Karnataka News Highlights: ಇತ್ತ ಕಾಂಗ್ರೆಸ್ನವರು(Congress) ಕೇಂದ್ರ(Central Government) ಅಕ್ಕಿ ಕೊಡಲು ನಿರಾಕರಿಸಿದೆ ಎಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ರೆ, ಮತ್ತೊಂದೆಡೆ ವಿದ್ಯುತ್ ದರ ಏರಿಕೆ ಖಂಡಿಸಿ(Electricity Hike) ಬಿಜೆಪಿ(BJP) ಪ್ರತಿಭಟನೆ ನಡೆಸುತ್ತಿದೆ. ಇದೇ ಕಾರಣಕ್ಕೆ ಧಾರವಾಡ ಬಂದ್‌ಗೆ(Dharwad Bandh) ಬಿಜೆಪಿ ಕರೆ ಕೊಟ್ಟಿದ್ದು ಬಹುತೇಕ ಎಲ್ಲ ವಲಯಗಳಿಂದ ಬೆಂಬಲ ವ್ಯಕ್ತವಾಗಿದೆ. ವರ್ತಕರು, ಎಪಿಎಂಸಿ, ಬಟ್ಟೆ ವ್ಯಾಪಾರ, ಸ್ಟೇಷನರಿ, ಹೋಟೆಲ್, ಬೇಕರಿ ಮಾಲೀಕರು, ಹಾರ್ಡ್ವೇರ್ ವ್ಯಾಪಾರಿಗಳ ಸಂಘ, ಬೇಲೂರು ಕೈಗಾರಿಕಾ ಪ್ರದೇಶದ ಉದ್ಯಮಿಗಳು ಬೆಂಬಲ ಸೂಚಿಸಿವೆ. ಇನ್ನು ಗೃಹಜ್ಯೋತಿ ಯೋಜನೆಗೆ(Gruha Jyothi Scheme) ನೋಂದಣಿ ಕಾರ್ಯ ಭರ್ಜರಿಯಾಗಿ ಸಾಗುತ್ತಿದ್ದು ಸಿಎಂ ಸಿದ್ದರಾಮಯ್ಯ(Siddaramaiah) ಅನ್ನ ಭಾಗ್ಯ(Anna Bhagya) ಜಾರಿ ಮಾಡಲು ಅವಶ್ಯಕವಿರುವ ಅಕ್ಕಿ ಬಗ್ಗೆ ನಿನ್ನೆ ದೆಹಲಿಯಲ್ಲಿ ಗೃಹ ಸಚಿವ ಅಮಿತ್ ಶಾರನ್ನು(Amit Shah) ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ಇನ್ನು ಮತ್ತೊಂದೆಡೆ ಮುಂಗಾರು(Monsoon) ಮಳೆಯಿಲ್ಲದೆ ಅನೇಕ ಜಿಲ್ಲೆಗಳಲ್ಲಿ ಬರದ ಪರಿಸ್ಥಿತಿ ಇದೆ. ಹಾಗೂ ಬೆಂಗಳೂರಿನಲ್ಲಿ ಭರ್ಜರಿ ಮಳೆಯಾಗುತ್ತಿದ್ದು ಇಡೀ ಸಿಟಿ ಕೂಲ್ ಕೂಲ್ ಆಗಿದೆ(Bengaluru Rain). ಜೂನ್ 22ರ ರಾಜಕೀಯ, ಮಳೆ ಸೇರಿದಂತೆ ರಾಜ್ಯದ ಪ್ರಮುಖ ಘಟನೆಗಳ ಕ್ಷಣ ಕ್ಷಣದ ಮಾಹಿತಿಯನ್ನು ಟಿವಿ9 ಡಿಜಿಟಲ್ ಲೈವ್ ಮೂಲಕ ಪಡೆಯಿರಿ.
ಸೇವಾಸಿಂಧು ಪೋರ್ಟಲ್ ಮೂಲಕ ಗೃಹಜ್ಯೋತಿ ಯೋಜನೆಗೆ ಇಂದು 5,89,158 ಅರ್ಜಿ ಸಲ್ಲಿಕೆಯಾಗಿದೆ. ಕಳೆದ 5 ದಿನಗಳಲ್ಲಿ ಒಟ್ಟು 20,10,486 ಅರ್ಜಿ ಸಲ್ಲಿಕೆಯಾಗಿವೆ.
ಸರ್ಕಾರದ ವಿದ್ಯುತ್ ನೀತಿ ಗ್ರಾಹಕರು, ಕೈಗಾರಿಕೋದ್ಯಮಿಗಳಿಗೆ ಮಾರಕ. ಕೈಗಾರಿಕೋದ್ಯಮಿಗಳು ಮುಷ್ಕರ ನಡೆಸಿರುವುದೇ ಇದಕ್ಕೆ ಸಾಕ್ಷಿ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ವಿದ್ಯುತ್ ಕ್ಷಾಮ ತಲೆದೋರುವ ಸಾಧ್ಯತೆ ಇದೆ. ಸರ್ಕಾರ ಕೂಡಲೇ ಅಗತ್ಯ ಹಣಕಾಸನ್ನು ಬಿಡುಗಡೆ ಮಾಡಬೇಕು. ವಿದ್ಯುತ್ ಬಳಕೆದಾರರ ಮೇಲಿನ ಹೊರೆ ಕಡಿಮೆ ಮಾಡಬೇಕು. ಪೂರ್ವ ತಯಾರಿ ಇಲ್ಲದೇ ಗ್ಯಾರಂಟಿಗಳನ್ನು ಜಾರಿ ಮಾಡಿದರೆ ಅದರ ಎಲ್ಲ ಭಾರವೂ ಜನಸಾಮಾನ್ಯರ ಮೇಲೆ ಬೀಳುತ್ತದೆ. ಈಗಿರುವ ಲೋಪವನ್ನು ಸರಿಪಡಿಸಲಿ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಗದಗ: ಮುಂಡರಗಿ ಪಟ್ಟಣದಲ್ಲಿರುವ ಐಬಿ ರೂಂಗಾಗಿ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಹಾಗೂ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಸುಜಾತಾ ದೊಡ್ಡಮನಿ ನಡುವೆ ಮಾತಿನ ಚಕಾಮಕಿ ನಡೆದಿದೆ. ಇದು ನನ್ನ ರೂಮ್ ಹೋರಗೆ ಹೋಗಿ ಅಂದಿದಕ್ಕೆ ಕೆಂಡಾಮಂಡಲವಾದ ಕಾಂಗ್ರೆಸ್ ನಾಯಕಿ ಸುಜಾತಾ ದೊಡ್ಡಮನಿ, ನೀವು ವಸೂಲಿಗಾಗಿ ಬಂದ್ದೀರಿ ಅಂತ ನಿಂದಿಸಿದ್ದಾರೆ. ಈ ವೇಳೆ ಗದ್ದಲ, ಗಲಾಟೆ ಏರ್ಪಟ್ಟಿದೆ. ಇದು ಶಾಸಕರ ಗೂಂಡಾ ವರ್ತನೆ ಅಂತ ಸುಜಾತಾ ದೊಡ್ಡಮನಿ ಆಕ್ರೋಶ ಹೊರಹಾಕಿದ್ದಾರೆ. ಶಾಸಕರು ಬಂದರೆ ನಾವು ಹೋಗಲು ಸಿದ್ದ ಇದ್ದೇವು. ಆದರೆ ಶಾಸಕರು ನಮ್ಮನ್ನು ವಸೂಲಿಗೆ ಬಂದಿರಿ ಅಂತ ನಿಂದಿಸಿದ್ದಾರೆ ಅಂತ ಆಕ್ರೋಶ ಹೊರಹಾಕಿದ್ದಾರೆ. ಇವರಿಬ್ಬರ ನಡುವಿನ ಜಗಳಕ್ಕೆ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.
ಕೋಲಾರ: ನಗರ ಸೇರಿದಂತೆ ಜಿಲ್ಲೆಯ ಕೆಲವೆಡೆ ಕಳೆದ 1 ಗಂಟೆಯಿಂದ ಮಳೆ ಸುರಿಯುತ್ತಿಯುತ್ತಿದೆ. ಮುಂಗಾರು ಮಳೆ ಆರಂಭದಿಂದ ಜಿಲ್ಲೆಯ ರೈತರಲ್ಲಿ ಸಂತಸ ಮೂಡಿದ್ದು, ಬಿಸಿಲ ಬೇಗೆಯಿಂದ ಬಸವಳಿದಿದ್ದ ಜನರಿಗೆ ಮಳೆ ತಂಪೆರೆದಿದೆ.
ಕೋಲಾರ: ಸಿಎಂ ಸಿದ್ದರಾಮಯ್ಯ, ಕೇಂದ್ರ ಸಚಿವ ಅಮಿತ್ ಶಾ ಭೇಟಿ ವಿಚಾರವಾಗಿ ಮಾತನಾಡಿದ ಮಾಜಿ ಸಚಿವ ಆರ್.ಅಶೋಕ್, ಸಿಎಂ ಸಿದ್ದರಾಮಯ್ಯ ಬಿಜೆಪಿಯನ್ನು ಕೇಳಿ ಅಕ್ಕಿ ಕೊಡುತ್ತೇವೆ ಅಂತ ಹೇಳಿದ್ದಾರಾ? 10 ಕೆಜಿ ಅಕ್ಕಿ ಕೊಡುತ್ತೇವೆಂದು ಹೇಳುವಾಗ ನಿಮಗೆ ಜ್ಞಾನ ಇರಲಿಲ್ವಾ? ಇದು 15 ಸಾವಿರ ಕೋಟಿ ಯೋಜನೆ, ಯಾರನ್ನು ಕೇಳಿ ಕೊಟ್ಟಿದ್ದೀರಿ? ಒಂದು ಎಸ್ಟಿಮೇಟ್ ಇಲ್ಲ ಯಾರನ್ನು ಕೇಳಿ ಘೋಷಣೆ ಮಾಡಿದ್ದೀರಿ? ಕೇಂದ್ರವು ಕರ್ನಾಟಕಕ್ಕೆ ಹೆಚ್ಚುವರಿ ಅಕ್ಕಿ ಕೊಡುತ್ತಿಲ್ಲ ಎನ್ನುತ್ತಿದ್ದೀರಾ ಬೇರೆ ಯಾವ ರಾಜ್ಯಕ್ಕಾದರೂ ಹೆಚ್ಚುವರಿ ಅಕ್ಕಿ ಕೊಟ್ಟಿದ್ದಾರಾ? ಕರ್ನಾಟಕ ಸಿಎಂ ಸಿದ್ದರಾಮಯ್ಯ ನೀವೇನು ಸ್ಪೆಷಲ್ ಕ್ಯಾಟಗಿರಿನಾ? ನೀವೇನು ಆಕಾಶದಿಂದ ಇಳಿದು ಬಂದಿದ್ದಾರಾ ಎಂದು ಪ್ರಶ್ನಿಸಿದ್ದಾರೆ.
