Karnataka Latest News Highlights: ಕಾಂಗ್ರೆಸ್ನ ಗ್ಯಾರಂಟಿ ಘೋಷಣೆಯಂತೆ(Congress Guarantee) ರಾಜ್ಯದಲ್ಲಿ ಇಂದಿನಿಂದ ಅನ್ನಭಾಗ್ಯ(Anna Bhagya) ಯೋಜನೆ ಜಾರಿಯಾಗಲಿದೆ. 5 ಕೆಜಿ ಅಕ್ಕಿ ಜೊತೆ ಉಳಿದ 5 ಕೆಜಿ ಅಕ್ಕಿ ಬದಲಿಗೆ ಹಣ ನೀಡ್ತೇವೆ ಎಂದು ಬೆಂಗಳೂರಿನಲ್ಲಿ ಆಹಾರ ಇಲಾಖೆ ಸಚಿವ ಕೆ.ಹೆಚ್.ಮುನಿಯಪ್ಪ(KH Muniyappa) ತಿಳಿಸಿದ್ದಾರೆ. ಹೆಚ್ಚುವರಿ 5 ಕೆಜಿ ಅಕ್ಕಿ ಸಿಗುವವರೆಗೂ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತೆ ಎಂದಿದ್ದಾರೆ. ಮತ್ತೊಂದೆಡೆ ರಾಜ್ಯದಲ್ಲಿ ಇಂದಿನಿಂದ ಮಹತ್ವದ ಗೃಹಜ್ಯೋತಿ ಯೋಜನೆ(Gruha Jyothi Scheme) ಜಾರಿಯಾಗಲಿದೆ. ಮತ್ತೊಂದೆಡೆ ಮುಂಗಾರು(Monsoon) ಮಳೆ ಕೈ ಕೊಟ್ಟ ಹಿನ್ನೆಲೆ ಜಲಾಶಯದ ನೀರು ತಳಮಟ್ಟಕ್ಕೆ ಹೋಗುತ್ತಿದೆ. ರಾಜ್ಯದ ಪ್ರಮುಖ ಸುದ್ದಿಗಳ ಲೈವ್ ಅಪ್ಡೇಟ್ಸ್ಗಾಗಿ ಟಿವಿ9 ಡಿಜಿಟಲ್ ಫಾಲೋ ಮಾಡಿ.
14 ಐಎಫ್‌ಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸುಭಾಷ್ ಮಲ್ಖೇಡೆ-ಪಿಸಿಸಿಎಫ್(ಮುಖ್ಯ ವೈಲ್ಡ್ ಲೈಫ್ ವಾರ್ಡನ್) ಬೆಂಗಳೂರು, ಜಗತ್ ರಾಮ್-ಪಿಸಿಸಿಎಫ್ ಮತ್ತು ಸದಸ್ಯ ಕಾರ್ಯದರ್ಶಿ, ಜೀವ ವೈವಿಧ್ಯ ಮಂಡಳಿ, ಸೀಮಾ ಗಾರ್ಗ್-ಪಿಸಿಸಿಎಫ್(ಇಡಬ್ಲ್ಯುಪಿಆರ್‌ಟಿ ಮತ್ತು ಸಿಸಿ) ಬೆಂಗಳೂರು, ಜಗ್ ಮೋಹನ್ ಶರ್ಮ-ಪಿಸಿಸಿಎಫ್ ಮತ್ತು ಡಿಜಿ(ಇಎಂಪಿಆರ್‌ಐ) ಬೆಂಗಳೂರು, ಶ್ರೀನಿವಾಸುಲು-ಎಪಿಸಿಸಿಎಫ್(ಸಂಶೋಧನೆ) ಬೆಂಗಳೂರು, ಬಿಶ್ವಜಿತ್ ಮಿಶ್ರ, ಎಪಿಸಿಸಿಎಫ್(ಕಾರ್ಯ ಯೋಜನೆ) ಬೆಂಗಳೂರು, ಉಪೇಂದ್ರ ಪ್ರತಾಪ್ ಸಿಂಗ್-ಸಿಸಿಎಫ್, ಚಿಕ್ಕಮಗಳೂರು ವೃತ್ತ, ಡಾ.ಸುನೀಲ್ ಪನ್ವರ್-ಸಿಸಿಎಫ್, ಕಲಬುರಗಿ ವೃತ್ತ, ಮರಿಯ ಕ್ರಿಶ್ಟು ರಾಜ-ಸಿಎಫ್, ರಾಜ್ಯ ಅರಣ್ಯ ಅಕಾಡೆಮಿ, ಧಾರವಾಡ, ಎ.ವಿ.ಸೂರ್ಯ ಸೇನ್-ಡಿಸಿಎಫ್, ರಾಮನಗರ ವಿಭಾಗ, ಅಂತೋನಿ ಮರಿಯಪ್ಪ-ಡಿಸಿಎಫ್, ಮಂಗಳೂರು ವಿಭಾಗ, ಡಾ.ದಿನೇಶ್ ಕುಮಾರ್.ವೈ.ಕೆ-ಡಿಸಿಎಫ್, ಬೆಂಗಳೂರು ನಗರ ವಿಭಾಗ, ಸರೀನಾ ಸಿಕ್ಕಲಿಗರ್-ಡಿಸಿಎಫ್, ಕಲಬುರಗಿ ವಿಭಾಗ, ಎಂ.ವಿ.ಆಶೀಶ್ ರೆಡ್ಡಿ-ಡಿಸಿಎಫ್, ಭದ್ರಾವತಿ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.
ಬೆಂಗಳೂರು: ನಮ್ಮ ಸಮಾಜದಲ್ಲಿ ಬಡವರು ಹಾಗೂ ಶ್ರೀಮಂತರು ಎಂಬ ತಾರತಮ್ಯ ಇದೆ. ಶ್ರೀಮಂತರು ಅವರ ಆರೋಗ್ಯ ಕಾಪಾಡಿಕೊಳ್ಳುತ್ತಾರೆ. ಜನ ಈಗ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಇರೋ ಸೌಲಭ್ಯ, ವೈದ್ಯರು ಸರ್ಕಾರಿ ಆಸ್ಪತ್ರೆಯಲ್ಲೂ ಇದ್ದಾರೆ. ಆದರೆ ಜನರು ತಮ್ಮ ಮನಸ್ಸನ್ನು ಬದಲಿಸಬೇಕು. ಸರ್ಕಾರಿ ಆಸ್ಪತ್ರೆಗಳ ಮೇಲೆ ನಂಬಿಕೆ ಇಡಬೇಕು. ವೈದ್ಯರು ಕೂಡ ಅದನ್ನ ಉಳಿಸಿಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ವೈದ್ಯರ ದಿನಾಚರಣೆ ವೇಳೆ ತಮ್ಮೂರಿಗೆ ಆಸ್ಪತ್ರೆ ಸ್ಥಿತಿ ವಿವರಿಸಿದ ಸಿಎಂ ಸಿದ್ದರಾಮಯ್ಯ, ನಮ್ಮ ಊರು ಸಿದ್ದರಾಮನಹುಂಡಿ, ಅಲ್ಲೊಂದು ಸರ್ಕಾರಿ ಆಸ್ಪತ್ರೆಯಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಇದ್ದಾರೆ, ಕ್ವಾರ್ಟರ್ಸ್ ಕೂಡ ಇದೆ. ಆದರೆ ವೈದ್ಯರು ಮಾತ್ರ ಕ್ವಾರ್ಟರ್ಸ್ನಲ್ಲಿ ಉಳಿದುಕೊಳ್ಳುವುದಿಲ್ಲ. ನೀನು ಸಿಎಂ ಆಗಿದ್ದೀಯಾ, ಊರಲ್ಲಿ ವೈದ್ಯರು ಉಳಿದುಕೊಳ್ಳುವುದಿಲ್ಲ ಎಂದು ಜನರು ನನ್ನನ್ನು ಕೇಳುತ್ತಾರೆ. ನಾನು ಏನು ಮಾಡುವುದು ಎಂದು ಪ್ರಶ್ನಿಸಿದರು.
