ಚಿನ್ನದ ಬೆಲೆಯಂತೆ ದುಬಾರಿ ಆಗಿದ್ದ ಕೆಂಪು ಸುಂದರಿ ಟೊಮೆಟೊ(Tomato) 3 ತಿಂಗಳ ಬಳಿಕ ತನ್ನ ಬೆಲೆ ಕಳೆದುಕೊಂಡು ಜನರ ಕೈ ಸೇರುತ್ತಿದ್ದಾಳೆ. ಬೆಂಗಳೂರಿನಲ್ಲೇ ಕಳೆದ ವಾರದ ಹಿಂದೆ ಕೆಜಿಗೆ 160 ರಿಂದ 180 ರೂ ಇದ್ದ ಟೊಮೆಟೊ ಈಗ 80 ರಿಂದ 90 ರೂಪಾಯಿಗೆ ಇಳಿಕೆ ಆಗಿದೆ. ಜುಲೈ ಕೊನೆ ವಾರದಲ್ಲಿ 15 ಕೆಜಿ ಬಾಕ್ಸ್ ಟೊಮೆಟೋ 2700 ರೂಪಾಯಿ ತನಕ ಸೇಲ್ ಆಗಿತ್ತು. ಆದ್ರೀಗ, ವಾರದಲ್ಲಿ ಟೊಮೆಟೋ ರೇಟ್ ಸುಮಾರು ಒಂದೂವರೆ ಸಾವಿರ ಕಡಿಮೆಯಾಗಿದೆ. 15 ಕೆಜಿಯ ಕ್ರೇಟ್ 1000ದಿಂದ 1200ಕ್ಕೆ ಮಾರಾಟವಾಗ್ತಿದೆ. ಇನ್ನು 40 ಇನ್ಸ್ಪೆಕ್ಟರ್ಗಳನ್ನ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ. ಈ ಪೈಕಿ 12 ಅಧಿಕಾರಿಗಳ ವರ್ಗಾವಣೆ ಆದೇಶವನ್ನ ಸರ್ಕಾರ ರದ್ದುಗೊಳಿಸಿದೆ. ಪೊಲೀಸ್ ಇಲಾಖೆ ವರ್ಗಾವಣೆ ವಿಚಾರ ಇತ್ತೀಚೆಗೆ ಸಾಕಷ್ಟು ಸದ್ದು ಮಾಡಿತ್ತು. ಆದ್ರೀಗ ಮತ್ತೊಂದು ಲಿಸ್ಟ್ ಬಿಡುಗಡೆ ಮಾಡಿ, ಆದೇಶ ಹೊರಡಿಸಿದೆ. ಇಂದಿನಿಂದ ನೂರು ದಿನ ಭದ್ರಾ ಕಾಲುವೆಗೆ ನೀರು ಬಿಡುಗಡೆಗೆ ಭದ್ರಾ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ರಾಜ್ಯದ ಪ್ರಮುಖ ಸುದ್ದಿಗಳ ಕ್ಷಣ ಕ್ಷಣದ ಮಾಹಿತಿಯನ್ನು ಇಲ್ಲಿ ಪಡೆಯಿರಿ.
ಗದಗ ಜಿಲ್ಲೆಯಲ್ಲಿ ಭಾರೀ ಮಳೆಯಾದ ಹಿನ್ನೆಲೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಇಬ್ರಾಹಿಂಪುರ ಬಳಿ ಪ್ರವಾಹ ತಲೆದೋರಿದೆ. ಗದಗ, ಧಾರವಾಡ ಗಡಿಭಾಗದ ಅಂಬ್ಲಿ ಹಳ್ಳಕ್ಕೆ ಮಳೆ ನೀರು ಹರಿದುಬಂದೆ. ಪರಿಣಾಮ ಇಬ್ರಾಹಿಂಪುರ ಹೊರವಲಯದಲ್ಲಿರುವ ರಸ್ತೆ ಸಂಪರ್ಕ ಕಡಿತಗೊಂಡಿತು. ಶಾಲಾ ಮಕ್ಕಳು ಸುಮಾರು 1 ಗಂಟೆಗೂ ಹೆಚ್ಚು ಕಾಲ ಹಳ್ಳದ ಪಕ್ಕದಲ್ಲೇ ನಿಂತಿದ್ದರು. ಬಳಿಕ ಸ್ಥಳೀಯರು ಶಾಲಾ ಮಕ್ಕಳನ್ನು ಟ್ರ್ಯಾಕ್ಟರ್ ಮೂಲಕ ಹಳ್ಳ ದಾಟಿಸಿದರು.
ಸಿದ್ದರಾಮಯ್ಯ ಸರಕಾರದಲ್ಲಿ ಹತ್ತಾರು ಭ್ರಷ್ಟಾಚಾರ ನಡೆಯುತ್ತಿದೆ. ಕೃಷಿ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ರಾಜ್ಯಪಾಲರಿಗೆ ದೂರು ನೀಡಲಾಗಿದೆ. ಬಿಬಿಎಂಪಿ ಗುತ್ತಿಗೆದಾರರು ಡಿಸಿಎಂ ವಿರುದ್ದ ಪರ್ಸೆಂಟೇಜ್ ಆರೋಪ ಮಾಡಿದ್ದಾರೆ. ಗುತ್ತಿಗೆದಾರರು ದಯಾಮರಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಗುತ್ತಿಗೆದಾರನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಮನೆಯಿಂದಲೇ ಭ್ರಷ್ಟಾಚಾರ ಪ್ರಾರಂಭವಾಗಿದೆ. ಡಿಸಿಎಂ ಡಿಕೆ ಶಿವಕುಮಾರ್, ಚಲುವರಾಯಸ್ವಾಮಿ ರಾಜೀನಾಮೆ ನೀಡಬೇಕು. ಸರಕಾರಕ್ಕೆ ಮಾನಮರ್ಯಾದೆ ಇಲ್ಲ ಎಂದರು. ಗ್ಯಾರಂಟಿಗಳ ಕಾರಣಕ್ಕೆ ಅಭಿವೃದ್ಧಿ ಕುಂಠಿತವಾಗಿದೆ. ತಹಶಿಲ್ದಾರ್, ಡಿಸಿ ಲಂಚ ತಗೆದುಕೊಳ್ಳುತ್ತಿದ್ದಾರೆ. 17 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯ ಸರಕಾರ ಬಂದ ಮೇಲೆ ಹತ್ಯೆ ಹೆಚ್ಚಾಗುತ್ತಿದೆ ಎಂದರು. ಸರಕಾರ ಗುತ್ತಿಗೆದಾರ ಬಲಿ ತೆಗೆದುಕೊಳ್ಳುತ್ತಿದ್ದಾರೆ. ಕೃಷಿ ಅಧಿಕಾರಿಗಳು ಧೈರ್ಯ ಮಾಡಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಜನರ ವಿಶ್ವಾಸದ ಸರಕಾರವಾಗಿದ್ದರೆ ಸಚಿವರು ರಾಜೀನಾಮೆ ನೀಡಲಿ ಎಂದರು.
ಮಾಜಿ ಸಚಿವ ಪ್ರಭು ಚೌಹಾನ್ ಹತ್ಯೆ ಯತ್ನ ಆರೋಪ ಸಂಬಂಧ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಚೌಹಾನ್ ಅವರನ್ನು ಕರೆದು ಮಾತನಾಡುತ್ತೇನೆ ಎಂದರು. ದೆಹಲಿಯಲ್ಲಿ ಮಾತನಾಡಿದ ಅವರು, ಯಾರೆ ಆದರೂ ಕ್ರಮ ಕೈಗೊಳ್ಳುತ್ತೆವೆ. ನಾಳೆ ಹೋಗುತ್ತಿದ್ದೇನೆ, 14 ಕ್ಕೆ ಕರೆಸುತ್ತಿದ್ದೇನೆ ಎಂದರು.
ಲೋಕಸಭೆ ಕಲಾಪಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ಕಾಂಗ್ರೆಸ್ ಪಕ್ಷದ ನಾಯಕ ಅಧೀರ್ ರಂಜನ್ ಅವರನ್ನು ಒಂದು ದಿನದ ಮಟ್ಟಿಗೆ ಅಮಾನತು ಮಾಡಲಾಗಿದೆ.
