ಧಮ್​ ಇದ್ದರೆ, ತಾಕತ್ತಿದ್ದರೆ ನನ್ನನ್ನು ಹೊಡೆದು ಹಾಕಿ ನೋಡೋಣ: ಸದನದಲ್ಲಿ ಗುಡುಗಿದಲ್ಲಿ ಸಿದ್ದರಾಮಯ್ಯ

ಟಿಪ್ಪುನನ್ನು ಹೊಡೆದು ಹಾಕಿದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯರನ್ನೂ ಹೊಡೆದು ಹಾಕೋಣ ಎಂದು ಸಚಿವ ಅಶ್ವತ್ಥ ನಾರಾಯಣ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಸಿದ್ದರಾಮಯ್ಯ, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಧಮ್​ ಇದ್ದರೆ, ತಾಕತ್ತಿದ್ದರೆ ನನ್ನನ್ನು ಹೊಡೆದು ಹಾಕಿ ನೋಡೋಣ: ಸದನದಲ್ಲಿ ಗುಡುಗಿದಲ್ಲಿ ಸಿದ್ದರಾಮಯ್ಯ
ಸಿ.ಎನ್.ಅಶ್ವತ್ಥ ನಾರಾಯಣ ಮತ್ತು ಸಿದ್ದರಾಮಯ್ಯ
Follow us
Rakesh Nayak Manchi
|

Updated on: Feb 21, 2023 | 3:18 PM

ವಿಧಾನಸಭೆ: ಹೊಡಿ, ಬಡಿ ಅಂತಾ ಯಾವ ಧರ್ಮವೂ ಹೇಳಿಕೊಡಲ್ಲ. ಇಂತಹ ಹೇಳಿಕೆಗಳಿಗೆಲ್ಲ ನಾನು ಬಗ್ಗುವವನಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು ಹೇಳಿದರು. ಟಿಪ್ಪುನನ್ನು ಹೊಡೆದು ಹಾಕಿದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯರನ್ನೂ ಹೊಡೆದು ಹಾಕೋಣ ಎಂದು ಉನ್ನತ ಶಿಕ್ಷಣ ಸಚಿವ ಸಿ.ಎನ್. ಅಶ್ವತ್ಥ ನಾರಾಯಣ (Dr.C.N.Ashwath Narayan) ಅವರು ನೀಡಿದ್ದ ವಿವಾದಾತ್ಮಕ ಹೇಳಿಕೆ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿದ ಸಿದ್ದರಾಮಯ್ಯ, ಬಿಜೆಪಿ ನಾಯಕರು ಸೋಲಿನ ಭೀತಿಯಿಂದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲು ಸಿದ್ಧವಾಗಿಲ್ಲ. ಆರಗ ಜ್ಞಾನೇಂದ್ರ ಅವರೇ ನಿಮ್ಮ ಇಲಾಖೆ ಸತ್ತು ಹೋಗಿದೆ. ನೀವು ಇಲಾಖೆ ಮುನ್ನಡೆಸಲು ಅಸಮರ್ಥರು ಎಂದರು ಗುಡುಗಿದರು.

ಅಶ್ವತ್ಥ್ ನಾರಾಯಣ ಹೇಳಿಕೆ ಪ್ರಚೋದನಾಕಾರಿ ಹೌದೋ? ಅಲ್ವೋ? ಎಂದು ಸದನದಲ್ಲಿ ಪ್ರಶ್ನಿಸಿದ ಸಿದ್ದರಾಮಯ್ಯ ಅವರು, ಆರಗ ಜ್ಞಾನೇಂದ್ರ ಅವರೇ ನೀವು ಒಳ್ಳೆಯವರು. ಆದರೆ, ಗೃಹ ಇಲಾಖೆ ನಿರ್ವಹಿಸಲು ಆರಗ ಜ್ಞಾನೇಂದ್ರ ಅಸಮರ್ಥರು ಎಂದರು. ಈ ವೇಳೆ ಎದ್ದು ನಿಂತು ಆಕ್ಷೇಪ ವ್ಯಕ್ತಪಡಿಸಿದ ಗೃಹಸಚಿವ ಆರಗ ಜ್ಞಾನೇಂದ್ರ, ಗೃಹ ಇಲಾಖೆ ನಿರ್ವಹಿಸಲು ನಾನು ಸಮರ್ಥನಿದ್ದೇನೆ. ನಿಮ್ಮ ಕಾಲಕ್ಕಿಂತ ಸಮರ್ಥವಾಗಿ ಇಲಾಖೆ ನಿರ್ವಹಣೆ ಮಾಡುತ್ತಿದ್ದೇನೆ ಎಂದರು.