ನಾಳೆ ದೆಹಲಿಯಲ್ಲಿ ನಡೆಯಲಿರುವ ಬಿಜೆಪಿ ಸಭೆಯಲ್ಲಿ ಮಾಜಿ ಸಿಎಂ, ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿಎಸ್ ಯಡಿಯೂರಪ್ಪ ಅವರು ಪಾಲ್ಗೊಳ್ಳಲಿದ್ದಾರೆ. ನಾಳೆ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನಿಂದ ದೆಹಲಿಗೆ ಪ್ರಯಾಣ ಕೈಗೊಳ್ಳಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಸಭೆ ನಡೆಯಲಿದೆ.
ಮಳೆ ಬರುತ್ತೆಂಬ ಆಶಾಭಾವನೆಯನ್ನು ಇಟ್ಟುಕೊಂಡಿದ್ದೇವೆ ಎಂದು ಚಿಕ್ಕಮಗಳೂರಿನಲ್ಲಿ ಇಂಧನ ಇಲಾಖೆ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. 15, 20 ದಿನ ಮಳೆ ಬಂದರೆ ಎಲ್ಲಾ ಜಲಾಶಯ ತುಂಬುತ್ತವೆ. ಮಳೆ ಬಾರದಿದ್ದರೆ ವಿದ್ಯುತ್ ಉತ್ಪಾದನೆಯಲ್ಲಿ ಕಷ್ಟವಾಗಬಹುದು. ಎಲ್ಲದಕ್ಕೂ ನಾವು ಸಿದ್ಧರಾಗಿದ್ದೇವೆ. ಹೈಡ್ರೋದಿಂದ ತೊಂದರೆಯಾದರೆ ಸೋಲಾರ್, ವಿಂಡ್, ಥರ್ಮಲ್ ಇದೆ. ಥರ್ಮಲ್ ಪ್ಲಾಂಟ್ ಸೇರಿ ಪಾವಗಡ ಸೋಲಾರ್ ಪ್ಲಾಂಟ್ ವೀಕ್ಷಿಸಿದ್ದೇನೆ. ಹೈಡ್ರೋದಿಂದ ತೊಂದರೆಯಾಗಬಹುದು, ಅಧಿಕಾರಿಗಳ ಜತೆ ಚರ್ಚಿಸಿರುವೆ. ಸೋಲಾರ್, ವಿಂಡ್, ಥರ್ಮಲ್‌ನಿಂದ ಹೆಚ್ಚು ವಿದ್ಯುತ್ ಉತ್ಪಾದನೆ ಆಗುತ್ತಿದೆ ಎಂದರು.
ಹಾವೇರಿ: ಶಕ್ತಿ ಯೋಜನೆ ಬಗ್ಗೆ ಕೆಡಿಪಿ ಸಭೆಯಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸಲಹೆ ನೀಡಿದ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್, ಮೊದಲು ಬಸ್ಗಳಲ್ಲಿ ಪುರುಷ ಪ್ರಯಾಣಿಕರ ಸಂಖ್ಯೆ 60% ಮತ್ತು ಮಹಿಳಾ ಪ್ರಯಾಣಿಕರ ಸಂಖ್ಯೆ ಶೇ. 40 ರಷ್ಟಿತ್ತು. ಈಗ ಪುರುಷ ಪ್ರಯಾಣಿಕರ ಸಂಖ್ಯೆ ಕುಸಿದಿದೆ. ಶೇ.60 ರಷ್ಟು ಮಹಿಳೆಯರು ಪ್ರಯಾಣಿಸುತ್ತಿದ್ದಾರೆ. ಶೇ.40ರಷ್ಟು ಪುರುಷರು ಪ್ರಯಾಣಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಬಸ್ಗಳ ಆದಾಯ ದಿನಕ್ಕೆ 55 ಲಕ್ಷ ಇತ್ತು. ಈಗ 70 ಲಕ್ಷಕ್ಕೆ ಏರಿಕೆಯಾಗಿದೆ ಎಂದರು.
ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ಧಾರಾಕಾರವಾಗಿ ಮಳೆಯಾಗಿದೆ. ನಗರದಲ್ಲಿ ಸುಮಾರು 15ನಿಮಿಷ ಕಾಲ ಧಾರಾಕಾರ ಮಳೆಯಾಗಿದ್ದು, ಬರದನಾಡಿನಲ್ಲಿ ಕಾದಿದ್ದ ಭೂಮಿಗೆ ವರುಣ ದೇವ ತಂಪೆರೆದಿದ್ದಾನೆ.
ಬೆಂಗಳೂರು ನಗರದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಡಿಜಿ ಐಜಿಪಿ ಅಲೋಕ್ ಮೋಹನ್ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತಿದೆ.
ಗದಗ: ಜನರ ಮನಸ್ಸನ್ನ ಕೆಡಿಸಿ ಗೊಂದಲಸೃಷ್ಠಿ ಮಾಡಿ ರಾಜಕೀಯ ಲಾಭ ಪಡೆಯುವ ಬಿಜೆಪಿ ಪ್ರಯತ್ನ ವಿಫಲ ಎಂದು ಸಚಿವ ಹೆಚ್.ಕೆ.ಪಾಟೀಲ ಹೇಳಿದ್ದಾರೆ. ಅಕ್ಕಿ ಹೊಂದಿಸಲು ಕೈಲಾಗದ ಸಿಎಂ ಎಂಬ ಬಿಜೆಪಿ ಟ್ವೀಟ್ಗೆ ತಿರುಗೇಟು ನೀಡಿದ ಅವರು, ಅಕ್ಕಿ ಹೊಂದಿಸಲು ಆಗದಂತೆ ಪರಿಸ್ಥಿತಿ ನಿರ್ಮಾಣ ಮಾಡಿದ್ದೇ ಕೇಂದ್ರ ಸರ್ಕಾರ. ಖಾಸಗಿಯವರಿಗೆ ಅಕ್ಕಿ ಮಾರಾಟ ಮಾಡಿ ಆದರೆ ರಾಜ್ಯ ಸರ್ಕಾರಕ್ಕೆ ಅಕ್ಕಿ ಕೊಡಬೇಡಿ. ಇಂತಹ ನಿಲುವಿಗೆ ಆ ಪಕ್ಷದ ನಾಯಕರಿಗೆ ನಾಚಿಕೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.
