ಬೆಂಗಳೂರು: ಇಂದಿನಿಂದ (ಜೂನ್ 1) ಎರಡು ದಿನಗಳ ಕಾಲ ರಾಜ್ಯ ಕಾಂಗ್ರೆಸ್ನಿಂದ (Karnataka Congress) ನವ ಸಂಕಲ್ಪ ಶಿಬಿರ (Nava Sankalpa Shibira) ನಡೆಯುತ್ತಿದೆ. ಎರಡು ಇಂದು ಮತ್ತು ನಾಳೆ ನಡೆಯುವ ನವ ಸಂಕಲ್ಪ ಶಿಬಿರದಲ್ಲಿ ಮಹತ್ವದ ಚರ್ಚೆ ನಡೆಯುತ್ತದೆ. ರಾಜಸ್ಥಾನದ ಉದಯಪುರದಲ್ಲಿ ನವ ಸಂಕಲ್ಪ ಶಿಬಿರ ಎಐಸಿಸಿ ಮಟ್ಟದಲ್ಲಿ ನಡೆದಿತ್ತು. ಅದೇ ಮಾದರಿಯಲ್ಲಿ ನಡೆಯುತ್ತಿದೆ. ರಾಜ್ಯದ ವಿಚಾರ ಅಳವಡಿಸಿಕೊಂಡು ಕಾಂಗ್ರೆಸ್ ನಾಯಕರು ಚರ್ಚೆ ನಡೆಸಲಿದ್ದಾರೆ. ವೀರಪ್ಪ ಮೋಯ್ಲಿ, ರೆಹಮಾನ್ ಖಾನ್, ಬಿಕೆ ಹರಿಪ್ರಸಾದ್, ಎಂ ಬಿ ಪಾಟೀಲ್, ಕೃಷ್ಣ ಭೈರೇಗೌಡ, ಡಾ. ಜಿ ಪರಮೇಶ್ವರ್ ನೇತೃತ್ವದಲ್ಲಿ ಸಮಿತಿಗಳ ರಚನೆ ಮಾಡಲಾಗಿದೆ. ಪಕ್ಷ ಬಲವರ್ಧನೆಗೆ ಈ ಸಮಿತಿಗಳು ಸಲಹೆಗಳನ್ನು ನೀಡಲಿವೆ. ಇಂದಿನ ಶಿಬಿರ ಬೆಂಗಳೂರಿನ ಹೊರ ವಲಯದ ಕ್ಲಾರ್ಕ್ ಎಕ್ಸಾಟಿಕಾ ಹೊಟೇಲ್ನಲ್ಲಿ ಆರಂಭವಾಗಿದೆ.
ವ್ಯಕ್ತಿ ಮುಖ್ಯ ಅಲ್ಲ, ಪಕ್ಷ ಮುಖ್ಯ- ಡಿಕೆಶಿ:
ನವ ಸಂಕಲ್ಪ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಇದೊಂದು ಐತಿಹಾಸಿಕ ಕಾರ್ಯಕ್ರಮ. ಇಲ್ಲಿ ಚರ್ಚಿಸಲು ಸೇರಿರುವ ನಾಯಕರಿಗಿಂತ ಹೆಚ್ವು ಅರ್ಹತೆಯುಳ್ಳ ನಾಯಕರು ಇದ್ದರು. ಆದರೆ, ಎಐಸಿಸಿ ಸೂಚನೆಯಂತೆ ಅವಕಾಶ ಕಲ್ಪಿಸಲಾಗಿದೆ. ಜೊತೆಗೂಡುವುದು ಆರಂಭ. ಜೊತೆಗೂಡಿ ಕೆಲಸ ಮಾಡುವುದು ಪ್ರಗತಿ. ಎಐಸಿಸಿ ಮಾರ್ಗದರ್ಶನದಂತೆ ಈ ಕಾರ್ಯಕ್ರಮವನ್ನ ಆಯೋಜಿಸಿದ್ದೇವೆ. ವ್ಯಕ್ತಿ ಮುಖ್ಯ ಅಲ್ಲ, ಪಕ್ಷ ಮುಖ್ಯ. ಈ ನಿಟ್ಟಿನಲ್ಲಿ ನಿಮ್ಮ ಸಲಹೆಗಳನ್ನ ಕೊಡಬೇಕು ಎಂದರು.
