ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ 11ನೇ ದಿನದ ಕಾರ್ಯ ಇಂದು ನಡೆಯಲಿದೆ. ಬೆಳಗ್ಗೆ 8 ಗಂಟೆಗೆ ಕುಟುಂಬಸ್ಥರು ಶಾಂತಿಹೋಮ ನಡೆಸಲಿದ್ದು ಮಲ್ಲೇಶ್ವರಂನ ಬಿಬಿಎಂಪಿ ಆಟದ ಮೈದಾನದಲ್ಲಿ ಭೋಜನ ವ್ಯವಸ್ಥೆ ಏರ್ಪಡಿಸಲಾಗಿದೆ. ಪ್ರವಾಸಕ್ಕೆ ತೆರಳಿದ್ದ ಸ್ಪಂದನಾ ಆ.6ರಂದು ಬ್ಯಾಂಕಾಕ್ನಲ್ಲಿ ನಿಧನರಾಗಿದ್ದರು. ಇನ್ನು ಕಾಂಗ್ರೆಸ್ ಪಕ್ಷದೊಳಗಿನ ಕೆಲವು ನಾಯಕರ ವಿರೋಧದ ನಡುವೆಯೂ ಉಮಾಶ್ರೀ, ಸೀತಾರಾಮ್, ಸುಧಾಮ್ ದಾಸ್ ಅವರ ಹೆಸರನ್ನು ವಿಧಾನ ಪರಿಷತ್ಗೆ ನಾಮನಿರ್ದೇಶನ ಮಾಡಲಾಗಿದೆ. ಸಿದ್ದರಾಮಯ್ಯ ಅವರು ಮೂವರ ಹೆಸರನ್ನು ಅಂತಿಮಗೊಳಿಸಿ ಪಟ್ಟಿಯನ್ನು ರಾಜ್ಯಪಾಲರಿಗೆ ಕಳುಹಿಸಿದ್ದಾರೆ. ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ಕರುಣಿಸುವ ಹಾಸನಾಂಬೆ ಜಾತ್ರಗೆ ಮುಹೂರ್ತ ನಿಗದಿಯಾಗಿದೆ. ನವೆಂಬರ್ 2 ರಿಂದ ನವೆಂಬರ್ 15 ರವರೆಗೆ ಶಕ್ತಿ ದೇವತೆಯ ಜಾತ್ರೆ ನಡೆಯಲಿದೆ. ಒಟ್ಟು 14 ದಿನಗಳು 24 ಗಂಟೆ ದೇವಿಯ ದರ್ಶನ ಮಾಡಬಹುದಾಗಿದೆ. ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ ಪ್ರಮುಖ ಸುದ್ದಿಗಳ ಕ್ಷಣ ಕ್ಷಣದ ಮಾಹಿತಿಗಾಗಿ ಟಿವಿ9 ಲೈವ್ ಫಾಲೋ ಮಾಡಿ.
ಕೊಡಗು ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಮುಂದುವರೆದಿದೆ. ಕಾಡಾನೆ ದಾಳಿಗೆ ಕಂಬೆಯಂಡ ಅನು ಸುಬ್ಬಯ್ಯ ಎಂಬುವರಿಗೆ ಗಾಯಗೊಂಡಿರುವಂತಹ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕಕ್ಕಬ್ಬೆ ಗ್ರಾಮದಲ್ಲಿ ನಡೆದಿದೆ. ಗಾಯಾಳು ಕಂಬೆಯಂಡ ಅನು ಸುಬ್ಬಯ್ಯ ಮಂಗಳೂರು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ನಗರದ ಸೋನಾರ ಬಡಾವಣೆಯಲ್ಲಿ ಅನುಮತಿಯಿಲ್ಲದೆ ಪ್ರತಿಷ್ಠಾಪನೆ ಮಾಡಿರುವ ಶಿವಾಜಿ ಪುತ್ಥಳಿ ತೆರವಿಗೆ ಬಾಗಲಕೋಟೆಯ ನಗರಸಭೆ ಮುಂದಾಗಿದೆ. ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಆಗಸ್ಟ್ 18ರ ಮಧ್ಯರಾತ್ರಿ 12ರವರೆಗೆ ಬಾಗಲಕೋಟೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಬಾಗಲಕೋಟೆ ಡಿಸಿ ಕೆ.ಎಂ.ಜಾನಕಿ ಆದೇಶ ಹೊರಡಿಸಿದ್ದಾರೆ.
ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದಲ್ಲಿ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸಿಇಸಿ ಸಭೆ ಆರಂಭವಾಗಿದೆ. ಪ್ರಧಾನಿ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ, ಅಶ್ವಿನಿ ವೈಷ್ಣವ್, ಮಧ್ಯಪ್ರದೇಶ ಸಿಎಂ ಚೌಹಾಣ್ ಸೇರಿ ಸಮಿತಿ ಸದಸ್ಯರು ಭಾಗಿಯಾಗಿದ್ದಾರೆ. ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ಸಭೆಗೆ ಬಿಎಸ್ ಯಡಿಯೂರಪ್ಪ ಗೈರಾಗಿದ್ದಾರೆ. ಮುಂಬರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಬಗ್ಗೆ ಚರ್ಚೆ ಸಾಧ್ಯತೆ.
ರಾಜಕಾರಣ ನಿಂತ ನೀರಲ್ಲ, ಯಾರು ಎಲ್ಲಿರುತ್ತಾರೋ ಹೇಳಲು ಆಗಲ್ಲ ಎಂದು ಶಿವಮೊಗ್ಗದಲ್ಲಿ ಬಿಜೆಪಿಯ ಮಾಜಿ ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಯಾರೇ ಬಂದರೂ ಹೋದರೂ ಬಿಜೆಪಿ ಹಾಳು ಮಾಡಲು ಸಾಧ್ಯವಿಲ್ಲ. ಆಕಸ್ಮಿಕವಾಗಿ ನಾವು ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ಅತಿಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದರು.
ಐವರು ಇನ್ಸ್ ಪೆಕ್ಟರ್ಗಳನ್ನು ವರ್ಗಾವಣೆ ಮಾಡಿ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.
ಐವರ ಪೈಕಿ ಈ ಹಿಂದೆ ವರ್ಗಾವಣೆಯಾದ ಇಬ್ಬರ ವರ್ಗಾವಣೆ ತಡೆ ಹಿಡಿದಿದ್ದು, ಮೂವರಿಗೆ
ಸ್ಥಳ ನಿಗದಿ ಮಾಡಿ ವರ್ಗಾವಣೆ ಮಾಡಲಾಗಿದೆ.
