ಸಿದ್ದರಾಮಯ್ಯ ಸರ್ಕಾರದ(Siddaramaiah Government) ವಿರುದ್ಧ ಹೆಚ್ಡಿ ಕುಮಾರಸ್ವಾಮಿ(HD Kumaraswamy) ಹೊಸ ಹೊಸ ಬಾಂಬ್ ಸಿಡಿಸುತ್ತಿದ್ದಾರೆ. ನನ್ನ ಬಳಿ ಆಧಾರವಿದೆ ಎಂದು ಪೆನ್ ಡ್ರೈವ್ ತೋರಿಸಿ ಆರೋಪಗಳ ಮೇಲೆ ಆರೋಪಗಳನ್ನು ಮಾಡ್ತಿದ್ದಾರೆ. ಇನ್ನು ವಿಪಕ್ಷ ನಾಯಕನಿಲ್ಲದ ಬಿಜೆಪಿ(BJP) ಪಾಲಿಗೂ ಕುಮಾರಸ್ವಾಮಿ ಎನರ್ಜಿ ಬೂಸ್ಟರ್ ಆಗಿದ್ದಾರೆ. ಮತ್ತೊಂದೆಡೆ ಸದನದಲ್ಲಿ ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಇಂದು ವಿಧಾನಸಭೆಯಲ್ಲಿ ಗ್ಯಾರಂಟಿ ಘೋಷಣೆ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಇದೆಲ್ಲದರ ಜೊತೆಗೆ ಕರ್ನಾಟಕದಲ್ಲಿ ಮುಂಗಾರು (Karnataka Monsson) ಮಳೆ ಚುರುಕಾಗಿದೆ. ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು ಶಾಲೆಗಳಿಗೆ ರಜೆ ನೀಡಲಾಗಿದೆ. ಅನೇಕ ಕಡೆ ವರುಣ ಅಬ್ಬರಿಸಿ ಬೊಬ್ಬೆರೆದಿದ್ದಾನೆ. ರಾಜ್ಯದ ರಾಜಕೀಯ, ಮಳೆ ಸೇರಿದಂತೆ ಪ್ರಮುಖ ಸುದ್ದಿಗಳ ಕ್ಷಣ ಕ್ಷಣದ ಮಾಹಿತಿಗಾಗಿ ಟಿವಿ9 ಡಿಜಿಟಲ್ ಫಾಲೋ ಮಾಡಿ.
ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಸಿಬಿಐ ಪ್ರಕರಣ ರದ್ದು ಕೋರಿದ್ದ ಅರ್ಜಿ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ನಾಳೆಗೆ ಮುಂದೂಡಿದೆ. ಡಿಸಿಎಂ ಡಿಕೆ ಶಿವಕುಮಾರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂದೇಶ್ ಚೌಟ, ಕುಟುಂಬಸ್ಥರ ಆದಾಯ, ವೆಚ್ಚವನ್ನು ಡಿಸಿಎಂ ಲೆಕ್ಕಕ್ಕೆ ಸೇರಿಸುತ್ತಿದ್ದಾರೆ. ಆ ಲೆಕ್ಕ ಸೇರಿಸಿ ಅಕ್ರಮ ಆಸ್ತಿ ಗಳಿಸಿದ್ದಾರೆಂದು ಆರೋಪಿಸಲಾಗದು. 2 ವರ್ಷ 4 ತಿಂಗಳಿನಿಂದ ಡಿಸಿಎಂ ವಿರುದ್ಧ ತನಿಖೆ ನಡೆಯುತ್ತಿದೆ. ದೋಷಪೂರಿತವಾಗಿ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದರು.
ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಹಿನ್ನೆಲೆ ಮಲೆನಾಡು ಭಾಗದ ಮೂರು ತಾಲೂಕಿನಾದ್ಯಂತ ಅಂಗನವಾಡಿ, ಪ್ರಾರ್ಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕೊಪ್ಪ, ಶೃಂಗೇರಿ ಕಳಸ ತಾಲೂಕಿನಾದ್ಯಂತ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಅಲ್ಲದೆ, ಚಿಕ್ಕಮಗಳೂರು ತಾಲೂಕಿನಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿರುವ ಜಾಗರ , ವಸ್ತಾರೆ, ಖಾಂಡ್ಯ, ಆಲ್ದೂರು, ಆವತಿ ಹೋಬಳಿಗಳಲ್ಲಿ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಬಿರುಗಾಳಿ ಸಹಿತ ಮಳೆಗೆ 30ಕ್ಕೂ ಹೆಚ್ಚು ಮರಗಳು ಧರೆಗುರುಳಿದ ಘಟನೆ ಉತ್ತರ ಕನ್ನಡ ಜಿಲ್ಲೆ ಕುಮಟಾದ ಮಾಸ್ತಿಕಟ್ಟೆ ಬಳಿ ನಡೆದಿದೆ. ಈ ಪೈಕಿ ಒಂದು ಮರ ಗೂಡಂಗಡಿಗೆ ಬಿದ್ದು ಓರ್ವನಿಗೆ ಗಾಯವಾಗಿದ್ದು, ಎರಡು ಬೈಕ್ಗಳು ಜಖಂ ಆಗಿವೆ. ಗೋಕರ್ಣ ದ ಮಹಾಬಲೇಶ್ವರ ದೇವಸ್ಥಾನದ ಅಮೃತಾನ್ನ ಭೋಜನ ಶಾಲೆಯ ಮೇಲೂ ಮರ ಬಿದ್ದು ಹಾನಿಯಾಗಿದ್ದು, ನಾಲ್ಕು ಮನೆಗಳು, ಶಾಲೆಯ ಕೋಣೆಯೊಂದು ಡ್ಯಾಮೇಜ್ ಆಗಿದೆ. ಆರು ಕುಟುಂಬಗಳನ್ನು ಹಂದಿಗೋಣ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇರುವ ಕಾಳಜಿ ಕೇಂದ್ರಕ್ಕೆ ರವಾನಿಸಲಾಗಿದೆ.
ವಿಧಾನಪರಿಷತ್: ಷರಿಷತ್ ಅಧಿವೇಶನದಲ್ಲಿ NPS- OPS ವಿಚಾರ ಚರ್ಚೆಗೆ ಬಂದಿದೆ. OPS ಮರು ಜಾರಿಗೆ ವೈಎ ನಾರಾಯಣಸ್ವಾಮಿ ನಿಯಮ 72ರಡಿ ಪ್ರಶ್ನೆ ಮಾಡಿದ್ದು, ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಲಿಖಿತ ಉತ್ತರ ನೀಡಿದ್ದಾರೆ. ಕೆಲವು ರಾಜ್ಯಗಳು OPS ಸ್ಕೀಮ್ ಜಾರಿ ಮಾಡಿವೆ. OPS ಜಾರಿ ಮಾಡಿರುವ ರಾಜ್ಯಗಳಲ್ಲಿನ ಅನುಷ್ಠಾನದ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ.
ವಿಧಾನಸಭೆಯ ಉಪಸಭಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದ ಶಾಸಕ ರುದ್ರಪ್ಪ ಲಮಾಣಿ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. ತಮ್ಮ ಕಾರ್ಯಾವಧಿಯಲ್ಲಿ ಸಾರ್ವಜನಿಕ ಹಿತಾಸಕ್ತಿಯ ವಿಷಯ-ವಿಚಾರಗಳ ಚರ್ಚೆಯಲ್ಲಿ ಸದನದ ಸರ್ವಸದಸ್ಯರು ಹೆಚ್ಚು ಪಾಲ್ಗೊಳ್ಳುವಂತಾಗಲಿ, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿಹಿಡಿಯುವ ಕೆಲಸವಾಗಲೆಂದು ಆಶಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ.
ವಿಧಾನಸಭೆಯ ಉಪಸಭಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದ ಶಾಸಕ ರುದ್ರಪ್ಪ ಲಮಾಣಿ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು.