ಯಾದಗಿರಿ: ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪೂರ ಸ್ವ ಕ್ಷೇತ್ರದಲ್ಲೇ ಇಬ್ಬರು ಗ್ರಾಮ ಪಂಚಾಯತ್ ಸದಸ್ಯೆಯರನ್ನು ಹೈಜಾಕ್ ಮಾಡಲಾಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಆಯ್ಕೆಗೆ ಬಂದ ಹಿನ್ನೆಲೆ ಯಾದಗಿರಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲೇ ಹಾಡುಹಗಲೇ ನಗನೂರು ಗ್ರಾಮ ಪಂಚಾಯತಿಯ ಸದಸ್ಯೆಯರಾದ ಖಾನಾಪುರ ಗ್ರಾಮದ ನೀಲಗಂಗಮ್ಮ ಹಾಗೂ ಫಾತೀಮಾ ಅವರನ್ನು ಕಿಡ್ನಾಪ್ ಮಾಡಲಾಗಿದೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾದ ಮಹಾಂತಗೌಡ ಪಾಟೀಲ, ಅನಂತರೆಡ್ಡಿ, ಕೆಂಚಗೌಡ್ರ ಹಾಗೂ ಕಾಂಗ್ರೆಸ್ ಮುಖಂಡ ಶರಣಗೌಡ ಕೆಂಚಗೋಳರ ವಿರುದ್ಧ ಕಿಡ್ನಾಪ್ ಆರೋಪ ಕೇಳಿಬಂದಿದೆ. ಇತ್ತ ಇಬ್ಬರು ಸದಸ್ಯೆಯರ ಪತಿಯಂದಿರು ಯಾದಗಿರಿ ನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಚಿತ್ರದುರ್ಗ: 1 ತಿಂಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಹೇಗೆ ನಡೆದುಕೊಳ್ಳುತ್ತಿದೆ ನೋಡಿದ್ದೇವೆ. ಕರ್ನಾಟಕದ ಮಾಲೀಕರಂತೆ ಸಚಿವರು ಮಾತನಾಡುತ್ತಿದ್ದಾರೆ. ಸ್ವಯಂ ಘೋಷಿತ ಸಾಹಿತಿಗಳು, ಶಿಕ್ಷಣ ತಜ್ಞರು ಸಿಎಂ ಭೇಟಿಯಾಗಿ ಬಿಜೆಪಿ ಕಾಲದಲ್ಲಿ ಆಗಿರುವ ಪಠ್ಯ ಪುಸ್ತಕ ಬದಲಾವಣೆಗೆ ಹೇಳಿದರು. ಇದಕ್ಕೆ ಸಿದ್ದರಾಮಯ್ಯ ಒಪ್ಪಿದರು. ರೀತಿ ನೀತಿ ಇಲ್ಲದೆ ಪಠ್ಯ ಬದಲಾವಣೆಗೆ ಮುಂದಾಗಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. ಪಠ್ಯ ಬದಲಾವಣೆಯಲ್ಲೂ ಒಂದು ಸಮುದಾಯದ ಮತ ಸೆಳೆಯುವ ಯತ್ನ ನಡೆಸುತ್ತಿದ್ದಾರೆ. ಶಾಲೆಯಲ್ಲಿ ಮಕ್ಕಳು ಏನು ಕಲಿಯಬೇಕೆಂಬ ಆಲೋಚನೆ ಇಲ್ಲ. ಪಠ್ಯದಲ್ಲಿನ ದೋಷ ಹೇಳಿ ತಿದ್ದುವ ಕೆಲಸ ಮಾಡಲಿಲ್ಲ. ಮುಸಲ್ಮಾನರ ಮತ ಸೆಳೆಯಲು ಪ್ರಯತ್ನ ಮಾಡಿದ್ದಾರೆ ಎಂದರು.
ಕೋಲಾರ: ಜಿಲ್ಲಾ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಗದ್ದಲ ಏರ್ಪಟ್ಟ ಘಟನೆ ನಡೆಯಿತು. ಕೋಲಾರ ಹೊರವಲಯದ ಕನ್ವೆನ್ಷನ್ ಹಾಲ್ನಲ್ಲಿ ನಡೆದ ಸಭೆ ವೇಳೆ ಬಿಜೆಪಿ ನಾಯಕರಾದ ಮಾಜಿ ಸಚಿವ ಆರ್.ಅಶೋಕ್, ಎಸ್.ಟಿ.ಸೋಮಶೇಖರ್, ಸಂಸದ ಮುನಿಸ್ವಾಮಿ, MLC ನಾರಾಯಣಸ್ವಾಮಿ ಸಮ್ಮುಖದಲ್ಲೇ ಕಾರ್ಯಕರ್ತರು ಗಲಾಟೆ ನಡೆಸಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುನಾಥ ರೆಡ್ಡಿ ವಿರುದ್ಧ ಆಕ್ರೋಶ ಹೊರಹಾಕಿದ್ದು, ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಪರ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಚುನಾವಣೆ ಘೋಷಣೆ ನಂತರ ಕಾರ್ಯಕರ್ತರು, ನಾಯಕರು ಒಳಗೊಳಗೆ ಕಾಂಗ್ರೆಸ್ ಸೇರಿದ್ದರು. ಪಕ್ಷ ವಿರೋಧಿ ಕೆಲಸದಲ್ಲಿ ತೊಡಗಿದ್ದರು. ಮೇ 10ರ ಸಂಜೆ ಮತ್ತೆ ಬಿಜೆಪಿಗೆ ಮರಳಿ ಬಂದಿದ್ದಾರೆ. ಅವರೆಲ್ಲ ಪಕ್ಷಕ್ಕೆ ಮರಳಿದ್ದು ಸಂತೋಷ ಎಂದು ಹೇಳುವ ಮೂಲಕ ಚಿತ್ರದುರ್ಗದಲ್ಲಿ ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಗ್ಯಾರಂಟಿಗಳ ಭರವಸೆ ನೀಡಿ ಗೆದ್ದಿದೆ. ನಮ್ಮವರು ಸಹ ನಂಬಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದಾರೆ. ಈಗ ಭರವಸೆ ಈಡೇರಿಸಬೇಕಿರುವುದು ಸರ್ಕಾರದ ಕರ್ತವ್ಯ ಎಂದು ಚಿತ್ರದುರ್ಗದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. 10 ಕೆಜಿ ಅಕ್ಕಿಯಲ್ಲಿ 1 ಕೆಜಿ ಕಡಿಮೆಯಾದರೂ ನಾವು ಬಿಡಲ್ಲ. ಮಾಜಿ ಶಾಸಕರ ಜೊತೆ ಗಾಂಧಿ ಪ್ರತಿಮೆ ಎದುರು ಧರಣಿ ಮಾಡುತ್ತೇವೆ. ಅಧಿವೇಶನದ ವೇಳೆ 10 ದಿನ ಧರಣಿ ನಡೆಸುತ್ತೇವೆ. ಜನರಿಗೆ ಟೋಪಿ ಹಾಕಿ, ಮೋಸ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ವಿಶ್ವಾಸದ್ರೋಹ ಮಾಡಿದ ಕಾಂಗ್ರೆಸ್ ಬಣ್ಣ ಬಯಲು ಮಾಡಬೇಕು. ಸೋಲಿನಿಂದ ಬಿಜೆಪಿ ಕಾರ್ಯಕರ್ತರು ದೃತಿಗೆಟ್ಟಿಲ್ಲ. ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಸೇರಿದಂತೆ ಎಲ್ಲಾ ಚುನಾವಣೆ ಗೆಲ್ಲುವ ವಿಶ್ವಾಸವಿದೆ ಎಂದರು.
ಕಲಬುರಗಿ: ಕೆಲವು ಸಂಸದರಿಗೆ ಲೋಕಸಭೆ ಟಿಕೆಟ್ ಕೈ ತಪ್ಪಲಿದೆ ಎಂಬ ವಿಚಾರವಾಗಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಈ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ, ಇದೆಲ್ಲಾ ಕಪೋಲಕಲ್ಪಿತ ಎಂದರು. ಸಿದ್ದರಾಮಯ್ಯ ದ್ವೇಷದ ರಾಜಕಾರಣ ಮಾಡಲು ಆರಂಭಿಸಿದ್ದಾರೆ. ಶಾಲಾ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿದ್ದಾರೆ. ಉಚಿತ ಅಕ್ಕಿ ಕೊಡುತ್ತೇವೆ ಅಂತಾ ಕೇಂದ್ರ ಸರ್ಕಾರಕ್ಕೆ ಹೇಳಿದ್ದಾರಾ? ಉಚಿತ ಅಕ್ಕಿ ವಿತರಣೆ ಬಗ್ಗೆ ಯಾರ ಜೊತೆ ಮಾತುಕತೆ ಮಾಡಿದ್ದಾರೆ? ಘೋಷಣೆ ಮಾಡಿದಂತೆ ಉಚಿತವಾಗಿ 10 ಕೆಜಿ ಅಕ್ಕಿ ಕೊಡಬೇಕು. ಕೆಎಸ್ಆರ್ಟಿಸಿ ನೌಕರರಿಗೆ ಮೊದಲು 2 ತಿಂಗಳ ಸಂಬಳ ಕೊಡಿ ಎಂದರು.
ಚಿಕ್ಕಬಳ್ಳಾಪುರ: ಜನರೆ ರಾಜ್ಯ ಸರ್ಕಾರವನ್ನು ಕಿತ್ತು ಒಗಿತಾರೆ ಎಂದು ಬಾಗೇಪಲ್ಲಿಯಲ್ಲಿ ಮಾಜಿ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡರ್ಟಿ ಪಾಲಿಟಿಕ್ಸ್ ಮಾಡುತ್ತಿರುವುದು ಸಿದ್ದರಾಮಯ್ಯ ಅವರ ತಂಡ. ದುಡ್ಡು ಇದೆ ಅಂತೀರಲ್ಲ ಖರೀದಿ ಮಾಡಿಕೊಡಿ ನೋಡೋಣ. ಅಕ್ಕಿ ಕೊಡಲು ಆಗುವುದಿಲ್ಲ ಅಂದರೆ ಆ ದುಡ್ಡಾದರೂ ಜನರಿಗೆ ಕೊಡಿ ಎಂದರು.