ರಾಜಕಾರಣವನ್ನು ಎಷ್ಟು ಮಾಡಬೇಕೋ ಅಷ್ಟೇ ಮಾಡಬೇಕು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೂ ಕಾನೂನು ಗೊತ್ತಿದೆ. ನೀರು ಯಾರ ನಿಯಂತ್ರಣದಲ್ಲಿ ಇದೆ, ಇದೆಲ್ಲ ಈಗ ಚರ್ಚೆ ಮಾಡಲ್ಲ. 30-40 ವರ್ಷಗಳಲ್ಲಿ ಈಗಲೇ ರಾಜ್ಯದಲ್ಲಿ ಮಳೆ ಕೊರತೆ ಆಗಿದೆ. ನೀರು ಬಿಡಬೇಡಿ ಅಂತಾ ನಮ್ಮ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಏಕೆ ನೀರು ಬಿಟ್ರಿ ಅಂದ್ರೆ, ನಮ್ಮ ಹತ್ತಿರ ಡ್ಯಾಂ ಬೀಗ ಇದೆಯಾ? ಬೀಗ ಬೊಮ್ಮಾಯಿ ಹತ್ತಿರ ಇದೆ, ಕೇಂದ್ರ ಸರ್ಕಾರದ ಬಳಿ ಇದೆ ಎಂದು ಬೆಂಗಳೂರಿನಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ಧಾರವಾಡ ಜಿಲ್ಲಾಸ್ಪತ್ರೆಗೆ ಸಚಿವ ಸಂತೋಷ್ ಲಾಡ್ ಇಂದು ದಿಢೀರ್ ಭೇಟಿ ನೀಡಿದ್ದಾರೆ. ಈ ವೇಳೆ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ ಎಂದು ಮಹಿಳೆ ಅಳಲು ತೊಡಿಕೊಂಡಿದ್ದಾರೆ. ರೋಗಿಗಳ ತಪಾಸಣೆಯಲ್ಲಿ ನಿರ್ಲಕ್ಷ್ಯ ಕಂಡುಬಂದ ಹಿನ್ನೆಲೆಯಲ್ಲಿ ಸರ್ಜನ್ ಡಾ.ಸಂಗಪ್ಪ ಗಾಬಿ, ಜಿಲ್ಲಾಸ್ಪತ್ರೆ ವೈದ್ಯರಿಗೆ ಲಾಡ್ ತರಾಟೆ ತೆಗೆದುಕೊಂಡಿದ್ದಾರೆ.
ಖಾಸಗಿ ಶಾಲೆಗಳು ಒಂದೊಂದು ಸರ್ಕಾರಿ ಶಾಲೆ ದತ್ತು ಪಡೆಯಬೇಕು. ಈ ಪರಿಕಲ್ಪನೆ ಜಾರಿಗೆ ಮುಂದಾಗಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಹೇಗೆ ಇದನ್ನು ಜಾರಿ ಮಾಡಬೇಕು ಅಂತಾ ಚರ್ಚೆ ಮಾಡಿದ್ದೇವೆ. ನಾನೂ ಕೂಡ ಮೂರು ಶಾಲೆಗಳ ಮಾಲೀಕ. ನಾನೂ ಪಂಚಾಯ್ತಿ ಮಟ್ಟದಲ್ಲಿ 3 ಸರ್ಕಾರಿ ಶಾಲೆ ದತ್ತು ಪಡೆಯುವೆ ಎಂದು ಹೇಳಿದ್ದಾರೆ.
ಬಿಜೆಪಿಯ ಒಳಜಗಳ ನೋಡಿದರೆ ಆ ಪಕ್ಷದಲ್ಲಿ ಯಾರೂ ಇರಲ್ಲ ಎಂದು ಕೊಪ್ಪಳ ತಾಲೂಕಿನ ಮುನಿರಾಬಾದ್ನಲ್ಲಿ ಶಿವರಾಜ ತಂಗಡಗಿ ಹೇಳಿದರು. ಬಾಂಬೆ ಬಾಯ್ಸ್, ಕೋಲ್ಕತ್ತಾ ಬಾಯ್ಸ್ ಯಾರು ಬರುತ್ತಾರೆ ಗೊತ್ತಿಲ್ಲ. ಪಕ್ಷಕ್ಕೆ ಸೇರಿಸಿಕೊಳ್ಳುವ ನಿರ್ಧಾರ ಹೈಕಮಾಂಡ್ಗೆ ಬಿಟ್ಟದ್ದು ಎಂದು ಹೇಳಿದರು.
ಬೆಂಗಳೂರು ಶಾಸಕರ ಜೊತೆ ಸಿಎಂ ಸಿದ್ದರಾಮಯ್ಯ ಸಭೆ ಅಂತ್ಯವಾಗಿದ್ದು, ಇದೀಗ ಗೃಹಕಚೇರಿ ಕೃಷ್ಣಾದಲ್ಲಿ ಕೋಲಾರ ಜಿಲ್ಲೆ ಶಾಸಕರ ಜತೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದ್ದಾರೆ.
ಬೆಂಗಳೂರು ಶಾಸಕರ ಜೊತೆ ಸಿಎಂ ಸಿದ್ದರಾಮಯ್ಯ ಸಭೆಯಲ್ಲಿ ಬೆಂಗಳೂರು ಟ್ರಾಫಿಕ್ ಸಮಸ್ಯೆ ಬಗ್ಗೆ, ಕುಡಿಯುವ ನೀರಿನ ಬಗ್ಗೆ, ಡ್ರಗ್ಸ್ ನಿಯಂತ್ರಣದ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಮುಂಬರುವ ಲೋಕಸಭಾ ಚುನಾವಣೆ ಬಗ್ಗೆ ಚರ್ಚೆಯಾಗಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಯೋಜನೆ ಸ್ಥಗಿತಗೊಳ್ಳಲ್ಲ ಎಂದು ಕೆಎಸ್ಆರ್ಟಿಸಿ ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಆ ಮೂಲಕ ಶಕ್ತಿ ಯೋಜನೆ ಸ್ಥಗಿತಗೊಳ್ಳಲ್ಲ ಎಂದು ಕೆಎಸ್ಆರ್ಟಿಸಿಯಿಂದ ಸ್ಪಷ್ಟನೆ ನೀಡಿದೆ. ಶಕ್ತಿ ಯೋಜನೆ ಸ್ಥಗಿತಗೊಳ್ಳಲ್ಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡಿಸಲಾಗುತ್ತಿತ್ತು.
ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ನಿಲ್ಲಿಸುವುದಾಗಿ ಊಹಾಪೋಹಗಳು ಕೇಳಿಬರುತ್ತಿವೆ. ಈ ವಿಚಾರವಾಗಿ ಮಾತನಾಡಿರುವ ಸಚಿವ ರಾಮಲಿಂಗಾ ರೆಡ್ಡಿ, ಯೋಜನೆ
ನಿಂತು ಹೋಗುತ್ತದೆ ಅಂತ ಊಹಾಪೋಹಗಳು ಕೇಳಿ ಬರುತ್ತಿವೆ. ಒಂದು ಪಕ್ಷದವರು ಮಾಡಿಸುತ್ತಿದ್ದಾರೆ. ಇನ್ನು 10 ವರ್ಷ ಶಕ್ತಿ ಯೋಜನೆ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.
