ಬೆಂಗಳೂರು: ರಾಜ್ಯದ ಅತ್ಯಂತ ಹಿಂದುಳಿದ ಸಮುದಾಯವಾಗಿರುವ ಮೇದರ (Medara Community), ಬಟ್ಟರ್, ಗೌರಿ, ಗೌರಿ ಮರಾಠ, ಗೌರಿಗ, ಮೇದರಿ, ಬುರುಡ್ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗಾಗಿ ಕರ್ನಾಟಕ ಮೇದರ ಅಭಿವೃದ್ಧಿ ನಿಗಮವನ್ನು (Medara Development Corporation) ಸ್ಥಾಪಿಸಿ, ಆದೇಶ ಹೊರಡಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾಗಿ ಮುಖ್ಯಮಂತ್ರಿಯವರ ಕಚೇರಿ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. ಕರ್ನಾಟಕ ರಾಜ್ಯಪಾಲರ ಆದೇಶಾನುಸಾರವಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ-1 ಷಾಹೀನ್ ಪರ್ವೀನ್ ಕೆ. ಅವರು ಆದೇಶ ಹೊರಡಿಸಿದ್ದಾರೆ.
ಮೇದರ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಒಂದು ಹೊಸ ನಿಗಮವನ್ನು ಸ್ಥಾಪಿಸಲು ಆದೇಶಿಸಲಾಗಿದೆ. ಆದೇಶದಲ್ಲಿನ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ಪ್ರವರ್ಗ 1ರ ಕ್ರಮ ಸಂಖ್ಯೆ: 36 (ಎ)ಯಿಂದ (ಜೆ) ವರೆಗೆ ಬರುವ ಮೇದರ, ಬಟ್ಟರ್, ಬರ್ನೆಡ್, ಗೌರಿಗ, ಗೌರಿ, ಗೌರಿ ಮರಾಠ, ಮೇದರಿ, ಬುರುಡ್ ಜಾತಿಗಳಿಗೆ ಶೈಕ್ಷಣಿಕ ಮತ್ತು ಔದ್ಯೋಗಿಕ ಮೀಸಲಾತಿಯನ್ನು ಕಲ್ಪಿಸಲಾಗಿರುತ್ತದೆ.
ಗಾಣಿಗ ಅಭಿವೃದ್ಧಿ ನಿಗಮ ಹಾಗೂ ಶ್ರೀನಾರಾಯಣಗುರು ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ ನಿನ್ನೆ (ಫೆಬ್ರವರಿ 20) ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಗಾಣಿಗ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಒಂದು ಹೊಸ ನಿಗಮವನ್ನು ಸ್ಥಾಪಿಸಲು ಹಾಗೂ ಈಡಿಗ ಬಿಲ್ಲವ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರೀನಾರಾಯಣಗುರು ಅಭಿವೃದ್ಧಿ ನಿಗಮ ಸ್ಥಾಪಿಸಿ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.
“ರಾಜ್ಯದ ಅತ್ಯಂತ ಹಿಂದುಳಿದ ಸಮುದಾಯವಾಗಿರುವ ಮೇದರ, ಬಟ್ಟರ್, ಗೌರಿ, ಗೌರಿ ಮರಾಠ, ಗೌರಿಗ, ಮೇದರಿ, ಬುರುಡ್ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗಾಗಿ ಕರ್ನಾಟಕ ಮೇದರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ, ಆದೇಶ ಹೊರಡಿಸಲಾಗಿದೆ.” ಮುಖ್ಯಮಂತ್ರಿ: @BSBommai pic.twitter.com/3x46EqjYt8
— CM of Karnataka (@CMofKarnataka) February 21, 2023
ಇದನ್ನೂ ಓದಿ: ಶ್ರೀನಾರಾಯಣಗುರು ಅಭಿವೃದ್ಧಿ ನಿಗಮ ಹಾಗೂ ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ರಾಜ್ಯ ಸರ್ಕಾರ ಆದೇಶ
ಗಾಣಿಗ, ಹಡಪದ ಮತ್ತು ಮೇದರ ಸಮುದಾಯಗಳ ಅಭಿವೃದ್ಧಿ ನಿಗಮ ಸ್ಥಾಪನೆ ವಿಚಾರವಾಗಿ ಟ್ವೀಟ್ ಮಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸರ್ಕಾರವನ್ನು ಅಭಿನಂದಿಸಿದರು. “ಗಾಣಿಗ, ಹಡಪದ ಮತ್ತು ಮೇದರ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗಾಗಿ ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರಕಾರವು ಅಭಿವೃದ್ಧಿ ನಿಗಮ ಸ್ಥಾಪನೆಗೆ ಆದೇಶಿಸಿರುವುದು ಸ್ವಾಗತಾರ್ಹ ನಿರ್ಧಾರವಾಗಿದೆ” ಎಂದರು.