ಬೆಂಗಳೂರು: ಬಿಪಿಎಲ್ ಕಾರ್ಡ್ದಾರರಿಗೆ ಅಕ್ಕಿ ಬದಲು ಹಣ ಹಾಕುವ ವಿಚಾರವಾಗಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಕೊಟ್ಟ ಮಾತಿನಂತೆ ಅಕ್ಕಿ ಸಿಗುವವರೆಗೂ ಹಣ ಕೊಡುತ್ತೇವೆ ಎಂದರು. ಸಿಎಂ, ಆಹಾರ ಸಚಿವರು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ಶೇಕಡಾ 80ರಿಂದ 85ರಷ್ಟು ಕಾರ್ಡ್ದಾರರ ಖಾತೆಗೆ ಆಧಾರ್ ಲಿಂಕ್ ಆಗಿದೆ. ಶೇಕಡಾ 15-20ರಷ್ಟು ಕಾರ್ಡ್ದಾರರ ಅಕೌಂಟ್ ಟ್ರೇಸ್ ಆಗಬೇಕು. ಆಧಾರ್ ಲಿಂಕ್ ಖಾತೆಗೆ ಹಣ ಕೊಡಿ ಎಂದರೆ ಹಾಕುತ್ತೇವೆ. ಬಿಜೆಪಿ ಸಲಹೆಯನ್ನೂ ಪರಿಗಣಿಸಿ ಈ ತೀರ್ಮಾನ ಮಾಡಿದ್ದೇವೆ ಎಂದರು.
10 ಕೆಜಿ ಅಕ್ಕಿ ಕೊಡಬೇಕೆಂದು ಬಿಜೆಪಿಗರ ಒತ್ತಾಯ ವಿಚಾರವಾಗಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಬಿಜೆಪಿಯವರ ದ್ವಂದ್ವ ನಿಲುವು ಗೊತ್ತಾಗುತ್ತಿದೆ. ಬಿಜೆಪಿ ನಾಯಕರ ಹೋರಾಟವನ್ನು ನಾವು ತಡೆಯುವುದಿಲ್ಲ. ನೀವು ಕೊಟ್ಟ ಭರವಸೆಗೆ ಹೋರಾಟ ಮಾಡಿ ಎಂದು ಹೇಳಿದ್ದೇವೆ. ನಮ್ಮ ಗ್ಯಾರಂಟಿಗಳ ಬಗ್ಗೆ ಬಿಜೆಪಿಯವರು ಪ್ರಚಾರ ಮಾಡುತ್ತಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರ ಗದಪ್ರಹಾರ ಮಾಡುತ್ತಿದೆ. ರಾಜ್ಯದ ಎಫ್ಸಿಐ ಗೋದಾಮಿನಲ್ಲಿ ಅಕ್ಕಿ ಹುಳು ಹಿಡಿಯುತ್ತಿದೆ. ಕಾಂಗ್ರೆಸ್ಗೆ ಒಳ್ಳೆಯ ಹೆಸರು ಬರಲಿದೆ ಎಂದು ಅಕ್ಕಿ ಕೊಡುತ್ತಿಲ್ಲ. ನಾವು ದೀರ್ಘಾವಧಿಗೆ ಯೋಜನೆ ರೂಪಿಸುತ್ತಿದ್ದೇವೆ. ನಮ್ಮ ರಾಜ್ಯದಲ್ಲೂ ಭತ್ತ ಬೆಳೆಯುವರಿಗೂ ಬೆಂಬಲ ನೀಡುತ್ತೇವೆ ಎಂದರು.
ಏಕ ರೂಪ ನಾಗರಿಕತೆ ಜಾರಿ ವಿಚಾರವಾಗಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ನಮ್ಮ ರಾಷ್ಟ್ರೀಯ ಪಕ್ಷ ಅದರ ಬಗ್ಗೆ ಅಭಿಪ್ರಾಯ ತಿಳಿಸುತ್ತದೆ. ನಾವು ಬದುಕುತ್ತಿದ್ದೇವೆ. ನಮ್ಮ ಪಾರ್ಟಿ ಒಂದೊಂದು ಇಂಚು ತಿಳಿಸುತ್ತದೆ. ಅದರ ಬಗ್ಗೆ ಪ್ರತಿಕ್ರಿಯೆ ಕೊಡಲ್ಲ. ಇದು ನನ್ನ ಸ್ಟ್ಯಾಂಡ್ ಎಂದರು.
ಹೊಂದಾಣಿಕೆ ರಾಜಕಾರಣ ಮಾಡಿದ್ದಾರೆ ಎಂಬ ಪರಾಜಿತ ಅಭ್ಯರ್ಥಿಗಳ ಆರೋಪ ಸಂಬಂಧ ಶಿಸ್ತು ಕ್ರಮಕ್ಕೆ ಒತ್ತಾಯಿಸಿ ಸಿಎಂ ಸಿದ್ದರಾಮಯ್ಯ ಪತ್ರ ಬರೆದ ವಿಚಾರವಾಗಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್, ಈ ಬಗ್ಗೆ ನಮ್ಮ ಪಕ್ಷದ ಶಿಸ್ತು ಪಾಲನಾ ಸಮಿತಿ ನೋಡಿಕೊಳ್ಳುತ್ತದೆ ಎಂದರು.
ಹುಬ್ಬಳ್ಳಿ ಧಾರವಾಡ ಪಾಲಿಕೆ ವಿರೋಧ ಪಕ್ಷದ ನಾಯಕನ ದೊರೆರಾಜ ಮಣಿಕುಂಟ್ಲ ಅವರಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಫರ್ ನೀಡಿದ್ದಾರೆ. ನಮ್ಮ ಪಕ್ಷಕ್ಕೆ ಬಂದುಬಿಡಿ, ನೀವು ಮೇಯರ್ ಆಗುತ್ತೀರಾ, ಇಲ್ಲಿದಿದ್ದರೆ ಆಗಲ್ಲ. ಕಾಂಗ್ರೆಸ್ ಪಕ್ಷ ನಿನ್ನನ್ನು ಏನೂ ಮಾಡಲ್ಲ ಎಂದರು. ಮೇಯರ್ ಕಚೇರಿ ಉದ್ಘಾಟನೆಗೆ ಬಂದಾಗ ಈ ಆಫರ್ ನೀಡಿದ್ದಾರೆ. ಈ ವೇಳೆ ನಿಮ್ಮ ಆಶೀರ್ವಾದ ಬೇಕು ಎಂದು ದೊರೆರಾಜ ಮಣಿಕುಂಟ್ಲ ಹೇಳಿದರು.