ಬೆಂಗಳೂರು: ಆಹಾರ ಇಲಾಖೆಗೆ ಯಾವುದೇ ಅನುದಾನದ ಕೊರತೆ ಇಲ್ಲ ಎಂದು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದರು. ಬಜೆಟ್ನಲ್ಲಿ ಇಲಾಖೆಗೆ 10 ಸಾವಿರ ಕೋಟಿ ಹಣ ಕೊಟ್ಟಿದ್ದಾರೆ. ಅಕ್ಕಿ ನೀಡುವ ಭರವಸೆ ಕೊಟ್ಟು ನಾವು ಅಧಿಕಾರಕ್ಕೆ ಬಂದಿದ್ದೇವೆ. ಸಿಎಂ ಸಿದ್ದರಾಮಯ್ಯಗೂ ಸಾಕಷ್ಟು ಅನುಭವ ಇದೆ ಎಂದರು.
ನಾನು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಬೆಂಗಳೂರಿನಲ್ಲಿ ಆಹಾರ ಖಾತೆ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದ್ದಾರೆ. ಸಚಿವ ಸ್ಥಾನ ಬಿಟ್ಟುಕೊಟ್ಟರೂ ಕೂಡ ಶಾಸಕನಾಗಿಯೇ ಇರುತ್ತೇನೆ. ಸ್ಪರ್ಧೆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಿದರೆ ನೋಡೋಣ. ಯುವಕರಿಗೆ ಅವಕಾಶ ಸಿಗಲಿ ಎಂಬುದು ವೈಯಕ್ತಿಕ ಅಭಿಪ್ರಾಯ ಪಟ್ಟಿದ್ದಾರೆ.
ಮೈಸೂರಿನಲ್ಲಿ 25 ಕೋಟಿ ಮೌಲ್ಯದ ಕಿಂಗ್ಫಿಶರ್ ಬಿಯರ್ ಜಪ್ತಿ ಮಾಡಲಾಗಿದೆ. ಕಿಂಗ್ಫಿಶರ್ ಬಿಯರ್ನಲ್ಲಿ ಅಪಾಯಕಾರಿ ಅಂಶ ಸೆಡಿಮೆಂಟ್ ಪತ್ತೆಯಾಗಿದೆ ಎಂದು ಮೈಸೂರು ಗ್ರಾ. ಅಬಕಾರಿ ಉಪ ಆಯುಕ್ತ ಎ.ರವಿಶಂಕರ್ ತಿಳಿಸಿದರು. ನಂಜನಗೂಡಿನ ಘಟಕದಲ್ಲಿ ತಯಾರಿಸಲಾಗಿದ್ದ ಬಿಯರ್ನಲ್ಲಿ ಸ್ಟ್ರಾಂಗ್ನಲ್ಲಿ ಸೆಡಿಮೆಂಟ್ ಅಂಶ ಪತ್ತೆಯಾಗಿದೆ. ಒಟ್ಟು 78,678 ಬಿಯರ್ ಬಾಕ್ಸ್ಗಳನ್ನು ತಡೆಹಿಡಿಯಲಾಗಿದೆ. ಗುಣಮಟ್ಟದ ಬಿಯರ್ ತಯಾರಿಸದ ಹಿನ್ನೆಲೆ ಎಫ್ಐಆರ್ ದಾಖಲಾಗಿದೆ. ರಿಟೈಲ್ನಲ್ಲೂ ಸೇಲ್ ಆಗದಂತೆ ತಡೆಹಿಡಿಯಲಾಗಿದೆ. ಇನ್ಹೌಸ್ ಕೆಮಿಸ್ಟ್ ಅವರು ಕೊಟ್ಟಿರುವ ರಿಪೋರ್ಟ್ ಮೇಲೆ ಕ್ರಮ ಕೈಗೊಳ್ಳಲಾಗುತ್ತೆ ಎಂದರು.
6 ತಿಂಗಳಲ್ಲಿ ಸರ್ಕಾರ ಬೀಳುತ್ತೆ ಎಂದು ಯತ್ನಾಳ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ತುಮಕೂರಿನಲ್ಲಿ ಸಹಕಾರಿ ಇಲಾಕೆ ಸಚಿವ ಕೆ.ಎನ್.ರಾಜಣ್ಣ ಟಾಂಗ್ ಕೊಟ್ಟಿದ್ದಾರೆ. ಹುಚ್ಚರ ಸ್ಟೇಟ್ಮೆಂಟ್ಗೆಲ್ಲ ನಾವು ಉತ್ತರ ಕೊಡಲು ಆಗುವುದಿಲ್ಲ. 6 ತಿಂಗಳಿಗೆ ಸರ್ಕಾರ ಬಿದ್ದೋಗುತ್ತೆ, ಮೂರು ತಿಂಗಳಿಗೆ ಬಿದ್ದೋಗುತ್ತೆ. ಆ ಹೇಳಿಕೆಗೆ ಕಿಮ್ಮತ್ತು ಕೊಡುವ ಅವಶ್ಯಕತೆ ಇಲ್ಲ ಎಂದರು.
ಧಾರವಾಡದಲ್ಲಿ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಕಾರ್ಮಿಕ ಸಚಿವ ಸಂತೋಷ ಲಾಡ್, ನಾವು ನುಡಿದಂತೆ ನಡೆದಿದ್ದೇವೆ. ಇದಕ್ಕೆ ನಮ್ಮ ಐದು ಕಾರ್ಯಕ್ರಮಗಳೇ ಸಾಕ್ಷಿ. ಯುವನಿಧಿ, ಗೃಹಲಕ್ಷ್ಮೀ ಯೋಜನೆ ಆರಂಭ ಆಗಿದೆ. ಬಿಜೆಪಿ ನಮ್ಮ ಮೇಲೆ ಆರೋಪ ಮಾಡುತ್ತಾ ಬಂದಿದೆ. ರೂ. 60 ಸಾವಿರ ಕೋಟಿಯನ್ನು ನೇರವಾಗಿ ಬಡ ಜನರಿಗೆ ತಲುಪಿಸುತ್ತಿದ್ದೇವೆ. ನಾವು ಅಕ್ಕಿ ಕೊಡುತ್ತಿರುವುದಕ್ಕೆ ಮೋದಿ ಅಕ್ಕಿ ಅಂತಾ ಆರೋಪ ಮಾಡಿದ್ರು. ಆದರೆ ಅದು ಮೋದಿ ಅಕ್ಕಿಯಲ್ಲ. ಅದಕ್ಕೆ ಬೇಕಾದ ಆಹಾರ ಭದ್ರತೆ ಕಾಯಿದೆ ತಂದಿದ್ದು ಕಾಂಗ್ರೆಸ್. 2013ರಿಂದ 18ರವರೆಗೆ ಇದ್ದ ಕಾಂಗ್ರೆಸ್ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ. ಬಡ್ಡಿ ರಹಿತ ಸಾಲ ಆರಂಭಿಸಿದ್ದು ಸಿದ್ದರಾಮಯ್ಯ. ಈ ಸಲ ಐದು ಲಕ್ಷದವರೆಗೆ ಬಡ್ಡಿ ರಹಿತ ಸಾಲ ಕೊಡಲಿದ್ದೇವೆ ಎಂದರು.
