ಕೊಲೆ ಪ್ರಕರಣದ ಅಪರಾಧಿಯೊಂದಿಗೆ ವಿವಾಹವಾಗಲು ಬಯಸಿದ ಯುವತಿ; ಪ್ರಿಯಕರನಿಗೆ ಪೆರೋಲ್ ನೀಡಿ ಆದೇಶಿಸಿದ ಕರ್ನಾಟಕ ಹೈಕೋರ್ಟ್

|

Updated on: Apr 03, 2023 | 9:04 PM

ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ತನ್ನ ಪ್ರಿಯಕರನೊಂದಿಗೆ ವಿವಾವಾಗಲು ಬಯಸಿದ ಯುವತಿ ಹೈಕೋರ್ಟ್ ಮೆಟ್ಟಿಲೇರಿದ್ದಾಳೆ. ಪ್ರಿಯಕರನಿಗೆ ಪೆರೋಲ್‌ ನೀಡುವಂತೆ ಹೈಕೋರ್ಟ್​ಗೆ ರಿಟ್ ಸಲ್ಲಿಸಿದ್ದು, ಹೈಕೋರ್ಟ್ ಪೆರೋಲ್ ನೀಡಿ ಆದೇಶಿಸಿದೆ.

ಕೊಲೆ ಪ್ರಕರಣದ ಅಪರಾಧಿಯೊಂದಿಗೆ ವಿವಾಹವಾಗಲು ಬಯಸಿದ ಯುವತಿ; ಪ್ರಿಯಕರನಿಗೆ ಪೆರೋಲ್ ನೀಡಿ ಆದೇಶಿಸಿದ ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್
Follow us on

ಬೆಂಗಳೂರು: ತನ್ನ ಪ್ರಿಯತಮೆಯನ್ನು ವಿವಾಹವಾಗಲು ಕೊಲೆ ಪ್ರಕರಣದ (Murder Case) ಅಪರಾಧಿಗೆ ಪೆರೋಲ್ ನೀಡಿ ಕರ್ನಾಟಕ ಹೈಕೋರ್ಟ್ (Karnataka High Court) ಆದೇಶ ಹೊರಡಿಸಿದೆ. ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ತನ್ನ ಪ್ರಿಯಕರನೊಂದಿಗೆ ವಿವಾವಾಗಲು ಬಯಸಿದ ಯುವತಿ ಆರೋಪಿಯ ತಾಯಿಯೊಂದಿಗೆ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಳು. ಅದರಂತೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಏಪ್ರಿಲ್ 5ರಿಂದ ಏಪ್ರಿಲ್ 20ರವರೆಗೆ ಷರತ್ತುಬದ್ಧ ಪೆರೋಲ್ ನೀಡಲು ಆದೇಶ ಹೊರಡಿಸಿದೆ.

ಯುವತಿ ನೀತಾ ಮತ್ತು ಕೊಲೆ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆಗೆ ಒಳಗಾಗಿ ಜೈಲು ಸೇರಿರುವ ಆನಂದ್ ಕಳೆದ 9 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದಾರೆ. ಆದರೆ ಕೊಲೆ ಪ್ರಕರಣವೊಂದರಲ್ಲಿ ಅರೆಸ್ಟ್ ಆಗಿದ್ದ ಆನಂದ್​ಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶಿಸಿತ್ತು. ಅದರಂತೆ ಆನಂದ್ ಕಳೆದ ಆರು ವರ್ಷಗಳಿಂದ ಸೆರೆಮನೆವಾಸ ಅನುಭವಿಸುತ್ತಿದ್ದಾನೆ. ಈ ನಡುವೆ ನೀತಾಗೆ ಬೇರೆ ಹುಡುಗನೊಂದಿಗೆ ವಿವಾಹವಾಗುವಂತೆ ಪೋಷಕರು ಒತ್ತಾಯಿಸಲು ಆರಂಭಿಸಿದ್ದಾರೆ. ಆದರೆ ತನ್ನ ಪ್ರಿಯಕರನನ್ನು ಬಿಟ್ಟಿರಾಲಾಗದ ನೀತಾ ಬೇರೆ ಯುವಕನನ್ನು ವಿವಾಹವಾಗಲು ಒಲ್ಲೆ ಎನ್ನುತ್ತಿದ್ದಾಳೆ.

