ರಾಜ್ಯದಲ್ಲಿ ಚುನಾವಣೆ ಕಾವು ಹೆಚ್ಚಾಗಿದೆ(Karnataka Assembly Elections 2023). ರಾಜಕೀಯ ಪಕ್ಷಗಳ ಓಡಾಟ, ಸಭೆ, ಸಮಾರಂಭಗಳು ಜೋರಾಗಿ ನಡೆಯುತ್ತಿವೆ. ಸದ್ಯ ಬೀದರ್ ಜಿಲ್ಲೆಯಲ್ಲಿ ಇಂದಿನಿಂದ 2 ದಿನ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶ ನಡೆಯಲಿದ್ದು ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಮತ್ತೊಂದೆಡೆ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ(Ramesh Jarkiholi) ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿ ಇಂದು ಅಮಿತ್ ಶಾ(Amit Shah) ಭೇಟಿಯಾಗಲಿದ್ದಾರೆ. ಸಂಜೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಗೆ ಸಮಯ ನಿಗದಿಯಾಗಿದೆ. ರಾಜ್ಯದಾದ್ಯಂತ ಬಿಜೆಪಿ ವಿಜಯ ಸಂಕಲ್ಪ ಅಭಿಯಾನ ಭರದಿಂದ ಸಾಗಿದೆ. ಬನ್ನಿ ಇಂದಿನ ರಾಜಕೀಯ ಬೆಳವಣಿಗೆಗಳ ಕ್ಷಣ ಕ್ಷಣದ ಮಾಹಿತಿ ಇಲ್ಲಿ ಪಡೆಯಿರಿ.
ಶಿವಮೊಗ್ಗ: ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷಗಳಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಭದ್ರಾವತಿಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು. ಹೆಚ್ಡಿಕೆ ಸಿಎಂ ಆದರೆ VISL ಕಾರ್ಖಾನೆ ಮುಚ್ಚಲು ಬಿಡುವುದಿಲ್ಲ. 1995ರ ಫಲಿತಾಂಶ ಬರುವ ಚುನಾವಣೆಯಲ್ಲಿ ಮತ್ತೆ ರಿಪೀಟ್ ಆಗಲಿದೆ. ರಾಜ್ಯದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಮತ್ತೆ ಸಿಎಂ ಆಗಲಿದ್ದಾರೆ ಎಂದು ಹೇಳಿದರು.
ರಾಮನಗರ: ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿವೆ. ಆದ್ರೆ ರಾಮನಗರದ ರಾಜಕಾರಣ ಜಡ್ಡುಗಟ್ಟಿದ ವಾತಾವರಣದಲ್ಲಿದೆ. ಜಿಲ್ಲೆಯಲ್ಲಿ ಇನ್ನೂ ವೈಯಕ್ತಿಕ ದ್ವೇಷದ ರಾಜಕಾರಣ ನಡೆಯುತ್ತಿದೆ. ಇಬ್ಬರ ಮದಗಜಗಳ ನಡುವೆ ಹೋರಾಟ ನಡೆಯುತ್ತಿದೆ ಎಂದು ಬಿ.ಎಲ್.ಸಂತೋಷ್ ಹೇಳಿದರು.
ರಾಮನಗರ: ಜೆಡಿಎಸ್ನವರು ಪಂಚರತ್ನ ಯಾತ್ರೆ ಅಂತಾ ಇದೀಗ ಹೊರಟಿದ್ದಾರೆ. ಅದು ಏನು ಎಂದು ಅವರಿಗೆ ಅರ್ಥ ಆಗಬೇಕು ಎಂದು ಡಿ.ಕೆ.ಸುರೇಶ್ ವ್ಯಂಗ್ಯವಾಡಿದರು. ಅಧಿಕಾರದಲ್ಲಿದ್ದಾಗ ಕಾರ್ಯಕರ್ತರು, ಬಡವರ ಬಗ್ಗೆ ಚಿಂತನೆ ಮಾಡಲಿಲ್ಲ. ಇದೀಗ ಪಂಚೆ, ರತ್ನ ಕೊಡ್ತೇವೆ ಅಂತಿದ್ದಾರೆ, ಏನು ಕೊಡ್ತಾರೋ ಗೊತ್ತಿಲ್ಲ. ಹೆಚ್.ಡಿ.ಕುಮಾರಸ್ವಾಮಿಗೆ ಹೆಚ್.ಸಿ.ಬಾಲಕೃಷ್ಣ ತುಂಬಾ ಆತ್ಮೀಯರು. ಯಾರಿಗೆ ಏನು ಕೊಡಿಸಿದ್ದಾರೆ ಎಂದು ಬಾಲಕೃಷ್ಣಗೆ ಚೆನ್ನಾಗಿ ಗೊತ್ತಿದೆ ಎಂದು ಕಿಡಿಕಾರಿದರು.
ಹಾಸನ: ನಾನು ಅವತ್ತೇ ಪಟ್ಟಿ ಬಿಡುಗಡೆ ಮಾಡ್ತೀನಿ ಅಂತಾ ಎಲ್ಲಿ ಹೇಳಿದ್ದೀನಿ. ಫೆ.3ರ ನಂತರ ಚರ್ಚೆ ಮಾಡುತ್ತೇನೆ ಅಂತಾ ಅವತ್ತೇ ಹೇಳಿದ್ದೇನೆ. ಜೆಡಿಎಸ್ ಅಭ್ಯರ್ಥಿಗಳ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಯಾವುದೇ ಗೊಂದಲ ಇದ್ದರೂ ಸರಿಪಡಿಸುವ ಶಕ್ತಿ ಇದೆ. ನನಗೆ ಎಲ್ಲವನ್ನೂ ಅರಗಿಸಿಕೊಳ್ಳುವ ಶಕ್ತಿ ಇದೆ ಎಂದು ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.