ತಮ್ಮ ಕಾರ್ಯಾವಧಿಯಲ್ಲಿ ಸಾರ್ವಜನಿಕ ಹಿತಾಸಕ್ತಿಯ ವಿಷಯ-ವಿಚಾರಗಳ ಚರ್ಚೆಯಲ್ಲಿ ಸದನದ ಸರ್ವಸದಸ್ಯರು ಹೆಚ್ಚು ಪಾಲ್ಗೊಳ್ಳುವಂತಾಗಲಿ, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿಹಿಡಿಯುವ ಕೆಲಸವಾಗಲೆಂದು… pic.twitter.com/tSrbuIo9Um
— CM of Karnataka (@CMofKarnataka) July 6, 2023
ವಿಧಾನಸಭೆ: ರಾಜ್ಯಪಾಲರ ಭಾಷಣ ಮೇಲಿನ ವಂದನಾ ನಿರ್ಣಯ ಕುರಿತು ಚರ್ಚೆ ವೇಳೆ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಐದು ಗ್ಯಾರಂಟಿಗಳಿಗೆ ಜನರು ಮರಳಾಗಿಲ್ಲ, ಮನ್ನಣೆ ಅಂತೂ ಕೊಟ್ಟಿದ್ದಾರೆ. ಈ ಐದು ಗ್ಯಾರಂಟಿಗಳ ಮೇಲೆ ಜನರು ಬಹಳ ನಂಬಿಕೆ ಇಟ್ಟಿದ್ದಾರೆ. ನಿಮ್ಮ ಪ್ರತಿ ಮಾತಿನ ಮೇಲೂ ರಾಜ್ಯದ ಜನರು ವಿಶ್ವಾಸವಿಟ್ಟಿದ್ದಾರೆ. ಮೊದಲ ಸಂಪುಟ ಸಭೆಯಲ್ಲಿ ನಿರ್ಣಯ ಮಾಡಿ ಅನುಷ್ಠಾನ ಅಂದಿದ್ದರು. ಮೊದಲ ಸಂಪುಟದಲ್ಲೇ ತಾತ್ವಿಕವಾಗಿ ಒಪ್ಪಿಗೆ ಪಡೆದು ಜಾರಿ ಮಾಡಿದ್ದಾರೆ. ನಂತರ ಒಂದೊಂದೇ ಕಂಡಿಷನ್ ಹಾಕುತ್ತಾ ಬಂದರು. ಹೇಳಿದ್ದಕ್ಕೂ, ಅನುಷ್ಠಾನ ಮಾಡೋದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಗ್ಯಾರಂಟಿಗಳಿಂದ ಜನರ ಮೇಲೆ ಯಾವುದೇ ತೆರಿಗೆ ಹಾಕಬೇಡಿ ಎಂದರು.
KSRTC ಚಾಲಕ ಜಗದೀಶ್ ಆತ್ಮಹತ್ಯೆ ಯತ್ನ ಕೇಸ್ ಪರಿಷತ್‌ನಲ್ಲೂ ಪ್ರತಿಧ್ವನಿಸಿದೆ. ಬಿಜೆಪಿ ಸದಸ್ಯ ನವೀನ್ ಈ ವಿಚಾರವನ್ನು ಪ್ರಸ್ತಾಪಿಸಿದ್ದು, ಸಚಿವರೊಬ್ಬರ ಹೆಸರು ಬರೆದು ಜಗದೀಶ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಬಗ್ಗೆ ತನಿಖೆಯಾಗಲಿ, ಸಚಿವರ ರಾಜೀನಾಮೆ ನೀಡಲಿ ಎಂದರು. ಬಿಜೆಪಿ ನಾಯಕರ ಮಾತಿಗೆ ಜೆಡಿಎಸ್ ಸದಸ್ಯ ಭೋಜೇಗೌಡ ಅವರು ಧ್ವನಿಗೂಡಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಪ್ರಕರಣವನ್ನು ತನಿಖೆ ಮಾಡಿಸುತ್ತೇವೆಂದರು.
ವಿಧಾನಸಭೆ: ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡ ಎಂಬ ಕಾರಣಕ್ಕೆ ಈಶ್ವರಪ್ಪ ಅವರಿಂದ ಕಿತ್ತೋದ ಕಾಂಗ್ರೆಸ್ಸಿಗರು ರಾಜೀನಾಮೆ ಕೊಡಿಸಿದ್ದರು ಎಂದು ಆಕ್ರೋಶ ಹೊರಹಾಕಿದ ಕುಮಾರಸ್ವಾಮಿ, ನನ್ನ ಬಗ್ಗೆ ಮಾತನಾಡಲು ಕಾಂಗ್ರೆಸ್ಸಿಗರಿಗೆ ಯಾವ ನೈತಿಕತೆ ಇದೆ ಎಂದು ಖಾರವಾಗಿ ಪ್ರಶ್ನಿಸಿದರು.
ವಿಧಾನಸಭೆ: KSRTC ಬಸ್ ಚಾಲಕ ಜಗದೀಶ್ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣ ಸಂಬಂಧ ಸದನದಲ್ಲಿ ಕುಮಾರಸ್ವಾಮಿ ಮತ್ತು ಚಲುವರಾಯಸ್ವಾಮಿ ನಡುವೆ ವಾಗ್ವಾದ ನಡೆದಿದೆ. ಚಾಲಕ ಜಗದೀಶ್ ಕುಟುಂಬದ ಜತೆ ನಾನು ಏನು ಮಾತಾಡಿದ್ದೇನೆ. ವೈದ್ಯರ ಜತೆ ಏನು ಮಾತಾಡಿದ್ದೇನೆಂಬ ವಾಯ್ಸ್ ರೆಕಾರ್ಡ್ ಇದೆ. ನಾನು ಲಕ್ಷಾಂತರ ಬಡ ಕುಟುಂಬಗಳ ಜೀವ ಉಳಿಸಿದವನು. ಇವರ ರೀತಿ ಕೊಲೆಗಡುಕ ಅಲ್ಲ. ತನಿಖೆ ಆಗುವವರಗೆ ಸಚಿವರು ರಾಜೀನಾಮೆ ಕೊಟ್ಟು ಹೊರಗಿರಲಿ ಎಂದು ಕುಮಾರಸ್ವಾಮಿ ಒತ್ತಾಯಿಸಿದರು. ಕೊಲೆಗಡುಕ ಪದಕ್ಕೆ ಶಾಸಕ ಹೆಚ್.ಸಿ.ಬಾಲಕೃಷ್ಣ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ನಮ್ಮ ಹಂಗಿನಲ್ಲಿ ಸಿಎಂ ಆದವನು ಎಂದು ಚಲುವರಾಯಸ್ವಾಮಿ ಏಕವಚನದಲ್ಲಿ ಹೇಳಿದ್ದಾರೆ. ನಾನು, ದೇವೇಗೌಡರು ಕಾಂಗ್ರೆಸ್ನಿಂದ ಸಿಎಂ ಆಗಿಲ್ಲ ಎಂದರು. ಕಾಂಗ್ರೆಸ್ ಬಗ್ಗೆ ಮಾತಾಡುವಾಗ ಎಚ್ಚರಿಕೆ ಇರಲಿ ಎಂದು ನರೇಂದ್ರಸ್ವಾಮಿ ಹೇಳಿದಾಗ ಮಧ್ಯಪ್ರವೇಶಿಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಕುಮಾರಸ್ವಾಮಿ ಅವರಿಗೆ ಮಾತಾಡಲು ಅವಕಾಶ ಕೊಡಿ ಎಂದರು.