ಲೋಕಸಭೆ: ಮಣಿಪುರದ ಬಗ್ಗೆ ನಿನ್ನೆ ಅಮಿತ್ ಶಾ ವಿಸ್ತಾರವಾಗಿ ಎಲ್ಲ ಹೇಳಿದ್ದಾರೆ. ಅಮಿತ್ ಶಾ ಮಾತಿನ ಬಳಿಕ ವಿಪಕ್ಷಗಳು ಎಷ್ಟು ಸುಳ್ಳು ಹೇಳಿವೆ ಎಂದು ಬಯಲಾಗಿದೆ. ಮಣಿಪುರದಲ್ಲಿ ಹಿಂಸಾಚಾರ ಶುರುವಾದಗಿನಿಂದ ಬಹಳಷ್ಟು ಜನರು ತಮ್ಮವರನ್ನು ಕಳೆದುಕೊಂಡಿದ್ದಾರೆ. ಮಹಿಳೆಯರ ಜೊತೆಗೆ ಕೆಟ್ಟದಾಗಿ ನಡೆದುಕೊಳ್ಳಲಾಗಿದೆ. ತಪ್ಪಿತಸ್ಥರಿಗೆ ಶಿಕ್ಷಿಸುವ ಕೆಲಸ ಸರ್ಕಾರ ಮಾಡಲಿದೆ. ಮಾತುಕತೆ ನಡೆಯುತ್ತಿದೆ, ಶಾಂತಿ ಮರುಕಳಿಸಲಿದೆ. ಮಣಿಪುರ ಜನರಲ್ಲೂ ಮನವಿ, ದೇಶ ನಿಮ್ಮ ಜೊತೆಗೆ ಇದೆ, ಸದನ ನಿಮ್ಮ ಜೊತೆಗಿದೆ. ಎಲ್ಲರೂ ಸೇರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣ, ಪ್ರಜಾಪ್ರಭುತ್ವ, ಸಂವಿಧಾನ ಹತ್ಯೆ ಬಗ್ಗೆ ಮಾತನಾಡುವ ಜನರು ಇಂದು ಭಾರತ ಮಾತೆಯ ಹತ್ಯೆಯ ಬಗ್ಗೆ ಮಾತನಾಡುತ್ತಿದ್ದಾರೆ. ಅಗಸ್ಟ್ 14 ದೇಶ ವಿಭಜನೆಯ ದಿನ, ಭಾರತಮಾತೆಯನ್ನು ಮೂರು ಭಾಗಗಳಾಗಿ ಒಡೆದವರು ಇವರೇ. ಇವರು ಯಾವ ಬಾಯಿಯಿಂದ ಮಾತನಾಡುವ ಧೈರ್ಯ ಮಾಡುತ್ತಾರೆ ಎಂದು ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ ನಡೆಸಿದರು.
ಲೋಕಸಭೆ ಕಲಾಪದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಟೀಕಿಸಿದ ಪ್ರಧಾನಿ ಮೋದಿ, ಭಾರತದ ಆರ್ಥಿಕತೆ ಮುಳುಗಿಸುವ ಗ್ಯಾರಂಟಿ ನೀಡುತ್ತಿದ್ದಾರೆ. ಭ್ರಷ್ಟಾಚಾರ, ನಿರುದ್ಯೋಗ, ತುಷ್ಟಿಕರಣ, ಭಯೋತ್ಪಾದನೆಯ ಗ್ಯಾರಂಟಿ ನೀಡುತ್ತಿದ್ದಾರೆ. ಇವರು ಯಾವತ್ತು ಭಾರತವನ್ನು ಮೂರನೇ ಬಲಿಷ್ಠ ಆರ್ಥಿಕತೆ ಮಾಡುವ ಗ್ಯಾರಂಟಿ ನೀಡುವುದಿಲ್ಲ. ಮಣಿಪುರದ ಬಗ್ಗೆ ನಿನ್ನೆ ಅಮಿತ್ ಶಾ ವಿಸ್ತಾರವಾಗಿ ಎಲ್ಲ ಹೇಳಿದ್ದಾರೆ. ಅಮಿತ್ ಶಾ ಮಾತಿನ ಬಳಿಕ ವಿಪಕ್ಷಗಳು ಎಷ್ಟು ಸುಳ್ಳು ಹೇಳಿವೆ ಎಂದು ಬಯಲಾಗಿದೆ ಎಂದರು.
ಮಣಿಪುರದ ಘಟನೆ ವಿಚಾರದಲ್ಲಿ ಭಾರತಮಾತೆ ಬಗ್ಗೆ ಆಡಿರುವ ಮಾತು ಭಾರತೀಯರ ಭಾವನೆಗೆ ಧಕ್ಕೆ ಉಂಟಾಗಿಗಿದೆ. ಕಾಂಗ್ರೆಸ್‌ನವರ ಮನಸ್ಸಿನಲ್ಲಿರುವುದು ಬಹಿರಂಗವಾಗಿದೆ ಎಂದು ಪ್ರಧಾನಿ ಮೋದಿ ಅವರು ವಿಪಕ್ಷಗಳ ವಿರುದ್ಧ ಅಸಮಾಧಾನ ಹೊರಹಾಕಿದರು. ಮಣಿಪುರ ವಿಚಾರದಲ್ಲಿ ವಿಪಕ್ಷಗಳು ರಾಜಕೀಯ ಮಾಡುತ್ತಿವೆ ಅಂತಾನೂ ಆರೋಪಿಸಿದರು.
ಮಣಿಪುರ ಘಟನೆ ಬಗ್ಗೆ ಸದನದಲ್ಲಿ ಅಮಿತ್ ಶಾ ಮಾಹಿತಿ ನೀಡಿದ್ದರು. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಲು ಕೇಂದ್ರ, ಮಣಿಪುರ ಸರ್ಕಾರದಿಂದ ಯತ್ನ ನಡೆಯುತ್ತಿದೆ. ಮಣಿಪುರ ರಾಜ್ಯದಲ್ಲಿ ಖಂಡಿತಾ ಶಾಂತಿ ನೆಲೆಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಇಡೀ ದೇಶ ನಿಮ್ಮ ಜೊತೆಗಿದೆ, ನಾವೆಲ್ಲರೂ ಒಟ್ಟಾಗಿ ಹೋರಾಡೋಣ. ಮಣಿಪುರ ರಾಜ್ಯ ಅಭಿವೃದ್ಧಿಯಾಗಲಿದೆ, ಶಾಂತಿ ಸುವ್ಯವಸ್ಥೆ ನೆಲೆಸಲಿದೆ ಎಂದರು.
ಲೋಕಸಭೆ: ಅವಿಶ್ವಾಸ ನಿರ್ಣಯದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಮಾಡುತ್ತಿದ್ದ ವೇಳೆ ರಾಹುಲ್ ಗಾಂಧಿ ಸೇರಿದಂತೆ ವಿಪಕ್ಷ ಸದಸ್ಯರು ಕಲಾಪದಿಂದ ಹೊರನಡೆದರು.
ನರೇಂದ್ರ ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಹಿನ್ನೆಲೆ ಲೋಕಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಉತ್ತರ ನೀಡುವಾಗ ವಿಪಕ್ಷ ಸದಸ್ಯರು ಮಣಿಪುರ, ಮಣಿಪುರ ಎಂದು ಘೋಷಣೆಗಳನ್ನು ಕೂಗಿದರು.
ವಿಪಕ್ಷಗಳಿಗೆ ಪಾಕ್ ಮೇಲೆ ವಿಶ್ವಾಸವಿದೆ, ಭಾರತೀಯ ಸೇನೆ ಮೇಲೆ ವಿಶ್ವಾಸವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು. ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲೆ ಮಾತನಾಡಿದರು.
ಭಾರತ ಅಭಿವೃದ್ಧಿ ಆಗುತ್ತಿರುವುದನ್ನು ವಿದೇಶದಲ್ಲಿ ಕೂತು ನೋಡುತ್ತಿದ್ದಾರೆ. ಆದರೆ ಭಾರತದೊಳಗೆ ಇರುವವರಿಗೆ ಕಾಣುತ್ತಿಲ್ಲ ಎಂದು ಹೇಳುವ ಮೂಲಕ ವಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ಅವರು ವಾಗ್ದಾಳಿ ನಡೆಸಿದರು. ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲೆ ಮಾತನಾಡಿದ ಅವರು, ಅವಿಶ್ವಾಸ ಅನ್ನೋದು ವಿಪಕ್ಷಗಳ ರಕ್ತದ ಕಣದಲ್ಲೇ ಇದೆ. ಜನರು ನೀಡಿರುವ ವಿಶ್ವಾಸವನ್ನ ವಿಪಕ್ಷದವರು ನಂಬುವುದಿಲ್ಲ. ಬೇರೆ ದಿಕ್ಕಿನ ಕಡೆ ಕೊಂಡೊಯುವುದು ಇವರ ಕೆಲಸವಾಗಿದೆ. ಇವರು ಬರೀ ಹಳೆಯದನ್ನೇ ಯೋಚನೆ ಮಾಡುತ್ತಿದ್ದಾರೆ ಎಂದರು.
ಕೇವಲ ಪಕ್ಷದ ಬಗ್ಗೆ ಯೋಚಿಸುತ್ತಾರೆ, ದೇಶದ ಬಗ್ಗೆ ಯೋಚಿಸಲ್ಲ ಎಂದು ಲೋಕಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ದೇಶಕ್ಕೆ ಜೈಕಾರ ಹಾಕೋದನ್ನ ಇವರು ಸಹಿಸುವುದಿಲ್ಲ. ನಾಲ್ಕು ದಿಕ್ಕೂಗಳಲ್ಲೂ ದೇಶದ ಬಗ್ಗೆ ಜೈಕಾರ ಹಾಕುತ್ತಿದ್ದಾರೆ. ವಿಪಕ್ಷ ಸದಸ್ಯರು ಕಪ್ಪು ಬಟ್ಟೆ ಧರಿಸಿ ಸಂಸತ್ಗೆ ಆಗಮಿಸಿದ್ದಾರೆ ಎಂದರು.
ವಿಪಕ್ಷಗಳ ಅವಿಶ್ವಾಸ ನಿರ್ಣಯದ ಬಗ್ಗೆ ವ್ಯಂಗ್ಯವಾಡಿದ ಪ್ರಧಾನಿ ಮೋದಿ, 2028ರಲ್ಲೂ ವಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಲಿ ಎಂದರು.
