AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗ್ರೀನ್ ಎಸ್‌ಎಂ ಕ್ಯಾಬ್​​ ಸೇವೆಗೆ ವಿರೋಧ: ಸಿಎಂಗೆ ಪತ್ರ ಬರೆದ ಕರ್ನಾಟಕ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ

ವಿಯೆಟ್ನಾಂ ಮೂಲದ ವಿನ್‌ಗ್ರೂಪ್‌ನ 'ಗ್ರೀನ್ ಎಸ್‌ಎಂ' ಎಲೆಕ್ಟ್ರಿಕ್ ಕ್ಯಾಬ್ ಸೇವೆ ಕರ್ನಾಟಕ ಪ್ರವೇಶಕ್ಕೆ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ವಿರೋಧ ವ್ಯಕ್ತಪಡಿಸಿದ್ದು, ಕಡಿಮೆ ದರ ನೀತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿಎಂ ಡಿ.ಕೆ. ಶಿವಕುಮಾರ್‌ಗೆ ಪತ್ರ ಬರೆದಿದೆ. ಗ್ರೀನ್ ಎಸ್‌ಎಂ ಪ್ರತಿ ಕಿಲೋಮೀಟರ್‌ಗೆ 8 ರೂಪಾಯಿ ದರದಲ್ಲಿ ಸೇವೆ ಒದಗಿಸಲು ಯೋಜಿಸಿದೆ. ಇದು ಪ್ರಸ್ತುತ ಮಾರುಕಟ್ಟೆಯಲ್ಲಿರುವ ದರಕ್ಕಿಂತ ಸಾಕಷ್ಟು ಕಡಿಮೆಯಾಗಿದೆ. ಪ್ರಬಲ ಮಾರುಕಟ್ಟೆ ಹೊಂದಿರುವ ಕಂಪನಿಯೊಂದು ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ದರದಲ್ಲಿ ಸೇವೆ ನೀಡುತ್ತಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದೆ.

ಗ್ರೀನ್ ಎಸ್‌ಎಂ ಕ್ಯಾಬ್​​ ಸೇವೆಗೆ ವಿರೋಧ: ಸಿಎಂಗೆ ಪತ್ರ ಬರೆದ ಕರ್ನಾಟಕ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ
ಸಾಂದರ್ಭಿಕ ಚಿತ್ರImage Credit source: www.greensm.com
ಪ್ರಸನ್ನ ಹೆಗಡೆ
|

Updated on:Nov 15, 2026 | 7:27 AM

Share

ಬೆಂಗಳೂರು, ನವೆಂಬರ್​​ 15: ಬೆಂಗಳೂರಿನಲ್ಲಿ ಕ್ಯಾಬ್ ಸೇವೆ ಆರಂಭಿಸಲು ಮುಂದಾಗಿರುವ ವಿಯೆಟ್ನಾಂ ಮೂಲದ ಕಂಪನಿ ವಿನ್‌ಗ್ರೂಪ್‌ನ ‘ಗ್ರೀನ್ ಎಸ್‌ಎಂ’ ಪ್ರವೇಶಕ್ಕೆ ಕರ್ನಾಟಕದ ಖಾಸಗಿ ಸಾರಿಗೆ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಎಲೆಕ್ಟ್ರಿಕ್ ಕಾರುಗಳ ಮೂಲಕ ಕ್ಯಾಬ್ ಸೇವೆ ಒದಗಿಸುವ ಕಂಪನಿಯ ದರ ನೀತಿಯಿಂದ ಸ್ಥಳೀಯ ಕ್ಯಾಬ್ ಮತ್ತು ಆಟೋ ಚಾಲಕರ ಜೀವನೋಪಾಯಕ್ಕೆ ಹೊಡೆತ ಬೀಳಲಿದೆ ಎಂದು ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ. ಇತ್ತೀಚೆಗಷ್ಟೇ ಗ್ರೀನ್ ಎಸ್‌ಎಂ ಕಂಪನಿಯು ಕರ್ನಾಟಕ ಬೇಡಿಕೆ ಆಧಾರಿತ ಸಾರಿಗೆ ತಂತ್ರಜ್ಞಾನ ಅಗ್ರಿಗೇಟರ್ ನಿಯಮಗಳು-2016ರ ಅಡಿಯಲ್ಲಿ ರಾಜ್ಯ ಸಾರಿಗೆ ಇಲಾಖೆಯಿಂದ ಅಗ್ರಿಗೇಟರ್ ಪರವಾನಗಿ ಪಡೆದುಕೊಂಡಿದೆ. ಈ ಪರವಾನಗಿ 2031ರ ಸೆಪ್ಟೆಂಬರ್‌ವರೆಗೆ ಮಾನ್ಯತೆ ಹೊಂದಿದೆ.

‘ಕಂಪನಿ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ದರದಲ್ಲಿ ಸೇವೆ ನೀಡುತ್ತಿದೆಯೇ?’