ಕಾಂಗ್ರೆಸ್ ನಾಯಕರಿಗೆ ಈ ಬಾರಿ ಗೆಲ್ಲುವ ನಂಬಿಕೆ ಇರಲಿಲ್ಲ. ಗೆಲ್ಲುವ ನಂಬಿಕೆ ಇದ್ದಿದ್ದರೆ ಗ್ಯಾರಂಟಿ ಬಗ್ಗೆ ಮಾತನಾಡುತ್ತಿರಲಿಲ್ಲ. ಕಾಂಗ್ರೆಸ್ನವರ ತಲೆಯಲ್ಲಿ ಗೆಲ್ಲುತ್ತೇವೆ ಅಂತಾ ನಂಬಿಕೆ ಇರಲಿಲ್ಲ. ಗೆಲ್ಲುತ್ತೇವೆ ಅಂತಾ ಗೊತ್ತಿದ್ದರೆ ಗ್ಯಾರಂಟಿ ಘೋಷಣೆ ಮಾಡುತ್ತಿರಲಿಲ್ಲ. ಅತಂತ್ರ ಬಂದರೆ JDS ಜೊತೆ ಸರ್ಕಾರ ಮಾಡೋಣ ಅಂದುಕೊಂಡಿದ್ದರು. ಆದರೆ ಜೆಡಿಎಸ್ಗೆ ಬರುವ ಮತ ಕಾಂಗ್ರೆಸ್ಗೆ ಶಿಫ್ಟ್ ಆಯಿತು ಎಂದು
ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿಯಲ್ಲಿ ಆರ್.ಅಶೋಕ್ ಹೇಳಿದ್ದಾರೆ.
ಮಡಿಕೇರಿ: ಕೊಡಗಿನ ಹಲವೆಡೆ ಮಳೆಯಾಗುತ್ತಿದ್ದು, 20 ದಿನಗಳ ಬಳಿಕ ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭಗೊಂಡಿದೆ. ಮಡಿಕೇರಿ ನಗರದಲ್ಲಿ ಸಂಜೆ ವೇಳೆಗೆ ವರುಣಾರ್ಭಟ ಆರಂಭವಾಗಿದ್ದು, ವರ್ಷಧಾರೆಗೆ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಪರದಾಟ ನಡೆಸುತ್ತಿದ್ದಾರೆ.
ಕಾಂಗ್ರೆಸ್ ಪರ್ಸೆಂಟೇಜ್ ಸರ್ಕಾರ, ಅದರಲ್ಲಿ ಅನುಮಾನ ಬೇಡ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಅಕ್ಕಿ ವಿಚಾರದಲ್ಲಿ ಕಮಿಷನ್ ಹೊಡೆಯೋದು ಕಡಿಮೆ ಮಾಡಲಿ. ಕಮಿಷನ್ ಪಡೆಯುವುದು ಕಡಿಮೆ ಮಾಡಿದರೆ ನಷ್ಟ ಕಡಿಮೆ ಆಗುತ್ತದೆ ಎಂದರು. ಸರ್ವರ್ ಹ್ಯಾಕ್ ಆರೋಪ ವಿಚಾರವಾಗಿ ಮಾತನಾಡಿದ ಅವರು, ಸರ್ವರ್ ಹ್ಯಾಕ್ ಆಗಿದ್ಯೋ ಹ್ಯಾಂಗ್ ಆಗಿದ್ಯೋ ಎಂದು ಟಾಂಗ್ ನೀಡಿದ್ದಾರೆ.
ಬೇರೆ ದೇಶಕ್ಕೆ ಅಕ್ಕಿ ಕೇಳುತ್ತಿಲ್ಲ, ನಮ್ಮ ದೇಶಕ್ಕೆ ಅಕ್ಕಿ ಕೇಳುತ್ತಿದ್ದೇವೆ ಎಂದು ಹುಬ್ಬಳ್ಳಿಯಲ್ಲಿ ಬಿಜೆಪಿ ವಿರುದ್ಧ ಎಂಎಲ್ಸಿ H.ವಿಶ್ವನಾಥ್ ವಾಗ್ದಾಳಿ ಮಾಡಿದ್ದಾರೆ. ನಮ್ಮ ದೇಶದಲ್ಲಿರುವ ಸರ್ಕಾರಕ್ಕೆ ಅಕ್ಕಿ ಕೊಡಿ ಅಂತಾ ಕೇಳ್ತಿದ್ದೇವೆ ಎಂದು ಹೇಳಿದರು.
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಬಳಿ ಪ್ರಸ್ತಾಪಿಸಿಲ್ಲ ಎಂದು KMF ಅಧ್ಯಕ್ಷ ಭೀಮಾ ನಾಯ್ಕ್ ಹೇಳಿದರು. ಸಿಎಂ ಭೇಟಿ ಬಳಿಕ ಮಾತನಾಡಿದ ಅವರು, ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಇಂದು ಪ್ರಸ್ತಾಪಿಸಿಲ್ಲ. ಮತ್ತೆ ಸಿಎಂ ಭೇಟಿಯಾದಾಗ ಹಾಲಿನ ದರ ಹೆಚ್ಚಳ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.
ಕೈಗಾರಿಕೋದ್ಯಮಿಗಳ ಹೋರಾಟಕ್ಕೆ ಬಿಜೆಪಿ ನೈತಿಕ ಬೆಂಬಲ ನೀಡಿದೆ. ಸರ್ಕಾರ ವಿದ್ಯುತ್ ದರ ಹೆಚ್ಚಿಸಿ ಬರೆ ಎಳೆಯುವ ಕೆಲಸ ಮಾಡಿದೆ ಎಂದು ಬೀದರ್ನಲ್ಲಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಮ್ಮ ಸರ್ಕಾರ ಬಡವರಿಗೆ 5 ಕೆಜಿ ಅಕ್ಕಿ ಕೊಡುವ ಕೆಲಸ ಮಾಡಿದೆ. ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಅಕ್ಕಿ ವಿತರಿಸುವ ಕೆಲಸ ಮಾಡಿದೆ. ಉಚಿತವಾಗಿ 10 ಕೆಜಿ ಅಕ್ಕಿ ಕೊಡುವುದಾಗಿ ಸಿದ್ದರಾಮಯ್ಯ ಹೇಳಿದ್ದರು. ಭರವಸೆಯಂತೆ 10 ಕೆಜಿ ಅಕ್ಕಿ ಕೊಡಲಾಗದೆ ಸರ್ಕಾರ ವಿಫಲವಾಗಿದೆ. ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ. ಹಿಂದೂ ಕಾರ್ಯಕರ್ತರು, ರಾಷ್ಟ್ರ ಚಿಂತಕರ ಮೇಲೆ ಕೇಸ್ ಹಾಕ್ತಿದ್ದಾರೆ. ಪಾಕಿಸ್ತಾನ ಪರ ಘೋಷಣೆ ಕೂಗಿದವರ ಮೇಲೆ ಏಕೆ ಕೇಸ್ ಹಾಕಿಲ್ಲ? ಎಂದು ಕಿಡಿಕಾರಿದರು.
ಮುಸ್ಲಿಮರ ಓಲೈಕೆಗೆ ಸರ್ಕಾರ ಕೆಲವು ನಿರ್ಧಾರ ತೆಗೆದುಕೊಳ್ತಿದೆ. ಇದರ ಪ್ರತೀಕವಾಗಿ ಪಠ್ಯ ಪುಸ್ತಕ ಪರಿಷ್ಕರಣೆ ಆಗಿದೆ ಎಂದು ದಾವಣಗೆರೆ ನಗರದಲ್ಲಿ ಮಾಜಿ ಸಚಿವ ಬಿ.ಸಿ.ನಾಗೇಶ್ ಆರೋಪಿಸಿದ್ದಾರೆ. ಯಾವುದೇ ಶಿಕ್ಷಣ ತಜ್ಞರನ್ನು ಕೇಳದೆ ಶಾಲಾ ಪಠ್ಯ ಪರಿಷ್ಕರಣೆ ಮಾಡಲಾಗುತ್ತಿದೆ. ನೇರವಾಗಿ ಸಿಎಂ ಮನೆಯಿಂದ ಸಂಪುಟಕ್ಕೆ ಪುಸ್ತಕ ಹೋಗಿದೆ. ಆರ್ಎಸ್ಎಸ್ ಹೆಡ್ಗೇವಾರ್ ಸಂಸ್ಥಾಪಕ ಭಾಷಣ ತೆಗೆದಿದ್ದಾರೆ. PhD ಓದಿದ ಸಚಿವ ಪ್ರಿಯಾಂಕ್ ಯಾಕೆ ಓದಬೇಕು ಅಂತಿದ್ದಾರೆ. ಚಕ್ರವರ್ತಿ ಸೂಲೆಬೆಲೆ ಶಿಕ್ಷಣ ಪಂಡಿತರಲ್ಲ ಅಂತಾ ಹೇಳುತ್ತಿದ್ದಾರೆ. ಯಾವ ಪಂಡಿತರ ಸಲಹೆ ಪಡೆದು ಪಠ್ಯ ಬದಲಾವಣೆ ಮಾಡಿದ್ದಾರೆ ಎಂದು ದಾವಣಗೆರೆ ನಗರದಲ್ಲಿ ಮಾಜಿ ಸಚಿವ ಬಿ.ಸಿ.ನಾಗೇಶ್ ವಾಗ್ದಾಳಿ ನಡೆಸಿದ್ದಾರೆ.
5 ಗ್ಯಾರಂಟಿಗಳನ್ನು ಜಾರಿಗೆ ತರಲು ಆಗದಿದ್ರೆ ಅಧಿಕಾರ ಬಿಟ್ಟು ತೊಲಗಲಿ ಎಂದು ದಾವಣಗೆರೆಯಲ್ಲಿ ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ. ಜನರನ್ನು ಮರಳು ಮಾಡಲು ಕಾಂಗ್ರೆಸ್ ದಿನಕ್ಕೊಂದು ನಾಟಕ ಆಡ್ತಿದೆ. ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನ ಕೇಳಿ ಜನರಿಗೆ ಭರವಸೆ ಕೊಟ್ಟಿದ್ರಾ?. ಚುನಾವಣೆಯಲ್ಲಿ ಗೆಲ್ಲಬೇಕೆಂದು ಕಾಂಗ್ರೆಸ್ನವರೇ ಭರವಸೆ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರ ಈಗಾಗಲೇ ತಲಾ 5 ಕೆಜಿ ಅಕ್ಕಿ ಕೊಡ್ತಿದೆ. ಜನರಿಗೆ ಭರವಸೆ ಕೊಟ್ಟಂತೆ ಸಿದ್ದರಾಮಯ್ಯ 10 ಕೆಜಿ ಅಕ್ಕಿ ಕೊಡಬೇಕು. 10 ಕೆಜಿ ಅಕ್ಕಿ ಕೊಡಲು ಆಗದಿದ್ದರೆ ಅಧಿಕಾರ ಬಿಟ್ಟು ತೊಲಗಲಿ ಎಂದು ಬಿಎಸ್ವೈ ಆಕ್ರೋಶ ಹೊರ ಹಾಕಿದ್ದಾರೆ.
ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಸಿಕ್ಕಿದ್ದು ಜೂ.21ರಂದು ಸಾರಿಗೆ ಬಸ್ನಲ್ಲಿ ಸಂಚರಿಸಿರುವ ಮಹಿಳೆಯರ ವಿವರ ಇಲ್ಲಿದೆ.
ಕೆಎಸ್ಆರ್ಟಿಸಿ ಬಸ್ನಲ್ಲಿ 16,93,602 ಮಹಿಳೆಯರ ಪ್ರಯಾಣ. ಬಿಎಂಟಿಸಿ ಬಸ್ನಲ್ಲಿ ಒಟ್ಟು 18,85,703 ಮಹಿಳೆಯರ ಪ್ರಯಾಣ. ವಾಯವ್ಯ ಸಾರಿಗೆ ಬಸ್ನಲ್ಲಿ 13,96,328 ಮಹಿಳೆಯರ ಪ್ರಯಾಣ. ಕಲ್ಯಾಣ ಕರ್ನಾಟಕ ಸಾರಿಗೆಯಲ್ಲಿ 7,82,928 ಮಹಿಳೆಯರ ಪ್ರಯಾಣ. ಜೂ.11ರಿಂದ ಜೂ.21ರವರೆಗೆ 5,40,07,124 ಮಹಿಳೆಯರ ಪ್ರಯಾಣ
ಜುಲೈ 3ರ ಒಳಗೆ ವಿರೋಧಪಕ್ಷ ನಾಯಕನ ಆಯ್ಕೆ ಮಾಡಲಾಗುತ್ತೆ ಎಂದು ಚಾಮರಾಜನಗರದಲ್ಲಿ ಮಾಜಿ ಸಿಎಂ ಸದಾನಂದಗೌಡ ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಆಡಳಿತ ಪಕ್ಷಕ್ಕೆ ಸವಾಲು ಹಾಕುವ ವ್ಯಕ್ತಿ ಬೇಕು. ಅಂತಹ ಸೂಕ್ತ ನಾಯಕನನ್ನು ನೇಮಕ ಮಾಡಬೇಕು. ಹೈಕಮಾಂಡ್ ಸೂಕ್ತ ವಿಪಕ್ಷ ನಾಯಕನನ್ನು ನೇಮಕ ಮಾಡಲಿದೆ ಎಂದರು.
ಶಿವಮೊಗ್ಗ ನಗರದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಧಾರಾಕಾರ ಮಳೆ ಹಿನ್ನೆಲೆ ಜನಜೀವನ ಅಸ್ತವ್ಯಸ್ಥಗೊಂಡಿದೆ. ವಾಹನ ಸವಾರರು, ಪಾದಚಾರಿಗಳು ಪರದಾಡುತ್ತಿದ್ದಾರೆ.
ಕಾಂಗ್ರೆಸ್ ಸರ್ಕಾರ ನೀಡಿದ ಗ್ಯಾರೆಂಟಿಗಳನ್ಮ ಪೂರೈಸಲು ಆಗುತ್ತಿಲ್ಲ. ಇಷ್ಟರಲ್ಲಿಯೇ ರಾಜ್ಯ ಸರ್ಕಾರ ಪತನ ಆಗಲಿದೆ ಎಂದು ದಾವಣಗೆರೆಯಲ್ಲಿ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಭವಿಷ್ಯ ನುಡಿದಿದ್ದಾರೆ. ಕೇಂದ್ರ ಸರ್ಕಾರವನ್ನು ಕೇಳಿ ಚುನಾವಣೆಯಲ್ಲಿ ಅನ್ನ ಭಾಗ್ಯ ಘೋಷಣೆ ಮಾಡಿದ್ದಾರಾ? ಕೇಂದ್ರ ಐದು ಕೆಜಿ ಸೇರಿ 15 ಕೆಜಿ ಅಕ್ಕಿ ರಾಜ್ಯ ಸರ್ಕಾರ ಕೊಡಬೇಕು. ರಾಜ್ಯ ಸರ್ಕಾರ ನೀಡಿದ ಐದು ಗ್ಯಾರೆಂಟಿ ಪೂರೈಕೆ ಸಿದ್ದರಾಮಯ್ಯ ಅವರಿಂದ ಆಗಲ್ಲ. ರಾಜ್ಯ ಸುಳ್ಳು ಭರವಸೆ ನೀಡಿದೆ ಎಂಬುವುದು ಸ್ಪಷ್ಟವಾಗುತ್ತದೆ. ರಾಜ್ಯ ಬಿಜೆಪಿಗೆ ನಾಯಕತ್ವ ಇದೆ. ಜುಲೈ ಮೂರರಂದು ಅಧಿವೇಶನ ಆರಂಭ ಆಗುತ್ತದೆ. ಅಧಿವೇಶನ ಆರಂಭ ಆಗುವುದಕ್ಕೂ ಮೊದಲು ಪ್ರತಿ ಪಕ್ಷದ ನಾಯಕನ ಆಯ್ಕೆ ಆಗುತ್ತದೆ ಎಂದರು.
ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನ ತಮ್ಮ ಸರಕಾರಿ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸುವ ಮೂಲಕ ಅರಣ್ಯ ಸಚಿವ ಈಶ್ವರ ಖಂಡ್ರೆ ಮಾನವೀಯತೆ ಮೆರೆದಿದ್ದಾರೆ. ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ಸಂಗಮ ಕ್ರಾಸ್ ಬಳಿ ಬೈಕ್ ಹಾಗೂ ತೆಲಂಗಾಣ ಸರಕಾರಿ ಬಸ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ನಲ್ಲಿದ್ದ ಇಬ್ಬರು ಗಾಯಗೊಂಡಿದ್ದರು. ಆದರೆ ರಸ್ತೆಯಲ್ಲಿ ಹೋಗುತ್ತಿದ್ದ ಸಚಿವ ಈಶ್ವರ ಖಂಡ್ರೆ ಗಾಯಾಳುಗಳನ್ನ ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡಿದ್ದಾರೆ.
ವಿದ್ಯುತ್ ದರ ಏರಿಕೆ ಖಂಡಿಸಿ ಕರ್ನಾಟಕ ಬಂದ್ ಹಿನ್ನಲೆ ಯಾದಗಿರಿ ಜಿಲ್ಲೆಯಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಎಂದಿನಂತೆ ಜನ ಜೀವನ ಸಾಗುತ್ತಿದೆ. ಬಹುತೇಕ ಎಲ್ಲ ಅಂಗಡಿ ಮುಗಟ್ಟು ಓಪನ್ ಆಗಿದೆ. ಆದ್ರೆ ಬಂದ್‌ಗೆ ಹೋಟೆಲ್ ಮಾಲೀಕರು, ಕಾಟಲ್ ಮಿಲ್ಗಳು ಬೆಂಬಲ ಸೂಚಿಸಿವೆ. ಜಿಲ್ಲೆಯ ರೈಸ್ ಮಿಲ್ಗಳು, ಎಪಿಎಂಸಿ ಮಾರುಕಟ್ಟೆ ಬಂದ್ ಆಗಿದೆ.
13 ಬಾರಿ ಬಜೆಟ್ ಮಂಡಿಸಿದ ತಕ್ಷಣ ಭತ್ತ ಬೆಳೆದು ಅಕ್ಕಿ ಕೊಡಲು ಆಗಲ್ಲ ಎಂದು ಚಾಮರಾಜನಗರದಲ್ಲಿ ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮುಖ್ಯಮಂತ್ರಿ ಆದವರಿಗೆ ಮುಂದಾಲೋಚನೆ ಇರಬೇಕು. ದೇಶಾದ್ಯಂತ ಮಳೆ ಅಭಾವ ಇದೆ, ಆಹಾರ ಕೊರತೆ ಇದೆ. ಆಹಾರ ಭದ್ರತೆಗಾಗಿ ಕೇಂದ್ರ ಸರ್ಕಾರ ಮೊದಲೇ ನಿರ್ಧಾರ ಮಾಡಿದೆ. ಕಾಂಗ್ರೆಸ್ ಸರ್ಕಾರ ಬರುವ ಮುನ್ನ ತೆಗೆದುಕೊಂಡ ನಿರ್ಧಾರ ಇದು. ಸರ್ವರ್ ಹ್ಯಾಕ್ ಮಾಡ್ತಾರೆ ಅಂತಾ ಸಚಿವರು ಆರೋಪ ಮಾಡಿದ್ದಾರೆ. ಇಂತಹ ಸರ್ಕಾರ ಬಂದಿದೆಯಲ್ಲ ಅಂತಾ ಬೇಸರವಾಗುತ್ತೆ. ಕರ್ನಾಟಕಕ್ಕೆ ಎಂತಹ ದುರ್ದೈವ ಸ್ಥಿತಿ ಬಂತು ಅಂತಾ ಬೇಸರವಾಗುತ್ತೆ ಎಂದರು.
ಹಳೇ ಮೈಸೂರು ಭಾಗದ ಜೀವನಾಡಿ ಕೆಆರ್ಎಸ್ ಜಲಾಶಯದಲ್ಲಿ ನೀರಿನ ಮಟ್ಟ ಮತ್ತಷ್ಟು ಕುಸಿದಿದೆ. ಮಂಡ್ಯ ಜಿಲ್ಲೆ ಶ್ರಿರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ ಡ್ಯಾಂನಲ್ಲಿ ಒಂದೇ ವಾರದಲ್ಲಿ 78 ಅಡಿಗೆ ನೀರಿನ ಮಟ್ಟ ಕುಸಿದಿದೆ. ನಾಲೆಗಳಿಗೆ ನೀರು ಬಿಡುಗಡೆ ಹಿನ್ನೆಲೆ ನೀರಿನ ಮಟ್ಟ ಕುಸಿದಿದ್ದು ಕಳೆದ ವಾರ 12 TMC ಇದ್ದ ನೀರು ಇಂದು 10 TMCಗೆ ಬಂದಿದೆ. ಕೆಲವೇ ದಿನದಲ್ಲಿ ಬೆಂಗಳೂರಿಗರಿಗೆ ಜಲ ಕ್ಷಾಮ ಎದುರಾಗುವ ಭೀತಿ ಇದ್ದು ಮಳೆ ಆಗದಿದ್ದರೇ ಕುಡಿಯುವ ನೀರಿನ ಸಮಸ್ಯೆ ಕಟ್ಟಿಟ್ಟ ಬುತ್ತಿ.