ನನ್ನನ್ನು ಟೀಕಿಸಲು ವಿಪಕ್ಷ ನಾಯಕರು ಡಿಕ್ಷನರಿ ಕೆದಕುತ್ತಾರೆ. ಅವರ ಮನಸ್ಥಿತಿ ಏನು ಅನ್ನೋದನ್ನ ನಾನು ಈಗ ವಿವರಿಸುತ್ತೇನೆ ಎಂದು ಹೇಳಿದ ಪ್ರಧಾನಿ ಮೋದಿ, ಪ್ರತಿ ದಿನ ಕೂಡ ಇಂತಹ ಜನರು ಟೀಕೆ ಮಾಡುತ್ತಾರೆ. ಮೋದಿ ನಿಮಗೆ ಸಮಾಧಿ ತೋಡುತ್ತಿದ್ದೇವೆ ಎಂದು ಹೇಳುತ್ತಾರೆ. ಈ ಶಬ್ದಗಳು, ಇವರ ಭಾಷೆ ನನಗೆ ಟಾನಿಕ್ ಆಗಿದೆ ಎಂದರು.
ಹೊಸ ಸಂಕಲ್ಪ, ಕನಸಿನ ಹೊತ್ತು ಹೆಜ್ಜೆ ಹಾಕುತ್ತಿದ್ದೇವೆ. ಅನುಭವದಿಂದ ನಾನು ಮಾತನಾಡುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಲೋಕಸಭೆಯಲ್ಲಿ ಹೇಳಿದರು. ಭಾರತಕ್ಕೆ ಇದು ಗೋಲ್ಡನ್ ಎರಾ ಆಗಿದೆ. ಈ ಸಮಯ ದೇಶಕ್ಕೆ ಮಹತ್ವಪೂರ್ಣ ಆಗಿದೆ ಎಂದರು.
2024ರಲ್ಲೂ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಲೋಕಸಭೆಯಲ್ಲಿ ಹೇಳಿದ ಪ್ರಧಾನಿ ಮೋದಿ, ವಿಪಕ್ಷಗಳ ಆಡೋ ಒಂದೊಂದು ಮಾತನ್ನ ಜನರು ನೋಡುತ್ತಿದ್ದಾರೆ. ಯಾವಾಗಲೂ ನಿರಾಸೆಯಿಂದಲೇ ವಿಪಕ್ಷಗಳು ಮಾತನಾಡುತ್ತಿವೆ. ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ, ಒಂದು ವಿಚಿತ್ರ ಇದೆ. 1999ರಲ್ಲೂ ಅವಿಶ್ವಾಸ ನಿರ್ಣಯವನ್ನ ಮಂಡಿಸಿದ್ದರು. ಶರದ್ ಪವಾರ್ ಅವರು ನೇತೃತ್ವದಲ್ಲಿ ಅವಿಶ್ವಾಸ ಮಂಡನೆ ಮಾಡಲಾಗಿತ್ತು. 2003ರಲ್ಲಿ ವಾಜಪೇಯಿ ಸರ್ಕಾರ ಇದ್ದಾಗಲೂ ಮಂಡಿಸಲಾಗಿತ್ತು. ಆಗ ಸೋನಿಯಾ ಗಾಂಧಿ ವಿಪಕ್ಷ ನಾಯಕರಾಗಿದ್ದರು. 2018ರಲ್ಲಿ ಮಲ್ಲಿಕಾರ್ಜುನ ಖರ್ಗೆ ವಿಪಕ್ಷ ನಾಯಕರಾಗಿದ್ದರು. ಅದೀರ್ ರಂಜನ್ ಅವರಿಗೆ ಏನಾಗಿದೆ ಗೊತ್ತಾಗುತ್ತಿಲ್ಲ. ಅದೀರ್ ರಂಜನ್ ಅವರಿಗೆ ಮಾತಾಡಲು ಬಿಡುತ್ತಿಲ್ಲ. ಕಾಂಗ್ರೆಸ್‌ನವರು ಅದೀರ್ ರಂಜನ್ ಅವರನ್ನ ನಿರ್ಲಕ್ಷಿಸಿದ್ದಾರೆ. ಗೊತ್ತಿಲ್ಲ ಕೋಲ್ಕತ್ತದಿಂದ ಫೋನ್ ಬಂದಿರಬೇಕು ಅನ್ಸುತ್ತದೆ ಎಂದು ಹೇಳಿದರು.
ವಿಪಕ್ಷ ನಾಯಕರೇ ಫೀಲ್ಡಿಂಗ್ ಆರ್ಗನೈಸ್ ಮಾಡಿದ್ದರು. ಆದರೆ ಸಿಕ್ಸ್, ಫೋರ್ಗಳು ನಮ್ಮ ಕಡೆಯಿಂದ ಹೋದವು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅವಿಶ್ವಾದ ನಿರ್ಣಯದ ಮೇಲೆ ಲೋಕಸಭೆಯಲ್ಲಿ ಭಾಷಣ ಮಾಡಿದ ಅವರು, ವಿಪಕ್ಷ ನಾಯಕರು ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ. ಬರೀ ನೋ ಬಾಲ್ ಎಸೆಯುತ್ತಿದ್ದಾರೆ. ನಮ್ಮ ಸದಸ್ಯರು ಸೆಂಚುರಿ ಬಾರಿಸುತ್ತಿದ್ದಾರೆ. ಎಲ್ಲರೂ ಶ್ರಮ ಪಡಿ, 2018ರಲ್ಲೂ ಇದನ್ನ ಹೇಳಿದ್ದೇನೆ. ಶ್ರಮ ಮಾಡೋದಕ್ಕೆ 5 ವರ್ಷ ನೀಡಿದ್ದೇನೆ. ಏನು ದಾರಿದ್ರ್ಯ ನೋಡಿ ಇನ್ನೂ ಸರಿಯಾಗಿಲ್ಲ ಎಂದು ವಿಪಕ್ಷಗಳನ್ನು ವ್ಯಂಗ್ಯವಾಡಿದರು.
ಲೋಕಸಭೆ: ಮಣಿಪುರ ಹಿಂಸಾಚಾರ ಸಂಬಂಧ ವಿಪಕ್ಷಗಳು ಮಂಡಿಸಿದ ಅವಿಶ್ವಾಸ ನಿರ್ಣಯದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಆರಂಭಿಸಿದ್ದಾರೆ. ಕೇಂದ್ರ ಸರ್ಕಾರದ ಮೇಲೆ ದೇಶದ ಜನತೆಗೆ ವಿಶ್ವಾಸವಿದೆ. ಇದು ಕೇಂದ್ರ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯವಲ್ಲ. ಅವಿಶ್ವಾಸ ನಿರ್ಣಯ ಮಂಡಿಸಿದ್ದಕ್ಕೆ ವಿಪಕ್ಷಗಳಿಗೆ ಧನ್ಯವಾದಗಳು. ಎನ್‌ಡಿಎ ಬಲ ಇಂಡಿಯಾದ ಬಲ ಎಂದರು. 2024ರಲ್ಲಿ ಎನ್‌ಡಿಎ, ಬಿಜೆಪಿ ಎಲ್ಲಾ ದಾಖಲೆ ಮುರಿಯುತ್ತದೆ ಎಂದರು.
ಯಾದಗಿರಿ: ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಬಿಬಿಎಂಪಿ ಗುದ್ದಿಗೆದಾರರಿಂದ ಲಂಚದ ಆರೋಪ ವಿಚಾರವಾಗಿ ಮಾತನಾಡಿದ ಸಚಿವ ಶರಣಬಸಪ್ಪ ದರ್ಶನಾಪುರ್ ಪ್ರಶ್ನಿಸಿದ್ದಾರೆ. ಡಿಕೆಶಿ ಅವರು 120 ಕೋಟಿ ಬೋಗಸ್ ಬಿಲ್ ಆಗಿರೋದ್ದನ್ನ ಕಂಡು ಹಿಡಿದಿದ್ದಾರೆ. ಯಾವ ಕೆಲಸ ಪೂರ್ಣ ಆಗಿದೆ ಅದಕ್ಕೆ ಅಡೆತಡೆ ಇಲ್ಲ ಅಂತ ಹೇಳಿದ್ದಾರೆ. ಬೋಗಸ್ ಕೆಲಸಗಳಿಗೂ ಬಿಲ್ ಮಾಡಬೇಕಾ ಎಂದು ಪ್ರಶ್ನಿಸಿದರು. ಬಿಜೆಪಿ ಸರ್ಕಾರದಲ್ಲಿ ಕೆಲಸ ಮಾಡದೆ ಬಿಲ್ ಎತ್ತುವ ಕೆಲಸ ಮಾಡಿದ್ದಾರೆ. ಕಳಪೆ ಕಾಮಗಾರಿ ಮಾಡಿದವರ ವಿರುದ್ಧ ತನಿಖೆ ಮಾಡುತ್ತೆ ಅಂತ ಹೇಳಿದ್ದಕ್ಕೆ ಅಂತವರು ಹೆದರಿದ್ದಾರೆ. ಎಸ್ಐಟಿ ತನಿಖೆ ನಡೆಸುತ್ತಿದ್ದೇವೆ, ಹೀಗಿದ್ದಾಗ ಹೇಗೆ ಬಿಲ್ ಕೊಡಲು ಆಗುತ್ತಾ ಎಂದು ಪ್ರಶ್ನಿಸಿದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು BBMP ಗುತ್ತಿಗೆದಾರ ಮಂಜುನಾಥ್ ನೇತೃತ್ವದ ಗುತ್ತಿಗೆದಾರರ ಸಂಘದ ನಿಯೋಗವು ಭೇಟಿಯಾಗಿದೆ. ಬಿಬಿಎಂಪಿ ಗುತ್ತಿಗೆದಾರ ಹಣ ಬಿಡುಗಡೆ ವಿಳಂಬ ವಿಚಾರವಾಗಿ ಆರ್.ಟಿ.ನಗರದ ಬೊಮ್ಮಾಯಿ ನಿವಾಸದಲ್ಲಿದಲ್ಲಿ ಭೇಟಿಯಾಗಿ ಚರ್ಚೆ ನಡೆಸಲಾಗುತ್ತಿದೆ.
