ಸಮವಸ್ತ್ರ(Uniform) ಸಂಬಂಧ ನಡೆಯುತ್ತಿರುವ ಕಾನೂನು ಸಮರ ಇನ್ನೂ ಮುಂದುವರಿದಿದೆ. ತರಗತಿಗಳಲ್ಲಿ ಹಿಜಾಬ್(Hijab) ಧರಿಸುವುದು ಇಸ್ಲಾಂ ಧರ್ಮದ(Islam) ಅತ್ಯಗತ್ಯ ಆಚರಣೆಯೇ ಎಂಬ ಸಾಂವಿಧಾನಿಕ ಪ್ರಶ್ನೆಯ ಬಗ್ಗೆ 10 ನೇ ದಿನವಾದ ಇಂದೂ ಕೂಡ ಹೈಕೋರ್ಟ್‌ನಲ್ಲಿ(High Court) ವಿಚಾರಣೆ ಮುಂದುವರೆಯಲಿದೆ. ಸದ್ಯ ಪಿಯುಸಿ ಇರಲಿ, ಪದವಿ ಇರಲಿ ಸಮವಸ್ತ್ರ ನಿಯಮ ಇರುವ ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಗುರುತು ಧರಿಸುವಂತಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಕೋರಿದ್ದ ಅರ್ಜಿ ಬಗ್ಗೆ ಪ್ರತಿಕ್ರಿಯೆ ನೀಡಿದ ಕೋರ್ಟ್ ಅಂತಿಮ ತೀರ್ಪಿನವರೆಗೆ ಈ ಆದೇಶ ಮುಂದುವರಿಯಲಿದೆ ಎಂದಿದೆ. ಇಂದೂ ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ನಡೆಸಲಾಗಿದ್ದು, ವಾದ ಪ್ರತಿವಾದದ ಬಳಿಕ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ. ನಾಳೆ ವಾದಮಂಡನೆ ಮುಕ್ತಾಯಗೊಳಿಸಬೇಕು ಹಾಗೂ ಎರಡು ಮೂರು ದಿನಗಳಲ್ಲಿ ಲಿಖಿತ ವಾದಮಂಡನೆ ಸಲ್ಲಿಸಿ ಎಂದು ವಾದ ಪ್ರತಿವಾದಿಗಳಿಗೆ ಹೈಕೋರ್ಟ್ ಸೂಚನೆ ನೀಡಿದೆ.
ಟರ್ಕಿಯ ಕೋರ್ಟ್ ನ ಹಿಜಾಬ್ ಬ್ಯಾನ್ ತೀರ್ಪನ್ನು ಉಲ್ಲೇಖಿಸಲಾಗಿದೆ. ಆದರೆ ಈ ತೀರ್ಪನ್ನು ನಂತರ ರದ್ದುಪಡಿಸಲಾಗಿದೆ. ಸರ್ಕಾರದ ಆದೇಶದಿಂದ ಮಕ್ಕಳು ಶಿಕ್ಷಣದ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ. ಹಿಜಾಬ್ ಅತ್ಯಗತ್ಯ ಆಚರಣೆ ಎಂಬುದು ನಿಜ. ಆದರೆ ಅದಕ್ಕೆ ಸರ್ಕಾರದ ನಿರ್ಬಂಧವನ್ನೇ ವಿಧಿಸಿಲ್ಲ. ಸರ್ಕಾರದ ಆದೇಶಕ್ಕೇ ಕಾನೂನಿನ ಬಲವಿಲ್ಲ. ವಿಚಾರಣೆ ನಾಳೆ 2.30ಕ್ಕೆ ಮುಂದೂಡಲಾಗಿದ್ದು, ನಾಳೆ ವಾದಮಂಡನೆ ಮುಕ್ತಾಯಗೊಳಿಸಬೇಕು ಮತ್ತು ಎರಡು ಮೂರು ದಿನಗಳಲ್ಲಿ ಲಿಖಿತ ವಾದಮಂಡನೆ ಸಲ್ಲಿಸಿವಂತೆ ವಾದ ಪ್ರತಿವಾದಿಗಳಿಗೆ ಹೈಕೋರ್ಟ್ ಸೂಚನೆ ನೀಡಿದೆ.