ವಿಧಾನಸಭೆ: ನಾನು ದೇವೇಗೌಡರು ಕಾಂಗ್ರೆಸ್ನಿಂದ ಸಿಎಂ ಆಗಿಲ್ಲ ಎಂದು ಕುಮಾರಸ್ವಾಮಿ ಹೇಳಿದಾಗ ಕಾಂಗ್ರೆಸ್ ಬಗ್ಗೆ ಮಾತಾಡುವಾಗ ಎಚ್ಚರಿಕೆ ಇರಲಿ ಎಂದು ಕಾಂಗ್ರೆಸ್ ಶಾಸಕ ನರೇಂದ್ರ ಸ್ವಾಮಿ ಹೇಳಿದರು. ಈ ವೇಳೆ ಮಧ್ಯಪ್ರವೇಶಿಸಿದ ಮಾಜಿ ಬಸವರಾಜ ಬೊಮ್ಮಾಯಿ,
ಕುಮಾರಸ್ವಾಮಿ ಅವರಿಗೆ ಮಾತಾಡಲು ಅವಕಾಶ ಕೊಡಿ ಎಂದರು.
KSRTC ಬಸ್ ಚಾಲಕ ಜಗದೀಶ್ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣ ಸಂಬಂಧ ಸದನದಲ್ಲಿ ಸ್ಪಷ್ಟನೆ ನೀಡಿದ ಮಂಡ್ಯ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ವರ್ಗಾವಣೆ ವಿಚಾರವಾಗಿ ನಮ್ಮ ಕಚೇರಿಯಿಂದ ಯಾವ ಪತ್ರ ಹೋಗಿಲ್ಲ. ಜಗದೀಶ್ ಸಂಬಂಧಿಕರು ವರ್ಗಾವಣೆ ವಾಪಸ್ಗೆ ಮನವಿ ಮಾಡಿದ್ದರು. ನಾನು ಕರೆ ಮಾಡಿ ಏನಾಗಿದೆ ಎಂದು ಮಾಹಿತಿ ಪಡೆದಿದ್ದೇನೆ. ತನಿಖೆ ಮಾಡಿ ವರದಿ ಕೊಡುವಂತೆ ಹೇಳಿದ್ದೆ. ನಂತರ KSRTC ಚಾಲಕ ಜಗದೀಶ್ ಮಾವ ಮತ್ತೆ ಕರೆ ಮಾಡಿದ್ದರು. ಎರಡು ದಿನ ಬಿಡಿ ಎಂದು ಜಗದೀಶ್ ಮಾವನವರಿಗೆ ನಾನೇ ತಿಳಿಸಿದ್ದೆ. ಬಳಿಕ ವರ್ಗಾವಣೆ ಹಿಂಪಡೆಯದಿದ್ದರೆ ವಿಷ ಕುಡಿಯುತ್ತೇನೆ ಎಂದು ಹೇಳಿದ್ದಾಗಿ ತಿಳಿದುಬಂದಿದೆ. ನಂತರ ಆತ್ಮಹತ್ಯೆಗೆ ಯತ್ನಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಅಥವಾ ಮೈಸೂರಿಗೆ ಶಿಫ್ಟ್ ಮಾಡಬೇಕಿತ್ತು. ಆಗ ಮಾಜಿ ಸಿಎಂ ಕರೆಮಾಡಿ ಬರುವವರೆಗೂ ಸ್ಥಳಾಂತರಿಸಬೇಡಿ ಎಂದಿದ್ದಾರೆ. ನಂತರ ಮಾಜಿ ಶಾಸಕ ಸುರೇಶ್ ಗೌಡ, ಅವರ ಪತ್ನಿ ಹೋಗಿ ತಡೆಯುತ್ತಾರೆ. ನಂತರ ಪೊಲೀಸರ ರಕ್ಷಣೆಯಲ್ಲಿ ಜಗದೀಶ್ನನ್ನು ಆಸ್ಪತ್ರೆಗೆ ಶಿಫ್ಟ್ ಮಾಡುತ್ತಾರೆ ಎಂದರು.
ಕೊಡಗು ಜಿಲ್ಲೆಯಾದ್ಯಂತ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ನಾಳೆಯೂ ಮುಂದುವರಿಯುವ ಸಾಧ್ಯತೆ ಇದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಆದೇಶ ಹೊರಡಿಸಿದ್ದಾರೆ.
ವಿಧಾನಸಭೆ: KSRTC ಬಸ್ ಚಾಲಕ ಜಗದೀಶ್ ಆತ್ಮಹತ್ಯೆಗೆ ಯತ್ನಿಸಿದ ಬಗ್ಗೆ ಪ್ರಸ್ತಾಪ ಮಾಡಿದ ವಿಚಾರವಾಗಿ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಇಷ್ಟೊಂದು ಹತಾಶರಾಗಬೇಡಿ ಎಂದ ಕುಮಾರಸ್ವಾಮಿಗೆ ಹೇಳಿದರು. ಇದರಿಂದ ಗರಂ ಆದ ಕುಮಾರಸ್ವಾಮಿ, ಯಾರು ಹತಾಶರಾಗಿರುವುದು ಎಂದು ಆಕ್ರೋಶ ಹೊರಹಾಕಿದರು. ಈ ವೇಳೆ ನಿಮಗೆ ನಾಚಿಕೆಯಾಗಬೇಕು ಎಂದು ಚಲುವಾರಯಸ್ವಾಮಿ ಹೇಳಿದಾಗ ಸಿಟ್ಟಿಗೆದ್ದ ಕುಮಾರಸ್ವಾಮಿ, ನಿಮ್ಮದು ಗೊತ್ತಿದೆ ಕುಳಿತುಕೊಳ್ಳಿ, ಕಡತದಿಂದ ಪದ ತೆಗೆಸಿ ಎಂದರು. ಅಲ್ಲದೆ, ಪಂಚಾಯಿತಿ ಲೆವೆಲ್ನಲ್ಲಿ ರಾಜಕೀಯ ಮಾಡುತ್ತಿರುವವರು ನೀವು. ನಾಚಿಕೆ ಆಗಬೇಕು ನಿಮಗೆ ಎಂದು ಚಲುವರಾಯಸ್ವಾಮಿ ಹೇಳಿದಾಗ, ನಾಚಿಕೆ ಆಗಬೇಕಿರುವುದು ನನಗಲ್ಲ ನಿಮಗೆ, ಕೂರಯ್ಯ ಸಾಕು, ನಾಚಿಕೆ ಆಗುವಂಥದ್ದು ನಾನೇನು ಮಾಡಿಲ್ಲ, ಮಾಡಿಕೊಂಡಿದ್ದು ನೀವು ಎಂದರು. ಆಕ್ರೋಶದ ನುಡಿಗಳ ವೇಳೆ ಬಾಡಿ ಎಂಬ ಶಬ್ದವನ್ನು ಕುಮಾರಸ್ವಾಮಿ ಬಳಸಿದ ಬಗ್ಗೆ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದು, ಆಯ್ತು ಪದ ಬಳಕೆಯಲ್ಲಿ ತಪ್ಪಾಗಿದೆ, ಜೀವ ಇರುವ ಬಾಡಿ ಎಂದು ಹೇಳಿ ಕೈ ಶಾಸಕರನ್ನು ಸುಮ್ಮನಿರುವಂತೆ ಮಾಡಿದರು.
