶ್ ಮಾತಿಗೆ ಕೆಲವು ಕಾಂಗ್ರೆಸ್ ಶಾಸಕರು ಬೇಸರಗೊಂಡಿದ್ದು ಸುರೇಶ್ ಮಾತಿಗೆ ಏನ್ರಿ ಈ ರೀತಿ ರೌಡಿಸಂ ಎಂದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 24 ಹಿಂದೂ ಕಾರ್ಯಕರ್ತರನ್ನ ಸಿದ್ದರಾಮಯ್ಯ ಹತ್ಯೆ ಮಾಡಿದ್ದಾರೆ ಎಂದು ಬೆಳ್ತಂಗಡಿಯ ಕಾರ್ಯಕ್ರಮವೊಂದರಲ್ಲಿ ವೇದಿಕೆ ಮೇಲೆ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಪರ ಪ್ರಚಾರ ನಡೆಸಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಸತ್ಯಜಿತ್ ಸುರತ್ಕಲ್ ಎಂಬ ಹಿಂದೂ ನಾಯಕ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಾರೆ” “24 ಹಿಂದೂ ಕಾರ್ಯಕರ್ತರನ್ನ ಹತ್ಯೆ ಮಾಡಿದ ಸಿದ್ದರಾಮಯ್ಯಗೆ ನೀವು ವೋಟ್ ಕೇಳಿದ್ದೀರ” ಎಂದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಶಾಸಕಾಂಗ ಪಕ್ಷದ ಸಭೆ ನಡೆಯುತ್ತಿದ್ದು ಕ್ಷೇತ್ರದ ಅಭಿವೃದ್ಧಿ ಕಡೆ ಗಮನಹರಿಸಿ ಎಂದು ‘ಕೈ’ ಶಾಸಕರಿಗೆ ಸಿಎಂ ಸೂಚನೆ ನೀಡಿದ್ದಾರೆ. ರಾಜ್ಯದ ಜನತೆ ಬಹುಮತದ ಮೂಲಕ ನಮಗೆ ಜವಾಬ್ದಾರಿ ನೀಡಿದ್ದಾರೆ. ವಿಧಾನಸಭೆ ಅಧಿವೇಶನದಲ್ಲಿ ಹೆಚ್ಚು ಕ್ರಿಯಾಶೀಲತೆಯಿಂದ ಭಾಗವಹಿಸಿ. ಕಾಂಗ್ರೆಸ್ ಶಾಸಕರು ಕಡ್ಡಾಯವಾಗಿ ಅಧಿವೇಶನದಲ್ಲಿ ಭಾಗವಹಿಸಬೇಕು. ಬಿಜೆಪಿಯವರು ಮಾಡುವ ಸುಳ್ಳು ಆರೋಪಗಳನ್ನು ಎದುರಿಸಬೇಕು. ಕೇಂದ್ರದ ತಾರತಮ್ಯ ನೀತಿಯಿಂದ ರಾಜ್ಯದ ಜನತೆಗೆ ಅಪಾರ ನಷ್ಟವಾಗಿದೆ. ಹಣಕಾಸು ಆಯೋಗದಲ್ಲೂ ನಮಗೆ ಅನ್ಯಾಯವಾಗಿದೆ. ರಾಜ್ಯದ ಜನ ಕಟ್ಟುವ ತೆರಿಗೆಯಲ್ಲಿ ನಮ್ಮ ಪಾಲು ಸಮರ್ಪಕವಾಗಿ ಬರ್ತಿಲ್ಲ. ಒತ್ತಡ ಮತ್ತು ಬೇಡಿಕೆ ಮೂಲಕ ನಮ್ಮ ಪಾಲನ್ನು ಪಡೆದುಕೊಳ್ಳಬೇಕು. ಬಿಜೆಪಿ ಸಂಸದರು ನಾಡಿನ ಜನತೆಯ ಪರವಾಗಿ ಬಾಯಿ ಬಿಡಲಿಲ್ಲ. ಕೊವಿಡ್, ಪ್ರವಾಹದ ಸಂದರ್ಭದಲ್ಲೂ ರಾಜ್ಯದ ಪರ ಬಾಯಿ ಬಿಡಲಿಲ್ಲ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಸರಿಯಾದ ಉತ್ತರ ಕೊಡಬೇಕು. ಲೋಕಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಮಂಗಳೂರಿನಲ್ಲಿ ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿದ್ದು, ಡಿಕೆಶಿ ಪೊಲೀಸರಿಗೆ ನಿನ್ನೆ ಕೇಸರಿ ಶಾಲಿನ ಆರೋಪ ಮಾಡಿದ್ದಾರೆ. ಅಧಿಕಾರಿಗಳ ಮೇಲೆ ಹರಿಹಾಯ್ದು ಎಚ್ಚರಿಕೆ ಕೊಟ್ಟಿರೋದು ಕಂಡು ಬಂದಿದೆ. ಕೇಸರಿ ಶಾಲು ಈ ರಾಜ್ಯದಲ್ಲಿ ನಿಷೇಧ ಇಲ್ಲ, ಕರ್ತವ್ಯದಲ್ಲಿ ಇದ್ದಾಗ ಯಾರೂ ಕೇಸರಿ ಪ್ರಯೋಗ ಮಾಡಿಲ್ಲ. ಅವರ ಖಾಸಗಿ ಜೀವನದಲ್ಲಿ ಅವರ ಉಡುಪುಗಳ ಬಗ್ಗೆ ಪ್ರಶ್ನೆ ಮಾಡಿ ಡಿಕೆಶಿ ದ್ವೇಷ ತೀರಿಸಿಕೊಂಡಿದ್ದಾರೆ. ಇದು ಸರಿಯಲ್ಲ, ಅವರು ತಮ್ಮ ಮಾತನ್ನ ಪುನರ್ ಪರಿಶೀಲನೆ ಮಾಡಬೇಕು ಎಂದರು.
JDS ಶಾಸಕರು ಸ್ಪೀಕರ್ ಕಚೇರಿಯಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಕಳೆದ 2 ದಿನಗಳಿಂದ ಅಧಿವೇಶನಕ್ಕೆ ಗೈರಾಗಿದ್ದ ಜೆಡಿಎಸ್ ನಾಯಕರು ಶುಭ ದಿನ, ಶುಭ ಗಳಿಗೆ ನೋಡಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹೆಚ್ಡಿ ರೇವಣ್ಣ, ಜೆಡಿಎಸ್ ಶಾಸಕರಾದ ಕುಮಾರಸ್ವಾಮಿ, ಸ್ವರೂಪ್, ಶಾರದಾ ನಾಯಕ್, ಸಿ.ಬಿ.ಸುರೇಶ್ ಬಾಬು ಪ್ರಮಾಣವಚನ ಸ್ವೀಕರಿಸಿದರು.
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಉಪ್ಪರಿಗೇನಹಳ್ಳಿಯಲ್ಲಿ ವಿದ್ಯುತ್ ಬಿಲ್ ಕಟ್ಟಲ್ಲ ಎಂದು ಬೆಸ್ಕಾಂ ಮೀಟರ್ ರೀಡರ್ ಗೆ ಜನರು ತರಾಟೆಗೆ ತೆಗೆದುಕೊಂಡಿದ್ದಾರೆ. ಮೀಟರ್ ರೀಡಿಂಗ್ ಮಾಡಿ ಬಿಲ್ ನೀಡದಂತೆ ಕಿಡಿಕಾರಿದ್ದಾರೆ. ಮೀಟರ್ ರೀಡರ್ಗೆ ಮನೆಯೊಳಗೇ ಬಿಟ್ಟುಕೊಳ್ಳಲ್ಲ ಎಂದು ಜನ ವಾಗ್ವಾದಕ್ಕಿಳಿದಿದ್ದಾರೆ. ಇನ್ನೂ ಆದೇಶ ಬಂದಿಲ್ಲ, ಹಳೆ ಬಿಲ್ ಕೊಡಬೇಕು ಎಂದು ಮೀಟರ್ ರೀಡರ್ ಮನವಿ ಮಾಡಿದ್ದು ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ನೀಡಿದೆಯಲ್ಲ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಕೊಡೋಣವೇ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಚುನಾವಣೆಯಲ್ಲಿ ಗೆಲುವಿನ ಬಳಿಕ ಶಾಸಕ ನಾಗೇಂದ್ರ ಹರಿಕೆ ತೀರಿಸಿದ್ದಾರೆ. ಬಳ್ಳಾರಿ ಗ್ರಾ. ಶಾಸಕ ನಾಗೇಂದ್ರ ಅಜ್ಮೀರ್ನ ಸೂಫಿ ಸಂತ ಖ್ವಾಜಾ ಗರೀಬ್ ನವಾಜ್ ದರ್ಗಾಕ್ಕೆ ಭೇಟಿ ನೀಡಿ ಚಾದರ ಅರ್ಪಿಸಿ ಹರಿಕೆ ತೀರಿಸಿದ್ದಾರೆ. ಶಾಸಕ ಬಿ.ನಾಗೇಂದ್ರ ಅವರು ಶ್ರೀರಾಮುಲು ವಿರುದ್ಧ ಗೆಲುವು ಸಾಧಿಸಿದ್ದಾರೆ. ಮುಸ್ಲಿಂ ಮುಖಂಡರ ಜೊತೆ ತೆರಳಿ ಚಾದರ ಅರ್ಪಿಸಿದ್ದಾರೆ.
ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ರನ್ನು ಶಾಸಕಾಂಗ ಪಕ್ಷದ ಸಭೆ ನಡೆಯುವ ಸಭಾಂಗಣಕ್ಕೆ ಬಿಡದ ಹಿನ್ನೆಲೆ ಪೊಲೀಸ್ ಅಧಿಕಾರಿಗಳು & ಶಾಸಕರ ನಡುವೆ ಕೆಲಕಾಲ ವಾಗ್ವಾದ ನಡೆದಿದೆ. ಪೊಲೀಸರ ಮೇಲೆ ಸಿಟ್ಟಾಗಿ ಶಾಸಕ ಬಸವರಾಜ್ ವಾಪಸ್ ತೆರಳಿದ್ದು ತಕ್ಷಣ ಇದನ್ನು ಗಮನಿಸಿದ ಮುಖ್ಯಮಂತ್ರಿ ಕಚೇರಿ ಸಿಬ್ಬಂದಿ ಶಾಸಕ ಬಸವರಾಜ್ರನ್ನು ಕ್ಷಮೆ ಕೇಳಿ ಕರೆದುಕೊಂಡು ಬಂದಿದ್ದಾರೆ.
ಮಲೆನಾಡು ಭಾಗದಲ್ಲಿ ರಾತ್ರಿ ಸುರಿದ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಕೊಪ್ಪ ತಾಲೂಕಿನ ಹರಕನಮಕ್ಕಿ ಗ್ರಾಮದ ಬೋಜಪೂಜಾರಿ ಎಂಬುವವರಿಗೆ ಸೇರಿದ ಮನೆ ಹಾಗೂ ಜಾನುವಾರು ಕೊಟ್ಟಿಗೆಯ ಮೇಲೆ ಬೃಹತ್ ಮರ ಮುರಿದುಬಿದ್ದಿದೆ. ಜಾನುವಾರ ಕೊಟ್ಟಿಗೆ ಸೇರಿದಂತೆ ಮನೆಗೂ ಹಾನಿಯಾಗಿದೆ. ಕೊಟ್ಟಿಗೆ ಸಂಪೂರ್ಣ ಧ್ವಂಸವಾಗಿದ್ದು ನಾಲ್ಕು ಜಾನುವಾರುಗಳಿಗೆ ಗಾಯವಾಗಿದೆ.
