Karnataka Rain: ಭಾನುವಾರ ಕರ್ನಾಟಕದಲ್ಲಿ ಭಾರೀ ಮಳೆಗೆ ಇಬ್ಬರು ಬಲಿ, ಎಲ್ಲೆಲ್ಲಿ ಏನೇನಾಯ್ತು?
ಬೆಂಗಳೂರು ಸೇರಿದಂತೆ ಕರ್ನಾಟಕ ವಿವಿಧ ಜಿಲ್ಲೆಗಳಲ್ಲಿ ಇಂದು ಸಂಜೆ ಭಾರೀ ಮಳೆಯಾಗಿದ್ದು, ಒಟ್ಟು ಇಬ್ಬರು ಸಾವನ್ನಪ್ಪಿದ್ದಾರೆ. ಕೆಲವೆಡೆ ಮರಗಳು ಧರೆಗುರುಳಿ ವಾಹನಗಳು ಜಖಂಗೊಂಡಿವೆ.
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು (Bangalore Rain) ಸೇರಿದಂತೆ ಕರ್ನಾಟಕ (Karnataka Rain) ವಿವಿಧ ಜಿಲ್ಲೆಗಳಲ್ಲಿ ಇಂದು ಸಂಜೆ ಭಾರೀ ಮಳೆಯಾಗಿದ್ದು, ಒಟ್ಟು ಇಬ್ಬರು ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಮರ ಬಿದ್ದು ಬೈಕ್ ಸವಾರ ಸಾವನ್ನಪ್ಪಿದರೆ, ಬೆಂಗಳೂರಿನಲ್ಲಿ ಕಾರು ನೀರಿನಲ್ಲಿ ಮುಳುಗಿ ಯುವತಿಯೊಬ್ಬಳು ಸಾವನ್ನಪ್ಪಿದ್ದಾಳೆ. ಇನ್ನುಳಿದಂತೆ ಯಾವ ಜಿಲ್ಲೆಯಲ್ಲಿ ಏನೇನಾಯ್ತು? ಇಲ್ಲಿದೆ ಮಾಹಿತಿ.
ಬೆಂಗಳೂರಿನ ಹಲವೆಡೆ ಕಗ್ಗತ್ತಲ ಮೋಡ ಆವರಿಸಿದ ಕ್ಷಣಾರ್ಧದಲ್ಲೇ ಗಾಳಿ ಮಳೆ ಆರಂಭವಾಗಿದೆ. ಇನ್ನು ಕೆಲವೆಡೆ ಆಲಿಕಲ್ಲು ಸಹಿತ ಮಳೆಯಾಗಿದೆ. ಏಕಾಏಕಿಯಾಗಿ ಸುರಿದ ಧಾರಾಕಾರ ಮಳೆಗೆ ವಾಹನ ಸವಾರರು ಪರದಾಟ ನಡೆಸಿದರು. ನಗರದ ಮೆಜೆಸ್ಟಿಕ್, ಕೆ.ಆರ್.ಮಾರುಕಟ್ಟೆ, ಮಲ್ಲೇಶ್ವರಂ, ನಾಗರಬಾವಿ, ಕಾಮಾಕ್ಷಿಪಾಳ್ಯ, ಗಿರಿನಗರ, ಜಯನಗರ, ವಿಜಯನಗರ, ಮಲ್ಲೇಶ್ವರಂ, ಯಶವಂತಪುರ, ಶೇಷಾದ್ರಿಪುರಂ, ಮೇಖ್ರಿ ಸರ್ಕಲ್, ಜೆ.ಪಿ.ನಗರ, ನಂದಿನಿ ಲೇಔಟ್, ರಾಜಾಜಿನಗರ ಸುತ್ತಮುತ್ತ ಮಳೆಯಾಗಿದೆ.
ಇದನ್ನೂ ಓದಿ: Bangalore Rain: ಬೆಂಗಳೂರು ಮಳೆ ದುರಂತ, ಮಾನವೀಯತೆ ಮರೆತ ಸೇಂಟ್ ಮಾರ್ಥಾಸ್ ಆಸ್ಪತ್ರೆ, ಇನ್ಫೋಸಿಸ್ ಉದ್ಯೋಗಿ ಬಲಿ
ಇನ್ನು ಕೆಆರ್ ಸರ್ಕಲ್ ಬಳಿಯ ಅಂಡರ್ಪಾಸ್ನಲ್ಲಿ ತುಂಬಿದ್ದ ಮಳೆ ನೀರಿನಲ್ಲಿ ಕಾರು ಮುಳುಗಿ ಯುವತಿಯೊಬ್ಬಳು ಸಾವನ್ನಪ್ಪಿದ ಘಟನೆ ನಡೆದಿದೆ. ಕಾರಿನಲ್ಲಿ ಒಟ್ಟು ಆರು ಮಂದಿ ಇದ್ದರು. ಸ್ಥಳೀಯರು, ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾಕಾರ್ಯ ನಡೆಸಿ ಆರು ಮಂದಿಯನ್ನು ರಕ್ಷಿಸಿದ್ದರು. ಘಟನೆಯಲ್ಲಿ ಇನ್ಫೋಸಿಸ್ ಉದ್ಯೋಗಿಯಾಗಿದ್ದ ಬಾನುರೇಖಾ ತೀವ್ರ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾಳೆ.