6 ಸಮಿತಿಗಳನ್ನ ರಚಿಸಲಾಗಿದೆ. ಅವರು ತಮ್ಮ ವಿಚಾರಗಳನ್ನ ಮಂಡಿಸಲಿದ್ದಾರೆ. ಮುಂದಿನ ಚುನಾವಣೆಯನ್ನ ದೃಷ್ಟಿಯಲ್ಲಿಟ್ಟುಕೊಂಡು ಸಮಿತಿಯ ಸದಸ್ಯರು ಸಲಹೆ ನೀಡಬೇಕು ಎಂದು ಮಾತನಾಡಿದ ಡಿಕೆ ಶಿವಕುಮಾರ್, ಇಲ್ಲಿ ಸಮಿತಿ ಸಭೆಗಳ ನಡೆಯುತ್ತದೆ. ಸಭೆಯಲ್ಲಿ ಆಗುವ ತೀರ್ಮಾನಗಳನ್ನು ಮಾಧ್ಯಮದವರಿಗೆ ಹೇಳುವಂತಿಲ್ಲ. ಯಾರು ಕೂಡ ರೆಕಾರ್ಡ್ ಮಾಡುವಂತಿಲ್ಲ. ಆಫ್ ದಿ ರೆಕಾರ್ಡ್ ಅಂತ, ಆನ್ ದಿ ರೆಕಾರ್ಡ್ ಅಂತ ಏನು ಸಹ ಹೇಳುವಂತಿಲ್ಲ. ಒಂದು ವೇಳೆ ಹೇಳಿದ್ದು ಗೊತ್ತಾದಾರೆ ಯಾವ ಕಣ್ಣಿನಲ್ಲಿ ನೋಡಬೇಕೋ, ಆ ಕಣ್ಣಿನಲ್ಲಿ ನೋಡುತ್ತೇವೆ. ಇದು ಕೇಂದ್ರ ಬಂದಿರುವ ಸೂಚನೆ. ಸಮಿತಿಗಳ ಮುಂದೆ ನೀವು ಕೊಡುವ ಸಲಹೆ ಮಾಧ್ಯಮಗಳಿಗೆ ಕೊಡುವಂತಿಲ್ಲ. ಹಾಗೇನಾದರೂ ಆದರೆ ನಿಮ್ಮನ್ನ ನಾವು ಬೇರೆ ರೀತಿ ನೋಡಬೇಕಾಗುತ್ತದೆ. ಇದು ಎಐಸಿಸಿ ಆದೇಶ. ಎಲ್ಲರಿಗೂ ಸಮಸ್ಯೆ ಇದೆ. ಸಮಸ್ಯೆ ಚರ್ಚೆ ಮಾಡುವ ಸಭೆ ಅಲ್ಲ. ರಾಜ್ಯ ಮತ್ತು ರಾಷ್ಟ್ರದ ಬಗ್ಗೆ ಚರ್ಚೆ ಮಾಡುವ ಸಭೆ. ಇದು ನೀವು ಜ್ಞಾಪಕದಲ್ಲಿ ಇಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಇದನ್ನೂ ಓದಿ: IND vs SA: ಭಾರತಕ್ಕೆ ಬರುತ್ತಿದ್ದಂತೆ ದಕ್ಷಿಣ ಆಫ್ರಿಕಾ ಆಟಗಾರರಿಗೆ ಶುರುವಾಗಿದೆ ಭಯ: ಇದಕ್ಕೆ ಕಾರಣ ಈ ಬೌಲರ್
ಸೋನಿಯಾ ಗಾಂಧಿ ಪಕ್ಷಕ್ಕೆ ಶಕ್ತಿ ತುಂಬಿ ಎಂದು ಸೂಚನೆ ಕೊಟ್ಟಿದ್ದಾರೆ. ನಿಮ್ಮದು ಏನೇ ಸಮಸ್ಯೆ ಇದ್ದರು ನನ್ನ ಬಳಿ, ವಿಪಕ್ಷ ನಾಯಕರು ಮತ್ತು ಸುರ್ಜೇವಾಲಾ ಅವರ ಗಮನಕ್ಕೆ ತನ್ನಿ ಎಂದು ಶಿವಕುಮಾರ್ ಖಡಕ್ ಸೂಚನೆ ನೀಡಿದ್ದಾರೆ.