ಗಾಣಿಗ,ಹಡಪದ ಮತ್ತು ಮೇದರ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗಾಗಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSBommai ಅವರ ನೇತೃತ್ವದ @BJP4Karnataka ಸರಕಾರವು ಅಭಿವೃದ್ಧಿ ನಿಗಮ ಸ್ಥಾಪನೆಗೆ ಆದೇಶಿಸಿರುವುದು ಸ್ವಾಗತಾರ್ಹ ನಿರ್ಧಾರವಾಗಿದೆ. pic.twitter.com/6X4zxm0oaw
— Pralhad Joshi (@JoshiPralhad) February 21, 2023
ರಾಜ್ಯದ ಬಿಲ್ಲವ/ಈಡಿಗ ಸಮುದಾಯಗಳ ಬಹುದಿನದ ಬೇಡಿಕೆಯಾಗಿದ್ದ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ, ಆದೇಶ ಹೊರಡಿಸಲಾಗಿದೆ. ಈ ನಿಗಮವು ಈಡಿಗ/ಬಿಲ್ಲವ ಸೇರಿದಂತೆ ಇತರ ಪ್ರಮುಖ 26 ಉಪಜಾತಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಕೆಲಸ ನಿರ್ವಹಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಫೋಸ್ಟ್ ಮಾಡಿದ್ದರು.
ರಾಜ್ಯದ ಹಿಂದುಳಿದ ಜಾತಿಗಳ ಪೈಕಿ ಒಂದಾಗಿರುವ ಬಿಲ್ಲವ ಸಮುದಾಯದ ಸರ್ವತೋಮುಖ ಅಭಿವೃದ್ಧಿ ಹಾಗೂ ಬ್ರಹ್ಮರ್ಷಿ ನಾರಾಯಣ ಗುರುಗಳ ತತ್ವಾದರ್ಶಗಳ ಪ್ರಸಾರಕ್ಕೆ ಪ್ರತ್ಯೇಕ ನಿಗಮ ಸ್ಥಾಪನೆ ಮಾಡಬೇಕೆಂಬುದು ಸಮುದಾಯದ ಬಹುಕಾಲದ ಬೇಡಿಕೆಯಾಗಿತ್ತು. ಸಮುದಾಯದ ಈ ಬೇಡಿಕೆ ಈಡೇರಿಕೆಗಾಗಿ ಕೆಲ ದಿನಗಳ ಹಿಂದಷ್ಟೇ ಸಚಿವ ವಿ ಸುನಿಲ್ ಕುಮಾರ್ ಅವರು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಸ್ವಾಮೀಜಿಗಳು ಮತ್ತು ಸಮುದಾಯದ ಮುಖಂಡರ ಜೊತೆ ಭೇಟಿಯಾಗಿ ನಿಗಮ ಸ್ಥಾಪನೆಗೆ ಮನವಿ ಸಲ್ಲಿಸಿದ್ದರು. ಬಜೆಟ್ ನಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸಿಎಂ ಬೊಮ್ಮಾಯಿ ನೀಡಿದ ಭರವಸೆ ಈಗ ಕಾರ್ಯ ರೂಪಕ್ಕೆ ಬಂದಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:37 pm, Tue, 21 February 23