ವಿಧಾನಸಭೆ: ಸಾರಿಗೆ ಬಸ್ ಚಾಲಕ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣ ಸಂಬಂಧ ಬಿಜೆಪಿ, ಜೆಡಿಎಸ್ ಸದನದ ಬಾವಿಗಿಳಿದು ಧರಣಿ ಮಾಡುತ್ತಿದ್ದರು. ಸದ್ಯ ಸ್ಪೀಕರ್ ಮನವಿ ಮೇರೆಗೆ ವಿಪಕ್ಷಗಳು ಧರಣಿ ಕೈಬಿಟ್ಟು ತಮ್ಮ ಸ್ಥಾನಗಳಲ್ಲಿ ಕುಳಿತುಕೊಂಡರು. ಇದಕ್ಕೂ ಮುನ್ನ, ವಿಪಕ್ಷಗಳು ಬಾವಿಗಿಳಿದು ಧರಣಿಗೆ ಮುಂದಾದಾಗ ವಿಚಲಿತರಾದ ಸ್ಪೀಕರ್, ನೀವು ಬಾವಿಗೆ ಬಂದ ವಿಷಯ ಏನು ಅಂತಾ ನನಗೆ ಗೊತ್ತಾಗಲಿಲ್ಲ ಎಂದರು. ಈ ವೇಳೆ, ಪ್ರತಿಕ್ರಿಯಿಸಿದ ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರ ಸ್ವಾಮಿ, ಕೊರೋನಾ ಸಮಯದಲ್ಲಿ ಸಾವಿರಾರು ನೌಕರರ ಅನ್ನ ಕಿತ್ತುಕೊಂಡವರು ಇವತ್ತು ಒಬ್ಬ ನೌಕರನ ವಿಷಯ ಇಟ್ಟುಕೊಂಡು ಮಾತಾಡುತ್ತಿದ್ದಾರೆ ಎಂದರು ಟಾಂಗ್ ನೀಡಿದ್ದರು.
ಪದವೀಧರ ಶಾಲಾ ಶಿಕ್ಷಕರ ನೇಮಕಾತಿ ಆದೇಶ ಪತ್ರ ನೀಡದ ವಿಚಾರವಾಗಿ ವಿಧಾನಸಭೆಯ ಶೂನ್ಯ ವೇಳೆಯಲ್ಲಿ ಬಿಜೆಪಿ ಶಾಸಕರಾದ ಬಿವೈ ವಿಜಯೇಂದ್ರ, ಮಹೇಶ್ ತೆಂಗಿನಕಾಯಿ ಅವರು ಪ್ರಸ್ತಾಪ ಮಾಡಿದರು. ಇದಕ್ಕೆ ಉತ್ತರಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಕಾನೂನಿನಲ್ಲಿ ಒಂದೇ ಒಂದು ತೊಡಕಿದೆ. ಪತಿಯ ಆದಾಯ ಯಾರದ್ದು ತೆಗೆದುಕೊಳ್ಳಬೇಕು ಎಂಬ ತೊಡಕಿದೆ. ಸದ್ಯ ಅದು ನ್ಯಾಯಾಲಯದಲ್ಲಿ ಇರುವುದರಿಂದ ಹೆಚ್ಚು ಮಾತನಾಡಲ್ಲ. ಯಾವುದಕ್ಕೂ ಆದೇಶ ಕೊಡಬೇಡಿ, ಪ್ರಕ್ರಿಯೆ ನಿಲ್ಲಿಸಬೇಡಿ ಅಂತಾ ನ್ಯಾಯಾಲಯ ಹೇಳಿದೆ. ಕೋರ್ಟ್ ಆದೇಶ ಮಾಡಿದರೆ ಕಣ್ಣುಮುಚ್ಚಿ ನೇಮಕಾತಿ ಪತ್ರ ನೀಡುತ್ತೇವೆ. ಜುಲೈ 17ರೊಳಗೆ ಕೋರ್ಟ್ ಆದೇಶ ಪಡೆದು ತೀರ್ಮಾನಿಸುತ್ತೇವೆ ಎಂದರು.
ಸ್ಪೀಕರ್ ಒಪ್ಪಿದರೆ ಸದನದಲ್ಲೇ ಪೆನ್ಡ್ರೈವ್ ಪ್ರದರ್ಶನ ಮಾಡ್ತೇನೆ. ಇಲ್ಲೇ ಆಡಿಯೋ ಹಾಕಿಸುತ್ತೇನೆ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ರು. ಈ ವೇಳೆ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿ ಸದಸ್ಯರು ಬೆಂಬಲ ಸೂಚಿಸಿದ್ರು. ವಿಧಾನಸಭೆಯಲ್ಲಿ ಹೆಚ್ಡಿಕೆ, ಕಾಂಗ್ರೆಸ್ ಸದಸ್ಯರ ನಡುವೆ ವಾಗ್ವಾದ ನಡೆಯುತ್ತಿದೆ.
ವಿಧಾನಸಭೆಯಲ್ಲಿ ಕೆ.ಜೆ.ಜಾರ್ಜ್, ಕುಮಾರಸ್ವಾಮಿ ನಡುವೆ ವಾಗ್ವಾದ ನಡೆದಿದೆ. ಇಂಧನ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆದಿದೆ ಎಂಬ ಆರೋಪಕ್ಕೆ ಕೆ.ಜೆ.ಜಾರ್ಜ್ ತಿರುಗೇಟು ಕೊಟ್ಟಿದ್ದಾರೆ. ನನ್ನ ಬಳಿ ಪೆನ್ಡ್ರೈವ್ ಇದೆ, ಅದರಲ್ಲಿ ಸಾಕ್ಷ್ಯವಿದೆ ಎಂದು ಹೇಳುತ್ತೀರಿ. ನಿಮ್ಮ ಬಳಿ ಯಾವ ಸಾಕ್ಷ್ಯವಿದೆ, ಅದನ್ನು ಸ್ಪೀಕರ್ಗೆ ನೀಡಿ ಎಂದು ವಿಧಾನಸಭೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿಗೆ ಕೆ.ಜೆ.ಜಾರ್ಜ್ ಮನವಿ ಮಾಡಿದರು. ಅದಕ್ಕೆ ಪೆನ್ಡ್ರೈವ್ನಲ್ಲಿರುವ ಸಾಕ್ಷ್ಯ ವೀಕ್ಷಣೆಗೆ ಸದನದಲ್ಲಿ ವ್ಯವಸ್ಥೆ ಮಾಡಿ. ಸ್ಪೀಕರ್ ಒಪ್ಪಿಗೆ ಕೊಟ್ಟರೆ ಸದನದಲ್ಲೇ ಪೆನ್ ಡ್ರೈವ್ ಪ್ರದರ್ಶನ ಮಾಡುತ್ತೇನೆ ಎಂದು ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ.
ಕೆಎಸ್ಆರ್ಟಿಸಿ ಬಸ್ ಚಾಲಕ ಆತ್ಮಹತ್ಯೆ ಯತ್ನ ವಿಷಯಕ್ಕೆ ಸಂಬಂಧಿಸಿ ವಿಧಾನಸಭೆಯಲ್ಲಿ ಶೂನ್ಯವೇಳೆಯಲ್ಲಿ ಮಾಜಿ ಸಿಎಂ ಬೊಮ್ಮಾಯಿ ವಿಷಯ ಪ್ರಸ್ತಾಪಿಸಿದರು. ಮಂಡ್ಯ ಜಿಲ್ಲೆ ನಾಗಮಂಗಲ ಡಿಪೋ ಎದುರು ಚಾಲಕ ವರ್ಗಾವಣೆಯಿಂದ ಬೇಸತ್ತು ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಈ ಬಗ್ಗೆ ಸೂಕ್ತ ತನಿಖೆ ಆಗಬೇಕು, ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಆತ್ಮಹತ್ಯೆಗೆ ಯತ್ನಿಸುವ ಮುನ್ನ ಬರೆದ ಪತ್ರದಲ್ಲಿ ಕೆಎಸ್ಆರ್ಟಿಸಿ ಬಸ್ ಚಾಲಕ ಸಚಿವರ ಹೆಸರು ಉಲ್ಲೇಖಿಸಿದ್ದಾರೆ. ಎಫ್ಐಆರ್ನಲ್ಲಿ ಸಚಿವರ ಹೆಸರು ಉಲ್ಲೇಖಿಸಬೇಕು. ಸಚಿವ ಎನ್.ಚಲುವರಾಯಸ್ವಾಮಿ ರಾಜೀನಾಮೆ ನೀಡಬೇಕು ಎಂದು ವಿಧಾನಸಭೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಒತ್ತಾಯ ಮಾಡಿದರು.