ನನ್ನ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇವೆ ಅಂದರೆ ಜೈಲಿಗೆ ಹೋಗಲು ಸಿದ್ಧ. ನನಗೆ ಆರ್.ಆರ್.ನಗರ ಕ್ಷೇತ್ರದ ಅಭಿವೃದ್ಧಿ ಮುಖ್ಯ. ಡಿ.ಕೆ.ಶಿವಕುಮಾರ್ ನನ್ನನ್ನು ಬೇಕಾದರೆ ಜೈಲಿಗೆ ಕಳಿಸಲಿ. ನನ್ನನ್ನು ಜೈಲಿನಲ್ಲಿ ಇಟ್ಟು ನನ್ನ ಕ್ಷೇತ್ರವನ್ನು ಅಭಿವೃದ್ಧಿ ಮಾಡಲಿ ಎಂದು ಬೆಂಗಳೂರಿನಲ್ಲಿ ಆರ್.ಆರ್. ನಗರ ಶಾಸಕ ಮುನಿರತ್ನ ಹೇಳಿಕೆ ನೀಡಿದರು.
ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಎಂಇಎಸ್ ಕಿರಿಕ್. ಮರಾಠಿಯಲ್ಲಿ ಸಭೆಯ ನೋಟಿಸ್ ನೀಡದ ಹಿನ್ನೆಲೆ ಮೂರು ಜನ ಎಂಇಎಸ್ ಬೆಂಬಿಲಿತ ಪಾಲಿಕೆ ಸದಸ್ಯರು ಧರಣಿ ನಡೆಸಿದ್ದಾರೆ. ಪರಿಷತ್ತಿನ ಬಾವಿಯಲ್ಲಿ ಕುಳಿತು ಮೂರು ಜನ ಸದಸ್ಯರು ಧರಣಿ ನಡೆಸಿದರು. ಎಂಇಎಸ್ ಬೆಂಬಿಲಿತ ಸದಸ್ಯರ ಪ್ರತಿಭಟನೆಗೆ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದು ಸಭೆಯಿಂದ ಹೊರ ಹಾಕುವಂತೆ ಪಟ್ಟು ಹಿಡಿದಿದ್ದಾರೆ. ಇದು ಪಾಲಿಕೆ ತರಕಾರಿ ಮಾರುಕಟ್ಟೆ ಅಲ್ಲ ಎಂದ ಬಿಜೆಪಿ ಶಾಸಕ ಅಭಯ್ ಪಾಟೀಲ್ ಆಕ್ರೋಶ ಹೊರ ಹಾಕಿದರು.
ಹಳೇ ಹುಬ್ಬಳ್ಳಿಯ ಗೋಡಕೆ ಬಡಾವಣೆಯಲ್ಲಿರೋ ಟವರ್ ಮೇಲೆ ಎರಡು ಧ್ವಜ ಕಟ್ಟಿದ ವಿಚಾರಕ್ಕೆ ಸಂಬಂಧಿಸಿ ಧ್ವಜ ಕಟ್ಟಿದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಟವರ್ ಮೇಲೆ ಎರಡು ಧರ್ಮದ ಧ್ವಜ ಕಟ್ಟಲಾಗಿತ್ತು. ಇಸ್ಲಾಂ ಧರ್ಮದ ಧ್ವಜ, ಭಗವಾ ಧ್ವಜ ಕಟ್ಟಲಾಗಿತ್ತು. ಭಗವಾ ದ್ವಜ ಕೆಳಗಡೆ ಕಟ್ಟಲಾಗಿದೆ ಎಂದು ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ದೂರು ಕೊಟ್ಟಿದ್ರು. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ರು. ಇದೀಗ ಧ್ವಜ ಕಟ್ಟಿದ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.
ಕೆಲ ಬಿಜೆಪಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಮರಳುತ್ತಾರೆಂಬ ವಿಚಾರಕ್ಕೆ ಸಂಬಂಧಿಸಿ ನಾನಂತೂ ಬಿಜೆಪಿ ಬಿಟ್ಟು ಹೋಗುವುದಿಲ್ಲ ಎಂದು ಆರ್.ಆರ್. ನಗರ ಶಾಸಕ ಮುನಿರತ್ನ ತಿಳಿಸಿದ್ದಾರೆ. 17 ಜನರಲ್ಲಿ ಯಾರು ಕಾಂಗ್ರೆಸ್ಗೆ ಹೋಗುತ್ತಾರೋ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಹೋಗುವ ಅವಶ್ಯಕತೆ ನನಗೆ ಇಲ್ಲ. ಅಗತ್ಯ ಬಿದ್ದರೆ ನಾನು ರಾಜಕೀಯದಿಂದ ನಿವೃತ್ತಿಯಾಗುತ್ತೇನೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಮರಳಿ ಹೋಗುವುದಿಲ್ಲ ಎಂದರು.
ಕಾಂಗ್ರೆಸ್ ಪಕ್ಷಕ್ಕೆ ಯಾರೇ ಬಂದರೂ ಸ್ವಾಗತ. ಪಕ್ಷ ಸೇರ್ಪಡೆ ಬಗ್ಗೆ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳುತ್ತೆ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಹೇಳಿದರು. ಲೋಕಸಭಾ ಚುನಾವಣೆ ಬಗ್ಗೆ ದೆಹಲಿಯಲ್ಲಿ ಸಭೆ ನಡೆದಿದೆ. ಯಾವ ರೀತಿ ಚುನಾವಣೆ ಎದುರಿಸಬೇಕು ಎಂದು ಚರ್ಚೆ ಆಗಿದೆ. ಅಭ್ಯರ್ಥಿ ಆಯ್ಕೆಗೆ ಮಾನದಂಡಗಳೇನು ಎಂಬ ಬಗ್ಗೆ ಚರ್ಚಿಸಲಾಗಿದೆ ಎಂದರು.