ಹಾಸನ: ಭವಾನಿ ಆಗಲಿ, ಸ್ವರೂಪ್ ಆಗಲಿ ಟಿಕೆಟ್ ಕೇಳುವುದರಲ್ಲಿ ತಪ್ಪಿಲ್ಲ ಎಂದು ಜಿಲ್ಲೆಯ ಅರಸೀಕೆರೆಯಲ್ಲಿ JDS ರಾಜ್ಯಾಧ್ಯಕ್ಷ ಇಬ್ರಾಹಿಂ ಹೇಳಿದರು. ಹೆಚ್ಡಿಡಿ, HDK, ಇಬ್ರಾಹಿಂ ತೀರ್ಮಾನವೇ ಅಂತಿಮ ಎಂದಿದ್ದಾರೆ. ಆದ್ರೆ ಯಾರಿಗೆ ಟಿಕೆಟ್ ನೀಡಬೇಕೆಂದು ಪಕ್ಷ ತೀರ್ಮಾನ ಕೈಗೊಳ್ಳುತ್ತೆ. ಟಿಕೆಟ್ ವಿಚಾರವಾಗಿ ನಾಳೆ ಹಾಗೂ ಫೆ.10ರಂದು ಸಭೆ ನಡೆಸುತ್ತೇವೆ ಎಂದು ಹೇಳಿದರು.
ಬೀದರ್: ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದು ಕಾಂಗ್ರೆಸ್ ಪಕ್ಷ, ಬಿಜೆಪಿಯಲ್ಲ ಎಂದು ಪ್ರಜಾಧ್ವನಿ ಸಮಾವೇಶದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು. ಜಿಲ್ಲೆಯ ಬಸವಕಲ್ಯಾಣದಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿ, ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟವರು ಆರ್ಎಸ್ಎಸ್ನವರಾ ಎಂದು ಪ್ರಶ್ನಿಸಿದರು. ಸಾವರ್ಕರ್ ಕ್ಷಮಾಪಣೆ ಪತ್ರ ಕೊಟ್ಟು ಜೈಲಿನಿಂದ ಹೊರ ಬಂದರು. ಗಾಂಧಿಯನ್ನು ಕೊಂದ ಗೋಡ್ಸೆಯನ್ನು ಬಿಜೆಪಿಯವರು ಪೂಜಿಸ್ತಾರೆ ಎಂದು ಹೇಳಿದರು.
ಬೆಂಗಳೂರು: ಕಾಂಗ್ರೆಸ್ 160 ಸೀಟು ಬರುತ್ತದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆ ವಿಚಾರವಾಗಿ ಪ್ರತ್ರಿಕ್ರಿಯೆ ನೀಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಬಹುಶ: ಅವರು ಪಾಕಿಸ್ತಾನದ ಸರ್ವೇ ರಿಪೋರ್ಟ್ ಕೈಯಲ್ಲಿ ಇಟ್ಟುಕೊಂಡಿರಬೇಕು ಅನ್ನಿಸುತ್ತದೆ. ಅವರು ಇನ್ನೊಮ್ಮೆ ಚೆಕ್ ಮಾಡಿಕೊಳ್ಳುವುದು ಒಳ್ಳೆಯದು. ಅವರು ಪಾಕಿಸ್ತಾನದ ರಿಪೋರ್ಟ್ ಇಟ್ಟುಕೊಂಡಿರುವ ಬಗ್ಗೆ ನನಗೆ ಅನುಮಾನ ಇದೆ. ಅವರು ಪಾಕಿಸ್ತಾನದ ರಿಪೋರ್ಟ್ ಹೇಳಿದರೆ ಅದು ನಿಜ ಇರಬಹುದು, ಒಪ್ಪುತ್ತೇನೆ. ದೇಶದಲ್ಲಿ ಮೋದಿ ಬಂದಾಗ ಜನ ಹುಚ್ಚೆದ್ದು ಕುಣಿಯುತ್ತಾರೆ ಎಂದು ಹೇಳಿದರು.
ರಾಮನಗರ: ಕಾಂಗ್ರೆಸ್ನಲ್ಲಿ ಟಿಕೆಟ್ ನೀಡುವ ಹೈಕಮಾಂಡ್ ಸಂಸ್ಕೃತಿ ಸರಿಯಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸಹೋದರಿ ಪತಿ ಶರತ್ಚಂದ್ರ ಹೇಳಿದ್ದಾರೆ. ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಭವಿಷ್ಯ ಇಲ್ಲ ಎಂದು ಡಿ.ಕೆ.ಶಿವಕುಮಾರ್ಗೆ ಟಾಂಗ್ ನೀಡಿದರು.
ಚಿಕ್ಕಬಳ್ಳಾಪುರ: ನಟ ಕಿಚ್ಚ ಸುದೀಪ್ ಕಾಂಗ್ರೆಸ್ಗೆ ಹೋಗಲ್ಲ ಎಂದು ಸಚಿವ ಸುಧಾಕರ್ ಹೇಳಿದರು. ನನ್ನ ಪ್ರಕಾರ ಸುದೀಪ್ ಇನ್ನೂ ಕಾಂಗ್ರೆಸ್ಗೆ ಸೇರಿಲ್ಲ. ಸುದೀಪ್ ರಾಜ್ಯದ ಉತ್ತಮ ನಾಯಕ ನಟ. ಯಾವುದೇ ಪಕ್ಷಕ್ಕೆ ಸೇರಿದ್ರೂ ಪಕ್ಷಕ್ಕೆ ಒಳ್ಳೆಯದಾಗುತ್ತೆ. ನಮ್ಮೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಅವರು ಏನ್ ತೀರ್ಮಾನ ತಗೊಳ್ತಾರೆ ನೋಡೋಣ ಎಂದು ಹೇಳಿದರು.
ಕೋಲಾರ: ಪಕ್ಷದಲ್ಲಿ ಕೆ.ಹೆಚ್.ಮುನಿಯಪ್ಪಗೆ ಯಾವುದೇ ಅಸಮಾಧಾನ ಇಲ್ಲ. ಕಾಂಗ್ರೆಸ್ನಲ್ಲಿ ಎಲ್ಲ ನಾಯಕರು ಒಗ್ಗಟ್ಟಾಗಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ವಿಪಕ್ಷ ನಾಯಕ ಸಿದ್ದರಾಮಯ್ಯ ನನ್ನ ವಿರುದ್ಧ ಯಾವುದೇ ಪತ್ರ ಬರೆದಿಲ್ಲ. ಬಿಜೆಪಿಯವರು ಕುಚೇಷ್ಟೆ ಮಾಡಿಕೊಂಡು ಬೋಗಸ್ ಮಾಡ್ತಿದ್ದಾರೆ ಎಂದು ಹೇಳಿದರು.
ಬೆಂಗಳೂರು: ಸಿದ್ದರಾಮಯ್ಯ ಜೀವನಾಧಾರಿತ ಗೀತೆ ಬಿಡುಗಡೆಗೆ ಸಜ್ಜುಗಿದೆ. ಮಾಜಿ ಮುಖ್ಯ ಮಂತ್ರಿ ಬಾಲ್ಯ ಹಾಗೂ ಅವರು ಬೆಳೆದು ಬದ ಹಾದಿಯನ್ನ ಪರಿಚಯಿಸೋ ಸಾಂಗ್ ಇದಾಗಿದೆ. ಸದ್ಯ ಆಂದ್ರ ಸೇರಿದಂತೆ ಹಲವೆಡೆ ಶೂಟಿಂಗ್ ಮಾಡಿರುವ ಚಿತ್ರತಂಡ ಕನ್ನಡ, ತೆಲುಗು, ತಮಿಳಿನಲ್ಲಿ ಸಾಂಗ್ ರಿಲೀಸ್ ಮಾಡಲಿದೆ. ನಾಳೆ ಸಾಂಗ್ ರಿಲೀಸ್ ಮಾಡಲು ಸಿದ್ದರಾಮಯ್ಯ ಅಭಿಮಾನಿ ಬಳಗ ಭರ್ಜರಿ ಪ್ಲಾನ್ ಮಾಡಿದೆ.
ಕೋಲಾರ: ನನಗೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದೇ ಮುಖ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ಪಕ್ಷವನ್ನು ವಿಧಾನಸೌಧದ 3ನೇ ಮಹಡಿಗೆ ಕರೆದುಕೊಂಡು ಹೋಗುವುದು. ನನ್ನ ಕಾರ್ಯಕರ್ತರನ್ನು ವಿಧಾನಸೌಧದ ಮೆಟ್ಟಿಲು ಹತ್ತಿಸುವುದು ಮುಖ್ಯ. ನಮ್ಮ ತಕ್ಕಡಿ 60ರ ಮೇಲೆ ಏಳಲ್ಲ ಅಂತಾ ಬಿಜೆಪಿಯವರಿಗೆ ಗೊತ್ತಾಗಿದೆ. ಮುಂದಿನ ಚುನಾವಣೆಯಲ್ಲಿ ನಾವು 130ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿದರು.
ಕೋಲಾರ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯಗೆ ಬೆಂಬಲವಾಗಿ ನಾವೆಲ್ಲರೂ ನಿಲ್ಲುತ್ತೇವೆ. ಯಾವ ಕ್ಷೇತ್ರದಲ್ಲಿ ಸ್ಪರ್ಧಿಸ್ತೇನೆ ಎಂದು ಆಸೆ ಪಡ್ತಾರೋ ಅದಕ್ಕೆ ಬೆಂಬಲ ನೀಡುತ್ತೇವೆ. ಸಿದ್ದರಾಮಯ್ಯ ಕ್ಷೇತ್ರವೇ ನಮ್ಮ ಕ್ಷೇತ್ರ ಎಂದು ಕೋಲಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಹಾಡಿನ ರೂಪದಲ್ಲಿ ಸಿದ್ದರಾಮಯ್ಯ ಜೀವನ ಚರಿತ್ರೆ ಬಿಡುಗಡೆಗೆ ಸಿದ್ದರಾಮಯ್ಯ ಅಭಿಮಾನಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ‘ಸಿದ್ದು ಜೀವನ ಗಾನ’ ಎಂಬ ಹೆಸರಿನಲ್ಲಿ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಸಿದ್ದರಾಮಯ್ಯ ಸಾಂಗ್ ಆಲ್ಬಂ ಸಿದ್ಧವಾಗ್ತಿದೆ. ಹೈದರಾಬಾದ್ ಹೊರವಲಯದಲ್ಲಿ ‘ಸಿದ್ದು ಜೀವನ ಗಾನ’ ವಿಡಿಯೋ ಚಿತ್ರೀಕರಣ ಮಾಡಲಾಗಿದ್ದು ಹಾಡಿಗೆ ತೆಲುಗು ಚಿತ್ರರಂಗದ ಖ್ಯಾತ ಗಾಯಕರು ಧ್ವನಿ ನೀಡಿದ್ದಾರೆ.
ಹಾಲಿ ನಾಲ್ವರು ಶಾಸಕರಿಗೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪುವ ಆತಂಕ ಎದುರಾಗಿದೆ. ಇಬ್ಬರು ಹಾಲಿ ಶಾಸಕರು ತಮ್ಮ ಮಕ್ಕಳಿಗೆ ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಇನ್ನುಳಿದ ಇಬ್ಬರು ಹಾಲಿ ಶಾಸಕರಿಗೆ ಟಿಕೆಟ್ ತಪ್ಪುವ ಭೀತಿ ಎದುರಾಗಿದೆ. ಎಂ ವೈ ಪಾಟೀಲ್, ವೆಂಕಟರಮಣಪ್ಪ, ಕುಸುಮಾ ಶಿವಳ್ಳಿ, ಡಿಎಸ್ ಹುಲಗೇರಿಗೆ ಟಿಕೇಟ್ ಕೈ ತಪ್ಪುವ ಸಾಧ್ಯತೆ ಇದೆ. ಎಂ ವೈ ಪಾಟೀಲ್, ವೆಂಕಟರಮಣಪ್ಪ ರಿಂದ ತಮ್ಮ ಪುತ್ರರಿಗೆ ಟಿಕೆಟ್ ಬೇಡಿಕೆ.