ರಾಜ್ಯದ ಕರಾವಳಿ ಭಾಗದಲ್ಲಿ ವರುಣ ಅಬ್ಬರಿಸಿದ್ದಾನೆ. ಉತ್ತರ ಕರ್ನಾಟಕದಲ್ಲಿ ಮಳೆ ಕೈಕೊಟ್ಟಿದೆ. ಬರದ ಛಾಯೆ ಆವರಿಸಿದೆ. ಪಶ್ಚಿಮ ಘಟ್ಟಗಳ ಪ್ರದೇಶ, ಬೆಳಗಾವಿ ಭಾಗದಲ್ಲಿ ಮಳೆಯ ತೀವ್ರ ಕೊರತೆ ಎದುರಾಗಿದೆ. ಯಳ್ಳೂರ, ಶಹಾಪುರ, ವಡಗಾಂವ ಸೇರಿದಂತೆ ಹಲವು ಭಾಗದಲ್ಲಿ ಭತ್ತದ ಬೆಳೆ ಒಣಗುತ್ತಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ರೈತರು ಭತ್ತ ಬಿತ್ತನೆ ಮಾಡಿದ್ದರು. ಮಳೆಯಾಗದ ಹಿನ್ನೆಲೆ ಭತ್ತದ ಗದ್ದೆ ಬಾಯಿ ತೆರೆದಿದೆ.
ಶಿಕ್ಷಣ ಇಲಾಖೆಯ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ದೈವದ ಕೋಲ ಪ್ರದರ್ಶನಕ್ಕೆ ಅವಕಾಶ ನೀಡಿ ಆದೇಶ ನೀಡಿರುವ ವಿಚಾರಕ್ಕೆ ಸಂಬಂಧಿಸಿ ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಸುನೀಲ್ ಕುಮಾರ್ ಪ್ರಸ್ತಾಪ ಮಾಡಿದ್ದಾರೆ. ದೈವದ ಕೋಲ ಪ್ರದರ್ಶನದ ವಸ್ತು ಅಲ್ಲ. ಕೂಡಲೇ ಈ ಆದೇಶವನ್ನು ಕೈ ಬಿಡಬೇಕು ಎಂದು ಆಗ್ರಹಿಸಿದ್ದಾರೆ. ಇದಕ್ಕೆ ಪರಿಶೀಲನೆ ಮಾಡುವುದಾಗಿ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದ್ರು.
ಸ್ಪೀಕರ್ ಖಾದರ್ ಕನ್ನಡದ ಬಗ್ಗೆ ಸದನದಲ್ಲಿ ಸ್ವಾರಸ್ಯಕರ ಚರ್ಚೆ ನಡೆದಿದೆ. ಸ್ಪೀಕರ್ ಕನ್ನಡ ಬಗ್ಗೆ ಚರ್ಚೆ ಹಿನ್ನೆಲೆ ಯು.ಟಿ.ಖಾದರ್ ಮಾತನಾಡುತ್ತ, ಯತ್ನಾಳ್ ಪದೇ ಪದೆ ನನ್ನ ಕನ್ನಡ ಭಾಷೆ ಸರಿಪಡಿಸುತ್ತಾರೆ. ನನ್ನ ಕನ್ನಡ ಹೆಚ್ಚು ಕಡಿಮೆ ಇದೆ, ಆದ್ರೆ ನಮ್ಮ ಪ್ರೀತಿಯ ಭಾಷೆ. ಕನ್ನಡ ಪ್ರೀತಿ, ಸೋದರತೆ, ಸಾಮರಸ್ಯದ ಭಾಷೆ. ಅದಕ್ಕೆ ನಾನು ಕೃತಜ್ಞತೆ ಹೇಳುತ್ತಿದ್ದೇನೆ ಎಂದರು. ಈ ವೇಳೆ ಮಧ್ಯಪ್ರವೇಶಿಸಿದ BJP ಶಾಸಕ ಬಸನಗೌಡ ಯತ್ನಾಳ್, ಸಮಸ್ಯೆ ಏನೆಂದರೆ ನಮ್ಮ ಕನ್ನಡ ಬೇರೆ, ಹೈದರಾಬಾದ್ ಕನ್ನಡ ಬೇರೆ. ಮೈಸೂರು ಕನ್ನಡ ಬೇರೆ, ಮಂಗಳೂರು ಕನ್ನಡ ಬೇರೆ, ಮುಂಬೈ ಕನ್ನಡ ಬೇರೆ, ನಮಗೆ ನಿಮ್ಮ ಭಾಷೆ ಅರ್ಥ ಆಗಬೇಕು, ಅದಕ್ಕೆ ಆ್ಯಪ್ ಹಾಕಿಕೊಡಿ. ಮೊಬೈಲ್ನಲ್ಲಿ ಯುಎಸ್ ಇಂಗ್ಲಿಷ್, ಇಂಗ್ಲೆಂಡ್ ಇಂಗ್ಲಿಷ್ ಇದ್ದ ಹಾಗೆ. ಲೋಕಸಭೆಯಲ್ಲಿ ಹಿಂದಿ ಟು ಕನ್ನಡ, ಕನ್ನಡ ಟು ಹಿಂದಿ ಇದ್ದ ಹಾಗೆ ಸ್ಪೀಕರ್ ಟು ಕನ್ನಡ ಆ್ಯಪ್ ಮಾಡಿ ಎಂದು ಕಾಲೆಳೆದರು.
ಬೀದರ್ನ ಕೇಂದ್ರ ಬಸ್ ನಿಲ್ದಾಣದಲ್ಲಿ ಎರಡು ದಿನದಿಂದ ಕರೆಂಟ್ ಇಲ್ಲ. ಕರೆಂಟ್ ಇಲ್ಲದೆ ಕತ್ತಲಲ್ಲಿ ಬೀದರ್ ಕೇಂದ್ರೀಯ ಬಸ್ ನಿಲ್ದಾಣ ಮುಳುಗಿದೆ. ವಿದ್ಯುತ್ ಇಲ್ಲದೆ ಎರಡು ದಿನದಿಂದ ಕಂಪ್ಯೂಟರ್ ಸಿಸ್ಟಮ್ ಆನ್ ಆಗಿಲ್ಲ. ಟಿಕೆಟ್ ಬುಕಿಂಗ್ ಮಾಡಲಾಗದೆ ಸಿಬ್ಬಂದಿ ಪರದಾಡುತ್ತಿದ್ದು ಜನರು ಆಕ್ರೋಶ ಹೊರ ಹಾಕಿದ್ದಾರೆ.
ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಉಚ್ಛಾಟನೆಯನ್ನು ಕಾಂಗ್ರೆಸ್ ಹಿಂಪಡೆದಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದಕ್ಕೆ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿಯನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿಸಲಾಗಿತ್ತು. ಕಾಂಗ್ರೆಸ್ ಶಿಸ್ತು ಸಮಿತಿಯಿಂದ ಉಚ್ಛಾಟನೆ ಮಾಡಲಾಗಿತ್ತು. ಆದ್ರೆ ಈಗ ಕಾಂಗ್ರೆಸ್ ಶಿಸ್ತು ಸಮಿತಿ ಮತ್ತೆ ಖಾದ್ರಿ ಉಚ್ಚಾಟನೆ ಹಿಂಪಡೆದಿದೆ.