ಹಾವೇರಿ: ಮಳೆ ಕೊರತೆಯಿಂದ ರೈತರು ಈಗಾಗಲೇ ಎರಡು ಬಾರಿ ಬಿತ್ತನೆ ಕೈಗೊಂಡು ಕೈ ಸುಟ್ಟುಕೊಂಡಿದ್ದು, 3ನೇ ಬಾರಿ ಬಿತ್ತನೆಗೆ ಮುಂದಾಗಿದ್ದಾರೆ. ಈ ಬಗ್ಗೆ ಬೇಸರ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್, ಕೃಷಿ ಇಲಾಖೆ ಜೆಡಿ ಹಾಗೂ ಡಿಸಿಸಿ ಬ್ಯಾಂಕ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಎರಡು ಬಾರಿ ಬಿತ್ತನೆ ಮಾಡಿ ನಷ್ಟಕ್ಕೊಳಗಾದ ರೈತರು ಎಷ್ಟಿದ್ದಾರೆ? ಎಷ್ಟು ಎಕರೆ ನಷ್ಟವಾಗಿದೆ? ಇನ್ಶೂರೆನ್ಸ್ ಕವರೇಜ್ ಎಷ್ಟಾಗಿದೆ ಎಂದು ಸಚಿವರ ಕೇಳಿದಾಗ ಜೆಡಿ ಅವರು ಸಮರ್ಪಕ ಮಾಹಿತಿ ನೀಡಿಲ್ಲ. ಈ ವೇಳೆ ಬಿತ್ತನೆ ಲಾಸ್ ಆಗಿದೆ, ಈಗ ಪರ್ಯಾಯವಾಗಿ ಏನು ಬೆಳೆಯಬಹುದು ಎಂದು ಪ್ರಶ್ನಿಸಿದರು. ಇದಕ್ಕೆ ಸೂರ್ಯಕಾಂತಿ ಬೆಳೆ ಬೆಳೆಯಬಹುದು ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಮೂಲಕ ರೈತರಿಗೆ ಜಾಗೃತಿ ಮೂಡಿಸಬೇಕು. ಇಲ್ಲದಿದ್ದರೆ ಮುಂದೆ ಏನಾದರು ಅನಾಹುತ ಆದರೆ ನೀವೇ ಜವಾಬ್ದಾರಿ ಎಂದರು.
ಬಾಗಲಕೋಟೆ: ಎಂ.ಪಿ.ರೇಣುಕಾಚಾರ್ಯ ಕಾಂಗ್ರೆಸ್ ಕಡೆ ಮುಖ ಮಾಡುವ ವಿಚಾರವಾಗಿ ಮಾತನಾಡಿದ ತೋಟಗಾರಿಕೆ ಸಚಿವ ಮಲ್ಲಿಕಾರ್ಜುನ, ಅವರು ನಮ್ಮ ಜಿಲ್ಲೆಯವರು, ಬರುತ್ತೀನೆ ಅಂದರೆ ನಾವು ಕರೆದುಕೊಳ್ಳಬೇಕಲ್ಲ. ನಮ್ಮ ಪಕ್ಷದಲ್ಲಿ ಜಾಗ ಇಲ್ಲಪ್ಪ, ನಮ್ಮ ಜಿಲ್ಲೆಯಲ್ಲಿ ಅವರಿಗೆ ಜಾಗ ಇಲ್ಲ. ರೇಣುಕಾಚಾರ್ಯ ಕಾಂಗ್ರೆಸ್ಗೆ ಬರುತ್ಥೇನೆ ಅಂದರೆ ಇಲ್ಲಿ ಜಾಗ ಬೇಕಲ್ಲ. ಒಮ್ಮೆ ಹಾಗೇ ಮಾತಾಡುತ್ತಾರೆ, ಮತ್ತೊಮ್ಮೆ ಬೇರೆ ರೀತಿ ಮಾತಾಡುತ್ತಾರೆ. ಅಧಿಕಾರದಲ್ಲಿ ಇದ್ದಾಗ ಅವರು ಕಾಂಗ್ರೆಸ್ ಬಗ್ಗೆ ಮಾತಾಡಬೇಕಿತ್ತು ಎಂದರು.
ಒಂದೇ ಹುದ್ದೆಗೆ ಇಬ್ಬರನ್ನ ವರ್ಗಾವಣೆ ಮಾಡಿ ಸರ್ಕಾರ ಅಧಿಸೂಚನೆ ಹೊರಡಿಸಿರುವ ಘಟನೆ ನಡೆದಿದೆ. ಲೋಕೋಪಯೋಗಿ ಇಲಾಖೆಯಿಂದ ಆರೋಗ್ಯ ಇಲಾಖೆಯ ಉಪ ಮುಖ್ಯ ಇಂಜಿನಿಯರ್ ಹುದ್ದೆಗೆ ಧರ್ಮಪ್ರಸಾದ್ ಗೌತಮ್ ಗಾಂವ್ಕರ್, ಸತ್ಯನಾರಾಯಣ ರಾವ್ರನ್ನು ನೇಮಕ ಮಾಡಿ PWD ಇಲಾಖೆ ಆದೇಶ ಹೊರಡಿಸಿ ಎಡವಟ್ಟು ಮಾಡಿದೆ.
ವಿರೋಧ ಪಕ್ಷದ ನಾಯಕ ಯಾರು ಎಂದು ನಾಳೆ ಗೊತ್ತಾಗಲಿದೆ ಎಂದು ಚಿಕ್ಕಮಗಳೂರಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಇಲ್ಲಿ ಯಾವುದೇ ರಾಜಕೀಯ ಚರ್ಚೆಯಾಗಿಲ್ಲ. ರಾಜಕೀಯದ ಬಗ್ಗೆ ಚರ್ಚೆ ಮಾಡಲು ಇಷ್ಟು ದೂರ ಬರಬೇಕಾ? ಮಾಜಿ ಸಚಿವ ಆರ್.ಅಶೋಕ್ ಹುಟ್ಟುಹಬ್ಬಕ್ಕಾಗಿ ಬಂದಿದ್ದೇವೆ. ಸಮಯ ಸಿಕ್ತು, ಹಾಗಾಗಿ ಹುಟ್ಟುಹಬ್ಬ ಆಚರಿಸಲು ಬಂದಿದ್ದೇವೆ. ಹುಟ್ಟುಹಬ್ಬ ಆಚರಣೆ ಮಾಡಿ ಈಗ ವಾಪಸ್ ತೆರಳುತ್ತಿದ್ದೇವೆ ಎಂದರು.
ಗೃಹಜ್ಯೋತಿ ಯೋಜನೆಯಲ್ಲಿ ಬಹಳಷ್ಟು ಗೊಂದಲಗಳಿವೆ ಎಂದು ಚಿಕ್ಕಮಗಳೂರಿನಲ್ಲಿ ಮಾಜಿ ಸಿಎಂ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಹಳಷ್ಟು ಗೊಂದಲ ಮಾಡಿ ವಿದ್ಯುತ್ ದರ ಹೆಚ್ಚಿಸಿದ್ದಾರೆ. ಸಂಪುಟ ಸಭೆಯಲ್ಲಿ ನಿರ್ಣಯಗಳನ್ನು ತೆಗೆದುಕೊಂಡಿದ್ದಾರೆ. ಒಂದೂವರೆ ತಿಂಗಳಲ್ಲಿ ಕೆಲ ನಿರ್ಣಯ ತೆಗೆದುಕೊಂಡಿದ್ದಾರೆ. ಸರ್ಕಾರದ ನಿರ್ಧಾರ ಬಗ್ಗೆ ವಿಸ್ತೃತವಾಗಿ ಚರ್ಚೆ ಮಾಡ್ತೇವೆ ಎಂದರು.
ರಾಜ್ಯ ಬಜೆಟ್ ಮಂಡನೆಗೆ ಇನ್ನೊಂದೇ ವಾರ ಬಾಕಿ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆಗೆ ಅಂತಿಮ ಹಂತದ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ವಸಂತನಗರದ KSFC ಕಚೇರಿಯಲ್ಲಿ ಸಭೆ ನಡೆಸುತ್ತಿರುವ ಸಿಎಂ ಹಣಕಾಸು ಇಲಾಖೆಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ.
BPL ಕಾರ್ಡ್ದಾರರಿಗೆ ಅಕ್ಕಿ ಬದಲು ಹಣ ನೀಡುವ ವಿಚಾರಕ್ಕೆ ಸಂಬಂಧಿಸಿ ಜುಲೈ 10ರಿಂದ ಅಕ್ಕಿ ಬದಲು ಹಣ ಕೊಡುವ ಪ್ರಕ್ರಿಯೆ ಶುರುವಾಗುತ್ತೆ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಜುಲೈನಲ್ಲಿ ಅಕ್ಕಿ ಬದಲು ಹಣ ಕೊಡ್ತೇವೆ ಅಂತಾ ಹೇಳಿದ್ದೆವು. ಆದರೆ ಜುಲೈ 1ರಂದೇ ಹಣ ಕೊಡುತ್ತೇವೆ ಅಂತಾ ಹೇಳಿಲ್ಲ. ಈ ತಿಂಗಳಿನಿಂದಲೇ ಅನ್ನಭಾಗ್ಯ, ಗೃಹಜ್ಯೋತಿ ಯೋಜನೆ ಜಾರಿ ಮಾಡಿದ್ದೇವೆ. ಗೃಹಜ್ಯೋತಿ ಯೋಜನೆಯಲ್ಲಿ ಆಗಸ್ಟ್ ತಿಂಗಳ ಬಿಲ್ ಉಚಿತ ಎಂದರು.
ಕುಡಿದು ಬಂದು ನಿತ್ಯ ಮಗನಿಂದ ಕಿರುಕುಳ ಹಿನ್ನೆಲೆ ಮಗನ ಕಿರುಕುಳ ತಾಳಲಾರದೆ ತಂದೆಯೇ ಮಗನನ್ನು ಕೊಲೆ ಮಾಡಿದ ಘಟನೆ ನಡೆದಿದೆ. ದೊಡ್ಡಬಳ್ಳಾಪುರ ತಾಲೂಕಿನ ವಾಣಿಗರಹಳ್ಳಿ ಗ್ರಾಮದಲ್ಲಿ ಕೈ-ಕಾಲು ಕಟ್ಟಿ ಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ. ಜಯರಾಮಯ್ಯ (58) ಎಂಬುವವರು ಆದರ್ಶ್ (28) ಎಂಬ ತಮ್ಮ ಮಗನನ್ನೇ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ. ಮಗ ಆದರ್ಶ್ ದಿನನಿತ್ಯ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡ್ತಿದ್ದನಂತೆ. ಇತ್ತೀಚೆಗೆ ತಾಯಿಯ ಬಳಿ ಹಣ ಕೇಳಿ ಕೊಡಲಿಲ್ಲ ಅಂತ ತಾಯಿ ಮೇಲೆ ಹಲ್ಲೆ ಮಾಡಿದ್ದನಂತೆ. ಇದ್ರಿಂದ ಬೇಸತ್ತು ರಾತ್ರಿ ಹೊಡೆದು ಕೊಲೆ ಮಾಡಿ ಬೆಂಕಿ ಹಚ್ಚಿದ್ದಾರೆ.
ರಾಜ್ಯದ ವಿವಿಧ ಇಲಾಖೆಗಳಲ್ಲಿ 2.50 ಲಕ್ಷ ಹುದ್ದೆ ಖಾಲಿ ಇದೆ. ಖಾಲಿ ಹುದ್ದೆಗಳ ಭರ್ತಿ ಮಾಡುವ ಕಾರ್ಯ ಶುರುವಾಗಿದೆ. ಪೊಲೀಸ್ ಇಲಾಖೆಯಲ್ಲಿ 15 ಸಾವಿರ ಹುದ್ದೆ ಖಾಲಿ ಇದೆ. ಮೊದಲ ಹಂತದಲ್ಲಿ 4 ಸಾವಿರ ಪೊಲೀಸ್ ಕಾನ್ಸ್ಟೇಬಲ್, 400 ಪಿಎಸ್ಐ ಹುದ್ದೆ ಭರ್ತಿ ಮಾಡಲು ಮುಂದಾಗಿದ್ದೇವೆ ಎಂದು ಮೈಸೂರಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಮೈಸೂರು ಅರಮನೆಗೆ ಕುಟುಂಬಸ್ಥರೊಂದಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭೇಟಿ ನೀಡಿದ್ದಾರೆ. ಅರಮನೆ ಆಡಳಿತ ಮಂಡಳಿ ಡಾ.ಪರಮೇಶ್ವರ್ಗೆ ಸ್ವಾಗತ ನೀಡಿ ಮೈಸೂರು ಪೇಟ ತೊಡಿಸಿ ನೆನಪಿನ ಕಾಣಿಕೆ ನೀಡಿದ್ರು. ನೆನಪಿನಾರ್ಥ ಡಾ.ಜಿ.ಪರಮೇಶ್ವರ್ ದಂಪತಿ ಗಂಧದ ಗಿಡ ನೆಟ್ಟರು. ಬಳಿಕ ಪ್ರಮೋದಾದೇವಿ ಒಡೆಯರ್ ಭೇಟಿಯಾದರು.