ಜೂನ್ 28ರಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಬೆಳಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿ ಸಂಪುಟ ಸಭೆ ನಡೆಯಲಿದೆ.
ಕೊಪ್ಪಳದಲ್ಲಿ ವೃದ್ಧೆ ಮನೆಗೆ 1 ಲಕ್ಷ ಕರೆಂಟ್ ಬಿಲ್ ಬಂದಿದ್ದು ವೃದ್ಧೆ ಗಿರಿಜಮ್ಮ ನಿವಾಸಕ್ಕೆ ಜೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್ ರಾಜೇಶ್ ಭೇಟಿ ನೀಡಿದ್ದಾರೆ. 2021ರಿಂದ ಮೀಟರ್ ರೀಡಿಂಗ್ ತೊಂದರೆಯಿಂದ ಬಿಲ್ ಬಂದಿದೆ. ಅಜ್ಜಿ ಗಿರಿಜಮ್ಮ ವಿದ್ಯುತ್ ಬಿಲ್ ಪಾವತಿ ಮಾಡುವ ಅವಶ್ಯಕತೆ ಇಲ್ಲ. ನಮ್ಮ ಸಿಬ್ಬಂದಿ ಹಾಗೂ ಬಿಲ್ ಕಲೆಕ್ಟರ್ ತಪ್ಪಿನಿಂದಾಗಿ ಹೀಗಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಆಗುತ್ತೆ. ಇಂತಹ ಯಾವುದೇ ಪ್ರಕರಣಗಳಿದ್ದರೂ ನಮ್ಮ ಗಮನಕ್ಕೆ ತನ್ನಿ ಎಂದು ಕೊಪ್ಪಳ ಜೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್ ರಾಜೇಶ್ ಸ್ಪಷ್ಟನೆ ನೀಡಿದ್ದಾರೆ. ಇನ್ನು ಕರೆಂಟ್ ಬಿಲ್ ಕಟ್ಟಬೇಕಿಲ್ಲ ಎಂದಿದ್ದಕ್ಕೆ ವೃದ್ಧೆ ಗಿರಿಜಮ್ಮ ಜೆಸ್ಕಾಂ ಅಧಿಕಾರಿಗಳಿಗೆ ಧನ್ಯವಾದ ಹೇಳಿದ್ರು.
ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಳ ಆಗಿದ್ದಕ್ಕೆ ಕಾರಣ ನಾವಲ್ಲ ಎಂದು ಬೆಂಗಳೂರಿನಲ್ಲಿ ಟಿವಿ9ಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ. ಹಿಂದಿನ ಸರ್ಕಾರವಿದ್ದಾಗ KERC ವಿದ್ಯುತ್ ದರ ಏರಿಕೆ ಮಾಡಿದೆ. ಏಪ್ರಿಲ್, ಮೇ ತಿಂಗಳಿನ ಬಿಲ್ ಕಲೆಕ್ಟ್ ಮಾಡಲು ಹೇಳಿದ್ದಾರೆ. ಒಂದೇ ಬಾರಿ 2 ತಿಂಗಳ ವಿದ್ಯುತ್ ದರ ಏರಿಕೆಯ ಬಿಲ್ ಬಂದಿದೆ. ನಮ್ಮ ಸಾಫ್ಟ್ವೇರ್ ಹಳೆಯದು, ಹೊಸ ಸಾಫ್ಟ್ವೇರ್ ಹಾಕಬೇಕು. ಕೆಲವೆಡೆ ಮೀಟರ್ ಸಮಸ್ಯೆಯಿಂದ ವಿದ್ಯುತ್ ದರ ಹೆಚ್ಚಳ ಆಗಿದೆ. ಕೊಪ್ಪಳದಲ್ಲೂ ಅಜ್ಜಿ ಮನೆಗೆ 1 ಲಕ್ಷ ರೂ. ಕರೆಂಟ್ ಬಿಲ್ ಬಂದಿದೆ. ಮೀಟರ್ ಸಮಸ್ಯೆಯಿಂದ 1 ಲಕ್ಷ ರೂ. ಕರೆಂಟ್ ಬಿಲ್ ಬಂದಿದೆ. ಅಜ್ಜಿ ಅಷ್ಟೊಂದು ಕರೆಂಟ್ ಬಿಲ್ ಕಟ್ಟಬೇಕಿಲ್ಲ ಎಂದು ಬೆಂಗಳೂರಿನಲ್ಲಿ ಟಿವಿ9ಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿಕೆ ನೀಡಿದರು.
ಕೇಂದ್ರ ಸರ್ಕಾರ ಸರ್ವರ್ ಹ್ಯಾಕ್ ಮಾಡಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕರ ಈ ಹೇಳಿಕೆ ಬೇರೆ ರೀತಿ ತಿರುಗಬಹುದು ಎಂದು ಮಂಗಳೂರಿನಲ್ಲಿ ಕಾಂಗ್ರೆಸ್ ವಿರುದ್ಧ ಮಾಜಿ ಶಾಸಕ ಸಿ.ಟಿ.ರವಿ ಕಿಡಿಕಾರಿದ್ದಾರೆ. ಸದ್ಯ ಇವರದ್ದು ಹುಚ್ಚುಚ್ಚು ಹೇಳಿಕೆಗಳು, ಇದರಲ್ಲಿ ವ್ಯತ್ಯಾಸ ಇಲ್ಲ. ಮೋದಿ ಚುನಾವಣೆಗೆ ಅಂತಾ ನೂರಾರು ಯೋಜನೆ ಜಾರಿ ಮಾಡಿಲ್ಲ. ಕಾಂಗ್ರೆಸ್ನವರು ಚುನಾವಣೆಗೂ ಮೊದಲೇ ಡಂಗುರ ಬಾರಿಸಿದರು. ಹಿಂದೆ ‘ಕೈ’ ಸರ್ಕಾರ ಇದ್ದಾಗಲೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿತ್ತು. ಆದ್ರೆ ಆಗ ಮೋದಿ ಅಕ್ಕಿ ಕೊಟ್ಟರು ಅಂತಾ ಸಿದ್ದರಾಮಯ್ಯ ಹೇಳಿದ್ರಾ? ಆಗಲೂ ನಾನು ಅಕ್ಕಿ ಕೊಟ್ಟೆ ಅಂತಾನೇ ಸಿದ್ದರಾಮಯ್ಯ ಹೇಳುತ್ತಾರೆ. ವೋಟ್ ಕಡಿಮೆ ಆಗಿ ನಾವು ಅಧಿಕಾರ ಕಳೆದುಕೊಂಡಿಲ್ಲ. ಕೇಂದ್ರದ ಬಿಜೆಪಿ ಸರ್ಕಾರ ಸ್ವಾವಲಂಬಿ ಬದುಕಿಗೆ ನೆರವು ನೀಡುತ್ತಿದೆ ಎಂದರು.
ಅಕ್ಕಿ ವಿಚಾರದಲ್ಲೂ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಚಿವ ಎಂ.ಬಿ.ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ. ನಾವು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಾಗ ಉತ್ತರ ನೀಡಿದ್ದರು. 7 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಶೇಖರಣೆ ಎಂದು ಹೇಳಿದ್ದರು. ಆ ನಂತರ ಅಕ್ಕಿ ಪೂರೈಸಲ್ಲ ಎಂದು ರಾಜಕೀಯ ಮಾಡ್ತಿದ್ದಾರೆ. ಬಡವರ ಅನ್ನದ ಜೊತೆ ರಾಜಕಾರಣ ಮಾಡೋದು ಸರಿಯಲ್ಲ. ಪುಕ್ಕಟೆಯಾಗಿ ನಾವು ಅಕ್ಕಿ ಕೇಳುತ್ತಿಲ್ಲ, ಹಣ ಕೊಡುತ್ತೇವೆ. 4 ದಿನ ವಿಳಂಬವಾದ್ರೂ ಅಕ್ಕಿ ಕೊಡುತ್ತೇವೆ. ಉಚಿತವಾಗಿ 10 ಕೆಜಿ ಆಹಾರ ಧಾನ್ಯವನ್ನು ಕೊಟ್ಟೇ ಕೊಡ್ತೇವೆ ಎಂದು ವಿಜಯಪುರ ನಗರದಲ್ಲಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ರು.
ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಮಾಡಿದ್ದು ನಮ್ಮ ಸರ್ಕಾರ ಅಲ್ಲ ಎಂದು ವಿಜಯಪುರದಲ್ಲಿ ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ. ಕೆಇಆರ್ಸಿ ವಿದ್ಯುತ್ ದರ ಹೆಚ್ಚಳ ಮಾಡಿದೆ. ನಾವು ಅಧಿಕಾರಕ್ಕೆ ಬರುವ ಮೊದಲೇ ವಿದ್ಯುತ್ ದರ ಹೆಚ್ಚಳ ಆಗಿದೆ. ಬೆಲೆ ಏರಿಕೆಗೂ ನಮಗೂ ಯಾವ ಸಂಬಂಧವಿಲ್ಲ. ಈಗಾಗಲೇ ಮುಖ್ಯಮಂತ್ರಿಗಳು ಹಿಂಪಡೆಯಲು ಆಗಲ್ಲ ಎಂದಿದ್ದಾರೆ. ಆದರೂ ಸಹ ನಾನು ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡುತ್ತೇನೆ. ಕೈಗಾರಿಕೋದ್ಯಮಿಗಳು ಸಹಕರಿಸಿ ಎಂದು ವಿನಂತಿ ಮಾಡುತ್ತೇನೆ. ಸಿಎಂ ಸಿದ್ದರಾಮಯ್ಯ, ಇಂಧನ ಸಚಿವ ಜಾರ್ಜ್ ಜತೆ ಚರ್ಚಿಸುತ್ತೇನೆ ಎಂದರು.
