
ಬೆಂಗಳೂರು, ನವೆಂಬರ್ 25: ಮೈಸೂರು, ಬೆಂಗಳೂರು ಸೇರಿ ರಾಜ್ಯದ ಹತ್ತು ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸರು ಇಂದು ದಾಳಿ ನಡೆಸಿದ್ದಾರೆ. ವಿವಿಧ ಇಲಾಖೆಯ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಲಾಗಿದ್ದು, ಆ ಪೈಕಿ ಹಲವರ ಮನೆಯಲ್ಲಿ ರೇಡ್ ವೇಳೆ ಅಪಾರ ಪ್ರಮಾಣದ ಚಿನ್ನ-ಬೆಳ್ಳಿ, ನಗದು ಮತ್ತು ದಾಖಲೆ ಪತ್ರಗಳು ಲಭ್ಯವಾಗಿರುವ ಮಾಹಿತಿ ಸಿಕ್ಕಿದೆ.
ಎಲೆಕ್ಟ್ರಾನಿಕ್ ಸಿಟಿ ಆರ್‌ಟಿಒ ಕಚೇರಿ ಶಾಖಾಧೀಕ್ಷಕ ಕೃಷ್ಣಮೂರ್ತಿ ಪಿ. ಅವರ ಮನೆಯಲ್ಲಿ ದಾಳಿ ವೇಳೆ 4 ಕೋಟಿ 26 ಲಕ್ಷ ಮೌಲ್ಯದ ಆಸ್ತಿಪಾಸ್ತಿ ಪತ್ತೆಯಾಗಿದೆ.3 ಕೋಟಿ 3 ಲಕ್ಷ ಮೌಲ್ಯದ ಸ್ಥಿರಾಸ್ತಿ, 92 ಲಕ್ಷ ಮೌಲ್ಯದ ಚರಾಸ್ತಿ, 7 ನಿವೇಶನ, 4 ವಾಸದ ಮನೆ, 5 ಎಕರೆ 30 ಗುಂಟೆ ಕೃಷಿ ಜಮೀನು ಸೇರಿ ಕೃಷ್ಣಮೂರ್ತಿ ಪಿ. ಬಳಿ 3 ಕೋಟಿ 3 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ. 22 ಲಕ್ಷ ನಗದು, 32 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, 16 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತು, 22 ಲಕ್ಷ ಮೌಲ್ಯದ ವಾಹನಗಳ ಬಗ್ಗೆಯೂ ಮಾಹಿತಿ ಸಿಕ್ಕಿದೆ.
ಇದನ್ನೂ ಓದಿ: ಬೆಂಗಳೂರು, ಮಂಡ್ಯ ಸೇರಿದಂತೆ ಕರ್ನಾಟಕದ 10 ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ
ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯದ ಸಹ ಪ್ರಾಧ್ಯಾಪಕ ಸುಭಾಶ್ ಚಂದ್ರ ಮನೆಯಲ್ಲಿ 1 ಲಕ್ಷ ನಗದು, 30 ಗ್ರಾಂ ಚಿನ್ನ ಪತ್ತೆಯಾಗಿದೆ. ಕೊಪ್ಪಳ ಜಿಲ್ಲೆ ಬೆಟಗೇರಿಯಲ್ಲಿ ಇರುವ 18 ಎಕರೆ ಜಮೀನು ದಾಖಲೆ. ಧಾರವಾಡ ಜಿಲ್ಲೆಯಲ್ಲಿ ಒಟ್ಟು 5 ಸೈಟು ಇರುವ ಬಗ್ಗೆ ಮಾಹಿತಿ ದೊರೆತಿದೆ. ಒಂದು ಇನ್ನೋವಾ ಮತ್ತು ಕಾರು ಇರುವ ಬಗ್ಗೆ ಗೊತ್ತಾಗಿದ್ದು, ಬ್ಯಾಂಕ್ ಲಾಕರ್ ತೆರೆಯದ ಹಿನ್ನೆಲೆ ಆ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಮೈಸೂರಿನಲ್ಲಿ ಲೋಕಾಯುಕ್ತ ಪೊಲೀಸರ ದಾಳಿ ವೇಳೆ ರೆವಿನ್ಯೂ ಇನ್ಸ್ಪೆಕ್ಟರ್ ರಾಮಸ್ವಾಮಿ ಸಿ. ಮನೆಯಲ್ಲಿ 650 ಗ್ರಾಂ ಚಿನ್ನ, 5 ಕೆಜಿ ಬೆಳ್ಳಿ, 2.50 ಲಕ್ಷ ನಗದು ಮತ್ತು ಅಪಾರ ಪ್ರಮಾಣದ ಆಸ್ತಿ ಪತ್ರಗಳು ಪತ್ತೆಯಾಗಿವೆ. ಐಷಾರಾಮಿ ಫಾರ್ಮ್ಹೌಸ್ ನಿರ್ಮಿಸಿರುವ ಬಗ್ಗೆಯೂ ಮಾಹಿತಿ ಸಿಕ್ಕಿದೆ.
ದಾವಣಗೆರೆ ಎಪಿಎಂಸಿ ಮಾರಾಟ ವಿಭಾಗದ ಸಹಾಯಕ ನಿರ್ದೇಶಕ ಜೆ. ಪ್ರಭು ಮನೆಯಲ್ಲಿ 1 ಕೆಜಿ 700 ಗ್ರಾಂ ಚಿನ್ನಾಭರಣ ಹಾಗೂ 10 ಕೆಜಿ ಬೆಳ್ಳಿ ಪತ್ತೆಯಾಗಿದೆ. ದಾವಣಗೆರೆ ಆಂಜನೇಯ ಬಡಾವಣೆಯಲ್ಲಿನ ಮನೆ, ಚನ್ನಗಿರಿ ತಾಲೂಕಿನ ದೊಡ್ಡಘಟ್ಟ ಗ್ರಾಮದಲ್ಲಿನ ತೋಟದ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆಸಿತ್ತು. ಮನೆಯಲ್ಲಿ 7.5 ಲಕ್ಷ ನಗದು, ಎರಡು ಮನೆ, 6 ನಿವೇಶನಗಳ ದಾಖಲೆಗಳು ಪತ್ತೆಯಾಗಿವೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:50 pm, Tue, 25 November 25