ಬಿಜೆಪಿ ಸರಕಾರದ ಪಾಪದ ಪುರಾಣ ಅವರ ಕರ್ಮದ ಕಾಂಡವನ್ನ ಜನರ ಮುಂದೆ ಇಟ್ಟಿದ್ದೇವೆ. ಪ್ರಜಾಧ್ವನಿ ಕಾರ್ಯಕ್ರಮದ ಮೂಲಕ ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಜನರ ಮುಂದಿಟ್ಟಿದ್ದೇವೆ ಎಂದು ಬೀದರ್ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಲೂಟಿ ಹೊಡೆಯೋದು ಬಿಟ್ರೆ ಬಿಜೆಪಿಗರಿಗೆ ಬೇರೆ ಕೆಲಸ ಇಲ್ಲ. ವಿಧಾನಸೌಧದ ಗೋಡೆಗೆ ಕಿವಿ ಕೊಟ್ಟರೆ ಬರೀ ಲಂಚ ಲಂಚ ಅಂತಾ ಕೇಳಿಸುತ್ತಿದೆ. ಬಿಜೆಪಿಗರ ಕಮೀಷನ್ ದಂಧೆಗೆ ಅನೇಕರು ರಾಜ್ಯದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಯಾರೂ ಕೂಡ ವೈಯಕ್ತಿಕ ಟೀಕೆಗಳನ್ನು ಮಾಡಬಾರದು ಎನ್ನುವ ಮೂಲಕ ರಮೇಶ್ ಜಾರಕಿಹೊಳಿ, ಡಿಕೆಶಿಗೆ ಸತೀಶ್ ಜಾರಕಿಹೊಳಿ ಕಿವಿಮಾತು ಹೇಳಿದ್ದಾರೆ. ರಮೇಶ್ ಇರಬಹುದು, ಡಿಕೆಶಿ ಇರಬಹುದು, ಯಾರೇ ಆಗಲಿ. ಒಂದು ವ್ಯಾಪ್ತಿಯಲ್ಲಿ ಹೇಳಿಕೆ ನೀಡಿದರೆ ಒಳ್ಳೆಯದು. ಹೇಳಿಕೆ ನೀಡುವುದು ಆರೋಪಗಳನ್ನು ಮಾಡುವುದು ದೊಡ್ಡದಲ್ಲ. ಆದರೆ ಅದರಿಂದ ವೈಯಕ್ತಿಕವಾಗಿ ಪಕ್ಷಕ್ಕೂ ಡ್ಯಾಮೇಜ್ ಆಗುತ್ತದೆ. ವೈಯಕ್ತಿಕವಾಗಿಯೂ ನಷ್ಟವಾಗುತ್ತದೆ. ಯಾವ ವಿಷಯವೂ ಕೂಡ ಮಿತಿಮೀರಿ ಹೋಗುವುದು ಬೇಡ. ಎಲ್ಲವೂ ಕಾನೂನು ಚೌಕಟ್ಟಿನಲ್ಲಿಯೇ ಇರಬೇಕು. ಕಾನೂನು ಹೋರಾಟ ಮಾಡುವುದಕ್ಕೆ ಎಲ್ಲರಿಗೂ ಅವಕಾಶ ಇದೆ ಎಂದರು.
ಮಾಜಿ ಸಂಸದ ಕೆಹೆಚ್ ಮುನಿಯಪ್ಪ ಮನವೊಲಿಸಲು ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಹಾಗೂ ಮಾಜಿ ಎಂ.ಎಲ್.ಸಿ ನಾರಾಯಣಸ್ವಾಮಿ ಪ್ರಯತ್ನಿಸಿದ್ದಾರೆ. ಆದ್ರೆ ನಾರಾಯಣಸ್ವಾಮಿ ಮನವಿ ಸ್ಪಂದಿಸದೇ ಕೆಹೆಚ್ ಮುನಿಯಪ್ಪ ತೆರಳಿದ್ದಾರೆ. ಮುಳಬಾಗಿಲು ಕುರುಡುಮಲೆ ವಿನಾಯಕ ದೇವಸ್ಥಾನದ ಪೂಜೆ ಬಳಿಕ ಮನವೊಲಿಸಲು ಯತ್ನ ನಡೆದಿದ್ದು ಕೇವಲ ಕುರುಡುಮಲೆ ದೇವಾಲಯಕ್ಕೆ ಮಾತ್ರ ಭೇಟಿ ನೀಡಿ ಮುನಿಯಪ್ಪ ಹಿಂತಿರುಗಿದ್ದಾರೆ.
ಮಂತ್ರಿಸ್ಥಾನ ನೀಡುವ ಅವಶ್ಯಕತೆ ಇಲ್ಲ ಎಂದು ಸಿಎಂಗೆ ತಿಳಿಸಿದ್ದೇನೆ. ರಾಜಕಾರಣದಲ್ಲಿ ಏನೇನು ಆಗುತ್ತದೆ ಅಂತಾ ಯಾರಿಗೂ ಗೊತ್ತಾಗಲ್ಲ. ಸಂತೋಷ್ ಆತ್ಮಹತ್ಯೆ ಮಾಡಿಕೊಳ್ತಾನೆ ಅಂತಾ ಕನಸು ಬಿದ್ದಿತ್ತಾ? ಕ್ಲೀನ್ಚಿಟ್ ಸಿಕ್ಕಿದ ಮೇಲೆ ಸಿಎಂ ಜೊತೆ ಏನಿದು ಅಂತಾ ಕೇಳಿದೆ. ಸಿಎಂ ಬೊಮ್ಮಾಯಿ ಮಂತ್ರಿ ಮಾಡುತ್ತೇವೆ ಎಂದು ಹೇಳಿದ್ದರು. ಸಂಪುಟ ವಿಸ್ತರಣೆಗೆ ಏನೇನು ಸಮಸ್ಯೆಗಳಿದೆಯೋ ಗೊತ್ತಿಲ್ಲ. ಪಕ್ಷ ಮತ್ತು ಸರ್ಕಾರಕ್ಕೆ ಸಮಸ್ಯೆ ಮಾಡಲು ನಾನು ತಯಾರಿಲ್ಲ. ಮಂತ್ರಿ ಮಾಡುವ ಅವಶ್ಯಕತೆ ಇಲ್ಲ ಎಂದು ಸಿಎಂಗೆ ತಿಳಿಸಿದ್ದೇನೆ ಎಂದು ಬೆಂಗಳೂರು ನಗರದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಮುಳಬಾಗಿಲು ಪುರಾತನ ಹೈದಾರಾಲಿ ದರ್ಗಾಗೆ ಡಿಕೆ ಶಿವಕುಮಾರ್ ಭೇಟಿ ನೀಡಿದ್ದಾರೆ. ಡಿಕೆ ಶಿವಕುಮಾರ್ ದರ್ಗಾಗೆ ಅರ್ಪಿಸಲು ಫುಲ್ ಹಾರ್ ಹಾಗೂ ಗಲಫ್ ಅನ್ನು ತೆಲೆಯ ಮೇಲೆ ಹೊತ್ತೊಯ್ದರು.