ಭ್ರಷ್ಟಾಚಾರದಲ್ಲಿ ಸಚಿವ ಚಲುವರಾಯಸ್ವಾಮಿಗೆ ಮೊದಲ ಸ್ಥಾನ. ಚಲುವರಾಯಸ್ವಾಮಿ 300ರಿಂದ 400 ಕೋಟಿ ಹಣ ಲೂಟಿ ಹೊಡೆದಿದ್ದಾನೆ ಎಂದು ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಮಾಜಿ ಶಾಸಕ ಸುರೇಶ್ ಗೌಡ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ಮಾಡಿ ಹಣವನ್ನು ಏರ್‌ಲಿಫ್ಟ್ ಮಾಡ್ತಿದೆ. ಹಿಂದಿನ ಸರ್ಕಾರದಲ್ಲಿ ಜೆಸಿಬಿಯಲ್ಲಿ ಹಣ ತುಂಬುತ್ತಾರೆ ಅಂತಿದ್ರು. ಆದರೆ ಈ ಸರ್ಕಾರ ಭ್ರಷ್ಟ ಹಣವನ್ನು ಏರ್‌ಲಿಫ್ಟ್ ಮಾಡ್ತಿದೆ. ಈ ಸರ್ಕಾರದವರು ರಾಜ್ಯವನ್ನೇ ಲೂಟಿ ಹೊಡೆಯುತ್ತಿದ್ದಾರೆ ಎಂದು ನಾಗಮಂಗಲದಲ್ಲಿ ಮಾಜಿ ಶಾಸಕ ಸುರೇಶ್ ಗೌಡ ಆರೋಪ ಮಾಡಿದ್ದಾರೆ.
ಶೀಲ ಶಂಕಿಸಿ ಪತಿ ತನ್ನ ಪತ್ನಿಯನ್ನೇ ಕೊಂದ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದ ಟಿಬಿ ಬಡಾವಣೆಯಲ್ಲಿ ನಡೆದಿದೆ. ಮಧುಶ್ರಿ (25) ಕೊಲೆಯಾದ ಮಹಿಳೆ. ಕರಡಹಳ್ಳಿ ಗ್ರಾಮದ ಮಂಜುನಾಥ್ ಜೊತೆ ಕಳೆದ ನಾಲ್ಕೈದು ವರ್ಷಗಳ ಹಿಂದೆ ಮಧುಶ್ರೀ ಮದುವೆಯಾಗಿತ್ತು. 4 ವರ್ಷದ ಗಂಡು ಮಗುವಿನ ಜೊತೆ ವಾಸವಿದ್ದರು. ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ನಿನ್ನೆ ಮಧ್ಯಾಹ್ನ ಬೆಂಗಳೂರಿನಿಂದ ಊರಿಗೆ ಬಂದಿದ್ದ. ಈ ವೇಳೆ ದಂಪತಿ ನಡುವೆ ಜಗಳವಾಗಿದ್ದು ಕೊಲೆ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಾಸ್ಪತ್ರೆಗೆ ಸಚಿವ ತಿಮ್ಮಾಪುರ ದಿಢೀರ್ ಭೇಟಿ ಕೊಟ್ಟಿದ್ದಾರೆ. ರೋಗಿಗಳಿಗೆ ಸರಿಯಾಗಿ ಉಪಾಹಾರ ನೀಡದ ಬಗ್ಗೆ ದೂರು ಹಿನ್ನೆಲೆ ಬೆಳಗ್ಗೆ ದಿಢೀರ್ ಭೇಟಿ ನೀಡಿ ವೈದ್ಯರು, ಅಡುಗೆ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡರು. ರೋಗಿಗಳಿಗೆ, ಬಾಣಂತಿಯರಿಗೆ ಉತ್ತಮ ಆಹಾರ ನೀಡಬೇಕು. ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೂ ತರಾಟೆಗೆ ತೆಗೆದುಕೊಂಡರು. ಕಠಿಣ ಕ್ರಮದ ಎಚ್ಚರಿಕೆ ನೀಡಿದರು.
ಕೊಬ್ಬರಿಗೆ 25,000 ಬೆಂಬಲ ಬೆಲೆ ಆಗ್ರಹಿಸಿ ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುತ್ತಿದೆ. ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯಿಂದ ಬಂದ್ ಗೆ ಕರೆ ಕೊಡಲಾಗಿತ್ತು. ಅಂಗಡಿ ಮುಂಗಟ್ಟು ಮುಚ್ಚಿ ಬಂದ್ ಗೆ ವರ್ತಕರು ಬೆಂಬಲ ನೀಡಿದ್ದಾರೆ. ರೈತ ಸಂಘಟನೆಗಳಿಂದ ಪ್ರತಿಭಟನಾ ಜಾಥ ನಡೆಯುತ್ತಿದೆ. ಕ್ವಿಂಟಾಲ್ ಕೊಬ್ಬರಿಗೆ 25,000 ಬೆಂಬಲ ಘೋಷಿಸುವಂತೆ ರೈತರ ಆಗ್ರಹಿಸಿದ್ದಾರೆ. ತಹಶೀಲ್ದಾರ್ ಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಗೃಹ ಸಚಿವ ಪರಮೇಶ್ವರ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಸಿಎಂ ಸರ್ಕಾರಿ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಉಪೇಂದ್ರ ಮತ್ತು ಸಚಿವ ಎಸ್ ಮಲ್ಲಿಕಾರ್ಜುನ ಅವಹೇಳನಕರಿ ಹೇಳಿಕೆ ಸಂಬಂಧ ಸಿಎಂ ಜೊತೆ ಮಾಡ್ತೀನಿ ಎಂದು ಪರಮೇಶ್ವರ್ ತಿಳಿಸಿದರು.
ಬೆಳಗಾವಿಯ ಕಪಿಲೇಶ್ವರ ದೇಗುಲದ ಹೊಂಡದಲ್ಲಿ ಇಬ್ಬರ ಶವ ಪತ್ತೆಯಾಗಿದೆ. 70 ವರ್ಷದ ವೃದ್ಧ, 60 ವರ್ಷದ ವೃದ್ಧೆಯ ಮೃತದೇಹ ಪತ್ತೆಯಾಗಿದೆ. ಸ್ಥಳೀಯರು, ಪೊಲೀಸರು ಶವಗಳನ್ನು ಹೊರ ತೆಗೆದಿದ್ದಾರೆ. ಅಪರಿಚಿತ ಮೃತದೇಹಗಳ ಗುರುತು ಇನ್ನೂ ಪತ್ತೆಯಾಗಿಲ್ಲ. ಆತ್ಮಹತ್ಯೆ ಅಥವಾ ಕೊಲೆ ಮಾಡಿ ಹೊಂಡಕ್ಕೆ ಹಾಕಿರುವ ಶಂಕೆ ವ್ಯಕ್ತವಾಗಿದೆ.
