ಶಕ್ತಿ ಯೋಜನೆಗೆ ಮೀಸಲಿಟ್ಟ ಹಣ ಆರೇ ತಿಂಗಳಿಗೆ ಖಾಲಿ: ಮಹಿಳೆಯರ ಉಚಿತ ಬಸ್‌ ಪ್ರಯಾಣ ರದ್ದಾಗುತ್ತಾ? ಸಾರಿಗೆ ಸಚಿವ ಹೇಳಿದ್ದಿಷ್ಟು

|

Updated on: Nov 09, 2023 | 8:42 AM

ಸಿಎಂ ಸಿದ್ದರಾಮಯ್ಯ ಅವರು ತಮ್ಮ ಈ ಮಹತ್ವಾಕಾಂಕ್ಷೆಯ ಯೋಜನೆಗೆಂದು ಬಜೆಟ್‌ನಲ್ಲಿ ಮೀಸಲಿಟ್ಟಿದ್ದ ಹಣ ಆರೇ ತಿಂಗಳಿಗೆ ಖಾಲಿಯಾಗುತ್ತಿದೆ. ಸಿದ್ದರಾಮಯ್ಯ ಶಕ್ತಿ ಯೋಜನೆಗೆ ಎಂದು ಬಜೆಟ್​ನಲ್ಲಿ 2,800 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದರೂ, ನವೆಂಬರ್ 5 ರವರೆಗೆ ಮಹಿಳಾ ಪ್ರಯಾಣಿಕರ ಶೂನ್ಯ ಟಿಕೆಟ್ ಮೌಲ್ಯವು 2,143 ಕೋಟಿ ರೂ. ತಲುಪಿದೆ. ಈ ಹಣಕಾಸು ವರ್ಷ ಮುಗಿಯಲು ಇನ್ನೂ ಐದು ತಿಂಗಳುಗಳು ಬಾಕಿ ಇದೆ.

ಶಕ್ತಿ ಯೋಜನೆಗೆ ಮೀಸಲಿಟ್ಟ ಹಣ ಆರೇ ತಿಂಗಳಿಗೆ ಖಾಲಿ: ಮಹಿಳೆಯರ ಉಚಿತ ಬಸ್‌ ಪ್ರಯಾಣ ರದ್ದಾಗುತ್ತಾ? ಸಾರಿಗೆ ಸಚಿವ ಹೇಳಿದ್ದಿಷ್ಟು
ಶಕ್ತಿ ಯೋಜನೆ
Follow us on

ಬೆಂಗಳೂರು, ನ.09: ಕಾಂಗ್ರೆಸ್​ನ (Congress) ಮಹತ್ವಾಕಾಂಕ್ಷೆಯ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆಯಿಂದಾಗಿ (Shakti Scheme) ಕೋಟ್ಯಾಂತರ ಮಹಿಳೆಯರು ಈಗಾಗಲೇ ಉಚಿತವಾಗಿ ಬಸ್ ಸೇವೆಗಳನ್ನು ಪಡೆದಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ (Siddaramaiah) ಅವರು ತಮ್ಮ ಈ ಮಹತ್ವಾಕಾಂಕ್ಷೆಯ ಯೋಜನೆಗೆಂದು ಬಜೆಟ್‌ನಲ್ಲಿ ಮೀಸಲಿಟ್ಟಿದ್ದ ಹಣ ಆರೇ ತಿಂಗಳಿಗೆ ಖಾಲಿಯಾಗುತ್ತಿದೆ. ಹೌದು ಸಿಎಂ ಸಿದ್ದರಾಮಯ್ಯ ಶಕ್ತಿ ಯೋಜನೆಗೆ ಎಂದು ಬಜೆಟ್​ನಲ್ಲಿ 2,800 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದರೂ, ನವೆಂಬರ್ 5 ರವರೆಗೆ ಮಹಿಳಾ ಪ್ರಯಾಣಿಕರ ಶೂನ್ಯ ಟಿಕೆಟ್ ಮೌಲ್ಯವು 2,143 ಕೋಟಿ ರೂ. ತಲುಪಿದೆ. ಈ ಹಣಕಾಸು ವರ್ಷ ಮುಗಿಯಲು ಇನ್ನೂ ಐದು ತಿಂಗಳುಗಳು ಬಾಕಿ ಇದ್ದು, ಬಜೆಟ್​ನಲ್ಲಿ ಮೀಸಲಿಟ್ಟ ಹಣ ಡಿಸೆಂಬರ್‌ವರೆಗೆ ಮಾತ್ರ ಬರಬಹುದು ಎಂದು ಸಾರಿಗೆ ನಿಗಮಗಳೇ ಸಮರ್ಥಿಸಿಕೊಂಡಿವೆ.

ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರು ಮಾತನಾಡಿ, ಈ ಯೋಜನೆ ಜಾರಿಯಾದ ಕೆಲವು ತಿಂಗಳ ನಂತರ ಉಚಿತ ಬಸ್‌ನಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಬಹುದು ಎಂದು ನಾವು ಊಹಿಸಿದ್ದೇವೆ. ಆದರೆ ಇದು ಆಗಲಿಲ್ಲ. ಸಂಖ್ಯೆ ಸ್ಥಿರವಾಗಿದೆ. ಶಕ್ತಿ ಯೋಜನೆಗೆ ಇಷ್ಟೊಂದು ಉತ್ತಮ ಪ್ರತಿಕ್ರಿಯೆ ಸಿಗುತ್ತದೆ ಎಂದು ನಾವು ನಿರೀಕ್ಷಿಸಿರಲಿಲ್ಲ. ಈ ಟಿಕೆಟ್​ಗಳ ಮೌಲ್ಯದ ಹಣವನ್ನು ಸರ್ಕಾರವು ಬಸ್ ನಿಗಮಗಳಿಗೆ ಪ್ರತಿ ತಿಂಗಳು ಪಾವತಿಸುತ್ತದೆ. ಈ ಯೋಜನೆಗೆ ಮೀಸಲಿಟ್ಟ ಹಣವನ್ನು ಮತ್ತಷ್ಟು ಹೆಚ್ಚು ಮಾಡಬೇಕು ಎಂದರು. ”

ಇದನ್ನೂ ಓದಿ:  ಗೃಹ ಲಕ್ಷ್ಮೀರಿಗೆ ಗುಡ್​ನ್ಯೂಸ್: 15 ದಿನದೊಳಗೆ ಮನೆ ಯಜಮಾನಿ ಖಾತೆಗೆ ಹಣ

ಇನ್ನು ಮತ್ತೊಂದೆಡೆ ಈ ಸಂಬಂಧ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿದ್ದು, ಡಿಸೆಂಬರ್‌ನಲ್ಲಿ ಶಕ್ತಿ ಯೋಜನೆಗೆ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ತಿಳಿಸಿದ್ದಾರೆ. “ಡಿಸೆಂಬರ್ ವರೆಗೆ ನೀಡಲಾದ ಒಟ್ಟು ಟಿಕೆಟ್ ಮೌಲ್ಯವನ್ನು ಗಣನೆಗೆ ತೆಗೆದುಕೊಂಡು, ನಾವು ಹೆಚ್ಚಿನ ಹಣವನ್ನು ನಿಯೋಜಿಸುತ್ತೇವೆ” ಎಂದರು.

ತಿಂಗಳ 20 ರೊಳಗೆ ಗೃಹ ಲಕ್ಷ್ಮಿ, ಅನ್ನ ಭಾಗ್ಯ ಹಣ ಖಾತೆಗೆ

ಗೃಹ ಲಕ್ಷ್ಮಿ ಮತ್ತು ಅನ್ನ ಭಾಗ್ಯ ಯೋಜನೆಗಳ ಫಲಾನುಭವಿಗಳಿಗೆ ಪ್ರತಿ ತಿಂಗಳ 20 ರೊಳಗೆ ಅವರ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸಲಾಗುವುದು ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಸುತ್ತೋಲೆಯಲ್ಲಿ, ಹಣಕಾಸು ಇಲಾಖೆಯು ಆಹಾರ ಮತ್ತು ನಾಗರಿಕ ಸರಬರಾಜು (ಅನ್ನ ಭಾಗ್ಯ) ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ (ಗೃಹ ಲಕ್ಷ್ಮಿ) ಇಲಾಖೆಗಳಿಗೆ ಪ್ರತಿ ತಿಂಗಳು 10 ರಿಂದ 15 ನೇ ತಾರೀಖಿನೊಳಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಸೂಚಿಸಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