ಬೆಂಗಳೂರಿನ ಬನಶಂಕರಿ ದೇವಸ್ಥಾನಕ್ಕೆ ಭವಾನಿ ರೇವಣ್ಣ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ಹಂಚಿಕೆ ಗೊಂದಲ ವಿಚಾರಕ್ಕೆ ಸಂಬಂಧಿಸಿ ಹಾಸನ ಟಿಕೆಟ್ ಬಗ್ಗೆ ಪ್ರತಿಕ್ರಿಯೆ ನೀಡಲು ಭವಾನಿ ರೇವಣ್ಣ ನಕಾರ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಶಾಂತಿ ನೆಲೆಸಬೇಕು ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಬೆಂಗಳೂರಿನಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಹರ್ಷನ ಕೊಲೆಯಾಗಿದ್ದಕ್ಕೆ ಬಿಜೆಪಿ ಕಾರ್ಯಕರ್ತರು, ಹಿಂದೂಗಳು ಸುಮ್ಮನೆ ಕುಳಿತುಕೊಳ್ಳಬೇಕಾ ಅಂತಾ ಡಿ.ಕೆ. ಶಿವಕುಮಾರ್ ಉತ್ತರ ಕೊಟ್ಟು ಬಿಡಲಿ. ಪಿಎಫ್ ಐ ಗೂಂಡಾ ಕೊಲೆ ಮಾಡಿದ ಬಳಿಕವೂ ಅದನ್ನು ಖಂಡಿಸುವ ಪ್ರಯತ್ನವನ್ನೂ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಮಾಡಲಿಲ್ಲ. ಕೊಲೆ ಆದರೆ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ನವರಿಗೆ ಖುಷಿ. ಮುಸಲ್ಮಾನ ಕೊಲೆ ಆದರೆ ಬಿಜೆಪಿ ಕಾರ್ಯಕರ್ತರ ಮೇಲೆ ಆಪಾದನೆ ಮಾಡುತ್ತಾರೆ ಎಂದರು.
ಫೆ.5ರಿಂದ ಕರಾವಳಿ, ಮಲೆನಾಡು ಭಾಗದಲ್ಲಿ ಬಿ.ಕೆ.ಹರಿಪ್ರಸಾದ್ ನೇತೃತ್ವದಲ್ಲಿ ಪ್ರಜಾಧ್ವನಿ ಯಾತ್ರೆ ಆರಂಭವಾಗಲಿದೆ. ಫೆ.5ರಿಂದ ಮೊದಲ ಹಂತ, ಫೆ.15ರಿಂದ 2ನೇ ಹಂತದಲ್ಲಿ ದಕ್ಷಿಣ ಕನ್ನಡ, ಉಡುಪಿ, ಮಲೆನಾಡು ಭಾಗದಲ್ಲಿ ಪ್ರವಾಸ ಕೈಗೊಳ್ಳಲಾಗುತ್ತೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ತಿಳಿಸಿದ್ದಾರೆ.
ಬೀದರ್ ನ ಗುರುನಗರದಲ್ಲಿರುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸವರಾಜ್ ಜಾಬ್ ಶೆಟ್ಟಿ ಮನೆಗೆ ಸಿದ್ದರಾಮಯ್ಯ ಭೆಟ್ಟಿ ಕೊಟ್ಟು ಉಪಹಾರ ಸೇವಿಸಿದ್ರು. ಸಿದ್ದರಾಮಯ್ಯಗೆ ಎಂಬಿ ಪಾಟೀಲ್, ಜಮೀರ್ ಅಹ್ಮದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕ ರಹೀಂ ಖಾನ್
ಟಿಕೇಟ್ ಆಕಾಕ್ಷಿಗಳಾದ ಅಶೋಕ್ ಖೇಣಿ, ಚಂದ್ರಾಸಿಂಗ್ ಸಾಥ್ ಕೊಟ್ರು.
ಕೋಲಾರ ನಗರದಲ್ಲಿ ಡಿ.ಕೆ.ಶಿವಕುಮಾರ್ಗೆ ಅದ್ಧೂರಿ ಸ್ವಾಗತದ ಮೂಲಕ ಬರ ಮಾಡಿಕೊಳ್ಳಲಾಗಿದೆ. ಆದ್ರೆ K.H.ಮುನಿಯಪ್ಪ ಬಣದ ಮುಳಬಾಗಿಲು ಕೈ ನಾಯಕರು ಬಂಡಾಯ ಎದ್ದಿದ್ದು ಮುಳಬಾಗಿಲು ಪ್ರಜಾಧ್ವನಿ ಸಮಾವೇಶಕ್ಕೆ ಹೋಗದಿರಲು ನಿರ್ಧಾರ ಮಾಡಿದ್ದಾರೆ. ಸಮಾವೇಶ ನಿಮಿತ್ತ ಕೋಲಾರಕ್ಕೆ ಡಿ.ಕೆ.ಶಿವಕುಮಾರ್ ಆಗಮಿಸಿದ್ದಾರೆ, ಈ ವೇಳೆ ಡಿಕೆಶಿಗೆ ಕೆ.ಹೆಚ್.ಮುನಿಯಪ್ಪ & ಬೆಂಬಲಿಗರಿಂದ ಸ್ವಾಗತ. ನಂತರ ಮುಳಬಾಗಿಲು ಕಾರ್ಯಕ್ರಮಕ್ಕೆ ಬರಲ್ಲ ಎಂದು ಮುನಿಯಪ್ಪ ಹೇಳಿದ್ದು ಬಲವಂತವಾಗಿ ಕೆ.ಹೆಚ್.ಮುನಿಯಪ್ಪರನ್ನು ಡಿಕೆಶಿ ಕರೆದೊಯ್ದಿದ್ದಾರೆ. ಬನ್ನಿ ಎಲ್ಲವೂ ಸರಿ ಮಾಡೋಣ ಎಂದು ಎಳೆದುಕೊಂಡು ಹೋಗಿದ್ದಾರೆ.
