Karnataka Polls: ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ ಗಡಿಪಾರು

|

Updated on: Mar 30, 2023 | 2:41 PM

ವಿಲ್ಸನ್ ಗಾರ್ಡನ್ ನಾಗನ ಮೇಲೆ ಇದುವರೆಗೆ 22 ಪ್ರಕರಣಗಳು ದಾಖಲಾಗಿದ್ದು, ಏಳು ಕೊಲೆ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ. ಸದ್ಯ ಚುನಾವಣೆ ಹಿನ್ನೆಲೆ ಬೆಂಗಳೂರು ಪೊಲೀಸರು ಆತನನ್ನು ಗಡಿಪಾರು ಮಾಡಿದ್ದಾರೆ.

Karnataka Polls: ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ ಗಡಿಪಾರು
ವಿಲ್ಸನ್ ಗಾರ್ಡನ್ ನಾಗ
Follow us on

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಕಾವು ಆರಂಭವಾಗುತ್ತಿದ್ದಂತೆ ರಾಜಕಾರಣದಲ್ಲಿ ಸಕ್ರಿಯನಾಗಲು ಸಜ್ಜಾಗುತ್ತಿದ್ದ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನನ್ನು (Wilson Garden Naga) ಬೆಂಗಳೂರು ಪೊಲೀಸರು (Bengaluru Police) ಚುನಾವಣೆ ಮುಗಿಯುವವರೆಗೆ ಗಡಿಪಾರು ಮಾಡಿದ್ದಾರೆ. ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಣ ನಿಂಬರಗಿ ಗಡಿಪಾರು ನಿರ್ದೇಶನ ನೀಡಿದ್ದಾರೆ. ಚುನಾವಣೆಯ ನಂತರ ಪೊಲೀಸ್ ಮೇಲ್ವಿಚಾರಣೆಯೊಂದಿಗೆ ಮಾತ್ರ ಆತ ನಗರಕ್ಕೆ ಪ್ರವೇಶಿಸಬಹುದಾಗಿದೆ. ಚುನಾವಣೆಗೆ ಮುನ್ನ ಬೆಂಗಳೂರಿನಲ್ಲಿ ರೌಡಿಶೀಟರ್‌ಗಳಿಗೆ ಪೊಲೀಸರು ಎಚ್ಚರಿಕೆ ನೀಡಲು ಪ್ರಾರಂಭಿಸಿದ್ದಾರೆ. ಸಾಮಾನ್ಯ ಅಪರಾಧಿಗಳಿಂದ ಉತ್ತಮ ನಡವಳಿಕೆಗೆ ಭದ್ರತೆಯಾದ ಸಿಆರ್​ಪಿಸಿ ಸೆಕ್ಷನ್ 110 ರ ಅಡಿಯಲ್ಲಿ ಬಾಂಡ್​ಗಳಿಗೆ ಸಹಿ ಹಾಕುವಂತೆ ಮಾಡುತ್ತಿದ್ದಾರೆ.

ನಾಗರಾಜು ವಿರುದ್ಧ ದರೋಡೆ, ಕೊಲೆ ಸೇರಿದಂತೆ ಅಪರಾಧ ಪ್ರಕರಣಗಳ ದೊಡ್ಡ ಪಟ್ಟಿಯೇ ಇದೆ. ಈತನ ವಿರುದ್ಧ ಸಿದ್ದರಾಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 392ರ ಅಡಿಯಲ್ಲಿ ದರೋಡೆ ಪ್ರಕರಣ ದಾಖಲಾಗಿತ್ತು. 2005ರಲ್ಲಿ ಆರ್​ಆರ್ ನಗರ, ಆಡುಗೋಡಿ, ಬನಶಂಕರಿ ಪೊಲೀಸರು ಸರಣಿ ವಾಹನ ಕಳವು ಪ್ರಕರಣಗಳಲ್ಲಿ ಪ್ರಕರಣ ದಾಖಲಿಸಿದ್ದರು. 2009ರಲ್ಲಿ ಕಲಾಸಿಪಾಳ್ಯ ಪೊಲೀಸರು ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದರು. 2012ರಲ್ಲಿ ಈತನ ವಿರುದ್ಧ ರೌಡಿಶೀಟರ್ ಗುಪ್ಪಾ ಕೊಲೆ ಪ್ರಕರಣ ದಾಖಲಾಗಿತ್ತು. ಈತನ ವಿರುದ್ಧ ಇದುವರೆಗೆ 22 ಪ್ರಕರಣಗಳು ದಾಖಲಾಗಿದ್ದು, ಏಳು ಕೊಲೆ ಪ್ರಕರಣಗಳಲ್ಲಿ ಎ1 ಆರೋಪಿಯಾಗಿದ್ದಾನೆ.