ಕಾರವಾರ ತಾಲ್ಲೂಕಿನ ಬಿಣಗಾ ವಕ್ಕಲಕೇರಿ, ಮೂಡಲಮಕ್ಕಿ ಭಾಗದಲ್ಲಿ ಧಾರಾಕಾರ ಮಳೆಗೆ ಮನೆಗಳು ಜಲಾವೃತಗೊಂಡಿವೆ. ಭಾರೀ ಮಳೆಗೆ ಹೊಳೆಯಂತೆ ನೀರು ಹರಿದುಬರುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಮಳೆಯಿಂದಾಗಿ ಮನೆಗಳ ಬಳಿ ಮಳೆ ನೀರು ಸಂಗ್ರಹವಾಗಿದೆ. ಮನೆ ಪ್ರದೇಶ ಸಂಪೂರ್ಣ ಜಲಾವೃತವಾಗಿ ನಿವಾಸಿಗಳಿಗೆ ಜಲದಿಗ್ಭಂಧನವಾಗಿದೆ.
ವಿಧಾನಸಭೆ ಉಪಸಭಾಧ್ಯಕ್ಷರಾಗಿ ರುದ್ರಪ್ಪ ಲಮಾಣಿ ಆಯ್ಕೆ ಆಗಿದ್ದಾರೆ. ಹಾವೇರಿ ವಿಧಾನಸಭಾ ಕ್ಷೇತ್ರದ ಶಾಸಕ ರುದ್ರಪ್ಪ ಲಮಾಣಿ ಉಪಸಭಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ವಿಪಕ್ಷ ಸದಸ್ಯರಿಗೆ ಹಸ್ತಲಾಘವ ನೀಡಿದರು. ನಮ್ಮ ಜಿಲ್ಲೆಯವರು ನಮ್ಮ ಮಾತೇ ಕೇಳಬೇಕು ಎಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ರು.
ಜೂ.24ರಂದು ಮೈಶುಗರ್ ಕಾರ್ಖಾನೆಯಲ್ಲಿ ಕಬ್ಬು ಅರಿಯಬೇಕಿತ್ತು. ಟರ್ಬೈನ್ ಸಮಸ್ಯೆಯಿಂದ ಕಬ್ಬು ಅರೆಯುವ ಕಾರ್ಯ ತಡವಾಗಿದೆ ಎಂದು ಸಕ್ಕರೆ ಇಲಾಖೆ ಸಚಿವ ಶಿವಾನಂದ ಪಾಟೀಲ್ ವಿಳಂಬವಾಗಿದ್ದಕ್ಕೆ ರೈತರ ಬಳಿ ಕ್ಷಮೆಯಾಚಿಸಿದ್ದಾರೆ. ಸೀಜನ್ ಮುಗಿಯೋವರೆಗೆ ಕಬ್ಬು ಅರೆಯುವ ಕಾರ್ಯ ನಡೆಯುತ್ತೆ. ದಿನಕ್ಕೆ 3 ಸಾವಿರ ಟನ್ ಕಬ್ಬು ಅರೆಯುವ ಕಾರ್ಯ ನಡೆಯುತ್ತೆ. ಇವತ್ತು ಮತ್ತು ನಾಳೆ ಎರಡರಿಂದ ಮೂರು ಸಾವಿರ ಟನ್ ಆಗುತ್ತೆ. ಕ್ರಮೇಣ ಕಬ್ಬು ಅರೆಯುವ ಪ್ರಮಾಣ ಹೆಚ್ಚಿಸುವ ಕೆಲಸ ಆಗುತ್ತೆ ಎಂದರು.
ಸಿದ್ದರಾಮಯ್ಯ ದಾಖಲೆ ಇಟ್ಟು ಮಾತನಾಡಿದ್ದನ್ನು ನಾನು ನೋಡಿಲ್ಲ ಎಂದು ವಿಧಾನಸೌಧದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ ಯಾವತ್ತಾದರೂ ದಾಖಲೆ ಬಿಡುಗಡೆ ಮಾಡಿದ್ರಾ? ಸಿದ್ದರಾಮಯ್ಯ ದಾಖಲೆ ಇಟ್ಟು ಮಾತನಾಡಿದನ್ನ ನೋಡಲೇ ಇಲ್ಲ. ತಾರ್ಕಿಕ ಅಂತ್ಯ ಎಂಬುದು ನನ್ನಿಂದ ಅಲ್ಲ, ಈ ದೇಶದ ವ್ಯವಸ್ಥೆ. ರಾಜಕೀಯ ಪ್ರಭಾವ, ಧನ ಬಲ ಇರುವವರಿಂದ ತಾರ್ಕಿಕ ಅಂತ್ಯ ಅಸಾಧ್ಯ ಎಂದು ವಾಗ್ದಾಳಿ ನಡೆಸಿದರು.
ಹುಬ್ಬಳ್ಳಿ: ಶೀಘ್ರದಲ್ಲೇ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸಂಬಂಧಿ ಹಾಗೂ ಕುಂದಗೋಳ ಕ್ಷೇತ್ರದ ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡರ ಅವರು ಕಾಂಗ್ರೆಸ್ ಪಕ್ಷ ಸೇರುವ ಸಾಧ್ಯತೆಯಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆ ಪಕ್ಷೇತರರಾಗಿ ಕಣಕ್ಕಿಳಿದು ಸೋತಿದ್ದರು.
ನಾಗಮಂಗಲ KSRTC ಚಾಲಕ ಜಗದೀಶ್ ಆತ್ಮಹತ್ಯೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ನಿಯಮ 60ರ ಅಡಿ ಚರ್ಚೆಗೆ ಅವಕಾಶ ಕೊಡುವಂತೆ ಸ್ಪೀಕರ್ಗೆ ಮಾಜಿ ಸಿಎಂ H.D.ಕುಮಾರಸ್ವಾಮಿ ಮನವಿ ಪತ್ರ ನೀಡಿದ್ದಾರೆ. ಚರ್ಚೆಗೆ ಸಮಯ ಕೊಡುವಂತೆ JDS ಸದಸ್ಯರು ಪಟ್ಟು ಹಿಡಿಯಲಿದ್ದು ಪ್ರಕರಣದ ಹಿಂದೆ ಚಲುವರಾಯಸ್ವಾಮಿ ಇದ್ದಾರೆ. ಅವರ ರಾಜೀನಾಮೆಗೆ JDS ಶಾಸಕರು ಒತ್ತಾಯಿಸಲಿದ್ದಾರೆ.
ಚಿಂಚೋಳಿ ಕ್ಷೇತ್ರದಲ್ಲಿನ ಆರೋಗ್ಯ ಕೇಂದ್ರಗಳ ಸಮಸ್ಯೆ ಬಗ್ಗೆ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಡಾ. ಅವಿನಾಶ್ ಜಾಧವ್ ಪ್ರಶ್ನೆ ಕೇಳಿದರು. ಈ ವೇಳೆ ಹಲವು ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿನ ಆರೋಗ್ಯ ಕೇಂದ್ರಗಳ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದರು. ಗುರುಮಿಠಕಲ್ ಶಾಸಕ ಶರಣ ಗೌಡ ಕಂದಕೂರ್, ಶಿಕಾರಿಪುರ ಶಾಸಕ ಬಿ.ವೈ. ವಿಜಯೇಂದ್ರ, ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ, ತೇರದಾಳ ಶಾಸಕ ಸಿದ್ದು ಸವದಿ, ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ ಅವರು ಪ್ರಸ್ತಾಪಿಸಿದ್ರು.