ಧಾರವಾಡ: ಮತ್ತೇ ಮಹದಾಯಿ ಹೋರಾಟ ಮುನ್ನಲೆಗೆ ಬಂದ ವಿಚಾರವಾಗಿ ಮಾತನಾಡಿದ ನವಲಗುಂದ ಶಾಸಕ ಎನ್.ಎಚ್. ಕೋನರೆಡ್ಡಿ, ರೈತರಿಗೆ ನಮ್ಮ ವಿರುದ್ಧ ಹೋರಾಟ ಮಾಡಲು ಬೇಡ ಎಂದಿಲ್ಲ. ಕೇಂದ್ರ ಅರಣ್ಯ ಇಲಾಖೆ ಅನುಮತಿ ಕೊಡಬೇಕು. ಅನುಮತಿ ಕೊಟ್ಟರೆ ನಾಳೆಯೇ ಕೆಲಸ ಆರಂಭ ಆಗುತ್ತದೆ. ನಾವೇ ರೈತರ ಪರ ಹೋರಾಟ ಮಾಡುತ್ತೇವೆ. ನಾವು ಯೋಜನೆ ಜಾರಿ ಆಗಲಿ ಎನ್ನುವವರು, ನನ್ನ ಹೋರಾಟ ಇರುವುದೇ ಇದಕ್ಕಾಗಿ. ನಾನು ಟೀಕೆ ಟಿಪ್ಪಣಿ ಮಾಡುವುದಿಲ್ಲ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಪ್ರಧಾನಿಗೆ ಆತ್ಮೀಯರು. ಈ ಅನುಮತಿ ಕೊಡಿಸುವುದು ಅವರಿಗೆ ದೊಡ್ಡ ಕೆಲಸವಲ್ಲ. ರಾಜ್ಯದ ಹಿತಕ್ಕಾಗಿ ಅನುಮತಿ ಕೊಡಿಸಬೇಕು. ಇದಕ್ಕಿಂತ ದೊಡ್ಡ ಮಾತು ಏನಿಲ್ಲ. ಅದರ ಕ್ರೆಡಿಟ್ ಬೇಕಾದರೆ ನೀವೇ ತೆಗೆದುಕೊಳ್ಳಿ. ಆದರೆ ಲೋಕಸಭಾ ಚುನಾವಣೆ ಮೊದಲು ಇದನ್ನು ಮಾಡಲಿ ಎಂದರು.
ಸರ್ಕಾರ ಬಂದ ಮೇಲೆ ಸ್ಕಾಂಡಲ್ ಶುರುವಾಗಿದೆ. ವರ್ಗಾವಣೆ ದಂಧೆ, ಕಮಿಷನ್ ಆರೋಪವಿದೆ. ಒಂದೇ ಒಂದು ಸಾಕ್ಷಿ ನೀಡದೆ ನಮ್ಮ ಮೇಲೆ ಆರೋಪ ಮಾಡಿದ್ದರು. ಮಾನನಷ್ಟ ಮೊಕ್ಕದಮ್ಮೆ ಹಾಕಿದಾಗಲೂ ಸಾಕ್ಷಿ ಕೊಡಲಿಲ್ಲ. ಈಗ ತನಿಖೆಗೆ ಕೊಡಿ ಎಂದು ಮಾಜಿ ಸಚಿವ ಆರ್ ಅಶೋಕ ಹೇಳಿದರು. ನಿಮ್ಮ ಲೆಕ್ಕದಲ್ಲಿ ಎಲ್ಲರೂ ಕಳ್ಳರಾ? ನಿಮ್ಮ ಸರ್ಕಾರ ಬಂದ ಮೇಲೆ ಎಲ್ಲರೂ ಸತ್ಯ ಹರಿಶ್ಚಂದ್ರರು. 5 ರಿಂದ 10 ಜನ ಕಳ್ಳರಿಹಬಹುದು, ಹಾಗಾಂತ ಎಲ್ಲರನ್ನು ತಡೆ ಹಿಡಿದರೆ ಎಷ್ಟರ ಮಟ್ಟಿಗೆ ಸರಿ? ಕಾಂಗ್ರೆಸ್‌ನವರು ನಿಜವಾದ ಹರಿಶ್ಚಂದ್ರದ ಮೊಮ್ಮಕ್ಕಳಾಗಿದ್ದರೆ ನಿಮ್ಮ ಸರ್ಕಾರದ ಅವಧಿಯ ಬಗ್ಗೆ ಕೂಡ ತನಿಖೆ ಮಾಡಿ, 2013-2018 ರ ಅವಧಿಯನ್ನು ತನಿಖೆ ಮಾಡಿಸಿ. ಆಗಿನ ಟೆಂಡರ್ಗಳ ಬಗ್ಗೆ ಕೂಡ ತನಿಖೆ ಮಾಡಿ ಎಂದು ಸವಾಲು ಹಾಕಿದರು.
ಸರ್ಕಾರದ ವಿರುದ್ಧ ಗುತ್ತಿಗೆದಾರರಿಂದ ಕಮಿಷನ್ ಆರೋಪ ವಿಚಾರವಾಗಿ ಮಾತನಾಡಿದ ಸಚಿವ ಹೆಚ್ಕೆ ಪಾಟೀಲ್, ಬಿಲ್ ಬಿಡುಗಡೆ ಆಗಿಲ್ಲ ಅಂತಾ ಗುತ್ತಿಗೆದಾರರು ಆರೋಪಿಸಿದ್ದಾರೆ. ಕಮಿಷನ್ ಬಗ್ಗೆ ಎಲ್ಲೂ ಗುತ್ತಿಗೆದಾರರು ಮಾತಾಡಿಲ್ಲ. ಆರೋಪಕ್ಕೆ ಈಗಾಗಲೇ ಸಂಬಂಧಪಟ್ಟ ಸಚಿವರು ಉತ್ತರ ಕೊಟ್ಟಿದ್ದಾರೆ. ಐದು ಗ್ಯಾರಂಟಿ ಯೋಜನೆಗಳಿಂದ ನಮ್ಮ ವಿಶ್ವಸಾರ್ಹತೆ ಹೆಚ್ಚುತ್ತಿದೆ. ಗುತ್ತಿಗೆದಾರರು ಆರೋಪ ಮಾಡಿದ್ದು ಸುಳ್ಳು ಎಂದರು. ಯಾವುದೇ ಆಧಾರರಹಿತ ಆರೋಪ ಮಾಡಿದರೆ ನಾನು ಖಂಡಿಸುತ್ತೇನೆ. ಕೃಷಿ ಸಚಿವರ ವಿರುದ್ಧ ಲೆಟರ್ ಬರೆದಿದ್ದು ಸುಳ್ಳು ಅಂತಾ ಗೊತ್ತಾಯ್ತು ಎಂದರು.