ಇದನ್ನೂ ಓದಿ: ಚುನಾವಣೆ ದಿನಾಂಕ ಘೋಷಣೆ ಮೊದಲೇ ಕರ್ನಾಟಕದಲ್ಲಿ 15 ಕೋಟಿ ರೂ. ನಗದು, 57.72 ಕೋಟಿ ರೂ. ಮೌಲ್ಯದ ವಸ್ತು ಜಪ್ತಿ, 1,985 FIR

ರೌಡಿಶೀಟರ್ ಸೈಲೆಂಟ್ ಸುನೀಲ ಬಿಜೆಪಿ ನಾಯಕರ ಜೊತೆ ಕಾಣಿಸಿಕೊಂಡಿದ್ದೇ ತಡ ಇತ್ತ ವಿಲ್ಸನ್ ಗಾರ್ಡನ್ ನಾಗ ಬಿಜೆಪಿ ಸಚಿವ ವಿ.ಸೋಮಣ್ಣ ಅವರ ಮನೆಗೆ ಭೇಟಿ ನೀಡಿ ಸುದ್ದಿಯಾಗಿದ್ದ. ಈ ಬಗ್ಗೆ ಸ್ವತಃ ಸ್ಪಷ್ಟನೆ ನೀಡಿದ್ದ ಸೋಮಣ್ಣ, 50 ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ಸಾವಿರಾರು ಜನ ನನ್ನ ಮನೆಯ ಹತ್ತಿರ ಬಂದು ಹೋಗಿದ್ದಾರೆ. ಅದರಲ್ಲಿ ನಾಗ ಯಾರು, ತಿಮ್ಮ ಯಾರು ಅನ್ನೋದು ನನಗೆ ಗೊತ್ತಿಲ್ಲ. ನಾಗ ಎಂಬುವವರನ್ನು ನಾನೂ ನೋಡಿಲ್ಲ. ಒಂದು ಗಂಟೆಯಲ್ಲ, ಒಂದು ನಿಮಿಷವೂ ನಾನು ಮಾತನಾಡಿಲ್ಲ. ನನ್ನ ಜೀವನ ತೆರೆದ ಪುಸ್ತಕವಿದ್ದಂತೆ. ನಾನು ಆ ತರಹದ ಜೀವನ ಮಾಡಿಲ್ಲ. ಸಾರ್ವಜನಿಕ ರಸ್ತೆ ಎಂದ ಮೇಲೆ ಯಾರ್ಯಾರೋ ಓಡಾಡುತ್ತಾರೆ. ಅದಕ್ಕೆ ನಾನು ಹೇಗೆ ಹೊಣೆಯಾಗಲು ಸಾಧ್ಯ. ಒಳ್ಳೆಯವರನ್ನೂ ರಸ್ತೆಗೆ ಕರೆ ತಂದು ನಿಲ್ಲಿಸುವ ಕೆಲಸ ಮಾಡಬೇಡಿ ಎಂದಿದ್ದರು.

ಬೆಂಗಳೂರಿನ ವಿಜಯನಗರದಲ್ಲಿರುವ ಸಚಿವ ವಿ.ಸೋಮಣ್ಣ ನಿವಾಸಕ್ಕೆ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ತನ್ನ ಗ್ಯಾಂಗ್​ನ 40 ರಿಂದ 50 ಜನ ಹುಡುಗರ ಜೊತೆಗೆ ಭೇಟಿ ನೀಡಿದ್ದ ಎನ್ನುವ ಸುದ್ದಿ ಹಬ್ಬಿತ್ತು. ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡ ವಿರೋಧ ಪಕ್ಷ ಕಾಂಗ್ರೆಸ್, ಬಿಜೆಪಿ ವಿರುದ್ಧ ಮುಗಿಬಿದ್ದಿತ್ತು. ಘಟನೆಯ ನಂತರ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅಪರಾಧ ಹಿನ್ನೆಲೆಯುಳ್ಳವರನ್ನು ಬಿಜೆಪಿ ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:41 pm, Thu, 30 March 23