ಈ ಸಂಬಂಧ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ ಅವರಿಗೆ ಪತ್ರ ಬರೆದಿರುವ ಕರ್ನಾಟಕ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ, ಗ್ರೀನ್ ಎಸ್‌ಎಂ ಪ್ರತಿ ಕಿಲೋಮೀಟರ್‌ಗೆ 8 ರೂಪಾಯಿ ದರದಲ್ಲಿ ಸೇವೆ ಒದಗಿಸಲು ಯೋಜಿಸಿದೆ. ಇದು ಪ್ರಸ್ತುತ ಮಾರುಕಟ್ಟೆಯಲ್ಲಿರುವ ದರಕ್ಕಿಂತ ಸಾಕಷ್ಟು ಕಡಿಮೆಯಾಗಿದೆ. ಪ್ರಬಲ ಮಾರುಕಟ್ಟೆ ಹೊಂದಿರುವ ಕಂಪನಿಯೊಂದು ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ದರದಲ್ಲಿ ಸೇವೆ ನೀಡುತ್ತಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಬೇಕು. ಇಂತಹ ದರ ನೀತಿ ಸಾಬೀತಾದರೆ ಅದು ಸ್ಪರ್ಧಾತ್ಮಕ ಕಾಯ್ದೆ-2002ರ ಉಲ್ಲಂಘನೆಯಾಗಲಿದೆ ಎಂದು ಒಕ್ಕೂಟ ಹೇಳಿದೆ. ಈ ಬಗ್ಗೆ ಆರೋಪಗಳು ದೃಢಪಟ್ಟಲ್ಲಿ ರಾಜ್ಯ ಸರ್ಕಾರ ಪ್ರಕರಣವನ್ನು ಭಾರತೀಯ ಸ್ಪರ್ಧಾತ್ಮಕ ಆಯೋಗಕ್ಕೆ (CCI) ಶಿಫಾರಸು ಮಾಡಬೇಕು ಎಂದು ಆಗ್ರಹಿಸಿದೆ.

ಇದನ್ನೂ ಓದಿ: ಬೆಂಗಳೂರಿಗೆ ಎಂಟ್ರಿ ಕೊಡಲು ಸಜ್ಜಾದ ವಿಯೆಟ್ನಾಂನ ಗ್ರೀನ್ ಎಸ್‌ಎಂ ಎಲೆಕ್ಟ್ರಿಕ್ ಟ್ಯಾಕ್ಸಿ: ಕರ್ನಾಟಕದ ಚಾಲಕ ಸಂಘಟನೆಗಳಿಂದ ವಿರೋಧ

ಗ್ರೀನ್ ಎಸ್‌ಎಂ ಎಲೆಕ್ಟ್ರಿಕ್ ಕಾರುಗಳ ಸಮೂಹದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಪ್ರಮುಖ ಎಲೆಕ್ಟ್ರಿಕ್ ವಾಹನ ತಯಾರಿಕಾ ಸಂಸ್ಥೆ ವಿನ್ಫಾಸ್ಟ್‌ನ ಮಾಲೀಕತ್ವ ಹೊಂದಿರುವ ವಿನ್‌ಗ್ರೂಪ್‌ನ ಅಂಗಸಂಸ್ಥೆಯಾಗಿದೆ. ಕಂಪನಿಯ ಈ ದರ ನೀತಿಯಿಂದ ಬೆಂಗಳೂರಿನಲ್ಲಿ ಅಂದಾಜು 8 ಲಕ್ಷ ಹಾಗೂ ರಾಜ್ಯದ ಇತರ ನಗರಗಳಲ್ಲಿ ಸುಮಾರು 3 ಲಕ್ಷ ಕ್ಯಾಬ್ ಮತ್ತು ಆಟೋ ಚಾಲಕರು ಸ್ಪರ್ಧಿಸಲು ಕಷ್ಟವಾಗಲಿದೆ ಎಂದು ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ವಾದಿಸಿದೆ. ಕಂಪನಿಯ ಪರವಾನಗಿಗೆ ಸಂಬಂಧಿಸಿದಂತೆ ಅನುಸರಣೆ ಪರಿಶೀಲನೆ (Compliance Audit) ನಡೆಸಬೇಕು. ಕಂಪನಿಯ ವಾಹನಗಳ ಸಂಖ್ಯೆಯನ್ನು 100ಕ್ಕೆ ಮಿತಿಗೊಳಿಸಬೇಕು. ಹೆಚ್ಚುವರಿ ವಾಹನಗಳ ನೋಂದಣಿ ಅಥವಾ ಹೊಸ ವಾಹನಗಳನ್ನು ಕಂಪನಿಗೆ ಸೇರ್ಪಡೆಗೊಳಿಸಲು ಅನುಮತಿ ನೀಡಬಾರದು ಎಂದು ಒಕ್ಕೂಟ ಒತ್ತಾಯಿಸಿದೆ. ಇದಲ್ಲದೆ, ಗ್ರೀನ್ ಎಸ್‌ಎಂ ವಿಧಿಸುತ್ತಿರುವ ಪ್ರಯಾಣ ದರಗಳು ಸರ್ಕಾರದ ಅಧಿಸೂಚಿತ ದರ ವ್ಯವಸ್ಥೆಗೆ ಅನುಗುಣವಾಗಿವೆಯೇ ಎಂಬುದನ್ನು ಸಾರಿಗೆ ಇಲಾಖೆ ಪರಿಶೀಲಿಸಬೇಕು. ಪ್ರಚಾರದ ಉದ್ದೇಶಕ್ಕಾಗಿ ಅಥವಾ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ದರದಲ್ಲಿ ಸೇವೆ ಒದಗಿಸುತ್ತಿದ್ದರೆ ಅದರ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸುವಂತೆ ಸೂಚಿಸಬೇಕು ಎಂದು ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 7:27 am, Sun, 15 November 26

Follow Us
ಪ್ರಸನ್ನ ಹೆಗಡೆ
ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದಾರೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More