ವಿಧಾನಸಭೆ ಪ್ರಶ್ನೋತ್ತರ ಕಲಾಪಕ್ಕೆ ಮೂವರು ಶಾಸಕರ ಗೈರಾಗಿದ್ದಾರೆ. ಕಲಾಪದಲ್ಲಿ ಪ್ರಶ್ನೆ ಕೇಳಿದ್ದ ಮೂವರು ಶಾಸಕರಾದ ಚಾಮರಾಜ ಶಾಸಕ ಹರೀಶ್ ಗೌಡ, ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ, ಶ್ರವಣಬೆಳಗೊಳ ಶಾಸಕ ಸಿ.ಎನ್.ಬಾಲಕೃಷ್ಣ ಪ್ರಶ್ನೋತ್ತರ ಕಲಾಪಕ್ಕೆ ಗೈರಾಗಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಮಳೆಯಿಂದ ಅಪಾರ ಹಾನಿ ಹಿನ್ನೆಲೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಾಳೆ ಸಂಜೆ ಅಧಿಕಾರಿಗಳ ಜತೆ ಸಭೆ ನಡೆಸಲಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಮಳೆಯಿಂದ ಇಬ್ಬರು ಮೃತಪಟ್ಟಿದ್ದಾರೆ. ನಾಳೆ ಸಂಜೆ ಅಧಿವೇಶನ ಮುಗಿದ ಬಳಿಕ ಜಿಲ್ಲೆಗೆ ಹೋಗ್ತೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಳೆಯಿಂದ ಹಾನಿ ಉಂಟಾಗಿದೆ. ಮಳೆಹಾನಿ ಬಗ್ಗೆ ಮುಖ್ಯ ಕಾರ್ಯದರ್ಶಿಗಳಿಂದ ಸಿಎಂ ಸಿದ್ದರಾಮಯ್ಯ ಮಾಹಿತಿ ಪಡೆದಿದ್ದಾರೆ. ಕರಾವಳಿ ಜಿಲ್ಲೆಗಳ ಮಳೆ ಹಾನಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲಾಗಿದ್ದು ಕೂಡಲೇ ಪರಿಹಾರ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲು ಉಸ್ತುವಾರಿ ಸಚಿವರಿಗೆ CM ಸೂಚನೆ ನೀಡಿದ್ದಾರೆ.
ಹೆಚ್.ಡಿ. ಕುಮಾರಸ್ವಾಮಿಗೆ ಧಮ್, ತಾಕತ್ತು ಇದ್ರೆ ಪೆನ್ ಡ್ರೈವ್ನಲ್ಲಿ ಏನಿದೆ ಎಂದು ಬಹಿರಂಗ ಪಡಿಸಿ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿಗೆ ಮಾಜಿ ಸಿಎಂ ಡಾ.ಎಂ.ವೀರಪ್ಪ ಮೊಯಿಲಿ ಸವಾಲು ಹಾಕಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಸೋತು ಹೆಚ್ಡಿಕೆ ಹತಾಶರಾಗಿದ್ದಾರೆ. ಅವರು ಸಿಎಂ ಆಗಿದ್ದಾಗಿನ ದಾಖಲೆ ಪೆನ್ ಡ್ರೈವ್ನಲ್ಲಿ ಇರಬೇಕು. ರಾಜ್ಯ ಕಾಂಗ್ರೆಸ್ ಸರ್ಕಾರ ತಪ್ಪು ಮಾಡಲ್ಲ. ತಪ್ಪಿನಲ್ಲಿ ಸಿಲುಕಿಸಲು ಬಿಜೆಪಿ ಜೆಡಿಎಸ್ ಯತ್ನಿಸುತ್ತಿದೆ. ಅವರ ಕನಸ್ಸು ಹಿಡೇರಲ್ಲ ಎಂದರು.
ಬೈಯ್ಯಪ್ಪನಹಳ್ಳಿಯ ಕೃಷ್ಣಯ್ಯನಪಾಳ್ಯದಲ್ಲಿ ಕಾಲೇಜು ವಿದ್ಯಾರ್ಥಿ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಚಾರ್ಲ್ಸ್(18) ಆತ್ಮಹತ್ಯೆ ಮಾಡಿಕೊಂಡ ಯುವಕ. ಆರು ತಿಂಗಳ ಹಿಂದೆ ಪ್ರಥಮ ಪಿಯುಸಿಯಲ್ಲಿ ಫೇಲಾಗಿದ್ದ ಚಾರ್ಲ್ಸ್ ನಂತರ ಮರು ಪರೀಕ್ಷೆಯಲ್ಲಿಯೂ ಎಕ್ಸಾಂ ಬರೆದು ಫೇಲ್ ಆಗಿದ್ದ. ಈ ವೇಳೆ ಕಾಲೇಜಿನವರು ಬೇರೆ ಕಾಲೇಜಿಗೆ ಸೇರಿಸುವಂತೆ ಹೇಳಿದ್ದರು.
ರಾಜ್ಯದಲ್ಲಿ ಇದೀಗ ಹೊಸ ತೆರಿಗೆಗಳು ಆರಂಭಗೊಂಡಿವೆ ಎಂದು ಟ್ಯಾಕ್ಸ್ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಪುನರುಚ್ಛಾರ ಮಾಡಿದ್ದಾರೆ. ವೈಎಸ್‌ಟಿ ಟ್ಯಾಕ್ಸ್ ಬಗ್ಗೆ ಎಲ್ಲಾ ರಾಜಕಾರಣಿಗಳಿಗೂ ಗೊತ್ತಿದೆ. ವೈಎಸ್‌ಟಿ ಟ್ಯಾಕ್ಸ್ ಸಂಗ್ರಹ ಬಗ್ಗೆ ನನಗೆ ಯಾರೋ ಹೇಳಿದರು. ವೈಎಸ್‌ಟಿ ಅಂದ್ರೆ ಏನಂತ ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ ಎಂದರು.
ವಿಜಯಪುರ ಜಿಲ್ಲೆಯ ಹಲವೆಡೆ ಭೂಮಿ ಕಂಪಿಸಿದೆ. ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣ ಹಾಗೂ ಸುತ್ತಮುತ್ತಲೂ ತಡರಾತ್ರಿ 1:38ರ ಸುಮಾರಿಗೆ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 3.4ರಷ್ಟು ದಾಖಲಾಗಿದೆ.
ರಾಜ್ಯ ಸರ್ಕಾರದ ‘ಗೃಹಜ್ಯೋತಿ’ ಯೋಜನೆ ಭರ್ಜರಿ ಯಶಸ್ಸು ಕಂಡಿದೆ. ಅರ್ಜಿ ಆರಂಭವಾಗಿ 17 ದಿನದಲ್ಲಿ 1 ಕೋಟಿ ಜನರಿಂದ ನೋಂದಣಿಯಾಗಿದೆ. ಅತ್ಯಂತ ವೇಗದಲ್ಲಿ ರಾಜ್ಯದ ಜನರಿಗೆ ‘ಗೃಹಜ್ಯೋತಿ’ ಯೋಜನೆ ತಲುಪಲುತ್ತಿದೆ. ನಿನ್ನೆ ಒಂದೇ ದಿನ 2,13,465 ಗ್ರಾಹಕರು ಅರ್ಜಿ ಸಲ್ಲಿಸಿದ್ದಾರೆ. ಇಂದು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಕೆಯಾಗುವ ಸಾಧ್ಯತೆ ಇದೆ. ಈಗಾಗಲೇ ಇಂಧನ ಇಲಾಖೆ ಅರ್ಜಿ ಸರಳೀಕರಣ ಮಾಡಿದೆ.