ಬಿಜಾಯ್ ಎಮ್ಯಾನುಯಲ್ ಕೇಸಿನಲ್ಲಿ ಸುಪ್ರೀಂಕೋರ್ಟ್ ಹೇಳಿದೆ, ವಿದ್ಯಾರ್ಥಿಯ ಹಕ್ಕೇನು ಎಂದು ಕೇಳದೇ ನಿರ್ಬಂಧ ಹಾಕಿದ್ದೇಕೆಂದು ಪ್ರಶ್ನಿಸಿದೆ. ಹಿಜಾಬ್ ಧರಿಸಬೇಕೆಂಬುದು ವಿದ್ಯಾರ್ಥಿನಿಯರ ನಂಬಿಕೆಯಾಗಿದೆ. ಇದನ್ನು ನಿಯಂತ್ರಿಸಲು ಕಾನೂನಿನ ಬೆಂಬಲ ಎಲ್ಲಿದೆ ಎಂದು ಅರ್ಜಿದಾರರ ಪರ ದೇವದತ್ ಕಾಮತ್ ವಾದ ಮಾಡುತ್ತಿದ್ದಾರೆ. ಸಂವಿಧಾನ ರಚನಾ ಸಭೆಯಲ್ಲಿ ಧಾರ್ಮಿಕ ಗುರುತು ನಿರ್ಬಂಧಿಸುವ ಪ್ರಸ್ತಾಪವಿತ್ತು. ಆದರೆ ಸಂವಿಧಾನ ರಚನಕಾರರು ಇದಕ್ಕೆ ಸಮ್ಮತಿಸಲಿಲ್ಲ. ಸರ್ಕಾರ ಅದನ್ನು ಈಗ ಹೇರಲು ಯತ್ನಿಸುತ್ತಿದೆ. ಆಯ್ಕೆಯ ಅಧಿಕಾರವನ್ನು ಸಂವಿಧಾನ ನೀಡಿದೆ. ಶಬರಿಮಲೆ, ನವತೇಜ್ ಜೋಹರ್ ಕೇಸ್ ಗಳಲ್ಲಿ ಕೋರ್ಟ್ ಪುನರುಚ್ಚರಿಸಿದೆ.
ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ವಾದ ಕೈಬಿಟ್ಟಿದ್ದಾರೆ. ಇನ್ನು ಕಾಲೇಜು ಅಭಿವೃದ್ದಿ ಸಮಿತಿ ಕಾನೂನುಬದ್ಧವಾಗಿಲ್ಲ. ಶಾಸಕ ನೇತೃತ್ವದ ಸಮಿತಿಗೆ ಶಾಸನದ ಬೆಂಬಲ ಇಲ್ಲ. ಸಮಿತಿಗೆ ಅಧಿಕಾರ ಕೊಡುವ ಸರ್ಕಾರದ ಸುತ್ತೋಲೆಯನ್ನು ಪ್ರಶ್ನಿಸಿಲ್ಲ ನಿಜ, ಶಿಕ್ಷಣ ಕಾಯ್ದೆಯ ಅಧಿಕಾರವನ್ನು ಸಿಡಿಸಿಗೆ ನೀಡಿರುವುದು ಸರಿಯಲ್ಲ ಎಂದು ದೇವದತ್ ವಾದ ಮಾಡಿದ್ದು, ಕಾಲೇಜಿನ ಸಮವಸ್ತ್ರ ನೀತಿಯಲ್ಲಿ ಹಿಜಾಬ್ ಗೆ ಅವಕಾಶ ನೀಡಿಲ್ಲ. ಈಗ ಹಿಜಾಬ್ ಮೂಲಭೂತ ಹಕ್ಕೆಂದು ನೀವು ಸಾಬೀತುಮಾಡಬೇಕು ಎಂದು ಸಿಜೆ ಪ್ರಶ್ನಿಸಿದ್ದಾರೆ.
