AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದ ವಿಳಂಬ ನೀತಿ: ಕೇಂದ್ರದಿಂದ ಬೆಂಗಳೂರಿಗೆ ಸಿಗಲಿದ್ದ 4500 ಇ-ಬಸ್ ಬೇರೆ ರಾಜ್ಯಗಳ ಪಾಲಾಗುವ ಆತಂಕ!

ಪಿಎಂ ಇ-ಡ್ರೈವ್ ಯೋಜನೆಯಡಿ ಬೆಂಗಳೂರಿಗೆ ಮಂಜೂರಾಗಿದ್ದ 4,500 ಎಲೆಕ್ಟ್ರಿಕ್ ಬಸ್‌ಗಳ ಭವಿಷ್ಯ ಅನಿಶ್ಚಿತತೆಯಲ್ಲಿದೆ. ರಾಜ್ಯ ಸರ್ಕಾರದಿಂದ ಕಾರ್ಯಾದೇಶ ನೀಡುವಲ್ಲಿ ಆಗಿರುವ ವಿಳಂಬದ ನಡುವೆ, ಆ ಬಸ್‌ಗಳನ್ನು ತಮ್ಮ ಪಾಲಿಗೆ ನೀಡುವಂತೆ ಆರು ರಾಜ್ಯಗಳ ನಗರಗಳು ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿವೆ ಎಂದು ವರದಿಯಾಗಿದೆ. ಇವಿ ಬಸ್ ಸ್ವೀಕಾರಕ್ಕೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಹಿಂದೇಟು ಹಾಕುತ್ತಿರುವ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಇತ್ತೀಚೆಗೆ ಆಕ್ಷೇಪಿಸಿದ್ದರು.

ಕರ್ನಾಟಕದ ವಿಳಂಬ ನೀತಿ: ಕೇಂದ್ರದಿಂದ ಬೆಂಗಳೂರಿಗೆ ಸಿಗಲಿದ್ದ 4500 ಇ-ಬಸ್ ಬೇರೆ ರಾಜ್ಯಗಳ ಪಾಲಾಗುವ ಆತಂಕ!
ಸಾಂದರ್ಭಿಕ ಚಿತ್ರImage Credit source: PTI
ಗಣಪತಿ ಶರ್ಮಾ
|

Updated on: Jul 11, 2026 | 11:22 AM

Share

ಮುಖ್ಯಾಂಶಗಳು

  • 4,220 ಬಸ್‌ಗಳಿಗೆ ಬೇರೆ ರಾಜ್ಯಗಳ ಬೇಡಿಕೆ
  • ಬೆಂಗಳೂರಿಗೆ ಮಂಜೂರಗಿರುವ ಇವಿ ಬಸ್​ಗಳು ಕೈತಪ್ಪುವ ಭೀತಿ
  • ರಾಜಕೀಯ ಚರ್ಚೆಗೂ ಗ್ರಾಸವಾಗಿರುವ ಕರ್ನಾಟಕ ಸರ್ಕಾರದ ನಡೆ

ಬೆಂಗಳೂರು, ಜುಲೈ 11: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಗೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಪಿಎಂ ಇ-ಡ್ರೈವ್ (PM E-DRIVE) ಯೋಜನೆಯಡಿ 4,500 ಎಲೆಕ್ಟ್ರಿಕ್ ಬಸ್‌ಗಳು ಮಂಜೂರಾಗಿ ತಿಂಗಳುಗಳೇ ಕಳೆದಿವೆ. ಇದೀಗ ರಾಜ್ಯ ಸರ್ಕಾರದ ವಿಳಂಬ ನೀತಿಯಿಂದ ಅವುಗಳು ಬೇರೆ ರಾಜ್ಯಗಳ ನಗರಗಳ ಪಾಲಾಗುವ ಆತಂಕ ಎದುರಾಗಿದೆ. ಕರ್ನಾಟಕ ಸಚಿವ ಸಂಪುಟದಿಂದ ಇನ್ನೂ ಅನುಮೋದನೆ ಸಿಗದಿರುವ ಹಿನ್ನೆಲೆಯಲ್ಲಿ ಕಾರ್ಯಾದೇಶ ಹೊರಡಿಸುವ ಪ್ರಕ್ರಿಯೆ ಸ್ಥಗಿತಗೊಂಡಿದೆ. ಈ ಮಧ್ಯೆ, ಬೆಂಗಳೂರಿಗೆ (Bengaluru) ಹಂಚಿಕೆಯಾಗಬೇಕಿದ್ದ ಬಸ್‌ಗಳ ಒಂದು ಭಾಗವನ್ನು ಹಂಚಿಕೆ ಮಾಡುವಂತೆ ಬೇರೆ ರಾಜ್ಯಗಳಿಂದ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಕೆಯಾಗಿದೆ ಎಂದು ವರದಿಯಾಗಿದೆ.

ವಿವಿಧ ರಾಜ್ಯಗಳಿಂದ ಹೆಚ್ಚುವರಿ ಬಸ್​ಗೆ ಬೇಡಿಕೆ

ಸದ್ಯ, ಪಿಎಂ ಇ-ಡ್ರೈವ್ ಯೋಜನೆಯಡಿ ಸೂರತ್ 500, ಹೈದರಾಬಾದ್ 600, ಆಂಧ್ರಪ್ರದೇಶ 2,000, ರಾಜಸ್ಥಾನ 900, ಮೇಘಾಲಯ 20 ಹಾಗೂ ಜಮ್ಮು-ಕಾಶ್ಮೀರ 200 ಎಲೆಕ್ಟ್ರಿಕ್ ಬಸ್‌ಗಳ ಹೆಚ್ಚುವರಿ ಹಂಚಿಕೆಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿವೆ ಎಂದು ‘ಮನಿ ಕಂಟ್ರೋಲ್’ ವರದಿ ಮಾಡಿದೆ. ಒಟ್ಟಾರೆ 4,220 ಹೆಚ್ಚುವರಿ ಬಸ್‌ಗಳಿಗೆ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಕೆಯಾಗಿದೆ.

2025ರಲ್ಲೇ ಟೆಂಡರ್ ಪೂರ್ಣಗೊಳಿಸಿದ್ದ ಕೇಂದ್ರ

ಬೆಂಗಳೂರಿಗೆ ಬಸ್ ನೀಡುವ ಬಗ್ಗೆ ಕೇಂದ್ರ ಸರ್ಕಾರವು 2025ರ ಡಿಸೆಂಬರ್‌ನಲ್ಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿತ್ತು. ಆದರೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಇನ್ನೂ ಕಾರ್ಯಾದೇಶ ಹೊರಡಿಸಿಲ್ಲ. ರಾಜ್ಯ ಸಚಿವ ಸಂಪುಟದ ಅನುಮೋದನೆಗಾಗಿ ಸಂಸ್ಥೆ ಕಾಯುತ್ತಿದೆ. ಇನ್ನೊಂದೆಡೆ ಹೈದರಾಬಾದ್ ಫೆಬ್ರವರಿ 18ರಂದೇ, ಸೂರತ್ ಮಾರ್ಚ್ 9ರಂದು ಹಾಗೂ ಅಹಮದಾಬಾದ್ ಮಾರ್ಚ್ 16ರಂದು ಕಾರ್ಯಾದೇಶ ನೀಡಿವೆ. ದೆಹಲಿಯೂ ಜುಲೈ ಮಧ್ಯಭಾಗದಲ್ಲಿ ಕಾರ್ಯಾದೇಶ ನೀಡುವ ಸಾಧ್ಯತೆಯಿದೆ.

ಕರ್ನಾಟಕದ ನಡೆಗೆ ಕೇಂದ್ರ ಅಸಮಾಧಾನ

ಈ ನಡುವೆ ಕೇಂದ್ರದ ಬೃಹತ್ ಕೈಗಾರಿಕಾ ಸಚಿವಾಲಯವೂ ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದು, ಬೇಡಿಕೆ ದೃಢೀಕರಣ ಪತ್ರ ಪಡೆದ ನಾಲ್ಕು ವಾರಗಳೊಳಗೆ ಕಾರ್ಯಾದೇಶ ನೀಡಬೇಕಿದ್ದರೂ ಅದು ಇನ್ನೂ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ಶೀಘ್ರದಲ್ಲೇ ಒಪ್ಪಂದ ಪ್ರಕ್ರಿಯೆ ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಕೇಂದ್ರದ 1,505 ಕೋಟಿ ರೂ. ಸಹಾಯಧನ ಮಂಜೂರು

ಈ ಯೋಜನೆಯಡಿ ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್‌ಗಳಿಗೆ ಗರಿಷ್ಠ 1,505 ಕೋಟಿ ರೂ. ಕೇಂದ್ರ ಸಹಾಯಧನ ಮಂಜೂರಾಗಿದೆ. ಇದರಲ್ಲಿ 3,500 ನಾನ್-ಎಸಿ 12 ಮೀಟರ್ ಬಸ್‌ಗಳು, 300 ಎಸಿ 12 ಮೀಟರ್ ಬಸ್‌ಗಳು, 600 ನಾನ್-ಎಸಿ 9 ಮೀಟರ್ ಬಸ್‌ಗಳು ಹಾಗೂ 100 ಎಸಿ 9 ಮೀಟರ್ ಬಸ್‌ಗಳು ಸೇರಿವೆ.

ಇದನ್ನೂ ಓದಿ: ಕೇಂದ್ರದ 4,500 ಇ-ಬಸ್ ಪಡೆಯಲು ರಾಜ್ಯ ಹಿಂದೇಟು ಹಾಕ್ತಿರೋದೇಕೆ? ಅಸಲಿ ಕಾರಣ ಬಿಚ್ಚಿಟ್ಟ ಸಾರಿಗೆ ಸಚಿವ ಭೈರತಿ ಸುರೇಶ್

ದೇಶಾದ್ಯಂತ ಪಿಎಂ ಇ ಡ್ರೈವ್ ಯೋಜನೆಯಡಿ 14,028 ಎಲೆಕ್ಟ್ರಿಕ್ ಬಸ್‌ಗಳಿಗೆ ಅನುಮೋದನೆ ದೊರೆತಿದ್ದು, ಈಗಾಗಲೇ 13,800 ಬಸ್‌ಗಳ ಖರೀದಿ ಪ್ರಕ್ರಿಯೆ ಪೂರ್ಣಗೊಂಡಿದೆ. ಪುಣೆ 1,000 ಬಸ್‌ಗಳಿಗೆ ಕಾರ್ಯಾದೇಶ ನೀಡಿದ್ದು, ಮುಂಬೈ ಕೂಡ ಇದೇ ತಿಂಗಳ ಅಂತ್ಯದೊಳಗೆ ಪ್ರಕ್ರಿಯೆ ಪೂರ್ಣಗೊಳಿಸುವ ನಿರೀಕ್ಷೆಯಿದೆ. ಕರ್ನಾಟಕ ಸರ್ಕಾರ ಇನ್ನೂ ವಿಳಂಬ ಮಾಡಿದರೆ, ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಬಲ ತುಂಬಬೇಕಿದ್ದ 4,500 ಎಲೆಕ್ಟ್ರಿಕ್ ಬಸ್‌ಗಳ ಯೋಜನೆ ಕೈತಪ್ಪುವ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us