ಚಿಕ್ಕಮಗಳೂರು ನಗರದ ಐ.ಡಿ.ಎಸ್.ಜಿ. ಕಾಲೇಜಿನಲ್ಲಿ ಹಿಜಾಬ್ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಬುರ್ಖಾ, ಹಿಜಾಬ್ ಧರಿಸಿ ಕ್ಲಾಸ್ ರೂಮಿನಲ್ಲಿ ಕುಳಿತಿರುವ ವಿಡಿಯೋ ವೈರಲ್ ಆಗಿದೆ. ವಿದ್ಯಾರ್ಥಿನಿಯರು ಬುರ್ಖಾ ಧರಿಸಿ ತರಗತಿಯಲ್ಲಿ ಪಾಠ ಕೇಳ್ತಿದ್ದಾರೆ. ಬುರ್ಖಾ ಧರಿಸಿ ಕಾಲೇಜಿನ ಕಾರಡಾರ್ ನಲ್ಲಿ ಓಡಾಡ್ತಿದ್ದಾರೆ. ಶಿಕ್ಷಕಿ ಕೂಡ ಬುರ್ಖಾ ಧರಿಸಿಯೇ ಪಾಠ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಭಗವಂತ ಖೂಬಾಗೆ ನನ್ನ ಮೇಲೆ ಕೋಪವಿದ್ರೆ ಗುಂಡಿಕ್ಕಿ ಹತ್ಯೆಮಾಡಲಿ. ಆದರೆ ನಮ್ಮ ಪಕ್ಷ, ಕಾರ್ಯಕರ್ತರಿಗೆ ಖೂಬಾ ದ್ರೋಹ ಮಾಡದಿರಲಿ ಎಂದು ಕೇಂದ್ರ ಸಚಿವ ಭಗವಂತ ಖೂಬಾ ವಿರುದ್ಧ ಪ್ರಭು ಚೌಹಾಣ್ ವಾಗ್ದಾಳಿ ನಡೆಸಿದರು. ಭಗವಂತ ಖೂಬಾ ನನ್ನನ್ನು ಸೋಲಿಸಲು ಸಾಕಷ್ಟು ಪ್ರಯತ್ನ ಮಾಡಿದರು. ವಿಫಲವಾಗಿ ಗೂಂಡಾಗಳನ್ನು ಬಿಟ್ಟು ನನ್ನ ಹತ್ಯೆಗೆ ಸಂಚು ಮಾಡುತ್ತಿದ್ದಾರೆ. ನನ್ನನ್ನು ಕೊಂದು 6 ತಿಂಗಳಲ್ಲಿ ಉಪ ಚುನಾವಣೆಗೆ ಕುತಂತ್ರ ಮಾಡ್ತಿದ್ದಾರೆ. ರಸ್ತೆ ಮಧ್ಯೆ ಗುಂಡುಹಾರಿಸಿ ಕೊಲೆ ಮಾಡಿಸಲು ಸಂಚು ರೂಪಿಸಲಾಗಿದೆ. ಕೇಂದ್ರ ಸಚಿವ ಭಗವಂತ ಖೂಬಾ ಬೆಂಬಲಿಗರಿಂದಲೇ ನನಗೆ ಗೊತ್ತಾಗಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ವಿರುದ್ಧ ಪ್ರಭು ಚೌಹಾಣ್ ಆರೋಪ ಮಾಡಿದ್ದಾರೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ತಿಟ್ಟಮಾರನಹಳ್ಳಿ ಗ್ರಾಮದ ಬಳಿ ಹಾಲು ಸಾಗಿಸುತ್ತಿದ್ದ ಲಾರಿಗೆ ಡಿಕ್ಕಿಯಾಗಿ ಕಾರು ರಸ್ತೆ ಪಕ್ಕ ಉರುಳಿಬಿದ್ದ ಘಟನೆ ನಡೆದಿದೆ. ಕಾರಿನಲ್ಲಿದ್ದ ಐವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಚನ್ನಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುತ್ತಿಗೆದಾರರು 3-4 ಸಚಿವರ ಮೇಲೆ ಕಮಿಷನ್ ಆರೋಪ ಮಾಡ್ತಿದ್ದಾರೆ. ಗ್ಯಾರಂಟಿ ಹೆಸರೇಳಿ ಜನರ ಕಿವಿಗೆ ಹೂವಿಟ್ಟು ಅಧಿಕಾರಕ್ಕೆ ಬಂದರು ಎಂದು ಬೆಂಗಳೂರಿನಲ್ಲಿ ಶಿಕಾರಿಪುರ ಕ್ಷೇತ್ರದ ಶಾಸಕ ಬಿ.ವೈ.ವಿಜಯೇಂದ್ರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈಗ ರಾಜ್ಯ ಜನರಿಗೆ ಮೋಸ ಮಾಡಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ರಾಜ್ಯದ ಜನತೆ ಈ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಯಾರೇ ಲಂಚ ಕೇಳಿದ್ರೂ ನನ್ನ ಗಮನಕ್ಕೆ ತನ್ನಿ ಅಂತಾ ಡಿಕೆ ಹೇಳಿದ್ರು. ಡಿಕೆ ಗಮನಕ್ಕೆ ತಂದ್ರೆ ಯಾವ ಪರಿಸ್ಥಿತಿ ಬರುತ್ತೆ ಅಂತಾ ಅರ್ಥವಾಗಿದೆ. ತಮ್ಮ ಜೇಬು ತುಂಬಿಸಿ, ಕಾಂಗ್ರೆಸ್‌ನವರ ಜೇಬನ್ನೂ ತುಂಬುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
KSOU ವ್ಯವಸ್ಥಾಪನಾ ಮಂಡಳಿ ಸದಸ್ಯರಾಗಿ ಶಾಸಕರನ್ನು ನೇಮಿಸಲಾಗಿದೆ. ಶಾಸಕರಾದ ಚಾಮರಾಜ ಶಾಸಕ ಹರೀಶ್ಗೌಡ, K.R.ನಗರ ಶಾಸಕ ರವಿಶಂಕರ್ ನೇಮಿಸಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಕುಲಸಚಿವ ಆದೇಶ ಹೊರಡಿಸಿದ್ದಾರೆ.
ಉಡುಪಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಕೇಸ್ಗೆ ಸಂಬಂಧಿಸಿ ಇಂದು ಉಡುಪಿಗೆ ಸಿಐಡಿ ಎಡಿಜಿಪಿ ಮನೀಶ್ ಕರ್ಬೀಕರ್ ಭೇಟಿ ನೀಡಲಿದ್ದಾರೆ. ಸಿಐಡಿ ತಂಡ ಕಳೆದ 2 ದಿನಗಳಿಂದ ಉಡುಪಿಯಲ್ಲಿ ಬೀಡು ಬಿಟ್ಟಿದೆ. ಉಡುಪಿ ಎಸ್ಪಿ ಕಚೇರಿಯಲ್ಲಿ ಮಧ್ಯಾಹ್ನ 12.30ಕ್ಕೆ ಮಹತ್ವದ ಸಭೆ ನಡೆಯಲಿದೆ. ಎಡಿಜಿಪಿ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಲಿದ್ದಾರೆ.
ಗ್ಯಾರಂಟಿ ಯೋಜನೆಗೆ SCP, TSP ಹಣ ಬಳಕೆ ಆರೋಪ ವಿಚಾರಕ್ಕೆ ಸಂಬಂಧಿಸಿ SCP, TSP ಬಗ್ಗೆ ಬಿಜೆಪಿಯವರು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎಂದು ಬೆಂಗಳೂರಿನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಅವಧಿಯಲ್ಲಿ SCP-TSP $10 ಸಾವಿರ ಕೋಟಿ ಬಳಕೆ ಆಗಿತ್ತು. ನಾವು ಗ್ಯಾರಂಟಿ ಯೋಜನೆಗೆ ಅದನ್ನೇ ಬಳಸಿಕೊಳ್ತಿದ್ದೇವೆ. ಕಾನೂನು ಬಿಟ್ಟು ಏನು ಮಾಡ್ತಿಲ್ಲ, ಕಾನೂನು ಉಲ್ಲಂಘನೆಯೂ ಆಗಿಲ್ಲ. ಎಸ್ಸಿ, ಎಸ್ಟಿ ಹಣ ದುರುಪಯೋಗ ಆಗುತ್ತಿಲ್ಲ ಎಂದರು.
ಬಿಬಿಎಂಪಿ ವ್ಯಾಪ್ತಿಯ ಕಾಮಗಾರಿ ತನಿಖೆಗೆ ಸಮಿತಿ ರಚನೆ ಆಗಿದೆ ಎಂದು ಬೆಂಗಳೂರಿನಲ್ಲಿ ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ತನಿಖಾ ವರದಿ ಬಂದ ಮೇಲೆ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಲಾಗುತ್ತೆ. ಇನ್ನೂ ಬಿಲ್ ಕೊಟ್ಟಿಲ್ಲ, ಆಗಲೇ ಕಮಿಷನ್ ಆರೋಪ ಮಾಡ್ತಿದ್ದಾರೆ. ಬಿಜೆಪಿಯವರು ನೈತಿಕ ಹಕ್ಕು ಕಳೆದುಕೊಂಡಿದ್ದಾರೆ. ಗುತ್ತಿಗೆದಾರರ ಹಣ ಬಿಡುಗಡೆ ಮಾಡಬೇಕು ಅಂತಾ ನಾನು ಹೇಳ್ತೇನೆ. ಬಿಜೆಪಿ ಮೇಲಿದ್ದ 40 ಪರ್ಸೆಂಟ್ ಕಮಿಷನ್ ಆರೋಪ ಸತ್ಯ. ಆದರೆ ಈಗ ಮಾಡುತ್ತಿರುವ 15% ಕಮಿಷನ್ ಆರೋಪ ಸುಳ್ಳು ಎಂದರು.