ಶಿವಾಜಿನಗರ ಬಿಜೆಪಿ ಟಿಕೆಟ್ಗೆ ಮಾಜಿ ಸಚಿವ ರೋಷನ್ ಬೇಗ್ ಪ್ರಯತ್ನ ಪಡುತ್ತಿದ್ದಾರೆ. ರುಮಾನ್ ಬೇಗ್ಗೆ ಟಿಕೆಟ್ ಕೊಡಿಸಲು ರೋಷನ್ ಬೇಗ್ ಪ್ರಯತ್ನದಲ್ಲಿದ್ದಾರೆ. ಸಿಎಂ ಭೇಟಿ ಮಾಡಿ ಪುತ್ರನಿಗೆ ಟಿಕೆಟ್ ನೀಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಮೂರು ದಿನಗಳ ಹಿಂದೆ ಸಿಎಂ ಅಧಿಕೃತ ನಿವಾಸದಲ್ಲೇ ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ.
ಕುರುಡುಮಲೆ ವಿನಾಯಕ ದೇಗುಲಕ್ಕೆ ಡಿ.ಕೆ.ಶಿವಕುಮಾರ್ ಭೇಟಿ ನೀಡಿದ್ದಾರೆ. ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕುರುಡುಮಲೆ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ಡಿಕೆ ಶಿವಕುಮಾರ್ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಡಿಕೆಶಿಗೆ ಕೆ.ಹೆಚ್.ಮುನಿಯಪ್ಪ, ಪರಮೇಶ್ವರ್ ಸೇರಿ ಹಲವರು ಸಾಥ್ ನೀಡಿದ್ದಾರೆ.
ಮೋದಿ ಶಿವಮೊಗ್ಗ ನೂತನ ಏರ್ಪೋರ್ಟ್ ಉದ್ಘಾಟನೆ ಮಾಡ್ತಾರೆ ಎಂದು ಶಿವಮೊಗ್ಗ ನಗರದಲ್ಲಿ ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಮಾಹಿತಿ ನೀಡಿದ್ದಾರೆ. ಆದ್ರೆ ಪ್ರಧಾನಿ ಮೋದಿ ಆಗಮಿಸುವ ದಿನಾಂಕ ಇನ್ನೂ ನಿಗದಿ ಆಗಿಲ್ಲ. ಫೆಬ್ರವರಿ 27ರಂದು ಏರ್ಪೋರ್ಟ್ಗೆ ಉದ್ಘಾಟನೆಗೆ ಸಿದ್ಧತೆ ನಡೆದಿದೆ. ಕೇಂದ್ರ ಸರ್ಕಾರ ಈ ಬಾರಿ ಅತ್ಯುತ್ತಮ ಬಜೆಟ್ ಮಂಡಿಸಿದೆ. ಬಜೆಟ್ನಲ್ಲಿ ರೈಲ್ವೆ ಇಲಾಖೆಗೆ ಹೆಚ್ಚು ಅನುದಾನ ಮೀಸಲಿಟ್ಟಿದ್ದಾರೆ. ರಾಜ್ಯಕ್ಕೂ ಹೆಚ್ಚು ಲಾಭ ಆಗಲಿದೆ ಎಂದರು.
ಬೀದರ್ ಜಿಲ್ಲೆ ಬಸವಕಲ್ಯಾಣದಲ್ಲಿಂದು ಪ್ರಜಾಧ್ವನಿ ಸಮಾವೇಶ ಹಿನ್ನೆಲೆ ಸಿದ್ದರಾಮಯ್ಯಗೆ ಎಂ.ಬಿ.ಪಾಟೀಲ್, ಜಮೀರ್ ಅಹ್ಮದ್ ಬೀದರ್ಗೆ ತೆರಳಿದ್ದಾರೆ. ಪ್ರಜಾಧ್ವನಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ಕ್ಷೇತ್ರದ ಮಾಜಿ ಶಾಸಕ ವಡ್ನಾಳ್ ರಾಜಣ್ಣರಿಗೆ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಡ ಹೆಚ್ಚಾಗಿದೆ. ಒಂದು ಕಾಲದಲ್ಲಿ ಅಂದಿನ ಸಿಎಂ ಜೆಹೆಚ್ ಪಟೇಲ್ರನ್ನ ವಡ್ನಾಳ್ ರಾಜಣ್ಣ ಸೋಲಿಸಿದ್ದರು. ಇತ್ತೀಚಿಗೆ ಕಾಂಗ್ರೆಸ್ ಟಿಕೇಟ್ ಗೆ ಅರ್ಜಿ ಸಲ್ಲಿಸಲು ಹಿಂದೇಟು ಹಾಕಿದ್ದ ವಡ್ನಾಳ್ ರಾಜಣ್ಣಗೆ ಚುನಾವಣೆಗೆ ಸ್ಪರ್ಧಿಸುವಂತೆ ಚನ್ನಗಿರಿಯಲ್ಲಿ ಕಾರ್ಯಕರ್ತರಿಂದ ಬೃಹತ್ ಸಭೆ ನಡೆದಿದೆ. ಚನ್ನಗಿರಿ ಪಟ್ಟಣದಲ್ಲಿ ಬೃಹತ್ ಬೈಕ್ ರ್ಯಾಲಿ ನಡೆದಿದ್ದು ವಡ್ನಾಳ್ ರಾಜಣ್ಣ ಜನ್ಮ ದಿನದ ನೆಪದಲ್ಲಿ ಅದ್ಧೂರಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಆರ್.ಟಿ.ನಗರದ ನಿವಾಸದಲ್ಲಿ ಸಿಎಂ ಬೊಮ್ಮಾಯಿ ಅವರನ್ನು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಚರ್ಚೆ ಬಳಿಕ ಮಾತನಾಡಿದ ಅವರು, ಫೆ.8ರಂದು ಶಿವಮೊಗ್ಗ ಜಿಲ್ಲೆಗೆ ಸಿಎಂ ಬೊಮ್ಮಾಯಿ ಬರುತ್ತಿದ್ದಾರೆ. ಈ ಬಗ್ಗೆ ಚರ್ಚಿಸಲು ಬಂದಿದ್ದೆ ಎಂದರು.
