ಬೆಂಗಳೂರು: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Kerala CM Pinarayi Vijayan) ನಗರದಲ್ಲಿ ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರನ್ನು ಭೇಟಿ ಮಾಡಿ, ಕೇರಳದಲ್ಲಿ ರಸ್ತೆ ಹಾಗೂ ರೈಲು ಸಂಪರ್ಕ ವೃದ್ಧಿಗಾಗಿ ಕರ್ನಾಟಕದ ಸಹಕಾರ ಕೋರಿದರು. ಅವರು ಮುಂದಿಟ್ಟ ಪ್ರಸ್ತಾವಗಳನ್ನು ಕರ್ನಾಟಕ ಸರ್ಕಾರವು ತಿರಸ್ಕರಿಸಿದ್ದರಿಂದ ಅವರು ಬರಿಗೈಯಲ್ಲಿ ಹಿಂದಿರುಗಬೇಕಾಯಿತು.
ದಕ್ಷಿಣ ಪ್ರಾದೇಶಿಕ ಮಂಡಳಿ ಸಭೆಯ ಭಾಗವಾಗಿ ವಿಜಯನ್ ಅವರೊಂದಿಗೆ ನಡೆದ ದ್ವಿಪಕ್ಷೀಯ ಚರ್ಚೆಯ ನಂತರ ಮಾತನಾಡಿದ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಕಾಞಂಗಾಡ್-ಕಾಣಿಯೂರು ರೈಲು ಮಾರ್ಗ ಮತ್ತು ಹೆದ್ದಾರಿ ಯೋಜನೆಗಳು ಸೇರಿದಂತೆ ವಿವಿಧ ರೈಲ್ವೆ ಯೋಜನೆಗಳಿಗೆ ಕೇರಳ ಸರ್ಕಾರವು ಕರ್ನಾಟಕದ ಸಹಕಾರವನ್ನು ಕೋರಿದೆ. ಉದ್ದೇಶಿತ ಕಾಞಂಗಾಡ್-ಕಾಣಿಯೂರು ರೈಲು ಮಾರ್ಗ ಯೋಜನೆಯು ಕೇರಳದಲ್ಲಿ 40 ಕಿ.ಮೀ ಮತ್ತು ಕರ್ನಾಟಕದಲ್ಲಿ 31 ಕಿ.ಮೀ ಮಾರ್ಗವನ್ನು ಹೊಂದಿದೆ. ಈ ಯೋಜನೆಯು ಕರ್ನಾಟಕಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿಲ್ಲ’ ಎಂದು ಹೇಳಿದರು.
‘ಈ ಮಾರ್ಗವು ಪಶ್ಚಿಮ ಘಟ್ಟಗಳ ಸಮೃದ್ಧ ಜೀವ ವೈವಿಧ್ಯ ಇರುವ ಪರಿಸರ ಸೂಕ್ಷ್ಮ ಪ್ರದೇಶಗಳ ಮೂಲಕ ಹಾದುಹೋಗುತ್ತದೆ. ಈ ಯೋಜನೆಗೆ ಕರ್ನಾಟಕ ರಾಜ್ಯವು ಸಹಕಾರ ನೀಡಲು ಸಾಧ್ಯವಿಲ್ಲ ಎಂದು ಕೇರಳ ಸಿಎಂಗೆ ಸ್ಪಷ್ಟವಾಗಿ ತಿಳಿಸಲಾಯಿತು’ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
Had a fruitful meeting with Shri @pinarayivijayan, the Chief Minister of Kerala. Various issues of inter state and mutual interest were discussed. pic.twitter.com/NsbIxXHscQ
— Basavaraj S Bommai (@BSBommai) September 18, 2022
ವಿಜಯನ್ ಅವರು ಹಳೆಯ ತಲಸ್ಸೆರಿ-ಮೈಸೂರು ರೈಲು ಮಾರ್ಗ ಯೋಜನೆಯ ಪ್ರಸ್ತಾವವನ್ನೂ ಮುಂದಿಟ್ಟರು. ಈ ಉದ್ದೇಶಿತ ರೈಲು ಮಾರ್ಗವು ಬಂಡೀಪುರ, ನಾಗರಹೊಳೆ ರಾಷ್ಟ್ರೀಯ ಉದ್ಯಾನವನಗಳ ಮೂಲಕ ಹಾದುಹೋಗುತ್ತದೆ. ಇದರಿಂದ ಅಲ್ಲಿನ ಸಸ್ಯ ಮತ್ತು ಪ್ರಾಣಿಗಳಿಗೆ ಹೆಚ್ಚಿನ ಹಾನಿಯನ್ನುಂಟಾಗಲಿದೆ. ಹೀಗಾಗಿ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ತಿಳಿಸಲಾಯಿತು’ ಎಂದು ಬೊಮ್ಮಾಯಿ ನುಡಿದರು. ಕೇರಳ ಮುಖ್ಯಮಂತ್ರಿ ಭೂಗತ ರೈಲು ಮಾರ್ಗವನ್ನು ನಿರ್ಮಿಸಲು ಪ್ರಸ್ತಾಪಿಸಿದ್ದರು. ನಿರ್ಮಾಣದ ಹಂತದಲ್ಲಿ ಪರಿಸರ ಹಾನಿಯ ದೃಷ್ಟಿಯಿಂದ ಅದನ್ನು ಸಂಪೂರ್ಣವಾಗಿ ತಿರಸ್ಕರಿಸಲಾಯಿತು’ ಎಂದು ಬೊಮ್ಮಾಯಿ ವಿವರಿಸಿದರು.
‘ಬಂಡೀಪುರ ರಾಷ್ಟ್ರೀಯ ಹೆದ್ದಾರಿಯ ಮೂಲಕ ರಾತ್ರಿ ವೇಳೆ ಸಂಚರಿಸುವ ಬಸ್ಗಳ ಸಂಖ್ಯೆಯನ್ನು ಎರಡರಿಂದ ನಾಲ್ಕಕ್ಕೆ ಹೆಚ್ಚಿಸಲು ವಿಜಯನ್ ಪ್ರಸ್ತಾಪಿಸಿದರು. ಈ ಪ್ರಸ್ತಾಪವನ್ನು ಸಹ ತಿರಸ್ಕರಿಸಲಾಗಿದೆ’ ಎಂದು ಬೊಮ್ಮಾಯಿ ಹೇಳಿದರು.
Published On - 10:54 am, Mon, 19 September 22