ನಾನು ಬ್ಯಾಟ್ಸ್ ಮನ್ ಎಂದು ಭಾವಿಸಿಕೊಂಡಿದ್ದೇನೆ. ಕೆಲವು ನೋಬಾಲ್, ವೈಡ್ ಗಳನ್ನು ಎಸೆದಿದ್ದಾರೆ. ಪ್ರತಿವಾದಿಗಳು ಕೆಲವು ಉತ್ತಮ ಬಾಲ್ ಗಳನ್ನು ಎಸೆದಿದ್ದಾರೆ. ಸರ್ಕಾರದ ಆದೇಶ ರದ್ದುಪಡಿಸುವಂತೆ ಮನವಿ ಮಾಡಿದ್ದೇನೆ ಎಂದು ಅರ್ಜಿದಾರರ ಪರ ದೇವದತ್ ಕಾಮತ್ ವಾದಮಂಡನೆ ಮಾಡುತ್ತಿದ್ದಾರೆ. ಅಡ್ವೊಕೆಟ್ ಜನರಲ್ ತಮ್ಮ ವಾದದಲ್ಲಿ ಸರ್ಕಾರಿ ಆದೇಶವನ್ನು ಬಿಟ್ಟುಕೊಟ್ಟಿದ್ದಾರೆ. ಅಧಿಕಾರಿಗಳು ಅತ್ಯುತ್ಸಾಹದಿಂದ ತಪ್ಪು ಮಾಡಿದ್ದಾರೆಂದು ಹೇಳಿದ್ದಾರೆ. ಸರ್ಕಾರದ ಆದೇಶದಲ್ಲೇ ಲೋಪವಿರುವುದರಿಂದ ರದ್ದುಪಡಿಸಬೇಕು.
ಹದೀತ್ ಮತ್ತು ಸುನ್ನಾದಲ್ಲಿರುವ ಅಂಶಗಳನ್ನು ನಾವು ಪಾಲಿಸಲೇಬೇಕು. ಇಷ್ಟು ದೊಡ್ಡ ರಾಷ್ಟ್ರಕ್ಕೆ ಹಿಜಾಬ್ ಸಣ್ಣ ವಿಚಾರ. ಹಿಜಾಬ್ ಧರಿಸಲು ಅನುಮತಿ ನೀಡಬೇಕು. ಮಹಿಳೆಯರಿಗೆ ತಲೆ, ಮುಖ, ಎದೆ ಮುಚ್ಚುವುದು ಅತ್ಯಗತ್ಯ. ನೈತಿಕತೆ ಕಾಪಾಡಲು ಇದು ಅಗತ್ಯವಾಗಿದೆ. ಭಾರತ ಹಿಂದೂ ರಾಷ್ಟ್ರವಲ್ಲ, ಮುಸ್ಲಿಂ ರಿಪಬ್ಲಿಕ್ ಕೂಡಾ ಅಲ್ಲ. ಇದು ಜಾತ್ಯಾತೀತ ರಾಷ್ಟ್ರ. ಕಲಾಂರಂತಹರನ್ನು ನೋಡಿದ್ದೇವೆ. ಇದು ನಮ್ಮ ಜೀವನ, ಮರಣದ ಪ್ರಶ್ನೆ. ನಾವು ಹಿಜಾಬ್ ಬಿಡಲು ಸಾಧ್ಯವಿಲ್ಲ ಎಂದು ಎ.ಎಂ.ಧರ್ ವಾದ ಮುಕ್ತಾಯಗೊಳಿಸಿದ್ದಾರೆ.
