ಪತಿ-ಪತ್ನಿ ಒಂದೇ ವಲಯದಲ್ಲಿ ಕೆಲಸ ಮಾಡುವ ಆಯ್ಕೆಗೆ ಮರುಜೀವ: ಪೊಲೀಸ್ ಇಲಾಖೆಯ ಆ ನೀತಿ ಮರು ಜಾರಿ?

| Updated By: ಸಾಧು ಶ್ರೀನಾಥ್​

Updated on: Oct 31, 2022 | 2:13 PM

DG & IGP Praveen Sood: ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ ತರಲು ಚಿಂತನೆ ನಡೆದಿದೆ. ಪತಿ, ಪತ್ನಿ ಒಂದೇ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಲಾಗುವುದು. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಯುತ್ತಿದೆ -ಡಿಜಿ & ಐಜಿಪಿ ಸೂದ್

ಪತಿ-ಪತ್ನಿ ಒಂದೇ ವಲಯದಲ್ಲಿ ಕೆಲಸ ಮಾಡುವ ಆಯ್ಕೆಗೆ ಮರುಜೀವ: ಪೊಲೀಸ್ ಇಲಾಖೆಯ ಆ ನೀತಿ ಮರು ಜಾರಿ?
ಪತಿ-ಪತ್ನಿ ಒಂದೇ ವಲಯದಲ್ಲಿ ಕೆಲಸ ಮಾಡುವ ಆಯ್ಕೆಗೆ ಮರುಜೀವ
Follow us on

ಬೆಂಗಳೂರು: ರಾಜ್ಯದಲ್ಲಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಪತಿ-ಪತ್ನಿಗೆ ಒಂದೇ ವಿಭಾಗ ಅಥವಾ ವಲಯಕ್ಕೆ ವರ್ಗಾವಣೆ ರದ್ದಾಗಿತ್ತು. ಇದರ ವಿರುದ್ಧ ಸಾಕಷ್ಟು ಅಪಸ್ವರ ಕೇಳಿ ಬಂದಿತ್ತು. ಆದರೆ ಈಗ ಅದನ್ನು ಮತ್ತೆ ಜಾರಿಗೆ ತರಬೇಕು ಎಂದು ಸರ್ಕಾರಕ್ಕೆ ಮನವಿ ಮಾಡುವುದಾಗಿ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸಿವಿಲ್ ಸೇವಾ ಅಧಿನಿಯಮ 16 a ನಿಯಮ ಮತ್ತೆ ಸೇರ್ಪಡೆ ಮಾಡಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಶೀಘ್ರದಲ್ಲೆ ಸರ್ಕಾರ ನಮ್ಮ ಮನವಿಯನ್ನ ಪುರಸ್ಕರಿಸುವ ಭರವಸೆ ಇದೆ ಎಂದು ಅವರು ತಿಳಿಸಿದ್ದಾರೆ.

ಈ ಬಗ್ಗೆ ಬೆಂಗಳೂರಿನ ಕೋರಮಂಗಲದಲ್ಲಿ ನಡೆದ ಸೇವಾ ಕವಾಯತು ಕಾರ್ಯಕ್ರಮದಲ್ಲಿ ಮಾತನಾಡಿದ ಡಿಜಿ & ಐಜಿಪಿ ಸೂದ್ ಅವರು ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ ತರಲು ಚಿಂತನೆ ನಡೆದಿದೆ. ಪತಿ, ಪತ್ನಿ ಒಂದೇ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಲಾಗುವುದು. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಯುತ್ತಿದೆ.