ನಂಜನಗೂಡು ತಾಲೂಕು ಟೆನಿಸ್ ಕ್ಲಬ್‌ನಲ್ಲಿ ಟೆನಿಸ್ ಆಡಿ ಶಾಸಕ ದರ್ಶನ್ ಆರ್ ಧ್ರುವನಾರಾಯಣ್ ಗಮನ ಸೆಳೆದಿದ್ದಾರೆ. ದರ್ಶನ್ ಟೆನಿಸ್ ಆಟದಿ ವಿಡಿಯೋ ವೈರಲ್ ಆಗಿದೆ. ನಿನ್ನೆ ಸ್ವಾತಂತ್ರ್ಯ ದಿನಾಚರಣೆಗೆ ಟೆನಿಸ್ ಕ್ಲಬ್‌ಗೆ ಭೇಟಿ ನೀಡಿದ್ದರು. ಈ ವೇಳೆ ಟೆನಿಸ್ ಆಡಿ ಗಮನ ಸೆಳೆದಿದ್ದಾರೆ. ದರ್ಶನ್ ಸರ್ವ್‌ಗೆ ಟೆನಿಸ್ ಪ್ರಿಯರು ಫಿದಾ ಆಗಿದ್ದಾರೆ. ದರ್ಶನ್ ಧ್ರುವನಾರಾಯಣ್ ಸುಮಾರು ಅರ್ಧ ಗಂಟೆ ಕಾಲ ಟೆನಿಸ್ ಆಡಿದರು.
ಹುಬ್ಬಳ್ಳಿಯ ಮಹಾಲಕ್ಷ್ಮಿ ಬಡವಾವಣೆಯಲ್ಲಿ ಕರೆಂಟ್ ಬಿಲ್ ಕೊಡಲು ಹೋದ ಹೆಸ್ಕಾಂ ನೌಕರನ ಮೇಲೆ ಹಲ್ಲೆ ನಡೆದಿದೆ. ವ್ಯಕ್ತಿಯೋರ್ವ ಕರೆಂಟ್ ಬಿಲ್ ಜಾಸ್ತಿ ಬಂದಿದ್ದಕ್ಕೆ ನೌಕರನ ಮೇಲೆ ಸಿಟ್ಟು ತೀರಿಸಿಕೊಂಡಿದ್ದಾನೆ. ಮಲ್ಲಯ್ಯ ಗಣಾಚಾರಿ ಎಂಬ ಹೆಸ್ಕಾಂ ಮೀಟರ್ ರೀಡರ್ ಮೇಲೆ ಅಬ್ದುಲ್ ಎಂಬ ವ್ಯಕ್ತಿ ಹಲ್ಲೆ ಮಾಡಿದ್ದಾನೆ.
ಶಿವಮೊಗ್ಗ ಹೊಸನಗರ ತಾಲೂಕಿನ ಪುರಮಠ ಗ್ರಾಮದ ಮನೆಯಲ್ಲಿ ಕಾಳಿಂಗ ಸರ್ಪ ಪ್ರತ್ಯಕ್ಷವಾಗಿದೆ. ಗೌರಮ್ಮ ಎಂಬ ಮಹಿಳೆಗೆ ಸೇರಿದ ಮನೆಯ ಕಾರ್ ಶೆಡ್ನಲ್ಲಿ 12 ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆಯಾಗಿದೆ. ಕಾಳಿಂಗ ಸರ್ಪವನ್ನು ನೋಡಿ ಕುಟುಂಬಸ್ಥರು ಭಯಭೀತರಾಗಿದ್ದಾರೆ. ಉರಗ ತಜ್ಞ ಬೆಳ್ಳೂರು ನಾಗರಾಜ್ ಕಾಳಿಂಗ ಸರ್ಪ ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ.
ಸಚಿವ ಚಲುವರಾಯಸ್ವಾಮಿ ವಿರುದ್ಧ ಲಂಚ ಆರೋಪ ವಿಚಾರಕ್ಕೆ ಸಂಬಂಧಿಸಿ ಸಚಿವ ಚಲುವರಾಯಸ್ವಾಮಿ ಮಾಟ, ಮಂತ್ರ ವಾಮಾಚಾರ ಮಾಡಿಸ್ತಾನೆ ಎಂದು ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಮಾಜಿ ಶಾಸಕ ಸುರೇಶ್ ಗೌಡ ಆರೋಪ ಮಾಡಿದ್ದಾರೆ. ಸಚಿವ ಚಲುವರಾಯಸ್ವಾಮಿ ಅದೃಷ್ಟ ಚೆನ್ನಾಗಿದೆ. ಚಲುವರಾಯಸ್ವಾಮಿ ಗೆದ್ದಾಗೆಲ್ಲ ಅಧಿಕಾರ ಸಿಕ್ಕಿ, ದುಡ್ಡು ಮಾಡುತ್ತಾನೆ. ಮಾಟ, ಮಂತ್ರ, ವಾಮಾಚಾರ ಮಾಡಿಸುವುದೇ ಚಲುವರಾಯಸ್ವಾಮಿ ಕೆಲಸ. ಸತ್ಯವನ್ನ ಸುಳ್ಳು ಸುಳ್ಳು ಎಂದು ಹತ್ತು ಬಾರಿ ಹೇಳಿ ಸುಳ್ಳು ಮಾಡುತ್ತಾನೆ. ನಾವು ಗೆದ್ದಾಗ ವಿರೋಧ ಪಕ್ಷದಲ್ಲಿ ಕೂತು ಬಾಯಿಬಡಿದುಕೊಳ್ಳುತ್ತೇವೆ ಎಂದು ಕಾರ್ಯಕರ್ತರ ಸಭೆಯಲ್ಲಿ ಮಾಜಿ ಶಾಸಕ ಸುರೇಶ್ ಗೌಡ ಆರೋಪ ಮಾಡಿದ್ದಾರೆ.