ಭಾರತದಲ್ಲಿ ಇಸ್ಲಾಂ ಎರಡನೇ ದೊಡ್ಡ ಧರ್ಮವಾಗಿದೆ. ಇಂಡೋನೇಷ್ಯಾದಲ್ಲಿ ಮೊದಲು ಹಿಂದೂ ಧರ್ಮವಿತ್ತು. ಇಂಡೋನೇಷಿಯಾ ನಂತರ ಮುಸ್ಲಿಂ ರಾಷ್ಟ್ರವಾಯಿತು. ಆದರೂ ಪ್ರವಾದಿಗಳು ಹಿಂದೂ ಸಂಪ್ರದಾಯ ಆಚರಿಸಲು ಅನುಮತಿ ನೀಡಿದ್ದರು. ಪ್ರವಾದಿಗಳು ಅಷ್ಟು ವಿಶಾಲ ಹೃದಯದವರಾಗಿದ್ದರು. ಕೂದಲು, ಮುಖ, ಎದೆ ಭಾಗ ಮುಚ್ಚುವುದು ನಮ್ಮ ಧರ್ಮದ ಅತ್ಯಗತ್ಯ ಭಾಗವಾಗಿವೆ. ಹಜ್ ಯಾತ್ರೆಯ ವೇಳೆಯೂ ಇವುಗಳನ್ನು ಮುಚ್ಚುವುದು ಅತ್ಯಗತ್ಯ ಎಂದು ಎ.ಎಂ.ಧರ್ ವಾದ ಮಂಡಿಸುತ್ತಿದ್ದಾರೆ.
ನ್ಯೂ ಹಾರಿಜಾನ್ ಶಿಕ್ಷಣ ಸಂಸ್ಥೆಯಲ್ಲೂ ಹಿಜಾಬ್ ನಿರ್ಬಂಧ ಹೇರಲಾಗಿದೆ. ನನಗೆ ಅರೇಬಿಕ್ ಬರುತ್ತೆ, ಖುರಾನ್ ಓದಿದ್ದೇನೆ. ಖುರಾನ್ ನ ಎರಡು ಸುರಾಗಳನ್ನು ಪರಿಶೀಲಿಸಬೇಕು. ನಾಲ್ಕು ರೀತಿಯ ವಸ್ತ್ರಗಳನ್ನು ಉಲ್ಲೇಖಿಸಲಾಗಿದೆ. ಬುರ್ಖಾ, ಅಭೇಯ್, ಹೆರಾಮ್, ಹಿಜ್ರಿಗಳನ್ನು ಉಲ್ಲೇಖಿಸಲಾಗಿದೆ. ಖುರಾನ್ ಬಗ್ಗೆ ಯಾರೂ ಸರಿಯಾಗಿ ವಾದಿಸಿಲ್ಲ. ನಾನು ಓದಿರುವುದರಿಂದ ತಪ್ಪು ದಾರಿಗೆಳೆಯದೇ ವಾದ ಮಂಡಿಸುತ್ತೇನೆ. ಹಿಜಾಬ್ ಎನ್ನುವುದು ಇಸ್ಲಾಂಗಿಂತ ಮೊದಲೇ ಜಾರಿಯಲ್ಲಿತ್ತು. ಕ್ರೈಸ್ತರೂ ಕೂಡಾ ತಲೆಯ ಮೇಲೆ ವಸ್ತ್ರ ಧರಿಸುತ್ತಿದ್ದರು. ತಲೆ, ಕೂದಲು, ಎದೆ ಭಾಗವನ್ನು ಮುಚ್ಚಬೇಕೆಂದು ಖುರಾನ್ ನಲ್ಲಿ ಹೇಳಲಾಗಿದೆ. ಹೀಗಾಗಿ ಹಿಜಾಬ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ. ವಿದ್ಯಾರ್ಥಿನಿಯರು ಬುರ್ಖಾ ತೊಡಲು ಅವಕಾಶ ಕೋರುತ್ತಿಲ್ಲ ಎಂದು ವಿದ್ಯಾರ್ಥಿನಿಯರ ಪರ ವಕೀಲ ಎ.ಎಂ.ಧರ್ ವಾದಮಂಡಿಸಿದ್ದಾರೆ.