ಇದನ್ನೂ ಓದಿ: ಬಿಜೆಪಿಯ ಒಬ್ಬೇಒಬ್ಬ ಕಾರ್ಯಕರ್ತ ಕಾಂಗ್ರೆಸ್ ಸೇರಲ್ಲ, ಸಿದ್ದರಾಮಯ್ಯ ಬರೀ ಬೊಗಳೆ ಬಿಡುತ್ತಾರೆ: ಮುನಿರತ್ನ ನಾಯ್ಡು, ಸಚಿವ

ತಾನು ಗೃಹ ಇಲಾಖೆ ಮುನ್ನಡೆಸಲು ಸಮರ್ಥ ಎಂದು ಹೇಳಿದ ಆರಗ ಜ್ಞಾನೇಂದ್ರ ಅವರಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಸಮರ್ಥರಾಗಿದ್ದರೆ ಅಶ್ವತ್ಥ್ ನಾರಾಯಣ ವಿರುದ್ಧ ಪ್ರಕರಣ​​ ದಾಖಲಿಸಿ ಎಂದರು. ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ಮುಂದುವರಿಸಿದ ಪ್ರತಿಪಕ್ಷ ನಾಯಕ, ಧಮ್​ ಇದ್ದರೆ, ತಾಕತ್ತಿದ್ದರೆ ನನ್ನನ್ನು ಹೊಡೆದು ಹಾಕಿ ನೋಡೋಣ. ನಾನು ಎದುರಿಸಲು ಸಿದ್ಧನಿದ್ದೇನೆ ಎಂದರಲ್ಲದೆ, ಬಾಯಲ್ಲಿ ಹೇಳಿದ್ದಷ್ಟು ಸುಲಭ ಅಲ್ಲ ಎಂದರು.

ಟಿಪ್ಪು ಹೊಡೆದು ಹಾಕಿದಂತೆ ಸಿದ್ದರಾಮಯ್ಯರನ್ನು ಹೊಡೆದು ಹಾಕೋಣ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹತ್ಯೆಗೆ ಅಶ್ವತ್ಥ್ ನಾರಾಯಣ ಬಹಿರಂಗ ಕರೆ ನೀಡಿದ್ದರು. ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಈ ವಿಚಾರವಾಗಿ ಅಶ್ವತ್ಥ್ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಬೇಕು. ಅವರನ್ನು ತಕ್ಷಣ ಬಂಧಿಸಬೇಕು ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದರು. ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದರು.

ವಿವಾದ ಜೋರಾಗುತ್ತಿದ್ದಂತೆ ಎಚ್ಚೆತ್ತ ಸಚಿವ ಅಶ್ವತ್ಥ ನಾರಾಯಾಣ ಅವರು ವಿಧಾನಸೌಧದಲ್ಲಿ ಟಿವಿ9 ಜೊತೆ ಮಾತನಾಡುತ್ತಾ ಸ್ಪಷ್ಟನೆ ನೀಡಿದ್ದರು. ಮಂಡ್ಯದಲ್ಲಿ ಶಕ್ತಿಕೇಂದ್ರ ಸಭೆಯಲ್ಲಿ ಸಾಂದರ್ಭಿಕವಾಗಿ ಮಾತಾಡಿದ್ದೇನೆಯೇ ಹೊರತು ವೈಯಕ್ತಿಕವಾಗಿ ಅಲ್ಲ. ಇಲ್ಲಿ ಸಿದ್ದರಾಮಯ್ಯ ಪ್ರಶ್ನೆ ಉದ್ಭವ ಆಗಲ್ಲ. ಟಿಪ್ಪು ವೈಭವೀಕರಣ ಸಮಾಜದಲ್ಲಿ ಸರಿಯಲ್ಲ. ಮತದಾನದಲ್ಲಿ ಸೋಲಿಸಿ ಅಂತಾ ನನ್ನ ಆಡು ಭಾಷೆಯಲ್ಲಿ ಹೇಳಿದ್ದೇನೆ. ಆ ಕಾಲದಲ್ಲಿ ಯುದ್ಧ ನಡೆಯುತ್ತಿತ್ತು, ಈ ಕಾಲದಲ್ಲಿ ಮತದಾನದ ಮೂಲಕ ಜನ ಆಯ್ಕೆ ಮಾಡುತ್ತಾರೆ. ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಅನ್ನೋದು ನನ್ನ ಹೊಡೆದು ಹಾಕಿ ಎಂಬ ಹೇಳಿಕೆಯ ಅರ್ಥ ಎಂದಿದ್ದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