ಸ್ವಾತಂತ್ರ್ಯೋತ್ಸವ ದಿನದಂದೂ ಸಹ ನಿಲ್ಲದ ಪುಂಡರ ಹಾವಳಿ. ಸುಮ್ಮನಹಳ್ಳಿ ಫ್ಲೈಓವರ್ ಮೇಲೆ ವಿಲೀಂಗ್ ಮಾಡಿ ಕೆಲ ಪುಂಡರ ಗ್ಯಾಂಗ್ ಅಟ್ಟಹಾಸ ಮೆರೆದಿದೆ. ನಿನ್ನೆಯ ಸ್ವಾತಂತ್ರ್ಯ ದಿನಾಚರಣೆಯಂದು ತ್ರಿವರ್ಣ ಧ್ವಜ ಹಿಡಿದು ಫ್ಲೈಓವರ್ ಮೇಲೆ ಬೈಕ್ ವೀಲಿಂಗ್ ಮಾಡಿ ಪುಂಡರು ಅಟ್ಟಹಾಸ ಮೆರೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಯುವಕರ ವಿಲಿಂಗ್ ದೃಶ್ಯ ವೈರಲ್ ಆಗಿದೆ. ಕಾಮಾಕ್ಷಿಪಾಳ್ಯ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ನಾಗರಾಳ ಗ್ರಾಮದಲ್ಲಿ ಕೊಲೆ ನಡೆದಿದೆ. ಕುಡಿದ ಮತ್ತಿನಲ್ಲಿ ಸ್ನೇಹಿತನನ್ನೇ ಯುವಕ ಕೊಂದಿದ್ದಾನೆ. ನಿನ್ನೆ ರಾತ್ರಿ ಕುಡಿದ ಮತ್ತಲ್ಲಿ ಸ್ನೇಹಿತರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದ್ದು ನೈಟ್ ಪ್ಯಾಂಟ್ ನ ಲೇಸ್ ನಿಂದ ಕುತ್ತಿಗೆಗೆ ಬಿಗಿದು ಸ್ನೇಹಿತನ ಕೊಲೆ ಮಾಡಲಾಗಿದೆ. ರವಿಕುಮಾರ (33) ಕೊಲೆಯಾದ ಯುವಕ. ಪವನ ಕುಮಾರ್ ಕೊಲೆ ಮಾಡಿದ ಯುವಕ.
ನಿಂತ ವಾಹನ ಮೇಲೆ ಸೈಜ್ ಕಲ್ಲು ಹಾಕಿ ಗ್ಲಾಸ್ ಪುಡಿ ಪುಡಿ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ದುಷ್ಕರ್ಮಿಗಳು ಹತ್ತಕ್ಕೂ ಹೆಚ್ಚು ವಾಹನಗಳ ಗ್ಲಾಸ್ ಪುಡಿ ಪುಡಿ ಮಾಡಿ ಅಟ್ಟಹಾಸ ಮೆರೆದಿದ್ದಾರೆ. ಬೈಕ್ ನಲ್ಲಿ ಬಂದು. ಫುಟ್ ಪಾತ್ ಮೇಲಿನ ಕಲ್ಲು ತಗೊಂಡು ಕಾರು ಗ್ಲಾಸ್ ಹೊಡೆದು ಹಾಕುತ್ತಿದ್ದಾರೆ. ಕೆಂಗೇರಿ ಠಾಣಾ ವ್ಯಾಪ್ತಿಯಲ್ಲಿ ಪುಂಡರ ಅಟ್ಟಹಾಸ ಮಿತಿಮೀರಿದೆ.
ಮೈಸೂರು ದೇವರಾಜ ಮಾರುಕಟ್ಟೆ ಪುನರ್ನಿರ್ಮಾಣ, ನೆಲಸಮ ವಿಚಾರಕ್ಕೆ ಸಂಬಂಧಿಸಿ ಹೈಕೋರ್ಟ್ ಆದೇಶದ ನಂತರ ವ್ಯಾಪಾರಿಗಳಿಗೆ ಆತಂಕ ಎದುರಾಗಿದೆ. ಕಟ್ಟಡ ನೆಲಸಮಗೊಳಿಸುವ ಆತಂಕದಲ್ಲಿ ವ್ಯಾಪಾರಿಗಳಿದ್ದಾಋಎ. ನಗರದ ಹೃದಯ ಭಾಗದಲ್ಲಿರುವ ದೇವರಾಜ ಮಾರುಕಟ್ಟೆ ನೆಲಸಮ ಮಾಡದಂತೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಹಿನ್ನೆಲೆ ಆತಂಕ ಎದುರಾಗಿದೆ.
ಮೆಕ್ಕೆಜೋಳಕ್ಕೆ ಕೊಳೆ ರೋಗ ಹಿನ್ನಲೆ ಮೆಕ್ಕೆಜೋಳದ ಬೆಳೆಯನ್ನ ಟ್ಯಾಕ್ಟರ್ ನಿಂದ ರೂಟರ್ ಹೊಡೆದು ನಾಶ ಮಾಡಲಾಗುತ್ತಿದೆ. ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದ ನಾಗಪ್ಪ ಗೊಬ್ಬರಗುಂಪಿ ಎಂಬುವ ರೈತ 10 ಎಕರೆಯಲ್ಲಿ ಮೆಕ್ಕೆಜೋಳ ಬೆಳೆದಿದ್ದ. ಒಂದೂವರೆ ಲಕ್ಷ ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆದಿದ್ದ. ಆದ್ರೆ ಕೊಳೆ ರೋಗ ಹಿನ್ನಲೆ ಟ್ರಾಕ್ಟರ್ ನಿಂದ ಬೆಳೆ ಸಂಪೂರ್ಣ ನಾಶ ಮಾಡಿದ್ದಾರೆ. ಕಳೆದ ತಿಂಗಳು ನಿರಂತರ ಮಳೆಗೆ ಮೆಕ್ಕೆಜೋಳಕ್ಕೆ ಲದ್ದಿರೋಗ, ಕೊಳೆ ರೋಗ ಕಾಣಿಸಿಕೊಂಡಿತ್ತು.
ಕೆಂಪೇಗೌಡ ಏರ್ಪೋರ್ಟ್ನಲ್ಲಿ 30 ಚಿನ್ನದ ಬಿಸ್ಕೆಟ್ಗಳು ಜಪ್ತಿ ಮಾಡಲಾಗಿದೆ. ಕೋಲ್ಕತ್ತಾದಿಂದ ಅಕ್ರಮವಾಗಿ ಚಿನ್ನದ ಬಿಸ್ಕೆಟ್ ಸಾಗಿಸುತ್ತಿದ್ದ ವ್ಯಕ್ತಿಯಿಂದ 36 ಲಕ್ಷ ಮೌಲ್ಯದ 600 ಗ್ರಾಂ ತೂಕದ 30 ಚಿನ್ನದ ಬಿಸ್ಕೆಟ್ಗಳನ್ನು ಕೆಂಪೇಗೌಡ ಏರ್ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಸ್ವಪಕ್ಷದ ವಿರುದ್ಧವೇ ಮುಖಂಡರು, ಕಾರ್ಯಕರ್ತರು ತಿರುಗಿಬಿದ್ದಿದ್ದಾರೆ. ತಿಪಟೂರು ಶಾಸಕ ಷಡಕ್ಷರಿ ವಿರುದ್ಧ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ. ಚುನಾವಣೆಯಲ್ಲಿ ಗೆದ್ದ ನಂತರ ಷಡಕ್ಷರಿ ನಮ್ಮನ್ನು ಕಡೆಗಣಿಸಿದ್ದಾರೆ. ಲೋಕೇಶ್ವರ್ಗೆ ಸೂಕ್ತ ಸ್ಥಾನಮಾನ ನೀಡುವಂತೆ ಬೆಂಬಲಿಗರು ಒತ್ತಾಯಿಸಿದ್ದಾರೆ. ಇಲ್ಲದಿದ್ರೆ ಮುಂದಿನ ಚುನಾವಣೆಯಲ್ಲಿ ತಕ್ಕಪಾಠ ಕಲಿಸುವುದಾಗಿ ತಿಪಟೂರು ‘ಕೈ’ ಮುಖಂಡ ಲೋಕೇಶ್ವರ್ ಬೆಂಬಲಿಗರು ಎಚ್ಚರಿಕೆ ಕೊಟ್ಟಿದ್ದಾರೆ.
