
ಬೆಂಗಳೂರು, ಸೆಪ್ಟೆಂಬರ್ 30: ಪದೇಪದೇ ಬಿಸಿ ಮಾಡಿದ ಅಡುಗೆ ಎಣ್ಣೆಯ ಬಳಕೆಗೆ ಕಟ್ಟುನಿಟ್ಟಿನ ಕಡಿವಾಣ ಹಾಕಲು ರಾಜ್ಯ ಆರೋಗ್ಯ ಇಲಾಖೆ ಹಾಗೂ ಆಹಾರ ಸುರಕ್ಷತಾ ಇಲಾಖೆ ಜಂಟಿಯಾಗಿ ಹೊಸ ಮಾರ್ಗಸೂಚಿಯನ್ನು ರೂಪಿಸುತ್ತಿವೆ. ಉಪ್ಪು ಮತ್ತು ಸಕ್ಕರೆಯ ಮಿತಿಮೀರಿದ ಬಳಕೆಯ ತಡೆ ನಂತರ, ಇದೀಗ ಅಡುಗೆ ಎಣ್ಣೆಯ ಮರುಬಳಕೆಯಿಂದ ಆರೋಗ್ಯದ ಮೇಲಾಗುವ ಭೀಕರ ಪರಿಣಾಮಗಳನ್ನು ನಿಯಂತ್ರಿಸಲು ಸರ್ಕಾರ ಮುಂದಾಗಿದೆ. ಹೋಟೆಲ್, ಬೇಕರಿ ಹಾಗೂ ಮನೆಗಳಲ್ಲಿ ಒಂದೇ ಎಣ್ಣೆಯನ್ನು ಪದೇಪದೇ ಕರಿಯಲು ಬಳಸುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ಇದನ್ನು ನಿಯಂತ್ರಿಸಲು ಸರ್ಕಾರ ಹೊಸ ಮಾರ್ಗಸೂಚಿ ರೂಪಿಸುತ್ತಿದೆ.
ಹೊಸ ಮಾರ್ಗಸೂಚಿಯ ಪ್ರಕಾರ, ಯಾವುದೇ ಕಾರಣಕ್ಕೂ ಅಡುಗೆ ಎಣ್ಣೆಯನ್ನು ಮೂರಕ್ಕಿಂತ ಹೆಚ್ಚು ಬಾರಿ ಬಿಸಿ ಮಾಡಿ ಬಳಸಬಾರದು. ಎಣ್ಣೆಯನ್ನು ಪದೇಪದೇ ಬಿಸಿ ಮಾಡುವುದರಿಂದ ಅದರಲ್ಲಿ ‘ಟೋಟಲ್ ಪೋಲಾರ್ ಕಾಂಪೌಂಡ್ಸ್’ (TPC) ಪ್ರಮಾಣ ಹೆಚ್ಚಾಗುತ್ತದೆ. TPC ಪ್ರಮಾಣ ಶೇಕಡಾ 25ಕ್ಕಿಂತ ಹೆಚ್ಚಾದರೆ ಅಂತಹ ಎಣ್ಣೆ ಮಾನವ ಬಳಕೆಗೆ ತೀವ್ರ ಅಪಾಯಕಾರಿಯಾಗಿದ್ದು, ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಕೊಲೆಸ್ಟ್ರಾಲ್‌ನಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ದಾರಿಮಾಡಿಕೊಡುತ್ತದೆ.
ಎಣ್ಣೆಯಲ್ಲಿ ನೀಲಿ-ಬೂದು ಬಣ್ಣದ ಹೊಗೆ ಅಥವಾ ನೊರೆ ಕಾಣಿಸಿಕೊಂಡರೆ, ಹಾಗೂ ಎಣ್ಣೆ ಕಪ್ಪಾಗಿ ಅದರ ಗಾಢತೆ ಬದಲಾದರೆ ಅದನ್ನು ತಕ್ಷಣವೇ ತ್ಯಜಿಸಬೇಕು ಎಂದು ಸೂಚಿಸಲಾಗಿದೆ. ಅಲ್ಲದೆ, ಒಮ್ಮೆ ಬಳಸಿದ ಎಣ್ಣೆಯನ್ನು ಕೇವಲ 1-2 ದಿನಗಳಲ್ಲಿ ಮುಗಿಸಬೇಕು ಹೊರತು ದೀರ್ಘಕಾಲ ಸಂಗ್ರಹಿಸಿಡಬಾರದು. ಇನ್ನು ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಬೇಕರಿಗಳು ಬಳಸಿದ ಎಣ್ಣೆಯ ಸೂಕ್ತ ನಿರ್ವಹಣೆ ಮತ್ತು ವಿಲೇವಾರಿಗೆ ಹೆಚ್ಚಿನ ಆದ್ಯತೆ ನೀಡಬೇಕಿದ್ದು, ಮುಂದಿನ ದಿನಗಳಲ್ಲಿ ತಪಾಸಣೆಗಾಗಿ ಎಣ್ಣೆಯ ಬಳಕೆಯ ದಾಖಲೆಗಳನ್ನು ನಿರ್ವಹಿಸುವುದು ಕಡ್ಡಾಯವಾಗುವ ಸಾಧ್ಯತೆಯಿದೆ.