ನಾವು ಯಾರು ಹೇಳದ ವಾದವನ್ನು ಹೇಳುತ್ತಿದ್ದೇವೆ. 3 ಮಕ್ಕಳ ತಾಯಿ ಕೂಡಾ ಅರ್ಜಿದಾರರಾಗಿದ್ದಾರೆ. ಹಿಜಾಬ್ ಧರಿಸುವುದು ಮೂಲಭೂತ ಹಕ್ಕಾಗಿದೆ. ವಿದ್ಯಾರ್ಥಿನಿಯರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಬಾರದು. ಅರ್ಜಿದಾರರ ಪರ ಹಿರಿಯ ವಕೀಲೆ ಕೀರ್ತಿ ಸಿಂಗ್ ವಾದ ಮಂಡನೆ ಮಾಡಿದ್ದಾರೆ. ಈಗಾಗಲೇ ವಿದ್ಯಾರ್ಥಿನಿಯರ ಪರ ವಾದಮಂಡನೆ ಆಗಿದೆ. ದೇಶ, ವಿದೇಶಗಳ ತೀರ್ಪುಗಳನ್ನು ಕೋರ್ಟ್ ಗೆ ನೀಡಿದ್ದಾರೆ. ಈಗ ಮತ್ತೆ ಇತರರ ವಾದಮಂಡನೆ ಕೇಳುವ ಅಗತ್ಯವಿಲ್ಲ ಎಂದು ಹೈಕೋರ್ಟ್ ನ್ಯಾ.ಕೃಷ್ಣ ದೀಕ್ಷಿತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವಕಾಶ ನೀಡಿದರೆ ಇಂದು ವಾದ ಮುಗಿಸಲು ಯತ್ನಿಸುತ್ತೇನೆ ಎಂದು ದೇವದತ್ ಕಾಮತ್ ಹೇಳಿದ್ದು, ಮೊದಲು ಹೊಸ ರಿಟ್ ಅರ್ಜಿಗಳ ವಾದಮಂಡನೆ ಮುಗಿಯಲಿ ಎಂದು ಸಿಜೆ ಹೇಳಿದ್ದಾರೆ. ಆಲ್ ಇಂಡಿಯಾ ಡೆಮಕ್ರಾಟಿಕ್ ವುಮನ್ ಅಸೋಸಿಯೇಷನ್ ನಿಂದ ಪಿಐಎಲ್. ಮಹಿಳೆಯರ ಹಕ್ಕಿನ ವಿಚಾರದಲ್ಲಿ ನಾವು ಹೋರಾಟ ನಡೆಸುತ್ತಿದ್ದೇವೆ. ಹೀಗಾಗಿ ವಾದ ಕೇಳುವಂತೆ ಅಸೋಸಿಯೇಷನ್ ಪರ ವಕೀಲರು ಮನವಿ ಮಾಡಿದ್ದಾರೆ. ಈಗಾಗಲೇ ವಿದ್ಯಾರ್ಥಿನಿಯರೇ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಈಗ ನೀವು ಅರ್ಜಿ ಸಲ್ಲಿಸುವ ಅವಶ್ಯಕತೆ ಏನಿದೆ. ನಿಮ್ಮ ಅರ್ಜಿಯನ್ನು ಏಕೆ ಆಲಿಸಬೇಕು ಎಂದು ಸಿಜೆ ಪ್ರಶ್ನಿಸಿದ್ದಾರೆ. ಸರ್ಕಾರದ ಆದೇಶದ ಬಗ್ಗೆ ತಕರಾರಿರುವವರು ಅರ್ಜಿ ಸಲ್ಲಿಸಿದ್ದಾರೆ. ವಕೀಲರ ಮೂಲಕ ಈಗಾಗಲೇ ವಾದ ಮಂಡಿಸಿದ್ದಾರೆ. ಹೀಗಾಗಿ ನಿಮ್ಮ ವಾದ ಕೇಳುವ ಅಗತ್ಯವೇನಿದೆ ಎಂದು ಸಿಜೆ ಮರುಪ್ರಶ್ನಿಸಿದ್ದಾರೆ.