ಚಿಕ್ಕಮಗಳೂರಿನಲ್ಲಿ ಮರ ಬಿದ್ದ ಬೈಕ್ ಸವಾರ ಸಾವು
ಚಿಕ್ಕಮಗಳೂರು: ಗಾಳಿ ಮಳೆಗೆ ಮರ ಬೈಕ್ ಮೇಲೆ ಬಿದ್ದು ಸವಾರ ಸಾವನ್ನಪ್ಪಿದ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಿಕ್ಕಳ್ಳ ಬಳಿ ನಡೆದಿದೆ. ಚಿಕ್ಕಳ್ಳ ಗ್ರಾಮದ ನಿವಾಸಿ ವೇಣು (50) ಮೃತ ದುರ್ದೈವಿ. ಚಿಕ್ಕಳ್ಳ ಗ್ರಾಮದಿಂದ ಮೂಡಿಗೆರೆಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಬೈಕ್ ಮೇಲೆ ಮರ ಬಿದ್ದಿದೆ. ಗಂಭೀರವಾಗಿ ಗಾಯಗೊಂಡ ವೇಣು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಪರಿಶೀಲನೆ ನಡೆಸಿ ಮರ ತೆರವು ಕಾರ್ಯ ನಡೆಸಿದರು.
ಇದನ್ನೂ ಓದಿ: Bangalore Rains: ಬೆಂಗಳೂರು ಆವರಿಸಿದ ಕಗ್ಗತ್ತಲ ಮೋಡ, ಏಕಾಏಕಿ ಗುಡುಗು ಸಹಿತ ಗಾಳಿ ಮಳೆ, ಕೆಲವೆಡೆ ಆಲಿಕಲ್ಲು ಮಳೆ
ಇನ್ನು, ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದಲ್ಲಿ ಮತ್ತೊಂದು ದುರ್ಘಟನೆ ನಡೆದಿದೆ. ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ಮೂರ್ನಾಲ್ಕು ಹಳ್ಳಿಗಳಿಗೆ ಸಂಪರ್ಕಿಸುವ ರಸ್ತೆ ಸಂಪರ್ಕ ಬಂದ್ ಆಗಿದೆ. ಅಲ್ಲದೆ, ಕೊಟ್ಟಿಗೆಹಾರ, ಬಣಕಲ್, ಮೂಡಿಗೆರೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಭಾರೀ ಮಳೆಗೆ ಕೊಟ್ಟಿಗೆಹಾರ, ಚಾರ್ಮಾಡಿಘಾಟ್, ಹೊರಟ್ಟಿ, ಬಣಕಲ್, ಬಾಳೂರು ಸೇರಿದಂತೆ ಹಲವೆಡೆ ಮಳೆಯಾಗಿದ್ದು, ಚಾರ್ಮಾಡಿಘಾಟ್, ಕೊಟ್ಟಿಗೆಹಾರದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಇದರಿಂದಾಗಿ ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ. ಇನ್ನೊಂದೆಡೆ, ಸುರಿಯುತ್ತಿರುವ ಮಳೆಗೆ ರೈತರು ಸಂತಸಗೊಂಡಿದೆ. ಕಾದ ಕಾವಲಿಯಂತಾಗಿದ್ದ ಮಲೆನಾಡಿಗೆ ಮಳೆ ಬೇಕಿತ್ತು. ಸದ್ಯ ಮಳೆ ಇಲ್ಲದೆ ಕಂಗಲಾಗಿದ್ದ ಕಾಫಿ, ಅಡಿಕೆ, ಮೆಣಸು ಬೆಳೆಗಾರರ ಮುಖದಲ್ಲಿ ಸಂತಸ ಮೂಡಿದೆ.