ಇದನ್ನೂ ಓದಿ: ಲಾಕ್​ಡೌನ್​ ವೇಳೆ 3 ದಿನಗಳಲ್ಲಿ ಕಾಮಗಾರಿ ಪೂರ್ಣ, 5 ಕೋಟಿ ರೂ. ಮಂಜೂರು ​​: ಅಚ್ಚರಿ ವ್ಯಕ್ತಪಡಿಸಿದ ಹೈಕೋರ್ಟ್​​

ಇತ್ತೀಚೆಗೆ ವಿವಾಹಕ್ಕೆ ಪೋಷಕರಿಂದ ಒತ್ತಡ ಹೆಚ್ಚಿದ ಹಿನ್ನೆಲೆ ನೀತಾ ತನ್ನ ಪ್ರಿಯಕರ ಆನಂದ್​ ಜೊತೆ ವಿವಾಹವಾಗಲು ನಿರ್ಧರಿಸಿದ್ದಾಳೆ. ಅದರಂತೆ ಆನಂದ್ ತಾಯಿ ರತ್ನಮ್ಮ ಜೊತೆ ಸೇರಿ ಹೈಕೋರ್ಟ್​ ಮೆಟ್ಟಿಲೇರಿದ್ದು, ಮದುವೆಯಾಗಲು ಪೆರೋಲ್ ನೀಡುವಂತೆ ಮನವಿ ಮಾಡಿದ್ದಾಳೆ. ಪೆರೋಲ್ ನೀಡದಿದ್ದರೆ ತನ್ನ ಜೀವದ ಪ್ರೀತಿ ಸಿಗುವುದಿಲ್ಲ. ಹೀಗಾಗಿ ಮದುವೆಯಾಗಲು 15 ದಿನಗಳ ತುರ್ತು ಪೆರೋಲ್​ ನೀಡುವಂತೆ ಮನವಿ ಮಾಡಿದ್ದಾಳೆ.

ಅದರಂತೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಇಂದು ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿತು. ಈ ವೇಳೆ ಯುವತಿ ಅರ್ಜಿಗೆ ಸರ್ಕಾರಿ ಪರ ವಕೀಲ ವಿನೋದ್ ಕುಮಾರ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮದುವೆಗೆ ಪೆರೋಲ್ ನೀಡಲು ನಿಯಮದಲ್ಲಿ ಅವಕಾಶವಿಲ್ಲವೆಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಾದ ಪ್ರತಿವಾದ ಆಲಿಸಿದ ಪೀಠ, ಏಪ್ರಿಲ್ 5ರಿಂದ ಏಪ್ರಿಲ್ 20ರ ವರೆಗೆ ಷರತ್ತುಬದ್ಧ ಪೆರೋಲ್ ನೀಡಲು ಆದೇಶ ಹೊರಡಿಸಿದೆ.

ಮಾಸ್ತಿ ಹೋಬಳಿಯ ನಾಗದೇನಹಳ್ಳಿಯಲ್ಲಿ ನಡೆದ ಕೊಲೆ ಪ್ರಕರಣ

2015ರ ಆಗಸ್ಟ್ 16ರಂದು ಮಾಸ್ತಿ ಹೋಬಳಿಯ ನಾಗದೇನಹಳ್ಳಿಯಲ್ಲಿ ನಡೆದಿದ್ದ ವ್ಯಕ್ತಿಯೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆನಂದ ಅವರನ್ನು ಮಾಸ್ತಿ ಠಾಣೆ ಪೊಲೀಸರು 2015ರ ಆಗಸ್ಟ್ 17ರಂದು ಬಂಧಿಸಿದ್ದರು. ನಂತರ ಸೆಷನ್ಸ್ ಕೋರ್ಟ್ 2019ರಲ್ಲಿ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಆನಂದ್ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ಶಿಕ್ಷೆಯ ಪ್ರಮಾಣವನ್ನು 10 ವರ್ಷಗಳಿಗೆ ಇಳಿಸಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:26 pm, Mon, 3 April 23