ಪೊಲೀಸ್ ಇಲಾಖೆಯಲ್ಲಿ ಗಂಡ ಹೆಂಡತಿ ಬೇರೆ ಬೇರೆ ಕಡೆ 36 ವರ್ಷ ಇರೋದಕ್ಕೆ ಆಗಲ್ಲ. ಪೊಲೀಸ್ ಕಾನ್ಸ್​ಟೇಬಲ್​ಗಳ ನಿಜವಾದ ಸಮಸ್ಯೆಯಿದು. 7 ವರ್ಷಗಳ ನಂತರ ಡಿವಿಷನ್ ಬದಲಾವಣೆ ಮಾಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಪೊಲೀಸರಿಗೆ ಸರ್ಕಾರ 10 ಸಾವಿರ ಮನೆಗಳನ್ನು ಮಂಜೂರು ಮಾಡಿದೆ. ಅದರಲ್ಲಿ ಎರಡು ಸಾವಿರ ಮನೆಗಳ ಕನ್ಸ್ಟ್ರಕ್ಷನ್ ಶುರುವಾಗಿದೆ. ಜೊತೆಗೆ, ಪ್ರಸಕ್ತ ವರ್ಷ 116 ಪೊಲೀಸ್ ಠಾಣೆಗಳ ನಿರ್ಮಾಣ ನಡೆಯುತ್ತಿದೆ. ಮೊದಲ ಬಾರಿಗೆ ಒಂದೇ ವರ್ಷದಲ್ಲಿ ಇಷ್ಟು ಸಂಖ್ಯೆಯಲ್ಲಿ ಪೊಲೀಸ್ ಠಾಣೆಗಳು ನಿರ್ಮಾಣ ಆಗುತ್ತಿದೆ ಎಂದು ಅವರು ಹೇಳಿದರು.

ದೇಶವನ್ನು ಒಗ್ಗೂಡಿಸಿದ ಹೆಗ್ಗಳಿಕೆ ವಲ್ಲಭಭಾಯಿ ಪಟೇಲ್​ರಿಗೆ ಸಲ್ಲುತ್ತದೆ:

ದೇಶಕ್ಕೆ ಸರ್ದಾರ್​ ವಲ್ಲಭಭಾಯಿ ಪಟೇಲ್​​ ಕೊಡುಗೆ ಬಹಳ ದೊಡ್ಡದು. ದೇಶವನ್ನು ಒಗ್ಗೂಡಿಸಿದ ಹೆಗ್ಗಳಿಕೆ ವಲ್ಲಭಭಾಯಿ ಪಟೇಲ್​ರಿಗೆ ಸಲ್ಲುತ್ತದೆ ಎಂದು ಸೇವಾ ಕವಾಯತು ಕಾರ್ಯಕ್ರಮದಲ್ಲಿ ಡಿಜಿ & ಐಜಿಪಿ ಸೂದ್​ ಹೇಳಿದರು. ದೇಶದ ಅಂತಹ ಒಗ್ಗಟ್ಟನ್ನು ಒಡೆಯಲು ಕೆಲವು ದುಷ್ಟ ಶಕ್ತಿಗಳು ಪ್ರಯತ್ನಿಸುತ್ತಿವೆ. ದುಷ್ಟ ಶಕ್ತಿಗಳ ಪ್ರಯತ್ನ ತಡೆಯುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಅದರಲ್ಲಿ ಪೊಲೀಸರ ಮೇಲೆ ದೊಡ್ಡ ಜವಾಬ್ದಾರಿಯಿದೆ ಎಂದು ಅವರು ಹೇಳಿದರು.

ಕೆ.ಆರ್​.ಪುರಂ ಠಾಣೆ ಇನ್ಸ್​ಪೆಕ್ಟರ್​​ ನಂದೀಶ್​ ಸಾವಿನ ಬಗ್ಗೆ ತನಿಖೆ ನಡೆಸಲು ಸಿಎಂ ಸೂಚಿಸಿದ್ದಾರೆ. ಈ ಬಗ್ಗೆ ನಾವು ಇಲಾಖೆ ಮಟ್ಟದಲ್ಲಿ ತನಿಖೆ ಮಾಡುತ್ತೇವೆ. ಪ್ರಕರಣದ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತೇವೆ ಎಂದು ಡಿಜಿಪಿ ಪ್ರವೀಣ್ ಸೂದ್​ ಹೇಳಿದರು.

ಇನ್ನು ಕಂಚುಗಲ್​ ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಯುತ್ತಿದೆ. ತನಿಖೆ ನಡೆಯುತ್ತಿರುವಾಗ ಯಾವ ಕೇಸ್ ಬಗ್ಗೆಯೂ ಮಾತನಾಡಲ್ಲ. ತನಿಖೆ ಮಾಡ್ತಿದ್ದೀವಿ ಎಂದು ಅವರು ಸ್ಪಷ್ಟಪಡಿಸಿದರು.

Published On - 2:12 pm, Mon, 31 October 22