ಮಳೆ-ಗಾಳಿಗೆ ರೈತರ ಜಮೀನಿನಲ್ಲಿ ವಿದ್ಯುತ್ ತಂತಿಗಳು ಜೋತು ಬಿದ್ದಿದ್ದು ಜಮೀನಿನಲ್ಲಿ ಜನ, ಜಾನುವಾರ ತಿರುಗಾಡುವುದು ಕಷ್ಟವಾಗಿದೆ. ಜಮೀನಿನ ಮರಗಳಿಗೆ ವಿದ್ಯುತ್ ಚಾಲಿತ ತಂತಿಗಳು ತಾಗುತ್ತಿದ್ದು ಆನಾಹುತ ಸಂಭವಿಸುವ ಲಕ್ಷಣಗಳು ಕಾಣುತ್ತಿವೆ. ಜಗಳೂರು ತಾಲೂಕಿನ ಬೊಮ್ಮಕ್ಕನಹಳ್ಳಿ ಗ್ರಾಮದ ಜಮೀನಿನಲ್ಲಿ ವಿದ್ಯುತ್ ತಂತಿಗಳು ಮರಕ್ಕೆ ತಾಕುವಂತಿವೆ. ಬೆಸ್ಕಾಂ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಸ್ಪಂದನೆ ಸಿಗುತ್ತಿಲ್ಲ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಅರಳಿಕಟ್ಟೆ ಗ್ರಾಮದಲ್ಲಿ ಬಿರುಗಾಳಿ ಸಹಿತ ಮಳೆಗೆ ಮನೆ ಮೇಲೆ ವಿದ್ಯುತ್ ಕಂಬ ಬಿದ್ದಿದೆ. ಗೀತಾ ರಾಘವೇಂದ್ರ ಎಂಬುವವರಿಗೆ ಸೇರಿದ ಮನೆ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ಬಾರದ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ಸಂತೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಇಬ್ಬರು ಶಾಸಕರಿಗೆ ಸಚಿವ ಸ್ಥಾನ ನೀಡಲು ಆಗ್ರಹಿಸಿ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಸಿಎಂ, ಡಿಸಿಎಂಗೆ ಪತ್ರ ಬರೆಯಲಾಗಿದೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್ ಪೀರ್ & ಸಮಿತಿಯು ಪತ್ರ ಬರೆದಿದೆ. ಚಿತ್ರದುರ್ಗ ಜಿಲ್ಲೆಯ 6 ಕ್ಷೇತ್ರಗಳ ಪೈಕಿ 5ರಲ್ಲಿ ಕಾಂಗ್ರೆಸ್ ಗೆದ್ದಿದೆ. ಚಿತ್ರದುರ್ಗ ಜಿಲ್ಲೆಯ ಬಹುತೇಕ ಶಾಸಕರು 4-5 ಬಾರಿ ಗೆದ್ದಿದ್ದಾರೆ. ಐವರು ಶಾಸಕರಲ್ಲಿ ಇಬ್ಬರಿಗೆ ಮಂತ್ರಿ ಸ್ಥಾನ ನೀಡುವಂತೆ ಮನವಿ ಪತ್ರ ಬರೆದಿದ್ದಾರೆ.
ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ ಅವರು ಶಾಸಕ S.S.ಮಲ್ಲಿಕಾರ್ಜುನ್ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿದ್ದಾರೆ. ವೈದ್ಯಕೀಯ, ಶಿಕ್ಷಣ, ವಸತಿ ಯಾವುದಾದರೂ ಒಂದು ಖಾತೆ ನೀಡಲಿ. S.M.ಕೃಷ್ಣ, ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿ ಕೆಲಸ ಮಾಡಿದ್ದಾರೆ ಎಂದು ಶಾಸಕ S.S.ಮಲ್ಲಿಕಾರ್ಜುನ್ಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದ್ದಾರೆ.
ಒಳಮೀಸಲಾತಿಯಿಂದಲೇ 45 ಕ್ಷೇತ್ರಗಳಲ್ಲಿ ಬಿಜೆಪಿ ಸೋತಿದೆ ಎಂದು ಆತ್ಮಾವಲೋಕನ ಸಭೆಯಲ್ಲಿ ಮಾಜಿ ಶಾಸಕ ರೇಣುಕಾಚಾರ್ಯ ಭಾವುಕರಾಗಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಹಿರೇಕಲ್ಮಠದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಕೇಂದ್ರ ನಾಯಕರು 72 ಹೊಸಬರಿಗೆ ಟಿಕೆಟ್ ನೀಡಿದ್ದರು. 72 ಹೊಸಬರ ಪೈಕಿ 42 ಜನರು ಚುನಾವಣೆಯಲ್ಲಿ ಸೋತಿದ್ದಾರೆ. ಈ ತಂತ್ರಗಾರಿಕೆ ನಮ್ಮ ರಾಜ್ಯಕ್ಕಲ್ಲ. ಬೆಲೆ ಏರಿಕೆ ಸಂದರ್ಭದಲ್ಲಿ ಅಕ್ಕಿ ಕಡಿತ ಮಾಡಿದ್ದು ತಪ್ಪು. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಕೆಲಸ ಮಾಡಿದೆ ಎಂದಿದ್ದಾರೆ.