ಬಳ್ಳಾರಿಯಲ್ಲಿ ಬಿರುಗಾಳಿ ಸಹಿತ ಮಳೆ
ಬಳ್ಳಾರಿ: ಜಿಲ್ಲೆಯ ಸಿರಗುಪ್ಪ ತಾಲೂಕಿನಲ್ಲಿ ಬಿರುಗಾಳಿ ಸಹಿತ ಮಳೆಯಾಗಿದ್ದು, ವಿದ್ಯುತ್ ಕಂಬಗಳು ಧರೆಗುರುಳಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಇನ್ನೊಂದೆಡೆ, ಭಾರೀ ಗಾಳಿಗೆ ಪೆಟ್ರೋಲ್ ಬಂಕ್ ಮೇಲ್ಛಾವಣಿ ಕುಸಿದುಬಿದ್ದಿದೆ.
ಹಾವೇರಿ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆ
ಹಾವೇರಿ: ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗಿದೆ. ಕೆಲವೆಡೆ ಬಿರುಗಾಳಿ ಸಮೇತ ಮಳೆಯಾಗಿದೆ. ಯಲಗಚ್ಚ, ಹೊಸರಿತ್ತಿ ಸೇರಿದಂತೆ ಹಲವೆಡೆ ಮಳೆಯಾಗಿದ್ದು, ಬಿತ್ತನೆ ಮಾಡಲು ಮಳೆಗಾಗಿ ಕಾದು ಕುಳಿತಿದ್ದ ಅನ್ನದಾತರು ಸಂತಸಗೊಂಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಮಳೆಗೆ ಯುವತಿ ಬಲಿ: ಸೇಂಟ್ ಮಾರ್ಥಾಸ್ ಆಸ್ಪತ್ರೆ ನಿರ್ಲಕ್ಷ್ಯಕ್ಕೆ ಇನ್ಫೋಸಿಸ್ ಉದ್ಯೋಗಿ ದುರಂತ ಅಂತ್ಯ
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಗುಡುಗು ಮಿಂಚು ಬಿರುಗಾಳಿ ಸಹಿತ ಮಳೆ.
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಲವೆಡೆ ಭಾರೀ ಮಳೆಯಾಗಿದ್ದು, ಕೆಲವೆಡೆ ಗುಡುಗು ಮಿಂಚು ಸಹಿತ ಮಳೆಯಾಗಿದೆ. ನೆಲಮಂಗಲ ತಾಲೂಕಿನಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಮರಗಳು ಧರೆಗುರುಳುವಂತೆ ಬಿರುಗಾಳಿ ಕೂಡ ಬೀಸಿದೆ. ಭಾರೀ ಗಾಳಿ ಮಳೆಯನ್ನು ಕಂಡ ಜನರು ಶಾಕ್ ಆಗಿದ್ದು, ಜನಜೀವನ ಕೂಡ ಅಸ್ತವ್ಯಸ್ಥಗೊಂಡಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಸುತ್ತಮುತ್ತ ಒಂದು ಗಂಟೆಗೂ ಅಧಿಕ ಮಳೆಯಾಗಿದ್ದು, ವಿಜಯಪುರದಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ಇದರಿಂದಾಗಿ ದ್ರಾಕ್ಷಿ ಬೆಳೆಗಾರರು ಕಂಗಾಲಾಗಿದ್ದಾರೆ. ಇನ್ನೊಂದೆಡೆ, ಬೀಸಿದ ಬಿರುಗಾಳಿ ಸಹಿತ ಭಾರೀ ಮಳೆಗೆ ವಾಹನ ಸವಾರರು ಹೈರಾಣಾಗಿದ್ದಾರೆ. ದೇವನಹಳ್ಳಿ ಪಟ್ಟಣದಲ್ಲಿ ರಸ್ತೆಯಲ್ಲಿ ಮಳೆ ನೀರು ತುಂಬಿ ಹರಿದಿದೆ.
ಕೋಲಾರ ನಗರದಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆ
ಕೋಲಾರ: ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಭಾರಿ ಮಳೆಯಾಗಿದೆ. ಕೆಲವೆಡೆ ಗಾಳಿ ಮಳೆಯಾಗಿದೆ. ಸುಮಾರು ಒಂದು ಗಂಟೆಗಳ ಕಾಲ ನಿರಂತರ ಗಾಳಿ ಮಳೆಯಾಗಿದ್ದು, ಬಿಸಿಲ ಬೇಗೆಯಿಂದ ತತ್ತರಿಸಿ ಹೋಗಿದ್ದ ಜನರು ಸದ್ಯ ಥಂಡಿಯಾಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