ತಿಪಟೂರು ಕ್ಷೇತ್ರದ ಕಾಂಗ್ರೆಸ್ ಮುಖಂಡ ಕೆಟಿ ಶಾಂತಕುಮಾರ್ ಕಾಂಗ್ರೆಸ್ಗೆ ಗುಡ್ ಬೈ ಹೇಳಿ ಜೆಡಿಎಸ್ ನತ್ತ ಮುಖ ಮಾಡಿದ್ದಾರೆ. ಇಂದು ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಪಕ್ಷ ಸೇರಲಿದ್ದಾರೆ. ತಿಪಟೂರು ಕಲ್ಪತರು ಕ್ರೀಡಾಂಗಣ ಆವರಣದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಬೆಳಗ್ಗೆ 11 ಗಂಟೆಗೆ ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಯಾಗಲಿದ್ದಾರೆ.
ರಣದೀಪ್ ಸುರ್ಜೇವಾಲ, ಡಾ.ಜಿ.ಪರಮೇಶ್ವರ್ ಭೇಟಿ ವಿಚಾರಕ್ಕೆ ಸಂಬಂಧಿಸಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಡಾ.ಜಿ.ಪರಮೇಶ್ವರ್ ನಮ್ಮ ಪಕ್ಷದ ಆಸ್ತಿ. ಬೆಂಗಳೂರು ವಿಚಾರವಾಗಿ ಇಬ್ಬರು ನಾಯಕರು ಭೇಟಿಯಾಗಿದ್ದಾರೆ. ಬೆಂಗಳೂರು ಟ್ರಾಫಿಕ್ ವಿಚಾರವಾಗಿ ಸುರ್ಜೇವಾಲ ಭೇಟಿಯಾಗಿದ್ದಾರೆ. ಸಿಂಗಾಪುರಕ್ಕೆ ಒಂದು ತಂಡವನ್ನು ಕಳಿಸಲು ನಿರ್ಧಾರ ಮಾಡಿದ್ದೇವೆ. ಪರಮೇಶ್ವರ್ ನೇತೃತ್ವದಲ್ಲಿ ಒಂದು ತಂಡ ಸಿಂಗಾಪುರಕ್ಕೆ ಹೋಗಲಿದೆ. ಅದರ ಬಗ್ಗೆ ಸುರ್ಜೇವಾಲ, ಡಾ.ಜಿ.ಪರಮೇಶ್ವರ್ ಚರ್ಚೆ ಮಾಡಿದ್ದಾರೆ. ಬೆಂಗಳೂರಿಗೆ ಬಂದಿರುವ ಕಳಂಕ ತಪ್ಪಿಸುವ ನಿಟ್ಟಿನಲ್ಲಿ ಚರ್ಚೆಯಾಗಿದೆ. ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲೇ ಮುಳುಗಿ ಹೋಗಿದೆ ಎಂದರು.
ರಣದೀಪ್ ಸಿಂಗ್ ಸುರ್ಜೇವಾಲ, ಡಾ.ಪರಮೇಶ್ವರ್ ಭೇಟಿ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ನಾನು 8 ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಈ ಅನುಭವ ಆಧಾರದ ಮೇಲೆ ಸುರ್ಜೇವಾಲ ಚರ್ಚೆ ಮಾಡಿದ್ದಾರೆ. ಕೆಲವು ಮಹತ್ವದ ವಿಚಾರಗಳನ್ನು ಸುರ್ಜೇವಾಲ ಜತೆ ಚರ್ಚಿಸಿದ್ದೇನೆ. ಕೆಲವು ಭಿನ್ನಾಭಿಪ್ರಾಯಗಳು ಇರಬಹುದು. ಹಾಗಂತ ಅಸಮಾಧಾನ ಅಂತಾ ಅರ್ಥೈಸುವುದು ಸರಿಯಲ್ಲ. ನನ್ನ ಅಭಿಪ್ರಾಯಗಳನ್ನು ರಣದೀಪ್ ಸುರ್ಜೇವಾಲ ಬಳಿ ಹೇಳಿದ್ದೇನೆ ಎಂದು ಹೇಳಿದರು.
ಪ್ರಜಾಧ್ವನಿ ಯಾತ್ರೆ ಹಿನ್ನೆಲೆ ಕೋಲಾರ ಮುಳಬಾಗಿಲಿಗೆ ಡಿಕೆ ಶಿವಕುಮಾರ್, ಡಾ.ಜಿ ಪರಮೇಶ್ವರ್, ಸಲೀಂ ಅಹಮದ್, ದಿನೇಶ್ ಗೂಳಿಗೌಡ, ಯೂತ್ ರಾಷ್ಟ್ರೀಯ ಅಧ್ಯಕ್ಷ ಬಿವಿ ಶ್ರೀನಿವಾಸ್, ಕೆಪಿಸಿಸಿ ಕಚೇರಿಯಿಂದ ಕುರುಡುಮಲೆ ಗಣಪತಿ ದೇವಸ್ಥಾನಕ್ಕೆ ಹೊರಟಿದ್ದಾರೆ. ಇಂದು ಮುಳಬಾಗಿಲು ಹಾಗೂ ಕೆಜಿಎಫ್ ನಲ್ಲಿ ಪ್ರಜಾಧ್ವನಿ ಸಮಾವೇಶ ನಡೆಯಲಿದೆ.