ವಿಧಾನಸೌಧದಲ್ಲಿ ಮಾಜಿ ಸಿಎಂ HDK ನೇತೃತ್ವದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, JDS ಶಾಸಕರು ಭಾಗಿಯಾಗಲಿದ್ದಾರೆ.
ಇಂದು ಬೆಳಗ್ಗೆ 9 ಗಂಟೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಲಿದ್ದು ಪ್ರಮುಖವಾಗಿ ಯು.ಟಿ ಖಾದರ್ ಸ್ಪೀಕರ್ ಆಯ್ಕೆ ವಿಚಾರವಾಗಿ ಚರ್ಚೆ ನಡೆಯಲಿದೆ. ಈಗಾಗಲೇ ಯು.ಟಿ ಖಾದರ್ ನ್ನ ಸ್ಪೀಕರ್ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ಮತ್ತೆ ಮಳೆ ಹಿನ್ನೆಲೆ ನಗರದ ಅಂಡರ್ ಪಾಸ್ ಗಳಲ್ಲಿ ಮಳೆ ನೀರು ತುಂಬಿದೆ. ಶಿವಾನಂದ ಸರ್ಕಲ್ ಬಳಿಯ ರೈಲ್ವೇ ಅಂಡರ್ ಪಾಸ್ನಲ್ಲಿ ಮಳೆ ನೀರು ನಿಂತಿದೆ. ಈ ವೇಳೆ ಯುವಕನೊಬ್ಬ ಅಂಡರ್ ಪಾಸ್ ಬಳಿ ನಿಂತು ವಾಹನಗಳನ್ನ ಬೇರೆ ಕಡೆ ಹೋಗಲು ಸೂಚನೆ ನೀಡುತ್ತಿದ್ದಾನೆ. ಪ್ರತಿ ವಾಹನಗಳನ್ನೂ ಬೇರೆ ದಾರಿಗೆ ಹೋಗಿ ಎನ್ನುತ್ತಿದ್ದ ದೃಶ್ಯ ಕಂಡುಬಂದಿದೆ.
ರಾಜ್ಯದ 3 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಭಾರಿ ಮಳೆ(Rain)ಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಉತ್ತರ ಒಳನಾಡಿನ ಕೆಲವು ಕಡೆ ಅಧಿಕ ಮಳೆಯಾಗಲಿದೆ. ಗಾಳಿಯ ವೇಗವು ಗಂಟೆಗೆ 40 ಕಿ.ಮೀ ರಿಂದ 50 ಕಿ.ಮೀ ಇರುವ ಸಾಧ್ಯತೆ ಇದೆ.
Karnataka Rains: ರಾಜ್ಯದ ಈ 3 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, 3 ದಿನ ಮಹಾ ಮಳೆಯ ಮುನ್ಸೂಚನೆ#rain #karnataka #weatherhttps://t.co/MwrQKKOnGZ
— TV9 Kannada (@tv9kannada) May 24, 2023
ಇಂದು ಸಂಜೆ 6.30ಕ್ಕೆ ವಿಶೇಷ ವಿಮಾನದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳಲಿದ್ದಾರೆ. ಸಂಪುಟ ವಿಸ್ತರಣೆ ಸಂಬಂಧ ಹೈಕಮಾಂಡ್ ನಾಯಕರ ಜೊತೆ ಚರ್ಚೆ ನಡೆಸಲಿದ್ದಾರೆ.
Published On - 8:11 am, Wed, 24 May 23