ಕೇಸರಿ ಶಾಲು ಧರಿಸಿರುವ ವಿದ್ಯಾರ್ಥಿಗಳು, ಹಿಜಾಬ್ ಧರಿಸಿರುವ ವಿದ್ಯಾರ್ಥಿನಿಯರು
ಸಮವಸ್ತ್ರ(Uniform) ಸಂಬಂಧ ನಡೆಯುತ್ತಿರುವ ಕಾನೂನು ಸಮರ ಇನ್ನೂ ಮುಂದುವರಿದಿದೆ. ತರಗತಿಗಳಲ್ಲಿ ಹಿಜಾಬ್ (Hijab) ಧರಿಸುವುದು ಇಸ್ಲಾಂ ಧರ್ಮದ(Islam) ಅತ್ಯಗತ್ಯ ಆಚರಣೆಯೇ ಎಂಬ ಸಾಂವಿಧಾನಿಕ ಪ್ರಶ್ನೆಯ ಬಗ್ಗೆ 10 ನೇ ದಿನವಾದ ಇಂದೂ ಕೂಡ ಹೈಕೋರ್ಟ್‌ನಲ್ಲಿ(High Court) ವಿಚಾರಣೆ ನಡೆಸಲಾಯಿತು. ಸರ್ಕಾರದ ಪರವಾಗಿ ಎಜಿ ಪ್ರಭುಲಿಂಗ ನಾವದಗಿ ವಾದ ಮಂಡನೆ ಮಾಡಿದರು. ಹಿಜಾಬ್ ಅರ್ಜಿ ವಿಚಾರವಾಗಿ ವಾದ ಪ್ರತಿವಾದವನ್ನು ಆಲಿಸಿದ ಹೈಕೋರ್ಟ್ ವಿಚಾರಣೆಯನ್ನು ನಾಳೆ 2:30ಕ್ಕೆ ಮುಂದೂಡಿದ್ದಾರೆ. ಜೊತೆಗೆ ನಾಳೆ ವಾದ ಮಂಡನೆ ಮುಕ್ತಾಯಗೊಳಿಸಬೇಕು. ಎರಡು ಮೂರು ದಿನಗಳಲ್ಲಿ ಲಿಖಿತ ವಾದಮಂಡನೆ ಸಲ್ಲಿಸಿವಂತೆ ವಾದ ಪ್ರತಿವಾದಿಗಳಿಗೆ ಹೈಕೋರ್ಟ್ ಸೂಚನೆ ನೀಡಿದೆ.
ಇಂದಿನ ಹಿಜಾಬ್ ಅರ್ಜಿಯ ಪ್ರಮುಖ ಬೆಳವಣಿಗೆಗಳು ಹೀಗಿದೆ:
- ಹೈಕೋರ್ಟ್ ಹಿಜಾಬ್ ವಿಚಾರಣೆಯನ್ನು ನಾಳೆ 2.30ಕ್ಕೆ ಮುಂದೂಡಲಾಗಿದ್ದು, ನಾಳೆ ವಾದಮಂಡನೆ ಮುಕ್ತಾಯಗೊಳಿಸಬೇಕು ಮತ್ತು ಎರಡು ಮೂರು ದಿನಗಳಲ್ಲಿ ಲಿಖಿತ ವಾದಮಂಡನೆ ಸಲ್ಲಿಸಿವಂತೆ ವಾದ ಪ್ರತಿವಾದಿಗಳಿಗೆ ಹೈಕೋರ್ಟ್ ಸೂಚನೆ ನೀಡಿದೆ.
- ಅರ್ಜಿದಾರರ ಪರ ದೇವದತ್ ಕಾಮತ್ ವಾದ ಮಂಡನೆ ಮಾಡಿದ್ದು, ಹಿಜಾಬ್ ಧರಿಸಬೇಕೆಂಬುದು ವಿದ್ಯಾರ್ಥಿನಿಯರ ನಂಬಿಕೆಯಾಗಿದೆ. ಇದನ್ನು ನಿಯಂತ್ರಿಸಲು ಕಾನೂನಿನ ಬೆಂಬಲ ಎಲ್ಲಿದೆ. ಸಂವಿಧಾನ ರಚನಾ ಸಭೆಯಲ್ಲಿ ಧಾರ್ಮಿಕ ಗುರುತು ನಿರ್ಬಂಧಿಸುವ ಪ್ರಸ್ತಾಪವಿತ್ತು. ಆದರೆ ಸಂವಿಧಾನ ರಚನಕಾರರು ಇದಕ್ಕೆ ಸಮ್ಮತಿಸಲಿಲ್ಲ. ಸರ್ಕಾರ ಅದನ್ನು ಈಗ ಹೇರಲು ಯತ್ನಿಸುತ್ತಿದೆ ಎಂದರು.
- ಶಿಕ್ಷಣ ಕಾಯ್ದೆಯ ಅಧಿಕಾರವನ್ನು ಸಿಡಿಸಿಗೆ ನೀಡಿರುವುದು ಸರಿಯಲ್ಲ ಎಂದು ದೇವದತ್ ವಾದ ಮಾಡಿದ್ದು, ಕಾಲೇಜಿನ ಸಮವಸ್ತ್ರ ನೀತಿಯಲ್ಲಿ ಹಿಜಾಬ್ಗೆ ಅವಕಾಶ ನೀಡಿಲ್ಲ. ಈಗ ಹಿಜಾಬ್ ಮೂಲಭೂತ ಹಕ್ಕೆಂದು ನೀವು ಸಾಬೀತುಮಾಡಬೇಕು ಎಂದು ಸಿಜೆ ಮರುಪ್ರಶ್ನಿಸಿದ್ದಾರೆ.