ಬೆಂಗಳೂರಿನ ಶಿವಾಜಿನಗರದ ಆಜಾಂ ಮಸೀದಿಗೆ ಹುಸಿ ಬಾಂಬ್ ಬೆದರಿಕೆ ಕರೆ ಬಂದಿದೆ. ಮಸೀದಿಗೆ ಬಾಂಬ್ ಇಟ್ಟಿದ್ದಾರೆಂದು ರಾತ್ರಿ 11ಕ್ಕೆ ಅಪರಿಚಿತನೊಬ್ಬ ಪೊಲೀಸ್ ಸಹಾಯವಾಣಿ ಸಂಖ್ಯೆ 112ಕ್ಕೆ ಕರೆ ಮಾಡಿ ತಿಳಿಸಿದ್ದಾನೆ. ಉಗ್ರರು ಬಾಂಬ್ ಇಟ್ಟಿದ್ದಾರೆಂದು ಅಪರಿಚಿತ ವ್ಯಕ್ತಿ ಕರೆ ಮಾಡಿದ್ದು ಮಾಹಿತಿ ತಿಳಿದು ಸ್ಥಳಕ್ಕೆ ಶಿವಾಜಿನಗರ ಪೊಲೀಸರು ದೌಡಾಯಿಸಿದ್ದಾರೆ. ಹಿರಿಯ ಅಧಿಕಾರಿಗಳು ಸಹಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಸೀದಿ ಪರಿಶೀಲನೆ ಬಳಿಕ ಹುಸಿ ಬಾಂಬ್ ಕರೆ ಎಂದು ತಿಳಿದು ನಿಟ್ಟುಸಿರು ಬಿಟ್ಟಿದ್ದಾರೆ. ಕರೆ ಮಾಡಿದ ವ್ಯಕ್ತಿಗಾಗಿ ಶಿವಾಜಿನಗರ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ತುಮಕೂರಿನ ಜಿಲ್ಲಾಸ್ಪತ್ರೆಯಲ್ಲಿ ನಾಯಿಗಳ ಕಾಟ ಹೆಚ್ಚಾಗಿದೆ. ರೋಗಿಗಳು ಮಲಗಿರುವಾಗ ರಾತ್ರಿ ಪಾಳೆಯದಲ್ಲಿ ನಾಯಿಗಳು ವಾರ್ಡ್ಗಳಿಗೆ ನುಗ್ಗುತ್ತಿವೆ. ಸೊಳ್ಳೆಗಳ ಕಾಟದ ಜೊತೆಗೆ ನಾಯಿಗಳ ಕಾಟದಿಂದ ಸಾರ್ವಜನಿಕರು ಅಸಮಾಧಾನ ಹೊರ ಹಾಕಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ನಿನ್ನೆ ರಾತ್ರಿಯಿಂದ ಧಾರಾಕಾರ ಮಳೆ ಸುರಿಯುತ್ತಿದ್ದು ಹವಾಮಾನ ಇಲಾಖೆಯಿಂದ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಜುಲೈ 8ರವರೆಗೂ ಕೊಡಗಿನಲ್ಲಿ ಮಳೆ ಮುಂದುವರೆಯುವ ಸಾಧ್ಯತೆ ಇದೆ. ಮುನ್ನೆಚ್ಚರಿಕೆಯಿಂದ ಇರುವಂತೆ ಜನರಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಇಂದು ಮಧ್ಯಾಹ್ನ 1 ಗಂಟೆಗೆ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. 12 ನಿರ್ದೇಶಕರ ಪೈಕಿ 7 ನಿರ್ದೇಶಕರನ್ನು ಜೆಡಿಎಸ್ ಹೊಂದಿದ್ದು ಕಾಂಗ್ರೆಸ್ 3 ಹಾಗೂ ಬಿಜೆಪಿ ಇಬ್ಬರು ನಿರ್ದೇಶಕರನ್ನು ಹೊಂದಿದೆ. ಕೆಎಂಎಫ್ ಪ್ರತಿನಿಧಿ, ಪಶುಸಂಗೋಪನಾ ಇಲಾಖೆ ಉಪ ನಿರ್ದೇಶಕ, ರಾಜ್ಯ ಸಹಕಾರ ಮಹಾಮಂಡಳದಿಂದ ಒಬ್ಬರು ಹಾಗೂ
ಸಹಕಾರ ಸಂಘಗಳ ಉಪ ನಿಬಂಧಕರು, ಸರ್ಕಾರದ ನಾಮನಿರ್ದೇಶಿತ ಓರ್ವ ಸದಸ್ಯರಿಗೆ ಮತದಾನದ ಹಕ್ಕಿದೆ.
ಮಂಡ್ಯ ಜಿಲ್ಲೆಯ ರೈತರ ಜೀವನಾಡಿಯಾಗಿರುವ ಮೈಶುಗರ್ ಕಾರ್ಖಾನೆಯಲ್ಲಿ ಇಂದಿನಿಂದ ಕಬ್ಬು ಅರಿಯುವಿಕೆ ಆರಂಭಗೊಂಡಿದೆ. ಸಕ್ಕರೆ ಸಚಿವ ಶಿವಾನಂದ ಪಾಟೀಲ್, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯ ಸ್ವಾಮಿ ಬೆಳಗ್ಗೆ 10 ಗಂಟೆಗೆ ಕಾರ್ಖಾನೆಯಲ್ಲಿ ಕಬ್ಬು ಅರಿಯುವಿಕೆಗೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಮಂಡ್ಯ ಸಂಸದೆ ಸುಮಲತಾ ಭಾಗಿಯಾಗಲಿದ್ದಾರೆ.
ಪಶ್ಚಿಮ ಘಟ್ಟ ಸಾಲಿನಲ್ಲಿ ಭಾರಿ ಮಳೆಯಾಗುತ್ತಿದ್ದು ನದಿಗಳು ಅಪಾಯದ ಮಟ್ಟಕ್ಕೆ ಬಂದಿವೆ. ತುಂಗಾ ಭದ್ರಾ, ಹೇಮಾವತಿ ನದಿಗಳಲ್ಲಿ ಭಾರಿ ಪ್ರಮಾಣದಲ್ಲಿ ಒಳಹರಿವು. ಎರಡು ದಿನದಿಂದ ಸುರಿಯುತ್ತಿರುವ ಮಳೆಯಿಂದ ಅಪಾಯದ ಮಟ್ಟ ಮೀರಿ ನದಿಗಳು ಹರಿಯುತ್ತಿವೆ. ಕಳಸ, ಕುದುರೆಮುಖ, ಕೊಪ್ಪ, ಎನ್ಆರ್ ಪುರ, ಮೂಡಿಗೆರೆ, ಬಣಕಲ್, ಕೊಟ್ಟಿಗೆಹಾರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದೆ.
ಜುಲೈ 14 ರಿಂದ ಗೃಹ ಲಕ್ಷ್ಮಿ ಜಾರಿಗೆ ಸರ್ಕಾರ ಪ್ಲಾನ್ ಮಾಡಿದೆ. ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಜುಲೈ 14 ರಂದು ಬೆಂಗಳೂರಿನಲ್ಲಿ ವಿಶೇಷ ಕಾರ್ಯಕ್ರಮ ನಡೆಸಲು ಚಿಂತನೆ ನಡೆಸಿದೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸಮ್ಮುಖದಲ್ಲಿ ಈ ಯೋಜನೆ ಜಾರಿಯಾಗಲಿದೆ. 10 ರಿಂದ 15 ಮಂದಿ ಫಲಾನುಭವಿಗಳನ್ನ ಗುರುತಿಸಿ ಸಾಂಕೇತಿಕವಾಗಿ ಹಣ ವರ್ಗಾವಣೆ ಮಾಡುವ ಮೂಲಕ ಚಾಲನೆ ನೀಡಲಾಗುತ್ತೆ. ಜುಲೈ 17 ರಿಂದ ಪೂರ್ಣ ಪ್ರಮಾಣದಲ್ಲಿ ಯೋಜನೆ ಜಾರಿಗೆ ಚಿಂತನೆ ನಡೆದಿದೆ.
ಡಿಕೆ ಶಿವಕುಮಾರ್ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಪ್ರಕರಣ ರದ್ದು ಕೋರಿ ಡಿಕೆಶಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು. ಹೈಕೋರ್ಟ್ಇಂದು ಕೂಡ ಅರ್ಜಿ ವಿಚಾರಣೆ ನಡೆಸಲಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾಗೂ ಉಡುಪಿಯಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಇಂದು ಕೂಡ ರಜೆ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ
ಪದವಿ, ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾಸಂಸ್ಥೆಗಳಿಗೆ ರಜೆ ನೀಡಿ ದಕ್ಷಿಣಕನ್ನಡ ಡಿಸಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ. ಹಾಗೂ ಉಡುಪಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ.
Published On - 7:22 am, Thu, 6 July 23