ಬೆಂಗಳೂರು: ಇಂದು (ಫೆ.1) ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಬಜೆಟ್ (Union Budget) ಘೋಷಣೆ ಮಾಡಿದ್ದು, ಕರ್ನಾಟಕದ ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್ನಲ್ಲಿ 5,300 ಕೋಟಿ ಅನುದಾನ ಘೋಷಣೆ ಮಾಡಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಸಂಸತಸ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರಕ್ಕೆ ಧನ್ಯವಾದ ಹೇಳಿದ್ದಾರೆ. “ಈ ಸಾಲಿನ ಕೇಂದ್ರ ಬಜೆಟ್ನಲ್ಲಿ ರಾಜ್ಯದ ಪ್ರಮುಖ ಯೋಜನೆಯಾದ ಭದ್ರಾ ಮೇಲ್ದಂಡೆ ಯೋಜನೆಗೆ ರೂ 5300 ಕೋಟಿ ಅನುದಾನ ಘೋಷಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಮಸ್ತ ಕರ್ನಾಟಕದ ಪರವಾಗಿ ಧನ್ಯವಾದಗಳು.” ಎಂದು ಟ್ವೀಟ್ ಮಾಡಿದ್ದಾರೆ.
ಈ ಯೋಜನೆಯಿಂದ ಬರಗಾಲ ಪೀಡಿತ ಬಿಸಿಲು ಪ್ರದೇಶದ ನಾಡಿಗೆ ನೀರಾವರಿಗೆ ಅನುಕೂಲವಾಗಲಿದೆ. ರಾಷ್ಟ್ರೀಯ ಯೋಜನೆಯಾಗಿ ಮಾಡುವಂತೆ ಮೊದಲೇ ಪ್ತಸ್ತಾವನೆ ಕಳಿಸಿದ್ದೆವು. ಈ ಯೋಜನೆ ಬಹಳ ಪ್ರಮುಖವಾಗಿದೆ. ಇಷ್ಟು ದೊಡ್ಡ ಪ್ರಮಾಣದ ಅನುನಾದ ಘೋಷಣೆ ಮಾಡಿದ್ದು ಸಂತಸದ ಸಂಗತಿ ಎಂದು ಹೇಳಿದ್ದಾರೆ.
ದಾವಣಗೆರೆ: ಇಂದಿನ ಕೇಂದ್ರ ಬಜೆಟ್ ಘೋಷಣೆ ಕೇವಲ ಕಾಟಾಚಾರಕ್ಕೆ ಮಾತ್ರ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ. ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡ ಗ್ರಾಮದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನವನ್ನು ಚುನಾವಣೆ ಹಿನ್ನೆಲೆ ತಾತ್ಕಾಲಿಕವಾಗಿ ಜನರ ಮೆಚ್ಚಿಸಲು ಘೋಷಣೆ ಮಾಡಿದ್ದಾರೆ. ಜನ ಬಿಜೆಪಿ ತಿರಸ್ಕರಿಸಿದರೆ ಎಷ್ಟು ಅನುದಾನ ನೀಡುತ್ತಾರೆಂದು ಗೊತ್ತಿದೆ. ಇಂದಿನ ಘೋಷಣೆಗಳು ಎಷ್ಟರ ಮಟ್ಟರ ಅನುಷ್ಠಾನಕ್ಕೆ ಬರುತ್ತೆ ಗೊತ್ತು. ಮುಂದಿನ ಸರ್ಕಾರ ಬಂದಾಗಲೇ ಯೋಜನೆ ಅನುಷ್ಠಾನಕ್ಕೆ ಬರುವುದು ಎಂದು ಕುಹಕವಾಡಿದರು.
ಕೇಂದ್ರ ಬಜೆಟ್ನಲ್ಲಿ ಕರ್ನಾಟಕಕ್ಕೆ ವಿಶೇಷ ಕೊಡುಗೆ ನೀಡಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಅನುದಾನ ನೀಡಲಾಗಿದೆ. ಯೋಜನೆ ವ್ಯಾಪ್ತಿಯಿಂದ ಜನರಿಗೆ ಕುಡಿಯುವ ನೀರು, ಕೃಷಿಗೆ ಅನುಕೂಲವಾಗುತ್ತದೆ. ಕೃಷಿ, ಸಹಕಾರಿ ಕ್ಷೇತ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಯುವಕರಿಗೆ ಹೆಚ್ಚಿನ ಉದ್ಯೋಗ ಸೃಷ್ಟಿಗೆ ಕ್ರಮಕೈಗೊಳ್ಳಲಾಗಿದೆ. ವೈದ್ಯಕೀಯ ಕ್ಷೇತ್ರ ಹಾಗೂ ನರ್ಸಿಂಗ್ ಕಾಲೇಜುಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ. ರಸ್ತೆ, ರೈಲ್ವೆ ವಲಯದ ವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಇದರಿಂದ ರಾಜ್ಯಕ್ಕೂ ಅನುಕೂಲ ಆಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:10 pm, Wed, 1 February 23