ಡಿ.ಕೆ.ಶಿವಕುಮಾರ್ ವಿರುದ್ಧ 15% ಕಮಿಷನ್ ಆರೋಪ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ವಿರುದ್ಧ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ಹೊರ ಹಾಕಿದ್ದಾರೆ. ಬಿಜೆಪಿ ನಾಯಕರು ಹತಾಶೆಯಿಂದ ಆರೋಪ ಮಾಡುತ್ತಿದ್ದಾರೆ. ಎಲ್ಲಿ ಹೋಗಿ ಧ್ವನಿ ಎತ್ತಬೇಕೋ ಅಲ್ಲಿ ಇವರು ಮಾತಾಡುತ್ತಿಲ್ಲ. ಮೊದಲು ಬಿಜೆಪಿಯವರು ವಿಪಕ್ಷ ನಾಯಕರನ್ನು ಆಯ್ಕೆ ಮಾಡಲಿ. ಗುತ್ತಿಗೆದಾರರು ಕಮಿಷನ್ ಕೇಳಿದ್ದಾರೆ ಅಂತಾ ಹೇಳಿಲ್ಲ. ಬಾಕಿ ಬಿಲ್ ಪಾವತಿ ವಿಳಂಬ ಆಗ್ತಿದೆ ಅಂತಾ ಮಾತ್ರ ಹೇಳಿದ್ದಾರೆ. ಕೆಲಸ ಆಗಿದ್ರೆ ಹಣ ಬಿಡುಗಡೆ ಮಾಡೋದಾಗಿ ಸಿಎಂ ಹೇಳಿದ್ದಾರೆ. ಪರಿಶೀಲಿಸಿ ಹಣ ಬಿಡುಗಡೆ ಮಾಡುವುದಾಗಿ ಡಿಸಿಎಂ ಹೇಳಿದ್ದಾರೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಬಂಡೀಪುರ ಅಭಯಾರಣ್ಯಕ್ಕೆ ರಾಜ್ಯದಲ್ಲೇ ನಂಬರ್ ಓನ್ ಸ್ಥಾನ ಸಿಕ್ಕಿದೆ. ಹುಲಿ ಸಂಖ್ಯೆಯಲ್ಲಿ ಅಗ್ರಜ ಸ್ಥಾನ ಪಡೆದಿದ್ದ ಬಂಡೀಪುರಕ್ಕೆ ಮತ್ತೊಂದು ಹೆಮ್ಮೆಯ ಮುಕುಟ ಸಿಕ್ಕಿದೆ. ಹುಲಿ ಆಯ್ತು ಈಗ ಆನೆಗಳ ಸಂಖ್ಯೆಯಲ್ಲಿಯೂ ಬಂಡೀಪುರಕ್ಕೆ ನಂಬರ್ ಓನ್ ಸ್ಥಾನ ಸಿಕ್ಕಿದೆ. ರಾಜ್ಯದಲ್ಲೇ ಅತಿ ಹೆಚ್ಚು ಆನೆಗಳು ಹೊಂದಿರುವ ಪ್ರದೇಶ ಎಂಬ ಖ್ಯಾತಿ ಪಡೆದಿದೆ. ರಾಜ್ಯದಲ್ಲಿ ಒಟ್ಟು ಆನೆಗಳ ಸಂಖ್ಯೆ ಬರೋಬ್ಬರಿ 6,395. ಬಂಡೀಪುರ ಒಂದರಲ್ಲೇ 1116 ಆನೆಗಳು ಪತ್ತೆಯಾಗಿವೆ.
ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಅಕ್ರಮ ವಿಚಾರಕ್ಕೆ ಸಂಬಂಧಿಸಿ ಟಿವಿ9 ವರದಿ ಬೆನ್ನಲ್ಲೇ ಕಾರಾಗೃಹದ ಇಬ್ಬರು ಸಿಬ್ಬಂದಿ ಅಮಾನತು ಮಾಡಲಾಗಿದೆ. ಹೆಡ್ ವಾರ್ಡರ್ ಬಿ.ಎಲ್.ಮೇಳವಂಕಿ, ವಾರ್ಡರ್ ವಿ.ಟಿ.ವಾಘ್ಮೋರೆ ಸಸ್ಪೆಂಡ್ ಮಾಡಿ ಉತ್ತರ ವಯಲದ ಕಾರಾಗೃಹ ಉಪಮಹಾನಿರೀಕ್ಷಕ ಟಿ.ಪಿ.ಶೇಷ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು ಗ್ರಾ. ಜಿಲ್ಲೆ ದೊಡ್ಡಬಳ್ಳಾಪುರ ನಗರದ ಎಪಿಎಂಸಿ ಮಾರುಕಟ್ಟೆ ಬಳಿ ಬೈಕ್ಗೆ ಲಾರಿಗೆ ಡಿಕ್ಕಿ ಹೊಡೆದಿದೆ. ಬೈಕ್ ಚಲಾಯಿಸುತ್ತಿದ್ದ ತಂದೆ ಸ್ಥಳದಲ್ಲೇ ಮೃತಪಟ್ಟಿದ್ದು ಮಗಳಿಗೆ ಗಾಯಗಳಾಗಿವೆ. ವೆಂಕಟೇಶ್(45) ಸಾವು, ಪುತ್ರಿ ಯಶಸ್ವಿನಿ(15) ಗಂಭೀರ ಗಾಯ. ಅಪಘಾತ ಬಳಿಕ ಚಾಲಕ ಪರಾರಿಯಾಗಿದ್ದು ಲಾರಿ ಜಪ್ತಿ ಮಾಡಲಾಗಿದೆ.
ಮಂಡ್ಯ ತಾಲೂಕಿನ ಹೊಸ ಬೂದನೂರು ಗ್ರಾಮದಲ್ಲಿ ನಿರ್ಮಾಪಕ ಚಂದ್ರಶೇಖರ್ ಮನೆ ಬಾಗಿಲು ಮುರಿದು ಕಳ್ಳತನ ಮಾಡಲಾಗಿದೆ. ಮನೆಯಲ್ಲಿದ್ದ 3 ಲಕ್ಷ ನಗದು, 35 ಗ್ರಾಂ ಚಿನ್ನ ದೋಚಿ ಖದೀಮರು ಪರಾರಿಯಾಗಿದ್ದಾರೆ. ನಿರ್ಮಾಪಕ ಚಂದ್ರಶೇಖರ್ ಬೆಂಗಳೂರಿನಲ್ಲಿ ವಾಸವಾಗಿದ್ದರು. ಸ್ಥಳಕ್ಕೆ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಾದಗಿರಿ ತಾಲೂಕಿನ ಬಸವಂತಪುರ ಸರ್ಕಾರಿ ಪ್ರೌಢಶಾಲೆ ಮುಂದೆ ವಾಮಾಚಾರ ಮಾಡಲಾಗಿದೆ. ನಿಂಬೆಹಣ್ಣು, ತೆಂಗಿನಕಾಯಿ, ಕುಂಕುಮ ಇಟ್ಟು ಕಿಡಿಗೇಡಿಗಳು ವಾಮಾಚಾರ ಮಾಡಿದ್ದಾರೆ ಎನ್ನಲಾಗುತ್ತಿದೆ. ಇಂದು ಬೆಳಗ್ಗೆ ವಿದ್ಯಾರ್ಥಿಗಳು ಶಾಲೆ ಬಳಿ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಎಲ್ಲಾ ಕೊಠಡಿಗಳಲ್ಲೂ ಮಾಟಮಂತ್ರ ಮಾಡಲಾಗಿದೆ.
ಮಂಡ್ಯ ತಾಲೂಕಿನ ಹಲ್ಲಗೆರೆ ಗ್ರಾ.ಪಂ. ಕಚೇರಿಯಲ್ಲಿ ಮಾರಾಮಾರಿಯಾಗಿದೆ. 2ನೇ ಅವಧಿಗೆ ಗ್ರಾ.ಪಂ. ಅಧ್ಯಕ್ಷರ ಚುನಾವಣೆ ವೇಳೆ ಕಾಂಗ್ರೆಸ್, ಜೆಡಿಎಸ್ ಬೆಂಬಲಿತ ಸದಸ್ಯರ ನಡುವೆ ಘರ್ಷಣೆಯಾಗಿದೆ. ಪರಸ್ಪರ ಚೇರ್ಗಳನ್ನು ತೂರಿ ಬಡಿದಾಡಿಕೊಂಡಿದ್ದಾರೆ. ಸದಸ್ಯರ ನಡುವೆ ಘರ್ಷಣೆ ಹಿನ್ನೆಲೆ ಚುನಾವಣೆ ಮುಂದೂಡಲಾಗಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಡ್ಯಾಂನಿಂದ ಇಂದಿನಿಂದಲೇ ನಾಲೆಗಳಿಗೆ ನೀರು ಬಿಡುಗಡೆ ಮಾಡಲಾಗುತ್ತೊದೆ. ನೀರಾವರಿ ಸಲಹಾ ಸಮಿತಿ ಸಭೆ ನಿರ್ಣಯದಂತೆ ನೀರು ಬಿಡುಗಡೆ ಮಾಡಲಾಗುತ್ತೆ. ದೀರ್ಘಾವಧಿ ಬೆಳೆ ಬೆಳೆಯದಂತೆ ರೈತರಿಗೆ ಅಧಿಕಾರಿಗಳು ಸೂಚಿಸಿದ್ದಾರೆ. 15 ದಿನ ನೀರು ಹರಿಸಿ, 15 ದಿನ ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ.