ವಿದ್ಯುತ್ ದರ ಏರಿಕೆ ಖಂಡಿಸಿ ಕೈಗಾರಿಕೋದ್ಯಮಿಗಳಿಂದ ಬಂದ್ ಮಾಡಲಾಗುತ್ತಿದೆ. ಕೆಲವು ವಿಚಾರವಾಗಿ ತೆರಿಗೆ ಕಡಿಮೆ ಅಥವಾ ಹೆಚ್ಚಳ ಇದ್ದೇ ಇರುತ್ತೆ. ಮದ್ಯದ ದರ ಏರಿಕೆ ಮಾಡಿಲ್ಲ, ಬಿಯರ್ ದರ ಹೆಚ್ಚಿಸಿದ್ದಾರೆ ಅಷ್ಟೇ. ನಾವು ಅಬಕಾರಿ ಶುಲ್ಕ ಏರಿಕೆ ಮಾಡಿಲ್ಲ ಎಂದು ದಾವಣಗೆರೆಯಲ್ಲಿ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ತಿಳಿಸಿದ್ದಾರೆ. 5 ವರ್ಷವೂ ಸಿದ್ದರಾಮಯ್ಯ ಸಿಎಂ ಎಂದು ಕೆಲ ಸಚಿವರ ಹೇಳಿಕೆಗೆ ಸಂಬಂಧಿಸಿ ಶಾಸಕಾಂಗ ಸಭೆ, ಹೈಕಮಾಂಡ್ ಈ ಬಗ್ಗೆ ನಿರ್ಧಾರ ಮಾಡಲಿದೆ. ನಾನು ವೈಯಕ್ತಿಕ ಅಭಿಪ್ರಾಯ ಏನೂ ಹೇಳಲ್ಲ ಎಂದರು.
ಬೆಂಗಳೂರಿನಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಿಲ್ಲಿಸಿಲ್ಲ. ಕಾಂಪೌಂಡ್ ಹಾಗೂ ಶೆಡ್ಗಳನ್ನು ತೆರವು ಮಾಡುತ್ತಿದ್ದೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ. ಯಲಹಂಕ, ಮಹದೇವಪುರ ಸೇರಿ ಹಲವೆಡೆ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಕೋರ್ಟ್ನಿಂದ ಸ್ಟೇ ತಂದಿರುವ ಕಡೆ ತೆರವು ಕಾರ್ಯಾಚರಣೆ ಇಲ್ಲ. ಉಳಿದ ಎಲ್ಲಾ ಕಡೆ ಒತ್ತುವರಿ ತೆರವು ಕಾರ್ಯ ಮುಂದುವರಿದಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ವಿದ್ಯುತ್ ದರ ಏರಿಕೆ ಖಂಡಿಸಿ ಬೆಳಗಾವಿ ನಗರ ಬಂದ್‌ಗೆ ಕರೆ ಕೊಟ್ಟಿದ್ದು ವ್ಯಾಪಾರಸ್ಥರು, ಕೈಗಾರಿಕೋದ್ಯಮಿಗಳ ಬೆಂಬಲ ಸೂಚಿಸಿದ್ದಾರೆ. ಬೆಳಗಾವಿ ನಗರದ ಮುಖ್ಯ ಮಾರುಕಟ್ಟೆ ರವಿವಾರ ಪೇಟೆ ಬಂದ್ ಆಗಿದ್ದು ನಿತ್ಯ ಜನರಿಂದ ತುಂಬಿ ತುಳುಕುತ್ತಿದ್ದ ಮಾರುಕಟ್ಟೆ ಖಾಲಿ ಖಾಲಿಯಾಗಿದೆ.
ವಿದ್ಯುತ್ ದರ ಏರಿಕೆ ಖಂಡಿಸಿ ಬಳ್ಳಾರಿ, ವಿಜಯನಗರ ಬಂದ್‌ಗೆ ಬಳ್ಳಾರಿಯ ಚೇಂಬರ್ ಆಫ್ ಕಾಮರ್ಸ್ ಕರೆ ನೀಡಿದೆ. ಹೀಗಾಗಿ ಸ್ವಯಂಪ್ರೇರಿತವಾಗಿ ವರ್ತಕರು ಅಂಗಡಿಗಳನ್ನು ಬಂದ್ ಮಾಡಿದ್ದಾರೆ. ವಿದ್ಯುತ್ ದರ ಕಡಿಮೆ ಮಾಡುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ. ಸದ್ಯ ಬಂದ್ ಹಿನ್ನೆಲೆ ಬಳ್ಳಾರಿ ನಗರದ ಬಹುತೇಕ ರಸ್ತೆಗಳು ಖಾಲಿ ಖಾಲಿ ಹೊಡೆಯುತ್ತಿವೆ.
ರಾಜ್ಯ ಸರ್ಕಾರದಿಂದ ಉಚಿತ ವಿದ್ಯುತ್ ಘೋಷಣೆ ಮಧ್ಯೆಯೇ ಜೆಸ್ಕಾಂ ಅಜ್ಜಿಯೊಬ್ಬರಿಗೆ ಬಿಗ್ ಶಾಕ್ ಕೊಟ್ಟಿದೆ. ಕೊಪ್ಪಳದ ಭಾಗ್ಯನಗರದಲ್ಲಿ ಅಜ್ಜಿಯೊಬ್ಬರ ಮನೆಯಲ್ಲಿ ಎರಡೇ ಎರಡು ಲೈಟ್ ಉರಿಸಿದ್ರೂ ಲಕ್ಷ ಗಟ್ಟಲೆ ಬಿಲ್ ಬಂದಿದೆ. ಗಿರಿಜಮ್ಮ ಎಂಬುವವರ ಮನೆಗೆ ಬರೋಬ್ಬರಿ 1,03,315 ರೂ ಬಿಲ್ ನೀಡಿದ್ದು, ವಿದ್ಯುತ್ ಬಿಲ್ ನೋಡಿ ವೃದ್ದೆ ಕಣ್ಣೀರು.. ಭಾಗ್ಯ ಜ್ಯೋತಿ ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತು. 70 ರಿಂದ 80 ರೂ ಬೀಲ್ ನೀಡ್ತಿದ್ದ ಜೆಸ್ಕಾಂ, ಹೊಸ ಮೀಟರ್ ಅಳವಡಿಸಿದ ಬಳಿಕ ಲಕ್ಷಕ್ಕೆ ಏರಿಕೆ ಮಾಡಿದೆ.
ಸಫಾಯಿ ಕರ್ಮಚಾರಿಗಳಿಗೆ ಪ್ರತ್ಯೇಕ ರುದ್ರ ಭೂಮಿಗೆ ಆಗ್ರಹಿಸಿ ರಾಜ ಕಾಲುವೆಗೆ ಇಳಿದು ಪ್ರತಿಭಟನೆ ನಡೆಸಲಾಗುತ್ತಿರುವ ವಿಡಿಯೋ ವೈರಲ್ ಆಗಿದೆ. ಇದೇ ಜೂನ್ 19 ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಭೇಟಿಗೆ ಅವಕಾಶ ಸಿಗದ ಹಿನ್ನೆಲೆ ಪ್ರತಿಭಟನೆ ನಡೆಸಲಾಗಿದೆ. ಸಚಿವರನ್ನ ಭೇಟಿ ಮಾಡಲು ಅಧಿಕಾರಿಗಳು ಮಾರ್ಗ ಮಧ್ಯೆ ತಡೆಯಲಾಗಿದೆ. ಈ ಹಿನ್ನೆಲೆ ರಾಯಚೂರು ನಗರದ ಭಂಗಿಕುಂಟಾ ಬಳಿಯ ರಾಜಕಾಲುವೆಗೆ ಇಳಿದು ಸಫಾಯಿ ಕರ್ಮಚಾರಿ ಗೀತಾಸಿಂಗ್ ಪ್ರತಿಭಟಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಬಂದ್‌ಗೆ ಉತ್ತಮ ಸ್ಪಂದನೆ ಸಿಕ್ಕಿದೆ. ವಿದ್ಯುತ್ ದರ ಏರಿಕೆ ಖಂಡಿಸಿ ಕರ್ನಾಟಕ ಬಂದ್ ಕರೆ ಹಿನ್ನಲೆ ಇಂದು ಬೆಳಿಗ್ಗೆ 10 ಗಂಟೆಗೆ ಬೃಹತ್ ಪ್ರತಿಭಟನೆ ನಡೆಸಲು ವಾಣಿಜ್ಯೋದ್ಯಮಗಳು ಮುಂದಾಗಿವೆ. ಸ್ವಯಂ ಪ್ರೇರಿತವಾಗಿ ಕಾರವಾರದ ಮಾರುಕಟ್ಟೆ ಬಂದ್ ಮಾಡಲಾಗಿದೆ.
ಡಿಜಿ & ಐಜಿಪಿ ಅಲೋಕ್ ಮೋಹನ್ ನೇತೃತ್ವದಲ್ಲಿ ಬೆಳಗ್ಗೆ 11 ಗಂಟೆಗೆ ಹಿರಿಯ ಪೊಲೀಸ್ ಅಧಿಕಾರಿಗಳ ಮಹತ್ವದ ಸಭೆ ನಡೆಯಲಿದೆ.ಬೆಂಗಳೂರು ನಗರ ಕಮಿಷನರ್ ಕಚೇರಿಯಲ್ಲಿ ಸಭೆ ನಡೆಯಲಿದ್ದು ಪೊಲೀಸ್ ಆಯುಕ್ತ ದಯಾನಂದ್, ಹೆಚ್ಚುವರಿ ಪೊಲೀಸ್ ಆಯುಕ್ತರು, ಬೆಂಗಳೂರಿನ ಎಲ್ಲ ವಿಭಾಗದ ಡಿಸಿಪಿಗಳು, IPS ಅಧಿಕಾರಿಗಳು ಭಾಗಿಯಾಗಲಿದ್ದಾರೆ. ಫೇಕ್ ಸುದ್ದಿ ಹರಡಿಸುವವರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಯಲಿದೆ.