ಇಂದಿನಿಂದ 200 ಯೂನಿಟ್ ಉಚಿತ ವಿದ್ಯುತ್ ಯೋಜನೆ ಜಾರಿ ಸಂಬಂಧ ನಾವು ಕೊಟ್ಟ ಭರವಸೆ ಈಡೇರಿಸುತ್ತಿದ್ದೇವೆ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹೇಳಿದ್ರು. ತಾತ್ಕಾಲಿಕವಾಗಿ 5 ಕೆಜಿ ಅಕ್ಕಿ ಬದಲು ಬಡವರಿಗೆ ಹಣ ನೀಡುತ್ತೇವೆ. ಹೆಚ್ಚುವರಿ ಅಕ್ಕಿ ಸಿಗದ ಹಿನ್ನೆಲೆ ಬ್ಯಾಂಕ್ ಖಾತೆಗೆ ಹಣ ಹಾಕ್ತಿದ್ದೇವೆ. ಕೇಂದ್ರ ಅಕ್ಕಿ ಕೊಡದ ಕಾರಣ ವಿಧಿಯಿಲ್ಲದೆ ಹಣ ಕೊಡುತ್ತಿದ್ದೇವೆ ಎಂದರು.
ಸಿಲಿಂಡರ್ ಸೋರಿಕೆಯಾಗಿ ಬೆಂಕಿ ತಗುಲಿದ್ದು ಮನೆಯಲ್ಲಿದ್ದ ನಾಲ್ವರಿಗೆ ಗಾಯಗಳಾದ ಘಟನೆ ಬೆಳಗಾವಿಯ ಸುಭಾಷ್ ಗಲ್ಲಿಯಲ್ಲಿ ಬೆಳಗಿನ ಜಾವ ನಡೆದಿದೆ. NWKRTC ನೌಕರ ಮಂಜುನಾಥ ಅಥಣಿ, ಪತ್ನಿ ಲಕ್ಷ್ಮೀಗೆ ಗಂಭೀರ ಗಾಯಗಳಾಗಿದ್ದು ಮಕ್ಕಳಾದ ವೈಷ್ಣವಿ(13), ಸಾಯಿಪ್ರಸಾದ್(10)ಗೆ ಸಣ್ಣಪುಟ್ಟ ಗಾಯಗಳಾಗಿವೆ. ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ನಾಲ್ವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಎಂದಿನಂತೆ ಬೆಳಗ್ಗೆ ಎದ್ದು ಚಹಾ ಮಾಡಲು ಲೈಟರ್ ಆನ್ ಮಾಡಿದಾಗ ಬೆಂಕಿ ಹತ್ತಿಕೊಂಡಿದೆ.
ಬಿಜೆಪಿ ಪರ ಪ್ರಚಾರ ಮಾಡಿದ ಆರೋಪದಡಿ ಅಯ್ಯಣ್ಣ ಮರದೂರು ಎಂಬ ಸರ್ಕಾರಿ ನೌಕರ ಅಮಾನತು ಮಾಡಿ ಕಲಬುರಗಿ ವಿಭಾಗದ ಶಿಕ್ಷಣ ಇಲಾಖೆ ಆಯುಕ್ತರ ಆನಂದ ಪ್ರಕಾಶ್ ಮೀನಾ ಆದೇಶ ಹೊರಡಿಸಿದ್ದಾರೆ. ಶಿಕ್ಷಣ ಇಲಾಖೆ ಪ್ರಥಮ ದರ್ಜೆ ಸಹಾಯಕ ಅಯ್ಯಣ್ಣ ಮರದೂರು ಅಮಾನತಾಗಿದ್ದಾರೆ. ವಿಧಾನಸಭೆ ಚುನಾವಣೆ ವೇಳೆ ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಆರೋಪ ಕೇಳಿ ಬಂದಿದ್ದು ಈ ಬಗ್ಗೆ ದೂರು ಬಂದ ಹಿನ್ನೆಲೆ ತನಿಖೆ ನಡೆಸಿ ಅಯ್ಯಣ್ಣ ಮರದೂರು ಅಮಾನತು ಮಾಡಲಾಗಿದೆ.
ನಮ್ಮ ಬಳಿ ಫಾಸ್ಟ್ ಟ್ಯಾಗ್ ಇದೆ. ಆದ್ರೆ ಹಣವಿಲ್ಲ ಹಣ ರಿಚಾರ್ಜ್ ಮಾಡುವುದಕ್ಕೂ ಬಿಡುತ್ತಿಲ್ಲ. ಫಾಸ್ಟ್ ಟ್ಯಾಗ್ ನಲ್ಲಿ ಹಣವಿಲ್ಲವೆಂದು 310 ರೂ ವಸೂಲಿ ಮಾಡಿದ್ದಾರೆ. ನಾವು ಒಂದೇ ಕಡೆ 310 ರೂ ಹಣ ಕಟ್ಟಿದ್ರೆ ಎಲ್ಲಿಗೆ ಹೋಗ್ಬೇಕು ಏನ್ ಮಾಡ್ಬೇಕು? ಇದು ಟೋಲ್ ಅಲ್ಲ ಸುಲಿಗೆ ಮಾಡುತ್ತಿದ್ದಾರೆ. ಇಷ್ಟೊಂದು ಹಣ ಕಟ್ಟಬೇಕು ಎಂದು ಹೇಳಿದ್ರೆ ನಾವು ಸರ್ವಿಸ್ ರಸ್ತೆಯಲ್ಲಿ ಹೋಗುತ್ತಿದ್ವಿ. ಇದೆ ರೀತಿ ವಸೂಲಿ ಮಾಡಿದ್ರೆ ಸೀದಾ ತಿರುಪತಿ ತಿಮ್ಮಪನ ಪಾದನೆ ನಮಗೆಲ್ಲ ಗತಿ ಎಂದು ಸ್ಟೇಟ್ 2 ಗಣಂಗೂರು ಟೋಲ್ ಗೇಟ್ ಬಳಿ ವೃದ್ಧೆ ಆಕ್ರೋಶ ಹೊರ ಹಾಕಿದ್ದಾರೆ.
BJP ನಾಯಕರ ವಿರುದ್ಧವೇ ರೇಣುಕಾಚಾರ್ಯ ಹೇಳಿಕೆ ಹಿನ್ನೆಲೆ ಮಾಜಿ ಸಚಿವ ರೇಣುಕಾಚಾರ್ಯಗೆ ಯಡಿಯೂರಪ್ಪ ಬುಲಾವ್ ಕೊಟ್ಟಿದ್ದಾರೆ. ಬೆಳಗ್ಗೆ 11ರ ಬಳಿಕ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ BSY ನಿವಾಸದಲ್ಲಿ ರೇಣುಕಾಚಾರ್ಯ ಭೇಟಿ ಮಾಡಲಿದ್ದಾರೆ.
ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಡೆಡ್ಲೈನ್ ಇಲ್ಲ. ಗೃಹಜ್ಯೋತಿ ಯೋಜನೆಗೆ 86.5 ಲಕ್ಷ ಜನರು ಅರ್ಜಿ ಸಲ್ಲಿಸಿದ್ದಾರೆ ಎಂದು ಚಿಕ್ಕಮಗಳೂರಿನಲ್ಲಿ ಇಂಧನ ಖಾತೆ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ. ಜೂನ್ ತಿಂಗಳ ವಿದ್ಯುತ್ ಬಿಲ್ ಜುಲೈ ತಿಂಗಳಿಗೆ ಬರುತ್ತೆ. ಜುಲೈ ತಿಂಗಳಿನಿಂದ ಎಲ್ಲಾ ಫಲಾನುಭವಿಗಳಿಗೆ ಉಚಿತ ಕರೆಂಟ್. ಗೃಹಜ್ಯೋತಿಗೆ ಅರ್ಜಿ ಹಾಕದಿದ್ರೆ ಮುಂದಿನ ತಿಂಗಳು ಬಿಲ್ ಬರುತ್ತೆ. ‘ಗೃಹಜ್ಯೋತಿ’ ಲಾಭ ಪಡೆಯಲು ಎಲ್ಲರೂ ಅರ್ಜಿ ಹಾಕಲೇಬೇಕು. ಆದಷ್ಟು ಬೇಗ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ರೆ ಒಳ್ಳೇದು ಎಂದರು.
ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಪಂಚೆ ಬಗ್ಗೆ ಸಿ.ಟಿ.ರವಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಮೊದಲು ಸಿ.ಟಿ.ರವಿ ತಮ್ಮ ಪಂಚೆಯನ್ನು ಸರಿ ಮಾಡಿಕೊಳ್ಳಲಿ
ಎಂದು ಮೈಸೂರಿನಲ್ಲಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಟಾಂಗ್ ಕೊಟ್ಟಿದ್ದಾರೆ. ಹೀಗೆ ಮಾತನಾಡಿದ್ದಕ್ಕೆ ಚುನಾವಣೆಯಲ್ಲಿ ಜನ ಉತ್ತರಕೊಟ್ಟಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಉತ್ತರವೇ ಅಂತಿಮ. ಕೇವಲ 65 ಸ್ಥಾನಕ್ಕೆ ಕುಸಿದಿರುವ ಬಿಜೆಪಿಯಲ್ಲಿ ಕಚ್ಚಾಟ ಇಲ್ಲವೇ?. ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಏನು ಕಿತ್ತಾಡುತ್ತಿದ್ದಾರೆ? ಮನಸ್ಸಿಗೆ ಬಂದಂತೆ ಮಾತನಾಡ್ತಿದ್ದಕ್ಕೆ ಜನರು ಉತ್ತರ ಕೊಟ್ಟಿದ್ದಾರೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.
ರಿಲ್ಯಾಕ್ಸ್ ಮೂಡ್ನಲ್ಲಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಆರ್.ಅಶೋಕ್ ಚಿಕ್ಕಮಗಳೂರಿನ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಆರ್.ಅಶೋಕ್ ಹುಟ್ಟುಹಬ್ಬ ಆಚರಣೆಗೆ ಬೊಮ್ಮಾಯಿ ಆಗಮಿಸಿದ್ದಾರೆ. ನಿನ್ನೆ ತಡರಾತ್ರಿ ಚಿಕ್ಕಮಗಳೂರಿಗೆ ಬಿಜೆಪಿ ನಾಯಕರು ಬಂದಿಳಿದಿದ್ದು ಅಶೋಕ್ ಹುಟ್ಟುಹಬ್ಬ ಆಚರಣೆ ಮುಗಿಸಿ ನಾಳೆ ಬೆಂಗಳೂರಿಗೆ ಪ್ರಯಾಣಿಸಲಿದ್ದಾರೆ.
ಬಿಜೆಪಿ ಇನ್ನೂ ವಿಪಕ್ಷ ನಾಯಕರನ್ನು ನೇಮಕ ಮಾಡದ ಹಿನ್ನೆಲೆ ಟ್ವೀಟ್ ಮೂಲಕ ರಾಜ್ಯ ಕಾಂಗ್ರೆಸ್ ಬಿಜೆಪಿ ನಾಯಕರ ಕಾಲೆಳೆದಿದೆ. ವಿರೋಧ ಪಕ್ಷದ ನಾಯಕರೊಬ್ಬರು ಬೇಕಾಗಿದ್ದಾರೆ. ಸಂವಿಧಾನ ತಿಳಿದವರು, ಪ್ರಜಾಪ್ರಭುತ್ವ ಅರಿತವರು ಬೇಕಾಗಿದ್ದಾರೆ. ಸಿಡಿಗೆ ತಡೆಯಾಜ್ಞೆ ತರದವರು, ಭ್ರಷ್ಟಾಚಾರಿಯಲ್ಲದವರು ಬೇಕಾಗಿದ್ದಾರೆ. ಆರ್ಎಸ್ಎಸ್ ಕೈಗೊಂಬೆಯಾಗದವರು, ಕೋಮುವಾದಿ ಅಲ್ಲದವರು, ವಾಟ್ಸಾಪ್ ಯೂನಿವರ್ಸಿಟಿಯಲ್ಲಿ ಪದವಿ ಪಡೆದಿರಬಾರದು, ಸುಳ್ಳು ಹೇಳಬಾರದು. ಘನತೆಯ ವ್ಯಕ್ತಿತ್ವದವರು, ತೂಕದ ಮಾತಿನ ವಿಪಕ್ಷ ನಾಯಕ ಬೇಕಾಗಿದ್ದಾರೆ. ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ವಿಪಕ್ಷ ನಾಯಕರೊಬ್ಬರು ಬೇಕಾಗಿದ್ದಾರೆ ಎಂದು ಟ್ವೀಟ್ ಮೂಲಕ ಬಿಜೆಪಿ ನಾಯಕರ ಕಾಲೆಳೆದಿದೆ.
?ವಿರೋಧ ಪಕ್ಷದ ನಾಯಕರೊಬ್ಬರು ಬೇಕಾಗಿದ್ದಾರೆ
?ಸಂವಿಧಾನವನ್ನು ತಿಳಿದವರು, ಪ್ರಜಾಪ್ರಭುತ್ವವನ್ನು ಅರಿತವರು ವಿಪಕ್ಷ ನಾಯಕರೊಬ್ಬರು ಬೇಕಾಗಿದ್ದಾರೆ.
?ಸಿಡಿಗೆ ತಡೆಯಜ್ಞೆ ತರದವರು, ಭ್ರಷ್ಟಾಚಾರಿಯಲ್ಲದವರು ವಿಪಕ್ಷ ನಾಯಕ ಬೇಕಾಗಿದ್ದಾರೆ.