ಬೆಂಗಳೂರಿನ ಮುನೇಶ್ವರನಗರದಲ್ಲಿ ಮನೆ ಬಾಡಿಗೆ ಕೇಳಿದ್ದಕ್ಕೆ ಶ್ರೀದೇವಿ ಮೇಲೆ ಸದ್ದಾಂ ಎಂಬಾತ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದಾನೆ. ಫಯಾಜ್ ಎಂಬುವವರ ಕಟ್ಟಡದಲ್ಲೇ ಶ್ರೀದೇವಿ ಬಾಡಿಗೆಗೆ ಇದ್ದರು. ಫಯಾಜ್ ಕುಟುಂಬ ವಿದೇಶದಲ್ಲಿರೋದರಿಂದ ಶ್ರೀದೇವಿಗೆ ಉಸ್ತುವಾರಿ ನೀಡಿದ್ದರು. ಹಾಗಾಗಿ ಇಡೀ ಕಟ್ಟಡದ ಜವಾಬ್ದಾರಿ ತಾನೇ ನೋಡಿಕೊಂಡಿದ್ದ ಶ್ರೀದೇವಿ ಬಾಡಿಗೆ ಹಣ ಪಡೆದು ವಿದೇಶದಲ್ಲಿದ್ದ ಫಯಾಜ್ಗೆ ನೀಡುತ್ತಿದ್ದರು. ಶ್ರೀದೇವಿ ವಾಸವಾಗಿದ್ದ ಬಿಲ್ಡಿಂಗ್ನಲ್ಲೇ ವಾಸವಾಗಿದ್ದ ನಜೀರ್ ಕುಟುಂಬಕ್ಕೆ ಬಾಡಿಗೆ ನೀಡುವಂತೆ ಕೇಳಿದಾಗ ಘಟನೆ ನಡೆದಿದೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಚಿಪ್ಲಿ ಗ್ರಾಮದ ಬಳಿ ಆಹಾರ ಅರಸಿಕೊಂಡು ಕಾಡಿನಿಂದ ನಾಡಿನತ್ತ ಬಂದಿದ್ದ ಕಾಡುಕೋಣ 60 ಅಡಿ ಆಳದ ತೆರೆದ ಬಾವಿಗೆ ಬಿದ್ದಿದೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಸಿಬ್ಬಂದಿ ಹಾಗು ಅಗ್ನಿಶಾಮಕ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಕಾಡುಕೋಣಕ್ಕೆ ಅರವಳಿಕೆ ಚುಚ್ಚುಮದ್ದು ನೀಡಿ ರಕ್ಷಿಸಿದ್ದಾರೆ. ಕ್ರೇನ್ ಮೂಲಕ ಮೇಲಕ್ಕೆ ಎತ್ತಿ ಮರಳಿ ಕಾಡಿಗೆ ಬಿಟ್ಟಿದ್ದಾರೆ.
ಬಿಜೆಪಿ ಕರ್ನಾಟಕ ಸಪೋರ್ಟರ್ಸ್ ಎಂಬ ಗ್ರೂಪ್ನಿಂದ ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ‘ಪೇ ಸಿಎಸ್’ ಅಭಿಯಾನ ಮಾಡಲಾಗುತ್ತಿದೆ. ನಮ್ಮಲ್ಲಿ ಪೇಟಿಎಂ ಕೂಡ ಲಭ್ಯವಿದೆ. ಧಾರಾಳವಾಗಿ ಸ್ಕ್ಯಾನ್ ಮಾಡಿ, ಲಂಚ ಪಾವತಿ ಮಾಡಿ ಧನ್ಯವಾದಗಳು. ಇಂತಿ ನಿಮ್ಮ ಭ್ರಷ್ಟ ಚಲುವರಾಯಸ್ವಾಮಿ ಅಲಿಯಾಸ್ ಲಂಚ ಸ್ವಾಮಿ ಎಂದು ಬಿಜೆಪಿ ಕರ್ನಾಟಕ ಸಪೋರ್ಟರ್ಸ್ ಎಂಬ ಗ್ರೂಪ್ನಿಂದ ಪೋಸ್ಟ್ ಹರಿದಾಡುತ್ತಿದೆ.
ಬೆಂಗಳೂರಿನಲ್ಲಿ ವಿದೇಶಿ ಪ್ರಜೆ ಸೇರಿ 7 ಡ್ರಗ್ ಪೆಡ್ಲರ್ಗಳನ್ನು ಬಂಧಿಸಲಾಗಿದೆ. ಆರೋಪಿಗಳಾದ ಸಾಹಿಲ್, ನಾಸಿರ್, ಆದಂ ಖಾನ್, ಸಮೀರ್, ನೈಜೀರಿಯಾ ಮೂಲದ ಹ್ಯಾಪಿನೆಸ್ ಎಂಬ ಮಹಿಳೆ ಸೇರಿ 7 ಜನ ಅರೆಸ್ಟ್ ಆಗಿದ್ದಾರೆ. ಬಂಧಿತ ಆರೋಪಿಗಳಿಂದ 300 ಗ್ರಾಂ ಎಂಡಿಎಂಎ ಮಾತ್ರೆ ಜಪ್ತಿ ಮಾಡಲಾಗಿದೆ.
ಭ್ರಷ್ಟಾಚಾರ ಮುಚ್ಚಿ ಹಾಕಲು ಸರ್ಕಾರ ಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದು ಆಶ್ಚರ್ಯಕರ ಸಂಗತಿ ಎಂದು ಬಾಗಲಕೋಟೆಯಲ್ಲಿ ಮಾಜಿ ಸಚಿವ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದ್ದಾರೆ. ಸಿಡಿ ಬಂದಾಗ ಕೋರ್ಟ್ನಿಂದ ಸ್ಟೇ ತಂದಿರುವುದು ನೋಡಿದ್ದೇವೆ. ಆದರೆ ಭ್ರಷ್ಟಾಚಾರ ಪ್ರಕರಣದ ಸುದ್ದಿಮಾಡಬಾರದು ಅಂತ ತಡೆಯಾಜ್ಞೆ ತಂದಿದ್ದಾರೆ. 75 ವರ್ಷದ ಇತಿಹಾಸದಲ್ಲಿ ಇದೇ ಮೊದಲು ಈ ರೀತಿ ಆಗಿರೋದು ಎಂದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಭೂ ಹಗರಣದ ತನಿಖೆ ಆರಂಭವಾಗಿದೆ. ಕಡೂರು, ಮೂಡಿಗೆರೆ ತಾಲೂಕಿನಾದ್ಯಂತ ಸರ್ಕಾರಿ ಭೂಮಿ ಒತ್ತುವರಿ, ಅಕ್ರಮ ಭೂ ಮಂಜೂರಾತಿ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಭೂ ಅಕ್ರಮದ ತನಿಖೆಗೆ 15 ತಹಶೀಲ್ದಾರ್ಗಳ ನೇತೃತ್ವದ ತಂಡ ರಚನೆಯಾಗಿದೆ. ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿಯನ್ನು ಕಬಳಿಸಿರುವ ಆರೋಪ ಸಂಬಂಧ ತಹಶೀಲ್ದಾರ್ ಗ್ರೇಡ್ 1, ಗ್ರೇಡ್2 ತಹಶೀಲ್ದಾರ್ ತಂಡದಿಂದ ತನಿಖೆ ನಡೆಯಲಿದೆ.
ಬೆಂಗಳೂರಿನ ಚಿಕ್ಕಬಾಣಾವರ ರೈಲ್ವೆ ನಿಲ್ದಾಣದ ಬಳಿ ವಿದ್ಯಾರ್ಥಿಗಳಿಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳ ಮೂಲದ ಉನ್ನಿಸುರೇಶ್(24) ಬಂಧಿತ ಆರೋಪಿ. ಬಂಧಿತನ ಬಳಿ ಇದ್ದ 70 ಸಾವಿರ ಮೌಲ್ಯದ MDMA ವಶಕ್ಕೆ ಪಡೆಯಲಾಗಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆಯಲ್ಲಿ ಕತ್ತಿಗೆ ವೇಲ್ನಿಂದ ಬಿಗಿದು ಪತಿಯಿಂದಲೇ ಪತ್ನಿಯ ಹತ್ಯೆಯಾಗಿದೆ. ಪತ್ನಿ ಪೂಜಾ(28) ಕೊಲೆ ಮಾಡಿ ಮೃತದೇಹವನ್ನು ನಾಲೆಗೆ ಎಸೆದು ಪತಿ ಶ್ರೀನಾಥ್(32) ಪರಾರಿಯಾಗಿದ್ದಾನೆ. ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು: ಯಾದವಗಿರಿ ಬಡಾವಣೆ ನಿವಾಸಿ ಕಣ್ಣನ್ ಎಂಬುವರಿಗೆ ವಿದ್ಯುತ್ ಬಿಲ್ ಪಾವತಿಸುವಂತೆ ಮೆಸೇಜ್ ಕಳುಹಿಸಿ 5.48 ಲಕ್ಷ ರೂ. ವಂಚನೆ ಮಾಡಲಾಗಿದೆ. ವಿದ್ಯುತ್ ಬಿಲ್ ಬಾಕಿ ಇದೆ ಪಾವತಿಸುವಂತೆ ದೂರವಾಣಿ ಕರೆ ಮಾಡಿದ್ದ ವಂಚಕರು ನಂತರ ಲಿಂಕ್ ಕಳುಹಿಸಿ ಹಣ ಪಾವತಿಸುವಂತೆ ತಿಳಿಸಿದ್ದಾರೆ. ಲಿಂಕ್ ಮೂಲಕ ಸಂಪೂರ್ಣ ಮಾಹಿತಿ ಪಡೆದು ಖಾತೆಯಿಂದ 5,48,149 ರೂ. ಡ್ರಾ ಮಾಡಿಕೊಂಡಿದ್ದಾರೆ. ಮೈಸೂರು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು: ನಗರದ ಕೆಆರ್ಎಸ್ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಗಾಂಜಾ ಸಾಗಿಸುತ್ತಿದ್ದ ರಾಜೀವ್ ನಗರದ ಆರೋಪಿ ಜುಬೇರ್(21)ನನ್ನು ಪೊಲೀಸರು ಬಂಧಿಸಿದ್ದು ಮತ್ತೊಬ್ಬ ಆರೋಪಿ ಆಸೀಫ್ ಪರಾರಿಯಾಗಿದ್ದಾನೆ. ಬಂಧಿತ ಆರೋಪಿ ಬಳಿಯಿದ್ದ 9 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ. ದೇವರಾಜ ಠಾಣೆ ಇನ್ಸ್ಪೆಕ್ಟರ್ ಟಿ.ಬಿ.ಶಿವಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ಚಿತ್ರದುರ್ಗದಲ್ಲಿ ಕಲುಷಿತ ನೀರು ಸೇವಿಸಿ 6 ಜನರು ಸಾವು ಪ್ರಕರಣಕ್ಕೆ ಸಂಬಂಧಿಸಿ ಕಲುಷಿತ ನೀರು ಸೇವನೆಯಿಂದ ಈವರೆಗೆ 226 ಜನರು ಅಸ್ವಸ್ಥಗೊಂಡಿದ್ದಾರೆ. ಚಿತ್ರದುರ್ಗ ಜಿಲ್ಲಾಸ್ಪತ್ರೆ, ಬಸವೇಶ್ವರ ಆಸ್ಪತ್ರೆಯಲ್ಲಿ ಅಸ್ವಸ್ಥರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದುವರೆಗೆ ಚಿಕಿತ್ಸೆ ಪಡೆದು ಗುಣಮುಖರಾಗಿರುವ 188 ಜನರು. ಅಸ್ವಸ್ಥ 33 ಜನರಿಗೆ ಜಿಲ್ಲಾಸ್ಪತ್ರೆ, ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ವಾಂತಿ, ಭೇದಿಯಿಂದ ಅಸ್ವಸ್ಥರಾಗಿ ದಾಖಲಾಗುವವರ ಸಂಖ್ಯೆ ಇಳಿಕೆಯಾಗಿದೆ ಎಂದು ಚಿತ್ರದುರ್ಗ ಜಿಲ್ಲಾ ಆರೋಗ್ಯಾಧಿಕಾರಿ ರಂಗನಾಥ್ ಮಾಹಿತಿ ನೀಡಿದ್ದಾರೆ.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ರೇವುನಾಯ್ಕ್ ತಾಂಡಾಕ್ಕೆ ಬೇಟಿ ನೀಡಿದ್ದ ಡಿಸಿ ಸುಶೀಲಾ ಬಿ ಅವರು ಶಿಕ್ಷಕಿಯಾಗಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಪಾಠ ಮಾಡಿದರು. ರೇವುನಾಯ್ಕ ತಾಂಡಾ ಮಕ್ಕಳಿಗೆ ಪಾಠ ಮಾಡಿ ಗಮನ ಸೆಳೆದರು. ಪಾಠದ ಜೊತೆಗೆ ತಾಂಡಾ ಮಕ್ಕಳಿಗೆ ಶಬ್ದಗಳ ಪರಿಚಯ ಮಾಡಿಸಿಕೊಟ್ಟರು.
