AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳಿಂದ ಅವಿಶ್ವಾಸ ನಿರ್ಣಯ ಮಂಡನೆ

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ವಿರುದ್ಧ ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿವೆ. ಕಾಂಗ್ರೆಸ್ ಸಂಸದ ಮೊಹಮ್ಮದ್ ಜಾವೇದ್ ಅವರು ಸದನದಲ್ಲಿ ಔಪಚಾರಿಕವಾಗಿ ಅವಿಶ್ವಾಸ ನಿರ್ಣಯ ಮಂಡಿಸಿದ ನಂತರ ಲೋಕಸಭೆಯಲ್ಲಿ ಇಂದು ಸ್ಪೀಕರ್ ಓಂ ಬಿರ್ಲಾ ಅವರನ್ನು ಪದಚ್ಯುತಗೊಳಿಸಲು ಕೋರುವ ನಿರ್ಣಯದ ಕುರಿತು ಚರ್ಚೆಯನ್ನು ಪ್ರಾರಂಭಿಸಲಾಯಿತು. ಅಗತ್ಯ ಸಂಖ್ಯೆಯ ಸದಸ್ಯರು ಬೆಂಬಲ ಸೂಚಿಸಿದ ನಂತರ ಈ ನಿರ್ಣಯವನ್ನು ಅಂಗೀಕರಿಸಲಾಯಿತು. ನಂತರ ಕಲಾಪದ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಸಂಸದರಾದ ಜಗದಾಂಬಿಕಾ ಪಾಲ್ ಕಾಂಗ್ರೆಸ್ ಸಂಸದರಿಗೆ ಪ್ರಸ್ತಾವನೆ ಮಂಡಿಸಲು ಅನುಮತಿ ನೀಡಿದರು.

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳಿಂದ ಅವಿಶ್ವಾಸ ನಿರ್ಣಯ ಮಂಡನೆ
Om Birla
ಸುಷ್ಮಾ ಚಕ್ರೆ
|

Updated on: Mar 10, 2026 | 4:12 PM

Share

ನವದೆಹಲಿ, ಮಾರ್ಚ್ 10: ಲೋಕಸಭೆ ಸ್ಪೀಕರ್ ಓಂ ಬಿರ್ಲಾ (Om Birla) ಅವರ ವಿರುದ್ಧ ಪ್ರತಿಪಕ್ಷಗಳ ಒಂದು ಗುಂಪು ಇಂದು ಅವಿಶ್ವಾಸ ನಿರ್ಣಯ ಮಂಡಿಸಿದೆ. ಸ್ಪೀಕರ್ ಆಡಳಿತ ಪಕ್ಷಕ್ಕೆ ಅನುಕೂಲಕರ ರೀತಿಯಲ್ಲಿ ವರ್ತಿಸುತ್ತಿದ್ದಾರೆ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಮಾತನಾಡಲು ಸಮಯ ನೀಡದಿರುವ ಮೂಲಕ ಪಕ್ಷಪಾತದ ಧೋರಣೆ ತಳೆದಿದ್ದಾರೆ ಎಂದು ಉಲ್ಲೇಖಿಸಿ ವಿರೋಧ ಪಕ್ಷದ 118 ಸಂಸದರು ಈ ನಿರ್ಣಯಕ್ಕೆ ಸಹಿ ಹಾಕಿದ್ದಾರೆ.

ಅವಿಶ್ವಾಸ ನಿರ್ಣಯವನ್ನು ಓದುವಾಗ, ವಿರೋಧ ಪಕ್ಷದ ಮಹಿಳಾ ಸಂಸದರು ಪ್ರಧಾನಿಯ ಮೇಲೆ ದೈಹಿಕ ದಾಳಿ ನಡೆಸಲು ಯೋಜಿಸುತ್ತಿದ್ದಾರೆ ಎಂದು ಸ್ಪೀಕರ್ ಸುಳ್ಳು ಆರೋಪ ಮಾಡಿದ್ದಾರೆ ಎಂದು ಕಾಂಗ್ರೆಸ್ ಸಂಸದ ಜಾವೇದ್ ಹೇಳಿದ್ದಾರೆ. ಈ ನಿರ್ಣಯವನ್ನು ಮಂಡಿಸಿದ ಕೂಡಲೇ, ಕಾರ್ಯವಿಧಾನದ ನಿಯಮಗಳು ಮತ್ತು ನಿರ್ಣಯದ ಮೇಲಿನ ಚರ್ಚೆಯ ಸಮಯದಲ್ಲಿ ಯಾರು ಅಧ್ಯಕ್ಷತೆ ವಹಿಸಬೇಕು ಎಂಬುದರ ಕುರಿತು ವಿರೋಧ ಪಕ್ಷದ ಮತ್ತು ಖಜಾನೆ ಪೀಠಗಳ ನಡುವೆ ಸದನವು ಬಿಸಿ ಚರ್ಚೆಗೆ ಸಾಕ್ಷಿಯಾಯಿತು.