ನಾಳೆ ಆಷಾಢ ಮಾಸದ ಮೊದಲ ಶುಕ್ರವಾರ ಹಿನ್ನೆಲೆ ನಾಳೆ ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳಿಗೆ ಪ್ರವೇಶ ನಿರ್ಬಂಧ ಹೇರಲಾಗಿದೆ. ಜೂನ್ 23, 30, ಜುಲೈ 7, 10 ಹಾಗೂ 14ರಂದು ನಿರ್ಬಂಧ ಹೇರಲಾಗಿದ್ದು ಜಿಲ್ಲಾಡಳಿತದಿಂದ ಚಾಮುಂಡಿ ಬೆಟ್ಟಕ್ಕೆ ಉಚಿತ ಬಸ್ ವ್ಯವಸ್ಥೆ ಮಾಡಿಸಲಾಗಿದೆ. ಲಲಿತ್‌ಮಹಲ್ ಮೈದಾನದಿಂದ ಚಾಮುಂಡಿ ಬೆಟ್ಟಕ್ಕೆ ಉಚಿತ ಬಸ್ ವ್ಯವಸ್ಥೆಗೆ ಮೈಸೂರು ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಆದೇಶಿಸಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಕಲುಷಿತ ನೀರು ಸೇವಿಸಿ ಮೂವರ ಸಾವು ಕೇಸ್ಗೆ ಸಂಬಂಧಿಸಿ ಬಿಜಕಲ್ ಹಾಗೂ ಬಸರಿಹಾಳ ಗ್ರಾ.ಪಂ. ಪಿಡಿಒಗಳನ್ನ ಅಮಾನತು ಮಾಡಿ ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾ.ಪಂ. ಪಿಡಿಒ ರವೀಂದ್ರ ಕುಲಕರ್ಣಿ ಹಾಗೂ ಬಿಜಕಲ್ ಗ್ರಾ.ಪಂ. ಪಿಡಿಒ ನಾಗೇಶ್ ಅಮಾನತು ಮಾಡಿ ಪಂಚಾಯತ್ರಾಜ್ ಇಲಾಖೆ ಆಯುಕ್ತೆ ಪ್ರಿಯಾಂಕಾ ಮೇರಿ ಆದೇಶ ಹೊರಡಿಸಿದ್ದಾರೆ.
ಅಂಗವಿಕಲನಿಗೆ ಸಿಗಬೇಕಿದ್ದ ಸ್ಕೂಟರನ್ನು ಮಗಳಿಗೆ ಗಿಫ್ಟ್ ನೀಡಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತನ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಅಂಗವಿಕಲರಿಗೆಂದೇ ನಾಲ್ಕು ಚಕ್ರದ ವಾಹನವಿರುತ್ತೆ. ನಾಲ್ಕು ಚಕ್ರ ಕಿತ್ತು ಎರಡು ಚಕ್ರದ ಸ್ಕೂಟರ್‌ನ್ನು ಮಗಳಿಗೆ ಗಿಫ್ಟ್ ನೀಡಿರುವುದಾಗಿ ಬಿಜೆಪಿ ಕಾರ್ಯಕರ್ತನ ವಿರುದ್ಧ ಅಂಗವಿಕಲ ಚಂದ್ರಶೇಖರ್ ದೂರು ದಾಖಲಿಸಿದ್ದಾರೆ. ಬಿಬಿಎಂಪಿ ಸೋಷಿಯಲ್ ವೆಲ್‌ಫೆರ್ ಇಲಾಖೆಯಿಂದ ಮೋಟಾರ್ ಸೈಕಲ್ ಕೊಡಿಸೋದಾಗಿ ಚಂದ್ರಶೇಖರ್ ಹೆಸರಿನ ಸಹಿಯನ್ನ ನಕಲಿ ಮಾಡಿ ವಂಚನೆ ಮಾಡಿರೋದಾಗಿ ಆರೋಪ ಕೇಳಿ ಬಂದಿದೆ.
ಸಿದ್ದರಾಮಯ್ಯ ಭೇಟಿ ವೇಳೆ ಅಮಿತ್ ಶಾ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಚುನಾವಣೆಯಲ್ಲಿ ನಿರೀಕ್ಷೆ ಮೀರಿ ಗೆಲುವು ಸಾಧಿಸಿದ್ದೀರಾ. ಗುಡ್ ಲಕ್ ಎಂದು ಅಮಿತ್ ಶಾ ಮೆಚ್ಚಗೆ ಸೂಚಿಸಿದ್ದಾರೆ. ಹಾಗೂ ಇದೇ ವೇಳೆ ಸಿದ್ದರಾಮಯ್ಯ ಅಕ್ಕಿ ವಿಚಾರವಾಗಿ ಪ್ರಸ್ತಾಪಿಸಿದ್ದಾರೆ. ಕೇಂದ್ರದಿಂದ ಸಹಕಾರ ನೀಡುವಂತೆ ಕೋರಿದ್ದು ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್ ಬಳಿ ಮಾತನಾಡುವುದಾಗಿ ಅಮಿತ್ ಶಾ ಭರವಸೆ ನೀಡಿದ್ದಾರೆ.
ವಿದ್ಯುತ್ ದರ ಹೆಚ್ಚಳ ಹಿನ್ನೆಲೆಯಲ್ಲಿ ಹೋಟೆಲ್ ಗ್ರಾಹಕರಿಗೆ ಶಾಕ್. ಇನ್ಮುಂದೆ ಕಾಫಿ, ಟೀ, ತಿಂಡಿ, ಊಟದ ದರ ಹೆಚ್ಚಳವಾಗಲಿದೆ. ಒಂದು ವಾರದಿಂದ ರಾಜಧಾನಿಯ ಹೋಟೆಲ್ ಗಳಲ್ಲಿ ದರ ಏರಿಕೆಯಾಗಿದೆ. ಹೋಟೆಲ್ ಮಾಲೀಕರ ಸಂಘ ದರ ಹೆಚ್ಚಳಕ್ಕೆ ಸೂಚನೆ ನೀಡದಿದ್ರು ಕೂಡ ಕೆಲ ಹೋಟೆಲ್ ಮಾಲೀಕರೇ ವಿದ್ಯುತ್ ದರ ಏರಿಕೆಯಿಂದ ತಮ್ಮ ತಮ್ಮ ಹೋಟೆಲ್ ಗಳಲ್ಲಿ ದರ ಹೆಚ್ಚಳ ಮಾಡಿಕೊಂಡಿದ್ದಾರೆ.
ವಿದ್ಯುತ್ ದರ ಏರಿಕೆ ಖಂಡಿಸಿ ಇಂದು ಕಲಬುರಗಿ ಬಂದ್‌ಗೆ ಕ-ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ & ಕೈಗಾರಿಕೋದ್ಯಮಿಗಳಿಂದ ಕರೆ ನೀಡಲಾಗಿದೆ. ವಾಣಿಜ್ಯೋದ್ಯಮಿಗಳು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ. ವ್ಯಾಪಾರ ವಹಿವಾಟು ಬಂದ್ ಮಾಡಿ ಬೆಳಗ್ಗೆ 11 ಗಂಟೆಗೆ ಸೂಪರ್ ಮಾರ್ಕೆಟ್ನಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪಟ್ಟಣದ ನೆಹರು ವೃತ್ತದಲ್ಲಿ ಸಾರಿಗೆ ಬಸ್ ನಿರ್ವಾಹಕನ ಮೇಲೆ ಹಲ್ಲೆ ಮಾಡಲಾಗಿರುವ ಘಟನೆ ನಡೆದಿದೆ. ರಾಯದುರ್ಗ – ಬೆಂಗಳೂರು ಬಸ್ ನಿರ್ವಾಹಕ ಚಂದ್ರೇಗೌಡ ಮೇಲೆ ಸಾರ್ವಜನಿಕರು ಹಲ್ಲೆ ನಡೆಸಿದ್ದಾರೆ. ಚಳ್ಳಕೆರೆಯಿಂದ ದಾಬಸ್ ಪೇಟೆಗೆ ತೆರಳುತ್ತಿದ್ದ ಮಹಿಳೆಗೆ ದಾಬಸಪೇಟೆ ಬಳಿ ಬಸ್ ನಿಲ್ಲಿಸಲು ನಿರಾಕರಿಸಿದ್ದು ಇದನ್ನು ಪ್ರಶ್ನಿಸಿದ ಮಹಿಳೆ ಜೊತೆ ನಿರ್ವಾಹಕ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿ ಹಲ್ಲೆ ನಡೆಸಲಾಗಿದೆ.
ವಿದ್ಯುತ್ ದರ ಏರಿಕೆ ಖಂಡಿಸಿ ಮೈಸೂರಿನಲ್ಲಿಂದು ಸಾಂಕೇತಿಕವಾಗಿ ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ನಡೆಸಲಿದ್ದಾರೆ. ಪ್ರವಾಸಿಗರ ಹಿತದೃಷ್ಟಿಯಿಂದ ಯಾವುದೇ ಹೋಟೆಲ್ ಬಂದ್ ಇಲ್ಲ ಎಂದು ಟಿವಿ9ಗೆ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಮಾಹಿತಿ ನೀಡಿದರು. ಮೈಸೂರಿನಲ್ಲಿ ಹೋಟೆಲ್ ಮಾಲೀಕರು ಹೋರಾಟಕ್ಕೆ ನೈತಿಕ ಬೆಂಬಲ ಸೂಚಿಸಿದ್ದಾರೆ.
ಹೊಸ ಮನೆ ಕಟ್ಟವರಿಗೆ ಎದುರಾಯ್ತು ಶಾಕ್. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ರಾಜಸ್ವ ಸಂಗ್ರಹ ಗುರಿ ಹೆಚ್ಚಿಸಲು ಚಿಂತನೆ ನಡೆದಿದ್ದು ಜಲ್ಲಿಕಲ್ಲು, ಮರಳು ಸೇರಿ ಹಲವು ವಸ್ತುಗಳು ದುಬಾರಿಯಾಗುವ ಸಾಧ್ಯತೆ ಇದೆ. ರಾಜ್ಯ ಸರಕಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಬ್ಬಿಣದ ಅದಿರು, ಜಲ್ಲಿಕಲ್ಲು, ಸೈಜ್‍ಕಲ್ಲು, ಗ್ರಾನೈಟ್, ಮರಳು, ಎಂ.ಸ್ಟಾಂಡ್, ಬೋಲ್ಡರ್ಸ್, ದಿಂಡುಗಲ್ಲು, ಕರಿಕಲ್ಲು, ಬಿಳಿಕಲ್ಲು, ಮಲ್ಟಿ ಕಲರ್ ಗ್ರಾನೈಟ್, ಡೋಲೋಮೈಟ್, ಸಿಲಿಕಾನ್, ಅಲಂಕಾರಿಕ ಶಿಲೆ. ಇವುಗಳ ಮೇಲೆ ರಾಯಲ್ಟಿ ಹೆಚ್ಚಿಸಲು ಚಿಂತನೆಯಿದ್ದು ಇವುಗಳ ಬೆಲೆ ದುಬಾರಿಯಾಗುವ ಸಾಧ್ಯತೆ ಇದೆ.