- ಇಷ್ಟು ದೊಡ್ಡ ರಾಷ್ಟ್ರಕ್ಕೆ ಹಿಜಾಬ್ ಸಣ್ಣ ವಿಚಾರ. ಹಿಜಾಬ್ ಧರಿಸಲು ಅನುಮತಿ ನೀಡಬೇಕು. ಮಹಿಳೆಯರಿಗೆ ತಲೆ, ಮುಖ, ಎದೆ ಮುಚ್ಚುವುದು ಅತ್ಯಗತ್ಯ. ನೈತಿಕತೆ ಕಾಪಾಡಲು ಇದು ಅಗತ್ಯವಾಗಿದೆ. ಭಾರತ ಹಿಂದೂ ರಾಷ್ಟ್ರವಲ್ಲ, ಮುಸ್ಲಿಂ ರಿಪಬ್ಲಿಕ್ ಕೂಡಾ ಅಲ್ಲ. ಇದು ಜಾತ್ಯಾತೀತ ರಾಷ್ಟ್ರವಾಗಿದೆ ಎಂದು ವಿದ್ಯಾರ್ಥಿನಿಯರ ಪರ ಎ.ಎಂ ಧರ್ ವಾದ ಮಂಡಿಸಿದರು.
- ಅರ್ಜಿದಾರರ ಪರ ಹಿರಿಯ ವಕೀಲೆ ಕೀರ್ತಿ ಸಿಂಗ್ ವಾದ ಮಾಡಿದ್ದು, ಹಿಜಾಬ್ ಧರಿಸುವುದು ಮೂಲಭೂತ ಹಕ್ಕಾಗಿದೆ. ವಿದ್ಯಾರ್ಥಿನಿಯರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಬಾರದು ಎಂದಿದ್ದಾರೆ.
- ಈಗಾಗಲೇ ವಿದ್ಯಾರ್ಥಿನಿಯರ ಪರ ವಾದಮಂಡನೆ ಆಗಿದೆ. ದೇಶ, ವಿದೇಶಗಳ ತೀರ್ಪುಗಳನ್ನು ಕೋರ್ಟ್ ಗೆ ನೀಡಿದ್ದಾರೆ. ಈಗ ಮತ್ತೆ ಇತರರ ವಾದಮಂಡನೆ ಕೇಳುವ ಅಗತ್ಯವಿಲ್ಲ ಎಂದು ಹೈಕೋರ್ಟ್ ನ್ಯಾ.ಕೃಷ್ಣ ದೀಕ್ಷಿತ್ ಅಭಿಪ್ರಾಯ ವ್ಯಕ್ತಪಡಿಸಿದರು.
- ಉಪನ್ಯಾಸಕರ ಪರ ವಕೀಲ ಗುರು ಕೃಷ್ಣಕುಮಾರ್ ವಾದ ಮಂಡನೆ ಮಾಡಿದ್ದು, ವಿದ್ಯಾರ್ಥಿಗಳಿಗೆ ತಾರತಮ್ಯರಹಿತ ಶಿಕ್ಷಣಕ್ಕಾಗಿ ಸಮವಸ್ತ್ರ ಮಾಡಲಾಗಿದೆ. ಸಮವಸ್ತ್ರ ನಿಯಮವನ್ನು ಸಂವಿಧಾನದ 25(1) ಆಧರಿಸಿ ಪ್ರಶ್ನಿಸಬಾರದು. ಜಾತಿ, ಧರ್ಮ, ಅಂತಸ್ತುಗಳ ತಾರತಮ್ಯ ಇರಬಾರದು ಎಂದರು.
- ಹಿಜಾಬ್ ತಂಟೆಗೆ ಬಂದ್ರೆ ತುಂಡು ತುಂಡು ಮಾಡ್ತೇವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಕೈ ಮುಖಂಡ ಮುಕ್ರಂ ಖಾನ್ ಬಂಧನಕ್ಕೆ ಆಗ್ರಹಿಸಿ ಕಲಬುರಗಿ ನಗರದ ಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಮುಕ್ರಂ ಖಾನ್ ವಿರುದ್ಧ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- ಹಿಜಾಬ್ಗೆ ಅವಕಾಶ ಇಲ್ಲ ಅಂದರೆ ಟರ್ಬನ್ ಯಾಕೆ ಎಂದು ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ಆಡಳಿತ ಮಂಡಳಿಗೆ ವಿದ್ಯಾರ್ಥಿನಿಯರು ಪ್ರಶ್ನೆ ಮಾಡಿದ್ದಾರೆ. ಕೋರ್ಟ್ ಸೂಚನೆಯಂತೆ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ವಸ್ತ್ರಸಂಹಿತೆ ಜಾರಿ ಮಾಡಲಾಗಿದೆ.
ಇದನ್ನೂ ಓದಿ:
ಬಾಂಗ್ಲಾದೇಶದಲ್ಲಿ ನದಿ ಮಧ್ಯೆ ಹೊತ್ತಿ ಉರಿದ ಹಡಗು; 40 ಜನ ಸಾವು, 150ಕ್ಕೂ ಹೆಚ್ಚು ಮಂದಿಗೆ ಗಾಯ