ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಅಭಾವ: ಬರ ಸ್ಥಿತಿ ಅಧ್ಯಯನಕ್ಕೆ ಕೇಂದ್ರದ ತಂಡ ಕಳುಹಿಸುವಂತೆ ಪ್ರಧಾನಿಗೆ ಸಿಎಂ ಡಿಕೆಶಿ ಪತ್ರ

CM DK Shivakumar writes to PM Modi: ಕರ್ನಾಟಕದ 18 ಜಿಲ್ಲೆಗಳಲ್ಲಿ ತಲೆದೋರಿರುವ ಮಳೆ ಅಭಾವ ಮತ್ತು ಬರ ಪರಿಸ್ಥಿತಿಯ ಅಧ್ಯಯನಕ್ಕಾಗಿ ತಕ್ಷಣವೇ ಕೇಂದ್ರದ ತಂಡವನ್ನು ನಿಯೋಜಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ರಾಜ್ಯದ ಪೈಕಿ 141 ತಾಲೂಕುಗಳಲ್ಲಿ ಮಳೆಯ ಕೊರತೆ ಉಂಟಾಗಿದ್ದು, ಮುಂಗಾರು ಹಂಗಾಮಿನ ಬಿತ್ತನೆ ಕೂಡ ಕುಂಠಿತವಾಗಿದೆ. ರಾಜ್ಯದಲ್ಲಿ ಶೇ.34ರಷ್ಟು ಮಾತ್ರ ಬಿತ್ತನೆ ಕಾರ್ಯ ಆಗಿದ್ದು, 14 ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆ ಇದ್ದು, ಕೇವಲ ಶೇ.34ರಷ್ಟು ಮಾತ್ರ ನೀರಿದೆ ಎಂಬುದನ್ನೂ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಅಭಾವ: ಬರ ಸ್ಥಿತಿ ಅಧ್ಯಯನಕ್ಕೆ ಕೇಂದ್ರದ ತಂಡ ಕಳುಹಿಸುವಂತೆ ಪ್ರಧಾನಿಗೆ ಸಿಎಂ ಡಿಕೆಶಿ ಪತ್ರ
ಬರ ಸ್ಥಿತಿ ಅಧ್ಯಯನಕ್ಕೆ ಕೇಂದ್ರದ ತಂಡ ಕಳುಹಿಸುವಂತೆ ಪ್ರಧಾನಿಗೆ ಸಿಎಂ ಡಿಕೆಶಿ ಪತ್ರ

Updated on: Jul 14, 2026 | 10:21 PM

ಬೆಂಗಳೂರು, ಜುಲೈ 14: ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬರ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಬರ ಸ್ಥಿತಿ ಅಧ್ಯಯನಕ್ಕೆ ಕೇಂದ್ರದ ತಂಡ ಕಳುಹಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಸಿಎಂ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ. ಬರ ಪರಿಸ್ಥಿತಿ ನಿರ್ವಹಣೆಗೆ ಅಗತ್ಯ ನೆರವಿಗೆ ಕ್ರಮಕೈಗೊಳ್ಳುವಂತೆಯೂ ಸಿಎಂ ಆಗ್ರಹಿಸಿದ್ದು, ರಾಜ್ಯದಲ್ಲಿ ಮಳೆಗಾಲದ ಮಳೆ ತೀವ್ರ ಕೊರತೆಯಾಗಿದೆ. ವಾಡಿಕೆ ಮಳೆಗಿಂತ ಶೇ. 30ರಷ್ಟು ಕಡಿಮೆ ವರ್ಷಧಾರೆಯಾಗಿದ್ದು, 31 ಜಿಲ್ಲೆಗಳ ಪೈಕಿ 18 ಜಿಲ್ಲೆಗಳಲ್ಲಿ ಮಳೆ ಅಭಾವ ಇದೆ ಎಂದು ತಿಳಿಸಿದ್ದಾರೆ.