ಬಳಸಿದ ಅಡುಗೆ ಎಣ್ಣೆಯನ್ನು ಚರಂಡಿ ಅಥವಾ ಡ್ರೈನೇಜ್‌ಗೆ ಸುರಿದು ಪರಿಸರ ಹಾಳು ಮಾಡುವುದನ್ನು ತಡೆಯಲು RUCO (Repurpose Used Cooking Oil) ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಹೋಟೆಲ್‌ಗಳು ಮಾತ್ರವಲ್ಲದೆ, ಮನೆಗಳಲ್ಲಿ ಉಳಿಯುವ ಬಳಸಿದ ಎಣ್ಣೆಯನ್ನು ವಾರ್ಡ್ ಮಟ್ಟದಲ್ಲಿ ಸಂಗ್ರಹಿಸಿ ಬಯೋಗ್ಯಾಸ್ ಹಾಗೂ ಬಯೋಡೀಸೆಲ್ ಕಂಪನಿಗಳಿಗೆ ತಲುಪಿಸಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ.
ಪರಿಸರ ಸಂರಕ್ಷಣೆ ಮತ್ತು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಈ ಯೋಜನೆ ಅತ್ಯಂತ ಮಹತ್ವದ್ದಾಗಿದ್ದು, ರಾಜ್ಯದಲ್ಲಿ ಈಗಾಗಲೇ 2024–25 ಮತ್ತು 2025–26ನೇ ಸಾಲಿನಲ್ಲಿ ಬರೋಬ್ಬರಿ 32.68 ಲಕ್ಷ ಲೀಟರ್ ಬಳಸಿದ ಅಡುಗೆ ಎಣ್ಣೆಯನ್ನು ಸಂಗ್ರಹಿಸಿ ಪುನರ್ಬಳಕೆಗೆ ನೀಡಲಾಗಿದೆ.
ಸಂಸ್ಕರಿಸಿದ (ರಿಫೈಂಡ್) ಅಡುಗೆ ಎಣ್ಣೆಯನ್ನು ಎರಡನೇ ಬಾರಿಗೆ ಮರುಬಳಕೆ ಮಾಡುವುದರಿಂದ ಆರೋಗ್ಯದ ಮೇಲೆ ತೀವ್ರ ತರಹದ ದುಷ್ಪರಿಣಾಮಗಳು ಉಂಟಾಗುತ್ತವೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸಲು ಸಾವಿರಕ್ಕೂ ಹೆಚ್ಚು ಅಂಗಡಿಕಾರರಿಗೆ ತರಬೇತಿ ನೀಡಲಾಗುವುದು. ಜೊತೆಗೆ, ಬಳಸಿದ ಎಣ್ಣೆಯನ್ನು ಹಿಂಪಡೆದು ರಿಯಾಯಿತಿ ದರದಲ್ಲಿ ಹೊಸ ಎಣ್ಣೆ ನೀಡುವ ಹಾಗೂ ಬಯೋಡೀಸೆಲ್ ಕಂಪನಿಗಳಿಗೆ ಪೂರೈಸುವ ನೂತನ ‘ಕಲೆಕ್ಟಿಂಗ್ ಪಾಯಿಂಟ್’ ವ್ಯವಸ್ಥೆಯನ್ನು ಜಾರಿಗೆ ತರಲು ಸಭೆ ಕರೆಯಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಪ್ರಶ್ನೆ: ಯಾವ ಎಣ್ಣೆಯನ್ನು ಬಳಸಬಾರದು?
ಉತ್ತರ: ಎಣ್ಣೆಯಲ್ಲಿ ನೀಲಿ-ಬೂದು ಬಣ್ಣದ ಹೊಗೆ ಅಥವಾ ನೊರೆ ಕಾಣಿಸಿಕೊಂಡರೆ, ಹಾಗೂ ಎಣ್ಣೆ ಕಪ್ಪಾಗಿ ಅದರ ಗಾಢತೆ ಬದಲಾದರೆ ಆ ಎಣ್ಣೆಯನ್ನು ಬಳಸಬಾರದು
ಪ್ರಶ್ನೆ: ಬಳಸಿದ ಎಣ್ಣೆಯಿಂದ ‘ಬಯೋಡೀಸೆಲ್’ ಉತ್ಪಾದನೆಗೆ ಹಮ್ಮಿಕೊಂಡ ಯೋಜನೆ ಯಾವುದು?
ಉತ್ತರ: ಬಳಸಿದ ಎಣ್ಣೆಯಿಂದ ‘ಬಯೋಡೀಸೆಲ್’ ಉತ್ಪಾದನೆಗೆ ಹಮ್ಮಿಕೊಂಡ ಯೋಜನೆ RUCO
ಪ್ರಶ್ನೆ: ಸಚಿವ ಯು.ಟಿ.ಖಾದರ್ ಏನಂದ್ರು?
ಉತ್ತರ: ಸಂಸ್ಕರಿಸಿದ (ರಿಫೈಂಡ್) ಅಡುಗೆ ಎಣ್ಣೆಯನ್ನು ಎರಡನೇ ಬಾರಿಗೆ ಮರುಬಳಕೆ ಮಾಡುವುದರಿಂದ ಆರೋಗ್ಯದ ಮೇಲೆ ತೀವ್ರ ತರಹದ ದುಷ್ಪರಿಣಾಮಗಳು ಉಂಟಾಗುತ್ತವೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:52 am, Wed, 30 September 26