ದೆಹಲಿಯ ಖಾಸಗಿ ಹೊಟೇಲ್ನಲ್ಲಿ ರಮೇಶ್ ಜಾರಕಿಹೊಳಿ ವಾಸ್ತವ್ಯ ಹೂಡಿದ್ದಾರೆ. ದೆಹಲಿಯಲ್ಲಿ ರಮೇಶ್ ಜಾರಕಿಹೊಳಿ ಸಂಜೆ ಅಮಿತ್ ಶಾ ಭೇಟಿ ಮಾಡುವ ಸಾಧ್ಯತೆ ಇದೆ. ನಿನ್ನೆ ರಾತ್ರಿಯಿಂದಲೇ ರಮೇಶ್ ಜಾರಕಿಹೊಳಿ ಅಮಿತ್ ಶಾ ಭೇಟಿಗೆ ಪ್ರಯತ್ನಿಸಿದ್ದಾರೆ.
50 ದಿನಗಳ ಬಳಿಕ ಈ ಬಿಜೆಪಿ ಸರ್ಕಾರ ಇರುವುದಿಲ್ಲ. ನಮ್ಮ ಸರ್ವೆ ಪ್ರಕಾರ ಕಾಂಗ್ರೆಸ್ 136 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ರಾಜ್ಯದ ಜನರಿಗೆ ನಾವು ಉತ್ತಮ ಆಡಳಿತ ಕೊಡುತ್ತೇವೆ ಎಂದರು.
ಜನಾರ್ದನ ರೆಡ್ಡಿ ಸ್ನೇಹ ಕಳೆದುಕೊಂಡ ಶ್ರೀರಾಮುಲುಗೆ ಸಂತೋಷ್ ಲಾಡ್ ಶ್ರೀರಕ್ಷೆ. ಸಂತೋಷ್ ಲಾಡ್ ಸ್ನೇಹಕ್ಕೆ ಶ್ರೀರಾಮುಲು ಕೈ ಚಾಚಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಜನಾರ್ದನ ರೆಡ್ಡಿ ಹಣಿಯಲು ಲಾಡ್ ಸ್ನೇಹಕ್ಕಾಗಿ ರಾಮುಲು ಒಲವು ತೋರಿಸಿದ್ದಾರೆ. ಶತ್ರುವಿನ ಶತ್ರು, ರೆಡ್ಡಿ ಬದ್ದ ವೈರಿಯ ಸ್ನೇಹಕ್ಕಾಗಿ ಲಾಡ್ ಜೊತೆ ಕೈ ಜೋಡಿಸಿದ್ರಾ ಶ್ರೀರಾಮುಲು ಎಂಬ ಮಾತುಗಳು ಕೇಳಿ ಬರುತ್ತಿವೆ.
ಸಚಿವ ಶ್ರೀರಾಮುಲು ಅವರನ್ನು ಅಪ್ಪಿಕೊಂಡ ಬಗ್ಗೆ ಸಂತೋಷ್ ಲಾಡ್ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಸಚಿವ ಶ್ರೀರಾಮುಲು ಬಹಳ ವರ್ಷಗಳಿಂದ ಆತ್ಮೀಯರು. ನಾವೂ ಯಾವಾಗಲೂ ಸಿಕ್ಕರೂ ಇಬ್ಬರು ಒಬ್ಬರನ್ನ ಒಬ್ಬರು ಅಪ್ಪಿಕೊಳ್ಳುವುದು ಮಾಮೂಲು. ನಮ್ಮಿಬ್ಬರ ಮಧ್ಯೆ ಈ ರೀತಿ ಆಲಿಂಗನ ಸಾಕಷ್ಟು ಭಾರಿ ಆಗಿದೆ. ಆದ್ರೆ ಈ ಭಾರಿ ಕ್ಯಾಮಾರಾ ಕಣ್ಣಿಗೆ ಸಿಕ್ಕಿದ್ದೇವೆ ಅಷ್ಟೇ. ನಾವಿಬ್ಬರು ಸ್ನೇಹಿತರಾದ್ರು ನಮ್ಮ ರಾಜಕೀಯ ನಡೆ ಬೇರೆ ಬೇರೆ ಎಂದರು.
ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿ ಇಂದು ಅಮಿತ್ ಶಾರನ್ನು ರಮೇಶ್ ಜಾರಕಿಹೊಳಿ ಭೇಟಿಯಾಗಲಿದ್ದಾರೆ. ಸಂಜೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಗೆ ಸಮಯ ನಿಗದಿಯಾಗಿದೆ. ಸಿಡಿ ಕೇಸ್ ಸಿಬಿಐಗೆ ವಹಿಸಲು ರಮೇಶ್ ಜಾರಕಿಹೊಳಿ ಮನವಿ ಮಾಡಲಿದ್ದಾರೆ.
ಬೀದರ್ ಜಿಲ್ಲೆಯಲ್ಲಿ ಇಂದಿನಿಂದ 2 ದಿನ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶ ನಡೆಯಲಿದ್ದು ಮಾಜಿ ಸಿಎಂ ಸಿದ್ದರಾಮಯ್ಯ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಬೆಳಗ್ಗೆ 11.30ಕ್ಕೆ ಬಸವಕಲ್ಯಾಣಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ನೀಡಲಿದ್ದು ಅನುಭವ ಮಂಟಪಕ್ಕೆ ತೆರಳಿ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬಳಿಕ ಬಸವಕಲ್ಯಾಣದಿಂದ ಭಾಲ್ಕಿ ಪಟ್ಟಣಕ್ಕೆ ಆಗಮಿಸಲಿದ್ದಾರೆ. ಭಾಲ್ಕಿಯಲ್ಲಿ ಪ್ರಜಾಧ್ವನಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.
#PrajadwaniSamavesha: ಇಂದಿನಿಂದ ಬೀದರ್ನಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶ, ಸಿದ್ದರಾಮಯ್ಯರಿಂದ ಚಾಲನೆ#Congress #Bidar #Siddaramaiah @siddaramaiah https://t.co/KoWMXWOF9Y
— TV9 Kannada (@tv9kannada) February 3, 2023
Published On - 9:05 am, Fri, 3 February 23