?RSS ಕೈಗೊಂಬೆಯಾಗದವರು, ಕೋಮುವಾದಿ ಅಲ್ಲದವರು ವಿಪಕ್ಷ ನಾಯಕ ಬೇಕಾಗಿದ್ದಾರೆ.
?ವಾಟ್ಸಾಪ್… pic.twitter.com/z0bzup2HGU
— Karnataka Congress (@INCKarnataka) July 1, 2023
ಚಲಿಸುತ್ತಿದ್ದ ಬೈಕ್ಗೆ ಹಿಂದಿನಿಂದ ಅಪರಿಚಿತ ವಾಹನ ಡಿಕ್ಕಿಯಾಗಿ ತಲೆ ಬುರುಡೆ ಓಪನ್ ಆಗಿತ್ತು. ಗಂಭೀರ ಗಾಯದಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಮಹಿಳೆಗೆ ವೈದ್ಯರ ತಂಡ ಆಸರೆಯಾಗುವ ಮೂಲಕ ವೈದ್ಯೋ ನಾರಾಯಣ ಹರಿ ಎನ್ನುವ ಮಾತಿಗೆ ಅರ್ಥ ಕಲ್ಪಿಸಿದ್ದಾರೆ.
ಚೀಟಿ ಕಟ್ಟಿಸಿಕೊಂಡು ಕೋಟ್ಯಾಂತರ ರೂಪಾಯಿ ವಂಚಿಸಿದ ಘಟನೆ ಬೆಂಗಳೂರಿ(Bengaluru)ನ ಟಿ.ದಾಸರಹಳ್ಳಿಯಲ್ಲಿ ನಡೆದಿದೆ. ಪುಣ್ಯ ಹಾಗೂ ಚಂದ್ರಶೇಖರ್ ಎಂಬ ದಂಪತಿಗಳು ಸ್ವಂತ ಮನೆ ತೋರಿಸಿ, ಸುಮಾರು 1.5 ಕೋಟಿಗೂ ಹೆಚ್ಚು ಹಣ ಚೀಟಿ ಹಾಕಿಸಿಕೊಂಡು ಹಲವರಿಗೆ ವಂಚಿಸಿದ್ದು, ಈ ಕುರಿತು ದಂಪತಿ ವಿರುದ್ದ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ 6ಗಂಟೆಗಳ ಬಳಿಕ ಸತತ ಪ್ರಯತ್ನದೊಂದಿಗೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು-ಮೈಸೂರು ಹೈವೇಯಲ್ಲಿ 2ನೇ ಹಂತದ ಟೋಲ್ ಸಂಗ್ರಹಕ್ಕೆ ಸಂಬಂಧಿಸಿ ಬೆಳಗ್ಗೆ 8ರಿಂದ ಗಣಂಗೂರು ಟೋಲ್ನಲ್ಲಿ ಶುಲ್ಕ ಸಂಗ್ರಹಕ್ಕೆ ಸಿದ್ಧತೆ ನಡೆದಿದೆ. ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಶುಲ್ಕ ವಸೂಲಿಗೆ ಸಿದ್ಧತೆ ನಡೆದಿದ್ದು NHAI ನಡೆ ವಿರುದ್ಧ ಮಂಡ್ಯ ಶಾಸಕರು, ವಾಹನ ಸವಾರರು ಆಕ್ರೋಶ ಹೊರ ಹಾಕಿದ್ದಾರೆ.
ರಾಜ್ಯ ಸರ್ಕಾರದ ಘೋಷಣೆಗಳ ಜಾರಿಗೆ ಒತ್ತಾಯಿಸಿ ಜುಲೈ 4 ರಂದು ವಿಧಾನಸೌಧದಲ್ಲಿ ವಿಪಕ್ಷ ಬಿಜೆಪಿ ಧರಣಿ ನಡೆಸಲು ಮುಂದಾಗಿದೆ. ಬಿಜೆಪಿ ಶಾಸಕರು ಅಧಿವೇಶನದಲ್ಲಿ ಧರಣಿ ನಡೆಸಲಿದ್ದಾರೆ. ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಧರಣಿ ನಡೆಸಲಿದ್ದಾರೆ. ಯಡಿಯೂರಪ್ಪ ಜೊತೆ ಮಾಜಿ ಶಾಸಕರು ಮತ್ತು ಪರಾಜಿತ ಅಭ್ಯರ್ಥಿಗಳು ಭಾಗಿಯಾಗಲಿದ್ದಾರೆ.
ಮುಂಗಾರು ಮಳೆ ಕೈ ಕೊಟ್ಟ ಹಿನ್ನೆಲೆ ಕಬಿನಿ ಜಲಾಶಯದ ನೀರು ತಳ ಸೇರಿದೆ. ಹೀಗಾಗಿ ಮುಳಗಡೆಯಾಗಿದ್ದ ಪುರಾತನ ದೇವಸ್ಥಾನ ಗೋಚರವಾಗಿದೆ. ಎಚ್.ಡಿ ತಾಲೂಕಿನ ಕೀರ್ತಿಪುರಗ್ರಾಮ ವ್ಯಾಪ್ತಿಯ ಹಿನ್ನಿರಿನಲ್ಲಿ ಪುರಾತನ ಭವಾನಿ ಶಂಕರ್ ದೇವಸ್ಥಾನದ ಕುರುಹುಗಳು ಪತ್ತೆಯಾಗಿವೆ. ದೇವಾಲಯದ ಇಟ್ಟಿಗೆ ಚೂರುಗಳು, ದೇವರ ವಿಗ್ರಹ, ಶಿವ ಲಿಂಗ, ಗಣೇಶ್ ಮೂರ್ತಿ ಸೇರಿದಂತೆ ಪಳಯುಳಿಕೆಗಳು ಪತ್ತೆಯಾಗಿವೆ.
ಇಂದಿನಿಂದಲೇ ‘ಗೃಹಜ್ಯೋತಿ’ ಯೋಜನೆ ಗ್ಯಾರಂಟಿ ಆರಂಭವಾಗಲಿದೆ. ಮಾಸಿಕ 200 ಯೂನಿಟ್ವರೆಗಿನ ವಿದ್ಯುತ್ ಬಳಕೆ ಉಚಿತವಾಗಲಿದೆ. ಜೂನ್ 18ರಿಂದ ಗೃಹಜ್ಯೋತಿ ಅರ್ಜಿ ಸಲ್ಲಿಕೆ ಆರಂಭವಾಗಿತ್ತು. ಗೃಹಜ್ಯೋತಿ ಯೋಜನೆಯ ಒಟ್ಟು ಫಲಾನುಭವಿಗಳು 2.14 ಕೋಟಿ ಇದ್ದು ಸದ್ಉ ಗೃಹಜ್ಯೋತಿಗೆ ಇದುವರೆಗೆ 85,91,005 ಗ್ರಾಹಕರು ನೋಂದಣಿ ಮಾಡಿಕೊಂಡಿದ್ದಾರೆ.
Published On - 7:25 am, Sat, 1 July 23