ಕಳೆದ ಮೂರು ದಿನಗಳಿಂದ ಕೇಂದ್ರ ಸಚಿವ ಪಿಯೂಷ್ ಗೋಯಲ್ ಭೇಟಿಗೆ ಅವಕಾಶ ನೀಡುತ್ತಿಲ್ಲ. ನಾಳೆ ಬೆಳಿಗ್ಗೆ 10 ಗಂಟೆಗೆ ಕೇಂದ್ರದ ರಾಜ್ಯ ಖಾತೆ ಸಚಿವರು ಭೇಟಿಗೆ ಕಾಲಾವಕಾಶ ನೀಡಿದ್ರು. ಆದರೀಗ ನಾಳೆಯ ಭೇಟಿಗೂ ಅವಕಾಶ ನಿರಾಕರಿಸಿದ್ದಾರೆ ಎಂದು ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ದೆಹಲಿಯಲ್ಲಿ ಅಸಮಾಧಾನ ಹೊರ ಹಾಕಿದ್ರು. ಅವರು ಅಕ್ಕಿ ನೀಡುವ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಆದರೆ ನಾವು ಜನರಿಗೆ ನೀಡಿರೋ ಭರವಸೆಯಂತೆ ಅಕ್ಕಿ ನೀಡುತ್ತೇವೆ. ಅದಕ್ಕೆ ಬೇಕಾದ ಪರ್ಯಾಯ ವ್ಯವಸ್ಥೆ ಮಾಡುತ್ತಿದ್ದೆವೆ. ಛತ್ತೀಸ್ಗಢ, ಪಂಜಾಬ್, ರಾಜ್ಯಗಳು ಅಕ್ಕಿ ನೀಡಲು ಮುಂದೆ ಬಂದಿವೆ ಎಂದರು.
ಕರೆಂಟ್ ಬೆಲೆ ಏರಿಕೆ ಹಿನ್ನೆಲೆ ಅಕ್ಕಿ ಬೆಲೆ ಏರಿಸಲು ಕರ್ನಾಟಕ ರೈಸ್ ಮಿಲ್ಲರ್ಸ್ ಫೆಡರೇಷನ್ ಚಿಂತನೆ ನಡೆಸುತ್ತಿದೆ. 5 ರಿಂದ 10 ರುಪಾಯಿ ಏರಿಕೆ ಮಾಡಲು ಚಿಂತಿಸಿದೆ. ಕರೆಂಟ್ ಬಿಲ್ ಹೆಚ್ಚಳದಿಂದಾಗಿ ಮಿಲ್ಗಳಿಗೆ ಭಾರಿ ಹೊಡೆತ ಬೀಳುತ್ತಿದೆ. ಎಪಿಎಂಸಿ ಟ್ಯಾಕ್ಸ್ ಕೂಡ ಹೊರೆಯಾಗುತ್ತಿದೆ. ಮಳೆ ಇಲ್ಲದೇ ಇರುವ ಕಾರಣ ಭತ್ತ ಸಿಗುತ್ತಿಲ್ಲ. ಹೀಗಾಗಿ ಬೆಲೆ ಏರಿಕೆ ಮಾಡಲು ರೈಸ್ ಮಿಲ್ಲರ್ಸ್ ಅಸೋಸಿಯೇಷನ್ ಚಿಂತನೆ ನಡೆಸುತ್ತಿದೆ.
ವಿದ್ಯುತ್ ದರ ಏರಿಕೆಯಿಂದ ಜಲಮಂಡಳಿಗೆ ತಿಂಗಳಿಗೆ ಹೆಚ್ಚುವರಿಯಾಗಿ 10 ಕೋಟಿ ರೂಪಾಯಿ ಹೊರೆ ಬೀಳುತ್ತಿದೆ. ನಗರದಲ್ಲಿನ 10.50 ಲಕ್ಷ ಮನೆಗಳಿಗೆ ಕಾವೇರಿ ನೀರು ಪೂರೈಸಲಾಗುತ್ತಿದ್ದು ನೀರು ಪೂರೈಕೆ ಶುಲ್ಕದ ಮೂಲಕ ಜಲಮಂಡಳಿಗೆ ತಿಂಗಳಿಗೆ 110 ಕೋಟಿ ಆದಾಯ ಬರುತ್ತಿದೆ. ಆದಾಯದ ಬಹುಪಾಲು ಅಂದರೆ 88 ರಿಂದ 90 ಕೋಟಿ ರೂ. ವಿದ್ಯುತ್ ಶುಲ್ಕಕ್ಕೆ ಮೀಸಲಿಡಬೇಕಿದೆ. ಹೀಗಾಗಿ ಸಿಬ್ಬಂದಿ ಸಂಬಳ, ನಿರ್ವಹಣೆ ವೆಚ್ಚ ಹೊಂದಿಸಲು ಜಲಮಂಡಳಿ ಪರದಾಟವಂತಾಗಿದೆ. ಈ ಮಧ್ಯೆ ಮತ್ತೆ ಪವರ್ ಬಿಲ್ ಏರಿಕೆಯಿಂದಾಗಿ ಹೆಚ್ಚುವರಿಯಾಗಿ 10 ಕೋಟಿ ಹೊರೆಯಾಗಿದೆ. ಅಲ್ಲದೇ ಜಲಮಂಡಳಿ ಬೆಸ್ಕಂನಾ 468.28 ಕೋಟಿಯನ್ನ ಬಾಕಿ ಬಿಲ್ ಉಳಿಸಿಕೊಂಡಿದೆ.
ಒಂದು ವಾರದಲ್ಲಿ ಮಳೆ ಬರದೇ ಇದ್ರೆ ಬೆಳಗಾವಿಯಲ್ಲಿ ಕುಡಿಯುವ ನೀರು ಸಂಪೂರ್ಣ ಖಾಲಿಯಾಗಲಿದೆ. ಹೀಗಾಗಿ ನೀರನ್ನು ಮಿತವಾಗಿ ಬಳಸಿ ಎಂದು ಈಗಾಗಲೇ ಸಾರ್ವಜನಿಕರಿಗೆ ಜಲಮಂಡಳಿ ಎಚ್ಚರಿಕೆ ಕೊಟ್ಟಿದೆ. ಸದ್ಯ ರಕ್ಕಸಕೊಪ್ಪ ಡ್ಯಾಂನ ಡೆಡ್ ಸ್ಟೋರೇಜ್ ನೀರು ನಗರಕ್ಕೆ ಪೂರೈಕೆ ಮಾಡಲಾಗುತ್ತಿದೆ. ವರ್ಷ ಇಡೀ ಬೆಳಗಾವಿಗೆ ನೀರು ಪೂರೈಕೆ ಮಾಡೋ ರಕ್ಕಸಕೊಪ್ಪ ಜಲಾಶಯದ ಡೆಡ್ ಸ್ಟೋರೆಜ್ ನೀರನ್ನ ಪಂಪ್ ಸೆಟ್ ಮೂಲಕ ಹೊರಕ್ಕೆ ತೆಗೆದು ಪೂರೈಸಲಾಗುತ್ತಿದೆ. ಈ ವರೆಗೂ ಪಂಪ್ ಹೌಸ್ ನಿಂದ ಸುಲಭವಾಗಿ ಸಪ್ಲೈ ಆಗ್ತಿದ್ದ ನೀರು ಈಗ ಕಷ್ಟ ಆಗುತ್ತಿದೆ. ಸದ್ಯ ನಗರದಲ್ಲಿ 10ರಿಂದ 15 ದಿನಕ್ಕೆ ಒಮ್ಮೆ ನೀರು ಪೂರೈಕೆ ಮಾಡಲಾಗುತ್ತಿದ್ದು ಮುಂಗಾರು ಮಳೆ ಕೈಕೊಟ್ಟಿದ್ದು ಬಹುತೇಕ ಜಲಾಶಯ ಬರಿದಾಗಿದೆ.
ಗೃಹಜ್ಯೋತಿ ಯೋಜನೆಗೆ ನಿನ್ನೆ(ಜೂನ್ 21) 1,89,945 ಗ್ರಾಹಕರು ಸೇವಾ ಸಿಂಧು ಪೋರ್ಟಲ್ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಕಳೆದ 4 ದಿನಗಳಲ್ಲಿ ಒಟ್ಟು 10,85,320 ಗ್ರಾಹಕರಿಂದ ಅರ್ಜಿ ಸಲ್ಲಿಕೆಯಾಗಿದೆ. ಇಂದಿನಿಂದ ಸರಾಗವಾಗಿ ಜನರು ಅರ್ಜಿ ಸಲ್ಲಿಸಲು ಪ್ರತ್ಯೇಕ ಲಾಗಿನ್ ಐಡಿಯನ್ನು ವಿದ್ಯುತ್ ಕಚೇರಿಗಳಿಗೆ ನೀಡಲು ನಿರ್ಧರಿಸಲಾಗಿದೆ. ಪ್ರತ್ಯೇಕ ಲಿಂಕ್ ಮೂಲಕ ಬೆಸ್ಕಾಂ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬಹುದು.
ವಿದ್ಯುತ್ ದರ ಏರಿಕೆ ಖಂಡಿಸಿ ಇಂದು ಧಾರವಾಡ ಬಂದ್‌ಗೆ ಕರೆ ಕೊಡಲಾಗಿದೆ. ಧಾರವಾಡ ಬಂದ್‌ಗೆ ಬಹುತೇಕ ಎಲ್ಲ ವಲಯಗಳು ಬೆಂಬಲ ಸೂಚಿಸಿವೆ. ವರ್ತಕರು, ಎಪಿಎಂಸಿ, ಬಟ್ಟೆ ವ್ಯಾಪಾರ, ಸ್ಟೇಷನರಿ, ಹೋಟೆಲ್, ಬೇಕರಿ ಮಾಲೀಕರು, ಹಾರ್ಡ್ವೇರ್ ವ್ಯಾಪಾರಿಗಳ ಸಂಘ, ಬೇಲೂರು ಕೈಗಾರಿಕಾ ಪ್ರದೇಶದ ಉದ್ಯಮಿಗಳು ಬಂದ್‌ಗೆ ಬೆಂಬಲ ಸೂಚಿಸಿವೆ. ಇಂದು ಬೆಳಗ್ಗೆ 11 ಗಂಟೆಗೆ ಅಂಗಡಿ ಮುಂಗಟ್ಟು ಬಂದ್ ಮಾಡಿ ಕೆಸಿಸಿ ಬ್ಯಾಂಕ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಱಲಿ ನಡೆಯಲಿದೆ.
Published On - 7:09 am, Thu, 22 June 23