ಇದನ್ನೂ ಓದಿ: ಸಂಸತ್ತಿನಲ್ಲಿ ರಾಜಕೀಯ ಸಮರ, ಮಾರ್ಚ್​ 9ರಂದು ಸ್ಪೀಕರ್ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಸಾಧ್ಯತೆ

ಈ ವೇಳೆ AIMIM ಸಂಸದ ಅಸಾದುದ್ದೀನ್ ಓವೈಸಿ, ಸಂಸದೀಯ ನಿಯಮಗಳನ್ನು ಉಲ್ಲೇಖಿಸಿ ಮತ್ತು ಸ್ಪೀಕರ್ ಅವರನ್ನು ಪದಚ್ಯುತಗೊಳಿಸುವ ಪ್ರಸ್ತಾವನೆಯು ಪರಿಗಣನೆಯಲ್ಲಿರುವಾಗ, ಸ್ಪೀಕರ್ ಅವರು ಕಲಾಪಗಳ ಅಧ್ಯಕ್ಷತೆ ವಹಿಸಲು ಸಾಧ್ಯವಿಲ್ಲ ಎಂದು ವಾದಿಸಿದರು. ಚರ್ಚೆ ಮುಂದುವರಿಯುವ ಮೊದಲು ಯಾರು ಅಧ್ಯಕ್ಷತೆ ವಹಿಸಬೇಕು ಎಂಬುದರ ಕುರಿತು ಸದನವು ಮೊದಲು ಒಮ್ಮತಕ್ಕೆ ಬರಬೇಕು ಎಂದು ಅವರು ಸೂಚಿಸಿದರು.

ಟಿಎಂಸಿ ಸಂಸದ ಸೌಗತ ರಾಯ್ ಕೂಡ ಇದೇ ರೀತಿಯ ಕಳವಳಗಳನ್ನು ವ್ಯಕ್ತಪಡಿಸಿದರು. ಹಲವಾರು ವರ್ಷಗಳಿಂದ ಉಪಸಭಾಪತಿಯನ್ನು ನೇಮಿಸದಿದ್ದಕ್ಕಾಗಿ ಕಾಂಗ್ರೆಸ್ ಸಂಸದ ಕೆ.ಸಿ. ವೇಣುಗೋಪಾಲ್ ಎನ್​ಡಿಎ ಸರ್ಕಾರವನ್ನು ಟೀಕಿಸಿದರು. ಈ ಚರ್ಚೆಯ ಸಮಯದಲ್ಲಿ ಅಧ್ಯಕ್ಷತೆ ವಹಿಸುವ ಜಗದಾಂಬಿಕಾ ಪಾಲ್ ಅವರ ಅಧಿಕಾರವನ್ನು ಪ್ರಶ್ನಿಸಿದ ಕೆ.ಸಿ ವೇಣುಗೋಪಾಲ್, ಜಗದಾಂಬಿಕಾ ಪಾಲ್ ಅವರನ್ನು ಅಧ್ಯಕ್ಷರ ಸಮಿತಿಗೆ ಸ್ಪೀಕರ್ ಅವರೇ ನೇಮಿಸಿದ್ದಾರೆ. ಹೀಗಾಗಿ, ಸ್ಪೀಕರ್ ವಿರುದ್ಧದ ಅವಿಶ್ವಾಸ ನಿರ್ಣಯ ಮಂಡನೆಯಲ್ಲಿ ಅವರು ಅಧ್ಯಕ್ಷತೆ ವಹಿಸುವುದು ಎಷ್ಟು ಸೂಕ್ತ? ಎಂದು ಹೇಳಿದರು.

ಇದನ್ನೂ ಓದಿ: ಸ್ಪೀಕರ್ ಓಂ ಬಿರ್ಲಾ ವಿರುದ್ಧ ಕಾಂಗ್ರೆಸ್ ಅವಿಶ್ವಾಸ ಗೊತ್ತುವಳಿ ನೋಟಿಸ್, ಸಹಿ ಹಾಕಲ್ಲ ಎಂದ ಟಿಎಂಸಿ ಶಾಸಕರು

ಕೊನೆಗೂ ಜಗದಾಂಬಿಕಾ ಪಾಲ್ ಅವರೇ ಸದನವನ್ನು ಮುನ್ನಡೆಸಿದರು. ಅವಿಶ್ವಾಸ ನಿರ್ಣಯದ ಕುರಿತು ಎನ್​ಡಿಎ ಸರ್ಕಾರದ ಕಡೆಯಿಂದ ಚರ್ಚೆಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ. ಅನುರಾಗ್ ಠಾಕೂರ್, ನಿಶಿಕಾಂತ್ ದುಬೆ, ರವಿಶಂಕರ್ ಪ್ರಸಾದ್ ಮತ್ತು ಭರ್ತೃಹರಿ ಮಹ್ತಾಬ್ ಸೇರಿದಂತೆ ಹಲವಾರು ಬಿಜೆಪಿ ಸಂಸದರು ಚರ್ಚೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ವಿರೋಧ ಪಕ್ಷದಿಂದ, ಕಾಂಗ್ರೆಸ್ ಸಂಸದರಾದ ಗೌರವ್ ಗೊಗೊಯ್, ಮನೀಶ್ ತಿವಾರಿ, ದೀಪೇಂದರ್ ಸಿಂಗ್ ಹೂಡಾ ಮತ್ತು ಜೋತಿಮಣಿ ಅವಿಶ್ವಾಸ ನಿರ್ಣಯವನ್ನು ಬೆಂಬಲಿಸುವಲ್ಲಿ ಭಾಗವಹಿಸುವ ಸಾಧ್ಯತೆಯಿದೆ.

ಜನವರಿ 28ರಂದು ಪ್ರಾರಂಭವಾದ ಸಂಸತ್ತಿನ ಬಜೆಟ್ ಅಧಿವೇಶನವು ಏಪ್ರಿಲ್ 2ರಂದು ಮುಕ್ತಾಯಗೊಳ್ಳಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us