Karnataka Rain: ಅಬ್ಬರಿಸಲಾರಂಭಿಸಿದ ಆಶ್ಲೇಷಾ; ಮಲೆನಾಡು, ಕರಾವಳಿ ಭಾಗದಲ್ಲಿ ಮತ್ತೆ ಮಳೆ

| Updated By: Digi Tech Desk

Updated on: Aug 09, 2021 | 6:57 PM

ಮಲೆನಾಡು, ಕರಾವಳಿ ಭಾಗದಲ್ಲಿ ನಿನ್ನೆ ಸಂಜೆಯಿಂದ ಧಾರಾಕಾರ ಮಳೆಯಾಗುತ್ತಿದ್ದು, ಹವಾಮಾನ ವರದಿಗಳ ಪ್ರಕಾರ ಇಂದು ಕೂಡಾ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಮಲೆನಾಡು ಜಿಲ್ಲೆಗಳಲ್ಲಿ ಚದುರಿದಂತೆ ವ್ಯಾಪಕವಾಗಿ ಸಾಧಾರಣ ಮಳೆಯಾಗಲಿದೆ.

Karnataka Rain: ಅಬ್ಬರಿಸಲಾರಂಭಿಸಿದ ಆಶ್ಲೇಷಾ; ಮಲೆನಾಡು, ಕರಾವಳಿ ಭಾಗದಲ್ಲಿ ಮತ್ತೆ ಮಳೆ
ರಾಜ್ಯದ ಹಲವೆಡೆ ಭಾರೀ ಮಳೆ (ಸಾಂಕೇತಿಕ ಚಿತ್ರ)
Follow us on

ಬೆಂಗಳೂರು: ಜುಲೈ ತಿಂಗಳಲ್ಲಿ ಕರ್ನಾಟಕದಾದ್ಯಂತ ಅಬ್ಬರಿಸಿದ ಮಳೆಯಿಂದಾಗಿ ಜನಜೀವನ ದುಸ್ತರಗೊಂಡಿದೆ. ಕಳೆದ ಕೆಲ ದಿನಗಳಿಂದ ಮಳೆ ಆರ್ಭಟ (Karnataka Rain) ಕೊಂಚ ತಗ್ಗಿದಂತೆ ಕಾಣುತ್ತಿತ್ತಾದರೂ ಇದೀಗ ಆರಂಭವಾಗಿರುವ ಆಶ್ಲೇಷಾ ಮಳೆ ಮಲೆನಾಡು, ಕರಾವಳಿ ಭಾಗದಲ್ಲಿ ನಿನ್ನೆಯಿಂದ ಮತ್ತೆ ಜೋರಾಗಿ ಸುರಿಯಲಾರಂಭಿಸಿದೆ. ಈ ಬಾರಿಯಂತೂ ಮೇ ತಿಂಗಳಿನಿಂದಲೇ ಮಳೆಗಾಲದ ವಾತಾವರಣವಿತ್ತಾದ್ದರಿಂದ ಮಲೆನಾಡು, ಕರಾವಳಿ ಭಾಗದಲ್ಲಿ ಭೂಮಿ ಒಣಗಲು ಅವಕಾಶವೇ ಸಿಕ್ಕಿಲ್ಲ ಎಂಬಂತಾಗಿ ಕೃಷಿಕರು ಅತಿಯಾದ ಮಳೆಯಿಂದ (Heavy Rain) ಕಂಗಾಲಾಗಿದ್ದಾರೆ. ಜೂನ್​ ತಿಂಗಳಲ್ಲಿ ಕೆಲ ದಿನಗಳ ಮಟ್ಟಿಗೆ ಬಿಡುವು ನೀಡಿದ್ದ ಮಳೆ ಜುಲೈನಲ್ಲಿ ಬಾಕಿ ಪಾಲನ್ನೆಲ್ಲಾ ಸುರಿಸಿ ಹೋಗಿದ್ದು, ಈಗ ಆಶ್ಲೇಷಾ ಮಳೆಯೂ ಜೋರಾದರೆ ತೋಟ, ಗದ್ದೆಗಳ ಕಥೆಯೇನು ಎಂಬ ಚಿಂತೆ ಆವರಿಸಿದೆ.

ಮಲೆನಾಡು, ಕರಾವಳಿ ಭಾಗದಲ್ಲಿ ನಿನ್ನೆ ಸಂಜೆಯಿಂದ ಧಾರಾಕಾರ ಮಳೆಯಾಗುತ್ತಿದ್ದು, ಹವಾಮಾನ ವರದಿಗಳ ಪ್ರಕಾರ ಇಂದು ಕೂಡಾ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಮಲೆನಾಡು ಜಿಲ್ಲೆಗಳಲ್ಲಿ ಚದುರಿದಂತೆ ವ್ಯಾಪಕವಾಗಿ ಸಾಧಾರಣ ಮಳೆಯಾಗಲಿದೆ. ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಈ ಬಗ್ಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಮುನ್ಸೂಚನೆ ನೀಡಿದೆ.

ಕಳೆದ 24 ಗಂಟೆ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ನಗರಬಸ್ತಿಕೇರಿಯಲ್ಲಿ 76 ಮಿ.ಮೀ ಮಳೆಯಾಗಿದ್ದು, ನಿನ್ನೆ ರಾಜ್ಯದಲ್ಲಿ ಅತೀ ಹೆಚ್ಚು ಮಳೆಯಾಗಿರುವ ಪ್ರದೇಶವೆಂದು ಗುರುತಿಸಿಕೊಂಡಿದೆ. ಇತ್ತ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿಯೂ ನಿನ್ನೆ ಸಾಧಾರಣ ಮಳೆಯಾಗಿದೆ. ಸುಮಾರು ಒಂದುವಾರದಿಂದ ವಿರಾಮ ನೀಡಿದ್ದ ಮಳೆ ಮರು ಪ್ರವೇಶಿಸಿದ್ದು, ಬೆಂಗಳೂರಿನಲ್ಲಿ ಇಂದು ಕೂಡಾ ಮೋಡ ಕವಿದ ವಾತಾವರಣ ಮುಂದುವರೆಯಲಿದೆ ಹಾಗೂ ಕೆಲವೆಡೆ ಉತ್ತಮ ಮಳೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಂದು ಸಾಧಾರಣ ಮಳೆಯಾದರೆ. ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ನಿರೀಕ್ಷೆಯಿದೆ. ರಾಜ್ಯದ ಮಲೆನಾಡು ಭಾಗವಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಉತ್ತಮ ಮಳೆ ಸುರಿಯಬಹುದು ಎಂದು ಅಂದಾಜಿಸಲಾಗಿದೆ. ದಾವಣಗೆರೆ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ಕೋಲಾರ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಹಗುರ ಮಳೆಯಾಗಲಿದೆ. ಇತ್ತ ಉತ್ತರ ಒಳನಾಡಿನಲ್ಲೂ ಸಾಧಾರಣ ಮಳೆಯಾಗಲಿದ್ದು, ಬೀದರ್, ಬಾಗಲಕೋಟೆ, ಧಾರವಾಡ, ಹಾವೇರಿ, ಗದಗ, ವಿಜಯನಗರ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ:
Karnataka Dams Water Level: ಆಗಸ್ಟ್​​ನಲ್ಲಿ ಉತ್ತಮ ಮಳೆ; ತುಂಬಿ ತುಳುಕಲಿದೆ ಕೆಆರ್​ಎಸ್, ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ

(Karnataka Rain Malnad and Coastal Karnataka Region likely to get heavy rain )

Published On - 8:24 am, Wed, 4 August 21