ಬಿಬಿಎಂಪಿ ಕೇಂದ್ರ ಕಚೇರಿ ಆವರಣದ ಲ್ಯಾಬ್ನಲ್ಲಿ ಬೆಂಕಿ ಕಾಣಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಆಗಸ್ಟ್ 30ರೊಳಗೆ ಪ್ರಕರಣದ ತನಿಖಾ ವರದಿ ಸಲ್ಲಿಸಲು ಡೆಡ್ಲೈನ್ ನೀಡಲಾಗಿದೆ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ಗೆ ಬಿಬಿಎಂಪಿ ಪ್ರಮುಖ ಇಂಜಿನಿಯರ್ ಪ್ರಹ್ಲಾದ್ ವರದಿ ಸಲ್ಲಿಸಲಿದ್ದಾರೆ. ಪ್ರಕರಣದ ಬಗ್ಗೆ ನಾಳೆಯಿಂದ ಆಂತರಿಕ ತನಿಖೆ ಅಧಿಕೃತವಾಗಿ ಆರಂಭವಾಗಲಿದೆ.
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಸಂತೆ ಮಾವತ್ತೂರು ಬಳಿ ಕಾರು ಡಿಕ್ಕಿಯಾಗಿ ಪಾದಚಾರಿ ಗಂಗಹುಚ್ಚಯ್ಯ(54) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬಂಡೀಪುರ ಅಭಯಾರಣ್ಯಕ್ಕೆ ಕಂಟಕ ಎದುರಾಗಿದೆ. ಲ್ಯಾಂಟನ ಬಳಿಕ ಈಗ ಸೆನ್ನಾ ಸೆಪ್ಟಾಬ್ಲಿಶ್ ಸಸ್ಯ ಥಳಿ ಕಾಡಿಗೆ ಮುಳುವಾಗುತ್ತಿದೆ. ಕಳೆದ ಎರಡು ವರ್ಷದಲ್ಲಿ ಕಾಡಿನಾದ್ಯಂತ ಸೆನ್ನಾ ಸೆಪ್ಟಾಬ್ಲಿಶ್ ಥಳಿ ಹರಡಿದೆ. ಸೆನ್ನಾ ಸೆಪ್ಟಾಬ್ಲಿಶ್ ಹುಟ್ಟಿದ ಸುತ್ತಾ ಮುತ್ತಾ ಬೇರೆ ಯಾವ ಸಸ್ಯವನ್ನ ಬೆಳೆಯಲು ಬಿಡುವುದಿಲ್ಲ. ರಕ್ತ ಬೀಜಾಸುರನ ತರ ಒಂದು ಗಿಡವನ್ನ ಕಿತ್ತು ಹಾಕಿದ್ರೆ ಅದೇ ಜಾಗದಲ್ಲಿ ನಾಲ್ಕೈದು ಸಸ್ಯ ಹುಟ್ಟುತ್ತಿದೆ. ಅರಣ್ಯಾಧಿಕಾರಿಗಳಿಗೆ ಹೊಸ ತಲೆ ನೋವು ತಂದಿದೆ.
ಬೆಂಗಳೂರು ನಗರದಲ್ಲಿ ಪೋಕ್ಸೋ ಪ್ರಕರಣಗಳು ಹೆಚ್ಚಾಗುತ್ತಿವೆ. ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಹೆಚ್ಚುತ್ತಿವೆ. ಬೆಂಗಳೂರಲ್ಲಿ ಒಂದೇ ತಿಂಗಳಲ್ಲಿ 24 ಪೋಕ್ಸೋ ಪ್ರಕರಣಗಳು ಬೆಳಕಿಗೆ ಬಂದಿವೆ. ನೆರೆ ಮನೆ, ಸಂಬಂಧಿಕರಿಂದಲೇ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂಬ ಬಗ್ಗೆ ವರದಿ ಸಿಕ್ಕಿದೆ.
ಉಡುಪಿಯಲ್ಲಿ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ವಿಡಿಯೋ ಕೇಸ್ ಸಂಬಂಧ ಸಿಐಡಿ ಡಿವೈಎಸ್ಪಿ ಅಂಜುಮಾಲಾ ನೇತೃತ್ವದ ತಂಡ ತನಿಖೆ ನಡೆಸುತ್ತಿದೆ. ಸಿಐಡಿ ಅಧಿಕಾರಿಗಳ ತಂಡ ಮೊದಲ ಹಂತದ ತನಿಖೆ ಮುಗಿಸಿ ತೆರಳಿದೆ. ತನಿಖಾಧಿಕಾರಿ ಸಿಐಡಿ ಡಿವೈಎಸ್ಪಿ ಅಂಜುಮಾಲಾ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ವಿಚಾರಣೆ, ಮಹಜರು, ಹೇಳಿಕೆ ದಾಖಲಿಸಿಕೊಂಡು ಕೇಂದ್ರಸ್ಥಾನಕ್ಕೆ ವಾಪಸ್ ಆಗಿದ್ದಾರೆ. ಮೂರು ಮೊಬೈಲ್ಗಳ ಎಫ್ಎಸ್ಎಲ್ ವರದಿಗಾಗಿ ಕಾಯುತ್ತಿದ್ದಾರೆ.
ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಕೆಂಡಗಣ್ಣ ಸ್ವಾಮಿ ಗದ್ದುಗೆ ಅರ್ಚಕ ಕರಿಬಸವ ಶಾಸ್ತ್ರಿ(65) ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಹಲವು ವರ್ಷಗಳಿಂದ ಗದ್ದಿಗೆಯ ಮಹದೇಶ್ವರ ದೇಗುಲ ಚನ್ನಮಲ್ಲೇಶ್ವರ ದೇವಾಲಯದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದ ಕರಿವಸವ ಶಾಸ್ತ್ರಿ ನಿಧನ.
ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ಕರುಣಿಸುವ ಹಾಸನಾಂಬೆ ಜಾತ್ರಗೆ ಮುಹೂರ್ತ ನಿಗದಿಯಾಗಿದೆ. ನವೆಂಬರ್ 2 ರಿಂದ ನವೆಂಬರ್ 15 ರವರೆಗೆ ಶಕ್ತಿ ದೇವತೆಯ ಜಾತ್ರೆ ನಡೆಯಲಿದೆ.
Published On - 7:58 am, Wed, 16 August 23