ತ್ಯಾಗಕ್ಕೂ ಸಿದ್ಧ- ಡಿಕೆಶಿ:
2023 ರ ಚುನಾವಣೆಗೆ ಮತ್ತು 2024 ರ ಚುನಾವಣೆಗೆ ಕಾಂಗ್ರೆಸ್ ಸಿದ್ಧರಾಗಬೇಕು. ಗ್ರಾಮಪಂಚಾಯತಿ ಮಟ್ಟದಲ್ಲಿ ಸಭೆಗಳನ್ನ ಕಡ್ಡಾಯವಾಗಿ ಮಾಡಬೇಕು. ಎಐಸಿಸಿ ಅವರು ಪ್ರತಿ ಜಿಲ್ಲೆಯಲ್ಲಿ ಪಾದಯಾತ್ರೆ ಯನ್ನ ಮಾಡಬೇಕು ಎಂದು ಹೇಳಿದ್ದಾರೆ. ಆಗಸ್ಟ್ 8-15 ರವರೆಗೆ ಪಾದಯಾತ್ರೆ ಮಾಡಲಾಗುತ್ತದೆ. ವಿದ್ಯಾರ್ಥಿಗಳು, ಕಾರ್ಯಕರ್ತರು ಸೇರಿ ಈ ಕಾರ್ಯಕ್ರಮವನ್ನ ಮಾಡಲಾಗುತ್ತದೆ. ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಪಾದಯಾತ್ರೆ ಮಾಡಲಾಗುತ್ತದೆ. ಬಿಜೆಪಿಯವರ ಬಗ್ಗೆ ಮಾತನಾಡಿ ಕಾಲಹರಣ ಮಾಡೋದು ಬೇಡ. ಮಾಧ್ಯಮದವರಿಗೆ ಸುಮನ್ನೇ ಯಾವುದೆ ವಿವರಣೆಯನ್ನ ಕೊಡಬಾರದು. ಇದು ಎಐಸಿಸಿಯಿಂದ ಸ್ಟ್ರಿಕ್ಟ್ ಆಗಿ ಹೇಳಲಾಗಿದೆ. ಭಾರತ ಸತ್ತಾಗ ಕಾಂಗ್ರೆಸ್ ಸತ್ತು ಹೋಗುತ್ತೆ. ಅಲ್ಲಿಯವರೆಗೂ ಕಾಂಗ್ರೆಸ್ ಜೀವಂತವಾಗಿರುತ್ತೆ ಎಂದು ಮಹಾತ್ಮ ಗಾಂಧಿ ಹೇಳಿದ್ದಾರೆ. ನಮಗೆ ಶಕ್ತಿ ಕೊಡಬೇಕು. ರಾಜ್ಯದ ಜನರ ಸೇವೆ ಮಾಡಕ್ಕೆ ನಿಮ್ಮ ಜತೆ ಕಾರ್ಯಕರ್ತನಾಗಿ ಕೆಲಸ ಮಾಡಲು ಸಿದ್ಧನಿದ್ದೇನೆ, ಯಾವುದೇ ತ್ಯಾಗಕ್ಕೂ ಸಿದ್ಧನಿದ್ದೇನೆ ಎಂದು ಡಿಕೆಶಿ ಹೇಳಿದ್ದಾರೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:26 am, Thu, 2 June 22