ಬೆಳಗಾವಿ ಬಿಜೆಪಿ ಒಗ್ಗಟ್ಟಿಗೆ ಪ್ರಲ್ಹಾದ್ ಜೋಶಿ ನೇತೃತ್ವದಲ್ಲಿ ಮಹತ್ವದ ಸಭೆ : ಟಿಕೆಟ್ ವಿಚಾರದಲ್ಲಿ ಬಹಿರಂಗ ಮಾತನಾಡದಂತೆ ಸವದಿ, ಕುಮಟಹಳ್ಳಿಗೆ ಸೂಚನೆ
Belagavi BJP: ಲಕ್ಷ್ಮಣ್ ಸವದಿ -ಮಹೇಶ್ ಕುಮಟಹಳ್ಳಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಪಕ್ಷ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ. ಪಕ್ಷದ ನಿರ್ಧಾರಕ್ಕೆ ಬದ್ಧರಾಗಬೇಕು ಎಂದು ಇಬ್ಬರಿಗೂ ಸೂಚಿಸಲಾಗಿದೆ. ಪಕ್ಷದ ತೀರ್ಮಾನ ಒಪ್ಪಿಕೊಳ್ಳುವುದಾಗಿ ನನ್ನ ಬಳಿ ಅವರಿಬ್ಬರೂ ಹೇಳಿದರೆಂದು ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು.
ಮುಂಬರುವ ಕರ್ನಾಟಕ ಅಸೆಂಬ್ಲಿ ಚುನಾವಣೆಗಾಗಿ (Karnataka Assembly Elections 2023) ಟಿಕೆಟ್ ವಿಚಾರದಲ್ಲಿ (Ticket) ಬಹಿರಂಗವಾಗಿ ಮಾತನಾಡದೇ, ಪಕ್ಷದ ನಿರ್ಧಾರಕ್ಕೆ ಬಿಡಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು (Pralhad Joshi) ಲಕ್ಷ್ಮಣ ಸವದಿ (Laxman Savadi) ಹಾಗೂ ಮಹೇಶ್ ಕುಮಟಳ್ಳಿ (Mahesh Kumatahalli) ಅವರಿಗೆ ಸೂಚನೆ ನೀಡಿದ್ದಾರೆ. ಬೆಳಗಾವಿಯಲ್ಲಿ (Belagavi BJP) ಸೋಮವಾರ ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಿ ಜಿಲ್ಲಾ ನಾಯಕರ ಜೊತೆ ಚರ್ಚಿಸಿದ ಜೋಶಿಯವರು, ಟಿಕೆಟ್ ಆಯ್ಕೆಯನ್ನು ಪಕ್ಷ ತೀರ್ಮಾನಿಸುತ್ತದೆ. ಪಕ್ಷದ ತೀರ್ಮಾನವನ್ನ ಎಲ್ಲರೂ ಒಪ್ಪಿಕೊಳ್ಳಬೇಕು ಎಂದು ಖಡಕ್ಕಾಗಿ ಸೂಚಿಸಿದ್ದಾರೆ.
ಏನೇ ಹೇಳುವುದಿದ್ದರೂ ಸಹ ಮಾಧ್ಯಮಗಳ ಎದುರಿಗೆ ಹೇಳುವ ಬದಲು, ತಮ್ಮ ಗಮನಕ್ಕೆ ತರುವಂತೆ ಬೆಳಗಾವಿ ಬಿಜೆಪಿ ನಾಯಕರಿಗೆ ಪ್ರಲ್ಹಾದ್ ಜೋಶಿ ಇದೇ ವೇಳೆ ಸಲಹೆ ನೀಡಿದರು. ಬೆಳಗಾವಿಯ 18 ಕ್ಷೇತ್ರಗಳು ಸರ್ಕಾರ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಲಿದ್ದು, ಪಕ್ಷದ ಗೆಲುವಿಗೆ ಎಲ್ಲರೂ ಕೈ ಜೋಡಿಸಬೇಕು. ಸಣ್ಣ ಪುಣ್ಣ ವ್ಯತ್ಯಾಸಗಳನ್ನ ಮರೆತು ಎಲ್ಲರೂ ಒಗ್ಗಟ್ಟಾಗಿ ಚುನಾವಣೆಯಲ್ಲಿ ಕೆಲಸ ಮಾಡುವಂತೆ ಬೆಳಗಾವಿ ಬಿಜೆಪಿ ನಾಯಕರಿಗೆ ಪ್ರಲ್ಹಾದ್ ಜೋಶಿ ಕರೆ ನೀಡಿದರು.
ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪ್ರಲ್ಹಾದ್ ಜೋಶಿಯವರು, ಬೆಳಗಾವಿ ಬಿಜೆಪಿಯಲ್ಲಿ ಒಗ್ಗಟ್ಟಿದೆ. ಒಗ್ಗಟ್ಟಿಲ್ಲ ಎಂದು ಬಿಂಬಿಸುವ ಅಗತ್ಯವಿಲ್ಲ. ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹಾಗೂ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಈಗಾಗಲೇ ಬೆಳಗಾವಿ ನಾಯಕರ ಜೊತೆ ಒಂದು ಸುತ್ತಿನ ಸಭೆ ನಡೆಸಿ ಸರಿಪಡಿಸಿದ್ದಾರೆ. ಇಂದು ನಾನು ಕೂಡ ಜಿಲ್ಲಾ ನಾಯಕರ ಜೊತೆ ಚರ್ಚಿಸಿದ್ದೇನೆ. ಕೆಲವು ಸಣ್ಣ ಪುಟ್ಟ ವಿಚಾರಗಳನ್ನ ಹೇಳಿಕೊಂಡಿದ್ದು, ಅದನ್ನು ಪಕ್ಷದ ಹಿರಿಯ ನಾಯಕರ ಜೊತೆ ಚರ್ಚಿಸಿ ಸರಿಪಡಿಸಲಾಗುವುದು ಎಂದರು.
ಇದನ್ನೂ ಓದಿ:
ಏಪ್ರಿಲ್ 6 ಅಥವಾ 7 ರಂದು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ
ಲಕ್ಷ್ಮಣ್ ಸವದಿ ಹಾಗೂ ಮಹೇಶ್ ಕುಮಟಹಳ್ಳಿ ಅವರಿಗೆ ಟಿಕೆಟ್ ನೀಡುವ ವಿಚಾರವಾಗಿ ಪಕ್ಷ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ. ಈ ವಿಚಾರದಲ್ಲಿ ಪಕ್ಷದ ನಿರ್ಧಾರಕ್ಕೆ ಬದ್ಧರಾಗಬೇಕು ಎಂದು ಇಬ್ಬರಿಗೂ ಸೂಚಿಸಲಾಗಿದೆ. ಇಬ್ಬರು ಪಕ್ಷದ ತೀರ್ಮಾನವನ್ನ ಒಪ್ಪಿಕೊಳ್ಳುವುದಾಗಿ ನನ್ನ ಬಳಿ ಹೇಳಿದ್ದಾರೆ ಎಂದು ಇದೇ ವೇಳೆ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು.
ಬೆಳಗಾವಿಯ 18 ಕ್ಷೇತ್ರಗಳಲ್ಲಿ ಪಕ್ಷದ ಗೆಲುವಿನ ರಣತಂತ್ರಗಳ ಕುರಿತಂತೆ ಕೋರ್ ಕಮಿಟಿ ಸಭೆಯಲ್ಲಿ ಸಚಿವರು ಚರ್ಚಿಸಿದರು. ಇದೇ ವೇಳೆ ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನಗಳನ್ನ ಈ ಬಾರಿ ಬಿಜೆಪಿ ಬೆಳಗಾವಿಯಲ್ಲಿ ಗೆಲ್ಲಲಿದೆ ಎಂದೂ ಪ್ರಲ್ಹಾದ್ ಜೋಶಿಯವರು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕ ಅಸೆಂಬ್ಲಿ ಚುನಾವಣೆ ಕುರಿತಾದ ತಾಜಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.