ಜಾತ್ಯಾತೀತ ಶಿಕ್ಷಣ ನೀಡುವುದು ಶಿಕ್ಷಣ ಸಂಸ್ಥೆಗಳ ಕರ್ತವ್ಯವಾಗಿದೆ. ಆದಿಶಂಕರ ಶಿವಾಚಾರ್ಯ vs ತಮಿಳುನಾಡು ಕೇಸ್ನ ತೀರ್ಪು ಪರಿಶೀಲಿಸಬೇಕು. ಜಾತ್ಯಾತೀತ ಶಿಕ್ಷಣ ನೀಡುವುದಕ್ಕಾಗಿ ನಿಯಮ ರೂಪಿಸಲಾಗಿದೆ. ಧಾರ್ಮಿಕ ಆಚರಣೆಗಾಗಿ ನಿಯಮ ರೂಪಿಸಲಾಗಿಲ್ಲ. ಧಾರ್ಮಿಕ ಸ್ವಾತಂತ್ರ್ಯದಲ್ಲಿ ಮಧ್ಯಪ್ರವೇಶಿಸುವುದು ಸರ್ಕಾರದ ಆದೇಶದ ಉದ್ದೇಶವಲ್ಲ. ಜಾತ್ಯಾತೀತ ಶಿಕ್ಷಣ ನೀಡುವಂತೆ ಮಾಡುವುದು ಆದೇಶದ ಉದ್ದೇಶವಾಗಿದೆ ಎಂದು ಪ್ರತಿವಾದಿಗಳ ವಾದಮಂಡನೆ ಮುಕ್ತಾಯವಾಗಿದೆ.
ಉಪನ್ಯಾಸಕರ ಪರ ವಕೀಲ ಗುರು ಕೃಷ್ಣಕುಮಾರ್ ವಾದ ಮಂಡನೆ ಮಾಡಲಿದ್ದಾರೆ. ವಿದ್ಯಾರ್ಥಿಗಳಿಗೆ ತಾರತಮ್ಯರಹಿತ ಶಿಕ್ಷಣಕ್ಕಾಗಿ ಸಮವಸ್ತ್ರ ಮಾಡಲಾಗಿದೆ. ಸಮವಸ್ತ್ರ ನಿಯಮವನ್ನು ಸಂವಿಧಾನದ 25(1) ಆಧರಿಸಿ ಪ್ರಶ್ನಿಸಬಾರದು. ಜಾತಿ, ಧರ್ಮ, ಅಂತಸ್ತುಗಳ ತಾರತಮ್ಯ ಇರಬಾರದು ಎಂದು ಗುರು ಕೃಷ್ಣಕುಮಾರ್ ವಾದ ಮಂಡನೆ ಮಾಡುತ್ತಿದ್ದಾರೆ.
ಹಿಜಾಬ್ ಕುರಿತ ರಿಟ್ ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ಆರಂಭವಾಗಿದೆ. ಸರ್ಕಾರದ ಪರ ಎಜಿ ಪ್ರಭುಲಿಂಗ್ ನಾವದಗಿ ವಾದ ಮಂಡನೆ ಮಾಡಲಿದ್ದಾರೆ. ಶಿಕ್ಷಕರ ದೂರಿನ ಮೇರೆಗೆ ಒಂದು ಎಫ್‌ಐಆರ್ ದಾಖಲಾಗಿದೆ. ಈ FIRನ ದಾಖಲೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಹಿಜಾಬ್ ತಂಟೆಗೆ ಬಂದ್ರೆ ತುಂಡು ತುಂಡು ಮಾಡ್ತೇವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಕೈ ಮುಖಂಡ ಮುಕ್ರಂ ಖಾನ್ ಬಂಧನಕ್ಕೆ ಆಗ್ರಹಿಸಿ ಕಲಬುರಗಿ ನಗರದ ಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುತ್ತಿದೆ. ಮುಕ್ರಂ ಖಾನ್ ವಿರುದ್ಧ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿನಿಯರ ಟರ್ಬನ್ ಪ್ರಶ್ನೆ ಬಳಿಕ ಟರ್ಬನ್ ಧರಿಸುತ್ತಿದ್ದ ಕಾಲೇಜು ಯೂನಿಯನ್ ಅಧ್ಯಕ್ಷೆಯನ್ನು ಕರೆದು ಕಾಲೇಜು ಆಡಳಿತ ಮಂಡಳಿ ಮಾಹಿತಿ ಪಡೆದಿದೆ. ಟರ್ಬನ್ ತಗೆಯಲು ಸಾಧ್ಯತೆ ಇದೆಯಾ ಎಂದು ಪ್ರಶ್ನಿಸಿದೆ. ಆದ್ರೆ ವಿದ್ಯಾರ್ಥಿನಿ ಟರ್ಬನ್ ನಮ್ಮಲ್ಲಿ ಕಡ್ಡಾಯ ಅಂತಾ ಹೇಳೀದ್ದು ವಿದ್ಯಾರ್ಥಿನಿಯರ ಪೋಷಕರು ಇದೇ ಮಾತು ಆಡಳಿತ ಮಂಡಳಿಗೆ ತಿಳಿಸಿದ್ದಾರೆ. ಇದಾದ ಬಳಿಕ ಹಿಜಾಬ್ ಧರಿಸುತ್ತಿದ್ದ ವಿದ್ಯಾರ್ಥಿನಿಯರ ಪೋಷಕರು ಸಹ ಪ್ರಶ್ನೆ ಮಾಡಿದ್ದಾರೆ. ಡಿಡಿಪಿಐ ಶ್ರೀರಾಮ್ ಕಾಲೇಜು ಭೇಟಿ ನೀಡಿ ಮಕ್ಕಳ ಜೊತೆ ಚರ್ಚೆ ಮಾಡಿದ್ದಾರೆ. ಸದ್ಯ ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ತರಗತಿಗೆ ಬರ್ತಿದ್ದಾರೆ ಯಾವುದೇ ಗೊಂದಲ ಇಲ್ಲ ಎಂದು ಮೌಂಟ್ ಕಾಲೇಜು ಆಡಳಿತ ಮಂಡಳಿ ಹಾಗೂ ಪ್ರಿನ್ಸಿಪಾಲ್ ಟಿವಿ9ಗೆ ತಿಳಿಸಿದ್ದಾರೆ.
ಹಿಜಾಬ್ಗೆ ಅವಕಾಶ ಇಲ್ಲ ಅಂದರೆ ಟರ್ಬನ್ ಯಾಕೆ ಎಂದು ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ಆಡಳಿತ ಮಂಡಳಿಗೆ ವಿದ್ಯಾರ್ಥಿನಿಯರು ಪ್ರಶ್ನೆ ಮಾಡಿದ್ದಾರೆ. ಕೋರ್ಟ್ ಸೂಚನೆಯಂತೆ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ವಸ್ತ್ರಸಂಹಿತೆ ಜಾರಿ ಮಾಡಲಾಗಿದೆ. ಮೊದಲಿನಿಂದಲೂ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ಹಿಜಾಬ್ ಧರಿಸಿ ತರಗತಿಯಲ್ಲಿ ಅವಕಾಶ ಇಲ್ಲ. ಆದರೆ ಕೋರ್ಟ್ ಆದೇಶ ಬೆನ್ನಲೆ ಪ್ರಶ್ನೆ ಮಾಡಿದ ಹಿಜಾಬ್ ಧರಿಸುವ ವಿದ್ಯಾರ್ಥಿನಿಯರು, ಕೋರ್ಟ್ ಆದೇಶದಲ್ಲಿ ಧರ್ಮಸೂಚಕ ವಸ್ತ್ರಕ್ಕೆ ಅವಕಾಶ ಇಲ್ಲ ಎಂದು ಇದೆ. ನಾಮ್ಮ ಕಾಲೇಜು ವಿದ್ಯಾರ್ಥಿನಿಯ ಸಂಘದ ಅಧ್ಯಕ್ಷೆ ಟರ್ಬನ್ ಧರಿಸುತ್ತಾರೆ. ಟರ್ಬನ್ ಹಾಕಲು ಅವರಿಗೆ ಯಾಕೆ ಅವಕಾಶ ಮೇಡಂ ಎಂದು ಪ್ರಶ್ನೆ ಮಾಡಿದ್ದಾರೆ.
Published On - 12:17 pm, Thu, 24 February 22