ಗದಗ ನಗರಸಭೆ ಕಂದಾಯ ಅಧಿಕಾರಿ ಮಹೇಶ ಹಡಪದ ಅಮಾನತು ಆದ ಅಧಿಕಾರಿಗೆ ಮುಖ್ಯಾಧಿಕಾರಿಯಾಗಿ ಬಡ್ತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ಬಾಗಲಕೋಟೆ ಜಿಲ್ಲೆ ಕೆರೂರ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯಾಗಿ ನಿಯೋಜನೆ ಮಾಡಿದೆ. ಕಾನೂನು ಉಲ್ಲಂಘಿಸಿ ಫಾರ್ಮ್ 3 ನೀಡಿ ಕರ್ತವ್ಯ ಲೋಪ ಎಸಗಿದ್ದಾರೆಂದು 25 ಜುಲೈ ರಂದು ಅಮಾನತು ಮಾಡಿ ಡಿಸಿ ವೈಶಾಲಿ ಆದೇಶ ಮಾಡಿದ್ರು.
ಬೆಂಗಳೂರಿನಲ್ಲಿ ಉಬರ್ ಚಾಲಕನಿಂದ ಮಹಿಳೆ ಮೇಲೆ ಹಲ್ಲೆ ನಡೆದಿದೆ. ಮಗನನ್ನು ಆಸ್ಪತ್ರೆಗೆ ಕರೆದೊಯ್ಯಲು ಕ್ಯಾಬ್ ಬುಕ್ ಮಾಡಿದ್ದ ಮಹಿಳೆ. ಈ ವೇಳೆ ಬುಕ್ ಮಾಡಿದ್ದ ಸ್ಥಳಕ್ಕೆ ಮತ್ತೊಂದು ಕ್ಯಾಬ್ ಬಂದಿದೆ. ಆಗ ಮಹಿಳೆ ಮತ್ತು ಮಗ ಕ್ಯಾಬ್ ಹತ್ತಿ ಕುಳಿತಿದ್ದಾರೆ. ಬೇರೆ ಕ್ಯಾಬ್ ಎಂದು ಗೊತ್ತಾಗಿ ಕ್ಯಾಬ್ನಿಂದ ಇಳಿಯಲು ಯತ್ನಿಸಿದ್ದಾರೆ. ಈ ವೇಳೆ ಕಾರು ಚಲಾಯಿಸಲು ಚಾಲಕ ಮುಂದಾಗಿದ್ದು ಬಳಿಕ ದಿಢೀರನೆ ಕ್ಯಾಬ್ ನಿಲ್ಲಿಸಿ ಮಹಿಳೆ ಮೇಲೆ ಹಲ್ಲೆಗೈದಿದ್ದಾನೆ. ಕೂಡಲೇ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ. ಘಟನೆಯ ದೃಶ್ಯ ಅಪಾರ್ಟ್ಮೆಂಟ್ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ವಿಶೇಷ ವೇಷಭೂಷಣ ಧರಿಸಿ ಬೈಕ್ನಲ್ಲಿ ಸ್ಟಂಟ್ ಮಾಡುತ್ತಾ ರೀಲ್ಸ್ ಮಾಡುತ್ತಿದ್ದ ಯುವಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕಲರ್ ಫುಲ್ ಆಗಿ ಬೈಕ್ ಆಲ್ಟರ್ ಮಾಡಿ ಕೆಐಎಎಲ್ ಏರ್ಪೋರ್ಟ್ ರಸ್ತೆಯಲ್ಲಿ ಸಿಗ್ನಲ್ ಜಂಪ್ ಮಾಡಿ ಬೈಕ್ ಗೆ ಕಾರು ತಾಕಿಸಿದ ಎಂಬ ಕಾರಣಕ್ಕೆ ಕಾರನ್ನ ಹಿಂಬಾಲಿಸಿ ಕನ್ನಡಿ ಹೊಡೆದು ಹಾಕಿದ್ದ ಬೈಕ್ ಸವಾರನನ್ನು ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಹೆಚ್ಚುತ್ತಿದೆ. ಸಂಚಾರ ನಿಯಮ ಉಲ್ಲಂಘನೆ ತಡೆಗಟ್ಟಲು ಸಂಚಾರ ಪೊಲೀಸರು ವಿನೂತನ ಅಭಿಯಾನ ಹಮ್ಮಿಕೊಂಡಿದ್ದಾರೆ. ಮನೆ ಮನೆಗೆ ತೆರಳಿ ದಂಡ ವಸೂಲಿ ಮಾಡುತ್ತಿದ್ದಾರೆ. ಸಂಚಾರ ನಿಯಮ ಉಲ್ಲಂಘನೆ ಫೋಟೋ ಜೊತೆ ತೆರಳಿ ದಂಡ ವಸೂಲಿ ಮಾಡುತ್ತಿದ್ದಾರೆ.
ಮೈಸೂರು ಜಿಲ್ಲೆ ನರಸೀಪುರ ತಾಲೂಕಿನಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ತಾಲೂಕಿನ ತುರುಗನೂರು ಗ್ರಾಮದ ಸಮೀಪದ ಕಿರು ಅರಣ್ಯ ಪ್ರದೇಶದ ಬಳಿ ಚಿರತೆ ದಾಳಿಗೆ ಮೇಕೆ ಬಲಿಯಾಗಿದೆ. ಚಿರತೆ ಮೇಕೆ ಮೇಲೆ ದಾಳಿ ಮಾಡಿ ಕೊಂದು ಹಾಕಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆ ಸೆರೆಗೆ ಬೋನು ಅಳವಡಿಸಲಾಗಿದೆ.
ಕೊಬ್ಬರಿ ಬೆಲೆ ನಿರಂತರವಾಗಿ ಕುಸಿತ ಹಿನ್ನೆಲೆ ಕ್ವಿಂಟಾಲ್ ಗೆ 20 ಸಾವಿರ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಇಂದು ತಿಪಟೂರು ಬಂದ್ಗೆ ಕರೆ ಕೊಡಲಾಗಿದೆ. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜೊತೆಗೆ ವಿವಿಧ ರೈತ ಪರ ಸಂಘಟನೆಗಳಿಂದ ತಿಪಟೂರು ಬಂದ್ ಗೆ ಕರೆ ಕೊಟ್ಟಿದ್ದಾರೆ. ತೆಂಗು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ ಯಾರು ಸ್ಪಂದಿಸುತ್ತಿಲ್ಲ ಎಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಬಂದ್ ಗೆ ಕರೆ ನೀಡಿದ್ದಾರೆ.
Published On - 8:04 am, Thu, 10 August 23