ರಾಜ್ಯದ 141 ತಾಲೂಕುಗಳಲ್ಲಿ ಮಳೆ ಕೊರತೆ

ರಾಜ್ಯದ ಪೈಕಿ 141 ತಾಲೂಕುಗಳಲ್ಲಿ ಮಳೆಯ ಕೊರತೆ ಉಂಟಾಗಿದ್ದು, ಮುಂಗಾರು ಹಂಗಾಮಿನ ಬಿತ್ತನೆ ಕೂಡ ಕುಂಠಿತವಾಗಿದೆ. ರಾಜ್ಯದಲ್ಲಿ ಶೇ.34ರಷ್ಟು ಮಾತ್ರ ಬಿತ್ತನೆ ಕಾರ್ಯ ಆಗಿದ್ದು, 14 ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆ ಇದ್ದು, ಕೇವಲ ಶೇ.34ರಷ್ಟು ಮಾತ್ರ ನೀರಿದೆ. ಹೀಗಾಗಿ ಕೇಂದ್ರ ಸರ್ಕಾರ ನಿಯೋಜಿತ ತಂಡದ ಭೇಟಿ ಉದ್ಭವಿಸುತ್ತಿರುವ ಬರ ಪರಿಸ್ಥಿತಿಯ ತೀವ್ರತೆಯನ್ನು ಪ್ರತ್ಯಕ್ಷವಾಗಿ ಮೌಲ್ಯಮಾಪನ ಮಾಡಲು ಸಹಕಾರಿಯಾಗುತ್ತದೆ. ಕಷ್ಟದ ಅವಧಿಯಲ್ಲಿ ಭಾರತ ಸರ್ಕಾರವು ತಮ್ಮೊಂದಿಗಿದೆ ಎಂಬ ಭರವಸೆಯನ್ನು ರೈತ ಸಮುದಾಯಕ್ಕೆ ನೀಡುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ರೈತರೇ ಗಮನಸಿ; ಬಿತ್ತನೆ ಸಂಬಂಧ ಹವಾಮಾನ ತಜ್ಞರು ನೀಡಿರುವ ಸಲಹೆ ಇಲ್ಲಿದೆ

ರಾಜ್ಯವು 10 ವಿಭಿನ್ನ ಕೃಷಿ ಹವಾಮಾನ ವಲಯಗಳನ್ನು ಹೊಂದಿದ್ದು, ಅದರ ಭೌಗೋಳಿಕ ಪ್ರದೇಶದ ಸುಮಾರು ಶೇಕಡಾ 77ರಷ್ಟು ಭಾಗವು ಶುಷ್ಕ ಮತ್ತು ಅರ-ಶುಷ್ಕ ಪ್ರದೇಶಗಳ ವ್ಯಾಪ್ತಿಗೆ ಬರುತ್ತದೆ. ರಾಜ್ಯವು ಸುಮಾರು 84.79 ಲಕ್ಷ ಹೆಕ್ಟೇರ್ ಮಳೆ ಆಶ್ರಿತ ಕೃಷಿ ಭೂಮಿ ಹೊಂದಿದ್ದು, ಇದು ರಾಜಸ್ಥಾನದ ನಂತರ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಈ ಕಾರಣದಿಂದಾಗಿ ಇಲ್ಲಿನ ಕೃಷಿ ಉತ್ಪಾದನೆಯು ಮುಂಗಾರು ಮಳೆಯನ್ನೇ ಹೆಚ್ಚು ಅವಲಂಬಿಸಿದೆ. ಎಲ್​​ನಿನೋ ಕಾರಣದಿಂದಾಗಿ 2026ರ ನೈಋತ್ಯ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು (IMD) ತಿಳಿಸಿತ್ತು. ಇದಕ್ಕೆ ಅನುಗುಣವಾಗಿ, ರಾಜ್ಯದಲ್ಲಿ ಮಳೆಯ ಕೊರತೆಯು ಗಮನಾರ್ಹವಾಗಿ ಕಂಡುಬಂದಿದೆ. 11 ಜುಲೈ 2026ರ ಮಾಹಿತಿಯಂತೆ, ಕರ್ನಾಟಕದಲ್ಲಿ ವಾಡಿಕೆ ಮಳೆಯಾದ 292 ಮಿ.ಮೀ.ಗೆ ಪ್ರತಿಯಾಗಿ ಕೇವಲ 203 ಮಿ.ಮೀ. ಮಳೆಯಾಗಿದೆ ಎಂಬುದವನ್ನವರು ಪತ್ರದ ಮೂಲಕ ಪ್ರಧಾನಿ ಗಮನಕ್ಕೆ ತಂದಿದ್ದಾರೆ.

ವರದಿ: ಈರಣ್ಣಾ ಬಸವ, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us